5,940 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವ 247 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ
"ದೆಹಲಿ ಮುಂಬೈ ಎಕ್ಸ್‌ಪ್ರೆಸ್‌ವೇ ವಿಶ್ವದ ಅತ್ಯಂತ ಸುಧಾರಿತ ಎಕ್ಸ್‌ಪ್ರೆಸ್‌ವೇಗಳಲ್ಲಿ ಒಂದಾಗಿದೆ, ಇದು ಅಭಿವೃದ್ಧಿ ಹೊಂದುತ್ತಿರುವ ಭಾರತದ ಭವ್ಯ ಚಿತ್ರಣವನ್ನು ಪ್ರಸ್ತುತಪಡಿಸುತ್ತದೆ"
"ಕೇಂದ್ರ ಸರ್ಕಾರವು ಕಳೆದ 9 ವರ್ಷಗಳಿಂದ ನಿರಂತರವಾಗಿ ಮೂಲಸೌಕರ್ಯದಲ್ಲಿ ಭಾರಿ ಹೂಡಿಕೆಗಳನ್ನು ಮಾಡುತ್ತಿದೆ"
"ಈ ಬಾರಿಯ ಬಜೆಟ್ ಮೂಲಸೌಕರ್ಯಕ್ಕಾಗಿ 10 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ, ಇದು 2014 ರ ಅನುದಾನಕ್ಕಿಂತ 5 ಪಟ್ಟು ಹೆಚ್ಚು"
"ಕಳೆದ ಕೆಲವು ವರ್ಷಗಳಲ್ಲಿ, ರಾಜಸ್ಥಾನವು ಹೆದ್ದಾರಿಗಳ ಅಭಿವೃದ್ಧಿಗಾಗಿ 50 ಸಾವಿರ ಕೋಟಿ ರೂಪಾಯಿಗಳನ್ನು ಪಡೆದಿದೆ"
"ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಮತ್ತು ಪಶ್ಚಿಮ ಸರಕು ಸಾಗಣೆ ಕಾರಿಡಾರ್ ರಾಜಸ್ಥಾನ ಮತ್ತು ದೇಶದ ಪ್ರಗತಿಯ ಎರಡು ಬಲವಾದ ಸ್ತಂಭಗಳಾಗಲಿವೆ"
“ಸಬ್ಕಾ ಸಾಥ್, ಸಬ್ಕಾ ವಿಕಾಸ್ ರಾಜಸ್ಥಾನ ಮತ್ತು ದೇಶದ ಅಭಿವೃದ್ಧಿಗೆ ನಮ್ಮ ಮಂತ್ರವಾಗಿದೆ. ಈ ಮಂತ್ರವನ್ನು ಅನುಸರಿಸಿ, ನಾವು ಶಕ್ತ, ಸಮರ್ಥ ಮತ್ತು ಸಮೃದ್ಧ ಭಾರತವನ್ನು ನಿರ್ಮಿಸುತ್ತಿದ್ದೇವೆ.”
ಇದು ಅಭಿವೃದ್ಧಿ ಹೊಂದುತ್ತಿರುವ ಭಾರತದ ಭವ್ಯ ಚಿತ್ರಣವನ್ನು ಪ್ರಸ್ತುತಪಡಿಸುವ ವಿಶ್ವದ ಅತ್ಯಂತ ಸುಧಾರಿತ ಎಕ್ಸ್‌ಪ್ರೆಸ್‌ವೇಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು.

ರಾಜಸ್ಥಾನದ ರಾಜ್ಯಪಾಲರಾದ ಶ್ರೀ ಕಲ್ ರಾಜ್ ಜಿ, ರಾಜಸ್ಥಾನದ ಮುಖ್ಯಮಂತ್ರಿ ಶ್ರೀ ಅಶೋಕ್ ಗೆಹ್ಲೋಟ್ ಜಿ, ಹರಿಯಾಣದ ಮುಖ್ಯಮಂತ್ರಿ ಶ್ರೀ ಮನೋಹರ್ ಲಾಲ್ ಜಿ, ನನ್ನ ಸಂಪುಟ ಸಹೋದ್ಯೋಗಿಗಳಾದ ನಿತಿನ್ ಗಡ್ಕರಿ ಜಿ, ಗಜೇಂದ್ರ ಸಿಂಗ್ ಶೇಖಾವತ್ ಜಿ, ವಿ ಕೆ ಸಿಂಗ್ ಜಿ, ಇಲ್ಲಿರುವ ಎಲ್ಲಾ ಸಚಿವರು, ಸಂಸದರು, ಗಣ್ಯರು, ಮಹಿಳೆಯರು ಮತ್ತು ಮಹನೀಯರೇ!

ದೆಹಲಿ-ಮುಂಬೈ  ಎಕ್ಸ್ ಪ್ರೆಸ್ ವೇ  ಮೊದಲ ಹಂತವನ್ನು ಇಂದು ರಾಷ್ಟ್ರಕ್ಕೆ ಸಮರ್ಪಿಸಲು ನಾನು ತುಂಬಾ ಹೆಮ್ಮೆಪಡುತ್ತೇನೆ. ಇದು ದೇಶದ ಅತಿದೊಡ್ಡ ಮತ್ತು ಆಧುನಿಕ ಎಕ್ಸ್ ಪ್ರೆಸ್ ವೇ ಗಳಲ್ಲಿ ಒಂದಾಗಿದೆ. ಇದು ಭಾರತದ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಮತ್ತೊಂದು ಭವ್ಯ ಚಿತ್ರಣವಾಗಿದೆ. ನಾನು ಇದೀಗ ದೌಸಾದ ಜನರು ಮತ್ತು ಎಲ್ಲಾ ದೇಶವಾಸಿಗಳನ್ನು ಅಭಿನಂದಿಸುತ್ತೇನೆ!

ಸಹೋದರ, ಸಹೋದರಿಯರೇ!

ಇಂತಹ ಆಧುನಿಕ ರಸ್ತೆಗಳು, ಆಧುನಿಕ ರೈಲು ನಿಲ್ದಾಣಗಳು, ರೈಲು ಹಳಿಗಳು, ಮೆಟ್ರೋ ರೈಲುಗಳು ಮತ್ತು ವಿಮಾನ ನಿಲ್ದಾಣಗಳು ನಿರ್ಮಾಣವಾದಾಗ ದೇಶದ ಪ್ರಗತಿಯು ವೇಗ ಪಡೆಯುತ್ತದೆ. ಜಗತ್ತಿನಲ್ಲಿ ಇಂತಹ ಹಲವಾರು ಅಧ್ಯಯನಗಳು ಇವೆ, ಮೂಲಸೌಕರ್ಯ ಅಭಿವೃದ್ಧಿಗಾಗಿ ಮಾಡುವ ಅಪಾರ ವೆಚ್ಚಗಳು ನೆಲಗಟ್ಟಿನಲ್ಲಿ ಹಲವು ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಇದು ಚಿತ್ರಿಸುತ್ತಿದೆ. ಮೂಲಸೌಕರ್ಯ ಅಭಿವೃದ್ಧಿ ಮೇಲಿನ ಹೂಡಿಕೆಯು ಇನ್ನೂ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸುತ್ತದೆ. ಕಳೆದ 9 ವರ್ಷಗಳಿಂದ ಕೇಂದ್ರ ಸರ್ಕಾರವು ಮೂಲಸೌಕರ್ಯಗಳ ಮೇಲೆ ನಿರಂತರ ಹೂಡಿಕೆ ಮಾಡುತ್ತಿದೆ. ರಾಜಸ್ಥಾನದಲ್ಲೂ ಕಳೆದ ವರ್ಷಗಳಲ್ಲಿ ಹೆದ್ದಾರಿಗಳ ಅಭಿವೃದ್ಧಿಗೆ 50,000 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡಲಾಗಿದೆ. ಈ ವರ್ಷದ ಬಜೆಟ್‌ನಲ್ಲಿ ಮೂಲಸೌಕರ್ಯಕ್ಕಾಗಿ 10 ಲಕ್ಷ ಕೋಟಿ ರೂ., 2014ಕ್ಕೆ ಹೋಲಿಸಿದರೆ ಇದು 5 ಪಟ್ಟು ಹೆಚ್ಚು. ಈ ಹೂಡಿಕೆಯ ದೊಡ್ಡ ಲಾಭವು ರಾಜಸ್ಥಾನ, ಅದರ ಹಳ್ಳಿಗಳು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳನ್ನು ತಲುಪಲಿದೆ.

ಸ್ನೇಹಿತರೇ

ಹೆದ್ದಾರಿಗಳು, ರೈಲ್ವೆಗಳು, ಬಂದರುಗಳು, ವಿಮಾನ ನಿಲ್ದಾಣಗಳಲ್ಲಿ ಸರ್ಕಾರ ಹೂಡಿಕೆ ಮಾಡಿದಾಗ, ಸರ್ಕಾರವು ಆಪ್ಟಿಕಲ್ ಫೈಬರ್ ಜಾಲವನ್ನು ಅಭಿವೃದ್ಧಿ ಪಡಿಸಿದಾಗ ಡಿಜಿಟಲ್ ಸಂಪರ್ಕ ವಿಸ್ತರಣೆ ಆಗುತ್ತದೆ. ಸರ್ಕಾರವು ಬಡವರಿಗೆ ಕೋಟಿಗಟ್ಟಲೆ ಮನೆಗಳನ್ನು ನಿರ್ಮಿಸಿದಾಗ ಅಥವಾ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿದಾಗ, ಅದು ಸಾಮಾನ್ಯ ಜನರು, ವ್ಯಾಪಾರಿಗಳು, ಕೈಗಾರಿಕೆಗಳು ಅಥವಾ ಸಣ್ಣ ಉದ್ಯಮಗಳು ಎಲ್ಲರಿಗೂ ಉತ್ತೇಜನ ನೀಡುತ್ತದೆ. ಸಿಮೆಂಟ್, ಕಬ್ಬಿಣದ ಸರಳು, ಮರಳು, ಜಲ್ಲಿ ಮುಂತಾದ ವಸ್ತುಗಳ ವ್ಯಾಪಾರದಿಂದ ಹಿಡಿದು ಸಾರಿಗೆ ಕ್ಷೇತ್ರದವರೆಗೆ ಎಲ್ಲರಿಗೂ ಇದರಿಂದ ಲಾಭ ಮತ್ತು ಪ್ರಯೋಜನ ಸಿಗುತ್ತದೆ. ಈ ಉದ್ಯಮಗಳಲ್ಲಿ ಅನೇಕ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ. ವ್ಯಾಪಾರವು ಅಭಿವೃದ್ಧಿ ಹೊಂದಿದಾಗ, ಅದರಲ್ಲಿ ಕೆಲಸ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತದೆ. ಅಂದರೆ ಮೂಲಸೌಕರ್ಯಗಳ ಮೇಲೆ ಹೆಚ್ಚು ಹೂಡಿಕೆ ಮಾಡಿದಷ್ಟೂ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ. ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ನಿರ್ಮಾಣದ ಸಮಯದಲ್ಲೂ ಹಲವಾರು ಜನರಿಗೆ ಇದೇ ರೀತಿಯ ಅವಕಾಶಗಳು ಸಿಕ್ಕಿವೆ.

ಸ್ನೇಹಿತರೇ!

ಆಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸುವ ಇನ್ನೊಂದು ಬದಿಯೂ ಇದೆ. ಈ ಮೂಲಸೌಕರ್ಯ ಸಿದ್ಧವಾದಾಗ, ರೈತರು, ಕಾಲೇಜು ಮತ್ತು ಕಚೇರಿ ಪ್ರಯಾಣಿಕರು, ಟ್ರಕ್-ಟೆಂಪೋ ಚಾಲಕರು, ವ್ಯಾಪಾರಸ್ಥರು ಮತ್ತಿತರ ಜನರು ಉತ್ತಮ ಸೌಲಭ್ಯಗಳನ್ನು ಹೊಂದುತ್ತಾರೆ, ಅವರ ಆರ್ಥಿಕ ಚಟುವಟಿಕೆಗಳು ಸಹ ಮತ್ತಷ್ಟು ಬೆಳೆಯುತ್ತವೆ. ಉದಾಹರಣೆಗೆ, ದೆಹಲಿ-ದೌಸಾ-ಲಾಲ್ಸೋಟ್ ಎಕ್ಸ್‌ಪ್ರೆಸ್‌ವೇಯೊಂದಿಗೆ, ಜೈಪುರದಿಂದ ದೆಹಲಿಗೆ ಹಿಂದೆ 5-6 ಗಂಟೆ ತೆಗೆದುಕೊಳ್ಳುತ್ತಿದ್ದ ಪ್ರಯಾಣವನ್ನು ಈಗ ಅರ್ಧ ಸಮಯದಲ್ಲಿ ಪೂರ್ಣಗೊಳಿಸಬಹುದು. ಇದರಿಂದ ಎಷ್ಟು ಸಮಯ ಉಳಿತಾಯವಾಗುತ್ತದೆ ಎಂದು ನೀವು ಊಹಿಸಬಹುದು. ದೆಹಲಿಯಲ್ಲಿ ಕೆಲಸ ಮಾಡುವ, ಅಥವಾ ವ್ಯಾಪಾರದಲ್ಲಿ ತೊಡಗಿರುವ ಅಥವಾ ಬೇರೆ ಯಾವುದೇ ಕೆಲಸಕ್ಕಾಗಿ ಪ್ರಯಾಣಿಸಬೇಕಾದ ಈ ಪ್ರದೇಶದ ಸ್ನೇಹಿತರು ಈಗ ಸಂಜೆ ಹೊತ್ತಿಗೆ ಸುಲಭವಾಗಿ ತಮ್ಮ ಮನೆ ತಲುಪಬಹುದು. ದೆಹಲಿಗೆ ಮತ್ತು ಅಲ್ಲಿಂದ ಸರಕುಗಳನ್ನು ಸಾಗಿಸುವ ಟ್ರಕ್-ಟೆಂಪೋ ಚಾಲಕರು ತಮ್ಮ ಇಡೀ ದಿನವನ್ನು ರಸ್ತೆಯಲ್ಲೇ ಕಳೆಯಬೇಕಾಗಿಲ್ಲ. ಸಣ್ಣ ರೈತರು ಮತ್ತು ಹೈನುಗಾರರು ತಾವು ಬೆಳೆದ ತರಕಾರಿಗಳು ಮತ್ತು ಹಾಲನ್ನು ದೆಹಲಿಗೆ ಕಡಿಮೆ ವೆಚ್ಚದಲ್ಲಿ ಸುಲಭವಾಗಿ ಕಳುಹಿಸಬಹುದು. ವಿಳಂಬದಿಂದಾಗಿ ಅವರ ಸರಕುಗಳು ದಾರಿಯಲ್ಲಿ ನಾಶವಾಗುವ ಅಪಾಯವೂ ಈಗ ಕಡಿಮೆಯಾಗಿದೆ.

ಸಹೋದರ, ಸಹೋದರಿಯರೇ

ಈ ಎಕ್ಸ್‌ಪ್ರೆಸ್‌ವೇ ಸುತ್ತಲೂ ಗ್ರಾಮೀಣ ಮಾರುಕಟ್ಟೆಗಳನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಸ್ಥಳೀಯ ರೈತರು, ನೇಕಾರರು, ಕರಕುಶಲಗಾರರು ತಮ್ಮ ಉತ್ಪನ್ನಗಳನ್ನು ಸುಲಭವಾಗಿ ಮಾರಾಟ ಮಾಡಲು ಸಾಧ್ಯವಾಗುತ್ತದೆ. ರಾಜಸ್ಥಾನದ ಜತೆಗೆ, ಹರಿಯಾಣ, ಮಧ್ಯಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರದ ಹಲವಾರು ಜಿಲ್ಲೆಗಳು ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಿಂದ ಹೆಚ್ಚು ಪ್ರಯೋಜನ ಪಡೆಯುತ್ತವೆ. ಹರಿಯಾಣದ ಮೇವಾತ್ ಜಿಲ್ಲೆ ಮತ್ತು ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಹೊಸ ಆದಾಯದ ಮಾರ್ಗಗಳು ಸೃಷ್ಟಿಯಾಗಲಿವೆ. ಈ ಆಧುನಿಕ ಸಂಪರ್ಕವು ಸರಿಸ್ಕಾ ಹುಲಿ ರಕ್ಷಿತಾರಣ್ಯ(ಟೈಗರ್ ರಿಸರ್ವ್), ಕಿಯೋಲಾಡಿಯೊ, ರಣಥಂಬೋರ್ ರಾಷ್ಟ್ರೀಯ ಉದ್ಯಾನವನ, ಜೈಪುರ ಮತ್ತು ಅಜ್ಮೀರ್‌ನಂತಹ ಹಲವಾರು ಪ್ರವಾಸಿ ಸ್ಥಳಗಳಿಗೆ ಸಹ ಪ್ರಯೋಜನ ನೀಡುತ್ತದೆ. ರಾಜಸ್ಥಾನ ಈಗಾಗಲೇ ದೇಶ ಮತ್ತು ವಿದೇಶಗಳ ಪ್ರವಾಸಿಗರಿಗೆ ಆಕರ್ಷಕ ತಾಣವಾಗಿದೆ. ಈಗ ಅದರ ಆಕರ್ಷಣೆ ಇನ್ನಷ್ಟು ಹೆಚ್ಚಲಿದೆ.

ಸ್ನೇಹಿತರೇ,

ಇದಲ್ಲದೆ, ಇನ್ನೂ 3 ಪ್ರಮುಖ ಯೋಜನೆಗಳಿಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಯೋಜನೆಗಳಲ್ಲಿ ಒಂದು ಈ ಎಕ್ಸ್‌ಪ್ರೆಸ್‌ವೇ ಮೂಲಕ ಜೈಪುರಕ್ಕೆ ನೇರ ಸಂಪರ್ಕ ಒದಗಿಸುತ್ತದೆ. ಇದರೊಂದಿಗೆ, ಜೈಪುರದಿಂದ ದೆಹಲಿಗೆ ಪ್ರಯಾಣವು ಕೇವಲ 2.5 ಗಂಟೆಗಳಿಂದ 3 ಗಂಟೆಗಳವರೆಗೆ ಕಡಿಮೆಯಾಗುತ್ತದೆ. 2ನೇ ಯೋಜನೆಯು ಈ ಎಕ್ಸ್‌ಪ್ರೆಸ್‌ವೇಯನ್ನು ಅಲ್ವಾರ್ ಬಳಿಯ ಅಂಬಾಲಾ-ಕೋಟ್‌ಪುಟ್ಲಿ ಕಾರಿಡಾರ್‌ ಗೆ ಸಂಪರ್ಕಿಸುತ್ತದೆ. ಇದರೊಂದಿಗೆ ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಜಮ್ಮು-ಕಾಶ್ಮೀರದಿಂದ ಬರುವ ವಾಹನಗಳು ಪಂಜಾಬ್, ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಕಡೆಗೆ ಸುಲಭವಾಗಿ ಹೋಗಬಹುದು. ಮತ್ತೊಂದು ಯೋಜನೆ ಅಂದರೆ ಲಾಲ್ಸೋಟ್-ಕರೌಲಿ ರಸ್ತೆಯ ಅಭಿವೃದ್ಧಿ. ಈ ರಸ್ತೆಯು ಈ ಪ್ರದೇಶವನ್ನು ಎಕ್ಸ್‌ಪ್ರೆಸ್‌ವೇಯೊಂದಿಗೆ ಸಂಪರ್ಕಿಸುವುದಲ್ಲದೆ, ಈ ಪ್ರದೇಶದ ಜನರಿಗೆ ದೈನಂದಿನ ಜೀವನವನ್ನು ಸುಲಭಗೊಳಿಸುತ್ತದೆ.

ಸ್ನೇಹಿತರೇ,

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಮತ್ತು ಪಶ್ಚಿಮ ಮೀಸಲಾದ ಸರಕು ಸಾಗಣೆ ಕಾರಿಡಾರ್ ರಾಜಸ್ಥಾನ ಮತ್ತು ದೇಶದ ಪ್ರಗತಿಯ ಎರಡು ಬಲವಾದ ಸ್ತಂಭಗಳಾಗಲಿವೆ. ಈ ಯೋಜನೆಗಳು ಸದ್ಯದಲ್ಲಿಯೇ ರಾಜಸ್ಥಾನ ಸೇರಿದಂತೆ ಇಡೀ ಪ್ರದೇಶದ ಚಿತ್ರಣವನ್ನೇ ಬದಲಿಸಲಿವೆ. ಈ ಎರಡೂ ಯೋಜನೆಗಳು ದೆಹಲಿ-ಮುಂಬೈ ಕೈಗಾರಿಕಾ ಕಾರಿಡಾರ್ ಅನ್ನು ಬಲಪಡಿಸುತ್ತವೆ. ಈ ರಸ್ತೆ ಮತ್ತು ಸರಕು ಸಾಗಣೆ ಕಾರಿಡಾರ್‌ಗಳು ಹರಿಯಾಣ ಮತ್ತು ರಾಜಸ್ಥಾನ ಸೇರಿದಂತೆ ಪಶ್ಚಿಮ ಭಾರತದ ಹಲವಾರು ರಾಜ್ಯಗಳನ್ನು ಬಂದರುಗಳಿಗೆ ಸಂಪರ್ಕಿಸುತ್ತದೆ. ಇದರೊಂದಿಗೆ, ಸರಕು ಸಾಗಣೆ, ಸಾರಿಗೆ ಮತ್ತು ಸಂಗ್ರಹಣೆಗೆ ಸಂಬಂಧಿಸಿದ ವಿವಿಧ ರೀತಿಯ ಕೈಗಾರಿಕೆಗಳಿಗೆ ಹೊಸ ಸಾಧ್ಯತೆಗಳು ಹೊರಹೊಮ್ಮಲು ಪ್ರಾರಂಭಿಸುತ್ತವೆ.

ಸ್ನೇಹಿತರೇ,

ಇಂದು ಈ ಎಕ್ಸ್‌ಪ್ರೆಸ್‌ವೇ ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್‌ನಿಂದ ಉತ್ತೇಜನ ಪಡೆಯುತ್ತಿರುವುದು ನನಗೆ ಖುಷಿ ತಂದಿದೆ. ಗತಿ ಶಕ್ತಿ ಮಾಸ್ಟರ್‌ಪ್ಲಾನ್ ಅಡಿ, 5ಜಿ ತಂತ್ರಜ್ಞಾನ ಜಾಲಕ್ಕೆ ಅಗತ್ಯವಿರುವ ಆಪ್ಟಿಕಲ್ ಫೈಬರ್ ಅನ್ನು ಹಾಕಲು ಈ ಎಕ್ಸ್‌ಪ್ರೆಸ್‌ವೇಯಲ್ಲಿ ಕಾರಿಡಾರ್ ನಿಗದಿಪಡಿಸಲಾಗಿದೆ. ವಿದ್ಯುತ್ ವೈರಿಂಗ್ ಮತ್ತು ಗ್ಯಾಸ್ ಪೈಪ್‌ಲೈನ್‌ಗಳಿಗೂ ಸ್ವಲ್ಪ ಜಾಗ ಮೀಸಲಿಡಲಾಗಿದೆ. ಹೆಚ್ಚುವರಿ ಭೂಮಿಯನ್ನು ಸೌರ ವಿದ್ಯುತ್ ಉತ್ಪಾದನೆ ಮತ್ತು ಉಗ್ರಾಣಕ್ಕೆ ಬಳಸಲಾಗುವುದು. ಈ ಎಲ್ಲಾ ಪ್ರಯತ್ನಗಳು ಭವಿಷ್ಯದಲ್ಲಿ ಕೋಟ್ಯಂತರ ರೂಪಾಯಿ ಹಣ ಉಳಿಸುತ್ತದೆ ಮತ್ತು ದೇಶದ ಅತ್ಯಮೂಲ್ಯ ಸಮಯ ಉಳಿಸುತ್ತದೆ.

ಸ್ನೇಹಿತರೇ,

ರಾಜಸ್ಥಾನ ಮತ್ತು ದೇಶದ ಅಭಿವೃದ್ಧಿಗೆ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ನಮ್ಮ ಮಂತ್ರವಾಗಿದೆ. ಈ ಮಂತ್ರವನ್ನು ಅನುಸರಿಸಿ, ನಾವು ಸಮರ್ಥ, ದಕ್ಷ ಮತ್ತು ಸಮೃದ್ಧ ಭಾರತವನ್ನು ನಿರ್ಮಿಸುತ್ತಿದ್ದೇವೆ. ಇದೀಗ, ನಾನು ಇಲ್ಲಿ ಹೆಚ್ಚು ಕಾಲ ತೆಗೆದುಕೊಳ್ಳುವುದಿಲ್ಲ. 15 ನಿಮಿಷಗಳ ನಂತರ, ನಾನು ಇಲ್ಲೇ ಸಮೀಪದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಬೇಕು. ಅಲ್ಲಿ ರಾಜಸ್ಥಾನದ ಹೆಚ್ಚಿನ ಸಂಖ್ಯೆಯ ಜನರು ಕಾಯುತ್ತಿದ್ದಾರೆ. ಹಾಗಾಗಿ ಉಳಿದ ಎಲ್ಲಾ ವಿಷಯಗಳನ್ನು ಅಲ್ಲಿನ ಜನರೊಂದಿಗೆ ಹಂಚಿಕೊಳ್ಳುತ್ತೇನೆ. ಆದ್ದರಿಂದ, ಮತ್ತೊಮ್ಮೆ, ಆಧುನಿಕ ಎಕ್ಸ್ ಪ್ರೆಸ್‌ವೇಗಾಗಿ ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ.

ತುಂಬು ಧನ್ಯವಾದಗಳು

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
MSME exports touch Rs 9.52 lakh crore in April–September FY26: Govt tells Parliament

Media Coverage

MSME exports touch Rs 9.52 lakh crore in April–September FY26: Govt tells Parliament
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2025
December 21, 2025

Assam Rising, Bharat Shining: PM Modi’s Vision Unlocks North East’s Golden Era