ಪೊಲೀಸರ ಬಗ್ಗೆ ಸಾರ್ವಜನಿಕ ಗ್ರಹಿಕೆ ಪರಿವರ್ತಿಸುವ, ಯುವಜನರ ಸಂಪರ್ಕ ವೃದ್ಧಿಸುವ, ನಗರ ಮತ್ತು ಪ್ರವಾಸಿ ಪೊಲೀಸ್ ವ್ಯವಸ್ಥೆ ಬಲವರ್ಧನೆಗೊಳಿಸುವ ಮತ್ತು ಹೊಸ ಕ್ರಿಮಿನಲ್ ಕಾನೂನುಗಳ ಅರಿವನ್ನು ಉತ್ತೇಜಿಸುವ ಅಗತ್ಯತೆ ಒತ್ತಿ ಹೇಳಿದ ಪ್ರಧಾನಮಂತ್ರಿ
ತಂತ್ರಜ್ಞಾನದ ವಿಸ್ತೃತ ಬಳಕೆ, ಕೃತಕ ಬುದ್ಧಿಮತ್ತೆ ಮತ್ತು ನ್ಯಾಟ್ ಗ್ರಿಡ್ ಏಕೀಕರಣ; ದ್ವೀಪ ಭದ್ರತೆ, ಕರಾವಳಿ ಪೊಲೀಸ್ ವ್ಯವಸ್ಥೆ ಮತ್ತು ವಿಧಿವಿಜ್ಞಾನ ಆಧಾರಿತ ತನಿಖೆಯಲ್ಲಿ ನಾವೀನ್ಯತೆಗೆ ಪ್ರಧಾನಮಂತ್ರಿ ಕರೆ
ವಿಷನ್ 2047 ಪೊಲೀಸ್ ವ್ಯವಸ್ಥೆ ನೀಲನಕ್ಷೆ, ಭಯೋತ್ಪಾದನಾ ನಿಗ್ರಹ ಪ್ರವೃತ್ತಿಗಳು, ಮಹಿಳಾ ಸುರಕ್ಷತೆ, ಪರಾರಿಯಾಗುವವರ ಟ್ರ್ಯಾಕಿಂಗ್ ಮತ್ತು ವಿಧಿವಿಜ್ಞಾನ ಸುಧಾರಣೆಗಳು ಸೇರಿ ರಾಷ್ಟ್ರೀಯ ಭದ್ರತಾ ಆದ್ಯತೆಗಳ ಕುರಿತು ವಿವರವಾದ ಚರ್ಚೆಗಳಿಗೆ ಸಾಕ್ಷಿಯಾಗಲಿರುವ ಸಮ್ಮೇಳನ
ವಿಪತ್ತು ನಿರ್ವಹಣೆಗೆ ಬಲವಾದ ಸಿದ್ಧತೆ ಮತ್ತು ಸಂಘಟಿತ ನಿರ್ವಹಣೆಯ ಅಗತ್ಯತೆ ಒತ್ತಿ ಹೇಳಿದ ಪ್ರಧಾನಮಂತ್ರಿ; ಚಂಡಮಾರುತ, ಪ್ರವಾಹಗಳು ಮತ್ತು ನೈಸರ್ಗಿಕ ತುರ್ತುಸ್ಥಿತಿಗಳ ನಿರ್ವಹಣೆಗೆ ಸಂಪೂರ್ಣ ಸರ್ಕಾರಿ ವಿಧಾನಕ್ಕೆ ಕರೆ
ವಿಕಸಿತ ಭಾರತದ ರಾಷ್ಟ್ರೀಯ ದೂರದೃಷ್ಟಿಯೊಂದಿಗೆ ಪೊಲೀಸ್ ಪದ್ಧತಿಗಳನ್ನು ಆಧುನೀಕರಿಸಲು ಮತ್ತು ಮರುಹೊಂದಿಸಲು ಪೊಲೀಸ್ ನಾಯಕತ್ವಕ್ಕೆ ಪ್ರಧಾನಮಂತ್ರಿ ಆಗ್ರಹ
ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕಗಳನ್ನು ಪ್ರದಾನ ಮಾಡಿದ ಪ್ರಧಾನಮಂತ್ರಿ; ಹೊಸದಾಗಿ ಸ್ಥಾಪಿಸಲಾದ ನಗರ ಪೊಲೀಸ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ನಗರಗಳಿಗೆ ಗೌರವ ಪ್ರದಾನ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಯ್ ಪುರದಲ್ಲಿಂದು ನಡೆದ 60ನೇ ಅಖಿಲ ಭಾರತ ಪೊಲೀಸ್ ಮಹಾನಿರ್ದೇಶಕರ/ ಇನ್ಸ್‌ ಪೆಕ್ಟರ್‌ ಜನರಲ್‌ ಆಫ್ ಪೊಲೀಸ್‌ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಮೂರು ದಿನಗಳ ಸಮಾವೇಶದ ಘೋಷವಾಕ್ಯ “ವಿಕಸಿತ ಭಾರತ; ಭದ್ರತಾ ಆಯಾಮಗಳು’’ ಎಂಬುದಾಗಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿ, ವೃತ್ತಿಪರತೆ, ಸೂಕ್ಷ್ಮತೆ ಮತ್ತು ತ್ವರಿತ ಸ್ಪಂದಿಸುವಿಕೆ ಹೆಚ್ಚಿಸುವ ಮೂಲಕ ಪೊಲೀಸರ ಬಗ್ಗೆ, ವಿಶೇಷವಾಗಿ ಯುವಕರಲ್ಲಿ ಸಾರ್ವಜನಿಕ ಗ್ರಹಿಕೆಯನ್ನು ಪರಿವರ್ತಿಸುವ ತುರ್ತು ಅಗತ್ಯತೆಯನ್ನು ಒತ್ತಿ ಹೇಳಿದರು. ನಗರ ಪೊಲೀಸ್ ವ್ಯವಸ್ಥೆಯನ್ನು ಬಲವರ್ಧನೆಗೊಳಿಸುವ, ಪ್ರವಾಸಿ ಪೊಲೀಸರನ್ನು ಪುನರುಜ್ಜೀವನಗೊಳಿಸುವ ಮತ್ತು ವಸಾಹತುಶಾಹಿ ಯುಗದ ಅಪರಾಧ ಕಾನೂನುಗಳನ್ನು ಬದಲಾಯಿಸುವ ಹೊಸದಾಗಿ ಜಾರಿಗೆ ತಂದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ಸಾಕ್ಷ್ಯ ಅಧಿನಿಯಮ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಬಗ್ಗೆ ಸಾರ್ವಜನಿಕ ಜಾಗೃತಿ ಹೆಚ್ಚಿಸುವ ಅಗತ್ಯತೆಯನ್ನು ಅವರು ಪ್ರಮುಖವಾಗಿ ಪ್ರಸ್ತಾಪಿದರು.

ಜನವಸತಿಯಿಲ್ಲದ ದ್ವೀಪಗಳನ್ನು ಸಂಯೋಜಿಸಲು ನವೀನ ತಂತ್ರಗಳನ್ನು ಅಳವಡಿಸಿಕೊಳ್ಳಲು, ನ್ಯಾಟ್ ಗ್ರಿಡ್‌ ಅಡಿಯಲ್ಲಿ ಸಂಯೋಜಿಸಲಾದ ಡೇಟಾಬೇಸ್‌ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮತ್ತು ಕಾರ್ಯಸಾಧ್ಯ ಬುದ್ಧಿಮತ್ತೆಯನ್ನು ಸೃಷ್ಟಿಸಲು ಈ ವ್ಯವಸ್ಥೆಗಳನ್ನು ಕೃತಕ ಬುದ್ಧಿಮತ್ತೆಯ ಮೂಲಕ ಸಂಪರ್ಕಿಸಬೇಕು ಎಂದು ಪ್ರಧಾನಮಂತ್ರಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪೊಲೀಸರು ಹಾಗೂ ವಿಸ್ತೃತ ಆಡಳಿತಕ್ಕೆ ನಿರ್ದೇಶನ ನೀಡಿದರು. ಪೊಲೀಸ್ ತನಿಖೆಗಳಲ್ಲಿ ವಿಧಿವಿಜ್ಞಾನದ ಬಳಕೆಯ ಕುರಿತು ಪ್ರಕರಣ ಅಧ್ಯಯನಗಳನ್ನು (ಕೇಸ್‌ ಸ್ಟಡಿಗಳನ್ನು) ಕೈಗೊಳ್ಳಲು ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಪ್ರೋತ್ಸಾಹಿಸಲು ಕರೆ ನೀಡಿದ ಅವರು, ವೇಗವರ್ಧಿತ ವಿಧಿವಿಜ್ಞಾನ ಅನ್ವಯವು ಅಪರಾಧ ನ್ಯಾಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಉಲ್ಲೇಖಿಸಿದರು.

ನಿಷೇಧಿತ ಸಂಘಟನೆಗಳ ಮೇಲೆ ನಿರ್ದಿಷ್ಟ ಮೇಲ್ವಿಚಾರಣೆಗೆ ಕಾರ್ಯವಿಧಾನಗಳನ್ನು ರೂಪಿಸುವುದು, ಎಡಪಂಥೀಯ ಉಗ್ರವಾದದಿಂದ ಮುಕ್ತವಾದ ಪ್ರದೇಶಗಳ ಸಮಗ್ರ ಅಭಿವೃದ್ಧಿಯನ್ನು ಖಾತ್ರಿಪಡಿಸಿಕೊಳ್ಳುವುದು ಮತ್ತು ಕರಾವಳಿ ಭದ್ರತೆಯನ್ನು ಬಲಪಡಿಸಲು ನವೀನ ಮಾದರಿಗಳನ್ನು ಅಳವಡಿಸಿಕೊಳ್ಳುವ ಮಹತ್ವವನ್ನು ಅವರು ಪುನರುಚ್ಚರಿಸಿದರು. ಮಾದಕ ದ್ರವ್ಯ ದುರ್ಬಳಕೆಯನ್ನು ಹತ್ತಿಕ್ಕಲು ಸಮಗ್ರ ಸರ್ಕಾರದ ವಿಧಾನದ ಅಗತ್ಯವಿದೆ, ಅದು ಜಾರಿ, ಪುನರ್ವಸತಿ ಮತ್ತು ಸಮುದಾಯ ಮಟ್ಟದ ಹಸ್ತಕ್ಷೇಪವನ್ನು ಒಟ್ಟುಗೂಡಿಸುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

ರಾಷ್ಟ್ರೀಯ ಭದ್ರತಾ ವಿಷಯಗಳ ಕುರಿತು ವ್ಯಾಪಕವಾದ ಚರ್ಚೆಗಳಿಗೆ ಸಮ್ಮೇಳನ ಸಾಕ್ಷಿಯಾಯಿತು. ಪೊಲೀಸ್ ವ್ಯವಸ್ಥೆಗಾಗಿ ವಿಷನ್ 2047ಯ ದೂರದೃಷ್ಟಿಯ ಕಡೆಗೆ ದೀರ್ಘಾವಧಿಯ ನೀಲನಕ್ಷೆ, ಭಯೋತ್ಪಾದನೆ ನಿಗ್ರಹ ಮತ್ತು ಮೂಲಭೂತವಾದ ನಿಗ್ರಹದಲ್ಲಿ ಉದಯೋನ್ಮುಖ ಪ್ರವೃತ್ತಿಗಳು, ಮಹಿಳೆಯರ ಸುರಕ್ಷತೆ ಹೆಚ್ಚಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುವುದು, ಭಾರತದಿಂದ ಪರಾರಿಯಾಗಿ ವಿದೇಶದಲ್ಲಿರುವವರನ್ನು ಮರಳಿ ಕರೆತರುವ ತಂತ್ರಗಳು ಮತ್ತು ಪರಿಣಾಮಕಾರಿ ತನಿಖೆ ಮತ್ತು ವಿಚಾರಣೆ ಖಾತ್ರಿಪಡಿಸಿಕೊಳ್ಳಲು ವಿಧಿವಿಜ್ಞಾನ ಸಾಮರ್ಥ್ಯಗಳನ್ನು ಬಲವರ್ಧನೆಗೊಳಿಸುವ ಕುರಿತು ಚರ್ಚೆಗಳು ನಡೆದವು.

ದಿತ್ವಾ ಚಂಡಮಾರುತದ ಸದ್ಯದ ಸ್ಥಿತಿಗತಿ ಸೇರಿದಂತೆ ಒಟ್ಟಾರೆ ಚಂಡಮಾರುತಗಳು, ಪ್ರವಾಹಗಳು ಮತ್ತು ಇತರ ನೈಸರ್ಗಿಕ ತುರ್ತುಪರಿಸ್ಥಿತಿಗಳನ್ನು ಒಳಗೊಂಡ ಪರಿಣಾಮಕಾರಿ ವಿಪತ್ತು ನಿರ್ವಹಣೆಗಾಗಿ ಕಾರ್ಯವಿಧಾನಗಳನ್ನು ಬಲಪಡಿಸಲು ಪೊಲೀಸ್ ಮುಖ್ಯಸ್ಥರಿಗೆ ಕರೆ ನೀಡಿದ ಅವರು, ಸದೃಢವಾದ ಸನ್ನದ್ಧತೆ ಮತ್ತು ಸಮನ್ವಯದ ಅಗತ್ಯತೆಯನ್ನು ಒತ್ತಿ ಹೇಳಿದರು. ಜೀವಗಳನ್ನು ರಕ್ಷಿಸಲು ಮತ್ತು ವಪತ್ತುಗಳ ಸಮಯದಲ್ಲಿ ಕನಿಷ್ಠ ಅಡಚಣೆಯನ್ನು ಖಾತ್ರಿಪಡಿಸಿಕೊಳ್ಳಲು ಪೂರ್ವಭಾವಿ ಯೋಜನೆ, ನೈಜ-ಸಮಯದ ಸಮನ್ವಯ, ತ್ವರಿತ ಪ್ರತಿಕ್ರಿಯೆ ಮತ್ತು ಸಂಪೂರ್ಣ ಸರ್ಕಾರದ ವಿಧಾನವು ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು.

ಪ್ರಧಾನಮಂತ್ರಿ ಅವರು ತಮ್ಮ ಭಾಷಣದಲ್ಲಿ, ವಿಕಸಿತ ಭಾರತವಾಗುವ ಹಾದಿಯಲ್ಲಿರುವ ಅಭಿವೃದ್ಧಿಶೀಲ ರಾಷ್ಟ್ರದ ಆಕಾಂಕ್ಷೆಗಳನ್ನು ಪೂರೈಸಲು ಪೊಲೀಸ್ ವ್ಯವಸ್ಥೆಯ ಶೈಲಿಯನ್ನು ಮರುರೂಪಿಸುವಂತೆ ಪೊಲೀಸ್ ನಾಯಕತ್ವಕ್ಕೆ ಕರೆ ನೀಡಿದರು.

ಪ್ರಧಾನಮಂತ್ರಿ ಅವರು ಗುಪ್ತಚರ ಬ್ಯೂರೋದ ಅಧಿಕಾರಿಗಳಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವೆಗಾಗಿ ಪೊಲೀಸ್ ಪದಕಗಳನ್ನು ಪ್ರದಾನ ಮಾಡಿದರು. ನಗರ ಪೊಲೀಸ್ ವ್ಯವಸ್ಥೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮೂರು ನಗರಗಳಿಗೆ ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು, ನಗರ ಪೊಲೀಸ್ ವ್ಯವಸ್ಥೆಯಲ್ಲಿ ನಾವೀನ್ಯತೆ ಮತ್ತು ಸುಧಾರಣೆಯನ್ನು ಉತ್ತೇಜಿಸಲು ಮೊದಲ ಬಾರಿಗೆ ಈ ಗೌರವವನ್ನು  ಸ್ಥಾಪಿಸಲಾಗಿದೆ.  

ಸಮ್ಮೇಳನದಲ್ಲಿ ಕೇಂದ್ರ ಗೃಹ ಸಚಿವರು, ರಾಷ್ಟ್ರೀಯ ಭದ್ರತಾ ಸಲಹೆಗಾರರು, ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವರು ಮತ್ತು ಕೇಂದ್ರ ಗೃಹ ಕಾರ್ಯದರ್ಶಿ ಭಾಗವಹಿಸಿದ್ದರು. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಡಿಜಿಎಸ್‌ಪಿಗಳು ಮತ್ತು ಐಜಿಎಸ್‌ಪಿಗಳು ಹಾಗೂ ಸಿಎಪಿಎಫ್‌ ಮತ್ತು ಕೇಂದ್ರೀಯ ಪೊಲೀಸ್ ಪಡೆಗಳ ಮುಖ್ಯಸ್ಥರು ನೇರವಾಗಿ ಭಾಗವಹಿಸಿದರು, ಆದರೆ ದೇಶಾದ್ಯಂತದ ವಿವಿಧ ಶ್ರೇಣಿಗಳ 700 ಕ್ಕೂ ಅಧಿಕ ಅಧಿಕಾರಿಗಳು ವರ್ಚುವಲ್ ರೂಪದಲ್ಲಿ ಭಾಗಿಯಾಗಿದ್ದರು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's electronics exports cross $47 billion in 2025 on iPhone push

Media Coverage

India's electronics exports cross $47 billion in 2025 on iPhone push
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 19 ಜನವರಿ 2026
January 19, 2026

From One-Horned Rhinos to Global Economic Power: PM Modi's Vision Transforms India