ಪ್ ಗಳ ಕಾರ್ಯ ಕುಸಿತವಾಗಿದ್ದಾಗ, ಸಂಕೇತ(ಕೋಡ್ )ಗಳು ಕಾರ್ಯನಿರ್ವಹಿಸುತ್ತವೆ: ಐಟಿ ಉದ್ಯಮಕ್ಕೆ ಪ್ರಧಾನಮಂತ್ರಿ ಹೇಳಿಕೆ
ತಂತ್ರಜ್ಞಾನ ಉದ್ಯಮವನ್ನು ಅನಗತ್ಯ ನಿರ್ಬಂಧಗಳಿಂದ ಮುಕ್ತಗೊಳಿಸಲು ಸರ್ಕಾರ ಕಾರ್ಯೋನ್ಮುಖ: ಪ್ರಧಾನಿ
ಹೊಸ ಅವಕಾಶಗಳನ್ನು ಬಳಸಿಕೊಳ್ಳಲು ಯುವ ಉದ್ಯಮಿಗಳಿಗೆ ಸ್ವಾತಂತ್ರ್ಯವಿರಬೇಕು: ಪ್ರಧಾನಮಂತ್ರಿ

ನಮಸ್ಕಾರ!

ಈ ಸಲ ನಾಸ್ಕಾಂ ನ ತಂತ್ರಜ್ಞಾನ ಮತ್ತು ನಾಯಕತ್ವ ವೇದಿಕೆಯು ನನ್ನ ದೃಷ್ಟಿಯಲ್ಲಿ ಬಹಳ ವಿಶೇಷದ್ದು. ಇಡೀ ಜಗತ್ತು ಹಿಂದೆಂದೂ ಇಲ್ಲದಷ್ಟು ಭರವಸೆ ಮತ್ತು ಬಹಳ ವಿಶ್ವಾಸದಿಂದ ಭಾರತದತ್ತ ನೋಡುತ್ತಿರುವ ಸಂದರ್ಭ ಇದಾಗಿದೆ.

ನಮಗೆ ಹೇಳಲಾಗುತ್ತಿತ್ತು. ना दैन्यम्, ना पलायनम् ಅಂದರೆ ಸವಾಲು ಎಷ್ಟೇ ಕಷ್ಟದ್ದಾಗಿರಲಿ, ನಾವು ನಮ್ಮನ್ನು ದುರ್ಬಲರು ಎಂದು ಪರಿಗಣಿಸಬಾರದು, ಸವಾಲಿನ ಬಗ್ಗೆ ಹೆದರಲೂ ಬಾರದು ಮತ್ತು ಹಿಂಜರಿಯಬಾರದು. ಕೊರೊನಾ ಅವಧಿಯಲ್ಲಿ ಭಾರತದ ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ತನ್ನ ಸಾಮರ್ಥವನ್ನು ಸಾಬೀತು ಮಾಡಿತಲ್ಲದೆ ಅದು ತನ್ನನ್ನು ತಾನು ಆಧುನೀಕರಿಸಿಕೊಂಡಿತು. ಲಸಿಕೆಗಳಿಗಾಗಿ ನಾವು ಇತರ ರಾಷ್ಟ್ರಗಳನ್ನು ಅವಲಂಬಿಸಿರಬೇಕಾದ ಕಾಲವೊಂದಿತ್ತು. ಈಗ ಭಾರತದಲ್ಲಿ ತಯಾರಾದ ಕೊರೊನಾ ಲಸಿಕೆಯನ್ನು ಹಲವು ದೇಶಗಳಿಗೆ ಕೊಡುವ ಕಾಲ ಬಂದಿದೆ. ಕೊರೊನಾ ಕಾಲದಲ್ಲಿ ಭಾರತ ನೀಡಿದ ಪರಿಹಾರಗಳು ಇಂದು ಇಡೀ ಜಗತ್ತಿಗೆ ಪ್ರೇರಣೆಯಾಗಿವೆ. ಮತ್ತು ಈಗ ನನಗೆ ನಿಮ್ಮೆಲ್ಲರ ಸಹೋದ್ಯೋಗಿಗಳ ಮಾತನ್ನು ಆಲಿಸುವ ಅವಕಾಶ ಸಿಕ್ಕಿತ್ತು. ಕೆಲವು ಸಿ.ಇ.ಒ.ಗಳು ಭಾರತದ ಐ.ಟಿ. ಕೈಗಾರಿಕೆ ಕೂಡಾ ಅದ್ಭುತವಾದುದನ್ನು ಸಾಧಿಸಿದೆ ಎಂಬುದರತ್ತ ಗಮನ ಸೆಳೆದಿದ್ದಾರೆ. ಇಡೀ ದೇಶವು ಮನೆಗಳ ಆವರಣ ಗೋಡೆಗಳ ನಡುವೆ ಬಂಧಿಸಲ್ಪಟ್ಟಿದ್ದಾಗ, ನೀವು ಮನೆಯಿಂದ ಉದ್ಯಮವನ್ನು ಬಹಳ ಸುಲಲಿತವಾಗಿ ನಡೆಸುತ್ತಿದ್ದಿರಿ. ಕಳೆದ ವರ್ಷದ ಅಂಕಿ ಅಂಶಗಳು ವಿಶ್ವವನ್ನು ಅಚ್ಚರಿಯಲ್ಲಿ ಕೆಡವಬಹುದು, ಆದರೆ ಭಾರತದ ಜನತೆ ಇದನ್ನು ತಮ್ಮ ಸಾಮರ್ಥ್ಯದ ಸಹಜ ಸಂಗತಿ ಎಂದು ಪರಿಗಣಿಸುತ್ತಾರೆ.

ಸ್ನೇಹಿತರೇ,

ಇಂತಹ ಪರಿಸ್ಥಿತಿಯಲ್ಲಿ, ಕೊರೊನಾದಿಂದ ಪ್ರತೀ ವಲಯವೂ ಬಾಧಿತವಾಗಿರುವಾಗ, ನೀವು ಸುಮಾರು ಶೇ.2ರಷ್ಟು ಬೆಳವಣಿಗೆಯನ್ನು ಸಾಧಿಸಿದಿರಿ. ಬೆಳವಣಿಗೆ ದಾಖಲಾಗಲಿಕ್ಕಿಲ್ಲ ಎಂಬ ಆತಂಕ ಇದ್ದಾಗ್ಯೂ, ಭಾರತದ ಐ.ಟಿ ಕೈಗಾರಿಕೆಯು ತನ್ನ ಆದಾಯಕ್ಕೆ ಡಾಲರ್ ನಾಲ್ಕು ಬಿಲಿಯನ್ ಹೆಚ್ಚುವರಿಯಾಗಿ ಸೇರಿಸುತ್ತದೆ ಎಂದಾದರೆ ಅದು ನಿಜವಾಗಿಯೂ ಶ್ಲಾಘನೀಯ ಮತ್ತು ನೀವೆಲ್ಲರೂ ಅಭಿನಂದನೆಗೆ ಅರ್ಹರಾಗಿದ್ದೀರಿ, ಈ ಅವಧಿಯಲ್ಲಿ ಐ.ಟಿ. ಕೈಗಾರಿಕೆಯು ಮಿಲಿಯಾಂತರ ಹೊಸ ಉದ್ಯೋಗಗಳನ್ನು ನೀಡುವ ಮೂಲಕ ಅದು ಯಾಕೆ ಭಾರತದ ಬೆಳವಣಿಗೆಗೆ ಬಲಿಷ್ಟ ಸ್ತಂಭವಾಗಿದೆ ಎಂಬುದನ್ನು ತೋರಿಸಿಕೊಟ್ಟಿದೆ. ಇಂದು ಎಲ್ಲಾ ದತ್ತಾಂಶಗಳು, ಪ್ರತೀ ಸೂಚ್ಯಂಕಗಳು ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯ ಚಲನೆ, ವೇಗ ಹೊಸ ಎತ್ತರಗಳನ್ನು ತಲುಪುವುದನ್ನು ತೋರಿಸುತ್ತಿವೆ.

ಸ್ನೇಹಿತರೇ,

ನವ ಭಾರತ ಮತ್ತು ಪ್ರತಿಯೊಬ್ಬ ಭಾರತೀಯ, ಪ್ರಗತಿಯ ಬಗ್ಗೆ ತಾಳ್ಮೆಯಿಂದ ಕಾಯುವಂತಹ ಮನೋಭಾವವನ್ನು ಹೊಂದಿಲ್ಲ. ನಮ್ಮ ಸರಕಾರ ನವ ಭಾರತದ ಮತ್ತು ಅದರ ಯುವ ಜನತೆಯ ಈ ಚೈತನ್ಯವನ್ನು ಗಮನಿಸಿದೆ. 130 ಕೋಟಿಗೂ ಅಧಿಕ ಭಾರತೀಯರ ಆಶೋತ್ತರಗಳು ನಮ್ಮನ್ನು ಬಹಳ ತ್ವರಿತವಾಗಿ ಮುಂದೆ ಸಾಗಲು ಪ್ರೇರೇಪಿಸುತ್ತಿವೆ. ನವಭಾರತಕ್ಕೆ ಸಂಬಂಧಿಸಿದ ನಿರೀಕ್ಷೆಗಳು ಸರಕಾರದಿಂದ ಮತ್ತು ನಿಮ್ಮಿಂದ ವ್ಯಕ್ತವಾಗಿರುವ ಹಾಗು ದೇಶದ ಖಾಸಗಿ ವಲಯ ವ್ಯಕ್ತಪಡಿಸುತ್ತಿರುವ ನಿರೀಕ್ಷೆಗಳೇ ಆಗಿವೆ.

ಸ್ನೇಹಿತರೇ,

ಭಾರತದ ಐ.ಟಿ. ಕೈಗಾರಿಕೆ ಹಲವು ವರ್ಷಗಳ ಹಿಂದೆಯೇ ಜಾಗತಿಕ ವೇದಿಕೆಯ ಮೇಲೆ ತನ್ನ ಛಾಪನ್ನು ಮೂಡಿಸಿದೆ. ನಮ್ಮ ಭಾರತೀಯ ತಜ್ಞರು ಸೇವೆಗಳನ್ನು ಮತ್ತು ಪರಿಹಾರಗಳನ್ನು ಒದಗಿಸುವ ಮೂಲಕ ಇಡೀ ವಿಶ್ವಕ್ಕೆ ಕೊಡುಗೆ ನೀಡುತ್ತಿದ್ದಾರೆ. ಆದರೆ ವಿಸ್ತಾರವಾದ ದೇಶೀಯ ಮಾರುಕಟ್ಟೆಯಿಂದ ಐ.ಟಿ. ಕೈಗಾರಿಕೆಗೆ ಯಾಕೆ ಲಾಭವಾಗುತ್ತಿಲ್ಲ ಎಂಬುದಕ್ಕೆ ಹಲವಾರು ಕಾರಣಗಳಿವೆ. ಇದರಿಂದ ಭಾರತದಲ್ಲಿ ಡಿಜಿಟಲ್ ಅಂತರ ಉಂಟಾಗಿದೆ. ಈ ಪರಿಸ್ಥಿತಿಯನ್ನು ದೀಪದ ಕೆಳಗಿನ ಕತ್ತಲು ಎಂದು ಹೇಳಬಹುದು. ನಮ್ಮ ಸರಕಾರದ ನೀತಿಗಳು ಮತ್ತು ನಿರ್ಧಾರಗಳು ಹಲವು ವರ್ಷಗಳಿಂದ ನಾವು ಈ ಧೋರಣೆಯನ್ನು ಹೇಗೆ ಬದಲಾಯಿಸಿದ್ದೇವೆ ಎಂಬುದಕ್ಕೆ ಸಾಕ್ಷಿ.

ಸ್ನೇಹಿತರೇ,

ನಮ್ಮ ಸರಕಾರ ಭವಿಷ್ಯದ ನಾಯಕತ್ವವನ್ನು ಕಟ್ಟಿ ಹಾಕಿ ಬೆಳೆಸಲು ಸಾಧ್ಯವಿಲ್ಲ ಎಂಬುದನ್ನು ತಿಳಿದುಕೊಂಡಿದೆ. ಆದುದರಿಂದ, ಸರಕಾರವು ಅನಗತ್ಯ ನಿಯಂತ್ರಣ ನಿಯಮಾವಳಿಗಳಿಂದ ತಂತ್ರಜ್ಞಾನ ಉದ್ಯಮವನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಕಾರ್ಯ ನಿರತವಾಗಿದೆ. ರಾಷ್ಟ್ರೀಯ ಡಿಜಿಟಲ್ ಸಂಪರ್ಕ ನೀತಿಯು ಒಂದು ದೊಡ್ಡ ಪ್ರಯತ್ನ. ಭಾರತವನ್ನು ಜಾಗತಿಕ ಸಾಫ್ಟ್ ವೇರ್ ಉತ್ಪನ್ನ ತಾಣವನ್ನಾಗಿ ಬೆಳೆಸಲು ರಾಷ್ಟ್ರೀಯ ನೀತಿಯನ್ನು ರೂಪಿಸಲಾಗಿದೆ. ಸುಧಾರಣೆಗಳ ಚಕ್ರವು ಕೊರೊನಾ ಅವಧಿಯಲ್ಲೂ ಮುಂದುವರಿದಿತ್ತು. ಕೊರೋನಾ ಅವಧಿಯಲ್ಲೇ “ಇತರ ಸೇವಾ ಒದಗಣೆದಾರ” (ಒ.ಎಸ್.ಪಿ.) ಮಾರ್ಗದರ್ಶಿಗಳನ್ನು ಬಿಡುಗಡೆ ಮಾಡಲಾಗಿತ್ತು. ಅವುಗಳನ್ನು ನಿಮ್ಮ ಚರ್ಚೆಯಲ್ಲಿ ಕೂಡಾ ಪ್ರಸ್ತಾಪಿಸಲಾಗಿದೆ. ಇದರಿಂದ ನಿಮಗೆ ಹೊಸ ಪರಿಸ್ಥಿತಿಗಳಲ್ಲಿ ಕಾರ್ಯ ನಿರ್ವಹಿಸುವುದು ಸುಲಭ ಸಾಧ್ಯವಾಗಿದೆ. ಮತ್ತು ಮಧ್ಯಪ್ರವೇಶ ಕನಿಷ್ಠ ಪ್ರಮಾಣದಲ್ಲಿತ್ತು. ಇಂದು ಕೂಡಾ ಕೆಲವು ಸ್ನೇಹಿತರು ಹೇಳಿದರು, ಶೇ.90ಕ್ಕೂ ಅಧಿಕ ಜನರು ತಮ್ಮ ಮನೆಗಳಿಂದ ಕಾರ್ಯಾಚರಿಸುತ್ತಿದ್ದಾರೆ. ಅಷ್ಟು ಮಾತ್ರವಲ್ಲ, ಕೆಲವರು ತಮ್ಮ ತವರು ಹಳ್ಳಿಗಳಿಂದ ಕೆಲಸ ಮಾಡುತ್ತಿದ್ದಾರೆ. ನೋಡಿ, ಇದು ತಾನಾಗಿಯೇ ಬಹಳ ದೊಡ್ಡ ಶಕ್ತಿಯಾಗಿ ಬೆಳೆಯಲಿದೆ. 12 ಚಾಂಪಿಯನ್ ಸೇವಾ ವಲಯಗಳಲ್ಲಿ ಮಾಹಿತಿ ತಂತ್ರಜ್ಞಾನವನ್ನು ಸೇರಿಸಿರುವುದರಿಂದ ಅದರ ಪ್ರಯೋಜನ ನಿಮಗೆ ಲಭಿಸುತ್ತಿದೆ.

ಸ್ನೇಹಿತರೇ,

ಎರಡು ದಿನಗಳ ಹಿಂದೆ, ಪ್ರಮುಖ ನೀತಿಯಲ್ಲಿ ಇನ್ನೊಂದು ಸುಧಾರಣೆಯನ್ನು ಮಾಡಲಾಗಿದೆ. ಇದನ್ನು ನೀವೆಲ್ಲರೂ ಸ್ವಾಗತಿಸಿದ್ದೀರಿ. ನಕ್ಷೆ ಮತ್ತು ಭೂ ವ್ಯೋಮ ದತ್ತಾಂಶವನ್ನು ನಿಯಂತ್ರಣದಿಂದ ಮುಕ್ತ ಮಾಡಲಾಗಿದೆ ಮತ್ತು ಅದನ್ನು ಕೈಗಾರಿಕೆಗಳಿಗೆ ತೆರೆದಿರುವುದು ಬಹಳ ಮಹತ್ವದ ಹೆಜ್ಜೆ. ಇದು ಈ ವೇದಿಕೆಯ ಶೀರ್ಷಿಕೆ ಉದ್ದೇಶದೊಂದಿಗೆ ಸಮ್ಮಿಳಿತವಾಗಿದೆ. ಅದು “ಉತ್ತಮ ಸಹಜ ಸ್ಥಿತಿಯತ್ತ ಭವಿಷ್ಯ ನಿರ್ಮಾಣ” ಎಂಬುದಾಗಿದೆ. ಮತ್ತು ಸರಕಾರ ಈ ಶೃಂಗದ ಉದ್ದೇಶದ ರೀತಿಯಲ್ಲಿಯೇ ಕೆಲಸ ಮಾಡಿದೆ ಎಂದು ನಾನು ಭಾವಿಸುತ್ತೇನೆ. ಈ ಕ್ರಮ ನಮ್ಮ ತಂತ್ರಜ್ಞಾನ ನವೋದ್ಯಮ ಪರಿಸರವನ್ನು ಸಶಕ್ತೀಕರಣ ಮಾಡುತ್ತದೆ. ಇದು ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಬಲಪಡಿಸುವ ಕ್ರಮ ಮಾತ್ರವಲ್ಲ ಅದು ಆತ್ಮ ನಿರ್ಭರ ಭಾರತದ ಸಮಗ್ರ ಆಂದೋಲನಕ್ಕೆ ಚೈತನ್ಯ ನೀಡುವ ಹೆಜ್ಜೆ ಕೂಡಾ. ಹಲವು ಉದ್ಯಮಶೀಲರು ಈ ನಿರ್ಬಂಧಗಳನ್ನು ಮತ್ತು ಕೆಂಪು ಪಟ್ಟಿಯನ್ನು ವಿವಿಧ ವೇದಿಕೆಗಳಲ್ಲಿ ಚರ್ಚಿಸಿದ್ದರು ಎಂಬುದನ್ನು ನಾನು ನೆನಪು ಮಾಡಿಕೊಳ್ಳುತ್ತೇನೆ.

ಈಗ ನಾನು ನಿಮಗೊಂದು ಸಂಗತಿ ಹೇಳುತ್ತೇನೆ. ಭದ್ರತಾ ಕ್ಷೇತ್ರವನ್ನು ಮುಕ್ತ ಮಾಡಿದಾಗ ಅದಕ್ಕೆ ಸಂಬಂಧಿಸಿದಂತೆ ವ್ಯಕ್ತವಾದ ಕಳವಳಗಳಿವು. ಇದರಿಂದ ಭದ್ರತೆಗೆ ಅಪಾಯವಾಗಲಿದೆ ಎಂಬ ಆತಂಕ ವ್ಯಕ್ತವಾಗಿತ್ತು. ಈ ವಿಷಯಗಳು ಮತ್ತೆ ಮತ್ತೆ ಪ್ರಸ್ತಾಪವಾಗುತ್ತಿದ್ದವು. ಆದರೆ ಆತ್ಮ ವಿಶ್ವಾಸ ಎಂಬುದು ಭದ್ರತಾ ವಿಷಯಗಳನ್ನು ನಿಭಾಯಿಸುವಲ್ಲಿ ದೊಡ್ಡ ಶಕ್ತಿಯಾಯಿತು. ಇಂದು ಭಾರತವು ಪೂರ್ಣ ವಿಶ್ವಾಸದಿಂದಿದೆ ಮತ್ತು ನಾವದನ್ನು ಗಡಿ ಭಾಗದಲ್ಲಿ ಕಾಣುತ್ತಿದ್ದೇವೆ. ಹಾಗಿರುವಾಗ ಮಾತ್ರ ಈ ರೀತಿಯ ನಿರ್ಧಾರಗಳು ಸಾಧ್ಯವಾಗುತ್ತವೆ. ಈ ನಿರ್ಧಾರಗಳು ತಂತ್ರಜ್ಞಾನದ ಸುತ್ತಲೇ ಸುತ್ತುತ್ತವೆ ಎಂಬುದಲ್ಲ, ಅಥವಾ ಇವು ಆಡಳಿತಾತ್ಮಕ ಸುಧಾರಣೆಗಳು ಮಾತ್ರ ಎಂಬುದಾಗಲೀ, ಅಥವಾ ನಿರ್ದಿಷ್ಟ ನಿಯಮಗಳನ್ನು ಸರಕಾರ ಹಿಂತೆಗೆದುಕೊಂಡಿತು ಎಂಬುದಾಗಲೀ, ನಿರ್ದಿಷ್ಟ ನೀತಿಗಳಿಂದ ಸರಕಾರ ಹಿಂದೆ ಸರಿಯಿತು ಎಂಬುದಾಗಲೀ ಅಲ್ಲ. ಈ ನಿರ್ಧಾರಗಳು ಭಾರತದ ಸಾಮರ್ಥ್ಯಕ್ಕೆ ಕೈಗನ್ನಡಿ. ಭಾರತಕ್ಕೆ ನಾವು ದೇಶವನ್ನು ಸುರಕ್ಷಿತವಾಗಿಡಲು ಸಮರ್ಥರಿದ್ದೇವೆ ಮತ್ತು ಈ ನಿರ್ಧಾರಗಳನ್ನು ಮಾಡಿದ ಬಳಿಕ ದೇಶದ ಯುವಕರಿಗೆ ಅವರ ಮೌಲ್ಯವನ್ನು ಜಗತ್ತಿಗೆ ತೋರಿಸಲು ಅವಕಾಶಗಳನ್ನು ನೀಡಲು ಸಮರ್ಥರಿದ್ದೇವೆ ಎಂಬುದರ ಸೂಚನೆ ಇದು. ನಾನು ನಿಮ್ಮ ಜೊತೆ ಮಾತನಾಡಿದ್ದಾಗ ನಾನು ಸಮಸ್ಯೆಯ ಬಗ್ಗೆ ಸುಳಿವು ಹೊಂದಿದ್ದೆ. ಈ ನಿರ್ಧಾರವನ್ನು ನಮ್ಮ ಯುವ ಉದ್ಯಮಿಗಳಿಗೆ ಮತ್ತು ನವೋದ್ಯಮಗಳಿಗೆ ಜಗತ್ತಿನಲ್ಲಿ ಉಂಟಾಗಿರುವ ಹೊಸ ಅವಕಾಶಗಳ ಪ್ರಯೋಜನಗಳನ್ನು ಬಳಸಿಕೊಳ್ಳಲು ಸ್ವಾತಂತ್ರ್ಯ ಇರಬೇಕು ಎಂಬ ಕಾರಣಕ್ಕಾಗಿ ಕೈಗೊಂಡೆವು. ಸರಕಾರಕ್ಕೆ ದೇಶದ ನಾಗರಿಕರಲ್ಲಿ ಪೂರ್ಣ ವಿಶ್ವಾಸವಿದೆ. ನಮ್ಮ ನವೋದ್ಯಮಗಳು ಮತ್ತು ಅನ್ವೇಷಕರಲ್ಲಿಯೂ ಭರವಸೆ ಇದೆ. ಈ ಭರವಸೆ, ವಿಶ್ವಾಸಗಳೊಂದಿಗೆ ಸ್ವಯಂ ಪ್ರಮಾಣೀಕರಣವನ್ನು ಉತ್ತೇಜಿಸಲಾಗುತ್ತಿದೆ.

ಸ್ನೇಹಿತರೇ,

ಕಳೆದ ಆರು ವರ್ಷಗಳಲ್ಲಿ, ಐ.ಟಿ ಕೈಗಾರಿಕೆ ತಯಾರಿಸಿದ ಉತ್ಪನ್ನಗಳು ಮತ್ತು ಪರಿಹಾರಗಳನ್ನು ನಾವು ಆಡಳಿತದ ಪ್ರಮುಖ ಭಾಗಗಳನ್ನಾಗಿಸಿದ್ದೇವೆ. ನಿರ್ದಿಷ್ಟವಾಗಿ ಹೇಳಬೇಕೆಂದರೆ ಡಿಜಿಟಲ್ ಇಂಡಿಯಾವು ಸಾಮಾನ್ಯ ಭಾರತೀಯನನ್ನು ಸಶಕ್ತೀಕರಣ ಮಾಡಿದೆ ಮತ್ತು ಆತನನ್ನು ಸರಕಾರದ ಜೊತೆ ಜೋಡಿಸಿದೆ. ಇಂದು ದತ್ತಾಂಶವನ್ನು ಕೂಡಾ ಪ್ರಜಾಸತ್ತೆ ಮಾದರಿಯಡಿ ತರಲಾಗಿದೆ. ಮತ್ತು ಕೊನೆಯ ತುದಿಯವರೆಗೂ ಸೇವಾ ಪೂರೈಕೆ ಸಮರ್ಪಕವಾಗಿದೆ. ಸರಕಾರದ ನೂರಾರು ಸೇವೆಗಳ ಪೂರೈಕೆಯನ್ನು ಇಂದು ಆನ್ ಲೈನ್ ಮೂಲಕ ಮಾಡಲಾಗುತ್ತಿದೆ. ಆಡಳಿತದಲ್ಲಿ ತಂತ್ರಜ್ಞಾನದ ಸಮರ್ಪಕ ಬಳಕೆ ಬಡವರಿಗೆ ಮತ್ತು ಮಧ್ಯಮವರ್ಗದವರಿಗೆ ಬಹಳ ದೊಡ್ಡ ಸಮಾಧಾನವನ್ನು ಒದಗಿಸಿದೆ ಮತ್ತು ಭ್ರಷ್ಟಾಚಾರದಿಂದ ಮುಕ್ತ ಮಾಡಿದೆ. ಫಿನ್ ಟೆಕ್ ಉತ್ಪನ್ನಗಳ ಮತ್ತು ಯು.ಪಿ.ಐ. ಗಳ ನಮ್ಮ ಡಿಜಿಟಲ್ ವೇದಿಕೆಗಳು ಇಂದು ವಿಶ್ವ ಬ್ಯಾಂಕ್ ಸಹಿತ ಜಗತ್ತಿನಾದ್ಯಂತ ಚರ್ಚೆಗೆ ಒಳಗಾಗುತ್ತಿವೆ. ನಗದನ್ನು ಅತಿಯಾಗಿ ನೆಚ್ಚಿಕೊಂಡ ಸಮಾಜವಾದ ನಮ್ಮ ಸಮಾಜವು ಮೂರು –ನಾಲ್ಕು ವರ್ಷಗಳಲ್ಲಿ ಹೇಗೆ ಕನಿಷ್ಠ ನಗದು ಸಮಾಜವಾಗಿ ಬದಲಾಯಿತು ಎಂಬ ಉದಾಹರಣೆ ನಮ್ಮೆದುರೇ ಇದೆ. ಡಿಜಿಟಲ್ ವರ್ಗಾವಣೆಗಳ ಬಳಕೆ ಹೆಚ್ಚುತ್ತಿರುವುದರಿಂದ ಕಪ್ಪು ಹಣದ ಮೂಲವೂ ಸೊರಗಿ ಹೋಗುತ್ತಿದೆ. ಬಡವರ ಪ್ರತಿಯೊಂದು ಪೈಸೆ ಕೂಡಾ ಜಾಮ್ ತ್ರಿಭುಜ ಮತ್ತು ಡಿ.ಬಿ.ಟಿ.ಯಿಂದಾಗಿ ಯಾವುದೇ ಸೋರಿಕೆ ಇಲ್ಲದೆ ಅವರಿಗೆ ತಲುಪುತ್ತಿದೆ.

ಸ್ನೇಹಿತರೇ,

ಉತ್ತಮ ಆಡಳಿತಕ್ಕೆ ಪಾರದರ್ಶಕತೆ ಬಹಳ ಪ್ರಮುಖವಾದ ಶರತ್ತು. ದೇಶದ ಆಡಳಿತ ವ್ಯವಸ್ಥೆಯಲ್ಲಿ ಈ ಪರಿವರ್ತನೆ ಈಗ ಆಗತೊಡಗಿದೆ. ಇದರಿಂದಾಗಿ ಭಾರತ ಸರಕಾರದ ಬಗ್ಗೆ ಸಾರ್ವಜನಿಕರಲ್ಲಿ ಭರವಸೆ ಪ್ರತೀ ಸಮೀಕ್ಷೆಯಲ್ಲಿಯೂ ಸತತವಾಗಿ ಏರತೊಡಗಿದೆ. ಈಗ ಆಡಳಿತವನ್ನು ಸರಕಾರದ ಕಡತಗಳಿಂದ ಹೊರಗೆ ತರಲಾಗುತ್ತಿದೆ ಮತ್ತು ಡ್ಯಾಶ್ ಬೋರ್ಡ್ ಗಳಿಗೆ ಅಳವಡಿಸಲಾಗುತ್ತಿದೆ. ದೇಶದ ಸಾಮಾನ್ಯ ನಾಗರಿಕರು ಸರಕಾರದ ಮತ್ತು ಸರಕಾರಿ ಇಲಾಖೆಗಳ ಪ್ರತೀ ಕಾರ್ಯಚಟುವಟಿಕೆಯನ್ನು ತಮ್ಮ ಫೋನ್‌ಗಳ ಮೂಲಕ ನಿಗಾ ವಹಿಸಬಹುದಾದಂತಹ ವ್ಯವಸ್ಥೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ಕೆಲಸ ಯಾವುದೇ ಇರಲಿ ಅದು ದೇಶದೆದುರು ಇರಬೇಕು.

ಸ್ನೇಹಿತರೇ,

ಸರಕಾರಿ ಖರೀದಿಯ ಬಗ್ಗೆ ಯಾವ ರೀತಿಯ ಪ್ರಶ್ನೆಗಳು ಎತ್ತಲ್ಪಡುತ್ತಿದ್ದವು? ಅದು ಗೊತ್ತಿಲ್ಲದವರು ನಮ್ಮಲ್ಲಿ ಯಾರಿದ್ದಾರೆ? ನಾವು ಕೂಡಾ ಈ ವಿಷಯಗಳನ್ನು ಎತ್ತಿದ್ದೆವು ಮತ್ತು ಪ್ರತಿಭಟನೆ ನಡೆಸಿದ್ದೆವು. ಈಗ ಇಡೀ ಸರಕಾರಿ ಖರೀದಿ ಪ್ರಕ್ರಿಯೆ ಸರಕಾರದ ಇ-ಮಾರುಕಟ್ಟೆಯ ಸ್ಥಳ-ಅಂದರೆ ಜಿ.ಇ.ಎಂ ಮೂಲಕ ನಡೆಯುತ್ತದೆ. ಡಿಜಿಟಲ್ ತಂತ್ರಜ್ಞಾನ ಬಳಸಿ ಸಂಪೂರ್ಣ ಪಾರದರ್ಶಕತೆಯಿಂದ ಇದನ್ನು ಮಾಡಲಾಗುತ್ತದೆ. ಇಂದು ಬಹುತೇಕ ಸರಕಾರಿ ಟೆಂಡರ್ ಗಳನ್ನು ಆನ್ ಲೈನ್ ಮೂಲಕ ಕರೆಯಲಾಗುತ್ತದೆ. ಪ್ರತೀ ಯೋಜನೆ, ಅದು ನಮ್ಮ ಮೂಲಸೌಕರ್ಯ ಯೋಜನೆ ಇರಲಿ ಅಥವಾ ಬಡವರಿಗೆ ಮನೆ ಇರಲಿ ಅದನ್ನು ಜಿಯೋ ಟ್ಯಾಗ್ ಮಾಡಲಾಗಿರುತ್ತದೆ. ಇದರಿಂದ ಅವುಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುವುದು ಸಾಧ್ಯವಾಗುತ್ತದೆ. ಗ್ರಾಮಗಳ ಮನೆಗಳ ನಕ್ಷೆಗಳನ್ನು ಕೂಡಾ ಡ್ರೋನ್ ಗಳ ಮೂಲಕ ಮಾಡಲಾಗುತ್ತದೆ. ಮಾನವ ಮಧ್ಯಪ್ರವೇಶವನ್ನು ತೆರಿಗೆ ಸಂಬಂಧಿ ವಿಷಯಗಳಲ್ಲಿ ಕೂಡಾ ಕಡಿಮೆ ಮಾಡಲಾಗುತ್ತಿದೆ. ಮತ್ತು ಮುಖರಹಿತ ವ್ಯವಸ್ಥೆಯನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ತ್ವರಿತ, ನಿಖರ, ಮತ್ತು ಪಾರದರ್ಶಕ ವ್ಯವಸ್ಥೆಯನ್ನು ಸಾಮಾನ್ಯರಿಗೆ ಒದಗಿಸುವುದೇ ನನ್ನ ಪ್ರಕಾರ ಕನಿಷ್ಠ ಸರಕಾರ ಮತ್ತು ಗರಿಷ್ಟ ಆಡಳಿತ.

ಸ್ನೇಹಿತರೇ,

ಇಂದು ಭಾರತದ ತಂತ್ರಜ್ಞಾನದ ಪ್ರತಿಷ್ಠೆ ಮತ್ತು ಗುರುತಿಸುವಿಕೆ ನೋಡಿದರೆ ದೇಶಕ್ಕೆ ನಿಮ್ಮಿಂದ ಬಹಳ ದೊಡ್ಡ ಭರವಸೆಗಳಿವೆ ಮತ್ತು ನಿರೀಕ್ಷೆಗಳಿವೆ. ನಮ್ಮ ತಂತ್ರಜ್ಞಾನ ಹೆಚ್ಚು ಹೆಚ್ಚು “ಭಾರತದಲ್ಲಿ ಉತ್ಪಾದಿತ” ವಾಗಿರುವಂತೆ ಖಾತ್ರಿಪಡಿಸುತ್ತಿದ್ದೀರಿ. ನಾನು ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ಈಗ ನಿಮ್ಮ ಪರಿಹಾರಗಳು ಭಾರತಕ್ಕಾಗಿ ತಯಾರಿತ ಎಂಬ ಭಾವನೆಯನ್ನೂ ಹೊಂದಿರಬೇಕು. ನಾವು ಭಾರತೀಯ ತಂತ್ರಜ್ಞಾನದ ನಾಯಕತ್ವವನ್ನು ಹಲವು ಕ್ಷೇತ್ರಗಳಿಗೆ ವಿಸ್ತರಿಸಲು ಮತ್ತು ಈ ವೇಗವನ್ನು ಕಾಯ್ದುಕೊಳ್ಳಲು ನಮ್ಮ ಸ್ಪರ್ಧಾತ್ಮಕತೆಗೆ ಹೊಸ ಮಾನದಂಡಗಳನ್ನು ನಾವು ರೂಪಿಸಿಕೊಳ್ಳಬೇಕು. ನಾವು ನಮ್ಮೊಂದಿಗೇ ಸ್ಪರ್ಧೆ ಮಾಡಬೇಕು. ಜಾಗತಿಕ ತಂತ್ರಜ್ಞಾನದ ನಾಯಕನಾಗಲು ಭಾರತೀಯ ಮಾಹಿತಿ ತಂತ್ರಜ್ಞಾನ ಕೈಗಾರಿಕೆ ಅತ್ಯುತ್ತಮ ಗುಣಮಟ್ಟ ಕಾಪಾಡುವ ಸಂಸ್ಕೃತಿಯನ್ನು ಮತ್ತು ಸಾಂಸ್ಥಿಕ ನಿರ್ಮಾಣ ಕೌಶಲವನ್ನು ಅನ್ವೇಷಣೆ ಮತ್ತು ಉದ್ಯಮಶೀಲತೆಗೂ ಸಮಾನ ಗಮನ ನೀಡುವ ಮೂಲಕ ಸಮ್ಮಿಳಿತ ಮಾಡಿಕೊಳ್ಳಬೇಕು. ನವೋದ್ಯಮ ಸ್ಥಾಪಕರಿಗೆ ನನ್ನ ವಿಶೇಷ ಸಂದೇಶವಿದೆ. ನೀವು ಬರೇ ಮೌಲ್ಯ ಗಳಿಕೆ ಹಾಗು ನಿರ್ಗಮನ ತಂತ್ರಕ್ಕೆ ನಿಮ್ಮನ್ನು ಸೀಮಿತ ಮಾಡಿಕೊಳ್ಳಬೇಡಿ. ನೀವು ಹೇಗೆ ಸಂಸ್ಥೆಗಳನ್ನು ಕಟ್ಟಬಹುದು ಎಂಬುದರ ಬಗ್ಗೆ ಚಿಂತಿಸಿ. ಅತ್ಯುತ್ತಮ ಉತ್ಪಾದನೆಗಳು ಎಂಬ ಜಾಗತಿಕ ಗುಣಮಟ್ಟವನ್ನು ನಿಗದಿ ಮಾಡುವಂತಹ ವಿಶ್ವ ದರ್ಜೆಯ ಉತ್ಪನ್ನಗಳನ್ನು ಹೇಗೆ ರೂಪಿಸಬಹುದು ಎಂಬುದರ ಬಗ್ಗೆ ಚಿಂತಿಸಿ. ಈ ಎರಡು ಗುರಿಗಳ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಇವುಗಳಿಲ್ಲದೆ ಇದ್ದರೆ ನಾವು ಸದಾ ಅನುಯಾಯಿಗಳಾಗಿರುತ್ತೇವೆಯೇ ವಿನಹ ನಾವು ಜಾಗತಿಕ ನಾಯಕನಾಗಲಾರೆವು.

ಸ್ನೇಹಿತರೇ,

ಈ ವರ್ಷ ನಾವು ನಮ್ಮ ಸ್ವಾತಂತ್ರ್ಯದ 75 ನೇ ವರ್ಷಕ್ಕೆ ಸಾಗುತ್ತಿದ್ದೇವೆ. ಹೊಸ ಗುರಿಗಳನ್ನು ನಿಗದಿ ಮಾಡಲು ಮತ್ತು ಅವುಗಳನ್ನು ಸಾಧಿಸಲು ಸರ್ವ ಪ್ರಯತ್ನಗಳನ್ನು ಮಾಡುವುದಕ್ಕೆ ಇದು ಸಕಾಲ. ಇಂದಿನಿಂದ ನಾವು ಎಷ್ಟು ವಿಶ್ವ ದರ್ಜೆಯ ಉತ್ಪನ್ನಗಳನ್ನು ಕೊಡುತ್ತೇವೆ ಮತ್ತು ಇನ್ನು 25-26 ವರ್ಷಗಳ ಬಳಿಕ ಭಾರತವು ತನ್ನ ಸ್ವಾತಂತ್ರ್ಯದ 100 ವರ್ಷಗಳನ್ನು ಆಚರಿಸುವಾಗ ನಾವು ಎಷ್ಟು ಮಂದಿ ಜಾಗತಿಕ ನಾಯಕರನ್ನು ಸೃಷ್ಟಿಸಬೇಕು ಎಂಬ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ.ನೀವು ಗುರಿಗಳನ್ನು ನಿಗದಿ ಮಾಡಿ, ದೇಶವು ನಿಮ್ಮೊಂದಿಗೆ ಇದೆ. ಭಾರತದ ಇಷ್ಟೊಂದು ದೊಡ್ಡ ಜನಸಂಖ್ಯೆ ನಿಮ್ಮ ಬಹಳ ದೊಡ್ಡ ಬಲ. ಕಳೆದ ಕೆಲವು ತಿಂಗಳುಗಳಿಂದ ಭಾರತದ ಜನರು ತಾಂತ್ರಿಕ ಪರಿಹಾರಗಳಿಗಾಗಿ ಹೇಗೆ ತಾಳ್ಮೆರಹಿತರಾಗಿದ್ದಾರೆ ಎಂಬುದನ್ನು ನಾವು ಗಮನಿಸಿದ್ದೇವೆ. ಜನರು ಹೊಸ ತಂತ್ರಜ್ಞಾನಾಧಾರಿತ ಪರಿಹಾರಗಳಿಗಾಗಿ ಕಾತರಿಸುತ್ತಿದ್ದಾರೆ. ಜನರು ಹೊಸ ಸಂಗತಿಗಳನ್ನು ಪ್ರಯೋಗಿಸಲು ಕಾಯುತ್ತಿದ್ದಾರೆ ಮತ್ತು ಅವರು ಭಾರತೀಯ ಪರಿಹಾರಗಳ ಬಗ್ಗೆ ಉತ್ಸುಕರಾಗಿದ್ದಾರೆ. ದೇಶ ಈಗ ಮನಸ್ಸು ಮಾಡಿದೆ. ನೀವು ಕೂಡಾ ಮನಸ್ಸು ಮಾಡಿ.

ಸ್ನೇಹಿತರೇ,

ಮಾಹಿತಿ ತಂತ್ರಜ್ಞಾನ ಉದ್ಯಮ, ತಂತ್ರಜ್ಞಾನ ಉದ್ಯಮ, ಅನ್ವೇಷಣೆಗಳು, ಸಂಶೋಧನೆಗಳು ಮತ್ತು ಯುವ ಮನಸ್ಸುಗಳು 21 ನೇ ಶತಮಾನದಲ್ಲಿಯ ಸವಾಲುಗಳಿಗೆ ಪೂರಕವಾದ ತಾಂತ್ರಿಕ ಪರಿಹಾರಗಳನ್ನು ನೀಡುವ ಬೃಹತ್ ಜವಾಬ್ದಾರಿಯನ್ನು ಹೊಂದಿವೆ. ಉದಾಹರಣೆಗೆ, ನಮ್ಮ ಕೃಷಿಯು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ನೀರು ಮತ್ತು ರಸಗೊಬ್ಬರ ಬಳಕೆಯಿಂದಾಗಿರುವ ಪರಿಣಾಮಗಳನ್ನು ಎದುರಿಸುತ್ತಿದೆ. ರೈತರಿಗೆ ನೀರಿನ ಅಗತ್ಯವನ್ನು ತಿಳಿಸುವ ಮತ್ತು ಪ್ರತೀ ಬೆಳೆಗೂ ರಸಗೊಬ್ಬರದ ಪ್ರಮಾಣವನ್ನು ತಿಳಿಸುವ ಕೃತಕ ಬುದ್ಧಿಮತ್ತೆ ಆಧಾರಿತ ಸ್ಮಾರ್ಟ್ ತಂತ್ರಜ್ಞಾನವನ್ನು ಅಭಿವೃದ್ಧಿ ಮಾಡುವಂತಹ ಜವಾಬ್ದಾರಿಯನ್ನು ಕೈಗಾರಿಕಾ ವಲಯ ಹೊರಬೇಡವೇ? ತಂತ್ರಜ್ಞಾನ ಅಭಿವೃದ್ಧಿ ಮಾತ್ರವೇ ಸಾಲದು; ನಾವು ಭಾರತದಲ್ಲಿ ಸಾಮೂಹಿಕವಾಗಿ ಅಳವಡಿಸಿಕೊಳ್ಳಬಹುದಾದಂತಹ ಪರಿಹಾರಗಳನ್ನೂ ಹುಡುಕಬೇಕು.ಅದೇ ರೀತಿಯಲ್ಲಿ ಭಾರತವು ಇಂದು ಆರೋಗ್ಯ ಮತ್ತು ಕ್ಷೇಮದ ದತ್ತಾಂಶಗಳ ಶಕ್ತಿಯಿಂದ ಕಡುಬಡವರಿಗೆ ಹೇಗೆ ಪ್ರಯೋಜನವಾದೀತು ಎಂಬುದರ ಬಗ್ಗೆಯೂ ಗಮನ ಹರಿಸಬೇಕಾಗಿದೆ. ಟೆಲಿ ವೈದ್ಯಕೀಯವನ್ನು ಬಹಳ ಪರಿಣಾಮಕಾರಿಯಾಗಿಸಲು ದೇಶವು ನಿಮ್ಮಿಂದ ಉತ್ತಮ ಪರಿಹಾರಗಳನ್ನು ನಿರೀಕ್ಷೆ ಮಾಡುತ್ತಿದೆ.

ಸ್ನೇಹಿತರೇ,

ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿಗೆ ಸಂಬಂಧಿಸಿ ತಂತ್ರಜ್ಞಾನ ಉದ್ಯಮ ದೇಶಕ್ಕೆ ಪರಿಹಾರಗಳನ್ನು ಒದಗಿಸಬೇಕಾಗಿದೆ, ಮತ್ತು ಅವುಗಳು ದೇಶದ ಬೃಹತ್ ಪ್ರಮಾಣದ ಜನಸಂಖ್ಯೆಗೆ ಲಭ್ಯವಾಗುವಂತಿರಬೇಕು. ಇಂದು ದೇಶದ ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಮತ್ತು ಅಟಲ್ ಇನ್ಕ್ಯುಬೇಶನ್ ಕೇಂದ್ರಗಳ ಮೂಲಕ ತಂತ್ರಜ್ಞಾನದ ವಾತಾವರಣವನ್ನು ನಿರ್ಮಾಣ ಮಾಡಲಾಗುತ್ತಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣ ಮಾತ್ರವಲ್ಲ ಕೌಶಲಕ್ಕೂ ಒತ್ತು ನೀಡುತ್ತಿದೆ. ಈ ಪ್ರಯತ್ನಗಳು ಕೈಗಾರಿಕೆಗಳ ಸಹಕಾರ ಇಲ್ಲದಿದ್ದರೆ ಸಫಲ ಆಗಲಾರವು. ನಾನು ಒಂದು ಸಂಗತಿಯನ್ನು ಹೇಳಲಿಚ್ಚಿಸುತ್ತೇನೆ ಏನೆಂದರೆ ನೀವು ನಿಮ್ಮ ಸಿ.ಎಸ್.ಆರ್. ಕಾರ್ಯಚಟುವಟಿಕೆಗಳ ಫಲಿತಾಂಶವನ್ನು ಪರಾಮರ್ಶೆ ಮಾಡಿ. ನಿಮ್ಮ ಸಿ.ಎಸ್.ಆರ್. ಚಟುವಟಿಕೆಗಳ ಗಮನ ದೇಶದ ಹಿಂದುಳಿದ ಪ್ರದೇಶಗಳ ಮಕ್ಕಳು ಆಗಿದ್ದರೆ ಮತ್ತು ನೀವು ಅವರನ್ನು ಡಿಜಿಟಲ್ ಶಿಕ್ಷಣದ ಮೂಲಕ ಸಂಪರ್ಕಿಸಿ ವಿಶ್ಲೇಷಣಾತ್ಮಕ ಚಿಂತನೆ, ಆಲೋಚನಾಕ್ರಮವನ್ನು ಅವರಲ್ಲಿ ಬೆಳೆಸಿ. ಆಗ ಅದು ಬಹಳ ದೊಡ್ಡ ಪರಿವರ್ತನೆಯನ್ನು ತರುವಂತಹ ಕೆಲಸ ಮಾಡುತ್ತದೆ. ಸರಕಾರ ತನ್ನ ಭಾಗದ ಪ್ರಯತ್ನಗಳನ್ನು ಮಾಡುತ್ತಿದೆ, ಆದರೆ ನಿಮ್ಮ ಸಹಾಯ ಅದ್ಭುತವಾದುದನ್ನು ಸಾಧಿಸಬಹುದು. ಭಾರತಕ್ಕೆ ಚಿಂತನೆಗಳ, ಆಲೋಚನೆಗಳ ಕೊರತೆ ಇಲ್ಲ. ಚಿಂತನೆಗಳನ್ನು ವಾಸ್ತವಕ್ಕೆ ತರುವಲ್ಲಿ ಸಹಾಯ ಮಾಡುವಂತಹ ಮಾರ್ಗದರ್ಶಕರು ಅದಕ್ಕೆ ಬೇಕು.

ಸ್ನೇಹಿತರೇ,

ಇಂದು ಎರಡನೆ ಮತ್ತು ಮೂರನೆ ವರ್ಗದ ನಗರಗಳೂ ಆತ್ಮನಿರ್ಭರ ಭಾರತದ ಪ್ರಮುಖ ಕೇಂದ್ರಗಳಾಗುತ್ತಿವೆ. ಈ ಸಣ್ಣ ಪಟ್ಟಣಗಳು ಇಂದು ಐ.ಟಿ.ಆಧಾರಿತ ತಂತ್ರಜ್ಞಾನಗಳ ಬೇಡಿಕೆ ಮತ್ತು ಬೆಳವಣಿಗೆಯ ಬೃಹತ್ ಕೇಂದ್ರಗಳಾಗುತ್ತಿವೆ. ದೇಶದ ಈ ಸಣ್ಣ ಪಟ್ಟಣಗಳ ಯುವಜನತೆ ಅದ್ಭುತ ಅನ್ವೇಷಕರಾಗಿ ಮೂಡಿ ಬರುತ್ತಿದ್ದಾರೆ. ಸರಕಾರದ ಆದ್ಯತೆ ಕೂಡಾ ಈ ಸಣ್ಣ ನಗರಗಳಲ್ಲಿ ಉತ್ತಮ ಮೂಲಸೌಕರ್ಯಗಳನ್ನು ನಿರ್ಮಾಣ ಮಾಡುವುದಾಗಿದೆ ಮತ್ತು ಆ ಮೂಲಕ ದೇಶವಾಸಿಗಳಿಗೆ ಮತ್ತು ನಿಮ್ಮಂತಹ ಉದ್ಯಮಪತಿಗಳಿಗೆ ಯಾವುದೇ ತೊಂದರೆ ಎದುರಾಗದಂತೆ ನೋಡಿಕೊಳ್ಳುವುದಾಗಿದೆ. ನೀವು ಈ ಸಣ್ಣ ನಗರಗಳಿಗೆ ಹೋದಷ್ಟು ಅವುಗಳು ಹೆಚ್ಚು ಹೆಚ್ಚು ಅಭಿವೃದ್ಧಿ ಕಾಣುತ್ತವೆ.

ಸ್ನೇಹಿತರೇ,

ಮುಂದಿನ ಮೂರು ದಿನಗಳಲ್ಲಿ ನೀವು ಪ್ರಸ್ತುತ ಮತ್ತು ಭವಿಷ್ಯದ ಪರಿಹಾರಗಳ ಬಗ್ಗೆ ಗಂಭೀರ ಸಮಾಲೋಚನೆ ನಡೆಸುತ್ತೀರಿ ಎಂಬ ಬಗ್ಗೆ ನನಗೆ ಖಾತ್ರಿ ಇದೆ. ಮತ್ತು ಎಂದಿನಂತೆ ಸರಕಾರ ಕೂಡಾ ನಿಮ್ಮ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ. ನಾನು ಒಂದು ಸಂಗತಿ ಹೇಳಲೇಬೇಕು. ಆಗಸ್ಟ್ 15 ರಂದು ನಾನು ಮಾಡಿದ ಹಿಂದಿನ ಭಾಷಣದಲ್ಲಿ, ನಾನು ದೇಶದೆದುರು ಒಂದು ಗುರಿ ನಿಗದಿ ಮಾಡಿದ್ದೆ, ಅದೆಂದರೆ 1000 ದಿನಗಳಲ್ಲಿ ಆಪ್ಟಿಕಲ್ ಫೈಬರ್ ಕೇಬಲ್ ನ್ನು ಆರು ಲಕ್ಷ ಹಳ್ಳಿಗಳಿಗೆ ತಲುಪಿಸುವ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದೆ. ಅದನ್ನು ನಾನು ಬೆಂಬತ್ತುತ್ತಿದ್ದೇನೆ ಮತ್ತು ನಾವು ಅದನ್ನು ಮಾಡುತ್ತೇವೆ ಮತ್ತು ರಾಜ್ಯಗಳು ನಮ್ಮ ಜೊತೆ ಕೈಜೋಡಿಸುತ್ತವೆ. ಆದರೆ ಈ ಕೆಲಸವನ್ನು ಅನುಸರಿಸುವುದು ನಿಮ್ಮ ಮನಸ್ಸಿಗೆ ಸೇರಿದ್ದು. ದೇಶದ ಬಡವರಲ್ಲಿ ಬಡವ ಆಪ್ಟಿಕಲ್ ಫೈಬರ್ ಜಾಲದ ಮೂಲಸೌಕರ್ಯವನ್ನು ಹೇಗೆ ಬಳಸಬಹುದು, ಹೊಸ ಬಳಕೆದಾರ ಸ್ನೇಹಿ ಉತ್ಪನ್ನಗಳನ್ನು ಹೇಗೆ ತರಬಹುದು, ಹಳ್ಳಿಗಳ ಜನತೆ ಹೇಗೆ ಸರಕಾರಗಳ ಜೊತೆ, ಮಾರುಕಟ್ಟೆ, ಶಿಕ್ಷಣ, ಮತ್ತು ಆರೋಗ್ಯದ ಜೊತೆ ಜೋಡಿಸಿಕೊಳ್ಳಬಹುದು? ಈ ಹಂದರ ಹೇಗೆ ಆತನ ಬದುಕನ್ನು ಬದಲಿಸುವಂತಹ ದೊಡ್ಡ ಮಾಧ್ಯಮವಾಗಬಹುದು? ಇದನ್ನೆಲ್ಲ ತಕ್ಷಣವೇ ಮಾಡಬೇಕು. ನವೋದ್ಯಮಗಳು ಇಂತಹ ಉತ್ಪನ್ನಗಳೊಂದಿಗೆ ಬರಬೇಕು. ಅವುಗಳು ಗ್ರಾಮಗಳ, ಹಳ್ಳಿಗಳ 10 ಆವಶ್ಯಕತೆಗಳನ್ನು ಈಡೇರಿಸುವಂತಿರಬೇಕು. ಆಪ್ಟಿಕಲ್ ಫೈಬರ್ ಕೇಬಲ್ ಹಳ್ಳಿಗಳಿಗೆ ತಲುಪಿದಾಗ ಅಲ್ಲಿಯ ಮಕ್ಕಳ ಜೀವನದಲ್ಲಿ ಪ್ರಮುಖ ಬದಲಾವಣೆಯನ್ನು, ಪರಿವರ್ತನೆಯನ್ನು ತರುವಂತಿರಬೇಕು.

ನೀವು ಗಮನಿಸಿ, ಇದೊಂದು ಎಷ್ಟು ದೊಡ್ದದಾದ ಅವಕಾಶ ಎಂಬುದಾಗಿ ಮತ್ತು ಆದುದರಿಂದ ನಾನು ನಿಮ್ಮನ್ನು ಆಹ್ವಾನಿಸುತ್ತೇನೆ. ಸರಕಾರ ಈ ಕೆಲಸ ಮಾಡುತ್ತಿದೆ. ಈಗ ಬಹಳ ಧೀರ್ಘ ಕಾಲ ನಾಯಕತ್ವ ವಹಿಸಬೇಕಾಗುವುದರ ಬಗ್ಗೆ ನಿರ್ಧರಿಸಿ, ಅದನ್ನು ಎಲ್ಲಾ ರಂಗಗಳಲ್ಲಿಯೂ ಕೈಗೆತ್ತಿಕೊಳ್ಳಿ, ಅದನ್ನು ಪೂರ್ಣ ಶಕ್ತಿಯೊಂದಿಗೆ ಕೈಗೆತ್ತಿಕೊಳ್ಳಿ ಮತ್ತು ಈ ನಾಯಕತ್ವದಿಂದ ಮೂಡುವ ಫಲಿತಾಂಶ ಇಡೀ ದೇಶಕ್ಕೆ ಸೇವೆಯನ್ನು ಒದಗಿಸುತ್ತದೆ.

ಈ ನಿರೀಕ್ಷೆಗಳೊಂದಿಗೆ, ನಿಮಗೆಲ್ಲಾ ಮತ್ತೊಮ್ಮೆ ಶುಭ ಹಾರೈಸುತ್ತೇನೆ.

ಬಹಳ ಬಹಳ ಧನ್ಯವಾದಗಳು!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Bumper Apple crop! India’s iPhone exports pass Rs 1 lk cr

Media Coverage

Bumper Apple crop! India’s iPhone exports pass Rs 1 lk cr
NM on the go

Nm on the go

Always be the first to hear from the PM. Get the App Now!
...
PM to visit Maharashtra on 15th January
January 13, 2025
PM to dedicate three frontline naval combatants INS Surat, INS Nilgiri and INS Vaghsheer to the nation at the Naval Dockyard, Mumbai
PM to inaugurate ISKCON Temple at Kharghar, Navi Mumbai

Prime Minister Shri Narendra Modi will visit Maharashtra on 15th January. At around 10:30 AM, Prime Minister will dedicate three frontline naval combatants INS Surat, INS Nilgiri and INS Vaghsheer to the nation on their commissioning at the Naval Dockyard in Mumbai. Thereafter, at around 3:30 PM, he will inaugurate ISKCON Temple at Kharghar, Navi Mumbai.

The commissioning of three major naval combatants marks a significant leap forward in realizing India’s vision of becoming a global leader in defence manufacturing and maritime security. INS Surat, the fourth and final ship of the P15B Guided Missile Destroyer Project, ranks among the largest and most sophisticated destroyers in the world. It has an indigenous content of 75% and is equipped with state-of-the-art weapon-sensor packages and advanced network-centric capabilities. INS Nilgiri, the first ship of the P17A Stealth Frigate Project, has been designed by the Indian Navy’s Warship Design Bureau and incorporates advanced features for enhanced survivability, seakeeping, and stealth, reflecting the next generation of indigenous frigates. INS Vaghsheer, the sixth and final submarine of the P75 Scorpene Project, represents India’s growing expertise in submarine construction and has been constructed in collaboration with the Naval Group of France.

In line with his commitment to boost India’s cultural heritage, Prime Minister will inaugurate the Sri Sri Radha Madanmohanji Temple, an ISKCON project in Kharghar, Navi Mumbai. The project, spread over nine acres, includes a temple with several deities, a Vedic education centre, proposed museums and auditorium, healing center, among others. It aims to promote universal brotherhood, peace, and harmony through Vedic teachings.