ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡೆಹ್ರಾಡೂನ್ ಗೆ ಭೇಟಿ ನೀಡಲಿದ್ದು, ನವೆಂಬರ್ 9 ರಂದು ಮಧ್ಯಾಹ್ನ 12:30ರ ಸುಮಾರಿಗೆ ಉತ್ತರಾಖಂಡದ ರಚನೆಯ ರಜತ ಮಹೋತ್ಸವ ಆಚರಣೆಯ ಅಂಗವಾಗಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಿರುವ ಮತ್ತು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು 930 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಯೋಜನೆಗಳ ಉದ್ಘಾಟನೆ ಮತ್ತು 7210 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಯೋಜನೆಗಳ ಶಂಕುಸ್ಥಾಪನೆ ಸೇರಿದಂತೆ 8140 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳು ಕುಡಿಯುವ ನೀರು, ನೀರಾವರಿ, ತಾಂತ್ರಿಕ ಶಿಕ್ಷಣ, ಇಂಧನ, ನಗರಾಭಿವೃದ್ಧಿ, ಕ್ರೀಡೆ ಮತ್ತು ಕೌಶಲ ಅಭಿವೃದ್ಧಿ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳ ಆವಶ್ಯಕತೆಗಳನ್ನು ಪೂರೈಸುತ್ತವೆ.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 28,000ಕ್ಕೂ ಹೆಚ್ಚು ರೈತರಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ 62 ಕೋಟಿ ರೂ.ಗಳ ಬೆಂಬಲ ಮೊತ್ತವನ್ನು ಪ್ರಧಾನಿ ಬಿಡುಗಡೆ ಮಾಡಲಿದ್ದಾರೆ.
ಪ್ರಧಾನಮಂತ್ರಿ ಅವರು ಉದ್ಘಾಟಿಸಲಿರುವ ಯೋಜನೆಗಳಲ್ಲಿ ಅಮೃತ್ ಯೋಜನೆಯಡಿ 23 ವಲಯಗಳಿಗೆ ಡೆಹ್ರಾಡೂನ್ ನೀರು ಸರಬರಾಜು ವ್ಯಾಪ್ತಿ, ಪಿಥೋರಗಢ ಜಿಲ್ಲೆಯ ವಿದ್ಯುತ್ ಉಪಕೇಂದ್ರ, ಸರ್ಕಾರಿ ಕಟ್ಟಡಗಳಲ್ಲಿ ಸೌರ ವಿದ್ಯುತ್ ಸ್ಥಾವರಗಳು, ನೈನಿತಾಲ್ ನ ಹಲ್ದ್ವಾನಿ ಕ್ರೀಡಾಂಗಣದಲ್ಲಿ ಆಸ್ಟ್ರೋಟರ್ಫ್ ಹಾಕಿ ಮೈದಾನ ಸೇರಿವೆ.
ಪ್ರಧಾನಮಂತ್ರಿ ಅವರು ಎರಡು ಪ್ರಮುಖ ಜಲ-ವಲಯಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ - ಸಾಂಗ್ ಅಣೆಕಟ್ಟು ಕುಡಿಯುವ ನೀರಿನ ಯೋಜನೆ ಒಂದಾಗಿದೆ. ಇದು ಡೆಹ್ರಾಡೂನ್ ಗೆ 150 ಎಂ.ಎಲ್.ಡಿ (ದಿನಕ್ಕೆ ದಶಲಕ್ಷ ಲೀಟರ್) ಕುಡಿಯುವ ನೀರನ್ನು ಪೂರೈಸುತ್ತದೆ ಮತ್ತು ನೈನಿತಾಲ್ ನ ಜಮಾರಾನಿ ಅಣೆಕಟ್ಟು ವಿವಿಧೋದ್ದೇಶ ಯೋಜನೆ ಮತ್ತೊಂದು ಯೋಜನೆಯಾಗಿದೆ. ಇದು ಕುಡಿಯುವ ನೀರು, ನೀರಾವರಿ ಮತ್ತು ವಿದ್ಯುತ್ ಉತ್ಪಾದನೆಗೆ ಬೆಂಬಲ ನೀಡುತ್ತದೆ. ವಿದ್ಯುತ್ ಉಪಕೇಂದ್ರಗಳು, ಚಂಪಾವತ್ ನಲ್ಲಿ ಮಹಿಳಾ ಕ್ರೀಡಾ ಕಾಲೇಜು ಸ್ಥಾಪನೆ, ನೈನಿತಾಲ್ ನಲ್ಲಿ ಅತ್ಯಾಧುನಿಕ ಡೈರಿ ಘಟಕ ಸೇರಿದಂತೆ ಇತರ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.


