ನಮ್ಮ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಎಂಎಸ್ಎಂಇಗಳು ಪರಿವರ್ತಕ ಪಾತ್ರವನ್ನು ವಹಿಸುತ್ತಿವೆ, ಈ ವಲಯವನ್ನು ಪೋಷಿಸಲು ಮತ್ತು ಬಲಪಡಿಸಲು ನಾವು ಬದ್ಧರಾಗಿದ್ದೇವೆ: ಪ್ರಧಾನಮಂತ್ರಿ
ಕಳೆದ 10 ವರ್ಷಗಳಲ್ಲಿ, ಸುಧಾರಣೆಗಳು, ಆರ್ಥಿಕ ಶಿಸ್ತು, ಪಾರದರ್ಶಕತೆ ಮತ್ತು ಅಂತರ್ಗತ ಬೆಳವಣಿಗೆಗೆ ಭಾರತವು ನಿರಂತರವಾಗಿ ತನ್ನ ಬದ್ಧತೆಯನ್ನು ತೋರಿಸಿದೆ: ಪ್ರಧಾನಮಂತ್ರಿ
ಸ್ಥಿರತೆ ಮತ್ತು ಸುಧಾರಣೆಗಳ ಭರವಸೆ, ಅದ್ಭುತ ಬದಲಾವಣೆಯನ್ನು ತಂದಿದೆ, ಇದು ನಮ್ಮ ಉದ್ಯಮದಲ್ಲಿ ಹೊಸ ವಿಶ್ವಾಸವನ್ನು ತುಂಬಿದೆ: ಪ್ರಧಾನಮಂತ್ರಿ
ಇಂದು ವಿಶ್ವದ ಪ್ರತಿಯೊಂದು ದೇಶವೂ ಭಾರತದೊಂದಿಗೆ ತನ್ನ ಆರ್ಥಿಕ ಪಾಲುದಾರಿಕೆಯನ್ನು ಬಲಪಡಿಸಲು ಬಯಸುತ್ತಿದೆ: ಪ್ರಧಾನಮಂತ್ರಿ
ಈ ಪಾಲುದಾರಿಕೆಯ ಗರಿಷ್ಠ ಲಾಭ ಪಡೆಯಲು ನಮ್ಮ ಉತ್ಪಾದನಾ ವಲಯ ಮುಂದೆ ಬರಬೇಕು: ಪ್ರಧಾನಮಂತ್ರಿ
ನಾವು ಸ್ವಾವಲಂಬಿ ಭಾರತ್ ನಿರ್ಮಾಣದ ಚಿಂತನೆಯನ್ನು ಮುಂದಕ್ಕೆ ಕೊಂಡೊಯ್ದಿದ್ದೇವೆ ಮತ್ತು ನಮ್ಮ ಸುಧಾರಣೆಗಳ ವೇಗವನ್ನು ಮತ್ತಷ್ಟು ಹೆಚ್ಚಿಸಿದ್ದೇವೆ: ಪ್ರಧಾನಮಂತ್ರಿ
ನಮ್ಮ ಪ್ರಯತ್ನಗಳು ಆರ್ಥಿಕತೆಯ ಮೇಲೆ ಕೋವಿಡ್ ಪರಿಣಾಮವನ್ನು ಕಡಿಮೆ ಮಾಡಿ, ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಲು ಸಹಾಯ ಮಾಡಿದವು: ಪ್ರಧಾನಮಂತ್ರಿ
ಭಾರತದ ಉತ್ಪಾದನಾ ಪಯಣದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಮುಖ ಪಾತ್ರ ವಹಿಸಿದೆ, ಅದನ್ನು ಮುಂದೆ ತೆಗೆದುಕೊಂಡು ಹೋಗಬೇಕಾಗಿದೆ ಮತ್ತು ತ್ವರಿತಗೊಳಿಸಬೇಕಾಗಿದೆ: ಪ್ರಧಾನಮಂತ್ರಿ
ಸಂಶೋಧನೆ ಮತ್ತು ಅಭಿವೃದ್ಧಿಯ ಮೂಲಕ ನಾವು ನವೀನ ಉತ್ಪನ್ನಗಳ ಮೇಲೆ ಗಮನ ಕೇಂದ್ರೀಕರಿಸಬಹುದು, ಜೊತೆಗೆ ಉತ್ಪನ್ನಗಳಿಗೆ ಮೌಲ್ಯವನ್ನು ಸೇರಿಸಬಹುದು: ಪ್ರಧಾನಮಂತ್ರಿ
ಎಂಎಸ್ಎಂಇ ವಲಯವು ಭಾರತದ ಉತ್ಪಾದನೆ ಮತ್ತು ಕೈಗಾರಿಕಾ ಬೆಳವಣಿಗೆಯ ಬೆನ್ನೆಲುಬಾಗಿದೆ: ಪ್ರಧಾನಮಂತ್ರಿ

ನಮಸ್ಕಾರ!

ನನ್ನ ಎಲ್ಲಾ ಸಂಪುಟ ಸಹೋದ್ಯೋಗಿಗಳು, ಹಣಕಾಸು ಮತ್ತು ಆರ್ಥಿಕ ತಜ್ಞರು, ಪಾಲುದಾರರು, ಮಹಿಳೆಯರು ಮತ್ತು ಮಹನೀಯರೇ!

ಉತ್ಪಾದನೆ ಮತ್ತು ರಫ್ತು ಕುರಿತ ಈ ಬಜೆಟ್ ವೆಬಿನಾರ್ ಪ್ರತಿಯೊಂದು ಅಂಶದಿಂದಲೂ ಬಹಳ ಮುಖ್ಯವಾಗಿದೆ. ನಿಮಗೆ ತಿಳಿದಿರುವಂತೆ , ಈ ಬಜೆಟ್ ನಮ್ಮ ಸರ್ಕಾರದ ಮೂರನೇ ಅವಧಿಯ ಮೊದಲ ಪೂರ್ಣ ಬಜೆಟ್ ಆಗಿತ್ತು. ಈ ಬಜೆಟ್‌ನ ಅತ್ಯಂತ ವಿಶೇಷವಾದ ವಿಷಯವೆಂದರೆ ಅದು ನಿರೀಕ್ಷೆಗಿಂತ ಹೆಚ್ಚಿನದನ್ನು ನೀಡಿದೆ. ಸರ್ಕಾರವು ತಜ್ಞರು ನಿರೀಕ್ಷಿಸಿದ್ದಕ್ಕಿಂತ ದೊಡ್ಡ ಕ್ರಮಗಳನ್ನು ತೆಗೆದುಕೊಂಡಿರುವ ಹಲವು ಕ್ಷೇತ್ರಗಳಿವೆ ಮತ್ತು ನೀವು ಅದನ್ನು ಬಜೆಟ್‌ನಲ್ಲಿ ನೋಡಿದ್ದೀರಿ. ಉತ್ಪಾದನೆ ಮತ್ತು ರಫ್ತಿಗೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಗೆಳೆಯರೇ,

ಇಂದು ದೇಶವು ಒಂದು ದಶಕಕ್ಕೂ ಹೆಚ್ಚು ಕಾಲ ಸರ್ಕಾರದ ನೀತಿಗಳಲ್ಲಿ ಅಂತಹ ಸ್ಥಿರತೆಯನ್ನು ಕಾಣುತ್ತಿದೆ. ಕಳೆದ 10 ವರ್ಷಗಳಲ್ಲಿ, ಭಾರತವು ಸುಧಾರಣೆಗಳು, ಹಣಕಾಸಿನ ಶಿಸ್ತು, ಪಾರದರ್ಶಕತೆ ಮತ್ತು ಎಲ್ಲರನ್ನೂ ಒಳಗೊಂಡ ಬೆಳವಣಿಗೆಯ ಬದ್ಧತೆಯನ್ನು ನಿರಂತರವಾಗಿ ತೋರಿಸುತ್ತಾ ಬಂದಿದೆ. ಈ ಸ್ಥಿರತೆ ಮತ್ತು ಸುಧಾರಣೆಗಳ ಭರವಸೆಯು ನಮ್ಮ ಉದ್ಯಮದಲ್ಲಿ ಹೊಸ ಉತ್ಸಾಹ ಮತ್ತು ವಿಶ್ವಾಸವನ್ನು ತಂದಿದೆ. ತಯಾರಿಕೆ ಮತ್ತು ರಫ್ತು ಕ್ಷೇತ್ರದಲ್ಲಿರುವ ಪ್ರತಿಯೊಬ್ಬ ಪಾಲುದಾರರಿಗೂ ಈ ಸ್ಥಿರತೆಯು ಮುಂಬರುವ ವರ್ಷಗಳಲ್ಲಿಯೂ ಮುಂದುವರಿಯುತ್ತದೆ ಎಂದು ನಾನು ಭರವಸೆ ನೀಡುತ್ತೇನೆ. ಪೂರ್ಣ ವಿಶ್ವಾಸದಿಂದ ಮುನ್ನಡೆಯಲು ಮತ್ತು ದಿಟ್ಟ ಹೆಜ್ಜೆಗಳನ್ನು ಇಡಲು ನಾನು ನಿಮ್ಮನ್ನು ಹುರಿದುಂಬಿಸುತ್ತೇನೆ. ದೇಶಕ್ಕೆ ತಯಾರಿಕೆ ಮತ್ತು ರಫ್ತಿಗಾಗಿ ನಾವು ಹೊಸ ಹಾದಿಗಳನ್ನು ತೆರೆಯಬೇಕು. ಇಂದು ಜಗತ್ತಿನ ಪ್ರತಿಯೊಂದು ದೇಶವೂ ಭಾರತದೊಂದಿಗೆ ತನ್ನ ಆರ್ಥಿಕ ಪಾಲುದಾರಿಕೆಯನ್ನು ಬಲಪಡಿಸಿಕೊಳ್ಳಲು ಉತ್ಸುಕವಾಗಿದೆ. ಈ ಪಾಲುದಾರಿಕೆಯ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಲು ನಮ್ಮ ಉತ್ಪಾದನಾ ವಲಯಗಳು ಮುಂದೆ ಬರಬೇಕು.

 

ಗೆಳೆಯರೇ,

ಯಾವುದೇ ದೇಶದ ಪ್ರಗತಿಗೆ ಸ್ಥಿರವಾದ ನೀತಿಗಳು ಮತ್ತು ಉತ್ತಮ ವ್ಯಾಪಾರ ವಾತಾವರಣ ಅತ್ಯಗತ್ಯ. ಅದಕ್ಕಾಗಿಯೇ ಕೆಲವು ವರ್ಷಗಳ ಹಿಂದೆ ನಾವು ಜನ ವಿಶ್ವಾಸ ಕಾಯ್ದೆಯನ್ನು ಜಾರಿಗೆ ತಂದೆವು. ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ 40 ಸಾವಿರಕ್ಕೂ ಹೆಚ್ಚು ಅನಗತ್ಯ ನಿಯಮಗಳನ್ನು ರದ್ದುಗೊಳಿಸಿ, ವ್ಯಾಪಾರ  ಸುಲಭಗೊಳಿಸಲು  ಪ್ರಯತ್ನಿಸಿದೆವು. ಈ  ಪ್ರಕ್ರಿಯೆ ನಿರಂತರವಾಗಿ ಮುಂದುವರಿಯಬೇಕೆಂದು ನಮ್ಮ ಸರ್ಕಾರ ಬಯಸುತ್ತದೆ. ಹಾಗಾಗಿಯೇ ನಾವು ಸರಳೀಕೃತ ಆದಾಯ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇವೆ ಮತ್ತು ಜನ ವಿಶ್ವಾಸ 2.0 ಮಸೂದೆಯ ಕರಡು ರಚಿಸುತ್ತಿದ್ದೇವೆ. ಹಣಕಾಸು-ಅಲ್ಲದ ವಲಯದ ನಿಯಮಗಳನ್ನು ಪರಿಶೀಲಿಸಲು ಒಂದು ಸಮಿತಿಯನ್ನು ರಚಿಸಲು ಸಹ ನಿರ್ಧರಿಸಲಾಗಿದೆ. ಈ ನಿಯಮಗಳನ್ನು ಆಧುನಿಕ, ಹೊಂದಿಕೊಳ್ಳುವ, ಜನಸ್ನೇಹಿ ಮತ್ತು ನಂಬಿಕೆ ಆಧಾರಿತವಾಗಿಸುವುದು ನಮ್ಮ ಗುರಿ. ಈ ಕಾರ್ಯದಲ್ಲಿ ಉದ್ಯಮ ವಲಯದ ಪಾತ್ರ ಬಹಳ ಮುಖ್ಯ. ನಿಮ್ಮ ಅನುಭವಗಳ ಆಧಾರದ ಮೇಲೆ, ಪರಿಹಾರ  ಸಿಗಲು  ಬಹಳ  ಸಮಯ ತೆಗೆದುಕೊಳ್ಳುವ  ಸಮಸ್ಯೆಗಳನ್ನು  ನೀವು  ಗುರುತಿಸಬಹುದು. ಪ್ರಕ್ರಿಯೆಗಳನ್ನು  ಸರಳಗೊಳಿಸಲು  ನಿಮ್ಮ  ಸಲಹೆಗಳನ್ನು  ನೀಡಬಹುದು. ತ್ವರಿತ  ಮತ್ತು  ಉತ್ತಮ  ಫಲಿತಾಂಶಗಳನ್ನು  ಪಡೆಯಲು  ತಂತ್ರಜ್ಞಾನವನ್ನು  ಎಲ್ಲಿ  ಬಳಸಬಹುದು  ಎಂಬುದರ  ಕುರಿತು  ನೀವು ಮಾರ್ಗದರ್ಶನ  ನೀಡಬಹುದು.

ಗೆಳೆಯರೇ,

ಇಂದು, ಜಗತ್ತು ರಾಜಕೀಯ ಅನಿಶ್ಚಿತತೆಯ ಅವಧಿಯ ಮೂಲಕ ಸಾಗುತ್ತಿದೆ. ಇಡೀ ಜಗತ್ತು ಭಾರತವನ್ನು ಒಂದು ಬೆಳವಣಿಗೆ ಕೇಂದ್ರವಾಗಿ ನೋಡುತ್ತಿದೆ. ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ, ಜಾಗತಿಕ ಆರ್ಥಿಕತೆ ನಿಧಾನವಾದಾಗ, ಭಾರತವು ಜಾಗತಿಕ ಬೆಳವಣಿಗೆಯನ್ನು ಚುರುಕುಗೊಳಿಸಿತು. ಇದು ಹಾಗೆಯೇ ಸಂಭವಿಸಲಿಲ್ಲ. ನಾವು ಆತ್ಮನಿರ್ಭರ್ ಭಾರತದ ದೃಷ್ಟಿಯನ್ನು ಅನುಸರಿಸಿದೆವು ಮತ್ತು ನಮ್ಮ ಸುಧಾರಣೆಗಳ ವೇಗವನ್ನು ಹೆಚ್ಚಿಸಿದೆವು. ನಮ್ಮ ಪ್ರಯತ್ನಗಳು ಆರ್ಥಿಕತೆಯ ಮೇಲೆ ಕೋವಿಡ್‌ನ ಪ್ರಭಾವವನ್ನು ಕಡಿಮೆ ಮಾಡಿತು, ಇದು ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಲು ಸಹಾಯ ಮಾಡಿತು. ಇಂದಿಗೂ, ಭಾರತವು ಜಾಗತಿಕ ಆರ್ಥಿಕತೆಗೆ ಬೆಳವಣಿಗೆಯ ಎಂಜಿನ್ ಆಗಿ ಉಳಿದಿದೆ. ಅಂದರೆ, ಭಾರತವು ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿ ತನ್ನ ಸ್ಥಿತಿಸ್ಥಾಪಕತ್ವವನ್ನು ಸಾಬೀತುಪಡಿಸಿದೆ.

ಕಳೆದ ಕೆಲವು ವರ್ಷಗಳಲ್ಲಿ, ಪೂರೈಕೆ ಸರಪಳಿಗೆ ಅಡಚಣೆಯುಂಟಾದಾಗ, ಅದು ಇಡೀ ವಿಶ್ವದ ಆರ್ಥಿಕತೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ಕಂಡಿದ್ದೇವೆ. ಇಂದು, ಉತ್ತಮ ಗುಣಮಟ್ಟದ ಉತ್ಪನ್ನಗಳು ಮತ್ತು ವಿಶ್ವಾಸಾರ್ಹ ಪೂರೈಕೆಯನ್ನು ಖಾತ್ರಿಪಡಿಸುವ  ನಿಷ್ಠಾವಂತ ಪಾಲುದಾರರ ಅಗತ್ಯ ಜಗತ್ತಿಗಿದೆ. ನಮ್ಮ ದೇಶವು ಇದನ್ನು ಮಾಡುವ ಸಾಮರ್ಥ್ಯ ಹೊಂದಿದೆ. ನೀವೆಲ್ಲರೂ ಸಮರ್ಥರು. ಇದು ನಮಗೆ ಒಂದು ಸುವರ್ಣಾವಕಾಶ, ಒಂದು ಅಪಾರ ಅವಕಾಶ. ಜಗತ್ತಿನ ಈ ನಿರೀಕ್ಷೆಗಳನ್ನು ಕೇವಲ ಮೂಕಪ್ರೇಕ್ಷಕರಂತೆ ನೋಡಬಾರದು ಎಂದು ನಾನು ಬಯಸುತ್ತೇನೆ. ನಾವು  ಪ್ರೇಕ್ಷಕರಾಗಿ ಉಳಿಯಲು ಸಾಧ್ಯವಿಲ್ಲ. ಇದರಲ್ಲಿ ನಿಮ್ಮ ಪಾತ್ರವನ್ನು ನೀವು ಕಂಡುಕೊಳ್ಳಬೇಕು, ಮುಂದೆ ಹೋಗಿ ನಿಮಗಾಗಿ ಅವಕಾಶಗಳನ್ನು  ಕೆತ್ತಿಕೊಳ್ಳಬೇಕು. ಹಿಂದಿನ ಕಾಲಕ್ಕಿಂತ ಇಂದು ಇದು ಹೆಚ್ಚು ಸುಲಭ. ಇಂದು ದೇಶವು ಈ ಅವಕಾಶಗಳಿಗೆ ಪೂರಕವಾದ ನೀತಿಗಳನ್ನು ಹೊಂದಿದೆ. ಇಂದು ಸರ್ಕಾರವು ಉದ್ಯಮದೊಂದಿಗೆ ಭುಜಕ್ಕೆ ಭುಜ ಸೇರಿಸಿ ನಿಂತಿದೆ. ಬಲವಾದ ಸಂಕಲ್ಪ, ವಸ್ತುನಿಷ್ಠತೆ ಮತ್ತು ಸವಾಲನ್ನು ಸ್ವೀಕರಿಸುವ ಮೂಲಕ ಜಾಗತಿಕ ಪೂರೈಕೆ ಸರಪಳಿಯಲ್ಲಿ ಅವಕಾಶಗಳನ್ನು ಹುಡುಕುವುದು, ಈ ರೀತಿಯಾಗಿ, ಪ್ರತಿಯೊಂದು ಉದ್ಯಮವು ಹಂತ ಹಂತವಾಗಿ ಮುನ್ನಡೆದರೆ, ನಾವು ಬಹುದೂರ ಸಾಗಬಹುದು.

ಗೆಳೆಯರೇ,

ಇಂದು 14 ವಲಯಗಳು ನಮ್ಮ PLI ಯೋಜನೆಯ ಲಾಭವನ್ನು ಪಡೆಯುತ್ತಿವೆ. ಈ ಯೋಜನೆಯಡಿಯಲ್ಲಿ 750 ಕ್ಕೂ ಹೆಚ್ಚು ಘಟಕಗಳನ್ನು ಅನುಮೋದಿಸಲಾಗಿದೆ. ಇದರಿಂದ ಒಂದೂವರೆ ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ಹೂಡಿಕೆ, 13 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ಉತ್ಪಾದನೆ ಮತ್ತು 5 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ರಫ್ತು ಆಗಿದೆ. ನಮ್ಮ ಉದ್ಯಮಿಗಳಿಗೆ ಅವಕಾಶ ಸಿಕ್ಕರೆ, ಅವರು ಪ್ರತಿಯೊಂದು ಹೊಸ ಕ್ಷೇತ್ರದಲ್ಲಿಯೂ ಮುನ್ನಡೆಯಬಹುದು ಎಂದು ಇದು ತೋರಿಸುತ್ತದೆ. ತಯಾರಿಕೆ ಮತ್ತು ರಫ್ತನ್ನು ಉತ್ತೇಜಿಸಲು ನಾವು 2 ಮಿಷನ್‌ಗಳನ್ನು ಪ್ರಾರಂಭಿಸಲು ನಿರ್ಧರಿಸಿದ್ದೇವೆ. ನಾವು ಉತ್ತಮ ತಂತ್ರಜ್ಞಾನ ಮತ್ತು ಗುಣಮಟ್ಟದ ಉತ್ಪನ್ನಗಳ ಮೇಲೆ ಕೇಂದ್ರೀಕರಿಸುತ್ತಿದ್ದೇವೆ. ಮತ್ತು ವೆಚ್ಚವನ್ನು ಕಡಿಮೆ ಮಾಡಲು ನಾವು ಕೌಶಲ್ಯಕ್ಕೆ ಒತ್ತು ನೀಡುತ್ತಿದ್ದೇವೆ. ಇಲ್ಲಿರುವ ಎಲ್ಲಾ ಪಾಲುದಾರರು ಜಾಗತಿಕ ಬೇಡಿಕೆಯಿರುವ ಮತ್ತು ನಾವು ತಯಾರಿಸಬಹುದಾದ ಹೊಸ ಉತ್ಪನ್ನಗಳನ್ನು ಗುರುತಿಸಬೇಕೆಂದು ನಾನು ಬಯಸುತ್ತೇನೆ. ನಂತರ ರಫ್ತು ಸಾಧ್ಯತೆಗಳಿರುವ ದೇಶಗಳಿಗೆ ನಾವು ಒಂದು ಕಾರ್ಯತಂತ್ರದೊಂದಿಗೆ ಹೋಗಬೇಕು.

 

ಗೆಳೆಯರೇ,

ಭಾರತದ ಉತ್ಪಾದನಾ ಪಯಣದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ (R&D) ಪ್ರಮುಖ ಪಾತ್ರ ವಹಿಸುತ್ತದೆ, ಅದನ್ನು ಮುಂದಕ್ಕೆ ಕೊಂಡೊಯ್ಯಬೇಕು ಮತ್ತು ವೇಗಗೊಳಿಸಬೇಕು. ಸಂಶೋಧನೆ ಮತ್ತು ಅಭಿವೃದ್ಧಿಯ ಮೂಲಕ ನಾವು ನವೀನ ಉತ್ಪನ್ನಗಳ ಮೇಲೆ ಕೇಂದ್ರೀಕರಿಸಬಹುದು ಮತ್ತು ಉತ್ಪನ್ನಗಳಿಗೆ ಮೌಲ್ಯವನ್ನು ಸೇರಿಸಬಹುದು. ನಮ್ಮ ಆಟಿಕೆ, ಪಾದರಕ್ಷೆ ಮತ್ತು ಚರ್ಮೋದ್ಯಮದ ಸಾಮರ್ಥ್ಯವನ್ನು ಜಗತ್ತು ತಿಳಿದಿದೆ. ನಮ್ಮ ಸಾಂಪ್ರದಾಯಿಕ ಕರಕುಶಲತೆಯೊಂದಿಗೆ ಆಧುನಿಕ ತಂತ್ರಜ್ಞಾನಗಳನ್ನು ಸಂಯೋಜಿಸುವ ಮೂಲಕ ನಾವು ಉತ್ತಮ ಯಶಸ್ಸನ್ನು ಸಾಧಿಸಬಹುದು. ಈ ವಲಯಗಳಲ್ಲಿ ನಾವು ಜಾಗತಿಕ ಚಾಂಪಿಯನ್ ಆಗಬಹುದು ಮತ್ತು ನಮ್ಮ ರಫ್ತು ಹಲವು ಪಟ್ಟು ಹೆಚ್ಚಾಗಬಹುದು. ಇದು ಈ ಕಾರ್ಮಿಕ-ತೀವ್ರ ವಲಯಗಳಲ್ಲಿ ಲಕ್ಷಾಂತರ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುತ್ತದೆ. ಸಾಂಪ್ರದಾಯಿಕ ಕುಶಲಕರ್ಮಿಗಳು ಪಿಎಂ ವಿಶ್ವಕರ್ಮ ಯೋಜನೆಯ ಮೂಲಕ ಸಂಪೂರ್ಣ ಬೆಂಬಲವನ್ನು ಪಡೆಯುತ್ತಿದ್ದಾರೆ. ಅಂತಹ ಕುಶಲಕರ್ಮಿಗಳನ್ನು ಹೊಸ ಅವಕಾಶಗಳೊಂದಿಗೆ ಸಂಪರ್ಕಿಸಲು ನಾವು ಪ್ರಯತ್ನಗಳನ್ನು ಮಾಡಬೇಕಾಗಿದೆ. ಈ ವಲಯಗಳಲ್ಲಿ ಅನೇಕ ಗುಪ್ತ ಸಾಧ್ಯತೆಗಳಿವೆ, ಅವುಗಳನ್ನು ವಿಸ್ತರಿಸಲು ನೀವೆಲ್ಲರೂ ಮುಂದೆ ಬರಬೇಕು.

ಗೆಳೆಯರೇ,

ಭಾರತದ ಉತ್ಪಾದನಾ ಕ್ಷೇತ್ರದ ಬೆನ್ನೆಲುಬು, ನಮ್ಮ ಕೈಗಾರಿಕಾ ಪ್ರಗತಿಯ  ಆಧಾರಸ್ತಂಭವೇ  ನಮ್ಮ  MSME ವಲಯ. 2020ರಲ್ಲಿ  MSME ಗಳ ವ್ಯಾಖ್ಯಾನವನ್ನು ಪರಿಷ್ಕರಿಸುವ  ಮಹತ್ವದ  ನಿರ್ಧಾರವನ್ನು  ನಾವು  ಕೈಗೊಂಡೆವು. 14  ವರ್ಷಗಳ  ನಂತರ  ಈ  ಬದಲಾವಣೆ ತರಲಾಯಿತು. "ಬೆಳೆದರೆ  ಸರ್ಕಾರದಿಂದ  ಸಿಗುವ  ಪ್ರಯೋಜನಗಳು  ನಿಲ್ಲುತ್ತವೆ" ಎಂಬ MSME ಗಳ ಆತಂಕವನ್ನು  ನಮ್ಮ ಈ  ನಿರ್ಧಾರ  ನಿವಾರಿಸಿದೆ. ಇಂದು, ದೇಶದಲ್ಲಿ  MSME ಗಳ  ಸಂಖ್ಯೆ 6 ಕೋಟಿಗೂ ಹೆಚ್ಚಾಗಿದೆ. ಇದರಿಂದ  ಕೋಟ್ಯಂತರ  ಜನರಿಗೆ  ಉದ್ಯೋಗಾವಕಾಶಗಳು  ಲಭ್ಯವಾಗಿವೆ. ಈ  ಬಜೆಟ್‌ನಲ್ಲಿ,  ನಾವು  MSME ಗಳ  ವ್ಯಾಖ್ಯಾನವನ್ನು  ಮತ್ತಷ್ಟು  ವಿಸ್ತರಿಸಿದ್ದೇವೆ.  ಇದರಿಂದ  ನಮ್ಮ  MSME ಗಳು  ನಿರಂತರವಾಗಿ ಮುನ್ನಡೆಯುವ  ವಿಶ್ವಾಸವನ್ನು  ಪಡೆಯುತ್ತವೆ  ಮತ್ತು  ಯುವಕರಿಗೆ  ಹೆಚ್ಚಿನ  ಉದ್ಯೋಗಾವಕಾಶಗಳು  ಸೃಷ್ಟಿಯಾಗುತ್ತವೆ. ನಮ್ಮ  MSME ಗಳು  ಎದುರಿಸುತ್ತಿದ್ದ  ಅತಿ  ದೊಡ್ಡ  ಸಮಸ್ಯೆ  ಎಂದರೆ  ಸುಲಭವಾಗಿ  ಸಾಲ  ಸಿಗದಿರುವುದು. 10  ವರ್ಷಗಳ  ಹಿಂದೆ,  MSME ಗಳು  ಸುಮಾರು 12  ಲಕ್ಷ  ಕೋಟಿ  ರೂಪಾಯಿ  ಸಾಲ  ಪಡೆದಿದ್ದವು.  ಇಂದು  ಅದು  ಎರಡೂವರೆ  ಪಟ್ಟು  ಹೆಚ್ಚಾಗಿ  ಸುಮಾರು  30  ಲಕ್ಷ  ಕೋಟಿ ರೂಪಾಯಿಗಳಷ್ಟಾಗಿದೆ. ಈ  ಬಜೆಟ್‌ನಲ್ಲಿ,  MSME  ಸಾಲಗಳಿಗೆ  ಗ್ಯಾರಂಟಿ  ಹೊದಿಕೆಯನ್ನು  ದ್ವಿಗುಣಗೊಳಿಸಿ  20  ಕೋಟಿ  ರೂಪಾಯಿಗಳಿಗೆ ಏರಿಸಲಾಗಿದೆ.  ಕಾರ್ಯನಿರತ  ಬಂಡವಾಳದ  ಅಗತ್ಯಗಳಿಗಾಗಿ,  5  ಲಕ್ಷ  ರೂಪಾಯಿ  ಮಿತಿಯ  ಕಸ್ಟಮೈಸ್  ಕ್ರೆಡಿಟ್  ಕಾರ್ಡ್‌ಗಳನ್ನು ನೀಡಲಾಗುವುದು.

ಗೆಳೆಯರೇ,

ನಾವು ಸಾಲ ಪಡೆಯುವ ಸೌಲಭ್ಯವನ್ನು ಒದಗಿಸುವುದರ ಜೊತೆಗೆ ಹೊಸ ರೀತಿಯ ಸಾಲ ವ್ಯವಸ್ಥೆಯನ್ನೂ ಸಹ ರೂಪಿಸಿದ್ದೇವೆ. ಖಾತರಿಯಿಲ್ಲದೆ ಸಾಲ ಪಡೆಯುವ  ಸೌಲಭ್ಯವನ್ನು ಜನರು ಪಡೆದುಕೊಳ್ಳಲು  ಪ್ರಾರಂಭಿಸಿದರು, ಇದು ಅವರಿಗೆ  ಕನಸಿನ ಮಾತಾಗಿತ್ತು. ಕಳೆದ 10 ವರ್ಷಗಳಲ್ಲಿ, ಖಾತರಿಯಿಲ್ಲದೆ ಸಾಲಗಳನ್ನು ಒದಗಿಸುವ ಮುದ್ರಾ ಯೋಜನೆಯಂತಹ ಯೋಜನೆಗಳಿಂದ  ಸಣ್ಣ ಕೈಗಾರಿಕೆಗಳಿಗೆ  ಆಸರೆ ನೀಡಲಾಗಿದೆ. ಸಾಲಗಳಿಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು  ವ್ಯಾಪಾರ  ಪೋರ್ಟಲ್  ಮೂಲಕ  ಪರಿಹರಿಸಲಾಗುತ್ತಿದೆ.

ಗೆಳೆಯರೇ,

ಈಗ  ನಾವು  ಸಾಲ  ವಿತರಣೆಗಾಗಿ  ನವೀನ  ಮಾದರಿಗಳನ್ನು  ಅಭಿವೃದ್ಧಿಪಡಿಸಬೇಕಾಗಿದೆ. ಪ್ರತಿ MSME ಕಡಿಮೆ ವೆಚ್ಚದಲ್ಲಿ ಮತ್ತು ಸಕಾಲದಲ್ಲಿ  ಸಾಲ  ಪಡೆಯುವುದನ್ನು  ಖಚಿತಪಡಿಸಿಕೊಳ್ಳುವುದು  ನಮ್ಮ  ಗುರಿಯಾಗಿರಬೇಕು. ಮಹಿಳೆಯರು,  ಪರಿಶಿಷ್ಟ  ಜಾತಿ  ಮತ್ತು ಪರಿಶಿಷ್ಟ  ಪಂಗಡದ  ಸಮುದಾಯಗಳ  5  ಲಕ್ಷ  ಮೊದಲ  ಬಾರಿ  ಉದ್ಯಮಿಗಳಿಗೆ  2  ಕೋಟಿ  ರೂಪಾಯಿಗಳ  ಸಾಲ  ನೀಡಲಾಗುವುದು. ಮೊದಲ  ಬಾರಿ  ಉದ್ಯಮ  ಶುರು  ಮಾಡುವವರಿಗೆ  ಸಾಲ  ಬೆಂಬಲ  ಮಾತ್ರವಲ್ಲ,  ಮಾರ್ಗದರ್ಶನವೂ  ಅಗತ್ಯ. ಅಂತಹ  ಜನರಿಗೆ  ಸಹಾಯ ಮಾಡಲು  ಉದ್ಯಮ  ಕ್ಷೇತ್ರವು  ಮಾರ್ಗದರ್ಶನ  ಕಾರ್ಯಕ್ರಮವನ್ನು  ರೂಪಿಸಬೇಕು  ಎಂದು  ನಾನು  ಭಾವಿಸುತ್ತೇನೆ.

 

ಗೆಳೆಯರೇ,

ಹೂಡಿಕೆಯನ್ನು ಹೆಚ್ಚಿಸುವಲ್ಲಿ ರಾಜ್ಯಗಳ ಪಾತ್ರ ಅತ್ಯಂತ ಮಹತ್ವದ್ದು. ಈ ವೆಬಿನಾರ್‌ನಲ್ಲಿ ರಾಜ್ಯ ಸರ್ಕಾರಿ ಅಧಿಕಾರಿಗಳು ಸಹ ಉಪಸ್ಥಿತರಿದ್ದಾರೆ. ರಾಜ್ಯಗಳು ವ್ಯಾಪಾರ  ಸುಲಭತೆಯನ್ನು  ಹೆಚ್ಚು  ಪ್ರೋತ್ಸಾಹಿಸಿದಷ್ಟೂ  ಹೆಚ್ಚಿನ  ಹೂಡಿಕೆದಾರರು  ಆಕರ್ಷಿತರಾಗುತ್ತಾರೆ. ಇದರಿಂದ  ನಿಮ್ಮ  ರಾಜ್ಯಕ್ಕೆ  ಅಪಾರ  ಲಾಭವಾಗಲಿದೆ. ಈ  ಬಜೆಟ್‌ನ  ಸಂಪೂರ್ಣ  ಪ್ರಯೋಜನವನ್ನು  ಯಾರು  ಪಡೆಯಬಹುದು  ಎಂಬ ವಿಷಯದಲ್ಲಿ  ರಾಜ್ಯಗಳ  ಮಧ್ಯೆ  ಆರೋಗ್ಯಕರ  ಸ್ಪರ್ಧೆ  ಇರಬೇಕು.  ಪ್ರಗತಿಪರ ನೀತಿಗಳೊಂದಿಗೆ ಮುಂದೆ ಬರುವ ರಾಜ್ಯಗಳಲ್ಲಿ ಕಂಪನಿಗಳು ಹೂಡಿಕೆ ಮಾಡಲು ಬರುತ್ತವೆ.

ಗೆಳೆಯರೇ,

ನೀವೆಲ್ಲರೂ  ಈ  ವಿಷಯಗಳನ್ನು  ಗಂಭೀರವಾಗಿ  ಚಿಂತಿಸುತ್ತಿದ್ದೀರಿ  ಎಂದು  ನನಗೆ  ಖಾತ್ರಿಯಿದೆ. ಈ  ವೆಬಿನಾರ್‌ ನಿಂದ  ಪರಿಣಾಮಕಾರಿ ಪರಿಹಾರಗಳನ್ನು ಕಂಡುಕೊಳ್ಳಬೇಕಾಗಿದೆ. ನೀತಿಗಳು, ಯೋಜನೆಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸುವಲ್ಲಿ ನಿಮ್ಮ ಸಹಕಾರ ಅತ್ಯಗತ್ಯ. ಬಜೆಟ್ ನಂತರ ಅನುಷ್ಠಾನ ತಂತ್ರಗಳನ್ನು ರೂಪಿಸಲು ಇದು ಸಹಾಯಕವಾಗಲಿದೆ. ನಿಮ್ಮ ಕೊಡುಗೆ ಬಹಳ ಮೌಲ್ಯಯುತವೆಂದು ಸಾಬೀತಾಗುತ್ತದೆ ಎಂಬ ವಿಶ್ವಾಸ ನನಗಿದೆ. ಇಂದಿನ ದಿನವಿಡೀ ಚರ್ಚೆಗಳ ಮಂಥನದಿಂದ ಹೊರಹೊಮ್ಮುವ ಸುಧಾರಣೆಗಳು ನಾವು ಕಂಡ ಕನಸುಗಳನ್ನು ನನಸಾಗಿಸುವ ಶಕ್ತಿಯನ್ನು ನಮಗೆ ನೀಡುತ್ತದೆ. ಈ ಆಶಯದೊಂದಿಗೆ, ನಾನು ನಿಮಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.

x

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Operation Sagar Bandhu: India provides assistance to restore road connectivity in cyclone-hit Sri Lanka

Media Coverage

Operation Sagar Bandhu: India provides assistance to restore road connectivity in cyclone-hit Sri Lanka
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 5 ಡಿಸೆಂಬರ್ 2025
December 05, 2025

Unbreakable Bonds, Unstoppable Growth: PM Modi's Diplomacy Delivers Jobs, Rails, and Russian Billions