ಆಪರೇಷನ್ ಸಿಂಧೂರದ ಯಶಸ್ಸು, ಗಡಿಯಾಚೆಗಿನ ಉಗ್ರರ ಅಡಗುತಾಣಗಳನ್ನು ನಾಶಮಾಡುವ ಶಕ್ತಿ ಮತ್ತು ಉಗ್ರರ ರಕ್ಷಣೆಗೆ ಬಂದ ಪಾಕಿಸ್ತಾನವನ್ನು ಕೆಲವೇ ಗಂಟೆಗಳಲ್ಲಿ ಮಂಡಿಯೂರುವಂತೆ ಮಾಡುವ ಸಾಮರ್ಥ್ಯ - ಭಾರತದ ಈ ಹೊಸ ಮುಖವನ್ನು ಇಡೀ ಜಗತ್ತು ನೋಡಿದೆ: ಪ್ರಧಾನಮಂತ್ರಿ
ಇಂದು ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ: ಪ್ರಧಾನಮಂತ್ರಿ
ಕಳೆದ 11 ವರ್ಷಗಳಲ್ಲಿ, ನಮ್ಮ ಆರ್ಥಿಕತೆಯು 10 ನೇ ಸ್ಥಾನದಿಂದ ಅಗ್ರ ಐದಕ್ಕೆ ಏರಿದೆ. ಇದೀಗ, ವಿಶ್ವದ ಅಗ್ರ 3 ಆರ್ಥಿಕ ಶಕ್ತಿಗಳಲ್ಲಿ ಒಂದಾಗುವತ್ತ ನಾವು ದಾಪುಗಾಲಿಡುತ್ತಿದ್ದೇವೆ: ಪ್ರಧಾನಮಂತ್ರಿ
ʼವಿಕಸಿತ ಭಾರತ'ದ ಪಯಣ 'ಡಿಜಿಟಲ್ ಇಂಡಿಯಾ'ದೊಂದಿಗೆ ಕೈಜೋಡಿಸಿ ಮುನ್ನಡೆಯಲಿದೆ: ಪ್ರಧಾನಮಂತ್ರಿ
ತಂತ್ರಜ್ಞಾನದಲ್ಲಿ ಸ್ವಾವಲಂಬಿಗಳಾಗುವುದು ನಮ್ಮ ಮುಂದಿನ ದೊಡ್ಡ ಆದ್ಯತೆಯಾಗಿದೆ: ಪ್ರಧಾನಮಂತ್ರಿ

ಬೆಂಗಳೂರು ನಗರದ ಆತ್ಮೀಯ ನಾಗರಿಕ ಬಂಧು-ಭಗಿನಿಯರೇ, ನಿಮಗೆಲ್ಲ ನನ್ನ ನಮಸ್ಕಾರಗಳು! 

ಕರ್ನಾಟಕ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಜೀ, ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಜೀ, ಕೇಂದ್ರದಲ್ಲಿನ ನನ್ನ ಸಹೋದ್ಯೋಗಿಗಳಾದ ಶ್ರೀ ಮನೋಹರ್ ಲಾಲ್ ಖಟ್ಟರ್ ಜೀ, ಶ್ರೀ ಹೆಚ್.ಡಿ. ಕುಮಾರಸ್ವಾಮಿ ಜೀ, ಶ್ರೀ ಅಶ್ವಿನಿ ವೈಷ್ಣವ್ ಜೀ, ಶ್ರೀ ವಿ. ಸೋಮಣ್ಣ ಜೀ, ಶ್ರೀಮತಿ ಶೋಭಾ ಜೀ, ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಜೀ, ಕರ್ನಾಟಕ ಸರ್ಕಾರದ ಸಚಿವರಾದ ಶ್ರೀ ಬಿ. ಸುರೇಶ್ ಜೀ, ವಿರೋಧ ಪಕ್ಷದ ನಾಯಕರಾದ ಶ್ರೀ ಆರ್. ಅಶೋಕ್ ಜೀ, ಸಂಸದರಾದ ಶ್ರೀ ತೇಜಸ್ವಿ ಸೂರ್ಯ ಜೀ, ಡಾ. ಮಂಜುನಾಥ್ ಜೀ, ಶಾಸಕರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಜೀ, ಮತ್ತು ಕರ್ನಾಟಕದ ನನ್ನ ಸಹೋದರ ಸಹೋದರಿಯರೇ,

ಕರ್ನಾಟಕದ ನೆಲದ ಮೇಲೆ ಕಾಲಿಟ್ಟ ತಕ್ಷಣ, ಒಂದು ಆತ್ಮೀಯತೆಯ ಭಾವನೆ ಮೂಡುತ್ತದೆ. ಇಲ್ಲಿನ ಸಂಸ್ಕೃತಿ, ಇಲ್ಲಿನ ಜನರ ಪ್ರೀತಿ ಮತ್ತು ಕನ್ನಡ ನುಡಿಯ ಮಾಧುರ್ಯ ನಮ್ಮ ಹೃದಯವನ್ನು ಸ್ಪರ್ಶಿಸುತ್ತದೆ. ಮೊಟ್ಟಮೊದಲಿಗೆ, ನಾನು ಬೆಂಗಳೂರು ನಗರದ ಅಧಿದೇವತೆಯಾದ ಅನ್ನಮ್ಮ ತಾಯಿಯ ಪಾದಗಳಿಗೆ ಶಿರಬಾಗಿ ನಮಿಸುತ್ತೇನೆ. ಶತಮಾನಗಳ ಹಿಂದೆ, ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಗರಕ್ಕೆ ಅಡಿಪಾಯ ಹಾಕಿದರು. ಅವರು, ತನ್ನ ಸಂಪ್ರದಾಯಗಳೊಂದಿಗೆ ಬೆಸೆದುಕೊಂಡಿರುವ ಮತ್ತು ಅದೇ ಸಮಯದಲ್ಲಿ ಪ್ರಗತಿಯ ಹೊಸ ಎತ್ತರವನ್ನು ಮುಟ್ಟುವಂತಹ ಒಂದು ನಗರದ ಕನಸು ಕಂಡಿದ್ದರು. ಬೆಂಗಳೂರು ಆ ಸ್ಪೂರ್ತಿಯನ್ನು ಸದಾ ಜೀವಂತವಾಗಿರಿಸಿದೆ ಮತ್ತು ಅದನ್ನು ಸದಾ ಕಾಪಾಡಿಕೊಂಡು ಬಂದಿದೆ. ಮತ್ತು ಇಂದು, ಬೆಂಗಳೂರು ಆ ಕನಸನ್ನು ನನಸಾಗಿಸುತ್ತಿದೆ.

ಸ್ನೇಹಿತರೇ, 

ಬೆಂಗಳೂರು ಹೊಸ ಭಾರತದ ಉದಯದ ಸಂಕೇತವಾಗಿ ಹೊರಹೊಮ್ಮುತ್ತಿರುವ ನಗರವಾಗಿ ನಾವು ನೋಡುತ್ತಿದ್ದೇವೆ. ಇದು ತನ್ನ ಅಂತರಂಗದಲ್ಲಿ ತತ್ವಶಾಸ್ತ್ರವನ್ನು ಮತ್ತು ತನ್ನ ಕಾರ್ಯಗಳಲ್ಲಿ ತಂತ್ರಜ್ಞಾನವನ್ನು ಹೊಂದಿರುವ ನಗರವಾಗಿದೆ. ಜಾಗತಿಕ ಐ.ಟಿ. ನಕ್ಷೆಯಲ್ಲಿ ಭಾರತದ ಧ್ವಜವನ್ನು ಹಾರಿಸಿದ ನಗರ ಇದು. ಬೆಂಗಳೂರಿನ ಈ ಯಶಸ್ಸಿನ ಕಥೆಯ ಹಿಂದೆ ಯಾರಾದರೂ ಇದ್ದರೆ ಅದು ಇಲ್ಲಿನ ಜನರು, ನಿಮ್ಮ ಕಠಿಣ ಪರಿಶ್ರಮ ಮತ್ತು ನಿಮ್ಮ ಪ್ರತಿಭೆ.

 

ಸ್ನೇಹಿತರೇ, 

ನಗರ ಯೋಜನೆ ಮತ್ತು ನಗರ ಮೂಲಸೌಕರ್ಯವು 21ನೇ ಶತಮಾನದಲ್ಲಿ ನಮ್ಮ ನಗರಗಳಿಗೆ ಒಂದು ದೊಡ್ಡ ಅವಶ್ಯಕತೆಯಾಗಿದೆ. ಬೆಂಗಳೂರಿನಂತಹ ನಗರಗಳನ್ನು ನಾವು ಭವಿಷ್ಯಕ್ಕಾಗಿ ಸಿದ್ಧಪಡಿಸಬೇಕಾಗಿದೆ. ಈ ಹಿಂದೆ, ಭಾರತ ಸರ್ಕಾರವು ಬೆಂಗಳೂರಿಗಾಗಿ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳನ್ನು ಪ್ರಾರಂಭಿಸಿದೆ. ಇಂದು ಈ ಅಭಿಯಾನಕ್ಕೆ ಹೊಸ ವೇಗ ಸಿಕ್ಕಿದೆ. ಬೆಂಗಳೂರು ಮೆಟ್ರೋದ ಹಳದಿ ಮಾರ್ಗವನ್ನು ಇಂದು ಉದ್ಘಾಟಿಸಲಾಗಿದೆ. ಮೆಟ್ರೋ ಹಂತ-3ಕ್ಕೆ ಶಂಕುಸ್ಥಾಪನೆಯನ್ನೂ ಮಾಡಲಾಗಿದೆ. ಇದಲ್ಲದೆ, ದೇಶದ ವಿವಿಧ ಭಾಗಗಳಿಗೆ 3 ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಾಗಿದೆ. ಬೆಂಗಳೂರು ಮತ್ತು ಬೆಳಗಾವಿ ನಡುವೆ ವಂದೇ ಭಾರತ್ ಸೇವೆ ಆರಂಭವಾಗಿದೆ. ಇದು ಬೆಳಗಾವಿಯ ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ. ಇದರ ಜೊತೆಗೆ, ನಾಗ್ಪುರದಿಂದ ಪುಣೆ ಮತ್ತು ಶ್ರೀ ಮಾತಾ ವೈಷ್ಣೋ ದೇವಿ ಕತ್ರಾದಿಂದ ಅಮೃತಸರ ನಡುವೆಯೂ ವಂದೇ ಭಾರತ್ ಎಕ್ಸ್‌ ಪ್ರೆಸ್ ಪ್ರಾರಂಭವಾಗಿದೆ. ಇದು ಲಕ್ಷಾಂತರ ಭಕ್ತರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಈ ಎಲ್ಲಾ ಯೋಜನೆಗಳು ಮತ್ತು ವಂದೇ ಭಾರತ್ ರೈಲುಗಳಿಗಾಗಿ ನಾನು ಬೆಂಗಳೂರು, ಕರ್ನಾಟಕ ಮತ್ತು ದೇಶದ ಜನರನ್ನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ಆಪರೇಷನ್ ಸಿಂಧೂರ್ ನಂತರ ನಾನು ಇಂದು ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದೇನೆ. ಆಪರೇಷನ್ ಸಿಂಧೂರ್‌ ನಲ್ಲಿ ಭಾರತೀಯ ಸೇನೆಯ ಯಶಸ್ಸು, ಗಡಿಯಾಚೆ ಹಲವಾರು ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಭಯೋತ್ಪಾದಕರ ಅಡಗುತಾಣಗಳನ್ನು ನಾಶಪಡಿಸುವ ನಮ್ಮ ಸಾಮರ್ಥ್ಯ ಮತ್ತು ಭಯೋತ್ಪಾದಕರ ರಕ್ಷಣೆಗೆ ಬಂದ ಪಾಕಿಸ್ತಾನವನ್ನು ಕೆಲವೇ ಗಂಟೆಗಳಲ್ಲಿ ಮಣಿಸುವ ನಮ್ಮ ಸಾಮರ್ಥ್ಯದ ಮೂಲಕ ಹೊಸ ಭಾರತದ ಈ ಚಿತ್ರಣವನ್ನು ಇಡೀ ಜಗತ್ತು ನೋಡಿದೆ. ಆಪರೇಷನ್ ಸಿಂಧೂರ್ ಯಶಸ್ಸಿನ ಪ್ರಮುಖ ಕಾರಣವೆಂದರೆ ನಮ್ಮ ತಂತ್ರಜ್ಞಾನ ಮತ್ತು ರಕ್ಷಣಾ ಕ್ಷೇತ್ರದಲ್ಲಿನ 'ಮೇಕ್ ಇನ್ ಇಂಡಿಯಾ'ದ ಶಕ್ತಿ. ಇದರಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಯುವಕರೂ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇಂದು ನಾನು ನಿಮ್ಮೆಲ್ಲರಿಗೂ ಇದಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ.

ಸ್ನೇಹಿತರೇ,

ಇಂದು ಬೆಂಗಳೂರು ವಿಶ್ವದ ದೊಡ್ಡ ನಗರಗಳಲ್ಲಿ ಗುರುತಿಸಲ್ಪಟ್ಟಿದೆ. ನಾವು ಜಾಗತಿಕವಾಗಿ ಸ್ಪರ್ಧಿಸಬೇಕು, ಅಷ್ಟೇ ಅಲ್ಲ, ನಾವೇ ಮುಂಚೂಣಿಯಲ್ಲಿರಬೇಕು. ನಮ್ಮ ನಗರಗಳು ಸ್ಮಾರ್ಟ್, ವೇಗ ಮತ್ತು ದಕ್ಷವಾಗಿದ್ದಾಗ ಮಾತ್ರ ನಾವು ಮುಂದೆ ಸಾಗುತ್ತೇವೆ! ಅದಕ್ಕಾಗಿಯೇ ನಾವು ಆಧುನಿಕ ಮೂಲಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಇಂದು ಆರ್‌.ವಿ. ರಸ್ತೆಯಿಂದ ಬೊಮ್ಮಸಂದ್ರವರೆಗೆ ಹಳದಿ ಲೈನ್ ಆರಂಭವಾಗಿದೆ. ಇದು ಬೆಂಗಳೂರಿನ ಅನೇಕ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಬಸವನಗುಡಿಯಿಂದ ಎಲೆಕ್ಟ್ರಾನಿಕ್ ಸಿಟಿವರೆಗೆ, ಈ ಪ್ರಯಾಣವು ಈಗ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಇದು ಲಕ್ಷಾಂತರ ಜನರ ಜೀವನದಲ್ಲಿ ಸುಗಮ ಜೀವನ ಮತ್ತು ಸುಗಮ ಕೆಲಸವನ್ನು ಹೆಚ್ಚಿಸುತ್ತದೆ.

 

ಸ್ನೇಹಿತರೇ,

ಇಂದು, ಯೆಲ್ಲೋ ಲೈನ್ ಉದ್ಘಾಟನೆಯ ಜೊತೆಗೆ, ನಾವು ಹಂತ-3 ಅಂದರೆ ಆರೆಂಜ್ ಲೈನ್‌ ಗೆ ಶಂಕುಸ್ಥಾಪನೆಯನ್ನೂ ನೆರವೇರಿಸಿದ್ದೇವೆ. ಈ ಮಾರ್ಗ ಕಾರ್ಯಾರಂಭ ಮಾಡಿದಾಗ, ಹಳದಿ ಲೈನ್ ಜೊತೆಗೆ ಪ್ರತಿದಿನ 25 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇದು ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ಹೊಸ ಶಕ್ತಿ ಮತ್ತು ಹೊಸ ಎತ್ತರವನ್ನು ನೀಡುತ್ತದೆ.

ಸ್ನೇಹಿತರೇ,

ಬೆಂಗಳೂರು ಮೆಟ್ರೋ, ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿಯ ಒಂದು ಹೊಸ ಮಾದರಿಯನ್ನು ದೇಶಕ್ಕೆ ನೀಡಿದೆ. ಇನ್ಫೋಸಿಸ್ ಫೌಂಡೇಶನ್, ಬಯೋಕಾನ್ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್‌ ನಂತಹ ಕಂಪನಿಗಳು ಬೆಂಗಳೂರು ಮೆಟ್ರೋದ ಅನೇಕ ಪ್ರಮುಖ ನಿಲ್ದಾಣಗಳಿಗೆ ಭಾಗಶಃ ಧನಸಹಾಯ ಮಾಡಿವೆ. ಸಿ.ಎಸ್‌.ಆರ್ (CSR) ಅನ್ನು ಬಳಸಿಕೊಳ್ಳುವ ಈ ಮಾದರಿಯು ಒಂದು ದೊಡ್ಡ ಸ್ಫೂರ್ತಿಯಾಗಿದೆ. ಈ ನವೀನ ಪ್ರಯತ್ನಕ್ಕಾಗಿ ನಾನು ಕಾರ್ಪೊರೇಟ್ ವಲಯವನ್ನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ಇಂದು ಭಾರತವು ವಿಶ್ವದಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಕಳೆದ 11 ವರ್ಷಗಳಲ್ಲಿ ನಮ್ಮ ಆರ್ಥಿಕತೆಯು 10ನೇ ಸ್ಥಾನದಿಂದ ಟಾಪ್ 5ರ ಸ್ಥಾನಕ್ಕೆ ತಲುಪಿದೆ. ನಾವು ಟಾಪ್-3 ಆರ್ಥಿಕತೆಯಾಗುವತ್ತ ಶೀಘ್ರವಾಗಿ ಸಾಗುತ್ತಿದ್ದೇವೆ. ಈ ವೇಗ ನಮಗೆ ಹೇಗೆ ಸಿಕ್ಕಿತು? 'ರಿಫಾರ್ಮ್-ಪರ್ಫಾರ್ಮ್-ಟ್ರಾನ್ಸ್‌ಫಾರ್ಮ್' (ಸುಧಾರಣೆ-ಕಾರ್ಯಕ್ಷಮತೆ-ಪರಿವರ್ತನೆ) ಎಂಬ ಸ್ಪೂರ್ತಿಯಿಂದ ನಾವು ಈ ವೇಗವನ್ನು ಪಡೆದುಕೊಂಡಿದ್ದೇವೆ. ಸ್ಪಷ್ಟ ಉದ್ದೇಶಗಳು ಮತ್ತು ಪ್ರಾಮಾಣಿಕ ಪ್ರಯತ್ನಗಳ ಮೂಲಕ ನಾವು ಈ ವೇಗವನ್ನು ಸಾಧಿಸಿದ್ದೇವೆ. ನೆನಪಿಡಿ, 2014ರಲ್ಲಿ ಮೆಟ್ರೋ ಕೇವಲ 5 ನಗರಗಳಿಗೆ ಸೀಮಿತವಾಗಿತ್ತು. ಈಗ ಇಪ್ಪತ್ನಾಲ್ಕು ನಗರಗಳಲ್ಲಿ ಒಂದು ಸಾವಿರ ಕಿಲೋಮೀಟರ್‌ ಗಿಂತಲೂ ಹೆಚ್ಚು ಮೆಟ್ರೋ ಜಾಲವಿದೆ. ಭಾರತವು ಈಗ ವಿಶ್ವದ ಮೂರನೇ ಅತಿದೊಡ್ಡ ಮೆಟ್ರೋ ಜಾಲವನ್ನು ಹೊಂದಿರುವ ದೇಶವಾಗಿ ಹೊರಹೊಮ್ಮಿದೆ. 2014ಕ್ಕಿಂತ ಮೊದಲು, ಅಂದರೆ ಸ್ವಾತಂತ್ರ್ಯ ಸಿಕ್ಕಿದಾಗಿನಿಂದ 2014ರವರೆಗೆ, ಸರಿಸುಮಾರು ಇಪ್ಪತ್ತು ಸಾವಿರ ಕಿಲೋಮೀಟರ್ ರೈಲ್ವೆ ಮಾರ್ಗವನ್ನು ವಿದ್ಯುದ್ದೀಕರಿಸಲಾಗಿತ್ತು. ಆದರೆ, ಕಳೆದ 11 ವರ್ಷಗಳಲ್ಲೇ ನಾವು ನಲವತ್ತು ಸಾವಿರ ಕಿಲೋಮೀಟರ್‌ ಗಿಂತ ಹೆಚ್ಚು ರೈಲ್ವೆ ಮಾರ್ಗವನ್ನು ವಿದ್ಯುದ್ದೀಕರಿಸಿದ್ದೇವೆ.

 

ಸ್ನೇಹಿತರೇ,

ಜಲ, ಭೂಮಿ, ಆಕಾಶ ಯಾವುದೂ ಬಾಕಿ ಉಳಿದಿಲ್ಲ. ಸ್ನೇಹಿತರೇ, ಕೇವಲ ಭೂಮಿಯಲ್ಲಿ ಮಾತ್ರವಲ್ಲ, ದೇಶದ ಸಾಧನೆಗಳ ಧ್ವಜವು ಆಕಾಶದಲ್ಲಿಯೂ ಹಾರುತ್ತಿದೆ. 2014ರವರೆಗೆ ಭಾರತದಲ್ಲಿ ಕೇವಲ 74 ವಿಮಾನ ನಿಲ್ದಾಣಗಳಿದ್ದವು. ಈಗ ಅವುಗಳ ಸಂಖ್ಯೆ 160ಕ್ಕಿಂತ ಹೆಚ್ಚಾಗಿದೆ. ಜಲಮಾರ್ಗಗಳ ಅಂಕಿ-ಅಂಶಗಳು ಸಹ ಆಕಾಶ ಮತ್ತು ಭೂಮಿಯ ಸಾಧನೆಗಳಷ್ಟೇ ಅದ್ಭುತವಾಗಿವೆ. 2014ರಲ್ಲಿ ಕೇವಲ 3 ರಾಷ್ಟ್ರೀಯ ಜಲಮಾರ್ಗಗಳು ಕಾರ್ಯನಿರ್ವಹಿಸುತ್ತಿದ್ದವು, ಈಗ ಈ ಸಂಖ್ಯೆ 30ಕ್ಕೆ ಏರಿದೆ.

ಸ್ನೇಹಿತರೇ,

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲೂ ದೇಶ ದೊಡ್ಡ ಸಾಧನೆ ಮಾಡಿದೆ. 2014ರವರೆಗೆ ನಮ್ಮ ದೇಶದಲ್ಲಿ ಕೇವಲ 7 ಏಮ್ಸ್ ಮತ್ತು 387 ವೈದ್ಯಕೀಯ ಕಾಲೇಜುಗಳಿದ್ದವು. ಈಗ 22 ಏಮ್ಸ್ ಮತ್ತು 704 ವೈದ್ಯಕೀಯ ಕಾಲೇಜುಗಳು ಜನರಿಗೆ ಸೇವೆ ಸಲ್ಲಿಸುತ್ತಿವೆ. ಕಳೆದ 11 ವರ್ಷಗಳಲ್ಲಿ ದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹೊಸ ವೈದ್ಯಕೀಯ ಸೀಟುಗಳನ್ನು ಸೇರಿಸಲಾಗಿದೆ. ಇದರಿಂದ ನಮ್ಮ ಮಧ್ಯಮ ವರ್ಗದ ಮಕ್ಕಳಿಗೆ ಎಷ್ಟು ಲಾಭವಾಗಿದೆ ಎಂದು ನೀವು ಊಹಿಸಬಹುದು! ಈ 11 ವರ್ಷಗಳಲ್ಲಿ, ಐ.ಐ.ಟಿಗಳ ಸಂಖ್ಯೆ 16 ರಿಂದ 23 ಕ್ಕೆ, ಟ್ರಿಪಲ್ ಐ.ಐ.ಟಿಗಳ ಸಂಖ್ಯೆ 09 ರಿಂದ 25 ಕ್ಕೆ, ಮತ್ತು ಐ.ಐ.ಎಂಗಳ ಸಂಖ್ಯೆ 13 ರಿಂದ 21 ಕ್ಕೆ ಹೆಚ್ಚಾಗಿದೆ. ಅಂದರೆ, ಇಂದು ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ಅವಕಾಶಗಳು ಸೃಷ್ಟಿಯಾಗುತ್ತಿವೆ.

ಸ್ನೇಹಿತರೇ,

ಇಂದು ದೇಶವು ಯಾವ ವೇಗದಲ್ಲಿ ಪ್ರಗತಿ ಹೊಂದುತ್ತಿದೆಯೋ, ಅದೇ ವೇಗದಲ್ಲಿ ಬಡವರು ಮತ್ತು ವಂಚಿತರ ಜೀವನವೂ ಬದಲಾಗುತ್ತಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ನಾವು 4 ಕೋಟಿಗೂ ಹೆಚ್ಚು ಕಾಂಕ್ರೀಟ್ ಮನೆಗಳನ್ನು ಒದಗಿಸಿದ್ದೇವೆ. ಈಗ ನಮ್ಮ ಸರ್ಕಾರವು ಇನ್ನೂ 3 ಕೋಟಿ ಮನೆಗಳನ್ನು ನಿರ್ಮಿಸಲು ಹೊರಟಿದೆ. ಕೇವಲ ಹನ್ನೊಂದು ವರ್ಷಗಳಲ್ಲಿ ನಾವು 12 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿದ್ದೇವೆ. ಇದು ದೇಶದ ಕೋಟ್ಯಂತರ ತಾಯಂದಿರು ಮತ್ತು ಸಹೋದರಿಯರಿಗೆ ಘನತೆ, ಸ್ವಚ್ಛತೆ ಮತ್ತು ಸುರಕ್ಷತೆಯ ಹಕ್ಕನ್ನು ನೀಡಿದೆ.

 

ಸ್ನೇಹಿತರೇ,

ಇಂದು ದೇಶವು ಅಭಿವೃದ್ಧಿ ಹೊಂದುತ್ತಿರುವ ವೇಗದ ಹಿಂದೆ ನಮ್ಮ ಆರ್ಥಿಕ ಬೆಳವಣಿಗೆ ಒಂದು ದೊಡ್ಡ ಕಾರಣ. ನೋಡಿ, 2014 ಕ್ಕಿಂತ ಮೊದಲು, ಭಾರತದ ಒಟ್ಟು ರಫ್ತು 468 ಬಿಲಿಯನ್ ಡಾಲರ್‌ ಗೆ ತಲುಪಿತ್ತು. ಇಂದು ಅದು 824 ಬಿಲಿಯನ್ ಡಾಲರ್ ಆಗಿದೆ. ಹಿಂದೆ ನಾವು ಮೊಬೈಲ್‌ ಗಳನ್ನು ಆಮದು ಮಾಡಿಕೊಳ್ಳುತ್ತಿದ್ದೆವು, ಆದರೆ ಈಗ ನಾವು ಮೊಬೈಲ್ ಹ್ಯಾಂಡ್‌ ಸೆಟ್‌ ಗಳ ಅಗ್ರ ಐದು ರಫ್ತುದಾರರಲ್ಲಿ ಒಬ್ಬರಾಗಿದ್ದೇವೆ. ಮತ್ತು ಇದರಲ್ಲಿ ಬೆಂಗಳೂರಿನ ಪಾತ್ರವೂ ಬಹಳ ದೊಡ್ಡದಾಗಿದೆ. 2014 ಕ್ಕಿಂತ ಮೊದಲು, ನಮ್ಮ ಎಲೆಕ್ಟ್ರಾನಿಕ್ಸ್ ರಫ್ತು ಸುಮಾರು 06 ಬಿಲಿಯನ್ ಡಾಲರ್ ಇತ್ತು. ಈಗ ಇದು ಸುಮಾರು 38 ಬಿಲಿಯನ್ ಡಾಲರ್‌ ಗೆ ತಲುಪಿದೆ.

ಸ್ನೇಹಿತರೇ,

ಹನ್ನೊಂದು ವರ್ಷಗಳ ಹಿಂದೆ, ಭಾರತದ ಆಟೋಮೊಬೈಲ್ ರಫ್ತು ಸುಮಾರು 16 ಬಿಲಿಯನ್ ಡಾಲರ್ ಇತ್ತು. ಇಂದು ಅದು ಎರಡು ಪಟ್ಟು ಹೆಚ್ಚಾಗಿದೆ, ಅದು ದ್ವಿಗುಣಗೊಂಡಿದೆ. ಮತ್ತು ಭಾರತವು ಆಟೋಮೊಬೈಲ್‌ಗಳ ನಾಲ್ಕನೇ ಅತಿದೊಡ್ಡ ರಫ್ತುದಾರನಾಗಿ ಹೊರಹೊಮ್ಮಿದೆ. ಈ ಸಾಧನೆಗಳು ಆತ್ಮನಿರ್ಭರ ಭಾರತದ ನಮ್ಮ ಸಂಕಲ್ಪವನ್ನು ಬಲಪಡಿಸುತ್ತವೆ. ನಾವೆಲ್ಲರೂ ಒಟ್ಟಾಗಿ ಮುನ್ನಡೆದು ದೇಶವನ್ನು ಅಭಿವೃದ್ಧಿಪಡಿಸೋಣ.

ಸ್ನೇಹಿತರೇ,

ಅಭಿವೃದ್ಧಿ ಹೊಂದಿದ ಭಾರತ, ನವ ಭಾರತದ ಈ ಪಯಣವು ಡಿಜಿಟಲ್ ಇಂಡಿಯಾದೊಂದಿಗೆ ಹಂತ ಹಂತವಾಗಿ ಪೂರ್ಣಗೊಳ್ಳಲಿದೆ. ಇಂದು ನಾವು ಇಂಡಿಯಾ ಎ.ಐ. ಮಿಷನ್‌ ನಂತಹ ಯೋಜನೆಗಳೊಂದಿಗೆ, ಭಾರತವು ಜಾಗತಿಕ ಎ.ಐ. ನಾಯಕತ್ವದ ಕಡೆಗೆ ಮುನ್ನಡೆಯುತ್ತಿರುವುದನ್ನು ನೋಡುತ್ತಿದ್ದೇವೆ. ಸೆಮಿಕಂಡಕ್ಟರ್ ಮಿಷನ್ ಕೂಡ ಈಗ ವೇಗವನ್ನು ಪಡೆಯುತ್ತಿದೆ. ಭಾರತಕ್ಕೆ ಶೀಘ್ರದಲ್ಲೇ ಮೇಡ್ ಇನ್ ಇಂಡಿಯಾ ಚಿಪ್‌ ಗಳು ಸಿಗಲಿವೆ. ಇಂದು ಭಾರತವು ಕಡಿಮೆ ವೆಚ್ಚದ ಹೈಟೆಕ್ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ಜಾಗತಿಕ ಉದಾಹರಣೆಯಾಗಿದೆ. ಅಂದರೆ, ಭವಿಷ್ಯದ ತಂತ್ರಜ್ಞಾನಕ್ಕೆ ಸಂಬಂಧಿಸಿದ ಎಲ್ಲಾ ಸಾಧ್ಯತೆಗಳಲ್ಲಿ ಭಾರತವು ಮುನ್ನಡೆಯುತ್ತಿದೆ. ಮತ್ತು, ಭಾರತದ ಈ ಪ್ರಗತಿಯ ಅತ್ಯಂತ ವಿಶೇಷ ವಿಷಯವೆಂದರೆ - ಬಡವರ ಸಬಲೀಕರಣ! ನೋಡಿ, ಇಂದು ದೇಶದಲ್ಲಿ ಡಿಜಿಟಲೀಕರಣದ ವ್ಯಾಪ್ತಿ ಪ್ರತಿಯೊಂದು ಹಳ್ಳಿಯನ್ನು ತಲುಪಿದೆ. ಯು.ಪಿ.ಐ. ಮೂಲಕ ವಿಶ್ವದ ಶೇಕಡಾ 50 ಕ್ಕಿಂತ ಹೆಚ್ಚು ರಿಯಲ್‌ ಟೈಮ್‌ ವಹಿವಾಟುಗಳು ಭಾರತದಲ್ಲಿ ನಡೆಯುತ್ತಿವೆ. ವಿಶ್ವದ 50%. ತಂತ್ರಜ್ಞಾನದ ಸಹಾಯದಿಂದ, ನಾವು ಸರ್ಕಾರ ಮತ್ತು ನಾಗರಿಕರ ನಡುವಿನ ಅಂತರವನ್ನು ಕಡಿಮೆ ಮಾಡುತ್ತಿದ್ದೇವೆ. ಇಂದು ದೇಶದಲ್ಲಿ 2200 ಕ್ಕೂ ಹೆಚ್ಚು ಸರ್ಕಾರಿ ಸೇವೆಗಳು ಮೊಬೈಲ್‌ ನಲ್ಲಿ ಲಭ್ಯವಿವೆ. ಉಮಂಗ್ ಅಪ್ಲಿಕೇಶನ್ ಸಹಾಯದಿಂದ, ಸಾಮಾನ್ಯ ನಾಗರಿಕರು ಮನೆಯಲ್ಲಿ ಕುಳಿತು ಸರ್ಕಾರಿ ಕೆಲಸಗಳನ್ನು ಪೂರ್ಣಗೊಳಿಸುತ್ತಿದ್ದಾರೆ. ಡಿಜಿಲಾಕರ್‌ ನಿಂದ ಸರ್ಕಾರಿ ಪ್ರಮಾಣಪತ್ರಗಳ ತೊಂದರೆ ಕೊನೆಗೊಂಡಿದೆ. ಈಗ ನಾವು ಎ.ಐ.-ಚಾಲಿತ ಬೆದರಿಕೆ ಪತ್ತೆಯಂತಹ ತಂತ್ರಜ್ಞಾನಗಳಲ್ಲಿಯೂ ಹೂಡಿಕೆ ಮಾಡುತ್ತಿದ್ದೇವೆ. ದೇಶದಲ್ಲಿ ಡಿಜಿಟಲ್ ಕ್ರಾಂತಿಯ ಲಾಭ ಸಮಾಜದ ಕೊನೆಯ ವ್ಯಕ್ತಿಗೂ ತಲುಪಬೇಕು ಎಂಬುದು ನಮ್ಮ ಪ್ರಯತ್ನ. ಮತ್ತು ಈ ಪ್ರಯತ್ನದಲ್ಲಿ ಬೆಂಗಳೂರು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.

 

ಸ್ನೇಹಿತರೇ,

ಪ್ರಸ್ತುತ ಸಾಧನೆಗಳ ನಡುವೆ, ನಮ್ಮ ಮುಂದಿನ ದೊಡ್ಡ ಆದ್ಯತೆ 'ಟೆಕ್ ಆತ್ಮನಿರ್ಭರ ಭಾರತ್' ಆಗಿರಬೇಕು! ಭಾರತೀಯ ತಂತ್ರಜ್ಞಾನ ಕಂಪನಿಗಳು ಪ್ರಪಂಚದಾದ್ಯಂತ ತಮ್ಮ ಛಾಪು ಮೂಡಿಸಿವೆ. ನಾವು ಇಡೀ ಜಗತ್ತಿಗೆ ಸಾಫ್ಟ್‌ವೇರ್ ಮತ್ತು ಉತ್ಪನ್ನಗಳನ್ನು ರಚಿಸಿದ್ದೇವೆ. ಈಗ ಭಾರತದ ಅಗತ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವ ಸಮಯ ಬಂದಿದೆ. ನಾವು ಹೊಸ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವಲ್ಲಿ ಹೆಚ್ಚು ವೇಗವಾಗಿ ಮುನ್ನಡೆಯಬೇಕು. ಇಂದು ಪ್ರತಿ ಕ್ಷೇತ್ರದಲ್ಲಿ ಸಾಫ್ಟ್‌ವೇರ್ ಮತ್ತು ಅಪ್ಲಿಕೇಶನ್‌ ಗಳನ್ನು ಬಳಸಲಾಗುತ್ತಿದೆ, ಭಾರತವು ಇದರಲ್ಲಿ ಹೊಸ ಎತ್ತರವನ್ನು ತಲುಪುವುದು ಬಹಳ ಮುಖ್ಯ. ನಾವು ಉದಯೋನ್ಮುಖ ಕ್ಷೇತ್ರಗಳಲ್ಲಿಯೂ ಮುನ್ನಡೆ ಸಾಧಿಸಲು ಶ್ರಮಿಸಬೇಕು. ಮೇಕ್ ಇನ್ ಇಂಡಿಯಾದಲ್ಲಿ, ಉತ್ಪಾದನಾ ವಲಯದಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಉಪಸ್ಥಿತಿಯನ್ನು ನಾವು ಮತ್ತಷ್ಟು ಬಲಪಡಿಸಬೇಕು. ಮತ್ತು ನಮ್ಮ ಉತ್ಪನ್ನಗಳು ಶೂನ್ಯ ದೋಷ, ಶೂನ್ಯ ಪರಿಣಾಮದ ಮಾನದಂಡಗಳ ಮೇಲೆ ಉತ್ತಮ ಗುಣಮಟ್ಟದ್ದಾಗಿರಬೇಕು ಎಂದು ನಾನು ಒತ್ತಾಯಿಸುತ್ತೇನೆ. ಅಂದರೆ, ಉತ್ಪನ್ನಗಳು ದೋಷರಹಿತವಾಗಿರಬೇಕು ಮತ್ತು ಅವುಗಳ ತಯಾರಿಕೆಯು ಪರಿಸರದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರಬಾರದು. ಆತ್ಮನಿರ್ಭರ ಭಾರತದ ಈ ದೂರದೃಷ್ಟಿಯನ್ನು ಕರ್ನಾಟಕದ ಪ್ರತಿಭೆಗಳು ಮುನ್ನಡೆಸುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ.

 

ಸ್ನೇಹಿತರೇ,

ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಯಾವುದೇ ಇರಲಿ, ನಾವೆಲ್ಲರೂ ಸಾರ್ವಜನಿಕರಿಗೆ ಸೇವೆ ಸಲ್ಲಿಸಲು ಇಲ್ಲಿದ್ದೇವೆ. ದೇಶದ ಪ್ರಜೆಗಳ ಏಳಿಗೆಗಾಗಿ ನಾವು ಒಟ್ಟಾಗಿ ಹೆಜ್ಜೆ ಹಾಕಬೇಕು. ಈ ನಿಟ್ಟಿನಲ್ಲಿ ಅತ್ಯಂತ ಪ್ರಮುಖ ಜವಾಬ್ದಾರಿಯೆಂದರೆ ಹೊಸ ಸುಧಾರಣೆಗಳು! ಕಳೆದ ಒಂದು ದಶಕದಿಂದ ನಾವು ಸುಧಾರಣೆಗಳನ್ನು ನಿರಂತರವಾಗಿ ಮುಂದುವರೆಸಿದ್ದೇವೆ. ಉದಾಹರಣೆಗೆ, ಕಾನೂನುಗಳನ್ನು ಅಪರಾಧಮುಕ್ತಗೊಳಿಸಲು ಭಾರತ ಸರ್ಕಾರವು ಜನ ವಿಶ್ವಾಸ್ ಮಸೂದೆಯನ್ನು ಅಂಗೀಕರಿಸಿದೆ. ಮತ್ತು ಈಗ ನಾವು ಜನ ವಿಶ್ವಾಸ್ 2.0 ಅನ್ನು ಸಹ ಜಾರಿಗೆ ತರಲಿದ್ದೇವೆ. ರಾಜ್ಯ ಸರ್ಕಾರಗಳು ಸಹ ಅನಗತ್ಯ ಕ್ರಿಮಿನಲ್ ನಿಬಂಧನೆಗಳನ್ನು ಹೊಂದಿರುವ ಕಾನೂನುಗಳನ್ನು ಗುರುತಿಸಬಹುದು ಮತ್ತು ಅವುಗಳನ್ನು ರದ್ದುಗೊಳಿಸಬಹುದು. ಸರ್ಕಾರಿ ನೌಕರರಿಗೆ ಸಾಮರ್ಥ್ಯ ಆಧಾರಿತ ತರಬೇತಿಯನ್ನು ನೀಡಲು ನಾವು ಮಿಷನ್ ಕರ್ಮಯೋಗಿಯನ್ನು ನಡೆಸುತ್ತಿದ್ದೇವೆ. ರಾಜ್ಯಗಳು ತಮ್ಮ ಅಧಿಕಾರಿಗಳಿಗಾಗಿ ಈ ಕಲಿಕಾ ಚೌಕಟ್ಟನ್ನು ಅಳವಡಿಸಿಕೊಳ್ಳಬಹುದು. ನಾವು ಆಕಾಂಕ್ಷಿ ಜಿಲ್ಲಾ ಕಾರ್ಯಕ್ರಮ ಮತ್ತು ಆಕಾಂಕ್ಷಿ ಬ್ಲಾಕ್ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡಿದ್ದೇವೆ. ರಾಜ್ಯಗಳು ತಮ್ಮ ರಾಜ್ಯಗಳಲ್ಲಿ ವಿಶೇಷ ಗಮನ ಅಗತ್ಯವಿರುವ ಪ್ರದೇಶಗಳನ್ನು ಇದೇ ರೀತಿ ಗುರುತಿಸಬಹುದು. ನಾವು ರಾಜ್ಯ ಸರ್ಕಾರದ ಮಟ್ಟದಲ್ಲಿಯೂ ಹೊಸ ಸುಧಾರಣೆಗಳನ್ನು ನಿರಂತರವಾಗಿ ತರಬೇಕು. ನಮ್ಮ ಜಂಟಿ ಪ್ರಯತ್ನಗಳು ಕರ್ನಾಟಕವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತವೆ ಎಂದು ನನಗೆ ವಿಶ್ವಾಸವಿದೆ. ಒಟ್ಟಾಗಿ ನಾವು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಈಡೇರಿಸುತ್ತೇವೆ. ಈ ಭಾವನೆಯೊಂದಿಗೆ, ಈ ಅಭಿವೃದ್ಧಿ ಯೋಜನೆಗಳಿಗಾಗಿ ನಾನು ನಿಮ್ಮೆಲ್ಲರಿಗೂ ಮತ್ತೊಮ್ಮೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಧನ್ಯವಾದಗಳು!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Stranded in Tehran, 50 Iranian Sikhs return safely to India

Media Coverage

Stranded in Tehran, 50 Iranian Sikhs return safely to India
NM on the go

Nm on the go

Always be the first to hear from the PM. Get the App Now!
...
Prime Minister congratulates Unnati Sharma on winning Bronze in Women’s 63 kg Judo
August 02, 2026

The Prime Minister, Shri Narendra Modi, has congratulated Unnati Sharma on winning the Bronze medal in the Women’s 63 kg Judo category at the Commonwealth Games 2026.

The Prime Minister said that Unnati Sharma’s commitment and determination were clearly visible throughout the competition.

Shri Modi wished her continued success in all her future endeavours.

The Prime Minister wrote on X;

“More glory for India in Judo!

Congratulations to Unnati Sharma for winning the Bronze Medal in the Women's 63 kg category at the Commonwealth Games 2026. Her commitment and determination were clearly visible during the games. May she keep excelling in all her forthcoming endeavours.

#CWG2026”