ಸಾರ್ವಜನಿಕ ಸೇವೆಗಳನ್ನು ಹೆಚ್ಚು ಸಮರ್ಥವಾಗಿ ಮತ್ತು ನಾಗರಿಕರ ಬಗ್ಗೆ ಹೆಚ್ಚು ಸಂವೇದನಾಶೀಲವಾಗಿಸುವುದರ ಮೇಲೆ ಗಮನ ಕೇಂದ್ರೀಕರಿಸುವುದರೊಂದಿಗೆ, ಇಂದು ನಾವು ಅನುಸರಿಸುತ್ತಿರುವ ಆಡಳಿತದ ಮೂಲ ತತ್ವವೆಂದರೆ 'ನಾಗರಿಕ ದೇವೋ ಭವ': ಪ್ರಧಾನಮಂತ್ರಿ
ಇಂದಿನ ಭಾರತವು ಮಹತ್ವಾಕಾಂಕ್ಷೆಗಳ ದೇಶವಾಗಿದೆ, ಪ್ರತಿಯೊಬ್ಬ ನಾಗರಿಕರಿಗೂ ಕನಸುಗಳು ಮತ್ತು ಗುರಿಗಳಿವೆ ಮತ್ತು ಅವುಗಳನ್ನು ಈಡೇರಿಸಲು ಗರಿಷ್ಠ ಬೆಂಬಲ ನೀಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ: ಪ್ರಧಾನಮಂತ್ರಿ
ಪ್ರತಿಯೊಂದು ನಿರ್ಧಾರಕ್ಕೂ ಮುನ್ನ, ನಮ್ಮ ಕರ್ತವ್ಯ ಏನನ್ನು ಬಯಸುತ್ತದೆ ಎಂದು ಯೋಚಿಸಿದಾಗ, ನಮ್ಮ ನಿರ್ಧಾರಗಳ ಪ್ರಭಾವವು ತನ್ನಕ್ಕಷ್ಟು ತಾನೇ ಹಲವು ಪಟ್ಟು ಹೆಚ್ಚಾಗುತ್ತದೆ: ಪ್ರಧಾನಮಂತ್ರಿ
ಒಂದು ನಿರ್ಧಾರವು ಹೇಗೆ ಅನೇಕ ನಾಗರಿಕರ ಜೀವನವನ್ನು ಬದಲಾಯಿಸಬಹುದು, ನಮ್ಮ ವೈಯಕ್ತಿಕ ಪರಿವರ್ತನೆಯು ಹೇಗೆ ಸಾಂಸ್ಥಿಕ ಪರಿವರ್ತನೆಗೆ ಎಡೆಮಾಡಿಕೊಡಬಹುದು ಎಂದು ನಾವು ನಮ್ಮ ಪ್ರಸ್ತುತ ಪ್ರಯತ್ನಗಳನ್ನು ಭವಿಷ್ಯದ ವಿಶಾಲ ದೃಷ್ಟಿಕೋನದಿಂದ ಹಿನ್ನೆಲೆಯಲ್ಲಿ ನೋಡಬೇಕು: ಪ್ರಧಾನಮಂತ್ರ
ತಂತ್ರಜ್ಞಾನ ಮತ್ತು ದತ್ತಾಂಶದ ಬಗ್ಗೆ ಆಳವಾದ ತಿಳುವಳಿಕೆ ಹೊಂದಿರುವವರೇ, ಒಬ್ಬ ಉತ್ತಮ ಆಡಳಿತಗಾರ, ಉತ್ತಮ ಸಾರ್ವಜನಿಕ ಸೇವಕನಾಗಿರುತ್ತಾನೆ, ಇದು ನಿರ್ಧಾರ ತೆಗೆದುಕೊಳ್ಳುವಿಕೆಯ ಮೂಲ ಆಧಾರವಾಗಿರುತ್ತದೆ: ಪ್ರಧಾನಮಂತ್ರಿ
ನಾವು ಅಡೆತಡೆಗಳನ್ನು ಮೀರಿ, ಉತ್ತಮ ಸಮನ್ವಯ, ಸಾಮಾನ್ಯ ತಿಳುವಳಿಕೆ ಮತ್ತು ಸಮಗ್ರ ಸರ್ಕಾರದ ವಿಧಾನದೊಂದಿಗೆ ಮುನ್ನಡೆಯಬೇಕು, ಆಗ ಮಾತ್ರ ಪ್ರತಿಯೊಂದು ಯೋಜನೆಯು ಯಶಸ್ವಿಯಾಗುತ್ತದೆ: ಪ್ರಧಾನಮಂತ್ರಿ

ಪ್ರಧಾನ ಕಾರ್ಯದರ್ಶಿ ಶ್ರೀ ಪಿ. ಕೆ. ಮಿಶ್ರಾ, ಕರ್ಮಯೋಗಿ ಭಾರತದ ಅಧ್ಯಕ್ಷರಾದ ಶ್ರೀ ಎಸ್. ರಾಮದೊರೈ, ಸಾಮರ್ಥ್ಯ ವೃದ್ಧಿ ಆಯೋಗದ ಅಧ್ಯಕ್ಷರಾದ ಎಸ್. ರಾಧಾ ಚೌಹಾಣ್, ಇತರೆ ಗಣ್ಯ ಅತಿಥಿಗಳೆ, ಮಹಿಳೆಯರೆ ಮತ್ತು ಮಹನೀಯರೆ!

ಕರ್ಮಯೋಗಿ ಸಾಧನಾ ಸಪ್ತಾಹ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು. 21ನೇ ಶತಮಾನದ ಈ ಯುಗದಲ್ಲಿ, ವೇಗವಾಗಿ ಬದಲಾಗುತ್ತಿರುವ ವ್ಯವಸ್ಥೆಗಳು, ವೇಗವಾಗಿ ಬದಲಾಗುತ್ತಿರುವ ಜಗತ್ತು ಮತ್ತು ಭಾರತವು ಅದೇ ವೇಗದಲ್ಲಿ ಮುನ್ನಡೆಯುತ್ತಿರುವಾಗ, ಕಾಲಕ್ಕೆ ಅನುಗುಣವಾಗಿ ಸಾರ್ವಜನಿಕ ಸೇವೆಯನ್ನು ನಿರಂತರವಾಗಿ ಪರಿಷ್ಕರಿಸುವುದು ಅತ್ಯಗತ್ಯ. ಕರ್ಮಯೋಗಿ ಸಾಧನಾ ಸಪ್ತಾಹವು ಈ ಪ್ರಯತ್ನದಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಇಂದು ನಾವು ಅನುಸರಿಸುತ್ತಿರುವ ಆಡಳಿತ ತತ್ವದ ಬಗ್ಗೆ ನೀವೆಲ್ಲರೂ ಪರಿಚಿತರಾಗಿದ್ದೀರಿ, ಇದರ ಮೂಲ ಮಂತ್ರ ನಾಗರಿಕ ದೇವೋ ಭವ. ಈ ಮನೋಭಾವದಿಂದ ಸಾರ್ವಜನಿಕ ಸೇವೆಯನ್ನು ಹೆಚ್ಚು ಸಮರ್ಥ ಮತ್ತು ನಾಗರಿಕರಿಗೆ ಹೆಚ್ಚು ಸಂವೇದನಾಶೀಲವಾಗಿಸುವತ್ತ ಈಗ ಗಮನ ಹರಿಸಲಾಗಿದೆ. ಆಡಳಿತವನ್ನು ನಾಗರಿಕ ಕೇಂದ್ರಿತವಾಗಿಸುವ ಮೂಲಕ ಅದಕ್ಕೆ ಹೊಸ ಗುರುತು ನೀಡಲಾಗುತ್ತಿದೆ.

ಸ್ನೇಹಿತರೆ,

ಯಶಸ್ಸಿನ ಪ್ರಮುಖ ತತ್ವವೆಂದರೆ, ಬೇರೊಬ್ಬರ ಯಶಸ್ಸಿನ ರೇಖೆಯನ್ನು ಕಡಿಮೆ ಮಾಡುವುದು ಅಲ್ಲ, ಆದರೆ ನಿಮ್ಮದೇ ಆದದ್ದನ್ನು ವಿಸ್ತರಿಸುವುದು. ಸ್ವಾತಂತ್ರ್ಯದ ನಂತರ, ನಮ್ಮ ದೇಶದಲ್ಲಿ ಅನೇಕ ಸಂಸ್ಥೆಗಳು ವಿಭಿನ್ನ ಗಮನಗಳೊಂದಿಗೆ ಕೆಲಸ ಮಾಡಿವೆ, ಆದರೆ ಸಾಮರ್ಥ್ಯ ವೃದ್ಧಿಗೆ ಮೀಸಲಾಗಿರುವ ಒಂದು ಸಂಸ್ಥೆಯ ಅಗತ್ಯವಿತ್ತು - ಅದು ಪ್ರತಿಯೊಬ್ಬ ಉದ್ಯೋಗಿಯ, ಸರ್ಕಾರದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಕರ್ಮಯೋಗಿಯ ಸಾಮರ್ಥ್ಯಗಳನ್ನು ಹೆಚ್ಚಿಸಬಹುದು. ಈ ದೃಷ್ಟಿಕೋನವೇ ಸಾಮರ್ಥ್ಯ ನಿರ್ಮಾಣ ಆಯೋಗ (ಸಿಬಿಸಿ) ಸ್ಥಾಪನೆಗೆ ದಾರಿ ಮಾಡಿಕೊಟ್ಟಿತು. ಇಂದು ಅದರ ಸಂಸ್ಥಾಪನಾ ದಿನದಂದು, ಈ ಹೊಸ ಆರಂಭವು, ಐಜಿಒಟಿ ಮಿಷನ್ ಕರ್ಮಯೋಗಿಯ ಯಶಸ್ವಿ ಪಾತ್ರದೊಂದಿಗೆ, ನಮ್ಮ ಪ್ರಯತ್ನಗಳಿಗೆ ಬಹುಮುಖಿ ಶಕ್ತಿಯನ್ನು ನೀಡುತ್ತಿದೆ. ಈ ಉಪಕ್ರಮಗಳ ಮೂಲಕ, ನಾವು ಆಧುನಿಕ, ಸಮರ್ಥ, ಸಮರ್ಪಿತ ಮತ್ತು ಸೂಕ್ಷ್ಮ ಕರ್ಮಯೋಗಿಗಳ ತಂಡವನ್ನು ರಚಿಸುವಲ್ಲಿ ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸ ನನಗಿದೆ.

ಸ್ನೇಹಿತರೆ,

ಕೆಲವು ವಾರಗಳ ಹಿಂದೆ ಸೇವಾ ತೀರ್ಥದ ಉದ್ಘಾಟನೆ ಸಮಯದಲ್ಲಿ, ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪದ ಬಗ್ಗೆ ನಾನು ನಿಮ್ಮೊಂದಿಗೆ ವಿವರವಾಗಿ ಮಾತನಾಡಿದ್ದೆ. ಈ ಗುರಿ ಸಾಧಿಸಲು, ನಮಗೆ ವೇಗದ ಆರ್ಥಿಕ ಬೆಳವಣಿಗೆ, ಆಧುನಿಕ ಮೂಲಸೌಕರ್ಯ ಮತ್ತು ತಂತ್ರಜ್ಞಾನ ಮತ್ತು ದೊಡ್ಡ ಕೌಶಲ್ಯಪೂರ್ಣ ಕಾರ್ಯ(ನೌಕರ)ಪಡೆಯ ಅಗತ್ಯವಿದೆ. ಈ ಗುರಿಗಳನ್ನು ಸಾಧಿಸುವಲ್ಲಿ, ನಮ್ಮ ಸಾರ್ವಜನಿಕ ಸಂಸ್ಥೆಗಳು ಮತ್ತು ಸಾರ್ವಜನಿಕ ಸೇವಕರ ಪಾತ್ರ ನಿರ್ಣಾಯಕವಾಗಿದೆ. ಇಂದಿನ ಭಾರತ ಎಷ್ಟು ಮಹತ್ವಾಕಾಂಕ್ಷೆಯಿಂದ ಕೂಡಿದೆ ಎಂಬುದನ್ನು ನಾವೆಲ್ಲರೂ ನೋಡುತ್ತಿದ್ದೇವೆ, ಅನುಭವಿಸುತ್ತಿದ್ದೇವೆ. ಪ್ರತಿಯೊಬ್ಬ ನಾಗರಿಕರಿಗೂ ತಮ್ಮದೇ ಆದ ಕನಸುಗಳು ಮತ್ತು ಗುರಿಗಳಿವೆ, ಅವುಗಳನ್ನು ಪೂರೈಸುವಲ್ಲಿ ಗರಿಷ್ಠ ಬೆಂಬಲ ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ನಾಗರಿಕರ ಜೀವನ ಸುಲಭತೆ ಮತ್ತು ಜೀವನದ ಗುಣಮಟ್ಟ ದಿನದಿಂದ ದಿನಕ್ಕೆ ಸುಧಾರಿಸುವುದನ್ನು ನಮ್ಮ ಆಡಳಿತವು ಖಚಿತಪಡಿಸಿಕೊಳ್ಳಬೇಕು, ಅದೇ ನಮ್ಮ ಮಾನದಂಡ. ಇದಕ್ಕಾಗಿ, ನೀವು ಪ್ರತಿದಿನ ಹೊಸದನ್ನು ಕಲಿಯಬೇಕು, ಕರ್ಮಯೋಗಿಯ ಚೈತನ್ಯವನ್ನು ಸಾಕಾರಗೊಳಿಸಬೇಕು.

ಸ್ನೇಹಿತರೆ,

ನಾವು ಸುಧಾರಣೆಗಳು ಮತ್ತು ಆಡಳಿತ ಸೇವೆಗಳ ಬದಲಾವಣೆಗಳ ಬಗ್ಗೆ ಮಾತನಾಡುವಾಗ, ಅದು ಸಾರ್ವಜನಿಕ ಸೇವಕರ ನಡವಳಿಕೆಯ ಬದಲಾವಣೆಯನ್ನು ಸಹ ಅರ್ಥೈಸುತ್ತದೆ. ಹಳೆಯ ವ್ಯವಸ್ಥೆಯಲ್ಲಿ, ಅಧಿಕಾರಿಯಾಗುವುದರ ಮೇಲೆ ಹೆಚ್ಚಿನ ಒತ್ತು ನೀಡಲಾಗುತ್ತಿತ್ತು ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಇಂದು, ದೇಶವು ಕರ್ತವ್ಯದ ಪ್ರಾಮುಖ್ಯತೆಯನ್ನು ಸ್ಥಾನದಲ್ಲಿ ಅಲ್ಲ, ಆದರೆ ಕೆಲಸದಲ್ಲಿ ಒತ್ತಿ ಹೇಳುತ್ತದೆ. ಸಂವಿಧಾನವು ನಮ್ಮ ಕರ್ತವ್ಯಗಳ ಮೂಲಕ ನಮಗೆ ಹಕ್ಕುಗಳನ್ನು ನೀಡುತ್ತದೆ. ಪ್ರತಿ ನಿರ್ಧಾರಕ್ಕೂ ಮೊದಲು, ನಿಮ್ಮ ಕರ್ತವ್ಯ ಏನನ್ನು ಬಯಸುತ್ತದೆ ಎಂದು ನೀವು ನಿಮ್ಮನ್ನು ಕೇಳಿಕೊಂಡರೆ, ನಿಮ್ಮ ನಿರ್ಧಾರಗಳ ಪ್ರಭಾವವು ಸ್ವಯಂಚಾಲಿತವಾಗಿ ಗುಣಿಸುತ್ತದೆ. ನಾನು ಮತ್ತೊಮ್ಮೆ ಪುನರಾವರ್ತಿಸುತ್ತೇನೆ, ನಾವು ನಮ್ಮ ಪ್ರಸ್ತುತ ಪ್ರಯತ್ನಗಳನ್ನು ಭವಿಷ್ಯದ ದೃಷ್ಟಿಕೋನದಿಂದ ನೋಡಬೇಕು. 2047ರಲ್ಲಿ ಅಭಿವೃದ್ಧಿ ಹೊಂದಿದ ಭಾರತ - ಅದೇ ನಮ್ಮ ದೃಷ್ಟಿಕೋನ, ಅದೇ ನಮ್ಮ ಗುರಿ. ನಾವು ನಮ್ಮನ್ನು ಕೇಳಿಕೊಳ್ಳಬೇಕು: ಇಂದಿನ ನಮ್ಮ ಕೆಲಸವು ರಾಷ್ಟ್ರದ ಅಭಿವೃದ್ಧಿ ಪ್ರಯಾಣದ ಮೇಲೆ ಯಾವ ಪರಿಣಾಮ ಬೀರುತ್ತದೆ? ಒಂದು ನಿರ್ಧಾರದ ಮೂಲಕ ಎಷ್ಟು ನಾಗರಿಕರ ಜೀವನ ಬದಲಾಗಬಹುದು? ವೈಯಕ್ತಿಕ ಪರಿವರ್ತನೆಯು ಸಾಂಸ್ಥಿಕ ಪರಿವರ್ತನೆಯಾಗುವುದು ಹೇಗೆ? ಈ ಪ್ರಶ್ನೆಗಳು ಪ್ರತಿಯೊಂದು ಪ್ರಯತ್ನದ ಭಾಗವಾಗಿರಬೇಕು. ನನ್ನ ಅನುಭವದಲ್ಲಿ ಹೇಳುವುದಾದರೆ, ಇದಕ್ಕೆ ಅಪಾರ ಶಕ್ತಿಯ ಅಗತ್ಯವಿದೆ ಎಂದು ನಾನು ಹೇಳಬಲ್ಲೆ, ಅಂತಹ ಶಕ್ತಿಯು ಸೇವಾ ಮನೋಭಾವದಿಂದ ಮಾತ್ರ ಬರಬಹುದು.

ಸ್ನೇಹಿತರೆ,

ನಾವು ಕಲಿಕೆಯ ಬಗ್ಗೆ ಮಾತನಾಡುವಾಗ, ಇಂದಿನ ಸಂದರ್ಭದಲ್ಲಿ ತಂತ್ರಜ್ಞಾನವು ಅತ್ಯಂತ ಮುಖ್ಯವಾಗುತ್ತದೆ. ಕಳೆದ 11 ವರ್ಷಗಳಲ್ಲಿ, ತಂತ್ರಜ್ಞಾನವನ್ನು ಆಡಳಿತದಲ್ಲಿ ಹೇಗೆ ಸಂಯೋಜಿಸಲಾಗಿದೆ ಎಂಬುದನ್ನು ನೀವೆಲ್ಲರೂ ನೋಡಿದ್ದೀರಿ. ಆಡಳಿತ ಮತ್ತು ವಿತರಣೆಯಿಂದ ಆರ್ಥಿಕತೆಯವರೆಗೆ, ನಾವು ತಂತ್ರಜ್ಞಾನ ಕ್ರಾಂತಿಯ ಶಕ್ತಿಯನ್ನು ಕಂಡಿದ್ದೇವೆ. ಎಐ ಆಗಮನದೊಂದಿಗೆ, ಈ ಬದಲಾವಣೆಯು ಇನ್ನಷ್ಟು ವೇಗಗೊಳ್ಳುತ್ತಿದೆ. ಆದ್ದರಿಂದ, ತಂತ್ರಜ್ಞಾನವನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಅದನ್ನು ಸರಿಯಾಗಿ ಬಳಸುವುದು ಸಾರ್ವಜನಿಕ ಸೇವೆಯ ಅತ್ಯಗತ್ಯ ಭಾಗವಾಗಿದೆ. ತಂತ್ರಜ್ಞಾನ ಮತ್ತು ದತ್ತಾಂಶವನ್ನು ಅರ್ಥ ಮಾಡಿಕೊಳ್ಳುವವರು ಈಗ ಅತ್ಯುತ್ತಮ ಆಡಳಿತಗಾರರು ಮತ್ತು ಸಾರ್ವಜನಿಕ ಸೇವಕರಾಗಿರುತ್ತಾರೆ. ಇದು ನಿರ್ಧಾರ ತೆಗೆದುಕೊಳ್ಳುವಿಕೆಯ ಆಧಾರವನ್ನು ರೂಪಿಸುತ್ತದೆ. ಆದ್ದರಿಂದ, ಎಐ ಕ್ಷೇತ್ರದಲ್ಲಿ ಸಾಮರ್ಥ್ಯ ವೃದ್ಧಿ ಮತ್ತು ನಿರಂತರ ಕಲಿಕೆಯನ್ನು ಸುಗಮಗೊಳಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇದರಲ್ಲಿ ನಿಮ್ಮ ಭಾಗವಹಿಸುವಿಕೆ ಮತ್ತು ಒಳಗೊಳ್ಳುವಿಕೆ ಬಹಳ ಮುಖ್ಯ. ಕರ್ಮಯೋಗಿ ಸಾಧನಾ ಸಪ್ತಾಹವು ಈ ವಿಷಯದ ಮೇಲೆ ಸಮಾನವಾಗಿ ಗಮನ ಹರಿಸುತ್ತದೆ ಎಂದು ನಾನು ಭಾವಿಸುತ್ತೇನೆ.

ಸ್ನೇಹಿತರೆ,

ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿ, ರಾಷ್ಟ್ರದ ಯಶಸ್ಸು ಎಂದರೆ ರಾಜ್ಯಗಳ ಸಾಮೂಹಿಕ ಯಶಸ್ಸು. ದಶಕಗಳಿಂದ ರಾಜ್ಯಗಳನ್ನು ಮುಂದುವರಿದ, ಹಿಂದುಳಿದ ಅಥವಾ ಅನಾರೋಗ್ಯಕರ ಎಂದು ವರ್ಗೀಕರಿಸಲಾಗಿತ್ತು. ಆದರೆ ಇಂದು ನಾವು ಅಂತಹ ಎಲ್ಲಾ ವ್ಯಾಖ್ಯಾನಗಳನ್ನು ಕೊನೆಗೊಳಿಸುತ್ತಿದ್ದೇವೆ. ನಾವು ರಾಜ್ಯಗಳ ನಡುವಿನ ಪ್ರತಿಯೊಂದು ಅಂತರವನ್ನು ನಿವಾರಿಸಬೇಕು, ಪ್ರತಿ ರಾಜ್ಯವು ಸಮಾನವಾಗಿ ತೀವ್ರತೆಯಿಂದ ಕೆಲಸ ಮಾಡಿದಾಗ ಮಾತ್ರ ಇದು ಸಂಭವಿಸುತ್ತದೆ. ನಾವು ಕಂದಕಗಳನ್ನು ಮುರಿದು ಉತ್ತಮ ಸಮನ್ವಯ ಮತ್ತು ಹಂಚಿಕೆಯ ತಿಳಿವಳಿಕೆಯೊಂದಿಗೆ ಮುಂದುವರಿಯಬೇಕು. ಇದಕ್ಕಾಗಿ, ನಮಗೆ ಸಂಪೂರ್ಣ ಸರ್ಕಾರದ ಕಾರ್ಯವಿಧಾನದ ಅಗತ್ಯವಿದೆ. ಸರ್ಕಾರ ಮತ್ತು ಅಧಿಕಾರಶಾಹಿ ಎರಡೂ ಈ ಕಾರ್ಯವಿಧಾನವನ್ನು ಅಳವಡಿಸಿಕೊಂಡರೆ, ಪ್ರತಿಯೊಂದು ಧ್ಯೇಯವೂ ಯಶಸ್ವಿಯಾಗುತ್ತದೆ. ಕರ್ಮಯೋಗಿ ಸಾಧನಾ ಸಪ್ತಾಹವು ಇದನ್ನು ನಿಖರವಾಗಿ ಖಚಿತಪಡಿಸಿಕೊಳ್ಳುವ ಪ್ರಯತ್ನವಾಗಿದೆ.

ಸ್ನೇಹಿತರೆ,

ಸಾಮಾನ್ಯ ನಾಗರಿಕರಿಗೆ ಸ್ಥಳೀಯ ಕಚೇರಿಯೇ ಸರ್ಕಾರದ ಮುಖ ಎಂಬುದನ್ನು ನಾವು ಯಾವಾಗಲೂ ನೆನಪಿನಲ್ಲಿಡಬೇಕು. ನಿಮ್ಮ ಕಾರ್ಯಶೈಲಿ, ನಿಮ್ಮ ನಡವಳಿಕೆ - ಇವು ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ವ್ಯವಸ್ಥೆಗಳಲ್ಲಿ ನಾಗರಿಕರ ನಂಬಿಕೆಯನ್ನು ನಿರ್ಧರಿಸುತ್ತವೆ. ಆದ್ದರಿಂದ ನಾವು ಏನೇ ಮಾಡಿದರೂ, ಯಾವುದೇ ಮಟ್ಟದಲ್ಲಿ, ನಾವು ಆ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಮತ್ತೊಮ್ಮೆ, ಸಾಮರ್ಥ್ಯ ನಿರ್ಮಾಣ ಆಯೋಗದ ಸಂಪೂರ್ಣ ತಂಡವನ್ನು ನಾನು ಅಭಿನಂದಿಸುತ್ತೇನೆ. ಅಭಿವೃದ್ಧಿ ಹೊಂದಿದ ಭಾರತದತ್ತ ಸಾಗುವ ನಮ್ಮ ಪ್ರಯಾಣದಲ್ಲಿ ಕರ್ಮಯೋಗಿ ಸಾಧನಾ ಸಪ್ತಾಹವು ಒಂದು ಪ್ರಮುಖ ಅಧ್ಯಾಯವಾಗಲಿದೆ ಎಂಬ ವಿಶ್ವಾಸ ನನಗಿದೆ.

ತುಂಬು ಧನ್ಯವಾದಗಳು.

ನಮಸ್ಕಾರ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's manufacturing outlook remains resilient despite global headwinds; machine tools, metals and auto lead optimism

Media Coverage

India's manufacturing outlook remains resilient despite global headwinds; machine tools, metals and auto lead optimism
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 1 ಜುಲೈ 2026
July 01, 2026

PM Modi's Vision: Driving Digital Empowerment, Inclusive Development and India's Global Rise