ಗೌರವಾನ್ವಿತ ಅಧ್ಯಕ್ಷರಾದ ರಮಾಫೋಸಾ,

ಗೌರವಾನ್ವಿತ ಅಧ್ಯಕ್ಷರಾದ ಲುಲಾ ಡಾ ಸಿಲ್ವಾ,

ಗೌರವಾನ್ವಿತ ಅಧ್ಯಕ್ಷರಾದ ಪುಟಿನ್,

ಗೌರವಾನ್ವಿತ ಅಧ್ಯಕ್ಷರಾದ ಕ್ಸಿ,

ಮಹಿಳೆಯರೆ ಮತ್ತು ಸಜ್ಜನರೆ,

 

15ನೇ ಬ್ರಿಕ್ಸ್ ಶೃಂಗಸಭೆಯ ಅದ್ಧೂರಿ ಆಯೋಜನೆ ಮತ್ತು ನಮಗೆ ನೀಡಿದ ಆತ್ಮೀಯ ಆತಿಥ್ಯಕ್ಕಾಗಿ ನಾನು ಮತ್ತೊಮ್ಮೆ ನನ್ನ ಆತ್ಮೀಯ ಸ್ನೇಹಿತ ಅಧ್ಯಕ್ಷ ರಾಮಾಫೋಸಾ ಅವರನ್ನು ಅಭಿನಂದಿಸುತ್ತೇನೆ ಮತ್ತು ಧನ್ಯವಾದ ಹೇಳುತ್ತೇನೆ.

ಸುಂದರ ನಗರವಾದ ಜೋಹಾನ್ಸ್ ಬರ್ಗ್‌ಗೆ ಮತ್ತೊಮ್ಮೆ ಬಂದಿರುವುದು ನನಗೆ ಮತ್ತು ನನ್ನ ನಿಯೋಗಕ್ಕೆ ಬಹಳ ಸಂತೋಷದ ವಿಷಯವಾಗಿದೆ. ಈ ನಗರವು ಭಾರತದ ಜನರು ಮತ್ತು ಭಾರತದ ಇತಿಹಾಸದೊಂದಿಗೆ ಅತ್ಯಂತ ಆಳವಾದ ಸಂಪರ್ಕ ಹೊಂದಿದೆ. ಇಲ್ಲಿಂದ ಸ್ವಲ್ಪ ದೂರದಲ್ಲಿರುವ ಟಾಲ್‌ಸ್ಟಾಯ್ ಫಾರ್ಮ್ ಅನ್ನು 110 ವರ್ಷಗಳ ಹಿಂದೆ ಮಹಾತ್ಮ ಗಾಂಧಿ ಅವರು ನಿರ್ಮಿಸಿದ್ದರು. ಭಾರತ, ಯುರೇಷಿಯಾ ಮತ್ತು ಆಫ್ರಿಕಾದ ಶ್ರೇಷ್ಠ ವಿಚಾರಗಳನ್ನು ಸಂಯೋಜಿಸುವ ಮೂಲಕ, ಮಹಾತ್ಮ ಗಾಂಧಿ ಅವರು ನಮ್ಮ ಏಕತೆ ಮತ್ತು ಪರಸ್ಪರ ಸಾಮರಸ್ಯಕ್ಕೆ ಬಲವಾದ ಅಡಿಪಾಯ ಹಾಕಿದರು.

ಗೌರವಾನ್ವಿತ ಗಣ್ಯರೆ,

ಕಳೆದ ಸುಮಾರು 2 ದಶಕಗಳಲ್ಲಿ, ಬ್ರಿಕ್ಸ್ ಸುದೀರ್ಘ ಮತ್ತು ಅದ್ಭುತ ಪ್ರಯಾಣ ಪೂರ್ಣಗೊಳಿಸಿದೆ. ಈ ಪಯಣದಲ್ಲಿ ನಾವು ಹಲವಾರು ಸಾಧನೆ ಮಾಡಿದ್ದೇವೆ. ನಮ್ಮ ‘ಹೊಸ ಅಭಿವೃದ್ಧಿ ಬ್ಯಾಂಕ್’ ಜಾಗತಿಕ ದಕ್ಷಿಣದ ದೇಶಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ನಾವು ಆಕಸ್ಮಿಕ ಅಥವಾ ತುರ್ತು ಮೀಸಲು ನಿಧಿ ವ್ಯವಸ್ಥೆ ಮೂಲಕ ಆರ್ಥಿಕ ಸುರಕ್ಷತಾ ಜಾಲವನ್ನು ರಚಿಸಿದ್ದೇವೆ. ಬ್ರಿಕ್ಸ್ ಉಪಗ್ರಹ ಸಂವಿಧಾನ, ಲಸಿಕೆ ಆರ್ & ಡಿ ಸೆಂಟರ್, ಫಾರ್ಮಾ ಉತ್ಪನ್ನಗಳ ಪರಸ್ಪರ ಗುರುತಿಸುವಿಕೆ ಮುಂತಾದ ಉಪಕ್ರಮಗಳೊಂದಿಗೆ ನಾವು ಬ್ರಿಕ್ಸ್ ದೇಶಗಳ ಸಾಮಾನ್ಯ ನಾಗರಿಕರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತಿದ್ದೇವೆ. ಯುವ ಶೃಂಗಸಭೆ, ಬ್ರಿಕ್ಸ್ ಆಟಗಳು, ಚಿಂತಕರ ಚಾವಡಿ ಮಂಡಳಿಯಂತಹ ಉಪಕ್ರಮಗಳ ಮೂಲಕ ನಾವು ಎಲ್ಲಾ ದೇಶಗಳ ನಡುವೆ ಜನರ-ಜನರ ನಡುವಿನ ಸಂಬಂಧವನ್ನು ಬಲಪಡಿಸುತ್ತಿದ್ದೇವೆ. ರೈಲ್ವೆ ಸಂಶೋಧನಾ ಜಾಲ, ಎಂಎಸ್‌ಎಂಇಗಳ ನಡುವಿನ ನಿಕಟ ಸಹಕಾರ, ಆನ್‌ಲೈನ್ ಬ್ರಿಕ್ಸ್ ಡೇಟಾಬೇಸ್, ಸ್ಟಾರ್ಟಪ್ ವೇದಿಕೆ ಬ್ರಿಕ್ಸ್ ಕಾರ್ಯಸೂಚಿಗೆ ಹೊಸ ದಿಕ್ಕು ನೀಡಲು ಭಾರತ ನೀಡಿದ ಕೆಲವು ಸಲಹೆಗಳಾಗಿವೆ.

ಈ ವಿಷಯಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ ಎಂಬುದು ನನಗೆ ಖುಷಿ ನೀಡಿದೆ.

ಗೌರವಾನ್ವಿತ ಗಣ್ಯರೆ,

ನಮ್ಮ ನಿಕಟ ಸಹಕಾರವನ್ನು ಇನ್ನಷ್ಟು ವಿಸ್ತರಿಸಲು ನಾನು ಕೆಲವು ಸಲಹೆಗಳನ್ನು ಮುಂದಿಡಲು ಬಯಸುತ್ತೇನೆ. ಮೊದಲನೆಯದು ಬಾಹ್ಯಾಕಾಶ ಕ್ಷೇತ್ರದಲ್ಲಿ ಸಹಕಾರ. ನಾವು ಈಗಾಗಲೇ ಬ್ರಿಕ್ಸ್ ಉಪಗ್ರಹ ಸಮೂಹದಲ್ಲಿ ಕೆಲಸ ಮಾಡುತ್ತಿದ್ದೇವೆ. ಒಂದು ಹೆಜ್ಜೆ ಮುಂದೆ ಇಟ್ಟು, ನಾವು ಬ್ರಿಕ್ಸ್ ಬಾಹ್ಯಾಕಾಶ ಪರಿಶೋಧನೆ ಒಕ್ಕೂಟ ರಚಿಸುವುದನ್ನು ಪರಿಗಣಿಸಬಹುದು. ಇದರ ಅಡಿ, ನಾವು ಬಾಹ್ಯಾಕಾಶ ಸಂಶೋಧನೆ, ಹವಾಮಾನ ಮೇಲ್ವಿಚಾರಣೆಯಂತಹ ಕ್ಷೇತ್ರಗಳಲ್ಲಿ ಜಾಗತಿಕ ಒಳಿತಿಗಾಗಿ ಕೆಲಸ ಮಾಡಬಹುದು. ನನ್ನ 2ನೇ ಸಲಹೆ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ತಂತ್ರಜ್ಞಾನದಲ್ಲಿ ಸಹಕಾರ. ಬ್ರಿಕ್ಸ್ ಅನ್ನು ಭವಿಷ್ಯದ ಸಿದ್ಧ ಸಂಸ್ಥೆಯನ್ನಾಗಿ ಮಾಡಲು, ನಾವು ನಮ್ಮ ಸಮಾಜಗಳ ಭವಿಷ್ಯವನ್ನು ಸಿದ್ಧಗೊಳಿಸಬೇಕು. ಇದರಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಲಿದೆ. ಭಾರತದಲ್ಲಿ, ನಾವು ದೂರದ ಮತ್ತು ಗ್ರಾಮೀಣ ಪ್ರದೇಶಗಳ ಮಕ್ಕಳಿಗೆ ಶಿಕ್ಷಣ ಒದಗಿಸಲು ಜ್ಞಾನ ಹಂಚಿಕೆ ವೇದಿಕೆಗಾಗಿ ದೀಕ್ಷಾ ಅಂದರೆ ಡಿಜಿಟಲ್ ಮೂಲಸೌಕರ್ಯ  ರಚಿಸಿದ್ದೇವೆ. ಅಲ್ಲದೆ, ಶಾಲಾ ವಿದ್ಯಾರ್ಥಿಗಳಲ್ಲಿ ನಾವೀನ್ಯತೆ ಉತ್ತೇಜಿಸಲು, ನಾವು ದೇಶಾದ್ಯಂತ 10,000 ಅಟಲ್ ಟಿಂಕರಿಂಗ್ ಲ್ಯಾಬ್‌ಗಳನ್ನು ಸ್ಥಾಪಿಸಿದ್ದೇವೆ.

ಭಾಷೆಯ ಅಡೆತಡೆಗಳನ್ನು ತೆಗೆದುಹಾಕಲು ಕೃತಕ ಬುದ್ಧಿಮತ್ತೆ ಆಧಾರಿತ ಭಾಷಾ ವೇದಿಕೆಯಾದ ‘ಭಾಷಿಣಿ’ಯನ್ನು ಭಾರತದಲ್ಲಿ ಬಳಸಲಾಗುತ್ತಿದೆ. ಲಸಿಕೆಗಾಗಿ CoWIN ವೇದಿಕೆ ಸೃಜಿಸಿದ್ದೇವೆ. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಅಂದರೆ ಇಂಡಿಯಾ ಸ್ಟಾಕ್ ಮೂಲಕ ಸಾರ್ವಜನಿಕ ಸೇವಾ ವಿತರಣೆಯನ್ನು ಕ್ರಾಂತಿಗೊಳಿಸಲಾಗುತ್ತಿದೆ. ವೈವಿಧ್ಯತೆಯು ಭಾರತದ ದೊಡ್ಡ ಶಕ್ತಿಯಾಗಿದೆ. ಭಾರತದಲ್ಲಿನ ಯಾವುದೇ ಸಮಸ್ಯೆಗೆ ಪರಿಹಾರವು ಈ ವೈವಿಧ್ಯತೆಯ ಪರೀಕ್ಷೆಯಲ್ಲಿ ಹೊರಬರುತ್ತದೆ. ಅದಕ್ಕಾಗಿಯೇ ಈ ಪರಿಹಾರಗಳನ್ನು ವಿಶ್ವದ ಯಾವುದೇ ಮೂಲೆಯಲ್ಲಿ ಸುಲಭವಾಗಿ ಕಾರ್ಯಗತಗೊಳಿಸಬಹುದು.

ಈ ಸಂದರ್ಭದಲ್ಲಿ, ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಈ ಎಲ್ಲಾ ವೇದಿಕೆಗಳನ್ನು ಬ್ರಿಕ್ಸ್ ಪಾಲುದಾರರೊಂದಿಗೆ ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ. ನನ್ನ 3ನೇ  ಸಲಹೆಯೆಂದರೆ, ನಾವು ಪರಸ್ಪರರ ಸಾಮರ್ಥ್ಯಗಳನ್ನು ಗುರುತಿಸಲು ಒಟ್ಟಿಗೆ ಕೌಶಲ್ಯಗಳನ್ನು ಮ್ಯಾಪಿಂಗ್ ಮಾಡಬಹುದು. ಈ ಮೂಲಕ ಅಭಿವೃದ್ಧಿಯ ಪಯಣದಲ್ಲಿ ಪರಸ್ಪರ ಪೂರಕವಾಗಿ ಸಾಗಬಹುದು.

ನನ್ನ ನಾಲ್ಕನೇ ಸಲಹೆಯು ದೊಡ್ಡ ಬೆಕ್ಕುಗಳಿಗೆ ಸಂಬಂಧಿಸಿದೆ. ಬ್ರಿಕ್ಸ್ ನ ಎಲ್ಲಾ 5 ದೇಶಗಳಲ್ಲಿ ದೊಡ್ಡ ಸಂಖ್ಯೆಯ ವಿವಿಧ ಜಾತಿಗಳ ದೊಡ್ಡ ಬೆಕ್ಕುಗಳು ಕಂಡುಬರುತ್ತವೆ. ಇಂಟರ್ ನ್ಯಾಷನಲ್ ಬಿಗ್ ಕ್ಯಾಟ್ ಅಲೈಯನ್ಸ್ ಅಡಿ, ನಾವು ಅವುಗಳ ರಕ್ಷಣೆಗಾಗಿ ಜಂಟಿ ಪ್ರಯತ್ನಗಳನ್ನು ಮಾಡಬಹುದು.

ನನ್ನ ಐದನೇ ಸಲಹೆ ಸಾಂಪ್ರದಾಯಿಕ ಔಷಧದ ಬಗ್ಗೆ. ನಾವೆಲ್ಲರೂ ನಮ್ಮ ದೇಶಗಳಲ್ಲಿ ಸಾಂಪ್ರದಾಯಿಕ ಔಷಧದ ಪರಿಸರ ವ್ಯವಸ್ಥೆ ಹೊಂದಿದ್ದೇವೆ. ನಾವು ಒಟ್ಟಾಗಿ ಸಾಂಪ್ರದಾಯಿಕ ಔಷಧದ ಭಂಡಾರವನ್ನು ರಚಿಸಬಹುದಲ್ಲವೆ?

ಗೌರವಾನ್ವಿತ ಗಣ್ಯರೆ,

ದಕ್ಷಿಣ ಆಫ್ರಿಕಾದ ಅಧ್ಯಕ್ಷತೆಯಲ್ಲಿ ಬ್ರಿಕ್ಸ್ ನಲ್ಲಿ ಜಾಗತಿಕ ದಕ್ಷಿಣದ ದೇಶಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ನಾವು ಅದನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಇದು ಈಗಿನ ಕಾಲದ ನಿರೀಕ್ಷೆ ಮಾತ್ರವಲ್ಲ, ಅಗತ್ಯವೂ ಹೌದು. ಭಾರತವು ತನ್ನ ಜಿ-20 ಅಧ್ಯಕ್ಷತೆಯಲ್ಲಿ ಈ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. "ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ" ಎಂಬ ಧ್ಯೇಯವಾಕ್ಯದ ಮೇಲೆ ಎಲ್ಲಾ ದೇಶಗಳೊಂದಿಗೆ ಒಟ್ಟಾಗಿ ಮುನ್ನಡೆಯುವುದು ನಮ್ಮ ಪ್ರಯತ್ನವಾಗಿದೆ. ಈ ವರ್ಷದ ಜನವರಿಯಲ್ಲಿ ನಡೆದ ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯಲ್ಲಿ 125 ದೇಶಗಳು ತಮ್ಮ ಕಾಳಜಿ ಮತ್ತು ಆದ್ಯತೆಗಳನ್ನು ಹಂಚಿಕೊಂಡವು. ಆಫ್ರಿಕ ಒಕ್ಕೂಟಕ್ಕೆ ಜಿ-20 ಕಾಯಂ ಸದಸ್ಯತ್ವ ನೀಡಲು ನಾವು ಪ್ರಸ್ತಾಪಿಸಿದ್ದೇವೆ. ಜಿ-20ರಲ್ಲಿ ಎಲ್ಲಾ ಬ್ರಿಕ್ಸ್  ಪಾಲುದಾರರು ಕೂಡ ಒಟ್ಟಿಗೆ ಇದ್ದಾರೆ ಎಂಬುದು ನನಗೆ ಖಾತ್ರಿಯಿದೆ, ಎಲ್ಲರೂ ನಮ್ಮ ಪ್ರಸ್ತಾಪವನ್ನು ಬೆಂಬಲಿಸುತ್ತಾರೆ. ಬ್ರಿಕ್ಸ್ ನಲ್ಲಿ ಈ ಎಲ್ಲಾ ಪ್ರಯತ್ನಗಳಿಗೆ ವಿಶೇಷ ಸ್ಥಾನ ನೀಡುವುದರಿಂದ ಜಾಗತಿಕ ದಕ್ಷಿಣದ ದೇಶಗಳ ಆತ್ಮವಿಶ್ವಾಸ ಹೆಚ್ಚಾಗುತ್ತದೆ.

ಗೌರವಾನ್ವಿತ ಗಣ್ಯರೆ,

ಭಾರತವು ಬ್ರಿಕ್ಸ್ ಸದಸ್ಯತ್ವದ ವಿಸ್ತರಣೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಇದರಲ್ಲಿ ಒಮ್ಮತದಿಂದ ಮುನ್ನಡೆಯುವುದನ್ನು ಸ್ವಾಗತಿಸುತ್ತೇನೆ. 2016ರಲ್ಲಿ ಭಾರತದ ಅಧ್ಯಕ್ಷತೆಯ  ಅವಧಿಯಲ್ಲಿ, ನಾವು ಬ್ರಿಕ್ಸ್ ಅನ್ನು ಸ್ಪಂದನಾಶೀಲ, ಎಲ್ಲರನ್ನೂ ಒಳಗೊಂಡ ಮತ್ತು ಸಂಘಟಿತ ಪರಿಹಾರ ಎಂದು ವ್ಯಾಖ್ಯಾನಿಸಿದ್ದೇವೆ.

7 ವರ್ಷಗಳ ನಂತರ, ನಾವೀಗ ಹೇಳಬಹುದು - ಬ್ರಿಕ್ಸ್ ಅಡೆತಡೆಗಳನ್ನು ಮುರಿಯಲಿದೆ,  ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲಿದೆ ಹೊಸತನ ಪ್ರೇರೇಪಿಸಲಿದೆ, ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಭವಿಷ್ಯವನ್ನು ರೂಪಿಸುತ್ತದೆ ಎಂದು.

ಎಲ್ಲಾ ಬ್ರಿಕ್ಸ್ ಪಾಲುದಾರರೊಂದಿಗೆ, ಈ ಹೊಸ ವ್ಯಾಖ್ಯಾನವನ್ನು ಅರ್ಥಪೂರ್ಣವಾಗಿಸಲು ನಾವು ಸಕ್ರಿಯವಾಗಿ ಕೊಡುಗೆ ನೀಡುವುದನ್ನು ಮುಂದುವರಿಸುತ್ತೇವೆ.

ತುಂಬು ಧನ್ಯವಾದಗಳು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Centre hikes MSP on jute by Rs 315, promises 66.8% returns for farmers

Media Coverage

Centre hikes MSP on jute by Rs 315, promises 66.8% returns for farmers
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 23 ಜನವರಿ 2025
January 23, 2025

Citizens Appreciate PM Modi’s Effort to Celebrate India’s Heroes