ಶೇರ್
 
Comments
ಪೆಟ್ರೋಲ್‌ನಲ್ಲಿ 20 ಪ್ರತಿಶತ ಎಥೆನಾಲ್ ಮಿಶ್ರಣವನ್ನು ಸಾಧಿಸುವ ಗುರಿಯನ್ನು 2025 ಕ್ಕೆ ಮುಂದೂಡಲಾಗಿದೆ: ಪ್ರಧಾನಿ
ಮರುಬಳಕೆಯ ಮೂಲಕ ಸಂಪನ್ಮೂಲಗಳನ್ನು ಉತ್ತಮವಾಗಿ ಬಳಸಿಕೊಳ್ಳುವ 11 ವಲಯಗಳನ್ನು ಸರ್ಕಾರ ಗುರುತಿಸಿದೆ: ಪ್ರಧಾನಿ
ದೇಶಾದ್ಯಂತ ಎಥೆನಾಲ್ ಉತ್ಪಾದನೆ ಮತ್ತು ವಿತರಣೆಗಾಗಿ ಪುಣೆಯಲ್ಲಿ ಇ -100 ಪೈಲಟ್ ಯೋಜನೆಯನ್ನು ಪ್ರಾರಂಭಿಸಲಾಗಿದೆ

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಜಂಟಿಯಾಗಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಧಾನಿಯವರು ಪುಣೆಯ ರೈತನೊಂದಿಗೆ ಸಂವಾದ ನಡೆಸಿದರು, ಆ ರೈತ ಸಾವಯವ ಕೃಷಿ ಮತ್ತು ಕೃಷಿಯಲ್ಲಿ ಜೈವಿಕ ಇಂಧನ ಬಳಕೆಯ ಅನುಭವವನ್ನು ಪ್ರಧಾನಿವರೊಂದಿಗೆ ಹಂಚಿಕೊಂಡರು.

"ಭಾರತದಲ್ಲಿ 2020-2025ರಲ್ಲಿ ಎಥೆನಾಲ್ ಮಿಶ್ರಣಕ್ಕಾಗಿ ಮಾರ್ಗಸೂಚಿ ಕುರಿತ ತಜ್ಞರ ಸಮಿತಿಯ ವರದಿ" ಯನ್ನು ಪ್ರಧಾನಿ ಬಿಡುಗಡೆ ಮಾಡಿದರು. ದೇಶಾದ್ಯಂತ ಎಥೆನಾಲ್ ಉತ್ಪಾದನೆ ಮತ್ತು ವಿತರಣೆಗಾಗಿ ಅವರು ಪುಣೆಯಲ್ಲಿ ಮಹತ್ವಾಕಾಂಕ್ಷೆಯ ಇ -100 ಪ್ರಾಯೋಗಿಕ  ಯೋಜನೆಗೆ ಚಾಲನೆ ನೀಡಿದರು. ಈ ವರ್ಷದ ಕಾರ್ಯಕ್ರಮದ ಧ್ಯೇಯ ‘ಉತ್ತಮ ಪರಿಸರಕ್ಕಾಗಿ ಜೈವಿಕ ಇಂಧನಗಳ ಉತ್ತೇಜನ. ಕೇಂದ್ರ ಸಚಿವರಾದ ಶ್ರೀ ನಿತಿನ್ ಗಡ್ಕರಿ, ಶ್ರೀ ನರೇಂದ್ರ ಸಿಂಗ್ ತೋಮರ್, ಶ್ರೀ ಪ್ರಕಾಶ್ ಜಾವಡೇಕರ್, ಶ್ರೀ ಪಿಯೂಷ್ ಗೋಯಲ್ ಮತ್ತು ಶ್ರೀ ಧರ್ಮೇಂದ್ರ ಪ್ರಧಾನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿಯವರು, ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಎಥೆನಾಲ್ ಕ್ಷೇತ್ರದ ಅಭಿವೃದ್ಧಿಗೆ ವಿವರವಾದ ಮಾರ್ಗಸೂಚಿಯನ್ನು ಬಿಡುಗಡೆ ಮಾಡುವ ಮೂಲಕ ಭಾರತ ಮತ್ತೊಂದು ಜಿಗಿತವನ್ನು ಕಂಡಿದೆ. 21 ನೇ ಶತಮಾನದಲ್ಲಿ ಭಾರತದ ಪ್ರಮುಖ ಆದ್ಯತೆಗಳಲ್ಲಿ ಎಥೆನಾಲ್ ಕೂಡ ಒಂದಾಗಿದೆ ಎಂದು ಹೇಳಿದರು. ಎಥೆನಾಲ್ ಮೇಲೆ ಗಮನ ಕೇಂದ್ರೀಕರಿಸುತ್ತಿರುವುದು ಪರಿಸರ ಮತ್ತು ರೈತರ ಜೀವನದ ಮೇಲೆ ಉತ್ತಮ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದರು. 2025 ರ ವೇಳೆಗೆ ಪೆಟ್ರೋಲ್‌ನಲ್ಲಿ ಶೇ.20 ರಷ್ಟು ಎಥೆನಾಲ್ ಮಿಶ್ರಣ ಮಾಡುವ ಗುರಿಯನ್ನು ಪೂರೈಸಲು ಸರ್ಕಾರ ನಿರ್ಧರಿಸಿದೆ ಎಂದು ಅವರು ಹೇಳಿದರು. 2030 ರ ವೇಳೆಗೆ ಗುರಿಯನ್ನು ಸಾಧಿಸುವ ಸಂಕಲ್ಪ ಇದ್ದು, ಅದನ್ನು ಈಗ 5 ವರ್ಷ ಮೊದಲೇ ಸಾಧಿಸಲಾಗುವುದು.

2014 ರವರೆಗೆ, ಭಾರತದಲ್ಲಿ ಸರಾಸರಿ 1.5 ಪ್ರತಿಶತದಷ್ಟು ಎಥೆನಾಲ್ ಅನ್ನು ಮಾತ್ರ ಮಿಶ್ರಣ ಮಾಡಲಾಗುತ್ತಿತ್ತು, ಅದು ಈಗ ಸುಮಾರು 8.5 ಪ್ರತಿಶತವನ್ನು ತಲುಪಿದೆ. 2013-14ರಲ್ಲಿ ದೇಶದಲ್ಲಿ ಸುಮಾರು 38 ಕೋಟಿ ಲೀಟರ್ ಎಥೆನಾಲ್ ಖರೀದಿಸಲಾಗಿದ್ದು, ಈಗ ಅದು 320 ಕೋಟಿ ಲೀಟರ್‌ಗಿಂತ ಹೆಚ್ಚಾಗಿದೆ. ಎಥೆನಾಲ್ ಖರೀದಿಯಲ್ಲಿನ ಎಂಟು ಪಟ್ಟು ಹೆಚ್ಚಳದ ಬಹುತೇಕ ಭಾಗವು ದೇಶದ ಕಬ್ಬು ಬೆಳೆಗಾರರಿಗೆ ಪ್ರಯೋಜನವನ್ನು ನೀಡಿದೆ ಎಂದು ಅವರು ಹೇಳಿದರು.

21 ನೇ ಶತಮಾನದ ಆಧುನಿಕ ಚಿಂತನೆ ಮತ್ತು ಆಧುನಿಕ ನೀತಿಗಳಿಂದ ಮಾತ್ರ 21 ನೇ ಶತಮಾನದ ಭಾರತವು ಶಕ್ತಿಯನ್ನು ಪಡೆಯಬಹುದು ಎಂದು ಪ್ರಧಾನಿ ತಿಳಿಸಿದರು. ಈ ಚಿಂತನೆಯೊಂದಿಗೆ, ಸರ್ಕಾರವು ಪ್ರತಿಯೊಂದು ಕ್ಷೇತ್ರದಲ್ಲೂ ನೀತಿ ನಿರ್ಧಾರಗಳನ್ನು ನಿರಂತರವಾಗಿ ತೆಗೆದುಕೊಳ್ಳುತ್ತಿದೆ. ದೇಶದಲ್ಲಿ ಎಥೆನಾಲ್ ಉತ್ಪಾದನೆ ಮತ್ತು ಖರೀದಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ನಿರ್ಮಿಸಲು ಇಂದು ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಅವರು ಹೇಳಿದರು. ಬಹುತೇಕ ಎಥೆನಾಲ್ ಉತ್ಪಾದನಾ ಘಟಕಗಳು ಹೆಚ್ಚಾಗಿ ಸಕ್ಕರೆ ಉತ್ಪಾದನೆ ಹೆಚ್ಚಿರುವ 4-5 ರಾಜ್ಯಗಳಲ್ಲಿ ಕೇಂದ್ರೀಕೃತವಾಗಿವೆ. ಆದರೆ ಈಗ ಇದನ್ನು ಇಡೀ ದೇಶಕ್ಕೆ ವಿಸ್ತರಿಸಲು ಆಹಾರ ಧಾನ್ಯ ಆಧಾರಿತ ಡಿಸ್ಟಿಲರಿಗಳನ್ನು ಸ್ಥಾಪಿಸಲಾಗುತ್ತಿದೆ. ಕೃಷಿ ತ್ಯಾಜ್ಯದಿಂದ ಎಥೆನಾಲ್ ತಯಾರಿಸಲು ಆಧುನಿಕ ತಂತ್ರಜ್ಞಾನ ಆಧಾರಿತ ಘಟಕಗಳನ್ನು ದೇಶದಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.

ಭಾರತವು ಹವಾಮಾನ ನ್ಯಾಯದ ಪ್ರಬಲ ಪ್ರತಿಪಾದಕ ರಾಷ್ಟ್ರವಾಗಿದೆ. ಒಂದು ಸೂರ್ಯ, ಒಂದು ವಿಶ್ವ, ಒಂದು ಗ್ರಿಡ್ ಮತ್ತು ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಗಳ ಒಕ್ಕೂಟದ ದೃಷ್ಟಿಕೋನವನ್ನು ಸಾಕಾರಗೊಳಿಸಲು ಅಂತರರಾಷ್ಟ್ರೀಯ ಸೌರ ಒಕ್ಕೂಟದ ಸ್ಥಾಪನೆಯಂತಹ ಉನ್ನತ ಜಾಗತಿಕ ದೃಷ್ಟಿಕೋನದೊಂದಿಗೆ ಮುಂದುವರಿಯುತ್ತಿದೆ ಎಂದು ಪ್ರಧಾನಿ ಹೇಳಿದರು. ಹವಾಮಾನ ಬದಲಾವಣೆಯ ಸಾಧನೆಯ ಸೂಚ್ಯಂಕದಲ್ಲಿ ವಿಶ್ವದ ಅಗ್ರ 10 ದೇಶಗಳಲ್ಲಿ ಭಾರತವು ಸೇರಿದೆ ಎಂದು ಅವರು ತಿಳಿಸಿದರು. ಹವಾಮಾನ ವೈಪರೀತ್ಯದಿಂದಾಗಿ ಎದುರಾಗುತ್ತಿರುವ ಸವಾಲುಗಳ ಬಗ್ಗೆ ಭಾರತಕ್ಕೂ ಅರಿವಿದೆ ಮತ್ತು ಅದರ ಬಗ್ಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.

ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ತೆಗೆದುಕೊಂಡ ಕಟುವಾದ ಮತ್ತು ಕಟುವಲ್ಲದ ವಿಧಾನಗಳ ಬಗ್ಗೆ ಪ್ರಧಾನಿ ಮಾತನಾಡಿದರು. ಕಟುವಾದ ವಿಧಾನದಲ್ಲಿ, ಕಳೆದ 6-7 ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನದ ನಮ್ಮ ಸಾಮರ್ಥ್ಯವು ಶೇ.250 ಕ್ಕಿಂತ ಹೆಚ್ಚಾಗಿದೆ. ಸ್ಥಾಪಿತ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ದೃಷ್ಟಿಯಿಂದ ಭಾರತ ಇಂದು ವಿಶ್ವದ ಅಗ್ರ 5 ರಾಷ್ಟ್ರಗಳಲ್ಲಿ ಒಂದಾಗಿದೆ. ವಿಶೇಷವಾಗಿ ಕಳೆದ 6 ವರ್ಷಗಳಲ್ಲಿ ಸೌರ ಶಕ್ತಿಯ ಸಾಮರ್ಥ್ಯವು ಸುಮಾರು 15 ಪಟ್ಟು ಹೆಚ್ಚಾಗಿದೆ ಎಂದರು.

ಕಟುವಲ್ಲದ ವಿಧಾನದ ಮೂಲಕ ದೇಶವು ಐತಿಹಾಸಿಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಪ್ರಧಾನಿ ಹೇಳಿದರು, ಇಂದು ದೇಶದ ಸಾಮಾನ್ಯ ಜನರು ಏಕ ಬಳಕೆಯ ಪ್ಲಾಸ್ಟಿಕ್ ತ್ಯಜಿಸುವುದು, ಕಡಲ ತೀರ ಶುಚಿಗೊಳಿಸುವಿಕೆ ಅಥವಾ ಸ್ವಚ್ಛ ಭಾರತದಂತಹ ಉಪಕ್ರಮಗಳಲ್ಲಿ ತೊಡಗಿಕೊಂಡು ಪರಿಸರ-ಪರ ಅಭಿಯಾನವನ್ನು ಮುನ್ನಡೆಸಿದ್ದಾರೆ. 37 ಕೋಟಿಗೂ ಹೆಚ್ಚು ಎಲ್‌ಇಡಿ ಬಲ್ಬ್‌ಗಳು ಮತ್ತು 23 ಲಕ್ಷಕ್ಕೂ ಹೆಚ್ಚು ವಿದ್ಯುತ್ ಉಳಿಸುವ ಫ್ಯಾನ್ ಗಳನ್ನು ನೀಡಿರುವ ಪರಿಣಾಮಗಳ ಬಗ್ಗೆ ಹೆಚ್ಚಾಗಿ ಚರ್ಚಿಸಲಾಗುತ್ತಿಲ್ಲ ಎಂದು ಅವರು ಹೇಳಿದರು. ಇದೇ ರೀತಿ, ಉಜ್ವಲಾ ಯೋಜನೆಯಡಿ ಉಚಿತ ಅನಿಲ ಸಂಪರ್ಕವನ್ನು ಒದಗಿಸುವ ಮೂಲಕ, ಸೌಭಾಗ್ಯ ಯೋಜನೆಯಡಿ ವಿದ್ಯುತ್ ಸಂಪರ್ಕವನ್ನು ಕೊಡುವ ಮೂಲಕ, ಕೋಟ್ಯಂತರ ಬಡವರ ಸೌದೆಯ ಮೇಲಿನ ಅವಲಂಬನೆಯು ಬಹಳ ಕಡಿಮೆಯಾಗಿದೆ ಎಂದು ಅವರು ಹೇಳಿದರು. ಮಾಲಿನ್ಯವನ್ನು ಕಡಿಮೆ ಮಾಡುವುದರ ಜೊತೆಗೆ, ಆರೋಗ್ಯವನ್ನು ಸುಧಾರಿಸಲು ಮತ್ತು ಪರಿಸರ ಸಂರಕ್ಷಣೆಯನ್ನು ಬಲಪಡಿಸಲು ಇದು ಸಾಕಷ್ಟು ಸಹಾಯ ಮಾಡಿದೆ. ಪರಿಸರ ಸಂರಕ್ಷಣೆಗಾಗಿ ಅಭಿವೃದ್ಧಿಯನ್ನು ನಿಲ್ಲಿಸಬೇಕಾಗಿಲ್ಲ ಎಂದು ಭಾರತ ಜಗತ್ತಿಗೆ ಒಂದು ಉದಾಹರಣೆ ನೀಡುತ್ತಿದೆ ಎಂದರು. ಆರ್ಥಿಕತೆ ಮತ್ತು ಪರಿಸರ ವಿಜ್ಞಾನ ಎರಡೂ ಒಟ್ಟಿಗೆ ಮುಂದೆ ಸಾಗಬಹುದು ಎಂದು ಅವರು ಒತ್ತಿ ಹೇಳಿದರು. ಭಾರತ ಆಯ್ಕೆ ಮಾಡಿಕೊಂಡಿರುವ ಮಾರ್ಗ ಇದು. ಆರ್ಥಿಕತೆಯನ್ನು ಬಲಪಡಿಸುವುದರ ಜೊತೆಗೆ, ನಮ್ಮ ಕಾಡುಗಳು ಕಳೆದ ಕೆಲವು ವರ್ಷಗಳಲ್ಲಿ 15 ಸಾವಿರ ಚದರ ಕಿಲೋಮೀಟರ್‌ಗಳಷ್ಟು ಹೆಚ್ಚಾಗಿವೆ. ನಮ್ಮ ದೇಶದಲ್ಲಿ ಹುಲಿಗಳ ಸಂಖ್ಯೆ ದ್ವಿಗುಣಗೊಂಡಿದೆ ಮತ್ತು ಕಳೆದ ಕೆಲವು ವರ್ಷಗಳಲ್ಲಿ ಚಿರತೆಗಳ ಸಂಖ್ಯೆಯೂ ಸುಮಾರು ಶೇ.60 ರಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು.

ಸ್ವಚ್ಛ ಮತ್ತು ದಕ್ಷ ಇಂಧನ ವ್ಯವಸ್ಥೆಗಳು, ಸ್ಥಿತಿಸ್ಥಾಪಕ ನಗರ ಮೂಲಸೌಕರ್ಯ ಮತ್ತು ಯೋಜಿತ ಪರಿಸರ ಪುನಃಸ್ಥಾಪನೆ ಆತ್ಮನಿರ್ಭರ ಭಾರತ ಅಭಿಯಾನದ ಬಹಳ ಮುಖ್ಯವಾದ ಭಾಗವಾಗಿವೆ ಎಂದು ಪ್ರಧಾನಿ ಹೇಳಿದರು. ಪರಿಸರಕ್ಕೆ ಸಂಬಂಧಿಸಿದ ಎಲ್ಲಾ ಪ್ರಯತ್ನಗಳಿಂದಾಗಿ, ದೇಶದಲ್ಲಿ ಹೊಸ ಹೂಡಿಕೆಗೆ ಅವಕಾಶಗಳು ಸೃಷ್ಟಿಯಾಗುತ್ತಿವೆ, ಲಕ್ಷಾಂತರ ಯುವಜನರು ಉದ್ಯೋಗ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು. ವಾಯುಮಾಲಿನ್ಯವನ್ನು ನಿಗ್ರಹಿಸಲು ಭಾರತವು ರಾಷ್ಟ್ರೀಯ ಶುದ್ಧ ವಾಯು ಯೋಜನೆಯ ಮೂಲಕ ಸಮಗ್ರ ವಿಧಾನದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದರು. ಜಲಮಾರ್ಗಗಳು ಮತ್ತು ಬಹುವಿಧಾನ ಸಂಪರ್ಕದ ಕೆಲಸವು ಹಸಿರು ಸಾರಿಗೆಯ ಧ್ಯೇಯವನ್ನು ಬಲಪಡಿಸುವುದಲ್ಲದೆ, ದೇಶದ ಲಾಜಿಸ್ಟಿಕ್ಸ್ ದಕ್ಷತೆಯನ್ನು ಸುಧಾರಿಸುತ್ತದೆ ಎಂದು ಅವರು ಹೇಳಿದರು. ಇಂದು, ದೇಶದಲ್ಲಿ ಮೆಟ್ರೋ ರೈಲು ಸೇವೆಯು 5 ನಗರಗಳಿಂದ 18 ನಗರಗಳಿಗೆ ಏರಿಕೆಯಾಗಿದೆ, ಇದು ವೈಯಕ್ತಿಕ ವಾಹನಗಳ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡಿದೆ ಎಂದು ತಿಳಿಸಿದರು.

ಇಂದು ದೇಶದ ಬಹುತೇಕ ರೈಲ್ವೆ ಜಾಲವನ್ನು ವಿದ್ಯುದ್ದೀಕರಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ದೇಶದ ವಿಮಾನ ನಿಲ್ದಾಣಗಳು ಸೌರ ಶಕ್ತಿಯಿಂದ ವಿದ್ಯುತ್ ಅನ್ನು ತ್ವರಿತಗತಿಯಲ್ಲಿ ಬಳಸುವಂತೆ ಮಾಡಲಾಗಿದೆ. 2014 ಕ್ಕಿಂತ ಮೊದಲು ಕೇವಲ 7 ವಿಮಾನ ನಿಲ್ದಾಣಗಳಲ್ಲಿ ಸೌರಶಕ್ತಿ ಬಳಕೆಯ ಸೌಲಭ್ಯವಿತ್ತು, ಆದರೆ ಇಂದು ಈ ಸಂಖ್ಯೆ 50 ಕ್ಕಿಂತ ಹೆಚ್ಚಾಗಿದೆ. 80 ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಲ್ಲಿ ಎಲ್ಇಡಿ ದೀಪಗಳನ್ನು ಅಳವಡಿಸಲಾಗಿದೆ, ಇದು ಇಂಧನ ದಕ್ಷತೆಯನ್ನು ಸುಧಾರಿಸುತ್ತದೆ ಎಂದು ಅವರು ವಿವರಿಸಿದರು.

ಕೆವಾಡಿಯಾವನ್ನು ಎಲೆಕ್ಟ್ರಿಕ್ ವಾಹನ ನಗರವನ್ನಾಗಿ ಅಭಿವೃದ್ಧಿಪಡಿಸುವ ಯೋಜನೆಯ ಕುರಿತು ಪ್ರಧಾನಿ ಮಾತನಾಡಿದರು. ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದ್ದು, ಇದರಿಂದ ಭವಿಷ್ಯದಲ್ಲಿ ಕೆವಾಡಿಯಾದಲ್ಲಿ ಬ್ಯಾಟರಿ ಆಧಾರಿತ ಬಸ್ಸುಗಳು, ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳು ಮಾತ್ರ ಚಲಿಸುತ್ತವೆ. ನೀರಿನ ಸಂಚಲನೆಯು ಹವಾಮಾನ ಬದಲಾವಣೆಗೆ ನೇರವಾಗಿ ಸಂಬಂಧಿಸಿದೆ ಮತ್ತು ನೀರಿನ ಸಂಚಲನೆಯಲ್ಲಿನ ಅಸಮತೋಲನವು ನೀರಿನ ಸುರಕ್ಷತೆಗೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು. ಜಲ ಜೀವನ್ ಮಿಷನ್ ಮೂಲಕ ದೇಶದಲ್ಲಿ ಜಲ ಸಂಪನ್ಮೂಲಗಳ ಸೃಷ್ಟಿ ಮತ್ತು ಬಳಕೆಗಾಗಿ ಸಮಗ್ರ ವಿಧಾನದ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು. ಒಂದೆಡೆ, ಪ್ರತಿ ಮನೆಯೂ ಕೊಳವೆಗಳೊಂದಿಗೆ ನೀರಿನ ಸಂಪರ್ಕ ಕಲ್ಪಿಸಲು, ಮತ್ತೊಂದೆಡೆ, ಅಟಲ್ ಭೂಜಲ ಯೋಜನೆ ಮತ್ತು ಕ್ಯಾಚ್ ದಿ ರೇನ್ ನಂತಹ ಅಭಿಯಾನಗಳ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಗಮನ ಹರಿಸಲಾಗಿದೆ ಎಂದು ಅವರು ಹೇಳಿದರು.

ಆಧುನಿಕ ತಂತ್ರಜ್ಞಾನದ ಮೂಲಕ ಸಂಪನ್ಮೂಲಗಳನ್ನು ಮರುಬಳಕೆ ಮಾಡಲು 11 ವಲಯಗಳನ್ನು ಸರ್ಕಾರ ಗುರುತಿಸಿದೆ ಎಂದು ಪ್ರಧಾನಿ ಘೋಷಿಸಿದರು. ಕಚ್ರಾ ಟು ಕಾಂಚನ್ (ಕಸದಿಂದ ರಸ) ಅಭಿಯಾನದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಸಾಕಷ್ಟು ಕೆಲಸಗಳು ನಡೆದಿವೆ ಮತ್ತು ಈಗ ಅದನ್ನು ಮಿಷನ್ ಮೋಡ್‌ನಲ್ಲಿ ಅತ್ಯಂತ ವೇಗವಾಗಿ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಕ್ರಿಯಾ ಯೋಜನೆ, ನಿಯಂತ್ರಣ ಮತ್ತು ಅಭಿವೃದ್ಧಿ ಸಂಬಂಧಿತ ಅಂಶಗಳನ್ನು ಮುಂದಿನ ತಿಂಗಳುಗಳಲ್ಲಿ ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು. ಹವಾಮಾನ ರಕ್ಷಣೆಗಾಗಿ, ಪರಿಸರ ಸಂರಕ್ಷಣೆಯ ನಮ್ಮ ಪ್ರಯತ್ನಗಳನ್ನು ಸಂಘಟಿಸುವುದು ಬಹಳ ಮುಖ್ಯ. ನೀರು, ಗಾಳಿ ಮತ್ತು ಭೂಮಿಯ ಸಮತೋಲನವನ್ನು ಕಾಪಾಡಿಕೊಳ್ಳಲು ದೇಶದ ಪ್ರತಿಯೊಬ್ಬ ನಾಗರಿಕನೂ ಒಗ್ಗಟ್ಟಿನ ಪ್ರಯತ್ನ ಮಾಡಿದಾಗ ಮಾತ್ರ ನಮ್ಮ ಮುಂದಿನ ಪೀಳಿಗೆಗೆ ಸುರಕ್ಷಿತ ಪರಿಸರವನ್ನು ನೀಡಲು ಸಾಧ್ಯವಾಗುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು.

 

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಸಲಹೆ ಸೂಚನೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಿ.
Modi Govt's #7YearsOfSeva
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
Govt allows Covid vaccines at home to differently-abled and those with restricted mobility

Media Coverage

Govt allows Covid vaccines at home to differently-abled and those with restricted mobility
...

Nm on the go

Always be the first to hear from the PM. Get the App Now!
...
PM to deliver video address at ‘Global Citizen Live’ on 25th September
September 24, 2021
ಶೇರ್
 
Comments

Prime Minister Shri Narendra Modi will deliver a video address at the event ‘Global Citizen Live’ on the evening of 25th September, 2021.

‘Global Citizen’ is a global advocacy organization that is working to end extreme poverty. ‘Global Citizen Live’ is a 24-hour event which will be held across 25th and 26th September and will involve live events in major cities including Mumbai, New York, Paris, Rio De Janeiro, Sydney, Los Angeles, Lagos and Seoul. The event will be broadcast in 120 countries and over multiple social media channels.