ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 12 ರಂದು ಸಂಜೆ 4:30ರ ಸುಮಾರಿಗೆ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುವ ಜ್ಞಾನ ಭಾರತಂ ಕುರಿತಾದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಹಸ್ತಪ್ರತಿ ಡಿಜಿಟಲೀಕರಣ, ಸಂರಕ್ಷಣೆ ಮತ್ತು ಸಾರ್ವಜನಿಕ ಪ್ರವೇಶವನ್ನು ವೇಗಗೊಳಿಸಲು ಮೀಸಲಾದ ಡಿಜಿಟಲ್ ವೇದಿಕೆಯಾದ ಜ್ಞಾನ ಭಾರತಂ ಪೋರ್ಟಲ್ ಅನ್ನು ಸಹ ಅವರು ಉದ್ಘಾಟಿಸಲಿದ್ದು, ಈ ಸಂದರ್ಭದಲ್ಲಿ ಅಲ್ಲಿ ನೆರೆದ ಸಭೆಯನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಲಿದ್ದಾರೆ.
"ಹಸ್ತಪ್ರತಿ ಪರಂಪರೆಯ ಮೂಲಕ ಭಾರತದ ಜ್ಞಾನ ಪರಂಪರೆಯ ಮರಳಿ ಪಡೆಯುವುವಿಕೆ" ಎಂಬ ವಿಷಯದಡಿಯಲ್ಲಿ ಸೆಪ್ಟೆಂಬರ್ 11 ರಿಂದ 13 ರವರೆಗೆ ಈ ಸಮ್ಮೇಳನ ನಡೆಯಲಿದ್ದು, ಭಾರತದ ಅಪ್ರತಿಮ ಹಸ್ತಪ್ರತಿ ಸಂಪತ್ತನ್ನು ಪುನರುಜ್ಜೀವನಗೊಳಿಸುವ ಮಾರ್ಗಗಳ ಕುರಿತು ಚರ್ಚಿಸಲು ಮತ್ತು ಅದನ್ನು ಜಾಗತಿಕ ಜ್ಞಾನ ಸಂವಾದದ ಪ್ರಮುಖ ಭಾಗವಾಗಿಸಲು ಈ ಸಮ್ಮೇಳನವು ಪ್ರಮುಖ ವಿದ್ವಾಂಸರು, ಸಂರಕ್ಷಣಾವಾದಿಗಳು, ತಂತ್ರಜ್ಞರು ಮತ್ತು ನೀತಿ ತಜ್ಞರನ್ನು ಒಂದೇ ಮೇಜಿನಲ್ಲಿ ಒಗ್ಗೂಡಿಸುತ್ತದೆ. ಇದು ಅಪರೂಪದ ಹಸ್ತಪ್ರತಿಗಳ ಪ್ರದರ್ಶನ ಮತ್ತು ಹಸ್ತಪ್ರತಿ ಸಂರಕ್ಷಣೆ, ಡಿಜಿಟಲೀಕರಣ ತಂತ್ರಜ್ಞಾನಗಳು, ಮೆಟಾಡೇಟಾ ಮಾನದಂಡಗಳು, ಕಾನೂನು ಚೌಕಟ್ಟುಗಳು, ಸಾಂಸ್ಕೃತಿಕ ರಾಜತಾಂತ್ರಿಕತೆ ಮತ್ತು ಪ್ರಾಚೀನ ಲಿಪಿಗಳ ಅರ್ಥೈಸುವಿಕೆಯಂತಹ ನಿರ್ಣಾಯಕ ಕ್ಷೇತ್ರಗಳ ಕುರಿತಾಗಿ ವಿದ್ವತ್ಪೂರ್ಣ ಪ್ರಸ್ತುತಿಗಳನ್ನು ಕೂಡ ಒಳಗೊಂಡಿದೆ.


