ಘನತೆವೆತ್ತ ಪ್ರಧಾನಮಂತ್ರಿ ಮತ್ತು ನನ್ನ ಸ್ನೇಹಿತ ಶ್ರೀ ನೆತನ್ಯಾಹು,
ಶ್ರೀಮತಿ ನೆತನ್ಯಾಹು,
ಉಭಯ ದೇಶಗಳ ಗಣ್ಯ ಪ್ರತಿನಿಧಿಗಳು,
ಮಾಧ್ಯಮದ ಸ್ನೇಹಿತರೇ,

ನಮಸ್ಕಾರ!

"ಶಾಲೋಮ್!"

ನನಗೆ ಮತ್ತು ಭಾರತೀಯ ನಿಯೋಗಕ್ಕೆ ನೀಡಿದ ಆತ್ಮೀಯ ಸ್ವಾಗತಕ್ಕಾಗಿ ನಾನು ಮತ್ತೊಮ್ಮೆ ಪ್ರಧಾನಮಂತ್ರಿ ನೆತನ್ಯಾಹು ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ತಿಳಿಸುತ್ತೇನೆ.

 

ಒಂಬತ್ತು ವರ್ಷಗಳ ಹಿಂದೆ, ಇಸ್ರೇಲ್‌ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿಯಾಗುವ ಸೌಭಾಗ್ಯ ನನಗೆ ಸಿಕ್ಕಿತು. ಮತ್ತೊಮ್ಮೆ, ಐತಿಹಾಸಿಕ ಇಸ್ರೇಲ್ ಭೂಮಿಯಲ್ಲಿ ಕಾಲಿಡಲು ನನಗೆ ಹೆಮ್ಮೆ ಮತ್ತು ಭಾವನಾತ್ಮಕ ಕ್ಷಣವಾಗಿದೆ.

ನಿನ್ನೆ, ಇಸ್ರೇಲ್ ಸಂಸತ್ತನ್ನು ಉದ್ದೇಶಿಸಿ ಮಾತನಾಡುವ ಅವಕಾಶ ನನಗೆ ಸಿಕ್ಕಿತು. ಆ ಸಂದರ್ಭದಲ್ಲಿ, ನನಗೆ ಸ್ಪೀಕರ್‌ ಆಫ್‌ ನೆಸ್ಸೆಟ್ ಮೆಡಲ್‌ ನೀಡಿ ಗೌರವಿಸಲಾಯಿತು. ಈ ವಿಶಿಷ್ಟ ಗೌರವಕ್ಕಾಗಿ ನಾನು ನೆಸ್ಸೆಟ್, ಗೌರವಾನ್ವಿತ ಸ್ಪೀಕರ್, ನನ್ನ ಸ್ನೇಹಿತ ಪ್ರಧಾನಮಂತ್ರಿ ನೆತನ್ಯಾಹು ಮತ್ತು ಇಸ್ರೇಲ್ ಜನರಿಗೆ ಪ್ರಾಮಾಣಿಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಈ ಮನ್ನಣೆಯನ್ನು ಭಾರತದ 1.4 ಶತಕೋಟಿ ಜನರಿಗೆ ಮತ್ತು ಭಾರತ ಮತ್ತು ಇಸ್ರೇಲ್ ನಡುವಿನ ಶಾಶ್ವತ ಸ್ನೇಹಕ್ಕೆ ನಾನು ಅರ್ಪಿಸುತ್ತೇನೆ.

ಸ್ನೇಹಿತರೇ,

ನಮ್ಮ ಸಂಬಂಧವು ಆಳವಾದ ನಂಬಿಕೆ, ಹಂಚಿಕೆಯ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಬಲವಾದ ಮಾನವೀಯ ಬಂಧಗಳ ಮೇಲೆ ಆಧಾರಿತವಾಗಿದೆ. ನಮ್ಮ ಸಂಬಂಧಗಳು ಕಾಲದ ಪರೀಕ್ಷೆಯಲ್ಲಿ ಉತ್ತೀರ್ಣವಾಗಿವೆ.

ಇಂದು, ನಮ್ಮ ಕಾಲ-ಪರೀಕ್ಷಿತ ಪಾಲುದಾರಿಕೆಯನ್ನು "ವಿಶೇಷ ಕಾರ್ಯತಂತ್ರದ ಪಾಲುದಾರಿಕೆ" ಮಟ್ಟಕ್ಕೆ ಏರಿಸುವ ಐತಿಹಾಸಿಕ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ. ಈ ನಿರ್ಧಾರವು ನಮ್ಮ ಎರಡೂ ರಾಷ್ಟ್ರಗಳ ಜನರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ.

ಸ್ನೇಹಿತರೇ,

ಇಂದಿನ ಸಭೆಯಲ್ಲಿ, ನಮ್ಮ ಸಹಕಾರಕ್ಕೆ ಹೊಸ ದಿಕ್ಕು ಮತ್ತು ಹೆಚ್ಚಿನ ಆವೇಗವನ್ನು ನೀಡುವ ಬಗ್ಗೆ ನಾವು ಚರ್ಚಿಸಿದ್ದೇವೆ. ನಮ್ಮ ಆರ್ಥಿಕ ಪಾಲುದಾರಿಕೆಯು ಬೆಳವಣಿಗೆ, ನಾವೀನ್ಯತೆ ಮತ್ತು ಹಂಚಿಕೆಯ ಸಮೃದ್ಧಿಯ ಎಂಜಿನ್ ಆಗಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದೆ.

ಪರಸ್ಪರ ಹೂಡಿಕೆಗಳನ್ನು ಮತ್ತಷ್ಟು ಉತ್ತೇಜಿಸಲು, ನಾವು ಕಳೆದ ವರ್ಷ ದ್ವಿಪಕ್ಷೀಯ ಹೂಡಿಕೆ ಒಪ್ಪಂದ ಮಾಡಿಕೊಳ್ಳಲು ತೀರ್ಮಾನಿಸಿದ್ದೇವೆ. ನಾವು ಶೀಘ್ರದಲ್ಲೇ ಪರಸ್ಪರ ಪ್ರಯೋಜನಕಾರಿ ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುತ್ತೇವೆ.

ತಂತ್ರಜ್ಞಾನವು ನಮ್ಮ ಭವಿಷ್ಯದ ಪಾಲುದಾರಿಕೆಯ ಹೃದಯಭಾಗದಲ್ಲಿದೆ. ಇಂದು, ನಾವು ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಪಾಲುದಾರಿಕೆಯನ್ನು ಸ್ಥಾಪಿಸಲು ನಿರ್ಧರಿಸಿದ್ದೇವೆ. ಇದು ಕೃತಕ ಬುದ್ಧಿಮತ್ತೆ, ಕ್ವಾಂಟಮ್ ತಂತ್ರಜ್ಞಾನಗಳು ಮತ್ತು ನಿರ್ಣಾಯಕ ಖನಿಜಗಳಂತಹ ಕ್ಷೇತ್ರಗಳಲ್ಲಿ ಸಹಕಾರಕ್ಕೆ ಹೊಸ ಆವೇಗವನ್ನು ನೀಡುತ್ತದೆ.

ಇಸ್ರೇಲ್‌ನಲ್ಲಿ UPI ಬಳಕೆಯನ್ನು ಸಕ್ರಿಯಗೊಳಿಸಲು ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಮಾಹಿತಿ ತಿಳಿದು ನನಗೆ ಸಂತೋಷವಾಗಿದೆ. ಡಿಜಿಟಲ್ ಆರೋಗ್ಯ ಕ್ಷೇತ್ರದಲ್ಲಿಯೂ ಸಹ, ನಮ್ಮ ಅನುಭವಗಳು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವ ಮೂಲಕ ನಮ್ಮ ಜನರ ಜೀವನವನ್ನು ಸುಧಾರಿಸಲು ನಾವು ಬದ್ಧರಾಗಿದ್ದೇವೆ.

ರಕ್ಷಣಾ ಕ್ಷೇತ್ರದಲ್ಲಿ ನಾವು ದಶಕಗಳಿಂದ ವಿಶ್ವಾಸಾರ್ಹ ಸಹಕಾರವನ್ನು ಅನುಭವಿಸಿದ್ದೇವೆ. ಕಳೆದ ವರ್ಷ ಮುಕ್ತಾಯಗೊಂಡ ತಿಳುವಳಿಕೆ ಒಪ್ಪಂದವು ಈ ಪಾಲುದಾರಿಕೆಗೆ ಹೊಸ ಆಯಾಮಗಳನ್ನು ನೀಡಿವೆ. ಒಟ್ಟಾಗಿ, ನಾವು ಜಂಟಿ ಅಭಿವೃದ್ಧಿ, ಜಂಟಿ ಉತ್ಪಾದನೆ ಮತ್ತು ತಂತ್ರಜ್ಞಾನದ ವರ್ಗಾವಣೆಯತ್ತ ಮುನ್ನಡೆಯುತ್ತೇವೆ.

 

ಅದೇ ಸಮಯದಲ್ಲಿ, ನಾಗರಿಕ ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶದಂತಹ ಕ್ಷೇತ್ರಗಳಲ್ಲಿ ನಮ್ಮ ಸಹಕಾರವನ್ನು ನಾವು ಮತ್ತಷ್ಟು ಬಲಪಡಿಸುತ್ತೇವೆ.

ಸ್ನೇಹಿತರೇ,

ನಮ್ಮ ಎರಡೂ ದೇಶಗಳ ನಡುವಿನ ಕೃಷಿ ಸಹಕಾರವು ದೀರ್ಘ ಮತ್ತು ಯಶಸ್ವಿ ಇತಿಹಾಸವನ್ನು ಹೊಂದಿದೆ. ಇಂದು, ಈ ಸಹಯೋಗಕ್ಕೆ ಭವಿಷ್ಯದ ನಿರ್ದೇಶನವನ್ನು ನೀಡಲು ನಾವು ನಿರ್ಧರಿಸಿದ್ದೇವೆ.

ಇಸ್ರೇಲ್‌ನ ಸಹಕಾರದೊಂದಿಗೆ ಭಾರತದಲ್ಲಿ ಸ್ಥಾಪಿಸಲಾದ ಶ್ರೇಷ್ಠತಾ ಕೇಂದ್ರಗಳು ಇಂದು ನಮ್ಮ ಸ್ನೇಹದ ಅತ್ಯುತ್ತಮ ಉದಾಹರಣೆಗಳಾಗಿ ನಿಂತಿವೆ. ಅವರ ಯಶಸ್ಸಿನಿಂದ ಉತ್ತೇಜಿತರಾಗಿ, ನಾವು ಅವುಗಳ ಸಂಖ್ಯೆಯನ್ನು 100 ಕ್ಕೆ ವಿಸ್ತರಿಸುವ ಗುರಿಯನ್ನು ಹೊಂದಿದ್ದೇವೆ.

ಈ ಸಹಕಾರವನ್ನು ಒಂದು ಹೆಜ್ಜೆ ಮುಂದೆ ತೆಗೆದುಕೊಂಡು, ನಾವು ಶ್ರೇಷ್ಠತಾ ಗ್ರಾಮಗಳ ರಚನೆಯತ್ತ ಕೆಲಸ ಮಾಡುತ್ತಿದ್ದೇವೆ. ಈ ಉಪಕ್ರಮವು ಇಸ್ರೇಲಿ ತಂತ್ರಜ್ಞಾನವನ್ನು ಭಾರತದಾದ್ಯಂತದ ಹಳ್ಳಿಗಳಿಗೆ ತರುತ್ತದೆ ಮತ್ತು ಲಕ್ಷಾಂತರ ರೈತರ ಆದಾಯ ಮತ್ತು ಉತ್ಪಾದಕತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.

ಒಟ್ಟಾಗಿ, ನಾವು ಭವಿಷ್ಯಕ್ಕೆ ಸಿದ್ಧವಾದ ಕೃಷಿ ಪರಿಹಾರಗಳನ್ನು ಸಹ ಅಭಿವೃದ್ಧಿಪಡಿಸುತ್ತೇವೆ. ಭಾರತದಲ್ಲಿ "ಭಾರತ-ಇಸ್ರೇಲ್ ಇನ್ನೋವೇಶನ್ ಸೆಂಟರ್ ಫಾರ್ ಅಗ್ರಿಕಲ್ಚರ್" ಸ್ಥಾಪನೆಯು ಈ ಸಹಯೋಗವನ್ನು ಮುಂದುವರಿಸಲು ಬಲವಾದ ಅಡಿಪಾಯವನ್ನು ಒದಗಿಸುತ್ತದೆ.

ಸ್ನೇಹಿತರೇ,

ನಮ್ಮ ಜನರಿಂದ ಜನರಿಗೆ ಚಟುವಟಿಕೆಗಳು ನಮ್ಮ ಸಂಬಂಧದ ಪ್ರಮುಖ ಆಧಾರಸ್ತಂಭವಾಗಿದೆ. 2023ರಲ್ಲಿ ಮುಕ್ತಾಯಗೊಂಡ ಮಾನವಶಕ್ತಿ ಚಲನಶೀಲತೆ ಒಪ್ಪಂದದ ಮೂಲಕ, ಭಾರತವು ಇಸ್ರೇಲ್‌ನ ನಿರ್ಮಾಣ ಮತ್ತು ಆರೈಕೆ ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ನೀಡಿದೆ. ಭಾರತೀಯ ಕಾರ್ಮಿಕರು ತಮ್ಮ ಶ್ರದ್ಧೆ, ಬದ್ಧತೆ ಮತ್ತು ಕೌಶಲ್ಯದ ಮೂಲಕ ವಿಶ್ವಾಸವನ್ನು ಗಳಿಸಿದ್ದಾರೆ.

ಈ ಸಹಕಾರವನ್ನು ವಾಣಿಜ್ಯ ಮತ್ತು ಸೇವೆಗಳಂತಹ ಕ್ಷೇತ್ರಗಳಿಗೂ ವಿಸ್ತರಿಸುತ್ತಿರುವುದು ನನಗೆ ಸಂತೋಷವಾಗಿದೆ. ನಮ್ಮ ಎರಡೂ ದೇಶಗಳ ಯುವಕರು, ಸಂಶೋಧಕರು ಮತ್ತು ನಾವೀನ್ಯಕಾರರನ್ನು ಸಂಪರ್ಕಿಸುವುದು ನಮಗೆ ಪ್ರಮುಖ ಆದ್ಯತೆಯಾಗಿದೆ. ಈ ದಿಕ್ಕಿನಲ್ಲಿ, ನಾವು ಇಂದು ಭಾರತ-ಇಸ್ರೇಲ್ ಶೈಕ್ಷಣಿಕ ವೇದಿಕೆಯನ್ನು ಸ್ಥಾಪಿಸುತ್ತಿದ್ದೇವೆ.

 

ಸ್ನೇಹಿತರೇ,

ಇಂದು, ನಾವು ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ವ್ಯಾಪಕ ಚರ್ಚೆಗಳನ್ನು ನಡೆಸಿದ್ದೇವೆ. ಪ್ರಾದೇಶಿಕ ಸಂಪರ್ಕವನ್ನು ಉತ್ತೇಜಿಸುವಾಗ, ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (IMEC) ಮತ್ತು ಭಾರತ-ಇಸ್ರೇಲ್-ಯುಎಇ-ಯುಎಸ್ಎ (I2U2) ಕುರಿತು ನಾವು ಹೊಸ ವೇಗದೊಂದಿಗೆ ಮುಂದುವರಿಯುತ್ತೇವೆ.

ಸ್ನೇಹಿತರೇ,

ಭಾರತ ಮತ್ತು ಇಸ್ರೇಲ್ ಎಂದಿಗೂ ನಿಲುವಿನಲ್ಲಿ ನಿಸ್ಸಂದಿಗ್ಧವಾಗಿವೆ:

ಭಯೋತ್ಪಾದನೆಗೆ ಜಗತ್ತಿನಲ್ಲಿ ಸ್ಥಾನವಿಲ್ಲ.

ಯಾವುದೇ ರೂಪದಲ್ಲಿ ಮತ್ತು ಯಾವುದೇ ಅಭಿವ್ಯಕ್ತಿಯಲ್ಲಿ, ಭಯೋತ್ಪಾದನೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ.

ಭಯೋತ್ಪಾದನೆ ಮತ್ತು ಅದನ್ನು ಬೆಂಬಲಿಸುವವರನ್ನು ವಿರೋಧಿಸುವಲ್ಲಿ ನಾವು ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದೇವೆ ಮತ್ತು ನಾವು ಅದನ್ನು ಮುಂದುವರಿಸುತ್ತೇವೆ.

ಪಶ್ಚಿಮ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆಯು ಭಾರತದ ಭದ್ರತಾ ಹಿತಾಸಕ್ತಿಗಳಿಗೆ ನೇರವಾಗಿ ಸಂಬಂಧಿಸಿದೆ. ಆದ್ದರಿಂದ, ಆರಂಭದಿಂದಲೂ, ನಾವು ಸಂವಾದ ಮತ್ತು ಸಮಸ್ಯೆಗಳ ಶಾಂತಿಯುತ ಪರಿಹಾರವನ್ನು ಬೆಂಬಲಿಸಿದ್ದೇವೆ. ಇದು ಜಾಗತಿಕ ದಕ್ಷಿಣ ಮತ್ತು ಇಡೀ ಮಾನವೀಯತೆಯ ಕರೆಯಾಗಿದೆ.

ಭಾರತದ ನಿಲುವು ಕ್ಲೀನ್

ಮಾನವೀಯತೆ ಎಂದಿಗೂ ಸಂಘರ್ಷಕ್ಕೆ ಬಲಿಯಾಗಬಾರದು. ಗಾಜಾ ಶಾಂತಿ ಯೋಜನೆ ಶಾಂತಿಯತ್ತ ಒಂದು ಮಾರ್ಗವನ್ನು ತೆರೆದಿದೆ. ಈ ಪ್ರಯತ್ನಗಳಿಗೆ ಭಾರತ ತನ್ನ ಸಂಪೂರ್ಣ ಬೆಂಬಲವನ್ನು ನೀಡಿದೆ. ಭವಿಷ್ಯದಲ್ಲಿಯೂ ಸಹ, ನಾವು ಎಲ್ಲಾ ದೇಶಗಳೊಂದಿಗೆ ಸಂವಾದ ಮತ್ತು ಸಹಕಾರದಲ್ಲಿ ತೊಡಗಿಸಿಕೊಳ್ಳುವುದನ್ನು ಮುಂದುವರಿಸುತ್ತೇವೆ.

ಘನತೆವೆತ್ತರೇ, ನನ್ನ ಪ್ರೀತಿಯ ಸ್ನೇಹಿತರೇ,

ನಿಮ್ಮ ಆತ್ಮೀಯತೆ ಮತ್ತು ಉದಾತ್ತ ಆತಿಥ್ಯವು ನನ್ನ ಭೇಟಿಯನ್ನು ನಿಜವಾಗಿಯೂ ಸ್ಮರಣೀಯವಾಗಿಸಿದೆ. ನಿಮ್ಮಿಂದ ಮತ್ತು ಇಸ್ರೇಲ್ ಜನರಿಂದ ನಾನು ಪಡೆದ ಪ್ರೀತಿ, ಸದ್ಭಾವನೆ ಮತ್ತು ಗೌರವಕ್ಕಾಗಿ ನಾನು ಮತ್ತೊಮ್ಮೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.

ತುಂಬಾ ಧನ್ಯವಾದಗಳು.

"ತೋಡಾ ರಬ್ಬಾ"

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PLI 2.0: India bets big on making more of the smartphone at home

Media Coverage

PLI 2.0: India bets big on making more of the smartphone at home
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 29 ಮೇ 2026
May 29, 2026

Every Sector, Every Citizen: How PM Modi’s Vision is Transforming India Across All Fronts