ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಜೂನ್ 24ರಂದು ಬೆಳಗ್ಗೆ 11 ಗಂಟೆಗೆ ನವದೆಹಲಿಯ ವಿಜ್ಞಾನ ಭವನದಲ್ಲಿ ಭಾರತದ ಇಬ್ಬರು ಶ್ರೇಷ್ಠ ಆಧ್ಯಾತ್ಮಿಕ ಮತ್ತು ಸನ್ನಡತೆಯ ನಾಯಕರಾದ ಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿ ನಡುವಿನ ಐತಿಹಾಸಿಕ ಸಂಭಾಷಣೆಯ ಶತಮಾನೋತ್ಸವ ಆಚರಣೆಯನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿಅವರು ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
1925ರ ಮಾರ್ಚ್ 12ರಂದು ಮಹಾತ್ಮಾ ಗಾಂಧಿ ಅವರ ಭೇಟಿಯ ಸಂದರ್ಭದಲ್ಲಿ ಶಿವಗಿರಿ ಮಠದಲ್ಲಿ ನಡೆದ ಈ ಐತಿಹಾಸಿಕ ಸಂಭಾಷಣೆಯು ವೈಕ್ಕಂ ಸತ್ಯಾಗ್ರಹ, ಧಾರ್ಮಿಕ ಮತಾಂತರಗಳು, ಅಹಿಂಸೆ, ಅಸ್ಪೃಶ್ಯತೆಯ ನಿರ್ಮೂಲನೆ, ಮೋಕ್ಷದ ಸಾಧನೆ, ದೀನದಲಿತರ ಉನ್ನತಿ ಮುಂತಾದವುಗಳ ಸುತ್ತ ಕೇಂದ್ರೀಕೃತವಾಗಿತ್ತು.
ಶ್ರೀ ನಾರಾಯಣ ಧರ್ಮ ಸಂಗಮ್ ಟ್ರಸ್ಟ್ ಆಯೋಜಿಸಿರುವ ಈ ಆಚರಣೆಯು ಭಾರತದ ಸಾಮಾಜಿಕ ಮತ್ತು ನೈತಿಕ ರಚನೆಯನ್ನು ರೂಪಿಸುತ್ತಿರುವ ದೂರದೃಷ್ಟಿಯ ಸಂವಾದವನ್ನು ಪ್ರತಿಬಿಂಬಿಸಲು ಮತ್ತು ಸ್ಮರಿಸಲು ಆಧ್ಯಾತ್ಮಿಕ ನಾಯಕರು ಮತ್ತು ಇತರ ಸದಸ್ಯರನ್ನು ಒಟ್ಟುಗೂಡಿಸುತ್ತದೆ. ಇದು ಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿ ಇಬ್ಬರೂ ಪ್ರತಿಪಾದಿಸಿದ ಸಾಮಾಜಿಕ ನ್ಯಾಯ, ಏಕತೆ ಮತ್ತು ಆಧ್ಯಾತ್ಮಿಕ ಸಾಮರಸ್ಯದ ಹಂಚಿಕೆಯ ದೃಷ್ಟಿಕೋನಕ್ಕೆ ಪ್ರಬಲ ಗೌರವವಾಗಿ ನಿಂತಿದೆ.


