ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ನಡೆದ ಎಕನಾಮಿಕ್ ಟೈಮ್ಸ್ ವರ್ಲ್ಡ್ ಲೀಡರ್ಸ್ ಫೋರಂ ಅನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ, ಪ್ರಧಾನಮಂತ್ರಿ ಅವರು ವರ್ಲ್ಡ್ ಲೀಡರ್ ಫೋರಂನಲ್ಲಿ ಭಾಗವಹಿಸಿದ್ದ ಎಲ್ಲಾ ಗಣ್ಯ ಅತಿಥಿಗಳನ್ನು ಸ್ವಾಗತಿಸಿದರು. "ಈ ವೇದಿಕೆಯ ಸಮಯ ಅತ್ಯಂತ ಸೂಕ್ತವಾಗಿದೆ" ಎಂದು ಅಭಿಪ್ರಾಯಪಟ್ಟ ಶ್ರೀ ಮೋದಿ ಅವರು, ಈ ಸಕಾಲಿಕ ಉಪಕ್ರಮಕ್ಕಾಗಿ ಆಯೋಜಕರನ್ನು ಶ್ಲಾಘಿಸಿದರು.ಕಳೆದ ವಾರವಷ್ಟೇ, ಮುಂದಿನ ಪೀಳಿಗೆಯ ಸುಧಾರಣೆಗಳ ಬಗ್ಗೆ ಕೆಂಪು ಕೋಟೆಯಿಂದ ಮಾತನಾಡಿದ ಅವರು, ಈ ವೇದಿಕೆ ಈಗ ಆ ಚೈತನ್ಯಕ್ಕೆ ಶಕ್ತಿ ವರ್ಧಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಈ ವೇದಿಕೆಯಲ್ಲಿ ಜಾಗತಿಕ ಸನ್ನಿವೇಶಗಳು ಮತ್ತು ಭೌಗೋಳಿಕ-ಆರ್ಥಿಕತೆಯ ಕುರಿತು ವಿಸ್ತೃತ ಚರ್ಚೆಗಳು ನಡೆದಿವೆ ಎಂದು ಹೇಳಿದ ಪ್ರಧಾನಮಂತ್ರಿ ಅವರು, ಜಾಗತಿಕವಾಗಿ ನೋಡಿದಾಗ ಭಾರತದ ಆರ್ಥಿಕತೆಯ ಸಾಮರ್ಥ್ಯವನ್ನು ಮನಗಾಣಬಹುದು ಎಂದು ಒತ್ತಿ ಹೇಳಿದರು. ಭಾರತವು ಪ್ರಸ್ತುತ ವಿಶ್ವದಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ ಮತ್ತು ಶೀಘ್ರದಲ್ಲೇ ಜಾಗತಿಕವಾಗಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ಸಜ್ಜಾಗಿದೆ ಎಂದು ಅವರು ವಿಶೇಷವಾಗಿ ಉಲ್ಲೇಖಿಸಿದರು. ಸದ್ಯದಲ್ಲಿಯೇ ಜಾಗತಿಕ ಬೆಳವಣಿಗೆಗೆ ಭಾರತದ ಕೊಡುಗೆಯು ಸುಮಾರು ಶೇಕಡ 20 ರಷ್ಟನ್ನು ತಲುಪುವ ನಿರೀಕ್ಷೆಯಿದೆ ಎಂಬ ತಜ್ಞರ ಅಂದಾಜುಗಳನ್ನು ಶ್ರೀ ಮೋದಿ ಅವರು ಉಲ್ಲೇಖಿಸಿದರು. ಭಾರತದ ಈ ಬೆಳವಣಿಗೆ ಮತ್ತು ಆರ್ಥಿಕ ಸದೃಢತೆಗೆ, ಕಳೆದ ದಶಕದಲ್ಲಿ ಸಾಧಿಸಲಾದ ಬೃಹತ್-ಆರ್ಥಿಕ ಸ್ಥಿರತೆಯೇ ಕಾರಣ ಎಂದು ಅವರು ಹೇಳಿದರು. ಕೋವಿಡ್-19 ಸಾಂಕ್ರಾಮಿಕವು ಒಡ್ಡಿದ ತೀವ್ರ ಸವಾಲುಗಳ ಹೊರತಾಗಿಯೂ, ಭಾರತದ ವಿತ್ತೀಯ ಕೊರತೆಯು ಶೇಕಡ 4.4 ಕ್ಕೆ ಇಳಿಯುವ ಅಂದಾಜಿದೆ ಎಂದು ಪ್ರಧಾನಮಂತ್ರಿ ಅವರು ತಿಳಿಸಿದರು. ಭಾರತೀಯ ಕಂಪನಿಗಳು ಬಂಡವಾಳ ಮಾರುಕಟ್ಟೆಗಳಿಂದ ದಾಖಲೆ ಪ್ರಮಾಣದ ನಿಧಿಯನ್ನು ಸಂಗ್ರಹಿಸುತ್ತಿವೆ, ಭಾರತೀಯ ಬ್ಯಾಂಕುಗಳು ಹಿಂದೆಂದಿಗಿಂತಲೂ ಹೆಚ್ಚು ಬಲಿಷ್ಠವಾಗಿವೆ, ಹಾಗೂ ಹಣದುಬ್ಬರ ಮತ್ತು ಬಡ್ಡಿ ದರಗಳು ಸಹ ಕಡಿಮೆ ಮಟ್ಟದಲ್ಲಿವೆ ಎಂದು ಅವರು ಸೇರಿಸಿದರು. ಭಾರತದ ಕರೆಂಟ್ ಅಕೌಂಟ್ ಕೊರತೆಯು ಮತ್ತು ವಿದೇಶಿ ವಿನಿಮಯ ಮೀಸಲು ನಿಧಿಯು ದೃಢವಾಗಿದೆ ಎಂಬುದನ್ನು ಒತ್ತಿ ಹೇಳಿದ ಶ್ರೀ ಮೋದಿ ಅವರು, ಪ್ರತಿ ತಿಂಗಳು ಲಕ್ಷಾಂತರ ದೇಶೀಯ ಹೂಡಿಕೆದಾರರು 'ವ್ಯವಸ್ಥಿತ ಹೂಡಿಕೆ ಯೋಜನೆಗಳ' (SIPs) ಮೂಲಕ ಮಾರುಕಟ್ಟೆಯಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಒಂದು ಆರ್ಥಿಕತೆಯ ಮೂಲಭೂತ ಅಂಶಗಳು ಬಲಿಷ್ಠವಾಗಿದ್ದು, ಅದರ ಅಡಿಪಾಯ ಭದ್ರವಾಗಿದ್ದಾಗ, ಅದರ ಪರಿಣಾಮವು ಎಲ್ಲಾ ವಲಯಗಳ ಮೇಲೆ ಗೋಚರಿಸುತ್ತದೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ಆಗಸ್ಟ್ 15 ರಂದು ತಮ್ಮ ಭಾಷಣದಲ್ಲಿ ಈ ಬಗ್ಗೆ ವಿವರವಾಗಿ ಚರ್ಚಿಸಿದ್ದಾಗಿ ಅವರು ನೆನಪಿಸಿಕೊಂಡರು. ಆ ಅಂಶಗಳನ್ನು ಪುನರಾವರ್ತಿಸುವುದಿಲ್ಲ ಎಂದು ಹೇಳಿದ ಅವರು, ಸ್ವಾತಂತ್ರ್ಯ ದಿನದಂದು ಮತ್ತು ನಂತರದ ಬೆಳವಣಿಗೆಗಳು ಭಾರತದ ಬೆಳವಣಿಗೆಯ ಕಥೆಗೆ ಉದಾಹರಣೆಗಳಾಗಿವೆ ಎಂದು ಒತ್ತಿ ಹೇಳಿದರು. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕೇವಲ ಜೂನ್ 2025ರ ತಿಂಗಳಲ್ಲಿ ಇ.ಪಿ.ಎಫ್.ಒ ಡೇಟಾಬೇಸ್ ಗೆ 22 ಲಕ್ಷ ಔಪಚಾರಿಕ ಉದ್ಯೋಗಗಳು ಸೇರ್ಪಡೆಯಾಗಿವೆ, ಇದು ಯಾವುದೇ ಒಂದು ತಿಂಗಳಿಗೆ ಅತ್ಯಧಿಕವಾಗಿದೆ ಎಂದು ಶ್ರೀ ಮೋದಿ ಅವರು ಹೇಳಿದರು. ಭಾರತದ ಚಿಲ್ಲರೆ ಹಣದುಬ್ಬರವು 2017 ರಿಂದಲೂ ಅತ್ಯಂತ ಕಡಿಮೆ ಮಟ್ಟದಲ್ಲಿದೆ ಮತ್ತು ಭಾರತದ ವಿದೇಶಿ ವಿನಿಮಯ ಮೀಸಲು ಇದುವರೆಗೆ ಕಂಡಿರದ ಗರಿಷ್ಠ ಮಟ್ಟಕ್ಕೆ ತಲುಪಿದೆ ಎಂದು ಅವರು ತಿಳಿಸಿದರು. 2014ರಲ್ಲಿ ಭಾರತದ ಸೌರ ಪಿ.ವಿ. ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯವು ಸುಮಾರು 2.5 ಗಿಗಾವ್ಯಾಟ್ ಇತ್ತು, ಆದರೆ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಈ ಸಾಮರ್ಥ್ಯವು ಈಗ 100 ಗಿಗಾವ್ಯಾಟ್ ಎಂಬ ಐತಿಹಾಸಿಕ ಮೈಲಿಗಲ್ಲನ್ನು ತಲುಪಿದೆ ಎಂದು ಪ್ರಧಾನಮಂತ್ರಿ ಹೇಳಿದರು. ದೆಹಲಿ ವಿಮಾನ ನಿಲ್ದಾಣವು ಈಗ ವಾರ್ಷಿಕ 10 ಕೋಟಿಗೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯದೊಂದಿಗೆ ಜಾಗತಿಕ ವಿಮಾನ ನಿಲ್ದಾಣಗಳ ಗಣ್ಯ 'ನೂರು-ಮಿಲಿಯನ್-ಪ್ಲಸ್ ಕ್ಲಬ್'ಗೆ ಸೇರಿಕೊಂಡಿದೆ, ಇದು ಈ ವಿಶೇಷ ಗುಂಪಿನಲ್ಲಿರುವ ವಿಶ್ವದ ಆರು ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು.
ಇತ್ತೀಚೆಗೆ ನಡೆದ ಒಂದು ಮಹತ್ವದ ಬೆಳವಣಿಗೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು, ಎಸ್&ಪಿ ಗ್ಲೋಬಲ್ ರೇಟಿಂಗ್ಸ್ ಸಂಸ್ಥೆಯು ಭಾರತದ ಕ್ರೆಡಿಟ್ ರೇಟಿಂಗ್ ಅನ್ನು ಮೇಲ್ದರ್ಜೆಗೇರಿಸಿದೆ ಎಂದು ತಿಳಿಸಿದರು. ಸುಮಾರು ಎರಡು ದಶಕಗಳ ನಂತರ ಇಂತಹ ಮೇಲ್ದರ್ಜೆಯ ಬೆಳವಣಿಗೆ ನಡೆದಿದೆ ಎಂದು ಅವರು ವಿಶೇಷವಾಗಿ ಉಲ್ಲೇಖಿಸಿದರು. "ಭಾರತವು, ತನ್ನ ಸ್ಥಿತಿಸ್ಥಾಪಕತ್ವ ಮತ್ತು ಸಾಮರ್ಥ್ಯದ ಮೂಲಕ, ಜಾಗತಿಕ ವಿಶ್ವಾಸದ ಮೂಲವಾಗಿ ಮುಂದುವರಿದಿದೆ" ಎಂದು ಶ್ರೀ ಮೋದಿ ಅವರು ನುಡಿದರು.
ಸಕಾಲದಲ್ಲಿ ಅವಕಾಶಗಳನ್ನು ಬಳಸಿಕೊಳ್ಳದಿದ್ದರೆ ಅವು ಹೇಗೆ ಕೈತಪ್ಪಿ ಹೋಗುತ್ತವೆ ಎಂಬುದನ್ನು ವಿವರಿಸಲು 'ಬಸ್ ತಪ್ಪಿಸಿಕೊಳ್ಳುವುದು' ಎಂಬ ಸಾಮಾನ್ಯ ನುಡಿಗಟ್ಟನ್ನು ಉಲ್ಲೇಖಿಸಿದ ಶ್ರೀ ಮೋದಿ ಅವರು, ಭಾರತದ ಹಿಂದಿನ ಸರ್ಕಾರಗಳು ತಂತ್ರಜ್ಞಾನ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಇಂತಹ ಅನೇಕ ಅವಕಾಶಗಳ ಬಸ್‌ಗಳನ್ನು ತಪ್ಪಿಸಿಕೊಂಡಿವೆ ಎಂದು ಹೇಳಿದರು. ತಾವು ಯಾರನ್ನೂ ಟೀಕಿಸಲು ಇಲ್ಲಿಗೆ ಬಂದಿಲ್ಲವೆಂದು ಸ್ಪಷ್ಟಪಡಿಸಿದ ಶ್ರೀ ಮೋದಿ ಅವರು, ಆದರೆ ಪ್ರಜಾಪ್ರಭುತ್ವದಲ್ಲಿ, ತುಲನಾತ್ಮಕ ವಿಶ್ಲೇಷಣೆಯು ಪರಿಸ್ಥಿತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಸ್ಪಷ್ಟಪಡಿಸಲು ನೆರವಾಗುತ್ತದೆ ಎಂದು ಒತ್ತಿ ಹೇಳಿದರು.

ಹಿಂದಿನ ಸರ್ಕಾರಗಳು ದೇಶವನ್ನು ವೋಟ್-ಬ್ಯಾಂಕ್ ರಾಜಕೀಯದಲ್ಲಿ ಸಿಲುಕಿಸಿದ್ದವು ಮತ್ತು ಚುನಾವಣೆಗಳನ್ನು ಮೀರಿ ಯೋಚಿಸುವ ದೃಷ್ಟಿಕೋನವನ್ನು ಹೊಂದಿರಲಿಲ್ಲ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಅತ್ಯಾಧುನಿಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು ಕೇವಲ ಮುಂದುವರಿದ ರಾಷ್ಟ್ರಗಳ ಕಾರ್ಯಕ್ಷೇತ್ರವೆಂದು ಆ ಸರ್ಕಾರಗಳು ನಂಬಿದ್ದವು ಮತ್ತು ಅಗತ್ಯವಿದ್ದಾಗ ಭಾರತವು ಅದನ್ನು ಸರಳವಾಗಿ ಆಮದು ಮಾಡಿಕೊಳ್ಳಬಹುದೆಂದು ಭಾವಿಸಿದ್ದವು ಎಂದು ಅವರು ಹೇಳಿದರು. ಈ ಮನಸ್ಥಿತಿಯಿಂದಾಗಿಯೇ ಭಾರತವು ಹಲವು ವರ್ಷಗಳ ಕಾಲ ಅನೇಕ ದೇಶಗಳಿಗಿಂತ ಹಿಂದೆ ಉಳಿದು, ನಿರ್ಣಾಯಕ ಅವಕಾಶಗಳನ್ನು ಪದೇ ಪದೇ 'ತಪ್ಪಿಸಿಕೊಂಡಿತು' ಎಂದು ಅವರು ಒತ್ತಿ ಹೇಳಿದರು. ಇದಕ್ಕೆ ಸಂವಹನ ವಲಯವನ್ನು ಉದಾಹರಣೆಯಾಗಿ ನೀಡಿದ ಶ್ರೀ ಮೋದಿ ಅವರು, ಜಾಗತಿಕವಾಗಿ ಇಂಟರ್ನೆಟ್ ಯುಗ ಆರಂಭವಾದಾಗ, ಅಂದಿನ ಸರ್ಕಾರವು ನಿರ್ಣಯ ಕೈಗೊಳ್ಳಲು ಅಸಮರ್ಥವಾಗಿತ್ತು ಎಂದು ಹೇಳಿದರು. 2ಜಿ ಯುಗದಲ್ಲಿ ನಡೆದ ಘಟನೆಗಳು ಎಲ್ಲರಿಗೂ ತಿಳಿದಿರುವಂತದ್ದು, ಆಗಲೂ ಭಾರತ ಆ 'ಬಸ್' ಅನ್ನು ತಪ್ಪಿಸಿಕೊಂಡಿತು ಎಂದು ಅವರು ಹೇಳಿದರು. 2G, 3G ಮತ್ತು 4G ತಂತ್ರಜ್ಞಾನಗಳಿಗಾಗಿ ಭಾರತವು ವಿದೇಶಿ ರಾಷ್ಟ್ರಗಳ ಮೇಲೆ ಅವಲಂಬಿತವಾಗಿ ಉಳಿಯಿತು ಎಂದು ಅವರು ಉಲ್ಲೇಖಿಸಿದರು. ಇಂತಹ ಪರಿಸ್ಥಿತಿ ಇನ್ನು ಎಷ್ಟು ಕಾಲ ಮುಂದುವರಿಯಲು ಸಾಧ್ಯ ಎಂದು ಪ್ರಧಾನಮಂತ್ರಿ ಅವರು ಪ್ರಶ್ನಿಸಿದರು. 2014ರ ನಂತರ ಭಾರತ ತನ್ನ ಕಾರ್ಯವಿಧಾನವನ್ನು ಬದಲಾಯಿಸಿತು ಮತ್ತು ಯಾವುದೇ ಬಸ್‌ಗಳನ್ನು ತಪ್ಪಿಸಿಕೊಳ್ಳದೆ, ಬದಲಾಗಿ ಚಾಲಕನ ಸ್ಥಾನವನ್ನು ತೆಗೆದುಕೊಂಡು ಮುಂದುವರಿಯಲು ನಿರ್ಧರಿಸಿತು ಎಂದು ಅವರು ಹೇಳಿದರು. ಭಾರತವು ತನ್ನ ಸಂಪೂರ್ಣ 5G ತಂತ್ರಜ್ಞಾನವನ್ನು ದೇಶೀಯವಾಗಿ ಅಭಿವೃದ್ಧಿಪಡಿಸಿದೆ ಎಂದು ಘೋಷಿಸಿದ ಶ್ರೀ ಮೋದಿ ಅವರು, 'ಮೇಡ್-ಇನ್-ಇಂಡಿಯಾ' 5Gಯನ್ನು ನಿರ್ಮಿಸಿದ್ದು ಮಾತ್ರವಲ್ಲದೆ, ದೇಶದಾದ್ಯಂತ ಅತ್ಯಂತ ವೇಗವಾಗಿ ಅದನ್ನು ನಿಯೋಜಿಸಿದೆ ಎಂದು ದೃಢಪಡಿಸಿದರು. "ಭಾರತವು ಈಗ 'ಮೇಡ್-ಇನ್-ಇಂಡಿಯಾ' 6G ತಂತ್ರಜ್ಞಾನದ ಮೇಲೆ ವೇಗವಾಗಿ ಕಾರ್ಯನಿರ್ವಹಿಸುತ್ತಿದೆ" ಎಂದು ಪ್ರಧಾನಮಂತ್ರಿ ಹೇಳಿದರು.
ಭಾರತವು 50-60 ವರ್ಷಗಳ ಹಿಂದೆಯೇ ಸೆಮಿಕಂಡಕ್ಟರ್ ಉತ್ಪಾದನೆಯನ್ನು ಆರಂಭಿಸಬಹುದಿತ್ತು ಎಂದು ಉಲ್ಲೇಖಿಸಿದ ಶ್ರೀ ಮೋದಿ ಅವರು, ಆ ಬಸ್ಸನ್ನೂ ಸಹ ಭಾರತ ತಪ್ಪಿಸಿಕೊಂಡಿತು ಮತ್ತು ಹಲವು ವರ್ಷಗಳ ಕಾಲ ಇದೇ ತಪ್ಪನ್ನು ಮುಂದುವರಿಸಿತು ಎಂದು ಹೇಳಿದರು. ಆದರೆ, ಈಗ ಈ ಪರಿಸ್ಥಿತಿ ಬದಲಾಗಿದೆ ಮತ್ತು ಸೆಮಿಕಂಡಕ್ಟರ್‌ಗೆ ಸಂಬಂಧಿಸಿದ ಕಾರ್ಖಾನೆಗಳು ಭಾರತದಲ್ಲಿ ಸ್ಥಾಪನೆಯಾಗಲು ಆರಂಭಿಸಿವೆ ಎಂದು ಅವರು ದೃಢಪಡಿಸಿದರು. ಈ ವರ್ಷದ ಅಂತ್ಯದ ವೇಳೆಗೆ, ಮೊದಲ 'ಮೇಡ್-ಇನ್-ಇಂಡಿಯಾ' ಚಿಪ್ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಅವರು ಇದೇ ವೇಳೆ ತಿಳಿಸಿದರು.
ರಾಷ್ಟ್ರೀಯ ಬಾಹ್ಯಾಕಾಶ ದಿನದ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳನ್ನು ಕೋರಿದ ಪ್ರಧಾನಮಂತ್ರಿ, ಭಾರತದ ಬಾಹ್ಯಾಕಾಶ ವಲಯದಲ್ಲಿನ ಬೆಳವಣಿಗೆಗಳ ಬಗ್ಗೆ ಮಾತನಾಡಿದರು. 2014ಕ್ಕಿಂತ ಮೊದಲು, ಭಾರತದ ಬಾಹ್ಯಾಕಾಶ ಕಾರ್ಯಾಚರಣೆಗಳು ಸೀಮಿತ ಸಂಖ್ಯೆ ಮತ್ತು ವ್ಯಾಪ್ತಿಯನ್ನು ಹೊಂದಿದ್ದವು ಎಂದು ಅವರು ಹೇಳಿದರು. 21ನೇ ಶತಮಾನದಲ್ಲಿ, ಪ್ರತಿಯೊಂದು ಪ್ರಮುಖ ರಾಷ್ಟ್ರವೂ ಬಾಹ್ಯಾಕಾಶ ಅವಕಾಶಗಳನ್ನು ಅನ್ವೇಷಿಸುತ್ತಿರುವಾಗ, ಭಾರತವು ಹಿಂದೆ ಉಳಿಯಲು ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದರು. ಬಾಹ್ಯಾಕಾಶ ವಲಯದಲ್ಲಿ ಸುಧಾರಣೆಗಳನ್ನು ಪರಿಚಯಿಸಿ ಅದನ್ನು ಖಾಸಗಿ ವಲಯದ ಭಾಗವಹಿಸುವಿಕೆಗೆ ತೆರೆಯಲಾಗಿದೆ ಎಂದು ಶ್ರೀ ಮೋದಿ ಅವರು ಹೇಳಿದರು. 1979 ರಿಂದ 2014 ರವರೆಗೆ, ಭಾರತವು ಮೂವತ್ತೈದು ವರ್ಷಗಳಲ್ಲಿ ಕೇವಲ ನಲವತ್ತೆರಡು ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ನಡೆಸಿದೆ ಎಂದು ಅವರು ಹೇಳಿದರು. ಕಳೆದ ಹನ್ನೊಂದು ವರ್ಷಗಳಲ್ಲಿ, ಭಾರತವು ಅರವತ್ತಕ್ಕೂ ಹೆಚ್ಚು ಕಾರ್ಯಾಚರಣೆಗಳನ್ನು ಪೂರ್ಣಗೊಳಿಸಿದೆ ಎಂದು ಅವರು ಹೆಮ್ಮೆಯಿಂದ ತಿಳಿಸಿದರು. ಮುಂಬರುವ ದಿನಗಳಲ್ಲಿ ಇನ್ನೂ ಅನೇಕ ಕಾರ್ಯಾಚರಣೆಗಳು ಸಾಲಿನಲ್ಲಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ವರ್ಷ ಭಾರತವು ಸ್ಪೇಸ್ ಡಾಕಿಂಗ್' ಸಾಮರ್ಥ್ಯವನ್ನು ಸಾಧಿಸಿದೆ ಎಂದು ಅವರು ಘೋಷಿಸಿದರು, ಇದನ್ನು ಭವಿಷ್ಯದ ಕಾರ್ಯಾಚರಣೆಗಳಿಗೆ ಒಂದು ಪ್ರಮುಖ ಮೈಲಿಗಲ್ಲು ಎಂದು ಕರೆದರು. ಗಗನಯಾನ ಕಾರ್ಯಾಚರಣೆಯ ಅಡಿಯಲ್ಲಿ ಭಾರತವು ತನ್ನ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಸಿದ್ಧತೆ ನಡೆಸುತ್ತಿದೆ ಮತ್ತು ಈ ಪ್ರಯತ್ನದಲ್ಲಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರ ಅನುಭವವು ಬಹಳ ಸಹಾಯಕವಾಗಲಿದೆ ಎಂದು ಅವರು ಹೇಳಿದರು.

"ಬಾಹ್ಯಾಕಾಶ ವಲಯಕ್ಕೆ ಹೊಸ ಚೈತನ್ಯವನ್ನು ತುಂಬಲು, ಅದನ್ನು ಎಲ್ಲಾ ಕಟ್ಟುಪಾಡುಗಳಿಂದ ಮುಕ್ತಗೊಳಿಸುವುದು ಅತ್ಯಗತ್ಯವಾಗಿತ್ತು" ಎಂದು ಹೇಳಿದ ಶ್ರೀ ಮೋದಿ ಅವರು, ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವಕ್ಕಾಗಿ ಇದೇ ಮೊದಲ ಬಾರಿಗೆ ಸ್ಪಷ್ಟ ನಿಯಮಗಳನ್ನು ರೂಪಿಸಲಾಗಿದೆ ಎಂದು ಒತ್ತಿ ಹೇಳಿದರು. ಇದೇ ಮೊದಲ ಬಾರಿಗೆ ಸ್ಪೆಕ್ಟ್ರಮ್ ಹಂಚಿಕೆಯನ್ನು ಪಾರದರ್ಶಕಗೊಳಿಸಲಾಯಿತು ಮತ್ತು ಬಾಹ್ಯಾಕಾಶ ವಲಯದಲ್ಲಿ ವಿದೇಶಿ ಹೂಡಿಕೆಯನ್ನು ಉದಾರೀಕರಣಗೊಳಿಸಲಾಯಿತು ಎಂದು ಪ್ರಧಾನಮಂತ್ರಿ ಅವರು ನುಡಿದರು. ಈ ವರ್ಷದ ಬಜೆಟ್ ನಲ್ಲಿ ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗಳಿಗಾಗಿಯೇ ₹1,000 ಕೋಟಿ ರೂಪಾಯಿಗಳ 'ವೆಂಚರ್ ಕ್ಯಾಪಿಟಲ್ ಫಂಡ್' ಅನ್ನು ಮೀಸಲಿಡಲಾಗಿದೆ ಎಂದು ಅವರು ಇದೇ ವೇಳೆ ಘೋಷಿಸಿದರು.
"ಕೈಗೊಂಡ ಸುಧಾರಣೆಗಳ ಯಶಸ್ಸಿಗೆ ಭಾರತದ ಬಾಹ್ಯಾಕಾಶ ವಲಯವು ಈಗ ಸಾಕ್ಷಿಯಾಗಿದೆ. 2014ರಲ್ಲಿ ಭಾರತದಲ್ಲಿ ಕೇವಲ ಒಂದೇ ಒಂದು ಸ್ಪೇಸ್ ಸ್ಟಾರ್ಟ್ ಅಪ್ ಇತ್ತು, ಆದರೆ ಇಂದು 300ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳಿವೆ" ಎಂದು ಹೇಳಿದ ಪ್ರಧಾನಮಂತ್ರಿ ಅವರು, ಕಕ್ಷೆಯಲ್ಲಿ ಭಾರತವು ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಹೊಂದುವ ದಿನ ದೂರವಿಲ್ಲ ಎಂದು ದೃಢವಾಗಿ ನುಡಿದರು.
"ಭಾರತವು ಸಣ್ಣಪುಟ್ಟ ಬದಲಾವಣೆಗಳನ್ನು ಗುರಿಯಾಗಿಟ್ಟುಕೊಂಡಿಲ್ಲ, ಬದಲಿಗೆ ಬೃಹತ್ ಜಿಗಿತಗಳನ್ನು ಸಾಧಿಸುವ ಗುರಿಯೊಂದಿಗೆ ಮುನ್ನಡೆಯುತ್ತಿದೆ" ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ಭಾರತದಲ್ಲಿನ ಸುಧಾರಣೆಗಳು ಯಾವುದೇ ಒತ್ತಡದಿಂದಾಗಲೀ ಅಥವಾ ಬಿಕ್ಕಟ್ಟಿನಿಂದಾಗಲೀ ಬಂದಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಸುಧಾರಣೆಗಳು ಭಾರತದ ಬದ್ಧತೆ ಮತ್ತು ದೃಢ ಸಂಕಲ್ಪದ ಪ್ರತಿಬಿಂಬವಾಗಿವೆ ಎಂದು ಅವರು ದೃಢವಾಗಿ ಹೇಳಿದರು. ಸರ್ಕಾರವು ಪ್ರತಿ ವಲಯವನ್ನು ಆಳವಾಗಿ ವಿಮರ್ಶಿಸುವ ಮೂಲಕ ಸಮಗ್ರ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುತ್ತದೆ ಎಂಬುದನ್ನು ಒತ್ತಿ ಹೇಳಿದ ಶ್ರೀ ಮೋದಿ ಅವರು, ನಂತರ ಆ ವಲಯಗಳಲ್ಲಿ ಒಂದೊಂದಾಗಿ ಸುಧಾರಣೆಗಳನ್ನು ಜಾರಿಗೆ ತರಲಾಗುತ್ತದೆ ಎಂದು ಹೇಳಿದರು.
ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ತಿನ ಮುಂಗಾರು ಅಧಿವೇಶನವು ಸುಧಾರಣೆಗಳ ಮುಂದುವರಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ ಪ್ರಧಾನಮಂತ್ರಿ ಅವರು, ವಿರೋಧ ಪಕ್ಷಗಳ ಹಲವಾರು ಅಡ್ಡಿಗಳ ಹೊರತಾಗಿಯೂ, ಸುಧಾರಣೆಗಳನ್ನು ಮುಂದುವರಿಸಲು ಸರ್ಕಾರವು ಸಂಪೂರ್ಣವಾಗಿ ಬದ್ಧವಾಗಿತ್ತು ಎಂದು ಒತ್ತಿ ಹೇಳಿದರು. 'ಜನ್ ವಿಶ್ವಾಸ್ 2.0' ಉಪಕ್ರಮವನ್ನು, ವಿಶ್ವಾಸ ಆಧಾರಿತ ಮತ್ತು ಜನಪರ ಆಡಳಿತಕ್ಕೆ ಸಂಬಂಧಿಸಿದ ಒಂದು ಪ್ರಮುಖ ಸುಧಾರಣೆ ಎಂದು ಅವರು ಬಣ್ಣಿಸಿದರು. 'ಜನ್ ವಿಶ್ವಾಸ್'ನ ಮೊದಲ ಆವೃತ್ತಿಯಲ್ಲಿ ಸುಮಾರು 200 ಸಣ್ಣಪುಟ್ಟ ಅಪರಾಧಗಳನ್ನು ಅಪರಾಧಮುಕ್ತಗೊಳಿಸಲಾಗಿತ್ತು ಎಂಬುದನ್ನು ಅವರು ಸ್ಮರಿಸಿದರು. ಇದರ ಎರಡನೇ ಆವೃತ್ತಿಯಲ್ಲಿ, ಇದೀಗ 300ಕ್ಕೂ ಹೆಚ್ಚು ಸಣ್ಣಪುಟ್ಟ ಅಪರಾಧಗಳನ್ನು ಅಪರಾಧಮುಕ್ತಗೊಳಿಸಲಾಗಿದೆ ಎಂದು ಅವರು ಇದೇ ವೇಳೆ ಘೋಷಿಸಿದರು. ಕಳೆದ 60 ವರ್ಷಗಳಿಂದ ಬದಲಾಗದೆ ಉಳಿದಿದ್ದ ಆದಾಯ ತೆರಿಗೆ ಕಾನೂನನ್ನು ಸಹ ಈ ಅಧಿವೇಶನದಲ್ಲಿ ಸುಧಾರಿಸಲಾಗಿದೆ ಎಂದು ಶ್ರೀ ಮೋದಿ ಅವರು ತಿಳಿಸಿದರು. ಈಗ ಈ ಕಾನೂನನ್ನು ಗಣನೀಯವಾಗಿ ಸರಳೀಕರಿಸಲಾಗಿದೆ ಎಂದು ಅವರು ಹೇಳಿದರು. ಹಿಂದೆ, ಈ ಕಾನೂನಿನ ಭಾಷೆಯು ಎಂತಹದ್ದಿತ್ತೆಂದರೆ, ಕೇವಲ ವಕೀಲರು ಅಥವಾ ಚಾರ್ಟರ್ಡ್ ಅಕೌಂಟೆಂಟ್ ಗಳು ಮಾತ್ರ ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿತ್ತು ಎಂದು ಉಲ್ಲೇಖಿಸಿದ ಶ್ರೀ ಮೋದಿ ಅವರು, "ಈಗ, ಸಾಮಾನ್ಯ ತೆರಿಗೆದಾರರಿಗೂ ಅರ್ಥವಾಗುವಂತಹ ಭಾಷೆಯಲ್ಲಿ ಆದಾಯ ತೆರಿಗೆ ಮಸೂದೆಯನ್ನು ರೂಪಿಸಲಾಗಿದೆ. ಇದು ನಾಗರಿಕರ ಹಿತಾಸಕ್ತಿಗಳ ಬಗ್ಗೆ ಸರ್ಕಾರಕ್ಕಿರುವ ಆಳವಾದ ಸಂವೇದನಾಶೀಲತೆಯನ್ನು ಪ್ರತಿಬಿಂಬಿಸುತ್ತದೆ" ಎಂದು ನುಡಿದರು.

ಇತ್ತೀಚಿನ ಮುಂಗಾರು ಅಧಿವೇಶನದಲ್ಲಿ ಗಣಿಗಾರಿಕೆಗೆ ಸಂಬಂಧಿಸಿದ ಕಾನೂನುಗಳಿಗೆ ಮಹತ್ವದ ತಿದ್ದುಪಡಿಗಳನ್ನು ತರಲಾಗಿದೆ ಎಂದು ಹೇಳಿದ ಶ್ರೀ ಮೋದಿ ಅವರು, ವಸಾಹತುಶಾಹಿ ಕಾಲದಿಂದಲೂ ಜಾರಿಯಲ್ಲಿದ್ದ ಹಡಗು ಮತ್ತು ಬಂದರುಗಳಿಗೆ ಸಂಬಂಧಿಸಿದ ಕಾನೂನುಗಳನ್ನೂ ಸಹ ಪರಿಷ್ಕರಿಸಲಾಗಿದೆ ಎಂದು ಗಮನಸೆಳೆದರು. ಈ ಸುಧಾರಣೆಗಳು ಭಾರತದ 'ನೀಲಿ ಆರ್ಥಿಕತೆ'ಯನ್ನು ಬಲಪಡಿಸುತ್ತವೆ ಮತ್ತು ಬಂದರು-ಕೇಂದ್ರಿತ ಅಭಿವೃದ್ಧಿಯನ್ನು ಉತ್ತೇಜಿಸುತ್ತವೆ ಎಂದು ಅವರು ಒತ್ತಿ ಹೇಳಿದರು. ಕ್ರೀಡಾ ವಲಯದಲ್ಲೂ ಸಹ ಹೊಸ ಸುಧಾರಣೆಗಳನ್ನು ತರಲಾಗಿದೆ ಎಂದು ಪ್ರಧಾನಮಂತ್ರಿ ಅವರು ಇದೇ ವೇಳೆ ತಿಳಿಸಿದರು. ಪ್ರಮುಖ ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸಲು ಭಾರತವನ್ನು ಸಿದ್ಧಪಡಿಸಲಾಗುತ್ತಿದೆ ಮತ್ತು ಸಮಗ್ರ ಕ್ರೀಡಾ ಆರ್ಥಿಕತೆಯ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಹೇಳಿದರು. ಈ ದೃಷ್ಟಿಕೋನವನ್ನು ಬೆಂಬಲಿಸಲು ಸರ್ಕಾರವು 'ಖೇಲೋ ಭಾರತ್ ನೀತಿ' ಎಂಬ ಹೊಸ ರಾಷ್ಟ್ರೀಯ ಕ್ರೀಡಾ ನೀತಿಯನ್ನು ಜಾರಿಗೆ ತಂದಿದೆ ಎಂದು ಅವರು ಪ್ರಕಟಿಸಿದರು.
"ಸಾಧಿಸಿದ ಗುರಿಗಳಿಂದ ತೃಪ್ತನಾಗುವುದು ನನ್ನ ಸ್ವಭಾವವಲ್ಲ. ಅದೇ ವಿಧಾನವು ಸುಧಾರಣೆಗಳಿಗೂ ಅನ್ವಯಿಸುತ್ತದೆ ಮತ್ತು ಸರ್ಕಾರವು ಮತ್ತಷ್ಟು ಮುಂದುವರಿಯಲು ದೃಢಸಂಕಲ್ಪ ಮಾಡಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಸುಧಾರಣೆಗಳ ಸಮಗ್ರ ಶಸ್ತ್ರಾಗಾರವನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಈ ಕಾರ್ಯಸೂಚಿಯನ್ನು ಮುನ್ನಡೆಸಲು ಅನೇಕ ರಂಗಗಳಲ್ಲಿ ಕೆಲಸ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಪ್ರಧಾನಮಂತ್ರಿ ಮೋದಿ ಅವರು ಅನಗತ್ಯ ಕಾನೂನುಗಳ ರದ್ದತಿ, ನಿಯಮಗಳು ಮತ್ತು ಕಾರ್ಯವಿಧಾನಗಳ ಸರಳೀಕರಣದಂತಹ ಪ್ರಮುಖ ಕ್ರಮಗಳನ್ನು ವಿವರಿಸಿದರು. ಕಾರ್ಯವಿಧಾನಗಳು ಮತ್ತು ಅನುಮೋದನೆಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ, ಜೊತೆಗೆ ಹಲವಾರು ನಿಬಂಧನೆಗಳನ್ನು ಅಪರಾಧ ಮುಕ್ತಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು. "ಜಿ.ಎಸ್.ಟಿ ವ್ಯವಸ್ಥೆಯಲ್ಲಿ ಪ್ರಮುಖ ಸುಧಾರಣೆಯನ್ನು ಕೈಗೊಳ್ಳಲಾಗುತ್ತಿದೆ ಮತ್ತು ಈ ಪ್ರಕ್ರಿಯೆಯು ದೀಪಾವಳಿಯ ವೇಳೆಗೆ ಪೂರ್ಣಗೊಳ್ಳಲಿದೆ" ಎಂದು ಘೋಷಿಸಿದ ಶ್ರೀ ಮೋದಿ ಅವರು, ಇದರಿಂದ ಜಿ.ಎಸ್.ಟಿ ವ್ಯವಸ್ಥೆಯು ಮತ್ತಷ್ಟು ಸರಳವಾಗಲಿದೆ ಮತ್ತು ಬೆಲೆಗಳು ಕಡಿಮೆಯಾಗಲಿವೆ ಎಂದು ದೃಢಪಡಿಸಿದರು.
ಮುಂದಿನ ಪೀಳಿಗೆಯ ಈ ಸುಧಾರಣೆಗಳ ಶಸ್ತ್ರಾಗಾರವು ಭಾರತದಾದ್ಯಂತ ಉತ್ಪಾದನೆಯನ್ನು ಹೆಚ್ಚಿಸಲಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಇದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಲಿದ್ದು, ಕೈಗಾರಿಕೆಗಳಿಗೆ ಹೊಸ ಚೈತನ್ಯ ಸಿಗಲಿದೆ ಎಂದು ಅವರು ನುಡಿದರು. ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಹೇಳಿದ ಶ್ರೀ ಮೋದಿ ಅವರು, ಈ ಸುಧಾರಣೆಗಳ ಪರಿಣಾಮವಾಗಿ 'ಜೀವನಾನುಕೂಲ' ಮತ್ತು 'ವ್ಯವಹಾರಾನುಕೂಲ' ಎರಡೂ ಸುಧಾರಿಸಲಿವೆ ಎಂದು ದೃಢಪಡಿಸಿದರು.
2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಭಾರತ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ಅಭಿವೃದ್ಧಿ ಹೊಂದಿದ ಭಾರತದ ಅಡಿಪಾಯವು ಆತ್ಮನಿರ್ಭರ ಭಾರತವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. 'ಆತ್ಮನಿರ್ಭರ ಭಾರತ'ವನ್ನು ಮೂರು ಪ್ರಮುಖ ಮಾನದಂಡಗಳಾದ ವೇಗ, ಪ್ರಮಾಣ, ಮತ್ತು ವ್ಯಾಪ್ತಿ- ಇವುಗಳ ಮೇಲೆ ಅಳೆಯಬೇಕು ಎಂದು ಅವರು ಒತ್ತಿ ಹೇಳಿದರು. ಜಾಗತಿಕ ಸಾಂಕ್ರಾಮಿಕದ ಸಮಯದಲ್ಲಿ, ಭಾರತವು ಈ ಮೂರನ್ನೂ - ವೇಗ, ಪ್ರಮಾಣ ಮತ್ತು ವ್ಯಾಪ್ತಿ- ಪ್ರದರ್ಶಿಸಿತು ಎಂದು ಶ್ರೀ ಮೋದಿ ಅವರು ನೆನಪಿಸಿಕೊಂಡರು. ಅಗತ್ಯ ವಸ್ತುಗಳ ಬೇಡಿಕೆಯಲ್ಲಿ ಹಠಾತ್ ಹೆಚ್ಚಳವಾದಾಗ, ಜಾಗತಿಕ ಪೂರೈಕೆ ಸರಪಳಿಗಳು ಸ್ಥಗಿತಗೊಂಡವು ಎಂದು ಅವರು ತಿಳಿಸಿದರು. ಈ ಸನ್ನಿವೇಶದಲ್ಲಿ ಭಾರತವು ಅಗತ್ಯ ವಸ್ತುಗಳನ್ನು ದೇಶೀಯವಾಗಿ ತಯಾರಿಸಲು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಿತು ಎಂದು ಹೇಳಿದರು. ಭಾರತವು ದೊಡ್ಡ ಪ್ರಮಾಣದಲ್ಲಿ ಪರೀಕ್ಷಾ ಕಿಟ್ ಗಳು ಮತ್ತು ವೆಂಟಿಲೇಟರ್ ಗಳನ್ನು ತ್ವರಿತವಾಗಿ ಉತ್ಪಾದಿಸಿತು ಮತ್ತು ದೇಶಾದ್ಯಂತ ಆಸ್ಪತ್ರೆಗಳಲ್ಲಿ ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಿತು, ಇದು ಭಾರತದ ವೇಗವನ್ನು ತೋರಿಸುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ದೇಶದ ಪ್ರತಿ ಮೂಲೆ ಮೂಲೆಯಲ್ಲಿರುವ ನಾಗರಿಕರಿಗೆ 220 ಕೋಟಿಗೂ ಹೆಚ್ಚು ಮೇಡ್-ಇನ್-ಇಂಡಿಯಾ ಲಸಿಕೆಗಳನ್ನು ಉಚಿತವಾಗಿ ನೀಡಲಾಯಿತು. ಇದು ಭಾರತದ ಪ್ರಮಾಣವನ್ನು ಪ್ರದರ್ಶಿಸುತ್ತದೆ ಎಂದು ಅವರು ತಿಳಿಸಿದರು. ಲಕ್ಷಾಂತರ ಜನರಿಗೆ ತ್ವರಿತವಾಗಿ ಲಸಿಕೆ ಹಾಕಲು, ಭಾರತವು ಕೋವಿನ್ ವೇದಿಕೆಯನ್ನು ಅಭಿವೃದ್ಧಿಪಡಿಸಿತು, ಇದು ಭಾರತದ ವ್ಯಾಪ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಶ್ರೀ ಮೋದಿ ಅವರು ಹೇಳಿದರು. ಕೋವಿನ್ ಜಾಗತಿಕವಾಗಿ ಒಂದು ವಿಶಿಷ್ಟ ವ್ಯವಸ್ಥೆಯಾಗಿದ್ದು, ಭಾರತವು ತನ್ನ ಲಸಿಕಾ ಅಭಿಯಾನವನ್ನು ದಾಖಲೆ ಸಮಯದಲ್ಲಿ ಪೂರ್ಣಗೊಳಿಸಲು ಇದು ಸಹಾಯ ಮಾಡಿದೆ ಎಂದು ಅವರು ದೃಢಪಡಿಸಿದರು.

ಇಂಧನ ಕ್ಷೇತ್ರದಲ್ಲಿ ಭಾರತದ ವೇಗ, ಪ್ರಮಾಣ ಮತ್ತು ವ್ಯಾಪ್ತಿಗೆ ಇಡೀ ವಿಶ್ವವೇ ಸಾಕ್ಷಿಯಾಗಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ ಅವರು, 2030ರ ವೇಳೆಗೆ ತನ್ನ ಒಟ್ಟು ವಿದ್ಯುತ್ ಸಾಮರ್ಥ್ಯದ ಶೇಕಡ 50ರಷ್ಟನ್ನು ಪಳೆಯುಳಿಕೆ-ರಹಿತ ಇಂಧನಗಳಿಂದ ಉತ್ಪಾದಿಸುವ ಗುರಿಯನ್ನು ಭಾರತವು ನಿಗದಿಪಡಿಸಿತ್ತು ಎಂದು ಹೇಳಿದರು. ಈ ಗುರಿಯನ್ನು ಈಗಾಗಲೇ 2025ರಲ್ಲೇ, ಅಂದರೆ ನಿಗದಿತ ಸಮಯಕ್ಕಿಂತ ಐದು ವರ್ಷಗಳ ಮುಂಚಿತವಾಗಿಯೇ ಸಾಧಿಸಲಾಗಿದೆ ಎಂದು ಅವರು ಘೋಷಿಸಿದರು.
ಹಿಂದಿನ ನೀತಿಗಳು ಹೆಚ್ಚಾಗಿ ಆಮದುಗಳ ಮೇಲೆ ಕೇಂದ್ರೀಕೃತವಾಗಿದ್ದವು ಮತ್ತು ಸ್ವಹಿತಾಸಕ್ತಿಗಳಿಂದ ಪ್ರೇರೇಪಿಸಲ್ಪಟ್ಟಿದ್ದವು ಎಂದು ತಿಳಿಸಿದ ಪ್ರಧಾನಮಂತ್ರಿ ಅವರು, ಇಂದು ಆತ್ಮನಿರ್ಭರ ಭಾರತವು ರಫ್ತುಗಳಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ ಎಂದು ಹೇಳಿದರು. ಕಳೆದ ವರ್ಷ ಭಾರತವು ₹4 ಲಕ್ಷ ಕೋಟಿ ಮೌಲ್ಯದ ಕೃಷಿ ಉತ್ಪನ್ನಗಳನ್ನು ರಫ್ತು ಮಾಡಿದೆ ಎಂದು ಅವರು ಮಾಹಿತಿ ನೀಡಿದರು. ಕಳೆದ ವರ್ಷ ಜಾಗತಿಕವಾಗಿ ಉತ್ಪಾದಿಸಿದ 800 ಕೋಟಿ ಲಸಿಕೆ ಡೋಸ್‌ಗಳಲ್ಲಿ 400 ಕೋಟಿ ಲಸಿಕೆಗಳು ಭಾರತದಲ್ಲಿ ತಯಾರಾಗಿವೆ ಎಂದು ಶ್ರೀ ಮೋದಿ ಅವರು ಹೇಳಿದರು. ಸ್ವಾತಂತ್ರ್ಯಾನಂತರದ ಆರೂವರೆ ದಶಕಗಳಲ್ಲಿ, ಭಾರತದ ಎಲೆಕ್ಟ್ರಾನಿಕ್ಸ್ ರಫ್ತುಗಳು ಸುಮಾರು ₹35,000 ಕೋಟಿ ತಲುಪಿದ್ದವು, ಆದರೆ ಇಂದು ಈ ಅಂಕಿ-ಅಂಶವು ಸುಮಾರು ₹3.25 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ ಎಂದು ಅವರು ತಿಳಿಸಿದರು.
2014ರವರೆಗೆ ಭಾರತದ ವಾರ್ಷಿಕ ಆಟೋಮೊಬೈಲ್ ರಫ್ತುಗಳು ಸುಮಾರು ₹50,000 ಕೋಟಿ ಇತ್ತು ಎಂದು ಹೇಳಿದ ಶ್ರೀ ಮೋದಿ ಅವರು, ಇಂದು ಭಾರತವು ಒಂದೇ ವರ್ಷದಲ್ಲಿ ₹1.2 ಲಕ್ಷ ಕೋಟಿ ಮೌಲ್ಯದ ಆಟೋಮೊಬೈಲ್ ಗಳನ್ನು ರಫ್ತು ಮಾಡುತ್ತಿದೆ ಎಂದು ಎತ್ತಿ ತೋರಿಸಿದರು. ಭಾರತವು ಈಗ ಮೆಟ್ರೋ ಬೋಗಿಗಳು, ರೈಲು ಬೋಗಿಗಳು ಮತ್ತು ರೈಲು ಎಂಜಿನ್ ಗಳನ್ನು ಸಹ ರಫ್ತು ಮಾಡಲು ಪ್ರಾರಂಭಿಸಿದೆ ಎಂದು ಅವರು ಹೇಳಿದರು. ಭಾರತವು 100 ದೇಶಗಳಿಗೆ ಎಲೆಕ್ಟ್ರಿಕ್ ವಾಹನಗಳನ್ನು ರಫ್ತು ಮಾಡುವ ಮೂಲಕ ಮತ್ತೊಂದು ಮೈಲಿಗಲ್ಲನ್ನು ಸಾಧಿಸಲಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಈ ಸಾಧನೆಗೆ ಸಂಬಂಧಿಸಿದ ಒಂದು ಪ್ರಮುಖ ಕಾರ್ಯಕ್ರಮವು ಆಗಸ್ಟ್ 26ರಂದು ನಡೆಯಲಿದೆ ಎಂದು ಅವರು ಪ್ರಕಟಿಸಿದರು.
ದೇಶದ ಪ್ರಗತಿಯಲ್ಲಿ ಸಂಶೋಧನೆಯು ಒಂದು ಪ್ರಮುಖ ಸ್ತಂಭವಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಆಮದು ಮಾಡಿಕೊಂಡ ಸಂಶೋಧನೆಗಳು ಬದುಕಲು ಸಾಕಾಗಬಹುದು, ಆದರೆ ಅದು ಭಾರತದ ಆಕಾಂಕ್ಷೆಗಳನ್ನು ಪೂರೈಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಸಂಶೋಧನಾ ಕ್ಷೇತ್ರದಲ್ಲಿ ತುರ್ತು ಮತ್ತು ಕೇಂದ್ರೀಕೃತ ಮನಸ್ಥಿತಿಯ ಅಗತ್ಯವನ್ನು ಅವರು ಒತ್ತಿ ಹೇಳಿದರು. ಸಂಶೋಧನೆಯನ್ನು ಉತ್ತೇಜಿಸಲು ಸರ್ಕಾರವು ತ್ವರಿತವಾಗಿ ಕಾರ್ಯನಿರ್ವಹಿಸಿದೆ ಮತ್ತು ಅಗತ್ಯ ನೀತಿಗಳು ಹಾಗೂ ವೇದಿಕೆಗಳನ್ನು ನಿರಂತರವಾಗಿ ಅಭಿವೃದ್ಧಿಪಡಿಸಿದೆ ಎಂದು ಅವರು ತಿಳಿಸಿದರು. 2014ಕ್ಕೆ ಹೋಲಿಸಿದರೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಮಾಡುವ ವೆಚ್ಚವು ದ್ವಿಗುಣಗೊಂಡಿದೆ, ಮತ್ತು ನೋಂದಾಯಿಸಲಾದ ಪೇಟೆಂಟ್ ಗಳ ಸಂಖ್ಯೆಯು 2014 ರಿಂದ 17 ಪಟ್ಟು ಹೆಚ್ಚಾಗಿದೆ ಎಂದು ಶ್ರೀ ಮೋದಿ ಅವರು ಮಾಹಿತಿ ನೀಡಿದರು. ಸುಮಾರು 6,000 ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೋಶಗಳನ್ನು ಸ್ಥಾಪಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. 'ಒನ್ ನೇಷನ್, ಒನ್ ಸಬ್ಸ್ಕ್ರಿಪ್ಷನ್' ಉಪಕ್ರಮವು ಜಾಗತಿಕ ಸಂಶೋಧನಾ ಜರ್ನಲ್ ಗಳನ್ನು ವಿದ್ಯಾರ್ಥಿಗಳಿಗೆ ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮಾಡಿದೆ ಎಂದು ಅವರು ತಿಳಿಸಿದರು. ₹50,000 ಕೋಟಿ ಬಜೆಟ್ ನೊಂದಿಗೆ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವನ್ನು ರಚಿಸಲಾಗಿದೆ ಮತ್ತು ₹1 ಲಕ್ಷ ಕೋಟಿ ಮೌಲ್ಯದ ಸಂಶೋಧನಾ ಅಭಿವೃದ್ಧಿ ಮತ್ತು ನಾವೀನ್ಯತೆ ಯೋಜನೆಯನ್ನು ಸಹ ಅನುಮೋದಿಸಲಾಗಿದೆ ಎಂದು ಶ್ರೀ ಮೋದಿ ಅವರು ಹೇಳಿದರು. ಉದಯೋನ್ಮುಖ ಮತ್ತು ಕಾರ್ಯತಂತ್ರದ ವಲಯಗಳಲ್ಲಿ ಖಾಸಗಿ ವಲಯದ ಹೊಸ ಸಂಶೋಧನೆಗಳನ್ನು ಬೆಂಬಲಿಸುವುದು ಇದರ ಉದ್ದೇಶವಾಗಿದೆ ಎಂದು ಅವರು ದೃಢಪಡಿಸಿದರು.
ಶೃಂಗಸಭೆಯಲ್ಲಿ ಉಪಸ್ಥಿತರಿರುವ ಪ್ರಮುಖ ಉದ್ಯಮ ದಿಗ್ಗಜರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮೋದಿ ಅವರು, ಪ್ರಸ್ತುತ ಕಾಲವು ಉದ್ಯಮ ಮತ್ತು ಖಾಸಗಿ ವಲಯದಿಂದ ಸಕ್ರಿಯ ಸಹಭಾಗಿತ್ವವನ್ನು ಬಯಸುತ್ತದೆ ಎಂದು ಹೇಳಿದರು. ಕ್ಲೀನ್ ಎನರ್ಜಿ, ಕ್ವಾಂಟಮ್ ಟೆಕ್ನಾಲಜಿ, ಬ್ಯಾಟರಿ ಸ್ಟೋರೇಜ್, ಅಡ್ವಾನ್ಸ್ಡ್ ಮೆಟೀರಿಯಲ್ಸ್, ಮತ್ತು ಬಯೋಟೆಕ್ನಾಲಜಿಯಂತಹ ವಲಯಗಳಲ್ಲಿ ಹೆಚ್ಚಿನ ಸಂಶೋಧನೆ ಮತ್ತು ಹೂಡಿಕೆಯ ಅವಶ್ಯಕತೆಯಿದೆ ಎಂದು ಅವರು ಒತ್ತಿ ಹೇಳಿದರು. "ಇಂತಹ ಪ್ರಯತ್ನಗಳು ಅಭಿವೃದ್ಧಿ ಹೊಂದಿದ ಭಾರತದ ಕನಸಿಗೆ ಹೊಸ ಚೈತನ್ಯವನ್ನು ತುಂಬಲಿವೆ" ಎಂದು ಪ್ರಧಾನಮಂತ್ರಿ ಅವರು ಪ್ರತಿಪಾದಿಸಿದರು.
‘ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆ’ ಎಂಬ ಮಂತ್ರದಿಂದ ಮಾರ್ಗದರ್ಶಿಸಲ್ಪಟ್ಟ ಭಾರತವು, ಇಂದು ನಿಧಾನಗತಿಯ ಬೆಳವಣಿಗೆಯ ಹಿಡಿತದಿಂದ ಜಗತ್ತನ್ನು ಮುಕ್ತಗೊಳಿಸಲು ಸಹಾಯ ಮಾಡುವ ಸ್ಥಿತಿಯಲ್ಲಿದೆ" ಎಂದು ಪ್ರಧಾನಮಂತ್ರಿ ಅವರು ಹೇಳಿದರು. "ಭಾರತವು ನಿಂತ ನೀರಿಗೆ ಕಲ್ಲು ಹೊಡೆದು ಖುಷಿಪಡುವ ದೇಶವಲ್ಲ, ಬದಲಿಗೆ, ರಭಸವಾಗಿ ಹರಿಯುವ ಪ್ರವಾಹದ ದಿಕ್ಕನ್ನೇ ಬದಲಿಸುವ ಶಕ್ತಿ ಹೊಂದಿರುವ ದೇಶ" ಎಂದು ಅವರು ನುಡಿದರು. ಕೆಂಪು ಕೋಟೆಯಿಂದ ತಾವು ನೀಡಿದ್ದ ಭಾಷಣವನ್ನು ಸ್ಮರಿಸುತ್ತಾ ಪ್ರಧಾನಮಂತ್ರಿ ಅವರು ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು. "ಕಾಲದ ಗತಿಯನ್ನೇ ಬದಲಿಸುವ ಸಾಮರ್ಥ್ಯವನ್ನು ಭಾರತವು ಈಗ ಹೊಂದಿದೆ" ಎಂಬುದನ್ನು ಅವರು ಪುನರುಚ್ಚರಿಸಿದರು.
ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
India is the world's fastest-growing major economy and is soon set to become the third-largest globally. pic.twitter.com/vKcu48Xd1e
— PMO India (@PMOIndia) August 23, 2025
India, with its resilience and strength, stands as a beacon of hope for the world. pic.twitter.com/FOWLs7ODkk
— PMO India (@PMOIndia) August 23, 2025
Infusing new energy into India's space sector. pic.twitter.com/PgWNxbnoxi
— PMO India (@PMOIndia) August 23, 2025
We are moving ahead with the goal of a quantum jump, not just incremental change. pic.twitter.com/8qjKz5KKnD
— PMO India (@PMOIndia) August 23, 2025
For us, reforms are neither a compulsion nor crisis-driven, but a matter of commitment and conviction. pic.twitter.com/J7BOsB1UUs
— PMO India (@PMOIndia) August 23, 2025
It is not in my nature to be satisfied with what has already been achieved. The same approach guides our reforms: PM @narendramodi pic.twitter.com/ve26wDwXHr
— PMO India (@PMOIndia) August 23, 2025
A major reform is underway in GST, set to be completed by this Diwali, making GST simpler and bringing down prices. pic.twitter.com/kg1hEhtXyL
— PMO India (@PMOIndia) August 23, 2025
A Viksit Bharat rests on the foundation of an Aatmanirbhar Bharat. pic.twitter.com/nquCp1GU2U
— PMO India (@PMOIndia) August 23, 2025
'One Nation, One Subscription' has simplified access to world-class research journals for students. pic.twitter.com/wSCrguVhOI
— PMO India (@PMOIndia) August 23, 2025


