x17 ನೇ ಲೋಕಸಭೆಯು ಹಲವಾರು ಪ್ರಮುಖ ನಿರ್ಣಯಗಳಿಗೆ ಸಾಕ್ಷಿ. ಈ ಐದು ವರ್ಷಗಳು 'ಸುಧಾರಣೆ, ನಿರ್ವಹಣೆ ಮತ್ತು ಪರಿವರ್ತನೆಗೆ ಕಾರಣ'
"ಸೆಂಗೋಲ್ ಭಾರತೀಯ ಪರಂಪರೆಯ ಘೋಷಣೆಯ ಸಂಕೇತ ಮತ್ತು ಸ್ವಾತಂತ್ರ್ಯೋತ್ಸವದ ಕ್ಷಣಗಳಿಗೆ ನೆನಪಾಗಿದೆ"
ಭಾರತ ಈ ಅವಧಿಯಲ್ಲಿ ಜಿ20 ಅಧ್ಯಕ್ಷತೆ ವಹಿಸಿಕೊಳ್ಳಲು ಅವಕಾಶ ಪಡೆಯಿತು ಮತ್ತು ಪ್ರತಿಯೊಂದು ರಾಜ್ಯ ತನ್ನ ಶಕ್ತಿ ಹಾಗೂ ತನ್ನ ಗುರುತನ್ನು ಸಾಬೀತುಪಡಿಸಿತು.
"17 ನೇ ಲೋಕಸಭೆಯಲ್ಲಿ ಶತಮಾನಗಳಿಂದ ಹಲವಾರು ಪೀಳಿಗೆಗಳು ನಿರೀಕ್ಷೆ ಹೊಂದಿದ್ದ ಕೆಲಸವನ್ನು ಪೂರ್ಣಗೊಳಿಸಿದ ತೃಪ್ತಿ ನಮಗಿದೆ"
ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಮಾಜಿಕ ನ್ಯಾಯ ನೀಡುವ ನಮ್ಮ ಬದ್ಧತೆಯನ್ನು ನಾವು ತಲುಪುತ್ತಿದ್ದೇವೆ"
75 ವರ್ಷಗಳ ಕಾಲ ಅಪರಾಧ ಸಂಹಿತೆಯಡಿ ದೇಶ‌ ಬದುಕಿತ್ತು. ಇದೀಗ ನಾವು ನ್ಯಾಯ ಸಂಹಿತೆಯಡಿ ಬದುಕುವುದಾಗಿ ಹೆಮ್ಮೆಯಿಂದ ಹೇಳುತ್ತೇವೆ"
"ನಮ್ಮ ಪ್ರಜಾತಂತ್ರದ ವೈಭವಕ್ಕೆ ಅನುಗುಣವಾಗಿ ಚುನಾವಣೆಗಳು ಬರಲಿವೆ
“ಇಂದಿನ ರಾಮಮಂದಿರ ಭಾಷಣಗಳು ‘ಸಂವೇದನ’, ‘ಸಂಕಲ್ಪ’ ಮತ್ತು ‘ಸಹಾನುಭೂತಿ’ ಜೊತೆಗೆ “ಸಬ್ ಕಾ ಸಾತ್ ಸಬ್ ಕಾ ವಿಕಾಸ್” ಮಂತ್ರವನ್ನು ಒಳಗೊಂಡಿದೆ

ಸನ್ಮಾನ್ಯ ಸಭಾಧ್ಯಕ್ಷರೇ,

ಪ್ರಜಾಪ್ರಭುತ್ವದ ಶ್ರೇಷ್ಠ ಸಂಪ್ರದಾಯದಲ್ಲಿ ಇಂದು ಒಂದು ಮಹತ್ವದ ದಿನ. ಕಳೆದ ಐದು ವರ್ಷಗಳಲ್ಲಿ, 17ನೇ ಲೋಕಸಭೆಯು ರಾಷ್ಟ್ರದ ಸೇವೆಯಲ್ಲಿ ಹಲವಾರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಅನೇಕ ಸವಾಲುಗಳ ಎದುರಾದಾಗ, ದೇಶವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಲು ಪ್ರತಿಯೊಬ್ಬರೂ ತಮ್ಮ ಸಂಪೂರ್ಣ ಸಾಮರ್ಥ್ಯಗಳೊಂದಿಗೆ ಪ್ರಯತ್ನಿಸಿದ್ದಾರೆ. ಒಂದು ರೀತಿಯಲ್ಲಿ, ರಾಷ್ಟ್ರಕ್ಕೆ ಸಮರ್ಪಿತವಾದ ನಮ್ಮ ಐದು ವರ್ಷಗಳ ಸೈದ್ಧಾಂತಿಕ ಪ್ರಯಾಣವನ್ನು ಪ್ರತಿಬಿಂಬಿಸಲು ಮತ್ತು ಮತ್ತೊಮ್ಮೆ ನಮ್ಮ ಸಂಕಲ್ಪಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲು ಇಂದು ನಮಗೆಲ್ಲರಿಗೂ ಒಂದು ಅವಕಾಶವಾಗಿದೆ. ʻಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆʼಯ ಈ ಐದು ವರ್ಷಗಳು ಬಹಳ ಅಪರೂಪ. ಸುಧಾರಣೆಗಳು ನಡೆಯುವುದು, ಕಾರ್ಯಕ್ಷಮತೆಯನ್ನು ಸಾಧಿಸುವುದು ಮತ್ತು ನಮ್ಮ ಕಣ್ಣುಗಳ ಮುಂದೆ ಪರಿವರ್ತನೆಯನ್ನು ನಾವು ನೋಡುವುದು ಅಪರೂಪ, ಇದು ಹೊಸ ವಿಶ್ವಾಸವನ್ನು ತುಂಬುತ್ತದೆ. ಇಂದು, ರಾಷ್ಟ್ರವು 17ನೇ ಲೋಕಸಭೆಯಿಂದ ಈ ಖಚಿತತೆಯ ಅನುಭವವನ್ನು ಪಡೆಯುತ್ತಿದೆ. ಮತ್ತು ರಾಷ್ಟ್ರವು 17ನೇ ಲೋಕಸಭೆಗೆ  ತನ್ನ ಆಶೀರ್ವಾದವನ್ನು ಮುಂದುವರಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ಸದನದ ಎಲ್ಲಾ ಸನ್ಮಾನ್ಯ ಸದಸ್ಯರು ಈ ಎಲ್ಲಾ ಪ್ರಕ್ರಿಯೆಗಳಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದ್ದಾರೆ. ಒಬ್ಬ ನಾಯಕನಾಗಿ ಮತ್ತು ನಿಮ್ಮೆಲ್ಲರ ಒಡನಾಡಿಯಾಗಿ ನಾನು ನಿಮ್ಮೆಲ್ಲರನ್ನೂ ಅಭಿನಂದಿಸುವ ಸಮಯ ಇದಾಗಿದೆ.

ವಿಶೇಷವಾಗಿ, ಸನ್ಮಾನ್ಯ ಸಭಾಧ್ಯಕ್ಷರೇ,

ನಾನು ನಿಮಗೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಸುಮಿತ್ರಾ(ಮಹಾಜನ್) ಅವರು ಸಾಂದರ್ಭಿಕವಾಗಿ ಲಘು ಹಾಸ್ಯದಲ್ಲಿ ತೊಡಗಿದ್ದರು (ಸದನದ ಸ್ಪೀಕರ್ ಆಗಿ ಅವರ ಐದು ವರ್ಷಗಳ ಅಧಿಕಾರಾವಧಿಯಲ್ಲಿ). ಆದರೆ ನೀವು, ಸದಾ ನಿಮ್ಮ ಮುಖದ ಮೇಲೆ ಮುಗುಳ್ನಗೆ ಹೊಂದಿರುತ್ತೀರಿ. ಸದನದಲ್ಲಿ ಏನೇ ಆಗಲಿ, ಆ ನಗು ಎಂದಿಗೂ ಮಸುಕಾಗಲಿಲ್ಲ. ಅನೇಕ ವೈವಿಧ್ಯಮಯ ಸಂದರ್ಭಗಳಲ್ಲಿ, ನೀವು ಈ ಸದನಕ್ಕೆ ಉತ್ತಮ ಸಮತೋಲನದಿಂದ ಮತ್ತು ನಿಷ್ಪಕ್ಷಪಾತವಾಗಿ ನೈಜ ಅರ್ಥದಲ್ಲಿ ಮಾರ್ಗದರ್ಶನ ಮಾಡಿದ್ದೀರಿ ಮತ್ತು ಮುನ್ನಡೆಸಿದ್ದೀರಿ. ನಿಮ್ಮ ನಡವಳಿಕೆಗಾಗಿ ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಪ್ರಶಂಸಿಸುತ್ತೇನೆ. ಕೋಪ ಮತ್ತು ಆರೋಪಗಳ ಕ್ಷಣಗಳು ಇದ್ದವು, ಆದರೆ ನೀವು ಈ ಎಲ್ಲಾ ಸಂದರ್ಭಗಳನ್ನು ಸಂಪೂರ್ಣ ತಾಳ್ಮೆ ಮತ್ತು ಒಳನೋಟದಿಂದ ನಿಭಾಯಿಸಿದ್ದೀರಿ, ಸದನವನ್ನು ಮುನ್ನಡೆಸಿದ್ದೀರಿ ಮತ್ತು ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡಿದ್ದೀರಿ. ಇದಕ್ಕಾಗಿ ನಾನು ನಿಮಗೆ ಆಭಾರಿಯಾಗಿದ್ದೇನೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಈ ಐದು ವರ್ಷಗಳಲ್ಲಿ, ಇಡೀ ಮಾನವ ಜನಾಂಗವು ಈ ಶತಮಾನದ ಅತಿದೊಡ್ಡ ಬಿಕ್ಕಟ್ಟನ್ನು ಸಹಿಸಿಕೊಂಡಿದೆ. ಯಾರು ಬದುಕುಳಿಯುತ್ತಾರೆ? ಯಾರನ್ನಾದರೂ ಉಳಿಸಬಹುದೇ? ಎಂಬಂತಹ ಪರಿಸ್ಥಿತಿ ಇತ್ತು. ಆ ಸಮಯದಲ್ಲಿ, ಯಾರೇ ಆಗಲಿ ಮನೆಯನ್ನು ತೊರೆದು, ಸದನಕ್ಕೆ ಬರುವುದು ಬಿಕ್ಕಟ್ಟಿನ ವಿಷಯವಾಗಿತ್ತು. ಇದ್ಯಾವುದನ್ನೂ ಲೆಕ್ಕಿಸದೆ, ಯಾವುದೇ ಹೊಸ ವ್ಯವಸ್ಥೆಗಳನ್ನು ಮಾಡಬೇಕಾದರೂ ನೀವು ಮುಂದೆ ಬಂದಿರಿ, ರಾಷ್ಟ್ರದ ಕೆಲಸವನ್ನು ಸ್ಥಗಿತಗೊಳ್ಳಲು ಬಿಡದೆ ನೀವು ಅವುಗಳನ್ನು ಮಾಡಿದ್ದೀರಿ. ಸದನದ ಘನತೆಯನ್ನು ಕಾಪಾಡಲು ಮತ್ತು ದೇಶದ ಅಗತ್ಯ ಕೆಲಸಗಳು ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು, ಸದನವನ್ನು ನಡೆಸುವ ನಿಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೀರಿ. ಇದರಲ್ಲಿ ನೀವು ಸ್ವಲ್ಪವೂ ಹಿಂದೆ ಬೀಳಲಿಲ್ಲ. ನೀವು ಅದನ್ನು ಬಹಳ ಕೌಶಲ್ಯದಿಂದ ನಿರ್ವಹಿಸುವ ಮೂಲಕ ಇಡೀ ಜಗತ್ತಿಗೆ ಉದಾಹರಣೆಯಾಗಿದ್ದೀರಿ.

ಸನ್ಮಾನ್ಯ ಸಭಾಧ್ಯಕ್ಷರೇ,

ಆ ಅವಧಿಯಲ್ಲಿ ದೇಶದ ಅಗತ್ಯಗಳ ಹಿನ್ನೆಲೆಯಲ್ಲಿ, ತಮ್ಮ ಸಂಸದರ ನಿಧಿಯನ್ನು ಬಿಟ್ಟುಕೊಡುವಂತೆ ಪ್ರಸ್ತಾಪವನ್ನು ಮುಂದಿಟ್ಟಾಗ ಒಂದು ಕ್ಷಣವೂ ವಿಳಂಬವಿಲ್ಲದೆ ಅದಕ್ಕೆ ಒಪ್ಪಿದ ಗೌರವಾನ್ವಿತ ಸಂಸದರಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ. ಅಷ್ಟೇ ಅಲ್ಲ, ನಾಗರಿಕರಿಗೆ ಸಕಾರಾತ್ಮಕ ಸಂದೇಶವನ್ನು ನೀಡಲು ಮತ್ತು ಸಮಾಜದಲ್ಲಿ ವಿಶ್ವಾಸವನ್ನು ಮೂಡಿಸಲು ಸಂಸದರೇ ಶೇಕಡಾ 30 ರಷ್ಟು ವೇತನ ಕಡಿತವನ್ನು ನಿರ್ಧರಿಸಿದ್ದರು. ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟವರಲ್ಲಿ ಸಂಸದರೇ ಮೊದಲಿಗರು ಎಂದು ದೇಶ ನಂಬಲು ಇದು ಕಾರಣವಾಯಿತು.

ಸನ್ಮಾನ್ಯ ಸಭಾಧ್ಯಕ್ಷರೇ,

ಸಂಸತ್ತಿನ ಕ್ಯಾಂಟೀನ್‌ನಲ್ಲಿ ನಾವು ಪಡೆಯುವ ಸವಲತ್ತುಗಳಿಗಾಗಿ ಮತ್ತು ರಿಯಾಯಿತಿ ದರದ ಆಹಾರವನ್ನು ಸೇವಿಸುವುದಕ್ಕಾಗಿ ಭಾರತೀಯ ಮಾಧ್ಯಮದ ಕೆಲವು ವಿಭಾಗಗಳಲ್ಲಿ ಯಾವುದೇ ಕಾರಣವಿಲ್ಲದೆ ಸಂಸದರನ್ನು ವರ್ಷಕ್ಕೆ ಎರಡು ಬಾರಿ ಟೀಕಿಸಲಾಗುತ್ತಿತ್ತು. ಹೊರಗೆ ಲಭ್ಯವಿರುವ ಆಹಾರದ ಬೆಲೆಗೆ ಹೋಲಿಸಿದರೆ, ಸಂಸತ್ತಿನ ಕ್ಯಾಂಟೀನ್‌ನಲ್ಲಿನ ಆಹಾರದ ಬೆಲೆಯ ಬಗ್ಗೆ ನಮ್ಮನ್ನು ನಿರಂತರವಾಗಿ ಅಪಹಾಸ್ಯ ಮಾಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕ್ಯಾಂಟೀನ್‌ನಲ್ಲಿ ಎಲ್ಲರಿಗೂ ಏಕರೂಪದ ದರಗಳು ಇರಬೇಕೆಂಬ ಎಂಬ ನಿರ್ಧಾರವನ್ನು ನೀವು ಕೈಗೊಂಡಿರಿ ಮತ್ತು ಯಾವ ಸಂಸದರೂ ಅದನ್ನು ಎಂದಿಗೂ ವಿರೋಧಿಸಲಿಲ್ಲ ಮತ್ತು ಎಂದಿಗೂ ಈ ಬಗ್ಗೆ ದೂರಲಿಲ್ಲ. ಈ ಹಿಂದೆ ಯಾವುದೇ ಕಾರಣವಿಲ್ಲದೆ ಎಲ್ಲಾ ಸಂಸದರನ್ನು ಅಪಹಾಸ್ಯ ಮಾಡುತ್ತಿದ್ದವರೂ ಆವಾಗ ಸಂಸತ್ತಿನ ಕ್ಯಾಂಟೀಟ್‌ನಲ್ಲಿ ಲಭ್ಯವಿರುತ್ತಿದ್ದ ಸಬ್ಸಿಡಿ ಆಹಾರವನ್ನು ಆನಂದಿಸುತ್ತಿದ್ದರು. ನೀವು ನಮ್ಮೆಲ್ಲರನ್ನೂ ಆ ಅಪಹಾಸ್ಯದಿಂದ ರಕ್ಷಿಸಿದ್ದೀರಿ, ಮತ್ತು ಇದಕ್ಕಾಗಿ ನಾನು ನಿಮಗೆ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಅದು ನಮ್ಮ 15ನೇ ಲೋಕಸಭೆಯಾಗಿರಲಿ, 16 ಅಥವಾ 17ನೇ ಲೋಕಸಭೆಯಾಗಿರಲಿ, ಹೊಸ ಸಂಸತ್ ಭವನದ ಬೇಡಿಕೆ ಇತ್ತು ಎಂಬುದು ನಿಜ. ಎಲ್ಲರೂ ಇದನ್ನು ಒಟ್ಟಾಗಿ, ಒಕ್ಕೊರಲ ಧ್ವನಿಯಲ್ಲಿ ಚರ್ಚಿಸಿದ್ದರು. ಆದರೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ನಿಮ್ಮ ನಾಯಕತ್ವವು ನಿರ್ಧಾರವನ್ನು ತೆಗೆದುಕೊಂಡಿತು, ವಿಷಯಗಳನ್ನು ಮುಂದಕ್ಕೆ ತಳ್ಳಿತು, ಸರ್ಕಾರದೊಂದಿಗೆ ವಿವಿಧ ಸಭೆಗಳನ್ನು ನಡೆಸಿತು ಮತ್ತು ಇದರ ಪರಿಣಾಮವಾಗಿ, ಇಂದು ದೇಶವು ಈ ಹೊಸ ಸಂಸತ್ ಭವನವನ್ನು ಪಡೆದುಕೊಂಡಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ನಮ್ಮ ಪರಂಪರೆಯ ಒಂದು ಭಾಗವನ್ನು ಸಂರಕ್ಷಿಸುವ ಮತ್ತು ಸ್ವಾತಂತ್ರ್ಯದ ಮೊದಲ ಕ್ಷಣವನ್ನು ದಾರಿದೀಪವಾಗಿ ಜೀವಂತವಾಗಿರಿಸುವ ʻಸೆಂಗೋಲ್ʼ ಅನ್ನು ಹೊಸ ಸಂಸತ್ ಭವನದಲ್ಲಿ ಸ್ಥಾಪಿಸಿದ್ದು ನಿಮ್ಮ ನಾಯಕತ್ವದಲ್ಲಿ ಒಂದು ಮಹತ್ವದ ಕಾರ್ಯವಾಗಿದೆ. ಇದು ಈಗ ಪ್ರತಿ ವರ್ಷ ಔಪಚಾರಿಕ ಕಾರ್ಯಕ್ರಮದ ಒಂದು ಭಾಗವಾಗಲಿದೆ, ಇದು ಭಾರತದ ಭವಿಷ್ಯದ ಪೀಳಿಗೆಯನ್ನು ಸ್ವಾತಂತ್ರ್ಯದ ಆ ಕ್ಷಣದೊಂದಿಗೆ ಶಾಶ್ವತವಾಗಿ ಸಂಪರ್ಕಿಸುತ್ತದೆ. ಮತ್ತು ಸ್ವಾತಂತ್ರ್ಯದ ಆ ಮಹತ್ವದ ಕ್ಷಣವು ನಮ್ಮ ನೆನಪುಗಳಲ್ಲಿ ಅಚ್ಚಳಿಯದೆ ಉಳಿಯುತ್ತದೆ, ರಾಷ್ಟ್ರವನ್ನು ಮುನ್ನಡೆಸಲು ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತದೆ - ನೀವು ಸಾಧಿಸಿದ ಪವಿತ್ರ ಕಾರ್ಯ ಇದಾಗಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಈ ಅವಧಿಯಲ್ಲಿ, ಜಿ-20 ಶೃಂಗಸಭೆಯ ಅಧ್ಯಕ್ಷತೆಯ ಸಮಯದಲ್ಲಿ ಭಾರತವು ಸಾಕಷ್ಟು ಪ್ರಶಂಸೆಯನ್ನು ಪಡೆಯಿತು ಎಂಬುದು ನಿಜವಷ್ಟೇ. ದೇಶದ ಪ್ರತಿಯೊಂದು ರಾಜ್ಯವು ಭಾರತದ ಶಕ್ತಿ ಮತ್ತು ತಮ್ಮದೇ ಆದ ಗುರುತನ್ನು ವಿಶ್ವದ ಮುಂದೆ ಪ್ರದರ್ಶಿಸಿತು (ವಿವಿಧ ಜಿ-20 ಸಭೆಗಳನ್ನು ನಡೆಸುವ ಮೂಲಕ), ಅದರ ಪರಿಣಾಮವನ್ನು ಇಂದಿಗೂ ಜಾಗತಿಕ ವೇದಿಕೆಯಲ್ಲಿ ಕಾಣಬಹುದಾಗಿದೆ. ಅಲ್ಲದೆ, ಜಿ-20 ಶೃಂಗಸಭೆಯ ನಂತರ ಅನೇಕ ದೇಶಗಳ ಭಾಷಣಕಾರರು ಇಲ್ಲಿಗೆ ಬಂದಿದ್ದಾಗ ನಿಮ್ಮ ನಾಯಕತ್ವದಲ್ಲಿ ʻಪಿ-20ʼ ಶೃಂಗಸಭೆಯೂ ನಡೆಯಿತು. ನಾವು ಪ್ರಜಾಪ್ರಭುತ್ವದ ತಾಯಿಯಾದ ಭಾರತದ ಶ್ರೇಷ್ಠ ಸಂಪ್ರದಾಯವನ್ನು ಮತ್ತು ಶತಮಾನಗಳಿಂದ ನಾವು ಮುನ್ನಡೆಸಿದ ಪ್ರಜಾಪ್ರಭುತ್ವ ಮೌಲ್ಯಗಳನ್ನು ಮುಂದುವರಿಸಿಕೊಂಡು ಬಂದಿದ್ದೇವೆ. ವ್ಯವಸ್ಥೆಗಳು ಬದಲಾಗಿರಬಹುದು, ಆದರೆ ಭಾರತದ ಪ್ರಜಾಪ್ರಭುತ್ವದ ಮನೋಭಾವವು ಸದಾ ಹಾಗೇ ಉಳಿದಿದೆ, ಮತ್ತು ನೀವು ಆ ಸಂಗತಿಯನ್ನು ವಿಶ್ವದ ಭಾಷಣಕಾರರ ಮುಂದೆ ಅತ್ಯುತ್ತಮವಾಗಿ ಪ್ರಸ್ತುತಪಡಿಸಿದ್ದೀರಿ, ಪ್ರಜಾಪ್ರಭುತ್ವ ವ್ಯವಸ್ಥೆಗಳಲ್ಲಿ ಮತ್ತು ನಿಮ್ಮ ನಾಯಕತ್ವದಲ್ಲಿ ಭಾರತಕ್ಕೆ ಗೌರವವನ್ನು ತಂದುಕೊಟ್ಟಿದ್ದೀರಿ.

ಸನ್ಮಾನ್ಯ ಸಭಾಧ್ಯಕ್ಷರೇ,

ಬಹುಶಃ ನಮ್ಮ ಗೌರವಾನ್ವಿತ ಸಂಸದರು ಅಥವಾ ಮಾಧ್ಯಮಗಳು ಗಮನ ಹರಿಸದ ಒಂದು ವಿಷಯಕ್ಕಾಗಿ ನಾನು ನಿಮಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ. ಮಹಾನ್ ವ್ಯಕ್ತಿಗಳ ಜಯಂತಿಯಂದು ಅವರ ಪ್ರತಿಮೆಗಳಿಗೆ ಪುಷ್ಪ ನಮನ ಸಲ್ಲಿಸಲು ನಾವು ಹಳೆಯ ಸಂಸತ್ತಿನ ಭವನದಲ್ಲಿ(ಈಗಿನ ʻಸಂವಿಧಾನ ಸದನʼ) ಒಟ್ಟುಗೂಡುತ್ತಿದ್ದೆವು. ಆದರೆ ಇದು 10 ನಿಮಿಷಗಳ ಕಾರ್ಯಕ್ರಮವಾಗಿತ್ತು, ಮತ್ತು ನಂತರ ನಾವು ಹೊರಡುತ್ತಿದ್ದೆವು (ಸಂಸತ್ತಿನಲ್ಲಿ ನಮ್ಮ ಕರ್ತವ್ಯಗಳನ್ನು ನಿರ್ವಹಿಸಲು). ಈ ಮಹಾನ್ ವ್ಯಕ್ತಿಗಳಿಗಾಗಿ ನೀವು ದೇಶಾದ್ಯಂತ ಭಾಷಣ ಮತ್ತು ಪ್ರಬಂಧ ಸ್ಪರ್ಧೆಗಳ ಅಭಿಯಾನವನ್ನು ಪ್ರಾರಂಭಿಸಿದ್ದೀರಿ. ಅತ್ಯುತ್ತಮ ವಾಗ್ಮಿ ಮತ್ತು ಪ್ರಬಂಧಕಾರರಾಗಿ ಪ್ರಶಸ್ತಿ ಪಡೆದ ಪ್ರತಿ ರಾಜ್ಯದಿಂದ ಇಬ್ಬರು ಮಕ್ಕಳು ಆ ದಿನ ದೆಹಲಿಗೆ ಬಂದು ಮಹಾನ್ ವ್ಯಕ್ತಿಯ ಜನ್ಮ ದಿನಾಚರಣೆಯಂದು ಪುಷ್ಪ ನಮನ ಸಮಾರಂಭದಲ್ಲಿ ರಾಜಕೀಯ ನಾಯಕರೊಂದಿಗೆ ಹಾಜರಿದ್ದು ನಂತರ ಭಾಷಣಗಳನ್ನು ಮಾಡುತ್ತಾರೆ. ಅವರು ದೆಹಲಿಯ ಇತರ ಸ್ಥಳಗಳಿಗೆ ಭೇಟಿ ನೀಡಿ ಸಂಸದರ ಚಟುವಟಿಕೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಭಾರತದ ಸಂಸದೀಯ ಸಂಪ್ರದಾಯದೊಂದಿಗೆ ಲಕ್ಷಾಂತರ ವಿದ್ಯಾರ್ಥಿಗಳನ್ನು ನಿರಂತರವಾಗಿ ತೊಡಗಿಸಿಕೊಳ್ಳುವ ಉತ್ತಮ ಕೆಲಸವನ್ನು ನೀವು ಮಾಡಿದ್ದೀರಿ. ಮತ್ತು ಈ ಸಂಪ್ರದಾಯಕ್ಕೆ ನೀವು ಮನ್ನಣೆ ಪಡೆಯುತ್ತೀರಿ. ಭವಿಷ್ಯದಲ್ಲಿ ಪ್ರತಿಯೊಬ್ಬರೂ ಈ ಸಂಪ್ರದಾಯವನ್ನು ಹೆಮ್ಮೆಯಿಂದ ಮುಂದುವರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಇದಕ್ಕಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಸಂಸತ್ತಿನ ಗ್ರಂಥಾಲಯವನ್ನು ಬಳಸಬೇಕಾದವರು ಎಷ್ಟು ಮಟ್ಟಿಗೆ ಅದನ್ನು ಬಳಸಿಕೊಳ್ಳಲು ಸಾಧ್ಯವಾಯಿತು ಎಂದು ನಾನು ಹೇಳಲಾರೆ, ಆದರೆ ನೀವು ಸಾಮಾನ್ಯ ಜನರಿಗೆ ಅದರ ಬಾಗಿಲುಗಳನ್ನು ತೆರೆದಿದ್ದೀರಿ. ಜ್ಞಾನದ ಈ ಭಂಡಾರವನ್ನು, ಸಂಪ್ರದಾಯಗಳ ಪರಂಪರೆಯನ್ನು ಸಾರ್ವಜನಿಕರಿಗೆ ತೆರೆಯುವ ಮೂಲಕ ನೀವು ದೊಡ್ಡ ಸೇವೆಯನ್ನು ಸಲ್ಲಿಸಿದ್ದೀರಿ. ಈ ಉಪಕ್ರಮಕ್ಕಾಗಿ ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಕಾಗದರಹಿತ ಸಂಸತ್ತು ಮತ್ತು ಡಿಜಿಟಲೀಕರಣದ ಮೂಲಕ ನೀವು ಆಧುನಿಕ ತಂತ್ರಜ್ಞಾನವನ್ನು ನಮ್ಮ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿದ್ದೀರಿ. ಆರಂಭದಲ್ಲಿ, ಕೆಲವು ಸಹೋದ್ಯೋಗಿಗಳು ತೊಂದರೆಗಳನ್ನು ಎದುರಿಸಿದರು, ಆದರೆ ಈಗ ಎಲ್ಲರೂ ಅದಕ್ಕೆ ಒಗ್ಗಿಕೊಂಡಿದ್ದಾರೆ. ನೀವು ಇಲ್ಲಿ ಕುಳಿತು ನಿರಂತರವಾಗಿ ಏನಾದರೂ ಒಂದು ಕೆಲಸದಲ್ಲಿ ತೊಡಗಿರುತ್ತಿದ್ದನ್ನು ನಾನು ನೋಡುತ್ತಿದ್ದೆ. ನೀವು ಮಹತ್ವದ ಸಾಧನೆಯನ್ನು ಮಾಡಿದ್ದೀರಿ. ನೀವು ಶಾಶ್ವತ ವ್ಯವಸ್ಥೆಗಳನ್ನು ಸ್ಥಾಪಿಸಿದ್ದೀರಿ. ಇದಕ್ಕಾಗಿ ನಾನು ನನ್ನ ಪ್ರಾಮಾಣಿಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.

ಸನ್ಮಾನ್ಯ ಸಭಾಧ್ಯಕ್ಷರೇ,

ನಿಮ್ಮ ಪರಿಣತಿ ಮತ್ತು ಈ ಗೌರವಾನ್ವಿತ ಸಂಸತ್ ಸದಸ್ಯರ ಅರಿವು ಹಾಗೂ ಅವರ ಸಾಮೂಹಿಕ ಪ್ರಯತ್ನಗಳು 17ನೇ ಲೋಕಸಭೆಯ ಶೇ.97 ರಷ್ಟು ಉತ್ಪಾದಕತೆಗೆ ಕಾರಣವಾಗಿದೆ ಎಂದು ನಾನು ಹೇಳಬಲ್ಲೆ. 97 ರಷ್ಟು ಉತ್ಪಾದಕತೆ ಎಂಬುದು ಸ್ವತಃ ತೃಪ್ತಿಯ ವಿಷಯವಾಗಿದೆ. ಆದರೆ ನಾವು ಇಂದು 17ನೇ ಲೋಕಸಭೆಯ ಮುಕ್ತಾಯ ಮತ್ತು 18ನೇ ಲೋಕಸಭೆಯ ಆರಂಭದತ್ತ ಸಾಗುತ್ತಿರುವಾಗ (ಕೆಲವೇ ದಿನಗಳಲ್ಲಿ), ನಮ್ಮ ಉತ್ಪಾದಕತೆಯು ಶೇಕಡಾ 100 ಕ್ಕಿಂತ ಹೆಚ್ಚಾಗುವುದನ್ನು ಖಚಿತಪಡಿಸಿಕೊಳ್ಳಲು ನಾವು ಸಂಕಲ್ಪ ಮಾಡುತ್ತೇವೆ ಎಂದು ನಾನು ನಂಬುತ್ತೇನೆ. 17ನೇ ಲೋಕಸಭೆಯಲ್ಲಿ ಉತ್ಪಾದಕತೆಯು ಶೇಕಡಾ 100 ಕ್ಕಿಂತ ಹೆಚ್ಚು ಇದ್ದ ಏಳು ಅಧಿವೇಶನಗಳು ಸಹ ನಡೆದವು. ಮತ್ತು ನೀವು ರಾತ್ರಿಯಿಡೀ ಕುಳಿತು, ಸಂಸತ್ತಿನ ಪ್ರತಿಯೊಬ್ಬ ಸದಸ್ಯರ ಕಾಳಜಿಗಳನ್ನು ಸರ್ಕಾರದ ಗಮನಕ್ಕೆ ತರಲು ನಿರಂತರವಾಗಿ ಪ್ರಯತ್ನಗಳನ್ನು ಮಾಡುತ್ತಿದ್ದನ್ನು ನಾನು ನೋಡಿದ್ದೇನೆ. ಈ ಯಶಸ್ಸಿಗಾಗಿ ನಾನು ಎಲ್ಲಾ ಸನ್ಮಾನ್ಯ ಸದಸ್ಯರಿಗೆ ಮತ್ತು ಎಲ್ಲಾ ಸದನದ ನಾಯಕರಿಗೆ ಹೃತ್ಪೂರ್ವಕ ಕೃತಜ್ಞತೆ ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. 17ನೇ ಲೋಕಸಭೆಯ ಮೊದಲ ಅಧಿವೇಶನದಲ್ಲಿ, ಉಭಯ ಸದನಗಳು 30 ಮಸೂದೆಗಳನ್ನು ಅಂಗೀಕರಿಸಿದವು ಮತ್ತು ಇದು ಸ್ವತಃ ಒಂದು ದಾಖಲೆಯಾಗಿದೆ. 17ನೇ ಲೋಕಸಭೆಯಲ್ಲಿ ಹೊಸ ಮಾನದಂಡಗಳನ್ನು ಸಹ ನಿಗದಿಪಡಿಸಲಾಗಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಸ್ವಾತಂತ್ರ್ಯದ 75ನೇ ವರ್ಷಾಚರಣೆಯು ನಮ್ಮೆಲ್ಲರಿಗೂ ಬಹಳ ಅದೃಷ್ಟದ ವಿಷಯವಾಗಿದೆ, ಮತ್ತು ಇದು ನಿಜವಾಗಿಯೂ ನಮ್ಮ ಸಂಸತ್ತು ಪ್ರತಿಯೊಂದು ಅಂಶದಲ್ಲೂ ನಿರ್ಣಾಯಕ ನಾಯಕತ್ವದ ಪಾತ್ರವನ್ನು ವಹಿಸಿರುವ ಮಹತ್ವದ ಸಂದರ್ಭವಾಗಿದೆ. ತಮ್ಮ ಸಂಸತ್‌ ಕ್ಷೇತ್ರದಲ್ಲಿ, ಸ್ವಾತಂತ್ರ್ಯದ 75 ವರ್ಷಗಳ ಆಚರಣೆಯನ್ನು ಕೈಗೊಳ್ಳುವಲ್ಲಿ ಪಾತ್ರ ವಹಿಸದ ಸಂಸತ್ ಸದಸ್ಯರು ಬಹುಶಃ ಯಾರೂ ಇಲ್ಲ. ನಿಜವಾಗಿಯೂ, ರಾಷ್ಟ್ರವು ಸ್ವಾತಂತ್ರ್ಯದ 75ನೇ ವರ್ಷವನ್ನು ಪೂರ್ಣ ಉತ್ಸಾಹದಿಂದ ಆಚರಿಸಿತು. ಇದರಲ್ಲಿ ನಮ್ಮ ಗೌರವಾನ್ವಿತ ಸಂಸದರು ಮತ್ತು ಈ ಸಂಸತ್ತಿನ ಮಹತ್ವದ ಪಾತ್ರವನ್ನು ಕಡೆಗಣಿಸಲಾಗುವುದಿಲ್ಲ. ನಮ್ಮ ಸಂವಿಧಾನವನ್ನು ಜಾರಿಗೆ ತಂದ 75ನೇ ವಾರ್ಷಿಕೋತ್ಸವವು ಈ ಸಮಯದೊಂದಿಗೆ ಹೊಂದಿಕೆಯಾಗಿದೆ, ಮತ್ತು ಎಲ್ಲಾ ಗೌರವಾನ್ವಿತ ಸಂಸತ್ ಸದಸ್ಯರಿಗೆ ಅದರ ಭಾಗವಾಗಲು ಅವಕಾಶ ಸಿಕ್ಕಿದೆ. ಸಂವಿಧಾನದ ಜವಾಬ್ದಾರಿಗಳು ಇಲ್ಲಿಂದ ಪ್ರಾರಂಭವಾಗುತ್ತವೆ, ಮತ್ತು ಅವುಗಳೊಂದಿಗೆ ಸಂಬಂಧ ಹೊಂದಿರುವುದು ಅಂತರ್ಗತವಾಗಿ ಬಹಳ ಸ್ಪೂರ್ತಿದಾಯಕ ವಿಷಯವಾಗಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಈ ಅಧಿಕಾರಾವಧಿಯಲ್ಲಿ, ಗಮನಾರ್ಹ ಸುಧಾರಣೆಗಳು ನಡೆದಿವೆ, ಅವು ಕ್ರಾಂತಿಕಾರಿ ಪರಿವರ್ತನೆಗಳೂ ಹೌದು. 21ನೇ ಶತಮಾನದಲ್ಲಿ ಭಾರತದ ಬಲವಾದ ಅಡಿಪಾಯವು ಈ ಎಲ್ಲ ಅಂಶಗಳಲ್ಲಿ ಸ್ಪಷ್ಟವಾಗಿದೆ. ದೇಶವು ದೊಡ್ಡ ಪರಿವರ್ತನೆಯ ಕಡೆಗೆ ತ್ವರಿತ ಗತಿಯಲ್ಲಿ ಸಾಗಿದೆ, ಮತ್ತು ಇದರಲ್ಲಿ, ಸದನದ ಎಲ್ಲಾ ಸಹೋದ್ಯೋಗಿಗಳು ತಮ್ಮ ಭಾಗವಹಿಸುವಿಕೆಯೊಂದಿಗೆ ಅತ್ಯುತ್ತಮ ಮಾರ್ಗದರ್ಶನವನ್ನು ನೀಡಿದ್ದಾರೆ ಮತ್ತು ಗಮನಾರ್ಹ ಕೊಡುಗೆ ನೀಡಿದ್ದಾರೆ. ತಲೆಮಾರುಗಳ ನಿರೀಕ್ಷೆಯನ್ನು ಕೊನೆಗೊಳಿಸಿ, ದೀರ್ಘಕಾಲದಿಂದ ಕಾಯುತ್ತಿದ್ದ ಅನೇಕ ಬದಲಾವಣೆಗಳನ್ನು 17ನೇ ಲೋಕಸಭೆಯ ಮೂಲಕ ಸಾಧಿಸಲಾಗಿದೆ ಎಂದು ನಾವು ತೃಪ್ತಿಯಿಂದ ಹೇಳಬಹುದು. ಅನೇಕ ತಲೆಮಾರುಗಳು ಒಂದೇ ಸಂವಿಧಾನದ ಕನಸು ಕಂಡಿದ್ದವು, ಆದರೆ ಪ್ರತಿ ಕ್ಷಣವೂ ಬಿರುಕು, ಅಪಾಯ, ಅಡೆತಡೆ ಎದುರಾಯಿತು. 370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ, ಸದನವು ಸಂವಿಧಾನದ ಸಂಪೂರ್ಣ ಸಾಕಾರತೆಯನ್ನು ಸಂಪೂರ್ಣ ತೇಜಸ್ಸಿನಿಂದ ಪ್ರದರ್ಶಿಸಿದೆ. ಮತ್ತು ಸಂವಿಧಾನದ 75 ವರ್ಷಗಳನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ನಾನು ನಂಬುವುದೇನೆಂದರೆ... ಸಂವಿಧಾನವನ್ನು ರಚಿಸಿದ ಆ ಮಹಾಪುರುಷರ ಆತ್ಮಗಳು ಎಲ್ಲೇ ಇದ್ದರೂ, ನಾವು ಈ ಕಾರ್ಯವನ್ನು ಪೂರ್ಣಗೊಳಿಸಿರುವುದರಿಂದ ಅವರು ನಮ್ಮನ್ನು ಆಶೀರ್ವದಿಸುತ್ತಿರುತ್ತಾರೆ. ಜಮ್ಮು ಮತ್ತು ಕಾಶ್ಮೀರದ ಜನರು ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದರು. ಇಂದು, ಸಾಮಾಜಿಕ ನ್ಯಾಯಕ್ಕೆ ನಮ್ಮ ಬದ್ಧತೆಯನ್ನು ಪೂರೈಸುವ ಮೂಲಕ, ನಾವು ಜಮ್ಮು ಮತ್ತು ಕಾಶ್ಮೀರದ ನಮ್ಮ ಸಹೋದರ-ಸಹೋದರಿಯರನ್ನು ತಲುಪುತ್ತಿದ್ದೇವೆ ಎಂದು ನಮಗೆ ತೃಪ್ತಿ ಇದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಭಯೋತ್ಪಾದನೆ ದೇಶವನ್ನು ರಾಕ್ಷಸನಂತೆ ಕಾಡುತ್ತಿತ್ತು, ಪ್ರತಿದಿನ ದೇಶದ ಹೃದಯಭಾಗಕ್ಕೆ ಗುಂಡುಗಳನ್ನು ಹಾರಿಸಲಾಗುತ್ತಿತ್ತು, ತಾಯಿ ಭಾರತಿಯ ಭೂಮಿಗೆ ರಕ್ತದ  ಕಲೆ ಅಂಟಿತ್ತು. ದೇಶದ ಅನೇಕ ಧೈರ್ಯಶಾಲಿ ಮತ್ತು ಪ್ರತಿಭಾವಂತ ವ್ಯಕ್ತಿಗಳು ಭಯೋತ್ಪಾದನೆಗೆ ಬಲಿಯಾಗುತ್ತಿದ್ದರು. ನಾವು ಭಯೋತ್ಪಾದನೆಯ ವಿರುದ್ಧ ಕಠಿಣ ಕಾನೂನುಗಳನ್ನು ಜಾರಿಗೆ ತಂದಿದ್ದೇವೆ ಮತ್ತು ಇದೇ ಸದನವು ಅವುಗಳನ್ನು ಮಾಡಿದೆ. ಈ ಹಿಂದೆ ಇಂತಹ ಸಮಸ್ಯೆಗಳೊಂದಿಗೆ ಹೋರಾಡಿದವರು ಈಗ ಶಕ್ತಿಯನ್ನು ಪಡೆದಿದ್ದಾರೆ ಎಂದು ನಾನು ದೃಢವಾಗಿ ನಂಬುತ್ತೇನೆ. ಮಾನಸಿಕವಾಗಿ ಆತ್ಮವಿಶ್ವಾಸ ಹೆಚ್ಚಾಗಿದೆ. ಮತ್ತು ಭಾರತವು ಭಯೋತ್ಪಾದನೆಯಿಂದ ಸಂಪೂರ್ಣ ವಿಮೋಚನೆಯ ಭಾವನೆಯನ್ನು ಅನುಭವಿಸುತ್ತಿದೆ. ಜೊತೆಗೆ ಆ ಮತ್ತೊಂದು ಕನಸು ಸಹ ನನಸಾಗಿದೆ. ನಾವು 75 ವರ್ಷಗಳಿಂದ ಬ್ರಿಟಿಷರು ವಿಧಿಸಿದ್ದ ದಂಡ ಸಂಹಿತೆಯ ಅಡಿಯಲ್ಲಿ ಬದುಕುತ್ತಿದ್ದೆವು. ದೇಶವು 75 ವರ್ಷಗಳ ಕಾಲ ದಂಡ ಹಳೆಯ ಸಂಹಿತೆಯ ಅಡಿಯಲ್ಲಿ ಬದುಕಿತು, ಆದರೆ ಮುಂಬರುವ ಪೀಳಿಗೆಗಳು ನ್ಯಾಯ ಸಂಹಿತೆಯ ಅಡಿಯಲ್ಲಿ ಬದುಕುತ್ತವೆ ಎಂದು ನಾವು ಹೆಮ್ಮೆಯಿಂದ ದೇಶಕ್ಕೆ ಹೇಳಬಹುದು, ಹೊಸ ಪೀಳಿಗೆಗೆ ಹೇಳಬುದು, ನಿಮ್ಮ ಮೊಮ್ಮಕ್ಕಳಿಗೆ ಹೆಮ್ಮೆಯಿಂದ ಹೇಳಬಹುದು. ಮತ್ತು ಅದೇ ನಿಜವಾದ ಪ್ರಜಾಪ್ರಭುತ್ವ.

ಸನ್ಮಾನ್ಯ ಸಭಾಧ್ಯಕ್ಷರೇ,

ನಾನು ಇನ್ನೂ ಒಂದು ವಿಷಯಕ್ಕಾಗಿ ನಿಮ್ಮನ್ನು ಅಭಿನಂದಿಸಲು ಬಯಸುತ್ತೇನೆ. ಹೊಸ ಸಂಸತ್‌ ಭವನವು, ತನ್ನೆಲ್ಲಾ ಭವ್ಯತೆಯೊಂದಿಗೆ, ಭಾರತದ ಮೂಲಭೂತ ಮೌಲ್ಯಗಳನ್ನು ಬಲಪಡಿಸುವ ಕಾಯ್ದೆಯೊಂದಿಗೆ ಪ್ರಾರಂಭವಾಯಿತು, ಅದೇ ʻನಾರಿ ಶಕ್ತಿ ವಂದನ್ ಅಧಿನಿಯಮ್ʼ(ಮಹಿಳಾ ಸಬಲೀಕರಣ ಕಾಯ್ದೆ). ಈ ಹೊಸ ಸದನದಲ್ಲಿ ಚರ್ಚೆಗಳು ನಡೆದಾಗಲೆಲ್ಲಾ, ʻನಾರಿ ಶಕ್ತಿ ವಂದನ್ ಅಧಿನಿಯಮ್‌ʼ ಬಗ್ಗೆ ಪ್ರಸ್ತಾಪಿಸಲಾಗುತ್ತದೆ. ಇದು ಸಂಕ್ಷಿಪ್ತ ಅಧಿವೇಶನವಾಗಿದ್ದರೂ, ಅದು ದೂರಗಾಮಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿವೇಶನವಾಗಿತ್ತು. ಈ ಹೊಸ ಸದನದ ಪರಿಶುದ್ಧತೆಯ ಪ್ರಜ್ಞೆ ಆ ಕ್ಷಣದಿಂದಲೇ ಪ್ರಾರಂಭವಾಯಿತು, ಇದು ನಮಗೆ ಹೊಸ ಶಕ್ತಿಯನ್ನು ನೀಡುತ್ತದೆ. ಇದರ ಪರಿಣಾಮವಾಗಿ, ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ನಮ್ಮ ತಾಯಂದಿರು ಮತ್ತು ಸಹೋದರಿಯರು ಇಲ್ಲಿ ಕುಳಿತಾಗ, ದೇಶಕ್ಕೆ ಹೆಮ್ಮೆಯ ಭಾವನೆ ಮೂಡುತ್ತದೆ. ನಮ್ಮ ಮುಸ್ಲಿಂ ಸಹೋದರಿಯರು ತ್ರಿವಳಿ ತಲಾಖ್‌ನಿಂದ ಪರಿಹಾರಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದ್ದರು. ನ್ಯಾಯಾಲಯಗಳು ಅವರ ಪರವಾಗಿ ತೀರ್ಪು ನೀಡಿದ್ದವು, ಆದರೆ ಅವರು ತಮ್ಮ ಹಕ್ಕುಗಳನ್ನು ಪಡೆಯುತ್ತಿರಲಿಲ್ಲ. ಅವರು ಕಷ್ಟಗಳನ್ನು ಸಹಿಸಿಕೊಳ್ಳಬೇಕಾಗಿತ್ತು. ಕೆಲವರು ಇದನ್ನು ಬಹಿರಂಗವಾಗಿ, ಕೆಲವರು ಪರೋಕ್ಷವಾಗಿ ಹೇಳುತ್ತಿದ್ದರು. ಆದರೆ 17ನೇ ಲೋಕಸಭೆಯು ʻತ್ರಿವಳಿ ತಲಾಖ್‌ʼನಿಂದ ಅವರನ್ನು ಮುಕ್ತಗೊಳಿಸುವ ಅತ್ಯಂತ ಮಹತ್ವದ ಕೆಲಸವನ್ನು ಮಾಡಿದೆ. ಎಲ್ಲಾ ಗೌರವಾನ್ವಿತ ಸದಸ್ಯರು, ತಮ್ಮ ಅಭಿಪ್ರಾಯಗಳು ಅಥವಾ ನಿರ್ಧಾರಗಳನ್ನು ಲೆಕ್ಕಿಸದೆ, ಈ ಹೆಣ್ಣುಮಕ್ಕಳಿಗೆ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ನಾವು ಇಲ್ಲಿ ಹಾಜರಿದ್ದೆವು ಎಂದು ಮುಂದೊಂದು ದಿನ ಹೇಳುತ್ತಾರೆ. ತಲೆಮಾರುಗಳಿಗೆ ಮಾಡಿದ ಅನ್ಯಾಯವನ್ನು ನಾವು ಸರಿಪಡಿಸಿದ್ದೇವೆ, ಮತ್ತು ಈ ಸಹೋದರಿಯರು ನಮ್ಮನ್ನು ಆಶೀರ್ವದಿಸುತ್ತಿದ್ದಾರೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಮುಂಬರುವ 25 ವರ್ಷಗಳು ನಮ್ಮ ದೇಶಕ್ಕೆ ಬಹಳ ಮುಖ್ಯ. ರಾಜಕೀಯದಲ್ಲಿ ಜಂಜಾಟ ಇದ್ದೇ ಇರುತ್ತದೆ. ರಾಜಕೀಯ ರಂಗದಲ್ಲಿರುವವರಿಗೆ ಆಕಾಂಕ್ಷೆಗಳು ಇದ್ದೇ ಇರುತ್ತವೆ. ಆದರೆ ದೇಶದ ನಿರೀಕ್ಷೆಗಳು, ದೇಶದ ಕಾಳಜಿಗಳು ಮತ್ತು ದೇಶದ ಕನಸುಗಳು ಇಂದು ದೇಶದ ಸಂಕಲ್ಪವಾಗಿ ಮಾರ್ಪಟ್ಟಿವೆ. ಆದ್ದರಿಂದ ಮುಂದಿನ 25 ವರ್ಷಗಳಲ್ಲಿ ದೇಶವು ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸುತ್ತದೆ. 1930ರಲ್ಲಿ ʻಉಪ್ಪಿನ ಸತ್ಯಾಗ್ರಹʼ ನಡೆದಾಗ, ಮಹಾತ್ಮ ಗಾಂಧಿಯವರು ʻದಂಡಿ ಯಾತ್ರೆʼ ಕೈಗೊಂಡಾಗ ಜನರು ಅಷ್ಟೊಂದು ಉತ್ಸಾಹ ತೋರಿರಲಿಲ್ಲ. ಅದು ಸ್ವದೇಶಿ ಚಳವಳಿಯಾಗಿರಲಿ, ಸತ್ಯಾಗ್ರಹದ ಸಂಪ್ರದಾಯವಾಗಿರಲಿ ಅಥವಾ ಉಪ್ಪಿನ ಸತ್ಯಾಗ್ರಹವೇ ಆಗಿರಲಿ, ಆ ಸಮಯದಲ್ಲಿ ಈ ಘಟನೆಗಳು ಸಣ್ಣದಾಗಿ ತೋರುತ್ತಿದ್ದವು. ಆದರೆ 1947ರಲ್ಲಿ, ಆ 25 ವರ್ಷಗಳ ಅವಧಿಯು ಈಗ ನಾವು ಸ್ವತಂತ್ರವಾಗಿ ಬದುಕಬೇಕು ಎಂಬ ಮನೋಭಾವವನ್ನು ದೇಶದ ಜನರಲ್ಲಿ ಹುಟ್ಟುಹಾಕಿತು. ಇಂದು, ದೇಶದಲ್ಲಿ ಅದೇ ಮನೋಭಾವ ಬೇರೂರುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಪ್ರತಿ ಬೀದಿ ಮೂಲೆಯಿಂದ, ಪ್ರತಿ ಮಗುವಿನ ಬಾಯಲ್ಲೂ, 25 ವರ್ಷಗಳಲ್ಲಿ ನಾವು 'ವಿಕಸಿತ ಭಾರತʼ ಮಾಡುತ್ತೇವೆ ಎಂಬ ಮಾತು ಕೇಳಿಸುತ್ತಿದೆ. ಆದ್ದರಿಂದ, ಈ 25 ವರ್ಷಗಳು ನನ್ನ ದೇಶದ ಯುವ ಶಕ್ತಿಗೆ ಅತ್ಯಂತ ಪ್ರಮುಖ ಅವಧಿಯಾಗಿದೆ. ಮತ್ತು 25 ವರ್ಷಗಳಲ್ಲಿ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕೆಂದು ಬಯಸದವರು ನಮ್ಮಲ್ಲಿ ಯಾರೂ ಇರುವುದಿಲ್ಲ. ಪ್ರತಿಯೊಬ್ಬರಿಗೂ ಒಂದು ಕನಸು ಇದೆ, ಕೆಲವರು ಈಗಾಗಲೇ ತಮ್ಮ ಕನಸನ್ನು ಸಂಕಲ್ಪವನ್ನಾಗಿ ಮಾಡಿಕೊಂಡಿದ್ದಾರೆ, ಬಹುಶಃ ಕೆಲವರು ಅದನ್ನು ನಿರ್ಣಯವನ್ನಾಗಿ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು, ಆದರೆ ಎಲ್ಲರೂ ಕೈಜೋಡಿಸಬೇಕಾಗುತ್ತದೆ. ಕೈಜೋಡಿಸಲು ಸೇರಲು ಸಾಧ್ಯವಾಗದವರು ಮತ್ತು ಇನ್ನೂ ಜೀವಂತವಾಗಿರುವವರು ಖಂಡಿತವಾಗಿಯೂ ಪ್ರತಿಫಲವನ್ನು ಪಡೆಯುತ್ತಾರೆ, ಇದು ನನ್ನ ವಿಶ್ವಾಸ.

ಸನ್ಮಾನ್ಯ ಸಭಾಧ್ಯಕ್ಷರೇ,

ಕಳೆದ 5 ವರ್ಷಗಳಲ್ಲಿ ಯುವಕರಿಗಾಗಿ ಐತಿಹಾಸಿಕ ಕಾನೂನುಗಳನ್ನು ಜಾರಿಗೆ ತರಲಾಗಿದೆ. ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತಂದಿರುವುದರಿಂದ ಯುವಕರಿಗೆ ಹೊಸ ಅವಕಾಶಗಳು ತೆರೆದುಕೊಂಡಿವೆ.  ನಮ್ಮ ಯುವಕರನ್ನು ಚಿಂತೆಗೀಡು ಮಾಡುತ್ತಿದ್ದ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಸಮಸ್ಯೆಗಳನ್ನು ಬಹಳ ಕಟ್ಟುನಿಟ್ಟಾಗಿ ಪರಿಹರಿಸಲಾಗಿದೆ. ಎಲ್ಲಾ ಗೌರವಾನ್ವಿತ ಸದಸ್ಯರು, ದೇಶದ ಯುವಕರ ಭಾವನೆಗಳನ್ನು ಅರ್ಥಮಾಡಿಕೊಂಡಿದ್ದಾರೆ ಮತ್ತು ವ್ಯವಸ್ಥೆಯ ಬಗ್ಗೆ ಅವರ ಮನಸ್ಸಿನಲ್ಲಿರುವ ಪ್ರಶ್ನೆಗಳು ಅಥವಾ ಕಾಳಜಿಗಳನ್ನು ಪರಿಹರಿಸಲು ಬಹಳ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಸಂಶೋಧನೆಯಿಲ್ಲದೆ ಯಾವುದೇ ಮಾನವ ಸಮಾಜವು ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂಬುದು ನಿಜ. ನಿರಂತರ ವಿಕಾಸಕ್ಕೆ ಸಂಶೋಧನೆ ಅತ್ಯಗತ್ಯ. ಸಾವಿರಾರು ವರ್ಷಗಳ ಮಾನವಕುಲದ ಇತಿಹಾಸವು ಪ್ರತಿ ಯುಗದಲ್ಲೂ ಸಂಶೋಧನೆ ನಡೆಯುತ್ತಿದೆ ಎಂಬುದಕ್ಕೆ ಪುರಾವೆ ಹೊಂದಿದೆ. ಇದು ಜೀವನದ ಪ್ರಗತಿ ಮತ್ತು ವಿಸ್ತರಣೆಗೆ ಕಾರಣವಾಗುತ್ತದೆ. ಸಂಶೋಧನೆಯನ್ನು ಉತ್ತೇಜಿಸಲು ಕಾನೂನು ಚೌಕಟ್ಟನ್ನು ಔಪಚಾರಿಕವಾಗಿ ಸ್ಥಾಪಿಸುವ ಮೂಲಕ ಈ ಸದನವು ಮಹತ್ವದ ಕೆಲಸ ಮಾಡಿದೆ. ʻನ್ಯಾಷನಲ್ ರಿಸರ್ಚ್ ಫೌಂಡೇಶನ್ʼ, ಆಗಾಗ್ಗೆ ದೈನಂದಿನ ರಾಜಕೀಯ ಚರ್ಚೆಗಳಲ್ಲಿ ಸ್ಥಾನ ಪಡೆಯದಿದ್ದರೂ, ದೂರಗಾಮಿ ಪರಿಣಾಮಗಳನ್ನು ಬೀರುತ್ತದೆ. ಮತ್ತು ಇದು 17ನೇ ಲೋಕಸಭೆ ಕೈಗೊಂಡ ಬಹಳ ಮುಖ್ಯವಾದ ಕಾರ್ಯವಾಗಿದೆ. ನಮ್ಮ ಯುವಕರ ಪ್ರತಿಭೆಯಿಂದಾಗಿ, ನಮ್ಮ ದೇಶವು ವಿಶ್ವಾದ್ಯಂತ ಸಂಶೋಧನೆಯ ಕೇಂದ್ರವಾಗಬಹುದು ಎಂದು ನಾನು ದೃಢವಾಗಿ ನಂಬುತ್ತೇನೆ. ನಮ್ಮ ಯುವಕರ ಪ್ರತಿಭೆ ಎಷ್ಟಿದೆಯೆಂದರೆ, ಇಂದಿಗೂ, ಅನೇಕ ಜಾಗತಿಕ ಕಂಪನಿಗಳು ಭಾರತದಲ್ಲಿ ತಮ್ಮ ನಾವೀನ್ಯತೆ/ಆವಿಷ್ಕಾರ ಕೆಲಸಗಳನ್ನು ನಡೆಸುತ್ತಿವೆ. ನಮ್ಮ ದೇಶವು ೀ ಈ ಕ್ಷೇತ್ರದ ಪ್ರಮುಖ ಕೇಂದ್ರವಾಗಲಿದೆ, ಅದರ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ನಮ್ಮ ಮೂಲಭೂತ ಅಗತ್ಯಗಳು 21ನೇ ಶತಮಾನದಲ್ಲಿ ಸಂಪೂರ್ಣ ಪರಿವರ್ತನೆಗೆ ಒಳಗಾಗುತ್ತಿವೆ. ನಿನ್ನೆಯವರೆಗೆ ಯಾವುದೇ ಮೌಲ್ಯವಿಲ್ಲದ, ಅದರ ಬಗ್ಗೆ ಗಮನ ಹರಿಸದ ವಿಷಯವು ಈಗ ಬಹಳ ಮೌಲ್ಯಯುತವಾಗಿದೆ. ಡೇಟಾ...ಡೇಟಾದ ಸಾಮರ್ಥ್ಯದ ಬಗ್ಗೆ ಜಾಗತಿಕವಾಗಿ ಚರ್ಚೆ ನಡೆಯುತ್ತಿದೆ. ಡೇಟಾ ಸಂರಕ್ಷಣಾ ಮಸೂದೆಯನ್ನು ಪರಿಚಯಿಸುವ ಮೂಲಕ, ನಾವು ಇಡೀ ಭವಿಷ್ಯದ ಪೀಳಿಗೆಯ ಸುರಕ್ಷತೆಯನ್ನು ಖಚಿತಪಡಿಸಿದ್ದೇವೆ. ನಾವು ಇಡೀ ಭವಿಷ್ಯದ ಪೀಳಿಗೆಗೆ ಹೊಸ ಸಾಧನವನ್ನು ಒದಗಿಸಿದ್ದೇವೆ, ಅದರ ಆಧಾರದ ಮೇಲೆ ಅವರು ತಮ್ಮ ಭವಿಷ್ಯವನ್ನು ನಿರ್ಮಿಸಲು ಅದನ್ನು ಸರಿಯಾಗಿ ಬಳಸಿಕೊಳ್ಳುತ್ತಾರೆ. ಮತ್ತು ʻಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆʼಯು ನಮ್ಮ ದೇಶದ ಯುವಕರಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಜನರಲ್ಲಿ ಆಸಕ್ತಿಯನ್ನು ಹುಟ್ಟುಹಾಕಿದೆ. ಪ್ರಪಂಚದಾದ್ಯಂತ ವಿವಿಧ ದೇಶಗಳು ಇದರ ಬಗ್ಗೆ ಅಧ್ಯಯನ ಮಾಡುತ್ತಿವೆ. ಅವರು ತಮ್ಮ ಹೊಸ ವ್ಯವಸ್ಥೆಗಳನ್ನು ಅದಕ್ಕೆ ಅನುಗುಣವಾಗಿ ಅಳವಡಿಸಿಕೊಳ್ಳಲು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಡೇಟಾವನ್ನು ಹೇಗೆ ಬಳಸಬೇಕು ಎಂಬುದರ ಬಗ್ಗೆಯೂ ಮಾರ್ಗಸೂಚಿಗಳಿವೆ. ಜನರು ಚಿನ್ನದ ಗಣಿ, ಹೊಸ ತೈಲ ನಿಕ್ಷೇಪ ಎಂದು ಬಣ್ಣಿಸುವ ಡೇಟಾದ ರಕ್ಷಣೆಯನ್ನು ನಿರ್ವಹಿಸುವ ಮೂಲಕ ಅದರ ಸಾಮರ್ಥ್ಯವನ್ನು ಹೆಚ್ಚಿಸಬಹುದು. ಭಾರತವು ಈ ಸಾಮರ್ಥ್ಯವನ್ನು ಹೊಂದಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಏಕೆಂದರೆ ನಮ್ಮದು ವೈವಿಧ್ಯತೆಯಲ್ಲಿ ಸಮೃದ್ಧವಾದ ದೇಶವಾಗಿದೆ. ನಮ್ಮೊಂದಿಗಿರುವ ಮಾಹಿತಿ ಮತ್ತು ಡೇಟಾ...ನಮ್ಮ ರೈಲ್ವೆ ಪ್ರಯಾಣಿಕರ ಡೇಟಾವನ್ನು ಪರಿಗಣಿಸಿ... ಇದು ಜಗತ್ತಿಗೆ ದೊಡ್ಡ ಸಂಶೋಧನೆಯ ವಿಷಯವಾಗಬಹುದು. ನಾವು ಅದರ ಶಕ್ತಿಯನ್ನು ಗುರುತಿಸಿದ್ದೇವೆ ಮತ್ತು ಈ ಕಾನೂನು ವ್ಯವಸ್ಥೆಯನ್ನು ಒದಗಿಸಿದ್ದೇವೆ.

ಸನ್ಮಾನ್ಯ ಸಭಾಧ್ಯಕ್ಷರೇ,

ನೀರು, ಭೂಮಿ ಮತ್ತು ಆಕಾಶದಂತಹ ಈ ಕ್ಷೇತ್ರಗಳ ಬಗ್ಗೆ ಚರ್ಚೆಗಳು ಶತಮಾನಗಳಿಂದ ನಡೆಯುತ್ತಿವೆ. ಆದರೆ ಈಗ, ಜಗತ್ತು ಎದುರಿಸುತ್ತಿರುವ ಬಿಕ್ಕಟ್ಟನ್ನು ಪರಿಗಣಿಸಿ ಕಡಲ ಶಕ್ತಿ, ಬಾಹ್ಯಾಕಾಶ ಶಕ್ತಿ ಮತ್ತು ಸೈಬರ್ ಶಕ್ತಿ ಒಡ್ಡುವ ಸವಾಲುಗಳನ್ನು ಎದುರಿಸುವ ಅವಶ್ಯಕತೆಯಿದೆ. ಜಗತ್ತು ಚಿಂತನಶೀಲ ಪರಿಣಾಮಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವ ಸಮದಯದಲ್ಲಿ, ನಾವು ಈ ಕ್ಷೇತ್ರಗಳಲ್ಲಿ ಸಕಾರಾತ್ಮಕ ಸಾಮರ್ಥ್ಯಗಳನ್ನು ಉತ್ಪಾದಿಸಬೇಕಾಗಿದೆ ಮತ್ತು ನಕಾರಾತ್ಮಕ ಶಕ್ತಿಗಳಿಂದ ಸವಾಲುಗಳನ್ನು ಎದುರಿಸಲು ನಮ್ಮನ್ನು ಸಶಕ್ತಗೊಳಿಸಬೇಕಾಗಿದೆ. ಆದ್ದರಿಂದ, ಬಾಹ್ಯಾಕಾಶಕ್ಕೆ ಸಂಬಂಧಿಸಿದ ಸುಧಾರಣೆಗಳು ಬಹಳ ಅಗತ್ಯವಾಗಿದ್ದವು, ಮತ್ತು ದೂರದೃಷ್ಟಿಯೊಂದಿಗೆ, ನಮ್ಮ ದೇಶದಲ್ಲಿ ಬಾಹ್ಯಾಕಾಶ ಸುಧಾರಣೆಯ ಕೆಲಸ ಪೂರ್ಣಗೊಂಡಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

17ನೇ ಲೋಕಸಭೆಯ ಗೌರವಾನ್ವಿತ ಸದಸ್ಯರು ದೇಶವು ಕೈಗೊಂಡ ಆರ್ಥಿಕ ಸುಧಾರಣೆಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ, ಸಾರ್ವಜನಿಕರು ಅನಗತ್ಯವಾಗಿ ಸಾವಿರಾರು ಕಡ್ಡಾಯ ಅನುಸರಣೆಗಳ ಬಲೆಯಲ್ಲಿ ಸಿಲುಕಿದ್ದರು. ಹಲವು ವರ್ಷಗಳಿಂದ ಬೆಳೆದುಬಂದಿದ್ದ ವಿಕೃತ ಆಡಳಿತ ವ್ಯವಸ್ಥೆಗಳನ್ನು ಬದಲಾಯಿಸಲಾಗಿದೆ ಎಂಬುದು ಬಹಳ ಹೆಮ್ಮೆಯ ವಿಷಯವಾಗಿದೆ ಮತ್ತು ಇದರ ಹೆಚ್ಚಿನ ಶ್ರೇಯಸ್ಸು ಈ ಸದನಕ್ಕೂ ಸಲ್ಲುತ್ತದೆ. ಈ ರೀತಿಯ ಅನುಸರಣೆಗಳು ಸಾಮಾನ್ಯ ಜನರಿಗೆ ಹೊರೆಯಾಗುತ್ತವೆ. ನಾನು ಒಮ್ಮೆ ಕೆಂಪು ಕೋಟೆಯಿಂದ ಹೇಳಿದಂತೆ, ನಾವು "ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ" ಬಗ್ಗೆ ಮಾತನಾಡುವಾಗ, ಸರ್ಕಾರವು ಜನರ ಜೀವನದಿಂದ ಎಷ್ಟು ಬೇಗ ನಿರ್ಗಮಿಸುತ್ತದೆಯೋ ಅಷ್ಟು ಪ್ರಜಾಪ್ರಭುತ್ವವು ಹೆಚ್ಚು ಬಲಗೊಳ್ಳುತ್ತದೆ. ಇದನ್ನು ನಾನು ನಿಜವಾಗಿಯೂ ನಂಬುತ್ತೇನೆ. ಜನರ ದೈನಂದಿನ ಜೀವನದ ಪ್ರತಿಯೊಂದು ತಿರುವಿನಲ್ಲಿ ಸರ್ಕಾರ ಏಕೆ ಮಧ್ಯಪ್ರವೇಶಿಸಬೇಕು? ಹೌದು, ಅಗತ್ಯವಿರುವವರಿಗೆ ಸರ್ಕಾರ ಯಾವಾಗಲೂ ಇರುತ್ತದೆ, ಆದರೆ ಸರ್ಕಾರದ ಹಸ್ತಕ್ಷೇಪವು ಜನರ ಜೀವನದಲ್ಲಿ ಅಡಚಣೆಯಾದರೆ ಪ್ರಜಾಪ್ರಭುತ್ವವು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಆದ್ದರಿಂದ, ಸಾಮಾನ್ಯ ನಾಗರಿಕರ ಜೀವನದಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು ನಮ್ಮ ಗುರಿಯಾಗಿರಬೇಕು, ಆ ಮೂಲಕ ಸಮೃದ್ಧ ಪ್ರಜಾಪ್ರಭುತ್ವವನ್ನು ಜಗತ್ತಿಗೆ ಪ್ರಸ್ತುತಪಡಿಸಬೇಕು. ನಾವು ಆ ಕನಸನ್ನು ನನಸು ಮಾಡುತ್ತೇವೆ.

ಸನ್ಮಾನ್ಯ ಸಭಾಧ್ಯಕ್ಷರೇ,

ʻಕಂಪನಿಗಳ ಕಾಯ್ದೆʼ ಮತ್ತು ʻಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಕಾಯ್ದೆʼ ಸೇರಿದಂತೆ 60ಕ್ಕೂ ಹೆಚ್ಚು ಅನಗತ್ಯ ಕಾನೂನುಗಳನ್ನು ನಾವು ರದ್ದುಪಡಿಸಿದ್ದೇವೆ. ವ್ಯಾಪಾರವನ್ನು ಸುಲಭಗೊಳಿಸಲು ಇದು ನಿರ್ಣಾಯಕ ಅವಶ್ಯಕತೆಯಾಗಿದೆ. ಏಕೆಂದರೆ ದೇಶವು ಪ್ರಗತಿ ಸಾಧಿಸಬೇಕಾದರೆ, ಅದು ಹಲವಾರು ಅಡೆತಡೆಗಳನ್ನು ನಿವಾರಿಸಬೇಕು. ನಮ್ಮ ಅನೇಕ ಕಾನೂನುಗಳು ಹೇಗಿದ್ದವೆಂದರೆ ಜನರು ಕ್ಷುಲ್ಲಕ ಕಾರಣಗಳಿಗಾಗಿ ಜೈಲಿಗೆ ಹೋಗುತ್ತಿದ್ದರು. ಉದಾಹರಣೆಗೆ, ಕಾರ್ಖಾನೆಯ ವಿಶ್ರಾಂತಿ ಕೊಠಡಿಯನ್ನು ಪ್ರತಿ ಆರು ತಿಂಗಳಿಗೊಮ್ಮೆ ವೈಟ್ ವಾಶ್ ಮಾಡದಿದ್ದರೆ, ಅದಕ್ಕೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿತ್ತು. ಅಂತಹ ದೊಡ್ಡ ಕಂಪನಿಯ ಮಾಲೀಕರು ಎಷ್ಟೇ ದೊಡ್ಡವರಾಗಿದ್ದರೂ ಸಹ ಇದು ಅನ್ವಯವಾಗುತ್ತಿತ್ತು. ಈಗ, ತಮ್ಮನ್ನು ಎಡ-ಉದಾರವಾದಿಗಳು ಎಂದು ಕರೆದುಕೊಳ್ಳುವವರನ್ನು, ಅವರ ಸಿದ್ಧಾಂತವನ್ನು ಹಾಘೂ ಈ ದೇಶದಲ್ಲಿ 'ಕುಮಾರ್ ಶಾಹಿ' ಯುಗವನ್ನು ತೊಡೆದುಹಾಕುವ ವಿಶ್ವಾಸವನ್ನು ನಾವು ಹೊಂದಿರಬೇಕು. ಆದ್ದರಿಂದ, 17ನೇ ಲೋಕಸಭೆಯು ಸಾರ್ವಜನಿಕ ನಂಬಿಕೆಯನ್ನು ಹೆಚ್ಚಿಸುವಲ್ಲಿ ಶ್ಲಾಘನೀಯ ಕೆಲಸ ಮಾಡಿದೆ. ʻಜನ ವಿಶ್ವಾಸ್ ಕಾಯ್ದೆʼಯ ಬಗ್ಗೆ ಮಾತನಾಡೋಣ. ಈ ಕಾಯ್ದೆಯಡಿ 180ಕ್ಕೂ ಹೆಚ್ಚು ನಿಬಂಧನೆಗಳನ್ನು ನಿರಪರಾಧಿಕರಣಗೊಳಿಸಲಾಗಿದೆ ಎಂದು ನಾನು ಅರಿತಿದ್ದೇನೆ. ಕ್ಷುಲ್ಲಕ ವಿಷಯಗಳಿಗೆ ಜನರನ್ನು ಹೇಗೆ ಜೈಲಿಗೆ ತಳ್ಳಲಾಗುತ್ತದೆ ಎಂಬುದರ ಬಗ್ಗೆ ನಾನು ಮಾತನಾಡಿದೆ. ಇವುಗಳನ್ನು ಅಪರಾಧಮುಕ್ತಗೊಳಿಸುವ ಮೂಲಕ, ನಾವು ನಾಗರಿಕರನ್ನು ಸಬಲೀಕರಣಗೊಳಿಸಿದ್ದೇವೆ. ಈ ಸದನವು ಆ ಕೆಲಸವನ್ನು ಮಾಡಿದೆ, ಗೌರವಾನ್ವಿತ ಸದಸ್ಯರು ಅದನ್ನು ಮಾಡಿದ್ದಾರೆ. ನ್ಯಾಯಾಲಯಗಳ ಜಟಿಲತೆಗಳಿಂದ ಜೀವಗಳನ್ನು ಉಳಿಸುವುದು, ನ್ಯಾಯಾಲಯಗಳ ಹೊರಗಿನ ವಿವಾದಗಳಿಂದ ಜನರನ್ನು ಅವರನ್ನು ಮುಕ್ತಗೊಳಿಸುವುದು ಬಹಳ ಮುಖ್ಯವಾದ ಕೆಲಸ, ಮತ್ತು ಆ ದಿಕ್ಕಿನಲ್ಲಿ ಮಧ್ಯಸ್ಥಿಕೆ ಕಾನೂನುಗಳು ಸಹ ಪ್ರಮುಖ ಸಾಧನವಾಗಿವೆ. ಮತ್ತು ಗೌರವಾನ್ವಿತ ಸದಸ್ಯರು ಈ ವಿಚಾರದಲ್ಲಿಯೂ ಮಹತ್ವದ ಪಾತ್ರ ವಹಿಸಿದ್ದಾರೆ. ಸದಾ ನೇಪಥ್ಯದಲ್ಲೇ  ಇದ್ದವರು, ಯಾರ ಗಮನಕ್ಕೂ ಬಾರದವರು ಸರ್ಕಾರದ ಮಹತ್ವವನ್ನು ಅರಿತುಕೊಂಡರು. ಹೌದು, ಕೋವಿಡ್ ಸಮಯದಲ್ಲಿ ಉಚಿತ ಲಸಿಕೆಗಳು ಲಭ್ಯವಿದ್ದಾಗ ಅವರು ಸರ್ಕಾರದ ಮಹತ್ವವನ್ನು ಅರ್ಥಮಾಡಿಕೊಂಡರು. ಅಲ್ಲಿ ಸರ್ಕಾರ ಇರುವುದು ಮುಖ್ಯವಾಗಿತ್ತು, ಮತ್ತು ಇದು ಸಾಮಾನ್ಯ ಜನರ ಜೀವನದಲ್ಲಿ ಬಹಳ ಅವಶ್ಯಕವಾಗಿದೆ. ಅಸಹಾಯಕತೆಯ ಅನುಭವ ಈಗ ಉದ್ಭವಿಸಲಾರದು.

ತೃತೀಯ ಲಿಂಗಿ ಸಮುದಾಯವು ತಾರತಮ್ಯವನ್ನು ಅನುಭವಿಸುತ್ತಿತ್ತು. ಮತ್ತು ಅವರು ಪದೇ ಪದೇ ತಾರತಮ್ಯಕ್ಕೊಳಗಾದಾಗ, ಅವರೊಳಗಿನ ವಿರೂಪಗಳ ಸಾಧ್ಯತೆಯೂ ಹೆಚ್ಚಾಯಿತು... ಆದರೆ, ನಾವು ಅಂತಹ ವಿಷಯಗಳಿಂದ ದೂರವಿರುತ್ತಿದ್ದೆವು. 17ನೇ ಲೋಕಸಭೆಯ ಎಲ್ಲಾ ಗೌರವಾನ್ವಿತ ಸದಸ್ಯರು ತೃತೀಯ ಲಿಂಗಿಗಳ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದರು ಮತ್ತು ಅವರ ಜೀವನವನ್ನು ಉತ್ತಮಗೊಳಿಸಲು ಕೊಡುಗೆ ನೀಡಿದರು. ಮತ್ತು ಇಂದು, ತೃತೀಯ ಲಿಂಗಿ ವ್ಯಕ್ತಿಗಳಿಗಾಗಿ ಭಾರತ್ ಮಾಡಿದ ಕೆಲಸ ಮತ್ತು ಅವರಿಗಾಗಿ ಮಾಡಿದ ನಿರ್ಧಾರಗಳು ವಿಶ್ವಾದ್ಯಂತ ಚರ್ಚಿಸಲ್ಪಡುತ್ತಿವೆ. ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ಅವರು ಗರ್ಭಿಣಿಯಾದಾಗ 26 ವಾರಗಳ ಹೆರಿಗೆ ರಜೆ ನೀಡಲಾಗುತ್ತಿದೆ ಎಂದು ನಾವು ಹೇಳಿದಾಗ ಜಗತ್ತು ಆಶ್ಚರ್ಯಚಕಿತವಾಗುತ್ತದೆ... ವಿಶ್ವದ ಶ್ರೀಮಂತ ದೇಶಗಳು ಸಹ ಆಶ್ಚರ್ಯಚಕಿತವಾಗಿವೆ. ಇದರರ್ಥ ಈ ಪ್ರಗತಿಪರ ನಿರ್ಧಾರಗಳನ್ನು ಈ 17ನೇ ಲೋಕಸಭೆಯಲ್ಲಿ ಇಲ್ಲಿ ತೆಗೆದುಕೊಳ್ಳಲಾಗಿದೆ. ನಾವು ತೃತೀಯ ಲಿಂಗಿ ವ್ಯಕ್ತಿಗಳಿಗೆ ಒಂದು ಗುರುತನ್ನು ನೀಡಿದ್ದೇವೆ. ಇಲ್ಲಿಯವರೆಗೆ, ಸುಮಾರು 16-17 ಸಾವಿರ ತೃತೀಯ ಲಿಂಗಿ ವ್ಯಕ್ತಿಗಳಿಗೆ ಗುರುತಿನ ಚೀಟಿಗಳನ್ನು ನೀಡಲಾಗಿದೆ, ಇದರಿಂದ ಅವರ ಜೀವನ ಸುಧಾರಿಸುತ್ತದೆ. ಮತ್ತು ಈಗ ಅವರು ʻಮುದ್ರಾʼ ಯೋಜನೆಯ ಹಣದಿಂದ ಸಣ್ಣ ಉದ್ಯಮಗಳನ್ನು ಪ್ರಾರಂಭಿಸುತ್ತಿರುವುದನ್ನು ನಾನು ನೋಡಿದ್ದೇನೆ, ಅವರು ಗಳಿಕೆ ಮಾಡುತ್ತಿದ್ದಾರೆ. ನಾವು ತೃತೀಯ ಲಿಂಗಿ ವ್ಯಕ್ತಿಗಳಿಗೆ ಪದ್ಮ ಪ್ರಶಸ್ತಿಗಳನ್ನು ನೀಡಿದ್ದೇವೆ, ಗೌರವಯುತ ಜೀವನವನ್ನು ನಡೆಸಿದ್ದಕ್ಕಾಗಿ ಗುರುತಿಸಿದ್ದೇವೆ. ಅವರು ಸರ್ಕಾರದ ವಿವಿಧ ಯೋಜನೆಗಳಿಂದ ಪ್ರಯೋಜನ ಪಡೆಯುವುದನ್ನು ಮುಂದುವರಿಸುತ್ತಾರೆ. ಈ ಪ್ರಕ್ರಿಯೆ ಪ್ರಾರಂಭವಾಗಿದೆ ಮತ್ತು ಅವರು ಘನತೆಯ ಜೀವನವನ್ನು ನಡೆಸಲು ಪ್ರಾರಂಭಿಸಿದ್ದಾರೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಕೋವಿಡ್ ಸಾಂಕ್ರಾಮಿಕವು ಸುಮಾರು ಒಂದೂವರೆಯಿಂದ ಎರಡು ವರ್ಷಗಳ ಕಾಲ ನಮ್ಮ ಮೇಲೆ ಅತೀವ ಒತ್ತಡ ತಂದಿತ್ತು. ಅದು ಬಹಳ ಕಷ್ಟದ ಸಮಯವಾಗಿತ್ತು, ಆದರೆ ಅದರ ಹೊರತಾಗಿಯೂ 17ನೇ ಲೋಕಸಭೆ ದೇಶಕ್ಕೆ ಬಹಳ ಪ್ರಯೋಜನಗಳನ್ನು ನೀಡಿದೆ ಮತ್ತು ಉತ್ತಮ ಕೆಲಸ ಮಾಡಿದೆ. ಆದಾಗ್ಯೂ, ಈ ಸಮಯದಲ್ಲಿ, ನಾವು ಅನೇಕ ಸಹೋದ್ಯೋಗಿಗಳನ್ನು ಕಳೆದುಕೊಂಡಿದ್ದೇವೆ. ಬಹುಶಃ ಅವರು ಇಂದು ನಮ್ಮ ನಡುವೆ ಇದ್ದಿದ್ದರೆ, ಅವರು ಈ ಬೀಳ್ಕೊಡುಗೆ ಸಮಾರಂಭದಲ್ಲಿ ಹಾಜರಿರುತ್ತಿದ್ದರು. ಆದರೆ ಕೋವಿಡ್ ಕಾರಣದಿಂದಾಗಿ, ನಾವು ಈ ನಡುವೆ ಅನೇಕ ಪ್ರತಿಭಾವಂತ ಸಹೋದ್ಯೋಗಿಗಳನ್ನು ಕಳೆದುಕೊಳ್ಳಬೇಕಾಯಿತು. ಆ ನಷ್ಟದ ದುಃಖ ಸದಾ ನಮ್ಮನ್ನು ಕಾಡುತ್ತದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಇದು 17ನೇ ಲೋಕಸಭೆಯ ಕೊನೆಯ ಅಧಿವೇಶನ ಮತ್ತು ಕೊನೆಯ ಗಂಟೆಯಾಗಿದೆ. ಪ್ರಜಾಪ್ರಭುತ್ವ ಮತ್ತು ʻಭಾರತʼದ ಪ್ರಯಾಣಕ್ಕೆ ಕೊನೆಯಿಲ್ಲ. ಈ ದೇಶವು ತನ್ನದೇ ಒಂದು ಉದ್ದೇಶವನ್ನು ಹೊಂದಿದೆ. ಅದು ಇಡೀ ಮಾನವಕುಲಕ್ಕೆ ಅನ್ವಯವಾಗುವ ಗುರಿಯನ್ನು ಹೊಂದಿದೆ. ಅದನ್ನು ಅರಬಿಂದೋ ನೋಡಿದ್ದಾರೋ ಅಥವಾ ಸ್ವಾಮಿ ವಿವೇಕಾನಂದರೋ ನೋಡಿದ್ದಾರೋ... ಇಂದು ನಾವು ಆ ಮಾತುಗಳಲ್ಲಿ, ಆ ದರ್ಶನದಲ್ಲಿ, ನಮ್ಮ ಕಣ್ಣ ಮುಂದೆಯೇ ಸಾಮರ್ಥ್ಯವನ್ನು ನೋಡುತ್ತಿದ್ದೇವೆ. ಜಗತ್ತು ಭಾರತದ ಶ್ರೇಷ್ಠತೆಯನ್ನು ಸ್ವೀಕರಿಸುತ್ತಿದೆ, ಭಾರತದ ಸಾಮರ್ಥ್ಯಗಳನ್ನು ಅಂಗೀಕರಿಸುತ್ತಿದೆ ಮತ್ತು ಈ ಪ್ರಯಾಣದಲ್ಲಿ ನಾವು ಹೆಚ್ಚಿನ ಶಕ್ತಿಯೊಂದಿಗೆ ಮುಂದುವರಿಯಬೇಕಾಗಿದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಚುನಾವಣೆಗಳು ದೂರವಿಲ್ಲ. ಕೆಲವು ಜನರು ಸ್ವಲ್ಪ ಆತಂಕಕ್ಕೊಳಗಾಗಬಹುದು, ಆದರೆ ಇದು ಪ್ರಜಾಪ್ರಭುತ್ವದ ಅಂತರ್ಗತ ಮತ್ತು ಅಗತ್ಯ ಅಂಶವಾಗಿದೆ. ನಾವೆಲ್ಲರೂ ಅದನ್ನು ಹೆಮ್ಮೆಯಿಂದ ಸ್ವೀಕರಿಸುತ್ತೇವೆ. ಮತ್ತು ನಮ್ಮ ಚುನಾವಣೆಗಳು ದೇಶಕ್ಕೆ ಹೆಮ್ಮೆಯ ಮೂಲವಾಗಿ ಮುಂದುವರಿಯುತ್ತವೆ, ನಮ್ಮ ಪ್ರಜಾಪ್ರಭುತ್ವದ ಸಂಪ್ರದಾಯವನ್ನು ಮುಂದುವರಿಸುತ್ತವೆ ಮತ್ತು ಖಂಡಿತವಾಗಿಯೂ ಇಡೀ ಜಗತ್ತನ್ನು ಬೆರಗುಗೊಳಿಸುತ್ತವೆ ಎಂದು ನಾನು ನಂಬುತ್ತೇನೆ. ಇದು ನನ್ನ ದೃಢವಾದ ನಂಬಿಕೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಎಲ್ಲಾ ಗೌರವಾನ್ವಿತ ಸದಸ್ಯರಿಂದ ನಾನು ಪಡೆದ ಬೆಂಬಲ, ನಾವು ತೆಗೆದುಕೊಳ್ಳಲು ಸಾಧ್ಯವಾದ ನಿರ್ಧಾರಗಳು ಮತ್ತು ಕೆಲವೊಮ್ಮೆ ವಾಗ್ದಾಳಿಗಳು ಎಷ್ಟು ತಮಾಷೆಯಾಗಿದ್ದವೆಂದರೆ ಅವು ನಮ್ಮೊಳಗಿನ ಶಕ್ತಿಯನ್ನು ಹೊರತಂದವು. ಮತ್ತು ಸರ್ವಶಕ್ತನ ಕೃಪೆಯಿಂದ ಸವಾಲುಗಳು ಬಂದಾಗ, ಸಂತೋಷದ ಭಾವನೆಯೂ ಇರುತ್ತದೆ ಎಂದು ನಾನು ನಂಬುತ್ತೇನೆ. ನಾವು ಪ್ರತಿಯೊಂದು ಸವಾಲನ್ನು ಹೆಚ್ಚಿನ ಆತ್ಮವಿಶ್ವಾಸ ಮತ್ತು ನಂಬಿಕೆಯಿಂದ ಎದುರಿಸಿದ್ದೇವೆ. ಇಂದು, ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈ ಸದನವು ಅಂಗೀಕರಿಸಿದ ನಿರ್ಣಯವು ಈ ದೇಶದ ಭವಿಷ್ಯದ ಪೀಳಿಗೆಗೆ, ಈ ರಾಷ್ಟ್ರದ ಮೌಲ್ಯಗಳ ಬಗ್ಗೆ ಹೆಮ್ಮೆ ಪಡಲು ಸಾಂವಿಧಾನಿಕ ಅಧಿಕಾರವನ್ನು ನೀಡುತ್ತದೆ. ಅಂತಹ ಪ್ರಯತ್ನಗಳಲ್ಲಿ ತೊಡಗಿಸಿಕೊಳ್ಳಲು ಎಲ್ಲರಿಗೂ ಧೈರ್ಯವಿಲ್ಲ ಎಂಬುದು ನಿಜ; ಕೆಲವರು ಕ್ಷೇತ್ರವನ್ನೇ ತೊರೆಯುತ್ತಾರೆ. ಆದರೂ, ನಾವು ಭವಿಷ್ಯದ ದಾಖಲೆಗಳನ್ನು, ಇಂದು ಮಾಡಿದ ಭಾಷಣಗಳನ್ನು, ವ್ಯಕ್ತಪಡಿಸಿದ ಭಾವನೆಗಳನ್ನು, ಮಂಡಿಸಲಾದ ನಿರ್ಣಯಗಳನ್ನು ನೋಡಿದಾಗ ಅನುಭೂತಿ, ದೃಢನಿಶ್ಚಯ ಮತ್ತು ಸಹಾನುಭೂತಿ ಇದೆ. ಮತ್ತು 'ಸಬ್‌ ಕಾ ಸಾಥ್, ಸಬ್‌ ಕಾ ವಿಕಾಸ್' ಮಂತ್ರವನ್ನು ಮುನ್ನಡೆಸುವ ಅಂಶವೂ ಅದರಲ್ಲಿದೆ.

ಈ ರಾಷ್ಟ್ರವು, ಅದು ಎಷ್ಟೇ ಕೆಟ್ಟ ದಿನಗಳನ್ನು ಕಂಡರೂ, ಭವಿಷ್ಯದ ಪೀಳಿಗೆಗೆ ಏನಾದರೂ ಒಳ್ಳೆಯದನ್ನು ಮಾಡುವುದನ್ನು ಮುಂದುವರಿಸುತ್ತದೆ. ಈ ಸದನವು ನಮಗೆ ಸ್ಫೂರ್ತಿ ನೀಡುವುದನ್ನು ಮುಂದುವರಿಸುತ್ತದೆ ಮತ್ತು ಸಾಮೂಹಿಕ ಸಂಕಲ್ಪ ಮತ್ತು ಸಾಮೂಹಿಕ ಶಕ್ತಿಯೊಂದಿಗೆ, ಭಾರತದ ಯುವ ಪೀಳಿಗೆಯ ಆಕಾಂಕ್ಷೆಗಳಿಗೆ ಅನುಗುಣವಾಗಿ ನಾವು ಸಾಧ್ಯವಾದಷ್ಟು ಉತ್ತಮ ಫಲಿತಾಂಶಗಳಿಗಾಗಿ ಶ್ರಮಿಸುತ್ತೇವೆ.

ಈ ನಂಬಿಕೆಯೊಂದಿಗೆ, ನಾನು ಮತ್ತೊಮ್ಮೆ ಎಲ್ಲಾ ಗೌರವಾನ್ವಿತ ಸದಸ್ಯರಿಗೆ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ.

ಅನಂತ ಧನ್ಯವಾದಗಳು!

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Indian Constitution as an aesthetic document

Media Coverage

Indian Constitution as an aesthetic document
NM on the go

Nm on the go

Always be the first to hear from the PM. Get the App Now!
...
PM Modi congratulates Shri Devendra Fadnavis on taking oath as Maharashtra's Chief Minister
December 05, 2024
Congratulates Shri Eknath Shinde and Shri Ajit Pawar on taking oath as Deputy Chief Ministers
Assures all possible support from Centre in furthering development in Maharashtra

The Prime Minister, Shri Narendra Modi has congratulated Shri Devendra Fadnavis on taking oath as Chief Minister of Maharashtra. He also congratulated Shri Eknath Shinde and Shri Ajit Pawar on taking oath as Deputy Chief Ministers. Shri Modi assured all possible support from the Centre in furthering development in Maharashtra.

The Prime Minister posted on X:

“Congratulations to Shri Devendra Fadnavis Ji on taking oath as Maharashtra's Chief Minister.

Congratulations to Shri Eknath Shinde Ji and Shri Ajit Pawar Ji on taking oath as the Deputy Chief Ministers of the state.

This team is a blend of experience and dynamism, and it is due to this team's collective efforts that the Mahayuti has got a historic mandate in Maharashtra. This team will do everything possible to fulfil the aspirations of the people of the state and to ensure there is good governance.

I assure all possible support from the Centre in furthering development in Maharashtra.”