ನವ ಭಾರತವು 'ಪರಂಪರೆಯ ಜೊತೆಗೆ ಅಭಿವೃದ್ಧಿ' ಎಂಬ ಮಂತ್ರದೊಂದಿಗೆ ಮುಂದುವರಿಯುತ್ತಿದೆ: ಪ್ರಧಾನಮಂತ್ರಿ
ನಮ್ಮ ದೇಶವು ಋಷಿಗಳು, ಜ್ಞಾನಿಗಳು ಮತ್ತು ಸಂತರುಗಳ ನಾಡು. ನಮ್ಮ ಸಮಾಜವು ಕಷ್ಟದ ಹಂತವನ್ನು ಎದುರಿಸಿದಾಗಲೆಲ್ಲಾ, ಯಾವುದಾದರೂ ಋಷಿ ಅಥವಾ ಜ್ಞಾನಿಯು ಈ ಭೂಮಿಗೆ ಅವತರಿಸಿ ಸಮಾಜಕ್ಕೆ ಹೊಸ ದಿಕ್ಕನ್ನು ನೀಡುತ್ತಾರೆ: ಪ್ರಧಾನಮಂತ್ರಿ
ಬಡವರು ಮತ್ತು ವಂಚಿತರನ್ನು ಮೇಲಕ್ಕೆತ್ತುವ ಸಂಕಲ್ಪ, 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂಬ ಮಂತ್ರ, ಈ ಸೇವಾ ಮನೋಭಾವವು ಸರ್ಕಾರದ ನೀತಿ ಮತ್ತು ಬದ್ಧತೆಯಾಗಿದೆ: ಪ್ರಧಾನಮಂತ್ರಿ
ಭಾರತದಂತಹ ರಾಷ್ಟ್ರದಲ್ಲಿ, ನಮ್ಮ ಸಂಸ್ಕೃತಿಯು ಕೇವಲ ನಮ್ಮ ಅಸ್ಮಿತೆಯೊಂದಿಗೆ ತಳುಕು ಹಾಕಿಕೊಂಡಿಲ್ಲ, ಬದಲಾಗಿ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುವುದು ನಮ್ಮ ಸಂಸ್ಕೃತಿಯೇ ಆಗಿದೆ: ಪ್ರಧಾನಮಂತ್ರಿ

ಜೈ ಸಚ್ಚಿದಾನಂದ ಜಿ!!! 

ಸ್ವಾಮಿ ವಿಚಾರ ಪೂರ್ಣ ಆನಂದ ಜಿ ಮಹಾರಾಜ್ ಜಿ, ರಾಜ್ಯಪಾಲರಾದ ಮಂಗೂಭಾಯ್ ಪಟೇಲ್ ಜಿ, ಮುಖ್ಯಮಂತ್ರಿ ಮೋಹನ್ ಯಾದವ್ ಜಿ, ನನ್ನ ಸಂಪುಟ ಸಹೋದ್ಯೋಗಿ ಜ್ಯೋತಿರಾದಿತ್ಯ ಸಿಂಧಿಯಾ ಜಿ, ಸಂಸದ ವಿ.ಡಿ. ಶರ್ಮಾ ಜಿ, ಸಂಸದ ಜನಾರ್ದನ ಸಿಂಗ್ ಸಿಗ್ರಿವಾಲ್ ಜಿ, ವೇದಿಕೆಯ ಮೇಲೆ ಉಪಸ್ಥಿತರಿರುವ ಇತರ ಗಣ್ಯರೇ, ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ದೆಹಲಿ, ಹರಿಯಾಣ, ಪಂಜಾಬ್ ಮತ್ತು ದೇಶದಾದ್ಯಂತದಿಂದ ಬಹಳ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸಿದ್ದಾರೆ. ನಿಮ್ಮೆಲ್ಲರಿಗೂ ನನ್ನ ನಮಸ್ಕಾರಗಳು.

ಸ್ನೇಹಿತರೇ, 

ಇಂದು ಶ್ರೀ ಆನಂದಪುರ ಧಾಮಕ್ಕೆ ಬಂದ ನಂತರ ನನ್ನ ಹೃದಯವು ತುಂಬಿ ಬಂದಿದೆ. ನಾನು ಈಗಷ್ಟೇ ಗುರೂಜಿ ಮಹಾರಾಜರ ದೇವಸ್ಥಾನಕ್ಕೆ ಭೇಟಿ ನೀಡಿದ್ದೆ. ನಿಜಕ್ಕೂ, ನನ್ನ ಹೃದಯವು ಆನಂದದಿಂದ ತುಂಬಿದೆ.

 

ಸ್ನೇಹಿತರೇ, 

ಯಾವ ನೆಲದ ಪ್ರತಿಯೊಂದು ಕಣವೂ ಸಂತರುಗಳ ತಪೋಬಲದಿಂದ ಪಾವನವಾಗಿದೆಯೋ, ಎಲ್ಲಿ ಪರಮಾರ್ಥ (ದಾನ) ಒಂದು ಸಂಪ್ರದಾಯವಾಗಿ ರೂಢಿಸಿಕೊಂಡು ಬಂದಿದೆಯೋ, ಮತ್ತು ಸೇವೆಯ ಸಂಕಲ್ಪವು ಮಾನವ ಕುಲದ ಉದ್ಧಾರಕ್ಕೆ ಮಾರ್ಗವನ್ನು ತೆರೆಯುತ್ತದೆಯೋ, ಆ ಭೂಮಿ ಸಾಮಾನ್ಯವಾದದ್ದಲ್ಲ. ಮತ್ತು ಅದಕ್ಕಾಗಿಯೇ, ನಮ್ಮ ಮಹಾನ್ ಸಂತರು ಅಶೋಕನಗರದ ಕುರಿತು ಹೇಳಿದ್ದರು, ದುಃಖವು ಇಲ್ಲಿಗೆ ಕಾಲಿಡಲು ಸಹ ಭಯಪಡುತ್ತದೆ ಎಂದು. ಇಂದು ನನಗೆ ಬೈಸಾಖಿ ಹಬ್ಬ ಮತ್ತು ಶ್ರೀ ಗುರು ಮಹಾರಾಜ್ ಜೀ ಅವರ ಅವತಾರ ದಿನಾಚರಣೆಯಲ್ಲಿ ಪಾಲ್ಗೊಳ್ಳುವ ಸೌಭಾಗ್ಯ ಲಭಿಸಿರುವುದಕ್ಕೆ ನಾನು ಸಂತೋಷಿತನಾಗಿದ್ದೇನೆ. ಈ ಶುಭ ಸಂದರ್ಭದಲ್ಲಿ, ನಾನು ಪ್ರಥಮ ಪಾದಶಾಹಿ ಶ್ರೀ ಶ್ರೀ ಒಂದು ನೂರ ಎಂಟು ಶ್ರೀ ಸ್ವಾಮಿ ಅದ್ವೈತ ಆನಂದ ಜಿ ಮಹಾರಾಜ್ ಮತ್ತು ಇತರ ಎಲ್ಲಾ ಪಾದಶಾಹಿ ಮಹಾತ್ಮರಿಗೆ ನನ್ನ ಶಿರಸಾಷ್ಟಾಂಗ ನಮನಗಳನ್ನು ಅರ್ಪಿಸುತ್ತೇನೆ. ನನಗೆ ತಿಳಿದು ಬಂದಿರುವಂತೆ, ಇದೇ ದಿನ 1936 ರಲ್ಲಿ, ಶ್ರೀ ದ್ವಿತೀಯ ಪಾದಶಾಹಿ ಜೀ ಅವರು ಮಹಾಸಮಾಧಿಯನ್ನು ಹೊಂದಿದರು. ಇದೇ ದಿನ 1964 ರಲ್ಲಿ, ಶ್ರೀ ತೃತೀಯ ಪಾದಶಾಹಿ ಜೀ ಅವರು ತಮ್ಮ ನಿಜ ಸ್ವರೂಪವನ್ನು ಸೇರಿದರು. ಈ ಇಬ್ಬರೂ ಸದ್ಗುರು ಮಹಾರಾಜರಿಗೆ ನಾನು ನನ್ನ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ನಾನು ಮಾ ಜಾಗೇಶ್ವರಿ ದೇವಿ, ಮಾ ಬಿಜಾಸನ್, ಮಾ ಜಾನಕಿ ಕರಿಲಾ ಮಾತಾ ಧಾಮಕ್ಕೂ ಭಕ್ತಿಯಿಂದ ನಮಸ್ಕರಿಸುತ್ತೇನೆ ಮತ್ತು ತಮ್ಮೆಲ್ಲರಿಗೂ ಬೈಸಾಖಿ ಹಾಗೂ ಶ್ರೀ ಗುರು ಮಹಾರಾಜ್ ಜೀ ಅವರ ಅವತಾರ ಮಹೋತ್ಸವದ ಶುಭಾಶಯಗಳನ್ನು ತಿಳಿಸುತ್ತೇನೆ.

ಸ್ನೇಹಿತರೇ, 

ನಮ್ಮ ಭಾರತವು ಋಷಿಗಳು, ಯೋಗಿಗಳು ಮತ್ತು ಸಂತರುಗಳ ನಾಡು. ನಮ್ಮ ಭಾರತವಾಗಲಿ, ನಮ್ಮ ಸಮಾಜವಾಗಲಿ ಕಷ್ಟದ ಪರಿಸ್ಥಿತಿಯನ್ನು ಎದುರಿಸಿದಾಗಲೆಲ್ಲಾ, ಒಬ್ಬ ಋಷಿಯಾಗಲಿ ಅಥವಾ ಯೋಗಿಯಾಗಲಿ ಈ ಭೂಮಿಗೆ ಅವತರಿಸಿ ಸಮಾಜಕ್ಕೆ ಹೊಸ ಮಾರ್ಗದರ್ಶನ ನೀಡುತ್ತಾರೆ. ಪೂಜ್ಯ ಸ್ವಾಮಿ ಅದ್ವೈತ ಆನಂದ ಜಿ ಮಹಾರಾಜ್ ಅವರ ಜೀವನದಲ್ಲಿಯೂ ನಾವು ಇದರ ಒಂದು ಕಿರುನೋಟವನ್ನು ಕಾಣಬಹುದು. ಒಂದು ಕಾಲವಿತ್ತು, ಆದಿ ಶಂಕರಾಚಾರ್ಯರಂತಹ ಆಚಾರ್ಯರು ಅದ್ವೈತ ತತ್ವದ ಆಳವಾದ ಜ್ಞಾನವನ್ನು ವಿವರಿಸುತ್ತಿದ್ದರು. ಗುಲಾಮಗಿರಿಯ ಕಾಲದಲ್ಲಿ, ಸಮಾಜವು ಆ ಜ್ಞಾನವನ್ನು ಮರೆಯಲು ಪ್ರಾರಂಭಿಸಿತು. ಆದರೆ ಅದೇ ಸಮಯದಲ್ಲಿ, ಅದ್ವೈತದ ಕಲ್ಪನೆಯಿಂದ ರಾಷ್ಟ್ರದ ಅಂತರಂಗವನ್ನು ಬಡಿದೆಬ್ಬಿಸಿದಂತಹ ಋಷಿಗಳು ಮತ್ತು ತಪಸ್ವಿಗಳು ಸಹ ಆಗಮಿಸಿದರು. ಈ ಸಂಪ್ರದಾಯದಲ್ಲಿ, ಪೂಜ್ಯ ಅದ್ವೈತ ಆನಂದ ಜಿ ಮಹಾರಾಜ್ ಅವರು ಇದನ್ನು ಭಾರತದ ಸಾಮಾನ್ಯ ಜನರಿಗೆ ತಲುಪಿಸುವ ಉಪಕ್ರಮವನ್ನು ಕೈಗೊಂಡರು. ಮಹಾರಾಜ್ ಜೀ ಅವರು ಅದ್ವೈತದ ಜ್ಞಾನವನ್ನು ನಮ್ಮೆಲ್ಲರಿಗೂ ಸರಳಗೊಳಿಸಿದರು ಮತ್ತು ಅದನ್ನು ಸಾಮಾನ್ಯ ಮನುಷ್ಯನಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಿದರು.

 

ಸ್ನೇಹಿತರೇ, 

ಇಂದು ಜಗತ್ತಿನಲ್ಲಿ ಭೌತಿಕ ಪ್ರಗತಿಯ ನಡುವೆಯೂ, ಮಾನವ ಕುಲವು ಯುದ್ಧ, ಸಂಘರ್ಷ ಮತ್ತು ಮಾನವೀಯ ಮೌಲ್ಯಗಳಿಗೆ ಸಂಬಂಧಿಸಿದ ಅನೇಕ ದೊಡ್ಡ ಕಳವಳಗಳನ್ನು ಎದುರಿಸುತ್ತಿದೆ. ಈ ಕಳವಳಗಳು ಮತ್ತು ಸವಾಲುಗಳ ಮೂಲ ಯಾವುದು? ಅವುಗಳ ಮೂಲದಲ್ಲಿರುವುದು 'ನಾನು' ಮತ್ತು 'ಇತರರು' ಎಂಬ ಭೇದ ಭಾವದ ಮನೋಭಾವ! ಆ ಮನೋಭಾವವು ಮನುಷ್ಯನನ್ನು ಮನುಷ್ಯನಿಂದ ದೂರ ಮಾಡುತ್ತದೆ. ಇಂದು ಜಗತ್ತು ಸಹ ಚಿಂತಿಸುತ್ತಿದೆ, ಇವುಗಳಿಗೆ ಪರಿಹಾರ ಎಲ್ಲಿ ಸಿಗುತ್ತದೆ ಎಂದು? ಅವುಗಳ ಪರಿಹಾರವು ಅದ್ವೈತ (ದ್ವೈತರಹಿತ) ತತ್ವದಲ್ಲಿ ಅಡಗಿದೆ! ಅದ್ವೈತ ಎಂದರೆ, ಎಲ್ಲಿಯೂ ದ್ವೈತವಿಲ್ಲದಿರುವುದು. ಅದ್ವೈತ ಎಂದರೆ ಪ್ರತಿಯೊಂದು ಜೀವಿಯಲ್ಲಿಯೂ ಒಂದೇ ದೇವರನ್ನು ಕಾಣುವ ಭಾವ! ಅದಕ್ಕೂ ಮಿಗಿಲಾಗಿ, ಇಡೀ ಸೃಷ್ಟಿಯನ್ನು ದೇವರ ಸ್ವರೂಪವಾಗಿ ಕಾಣುವುದೇ ಅದ್ವೈತ. ಪರಮಹಂಸ ದಯಾಳ್ ಮಹಾರಾಜ್ ಈ ಅದ್ವೈತ ತತ್ವವನ್ನು ಸರಳ ನುಡಿಗಳಲ್ಲಿ ಹೇಳುತ್ತಿದ್ದರು - ನೀನು ಏನಾಗಿದ್ದೀಯೋ, ನಾನು ಅದೇ. ಆಲೋಚಿಸಿ, ಅದು ಎಂತಹ ಸುಂದರವಾದ ನುಡಿ, ನೀನು ಏನಾಗಿದ್ದೀಯೋ, ನಾನು ಅದೇ. ಈ ಭಾವವು 'ನನ್ನದು' ಮತ್ತು 'ನಿನ್ನದು' ಎಂಬ ಭೇದವನ್ನು ಅಳಿಸಿಹಾಕುತ್ತದೆ. ಮತ್ತು ಪ್ರತಿಯೊಬ್ಬರೂ ಈ ಭಾವವನ್ನು ಅಳವಡಿಸಿಕೊಂಡರೆ, ಎಲ್ಲಾ ಸಂಘರ್ಷಗಳೂ ಕೊನೆಗೊಳ್ಳುತ್ತವೆ.

ಸ್ನೇಹಿತರೇ, 

ಕೆಲವು ಸಮಯದ ಹಿಂದೆ, ನಾನು ಆರನೇ ಪಾದಶಾಹಿ ಸ್ವಾಮಿ ಶ್ರೀ ವಿಚಾರ ಪೂರ್ಣ ಆನಂದ ಜಿ ಮಹಾರಾಜರೊಂದಿಗೆ ಸಂವಾದ ನಡೆಸುತ್ತಿದ್ದೆ. ಮೊದಲ ಪಾದಶಾಹಿ ಪರಮಹಂಸ ದಯಾಳ್ ಮಹಾರಾಜ್ ಜೀ ಅವರ ಚಿಂತನೆಗಳೊಂದಿಗೆ, ಅವರು ಆನಂದ ಧಾಮದ ಸೇವಾ ಚಟುವಟಿಕೆಗಳ ಬಗ್ಗೆಯೂ ನನಗೆ ತಿಳಿಸಿದರು. ಇಲ್ಲಿ ಸಾಧನೆಯ 5 ನಿಯಮಗಳನ್ನು ರೂಪಿಸಲಾಗಿದೆ, ಮತ್ತು ನಿಸ್ವಾರ್ಥ ಸೇವೆ ಅವುಗಳಲ್ಲಿ ಒಂದು. ಬಡವರು ಮತ್ತು ವಂಚಿತರಿಗೆ ನಿಸ್ವಾರ್ಥ ಸೇವೆ, ಮಾನವ ಸೇವೆಯಲ್ಲಿಯೇ ನಾರಾಯಣನ ದರ್ಶನವನ್ನು ಕಾಣುವ ಭಾವ ನಮ್ಮ ಸಂಸ್ಕೃತಿಯ ಅಡಿಪಾಯವಾಗಿದೆ. ಆನಂದಪುರ ಟ್ರಸ್ಟ್ ಪೂರ್ಣ ಸಮರ್ಪಣಾ ಮನೋಭಾವದಿಂದ ಈ ಸೇವಾ ಸಂಸ್ಕೃತಿಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದಕ್ಕೆ ನನಗೆ ಅತೀವ ಸಂತೋಷವಾಗಿದೆ. ಟ್ರಸ್ಟ್ನಿಂದ ನಡೆಸಲ್ಪಡುವ ಆಸ್ಪತ್ರೆಯಲ್ಲಿ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗಾಗಿ ಉಚಿತ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಗೋ ಸೇವೆಗಾಗಿ ಒಂದು ಆಧುನಿಕ ಗೋಶಾಲೆಯನ್ನು ಸಹ ನಡೆಸಲಾಗುತ್ತಿದೆ. ಹೊಸ ಪೀಳಿಗೆಯ ಅಭಿವೃದ್ಧಿಗಾಗಿ ಟ್ರಸ್ಟ್ನಿಂದ ಅನೇಕ ಶಾಲೆಗಳನ್ನು ಸಹ ನಡೆಸಲಾಗುತ್ತಿದೆ. ಇಷ್ಟೇ ಅಲ್ಲದೆ, ಆನಂದಪುರ ಧಾಮವು ಪರಿಸರ ಸಂರಕ್ಷಣೆಯ ಮೂಲಕ ಸಮಸ್ತ ಮಾನವ ಕುಲಕ್ಕೆ ಮಹತ್ತರವಾದ ಕೊಡುಗೆಯನ್ನು ನೀಡುತ್ತಿದೆ. ಆಶ್ರಮದ ಅನುಯಾಯಿಗಳು ಸಾವಿರಾರು ಎಕರೆ ಬರಡು ಭೂಮಿಯನ್ನು ಹಸಿರೀಕರಣಗೊಳಿಸಿದ್ದಾರೆ ಎಂದು ನನಗೆ ತಿಳಿಸಲಾಗಿದೆ. ಇಂದು ಈ ಆಶ್ರಮದಿಂದ ನೆಡಲಾದ ಸಾವಿರಾರು ಮರಗಳು ದಾನ ಕಾರ್ಯಗಳಿಗೆ ಬಳಕೆಯಾಗುತ್ತಿವೆ.

 

ಸಹೋದರರೇ ಮತ್ತು ಸಹೋದರಿಯರೇ, 

ಇಂದು ನಮ್ಮ ಸರ್ಕಾರದ ಪ್ರತಿಯೊಂದು ಪ್ರಯತ್ನದ ಕೇಂದ್ರಬಿಂದು ಈ ಸೇವಾ ಮನೋಭಾವವಾಗಿದೆ. ಇಂದು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಿಂದಾಗಿ ಪ್ರತಿಯೊಬ್ಬ ನಿರ್ಗತಿಕ ವ್ಯಕ್ತಿಯೂ ಆಹಾರದ ಚಿಂತೆಯಿಂದ ಮುಕ್ತನಾಗಿದ್ದಾನೆ. ಇಂದು ಆಯುಷ್ಮಾನ್ ಯೋಜನೆಯಿಂದಾಗಿ ಪ್ರತಿಯೊಬ್ಬ ಬಡ ಮತ್ತು ವೃದ್ಧ ವ್ಯಕ್ತಿಯೂ ಚಿಕಿತ್ಸೆಯ ಚಿಂತೆಯಿಂದ ಮುಕ್ತನಾಗಿದ್ದಾನೆ. ಇಂದು ಪ್ರಧಾನ ಮಂತ್ರಿ ಆವಾಸ್ ಯೋಜನೆಯಿಂದಾಗಿ ಪ್ರತಿಯೊಬ್ಬ ಬಡ ವ್ಯಕ್ತಿಯೂ ಒಂದು ಗಟ್ಟಿಮುಟ್ಟಾದ ಮನೆಯ ಚಿಂತೆಯಿಂದ ಮುಕ್ತನಾಗಿದ್ದಾನೆ. ಇಂದು ಜಲ್ ಜೀವನ್ ಮಿಷನ್ ಯೋಜನೆಯಿಂದಾಗಿ ಪ್ರತಿ ಗ್ರಾಮದಲ್ಲಿಯೂ ನೀರಿನ ಸಮಸ್ಯೆ ಪರಿಹಾರವಾಗುತ್ತಿದೆ. ದೇಶದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಹೊಸ ಏಮ್ಸ್, ಐಐಟಿ ಮತ್ತು ಐಐಎಂಗಳನ್ನು ಸ್ಥಾಪಿಸಲಾಗುತ್ತಿದೆ. ಬಡವರಲ್ಲಿ ಅತಿ ಬಡವರ ಮಕ್ಕಳ ಕನಸುಗಳು ನನಸಾಗುತ್ತಿವೆ. ನಮ್ಮ ಪರಿಸರವು ಸ್ವಚ್ಛವಾಗಿರಬೇಕು ಮತ್ತು ಪ್ರಕೃತಿಯನ್ನು ರಕ್ಷಿಸಬೇಕು ಎಂಬ ಉದ್ದೇಶದಿಂದ ಸರ್ಕಾರವು 'ಏಕ್ ಪೇಡ್ ಮಾ ಕೆ ನಾಮ್' ಎಂಬ ಅಭಿಯಾನವನ್ನು ಆರಂಭಿಸಿದೆ. ಇಂದು ಈ ಅಭಿಯಾನದ ಅಡಿಯಲ್ಲಿ ದೇಶದಲ್ಲಿ ಕೋಟಿಗಟ್ಟಲೆ ಮರಗಳನ್ನು ನೆಡಲಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ದೇಶವು ಇಷ್ಟೆಲ್ಲಾ ಮಾಡಲು ಸಾಧ್ಯವಾಗುತ್ತಿರುವುದಕ್ಕೆ ಕಾರಣ ನಮ್ಮಲ್ಲಿರುವ ಸೇವಾ ಮನೋಭಾವವೇ ಆಗಿದೆ. ಬಡವರು ಮತ್ತು ವಂಚಿತರನ್ನು ಮೇಲೆತ್ತುವ ಸಂಕಲ್ಪ, 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂಬ ಮಂತ್ರ, ಈ ಸೇವಾ ಮನೋಭಾವವೇ ಇಂದು ಸರ್ಕಾರದ ನೀತಿ ಮತ್ತು ಬದ್ಧತೆಯಾಗಿದೆ.

ಸ್ನೇಹಿತರೇ, 

ಸೇವೆ ಮಾಡುವ ದೃಢ ಸಂಕಲ್ಪದೊಂದಿಗೆ ನಾವು ಒಂದಾದಾಗ, ನಾವು ಕೇವಲ ಇತರರಿಗೆ ಸಹಾಯ ಮಾಡುತ್ತಿಲ್ಲ. ಸೇವಾ ಮನೋಭಾವವು ನಮ್ಮ ವ್ಯಕ್ತಿತ್ವವನ್ನು ಉನ್ನತೀಕರಿಸುತ್ತದೆ, ನಮ್ಮ ಚಿಂತನೆಯನ್ನು ವಿಸ್ತಾರಗೊಳಿಸುತ್ತದೆ.  ಸೇವೆ ನಮ್ಮನ್ನು ಸ್ವಂತ ವಲಯದಿಂದ ಹೊರತಂದು ಸಮಾಜ, ರಾಷ್ಟ್ರ ಮತ್ತು ಮಾನವ ಕುಲದ ವಿಶಾಲ ಗುರಿಗಳೊಂದಿಗೆ ಬೆಸೆಯುತ್ತದೆ. ಸೇವೆಗಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲು ನಾವು ಕಲಿಯುತ್ತೇವೆ. ನಾವು ಜೀವನದ ವಿವಿಧ ಆಯಾಮಗಳನ್ನು ಅರ್ಥಮಾಡಿಕೊಳ್ಳುತ್ತೇವೆ. ನೀವೆಲ್ಲರೂ ಸೇವಾ ಕಾರ್ಯಕ್ಕೆ ಸಮರ್ಪಿತರಾದ ಜನರು. ನಿಮ್ಮ ಜೀವನದಲ್ಲಿ ನೀವು ಅನುಭವಿಸಿರಬಹುದು, ಕಷ್ಟಗಳನ್ನು ಎದುರಿಸಿ ಅವುಗಳನ್ನು ಮೀರಿದ ಅನುಭವ. ಸೇವೆ ಮಾಡುವಾಗ ಈ ಎಲ್ಲವನ್ನೂ ನಾವು ಸುಲಭವಾಗಿ ಕಲಿಯುತ್ತೇವೆ. ಅದಕ್ಕಾಗಿಯೇ ನಾನು ಹೇಳುತ್ತೇನೆ, ಸೇವೆ ಒಂದು ಸಾಧನೆ, ಇದು ಪವಿತ್ರ ಗಂಗೆಯಿದ್ದಂತೆ, ಪ್ರತಿಯೊಬ್ಬರೂ ಅದರಲ್ಲಿ ಮುಳುಗೆದ್ದು ಪಾವನರಾಗಬೇಕು.

 

ಸ್ನೇಹಿತರೇ, 

ಅಶೋಕನಗರ ಮತ್ತು ಆನಂದಪುರ ಧಾಮದಂತಹ ಈ ಪ್ರದೇಶಗಳು ದೇಶಕ್ಕೆ ಅಪಾರ ಕೊಡುಗೆ ನೀಡಿವೆ, ಅವುಗಳ ಅಭಿವೃದ್ಧಿಯೂ ನಮ್ಮ ಹೊಣೆಯಾಗಿದೆ. ಈ ಪ್ರದೇಶವು ಕಲೆ, ಸಂಸ್ಕೃತಿ ಮತ್ತು ನಿಸರ್ಗದ ಸೊಬಗಿನಿಂದ ಕೂಡಿದೆ. ಇಲ್ಲಿ ಅಭಿವೃದ್ಧಿ ಮತ್ತು ಪರಂಪರೆಯ ಅನಂತ ಸಾಧ್ಯತೆಗಳಿವೆ! ಅದಕ್ಕಾಗಿಯೇ ನಾವು ಮಧ್ಯಪ್ರದೇಶ ಮತ್ತು ಅಶೋಕನಗರದಲ್ಲಿ ಅಭಿವೃದ್ಧಿಯನ್ನು ತ್ವರಿತ ಗತಿಯಲ್ಲಿ ಹೆಚ್ಚಿಸುತ್ತಿದ್ದೇವೆ. ಚಂದೇರಿ ಕೈಮಗ್ಗವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು, ಚಂದೇರಿ ಸೀರೆಗೆ ಭೌಗೋಳಿಕ ಗುರುತಿಸುವಿಕೆ (ಜಿಐ ಟ್ಯಾಗ್) ನೀಡಲಾಗಿದೆ. ಪ್ರಾನ್ ಪುರದಲ್ಲಿ ಕರಕುಶಲ ಮತ್ತು ಕೈಮಗ್ಗ ಪ್ರವಾಸೋದ್ಯಮ ಗ್ರಾಮವನ್ನು ಪ್ರಾರಂಭಿಸಲಾಗಿದೆ. ಇದು ಈ ಪ್ರದೇಶದ ಆರ್ಥಿಕತೆಗೆ ಒಂದು ಹೊಸ ಉತ್ತೇಜನವನ್ನು ನೀಡುತ್ತದೆ. ಮಧ್ಯಪ್ರದೇಶ ಸರ್ಕಾರವು ಈಗಾಗಲೇ ಉಜ್ಜಯಿನಿ ಸಿಂಹಸ್ಥ ಮೇಳದ ಸಿದ್ಧತೆಗಳನ್ನು ಆರಂಭಿಸಿದೆ.

ಸಹೋದರರೇ ಮತ್ತು ಸಹೋದರಿಯರೇ, 

ಕೇವಲ ಕೆಲವೇ ದಿನಗಳ ಹಿಂದೆ, ರಾಮ ನವಮಿಯ ಭವ್ಯ ಹಬ್ಬವನ್ನು ಆಚರಿಸಲಾಯಿತು. ನಾವು ದೇಶದಲ್ಲಿ "ರಾಮ ವನಗಮನ ಪಥ"ವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಈ ರಾಮ ವನಗಮನ ಪಥದ ಒಂದು ಪ್ರಮುಖ ಭಾಗವು ಮಧ್ಯಪ್ರದೇಶದ ಮೂಲಕ ಸಾಗುತ್ತದೆ. ಮತ್ತು ನಮ್ಮ ಮಧ್ಯಪ್ರದೇಶವು ಈಗಾಗಲೇ ಅದ್ಭುತ ಮತ್ತು ಮನೋಹರವಾಗಿದೆ. ಈ ಕಾರ್ಯಗಳಿಂದ ಅದರ ಅಸ್ಮಿತೆಯು ಮತ್ತಷ್ಟು ಬಲಗೊಳ್ಳಲಿದೆ.

 

ಸ್ನೇಹಿತರೇ, 

ಭಾರತವು 2047ರ ವೇಳೆಗೆ ಒಂದು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯನ್ನು ಹಾಕಿಕೊಂಡಿದೆ. ನಾವು ಈ ಗುರಿಯನ್ನು ಖಂಡಿತವಾಗಿಯೂ ಸಾಧಿಸುತ್ತೇವೆ ಎಂಬ ದೃಢ ವಿಶ್ವಾಸ ನಮಗಿದೆ. ಆದರೆ ಈ ಪಯಣದಲ್ಲಿ ನಾವು ಕೆಲವು ಮಹತ್ವದ ವಿಷಯಗಳನ್ನು ಸದಾ ಗಮನದಲ್ಲಿರಿಸಿಕೊಳ್ಳಬೇಕು. ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿರುವಾಗ ವಿಶ್ವದ ಅನೇಕ ರಾಷ್ಟ್ರಗಳು ತಮ್ಮ ಸಂಸ್ಕೃತಿಯ ನಂಟನ್ನು ಕಳೆದುಕೊಂಡಿವೆ, ತಮ್ಮ ಪರಂಪರೆಯನ್ನು ಮರೆತಿವೆ ಎಂದು ನಾವು ಕಂಡಿದ್ದೇವೆ. ಭಾರತದಲ್ಲಿ ನಾವು ನಮ್ಮ ಪುರಾತನ ಸಂಸ್ಕೃತಿಯನ್ನು ಸಂರಕ್ಷಿಸುವುದು ಅತ್ಯಗತ್ಯ. ಭಾರತದಂತಹ ಒಂದು ರಾಷ್ಟ್ರದಲ್ಲಿ, ನಮ್ಮ ಸಂಸ್ಕೃತಿಯು ಕೇವಲ ನಮ್ಮ ಅಸ್ಮಿತೆಗೆ ಸೀಮಿತವಾಗಿಲ್ಲ ಎಂಬುದನ್ನು ನಾವು ಮನಗಾಣಬೇಕು. ನಮ್ಮ ಸಾಮರ್ಥ್ಯವನ್ನು ಬಲಪಡಿಸುವ ಶಕ್ತಿಯೇ ನಮ್ಮ ಸಂಸ್ಕೃತಿ. ಆನಂದಪುರ ಧಾಮ ಟ್ರಸ್ಟ್  ಈ ದಿಕ್ಕಿನಲ್ಲಿ ಅನೇಕ ಮಹತ್ವದ ಕಾರ್ಯಗಳನ್ನು ಕೈಗೊಂಡಿರುವುದು ನನಗೆ ಸಂತಸವನ್ನು ನೀಡಿದೆ. ಆನಂದಪುರ ಧಾಮದ ಈ ಸೇವಾ ಕಾರ್ಯವು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪಕ್ಕೆ ಹೊಸ ಚೈತನ್ಯವನ್ನು ತುಂಬಲಿದೆ ಎಂಬ ವಿಶ್ವಾಸ ನನಗಿದೆ. ಮತ್ತೊಮ್ಮೆ, ಬೈಸಾಖಿ ಹಬ್ಬ ಮತ್ತು ಶ್ರೀ ಗುರು ಮಹಾರಾಜ್ ಜೀ ಅವರ ಜನ್ಮದಿನಾಚರಣೆಯ ಈ ಶುಭ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ನನ್ನ ಹಾರ್ದಿಕ ಶುಭಾಶಯಗಳು. ಅಭಿನಂದನೆಗಳು! ಜೈ ಶ್ರೀ ಸಚ್ಚಿದಾನಂದ!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Why The SHANTI Bill Makes Modi Government’s Nuclear Energy Push Truly Futuristic

Media Coverage

Why The SHANTI Bill Makes Modi Government’s Nuclear Energy Push Truly Futuristic
NM on the go

Nm on the go

Always be the first to hear from the PM. Get the App Now!
...
Chief Minister of Gujarat meets Prime Minister
December 19, 2025

The Chief Minister of Gujarat, Shri Bhupendra Patel met Prime Minister, Shri Narendra Modi today in New Delhi.

The Prime Minister’s Office posted on X;

“Chief Minister of Gujarat, Shri @Bhupendrapbjp met Prime Minister @narendramodi.

@CMOGuj”