ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಂಧ್ರಪ್ರದೇಶದ ಕರ್ನೂಲ್ ನಲ್ಲಿ ಸುಮಾರು ₹13,430 ಕೋಟಿ ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಲೋಕಾಪರ್ಣೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಅಹೋಬಿಲಂನ ಭಗವಾನ್ ನರಸಿಂಹ ಸ್ವಾಮಿ ಮತ್ತು ಮಹಾನಂದಿಯ ಶ್ರೀ ಮಹಾನಂದೀಶ್ವರ ಸ್ವಾಮಿಗೆ ನಮನ ಸಲ್ಲಿಸಿದರು. ಎಲ್ಲರ ಯೋಗಕ್ಷೇಮಕ್ಕಾಗಿ ಅವರು ಮಂತ್ರಾಲಯದ ಗುರು ಶ್ರೀ ರಾಘವೇಂದ್ರ ಸ್ವಾಮಿಗಳ ಆಶೀರ್ವಾದವನ್ನು ಕೋರಿದರು.
"ಸೌರಾಷ್ಟ್ರೇ ಸೋಮನಾಥಂ ಚ ಶ್ರೀಶೈಲ ಮಲ್ಲಿಕಾರ್ಜುನಂ" ಎಂಬ ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರದ ಶ್ಲೋಕವನ್ನು ಪಠಿಸಿದ ಶ್ರೀ ಮೋದಿ, ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ, ಭಗವಾನ್ ಸೋಮನಾಥ ಮತ್ತು ಭಗವಾನ್ ಮಲ್ಲಿಕಾರ್ಜುನರ ಹೆಸರುಗಳು ಆರಂಭದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತವೆ ಎಂದು ಹೇಳಿದರು. "ಗುಜರಾತಿನ ಪವಿತ್ರ ಸೋಮನಾಥನ ನೆಲದಲ್ಲಿ ಜನಿಸಿದ್ದು, ಕಾಶಿಯ ಬಾಬಾ ವಿಶ್ವನಾಥನ ಭೂಮಿಗೆ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ಮತ್ತು ಈಗ ಶ್ರೀಶೈಲದ ಆಶೀರ್ವಾದ ಪಡೆದಿರುವುದು ನನ್ನ ಅದೃಷ್ಟ" ಎಂದು ಶ್ರೀ ಮೋದಿ ಹೇಳಿದರು. ಶ್ರೀಶೈಲಕ್ಕೆ ಭೇಟಿ ನೀಡಿದ ನಂತರ, ಪ್ರಧಾನಮಂತ್ರಿಯವರು ಶಿವಾಜಿ ಸ್ಫೂರ್ತಿ ಕೇಂದ್ರದಲ್ಲಿ ಗೌರವ ಸಲ್ಲಿಸಿದರು ಮತ್ತು ವೇದಿಕೆಯಿಂದ ಛತ್ರಪತಿ ಮಹಾರಾಜರಿಗೆ ಗೌರವ ಸಲ್ಲಿಸಿದರು. ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿಯಂತಹ ಪೂಜ್ಯ ಶೈವ ಸಂತರಿಗೆ ಅವರು ನಮನ ಸಲ್ಲಿಸಿದರು. ಶ್ರೀ ಉಯ್ಯಾಲವಾಡ ನರಸಿಂಹ ರೆಡ್ಡಿಗಾರು ಮತ್ತು ಶ್ರೀ ಹರಿ ಸರ್ವೋತ್ತಮ ರಾವ್ ಸೇರಿದಂತೆ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಿಗೂ ಅವರು ಗೌರವ ಸಲ್ಲಿಸಿದರು.

"ಆಂಧ್ರಪ್ರದೇಶವು ಹೆಮ್ಮೆ ಮತ್ತು ಶ್ರೀಮಂತ ಸಂಸ್ಕೃತಿಯ ಭೂಮಿಯಾಗಿದ್ದು, ವಿಜ್ಞಾನ ಮತ್ತು ನಾವೀನ್ಯತೆಯ ಕೇಂದ್ರವಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ರಾಜ್ಯದ ಅಪರಿಮಿತ ಸಾಮರ್ಥ್ಯ ಮತ್ತು ಅದರ ಯುವಜನರ ಅಸಾಧಾರಣ ಸಾಮರ್ಥ್ಯಗಳನ್ನು ಅವರು ಒತ್ತಿ ಹೇಳಿದರು. ಆಂಧ್ರಪ್ರದೇಶಕ್ಕೆ ಸರಿಯಾದ ದೃಷ್ಟಿಕೋನ ಮತ್ತು ನಾಯಕತ್ವದ ಅಗತ್ಯವಿತ್ತು ಎಂದು ಅವರು ಹೇಳಿದರು. ಇಂದು ಚಂದ್ರಬಾಬು ನಾಯ್ಡು ಮತ್ತು ಪವನ್ ಕಲ್ಯಾಣ್ ಅವರಂತಹ ನಾಯಕರೊಂದಿಗೆ, ಆಂಧ್ರಪ್ರದೇಶವು ಕೇಂದ್ರ ಸರ್ಕಾರದ ಸಂಪೂರ್ಣ ಬೆಂಬಲ ಮತ್ತು ದೂರದೃಷ್ಟಿಯ ನಾಯಕತ್ವವನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಕಳೆದ ಹದಿನಾರು ತಿಂಗಳುಗಳಲ್ಲಿ ಆಂಧ್ರಪ್ರದೇಶವು ತ್ವರಿತ ಅಭಿವೃದ್ಧಿಯನ್ನು ಕಂಡಿದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಡಿಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ದೆಹಲಿ ಮತ್ತು ಅಮರಾವತಿಗಳು ತ್ವರಿತ ಅಭಿವೃದ್ಧಿಯನ್ನು ಸಾಧಿಸಲು ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಹೇಳಿದರು. 2047 ರ ವೇಳೆಗೆ ಭಾರತ ಖಂಡಿತವಾಗಿಯೂ ಅಭಿವೃದ್ಧಿ ಹೊಂದಿದ ದೇಶವಾಗಲಿದೆ ಮತ್ತು 21 ನೇ ಶತಮಾನವು ಭಾರತ ಮತ್ತು ಅದರ 140 ಕೋಟಿ ನಾಗರಿಕರಿಗೆ ಸೇರಿದೆ ಎಂದು ಶ್ರೀ ಮೋದಿ ಪುನರುಚ್ಚರಿಸಿದರು. ರಸ್ತೆಗಳು, ವಿದ್ಯುತ್, ರೈಲ್ವೆ, ಹೆದ್ದಾರಿಗಳು ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ ಹಲವಾರು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಅವರು ಘೋಷಿಸಿದರು. ಈ ಉಪಕ್ರಮಗಳು ರಾಜ್ಯಾದ್ಯಂತ ಸಂಪರ್ಕವನ್ನು ಬಲಪಡಿಸುತ್ತವೆ, ಕೈಗಾರಿಕಾ ಬೆಳವಣಿಗೆಯನ್ನು ಹೆಚ್ಚಿಸುತ್ತವೆ ಮತ್ತು ನಾಗರಿಕರ ಜೀವನವನ್ನು ಸುಲಭಗೊಳಿಸುತ್ತವೆ. ಈ ಯೋಜನೆಗಳು ಕರ್ನೂಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತವೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು ಮತ್ತು ಈ ಯೋಜನೆಗಳಿಗಾಗಿ ರಾಜ್ಯದ ಜನರನ್ನು ಅಭಿನಂದಿಸಿದರು.
ಯಾವುದೇ ದೇಶ ಅಥವಾ ರಾಜ್ಯದ ಅಭಿವೃದ್ಧಿಗೆ ಇಂಧನ ಭದ್ರತೆ ಅತ್ಯಗತ್ಯ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ವಿದ್ಯುತ್ ಕ್ಷೇತ್ರದಲ್ಲಿ ಸುಮಾರು ₹3,000 ಕೋಟಿ ಮೌಲ್ಯದ ಪ್ರಸರಣ ಯೋಜನೆಯ ಉದ್ಘಾಟನೆಯನ್ನು ಘೋಷಿಸಿದರು, ಇದು ದೇಶದ ಇಂಧನ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ತ್ವರಿತ ಅಭಿವೃದ್ಧಿಯ ನಡುವೆ ಹಿಂದಿನ ಪರಿಸ್ಥಿತಿಗಳನ್ನು ಮರೆಯಬಾರದು ಎಂದು ಅವರು ನಾಗರಿಕರಿಗೆ ಮನವಿ ಮಾಡಿದರು. ಹನ್ನೊಂದು ವರ್ಷಗಳ ಹಿಂದೆ, ವಿರೋಧ ಪಕ್ಷದ ಕೇಂದ್ರ ಸರ್ಕಾರದ ಅಡಿಯಲ್ಲಿ, ತಲಾ ವಿದ್ಯುತ್ ಬಳಕೆ 1,000 ಯೂನಿಟ್ ಗಳಿಗಿಂತ ಕಡಿಮೆಯಿತ್ತು ಮತ್ತು ದೇಶವು ವಿದ್ಯುತ್ ಕಡಿತದಂತಹ ಸವಾಲುಗಳನ್ನು ಎದುರಿಸಿತು ಎಂದು ಶ್ರೀ ಮೋದಿ ಹೇಳಿದರು. ಸಾವಿರಾರು ಹಳ್ಳಿಗಳಲ್ಲಿ ಮೂಲಭೂತ ವಿದ್ಯುತ್ ಕಂಬಗಳೂ ಇರಲಿಲ್ಲ. ಇಂದು ಭಾರತವು ಶುದ್ಧ ಇಂಧನದಿಂದ ಒಟ್ಟು ಇಂಧನ ಉತ್ಪಾದನೆಯವರೆಗೆ ಎಲ್ಲಾ ವಲಯಗಳಲ್ಲಿ ಹೊಸ ದಾಖಲೆಗಳನ್ನು ಸ್ಥಾಪಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು. ವಿದ್ಯುತ್ ಪ್ರತಿ ಹಳ್ಳಿಯನ್ನು ತಲುಪಿದೆ, ತಲಾ ಬಳಕೆ 1,400 ಯೂನಿಟ್ ಗಳಿಗೆ ಹೆಚ್ಚಾಗಿದೆ ಮತ್ತು ಕೈಗಾರಿಕೆ ಮತ್ತು ಮನೆಗಳು ಸಾಕಷ್ಟು ವಿದ್ಯುತ್ ಪಡೆಯುತ್ತಿವೆ ಎಂದು ಪ್ರಧಾನಮಂತ್ರಿ ಹೇಳಿದರು.

ಆಂಧ್ರಪ್ರದೇಶ ಭಾರತದ ಇಂಧನ ಕ್ರಾಂತಿಯ ಪ್ರಮುಖ ಕೇಂದ್ರವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಶ್ರೀಕಾಕುಳಂನಿಂದ ಅಂಗುಲ್ ಗೆ ನೈಸರ್ಗಿಕ ಅನಿಲ ಪೈಪ್‌ಲೈನ್ ಯೋಜನೆಯ ಉದ್ಘಾಟನೆಯನ್ನು ಅವರು ಘೋಷಿಸಿದರು, ಇದು ಸುಮಾರು 1.5 ಮಿಲಿಯನ್ ಮನೆಗಳಿಗೆ ಅನಿಲವನ್ನು ಪೂರೈಸುತ್ತದೆ. ಚಿತ್ತೂರಿನಲ್ಲಿ ಪ್ರತಿದಿನ 20,000 ಸಿಲಿಂಡರ್ ಗಳನ್ನು ತುಂಬುವ ಸಾಮರ್ಥ್ಯವಿರುವ ಎಲ್ ಪಿ ಜಿ ಬಾಟ್ಲಿಂಗ್ ಸ್ಥಾವರವನ್ನು ಅವರು ಉದ್ಘಾಟಿಸಿದರು. ಈ ಸೌಲಭ್ಯವು ಸ್ಥಳೀಯ ಸಾರಿಗೆ ಮತ್ತು ಸಂಗ್ರಹಣಾ ವಲಯಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮತ್ತು ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.
"ದೇಶಾದ್ಯಂತ ಬಹು-ಮಾದರಿ ಮೂಲಸೌಕರ್ಯವನ್ನು ವೇಗವಾಗಿ ನಿರ್ಮಿಸಲಾಗುತ್ತಿದೆ ಮತ್ತು ಹಳ್ಳಿಗಳಿಂದ ನಗರಗಳಿಗೆ ಮತ್ತು ನಗರಗಳಿಂದ ಬಂದರುಗಳಿಗೆ ಸಂಪರ್ಕದ ಬಗ್ಗೆ ನಾವು ಹೆಚ್ಚು ಗಮನ ಹರಿಸುತ್ತಿದ್ದೇವೆ" ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಸಬ್ಬಾವರಂ ಮತ್ತು ಶೀಲಾನಗರದ ನಡುವೆ ಹೊಸದಾಗಿ ನಿರ್ಮಿಸಲಾದ ಹೆದ್ದಾರಿಯು ಸಂಪರ್ಕವನ್ನು ಮತ್ತಷ್ಟು ಸುಧಾರಿಸುತ್ತದೆ ಎಂದು ಅವರು ಹೇಳಿದರು. ರೈಲ್ವೆ ವಲಯದಲ್ಲಿ, ಹೊಸ ರೈಲು ಮಾರ್ಗಗಳು ಮತ್ತು ರೈಲು ಮೇಲ್ಸೇತುವೆಗಳ ನಿರ್ಮಾಣವು ಹೊಸ ಯುಗಕ್ಕೆ ನಾಂದಿ ಹಾಡಿದೆ, ಇದು ಪ್ರಯಾಣಿಕರ ಅನುಕೂಲತೆಯನ್ನು ಹೆಚ್ಚಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತದೆ ಎಂದು ಅವರು ಹೇಳಿದರು.
2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಗುರಿಗೆ ದೇಶ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು ಮತ್ತು ಈ ಸಂಕಲ್ಪವು ಸುವರ್ಣ ಆಂಧ್ರದ ದೃಷ್ಟಿಕೋನದಿಂದ ಪ್ರೇರಿತವಾಗುತ್ತಿದೆ. ಆಂಧ್ರಪ್ರದೇಶ ಮತ್ತು ಅದರ ಯುವಜನರು ಯಾವಾಗಲೂ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದ್ದಾರೆ ಮತ್ತು ಕೇಂದ್ರ ಮತ್ತು ರಾಜ್ಯದಲ್ಲಿರುವ ತಮ್ಮ ಸರ್ಕಾರಗಳ ಅಡಿಯಲ್ಲಿ, ಈ ಸಾಮರ್ಥ್ಯವನ್ನು ಮತ್ತಷ್ಟು ಬಳಸಿಕೊಳ್ಳಲಾಗುತ್ತಿದೆ ಮತ್ತು ವಿಸ್ತರಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.

"ಇಂದು, ಭಾರತ ಮತ್ತು ಆಂಧ್ರಪ್ರದೇಶದಲ್ಲಿ ಪ್ರಗತಿಯ ವೇಗ ಮತ್ತು ಪ್ರಮಾಣವನ್ನು ಜಗತ್ತು ವೀಕ್ಷಿಸುತ್ತಿದೆ" ಎಂದು ಶ್ರೀ ಮೋದಿ ಹೇಳಿದರು, ಕೇವಲ ಎರಡು ದಿನಗಳ ಹಿಂದೆ, ಗೂಗಲ್ ಆಂಧ್ರಪ್ರದೇಶದಲ್ಲಿ ಪ್ರಮುಖ ಹೂಡಿಕೆಯನ್ನು ಘೋಷಿಸಿತು. ಗೂಗಲ್ ರಾಜ್ಯದಲ್ಲಿ ಭಾರತದ ಮೊದಲ ಕೃತಕ ಬುದ್ಧಿಮತ್ತೆ ಕೇಂದ್ರವನ್ನು ನಿರ್ಮಿಸಲು ಸಜ್ಜಾಗಿದೆ ಎಂದು ಅವರು ಹೇಳಿದರು. ಈ ಹೊಸ ಎಐ ಕೇಂದ್ರವು ಪ್ರಬಲ ಎಐ ಮೂಲಸೌಕರ್ಯ, ಡೇಟಾ ಸೆಂಟರ್ ಸಾಮರ್ಥ್ಯ, ಬೃಹತ್ ಇಂಧನ ಮೂಲಗಳು ಮತ್ತು ಬೃಹತ್ ಫೈಬರ್-ಆಪ್ಟಿಕ್ ನೆಟ್‌ವರ್ಕ್ ಅನ್ನು ಹೊಂದಿರುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.
ಗೂಗಲ್ ನ ಎಐ ಹಬ್ ಹೂಡಿಕೆಯು ಹೊಸ ಅಂತರರಾಷ್ಟ್ರೀಯ ಸಬ್‌ಸೀ ಗೇಟ್‌ವೇ ನಿರ್ಮಾಣವನ್ನು ಒಳಗೊಂಡಿರುತ್ತದೆ ಎಂದು ಘೋಷಿಸಿದ ಪ್ರಧಾನಮಂತ್ರಿ, ಈ ಗೇಟ್‌ವೇ ಭಾರತದ ಪೂರ್ವ ಕರಾವಳಿಯ ವಿಶಾಖಪಟ್ಟಣಂ ತಲುಪುವ ಹಲವಾರು ಅಂತರರಾಷ್ಟ್ರೀಯ ಸಬ್‌ಸೀ ಕೇಬಲ್ ಗಳನ್ನು ಒಳಗೊಂಡಿರುತ್ತದೆ ಎಂದು ಹೇಳಿದರು. ಈ ಯೋಜನೆಯು ವಿಶಾಖಪಟ್ಟಣವನ್ನು ಎಐ ಮತ್ತು ಜಾಗತಿಕ ಸಂಪರ್ಕಕ್ಕೆ ಪ್ರಮುಖ ಕೇಂದ್ರವನ್ನಾಗಿ ಮಾಡುತ್ತದೆ, ಇದು ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಸೇವೆ ಸಲ್ಲಿಸುತ್ತದೆ ಎಂದು ಅವರು ಹೇಳಿದರು. ಈ ಸಾಧನೆಗಾಗಿ ಅವರು ಆಂಧ್ರಪ್ರದೇಶದ ಜನರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದರು.
ಭಾರತದ ಪ್ರಗತಿಗೆ ಆಂಧ್ರಪ್ರದೇಶದ ಅಭಿವೃದ್ಧಿ ಅತ್ಯಗತ್ಯ ಮತ್ತು ಆಂಧ್ರದ ಪ್ರಗತಿಗೆ ರಾಯಲಸೀಮಾದ ಅಭಿವೃದ್ಧಿ ನಿರ್ಣಾಯಕವಾಗಿದೆ ಎಂದು ಶ್ರೀ ಮೋದಿ ಹೇಳಿದರು. ಕರ್ನೂಲ್ ನಲ್ಲಿ ಇಂದು ಉದ್ಘಾಟಿಸಲಾದ ಯೋಜನೆಗಳು ರಾಯಲಸೀಮಾದ ಪ್ರತಿಯೊಂದು ಜಿಲ್ಲೆಯಲ್ಲಿ ಉದ್ಯೋಗ ಮತ್ತು ಸಮೃದ್ಧಿಯ ಹೊಸ ಬಾಗಿಲುಗಳನ್ನು ತೆರೆಯುತ್ತವೆ ಮತ್ತು ಈ ಪ್ರದೇಶದಲ್ಲಿ ಕೈಗಾರಿಕಾ ಅಭಿವೃದ್ಧಿಯನ್ನು ವೇಗಗೊಳಿಸುತ್ತವೆ ಎಂದು ಅವರು ಹೇಳಿದರು.
ಆಂಧ್ರಪ್ರದೇಶದ ಅಭಿವೃದ್ಧಿಯನ್ನು ವೇಗಗೊಳಿಸಲು ಹೊಸ ಕೈಗಾರಿಕಾ ಕಾರಿಡಾರ್ ಗಳು ಮತ್ತು ಕೇಂದ್ರಗಳನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. ಸರ್ಕಾರ ಓರ್ವಕಲ್ ಮತ್ತು ಕೊಪ್ಪರ್ಥಿಯನ್ನು ರಾಜ್ಯದ ಹೊಸ ಕೈಗಾರಿಕಾ ಕೇಂದ್ರಗಳಾಗಿ ಅಭಿವೃದ್ಧಿಪಡಿಸುತ್ತಿದೆ ಎಂದು ಅವರು ಹೇಳಿದರು. ಈ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಹೂಡಿಕೆಯು ನಿರಂತರವಾಗಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರು.

"ಇಂದು, ಜಗತ್ತು ಭಾರತವನ್ನು 21ನೇ ಶತಮಾನದ ಹೊಸ ಉತ್ಪಾದನಾ ಕೇಂದ್ರವಾಗಿ ನೋಡುತ್ತಿದೆ ಮತ್ತು ಆತ್ಮನಿರ್ಭರ ಭಾರತದ ದೃಷ್ಟಿಕೋನವು ಈ ಯಶಸ್ಸಿಗೆ ಅಡಿಪಾಯವಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಆತ್ಮನಿರ್ಭರ ಭಾರತದ ಯಶಸ್ಸಿಗೆ ಆಂಧ್ರಪ್ರದೇಶವು ಪ್ರಮುಖ ಕೊಡುಗೆದಾರನಾಗಿ ಹೊರಹೊಮ್ಮುತ್ತಿದೆ ಎಂದು ಅವರು ಒತ್ತಿ ಹೇಳಿದರು. ಹಿಂದಿನ ಸರ್ಕಾರಗಳು ಆಂಧ್ರಪ್ರದೇಶದ ಸಾಮರ್ಥ್ಯವನ್ನು ನಿರ್ಲಕ್ಷಿಸಿದವು, ಇದು ಇಡೀ ದೇಶಕ್ಕೆ ಹಿನ್ನಡೆಯಾಯಿತು ಎಂದು ಅವರು ಹೇಳಿದರು. ದೇಶದ ಪ್ರಗತಿಗೆ ಚಾಲನೆ ನೀಡಬಹುದಾಗಿದ್ದ ರಾಜ್ಯವು ತನ್ನದೇ ಆದ ಅಭಿವೃದ್ಧಿಗಾಗಿ ಹೋರಾಡಬೇಕಾಯಿತು. ತಮ್ಮ ಸರ್ಕಾರದ ಅಡಿಯಲ್ಲಿ ಆಂಧ್ರಪ್ರದೇಶ ತನ್ನ ದಿಕ್ಕನ್ನು ಬದಲಾಯಿಸುತ್ತಿದೆ ಮತ್ತು ಉತ್ಪಾದನೆ ವೇಗವಾಗಿ ಬೆಳೆಯುತ್ತಿದೆ ಎಂದು ಪ್ರಧಾನಮಂತ್ರಿ ತೃಪ್ತಿ ವ್ಯಕ್ತಪಡಿಸಿದರು. ರಕ್ಷಣಾ ವಲಯದಲ್ಲಿ ಸ್ವಾವಲಂಬನೆಯತ್ತ ಮತ್ತೊಂದು ಹೆಜ್ಜೆಯಾಗಿ ನಿಮ್ಮಲೂರಿನಲ್ಲಿ ಅಡ್ವಾನ್ಸ್ಡ್ ನೈಟ್ ವಿಷನ್ ಕಾರ್ಖಾನೆಯನ್ನು ಪ್ರಾರಂಭಿಸುವುದಾಗಿ ಅವರು ಘೋಷಿಸಿದರು. ಈ ಸೌಲಭ್ಯವು ಭಾರತದ ರಾತ್ರಿ ದೃಷ್ಟಿ ಉಪಕರಣಗಳು, ಕ್ಷಿಪಣಿ ಸಂವೇದಕಗಳು ಮತ್ತು ಡ್ರೋನ್ ಗಾರ್ಡ್ ವ್ಯವಸ್ಥೆಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ದೇಶದ ರಕ್ಷಣಾ ರಫ್ತುಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಅವರು ಹೇಳಿದರು. ಆಪರೇಷನ್ ಸಿಂಧೂರ್ ಸಮಯದಲ್ಲಿ ದೇಶೀಯ ಶಸ್ತ್ರಾಸ್ತ್ರ ವ್ಯವಸ್ಥೆಗಳ ಯಶಸ್ಸನ್ನು ಇಡೀ ಜಗತ್ತು ಕಂಡಿದೆ ಎಂದು ಅವರು ಹೇಳಿದರು.
ಆಂಧ್ರಪ್ರದೇಶ ಸರ್ಕಾರ ಕರ್ನೂಲ್ ಅನ್ನು ಭಾರತದ ಡ್ರೋನ್ ಕೇಂದ್ರವನ್ನಾಗಿ ಮಾಡುವ ನಿರ್ಧಾರಕ್ಕೆ ಸಂತೋಷ ವ್ಯಕ್ತಪಡಿಸಿದ ಪ್ರಧಾನಮಂತ್ರಿ, ಡ್ರೋನ್ ಉದ್ಯಮದ ಮೂಲಕ ಕರ್ನೂಲ್ ಮತ್ತು ಆಂಧ್ರಪ್ರದೇಶದಾದ್ಯಂತ ಭವಿಷ್ಯದ ತಂತ್ರಜ್ಞಾನಕ್ಕೆ ಸಂಬಂಧಿಸಿದ ಅನೇಕ ಹೊಸ ವಲಯಗಳು ಹೊರಹೊಮ್ಮಲಿವೆ ಎಂದು ಹೇಳಿದರು. ಆಪರೇಷನ್ ಸಿಂಧೂರ್ ನಲ್ಲಿ ಡ್ರೋನ್ ಗಳ ಯಶಸ್ಸನ್ನು ಅವರು ಉಲ್ಲೇಖಿಸಿದರು ಮತ್ತು ಮುಂಬರುವ ವರ್ಷಗಳಲ್ಲಿ ಡ್ರೋನ್ ವಲಯದಲ್ಲಿ ಕರ್ನೂಲ್ ರಾಷ್ಟ್ರೀಯ ಶಕ್ತಿಯಾಗಲಿದೆ ಎಂದು ಹೇಳಿದರು. ನಾಗರಿಕ ಕೇಂದ್ರಿತ ಅಭಿವೃದ್ಧಿಯ ಸರ್ಕಾರದ ದೃಷ್ಟಿಕೋನವನ್ನು ಶ್ರೀ ಮೋದಿ ಪುನರುಚ್ಚರಿಸಿದರು ಮತ್ತು ನಾಗರಿಕರ ಜೀವನವನ್ನು ಸುಲಭಗೊಳಿಸುವ ಗುರಿಯನ್ನು ಹೊಂದಿರುವ ಸುಧಾರಣೆಗಳನ್ನು ಒತ್ತಿ ಹೇಳಿದರು. ₹12 ಲಕ್ಷದವರೆಗಿನ ಆದಾಯವು ಈಗ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿದೆ ಮತ್ತು ಕೈಗೆಟುಕುವ ಔಷಧಿಗಳು, ಕಡಿಮೆ ವೆಚ್ಚದ ಆರೋಗ್ಯ ರಕ್ಷಣೆ ಮತ್ತು ಹಿರಿಯ ನಾಗರಿಕರಿಗೆ ಆಯುಷ್ಮಾನ್ ಕಾರ್ಡ್ ನಂತಹ ಉಪಕ್ರಮಗಳು ಜೀವನವನ್ನು ಸುಲಭಗೊಳಿಸುವಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಿವೆ ಎಂದು ಅವರು ಹೇಳಿದರು.
ನವರಾತ್ರಿಯ ಮೊದಲ ದಿನದಿಂದಲೇ ಪ್ರಮುಖ ಜಿ ಎಸ್ ಟಿ ಕಡಿತಗಳನ್ನು ಜಾರಿಗೆ ತರಲಾಗಿದೆ ಎಂದು ಪ್ರಧಾನಮಂತ್ರಿ ಘೋಷಿಸಿದರು. ನಾರಾ ಲೋಕೇಶ್ ಅವರ ನೇತೃತ್ವದ ಜಿ ಎಸ್ ಟಿ ಉಳಿತಾಯ ಉತ್ಸವದ ಆಚರಣೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದರು ಮತ್ತು "ಸೂಪರ್ ಜಿ ಎಸ್ ಟಿ - ಸೂಪರ್ ಉಳಿತಾಯ" ಅಭಿಯಾನದ ಯಶಸ್ವಿ ಅನುಷ್ಠಾನವನ್ನು ಶ್ಲಾಘಿಸಿದರು. ಮುಂದಿನ ಪೀಳಿಗೆಯ ಜಿ ಎಸ್ ಟಿ ಸುಧಾರಣೆಗಳು ಆಂಧ್ರಪ್ರದೇಶದ ಜನರಿಗೆ ₹8,000 ಕೋಟಿಗೂ ಹೆಚ್ಚು ಉಳಿತಾಯ ಮಾಡುವ ನಿರೀಕ್ಷೆಯಿದೆ. ಇದು ಹಬ್ಬದ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು. ಜಿ ಎಸ್ ಟಿ ಉಳಿತಾಯ ಉತ್ಸವವನ್ನು "ವೋಕಲ್ ಫಾರ್ ಲೋಕಲ್" ಎಂಬ ಪ್ರತಿಜ್ಞೆಗೆ ಅನುಗುಣವಾಗಿ ಆಚರಿಸಬೇಕೆಂದು ಪ್ರಧಾನಮಂತ್ರಿ ಒತ್ತಾಯಿಸಿದರು. ಅಭಿವೃದ್ಧಿ ಹೊಂದಿದ ಭಾರತದ ಕನಸು ಅಭಿವೃದ್ಧಿ ಹೊಂದಿದ ಆಂಧ್ರಪ್ರದೇಶದ ಮೂಲಕ ಮಾತ್ರ ನನಸಾಗುತ್ತದೆ ಎಂದು ಹೇಳುವ ಮೂಲಕ ಅವರು ತಮ್ಮ ಮಾತು ಮುಕ್ತಾಯಗೊಳಿಸಿದರು ಮತ್ತು ಹೊಸ ಯೋಜನೆಗಳಿಗಾಗಿ ರಾಜ್ಯದ ಜನರನ್ನು ಮತ್ತೊಮ್ಮೆ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ರಾಜ್ಯಪಾಲರಾದ ಶ್ರೀ ಸೈಯದ್ ಅಬ್ದುಲ್ ನಜೀರ್, ಆಂಧ್ರಪ್ರದೇಶದ ಮುಖ್ಯಮಂತ್ರಿ ಶ್ರೀ ಎನ್. ಚಂದ್ರಬಾಬು ನಾಯ್ಡು, ಕೇಂದ್ರ ಸಂಪುಟ ಸಚಿವರುಗಳಾದ ಶ್ರೀ ರಾಮಮೋಹನ್ ನಾಯ್ಡು ಕಿಂಜರಾಪು, ಡಾ. ಚಂದ್ರಶೇಖರ್ ಪೆಮ್ಮಸಾನಿ, ಶ್ರೀ ಭೂಪತಿ ರಾಜು ಶ್ರೀನಿವಾಸ ವರ್ಮ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಹಿನ್ನೆಲೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸುಮಾರು 13,430 ಕೋಟಿ ರೂ. ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಲೋಕಾರ್ಪಣೆ ನೆರವೇರಿಸಿದರು. ಈ ಯೋಜನೆಗಳು ಕೈಗಾರಿಕೆ, ವಿದ್ಯುತ್ ಪ್ರಸರಣ, ರಸ್ತೆಗಳು, ರೈಲ್ವೆ, ರಕ್ಷಣಾ ಉತ್ಪಾದನೆ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸೇರಿದಂತೆ ಪ್ರಮುಖ ಕ್ಷೇತ್ರಗಳಾದ್ಯಂತ ವ್ಯಾಪಿಸಿವೆ, ಇದು ಪ್ರಾದೇಶಿಕ ಮೂಲಸೌಕರ್ಯವನ್ನು ಹೆಚ್ಚಿಸುವ, ಕೈಗಾರಿಕೀಕರಣವನ್ನು ವೇಗಗೊಳಿಸುವ ಮತ್ತು ರಾಜ್ಯದಲ್ಲಿ ಸಮಗ್ರ ಸಾಮಾಜಿಕ-ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಕರ್ನೂಲ್-III ಪೂಲಿಂಗ್ ಸ್ಟೇಷನ್ ನಲ್ಲಿ ₹2,880 ಕೋಟಿಗೂ ಹೆಚ್ಚು ಹೂಡಿಕೆಯೊಂದಿಗೆ ಪ್ರಸರಣ ವ್ಯವಸ್ಥೆಯನ್ನು ಬಲಪಡಿಸುವ ಯೋಜನೆಗೆ ಪ್ರಧಾನಮಂತ್ರಿಯವರು ಅಡಿಪಾಯ ಹಾಕಿದರು. ಈ ಯೋಜನೆಯು 765 ಕೆವಿ ಡಬಲ್-ಸರ್ಕ್ಯೂಟ್ ಕರ್ನೂಲ್-III ಪೂಲಿಂಗ್ ಸ್ಟೇಷನ್-ಚಿಲಕಲುರಿಪೇಟೆ ಪ್ರಸರಣ ಮಾರ್ಗದ ನಿರ್ಮಾಣವನ್ನು ಒಳಗೊಂಡಿದೆ, ಇದು ರೂಪಾಂತರ ಸಾಮರ್ಥ್ಯವನ್ನು 6,000 ಎಂವಿಎಯಷ್ಟು ಹೆಚ್ಚಿಸುತ್ತದೆ ಮತ್ತು ದೇಶದ ಬೆಳವಣಿಗೆಯನ್ನು ಬೆಂಬಲಿಸಲು ನವೀಕರಿಸಬಹುದಾದ ಇಂಧನದ ದೊಡ್ಡ ಪ್ರಮಾಣದ ಪ್ರಸರಣವನ್ನು ಸಕ್ರಿಯಗೊಳಿಸುತ್ತದೆ.

ಪ್ರಧಾನಮಂತ್ರಿಯವರು ಕರ್ನೂಲಿನ ಓರ್ವಕಲ್ ಕೈಗಾರಿಕಾ ಪ್ರದೇಶ ಮತ್ತು ಕಡಪದ ಕೊಪ್ಪರ್ತಿ ಕೈಗಾರಿಕಾ ಪ್ರದೇಶಕ್ಕೆ ಶಂಕುಸ್ಥಾಪನೆ ನೆರವೇರಿಸಿದರು, ಇದು ಒಟ್ಟು ₹4,920 ಕೋಟಿಗೂ ಹೆಚ್ಚು ಹೂಡಿಕೆಯನ್ನು ಆಕರ್ಷಿಸಲಿದೆ. ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಮತ್ತು ಅನುಷ್ಠಾನ ಟ್ರಸ್ಟ್ (ಎನ್ ಐ ಸಿ ಡಿ ಐ ಟಿ) ಮತ್ತು ಆಂಧ್ರಪ್ರದೇಶ ಕೈಗಾರಿಕಾ ಮೂಲಸೌಕರ್ಯ ನಿಗಮ ಲಿಮಿಟೆಡ್ (ಎಪಿಐಐಸಿ) ಜಂಟಿಯಾಗಿ ಅಭಿವೃದ್ಧಿಪಡಿಸುವ ಈ ಆಧುನಿಕ, ಬಹು-ವಲಯ ಕೈಗಾರಿಕಾ ಕೇಂದ್ರಗಳು ಪ್ಲಗ್-ಅಂಡ್-ಪ್ಲೇ ಮೂಲಸೌಕರ್ಯ ಮತ್ತು ವಾಕ್-ಟು-ವರ್ಕ್ ಪರಿಕಲ್ಪನೆಯನ್ನು ಹೊಂದಿವೆ. ಅವು ₹21,000 ಕೋಟಿ ಮೌಲ್ಯದ ಹೂಡಿಕೆಗಳನ್ನು ಆಕರ್ಷಿಸುವ ಮತ್ತು ಸುಮಾರು 100,000 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ, ಆಂಧ್ರಪ್ರದೇಶದ ರಾಯಲಸೀಮಾ ಪ್ರದೇಶದಲ್ಲಿ ಕೈಗಾರಿಕಾ ಅಭಿವೃದ್ಧಿ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ.
ರಸ್ತೆ ಮೂಲಸೌಕರ್ಯವನ್ನು ಸುಧಾರಿಸಲು, ಪ್ರಧಾನಮಂತ್ರಿಯವರು ಸಬ್ಬಾವರಂ ನಿಂದ ಶೀಲಾನಗರದವರೆಗಿನ ಆರು ಪಥಗಳ ಗ್ರೀನ್‌ಫೀಲ್ಡ್ ಹೆದ್ದಾರಿಗೆ ಶಂಕುಸ್ಥಾಪನೆ ನೆರವೇರಿಸಿದರು, ಇದರ ವೆಚ್ಚ ₹960 ಕೋಟಿಗೂ ಹೆಚ್ಚು. ಇದು ವಿಶಾಖಪಟ್ಟಣಂನ ಜನದಟ್ಟಣೆಯನ್ನು ಕಡಿಮೆ ಮಾಡುವುದು ಮತ್ತು ವ್ಯಾಪಾರ ಮತ್ತು ಉದ್ಯೋಗವನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ. ಹೆಚ್ಚುವರಿಯಾಗಿ, ಸುಮಾರು ₹1,140 ಕೋಟಿ ಮೌಲ್ಯದ ಆರು ರಸ್ತೆ ಯೋಜನೆಗಳನ್ನು ಉದ್ಘಾಟಿಸಿದರು, ಇದರಲ್ಲಿ ಪಿಲೇರು-ಕಲೂರು ವಿಭಾಗದ ನಾಲ್ಕು ಪಥದ ರಸ್ತೆ ನಿರ್ಮಾಣ, ಕಡಪ/ನೆಲ್ಲೂರು ಗಡಿಯಿಂದ ಸಿಎಸ್ ಪುರಂವರೆಗಿನ ರಸ್ತೆ ವಿಸ್ತರಣೆ, ರಾ.ಹೆ.-165 ರಲ್ಲಿ ಗುಡಿವಾಡ ಮತ್ತು ನುಜೆಲ್ಲಾ ರೈಲು ನಿಲ್ದಾಣಗಳ ನಡುವಿನ ನಾಲ್ಕು ಪಥದ ರೈಲು ಮೇಲ್ಸೇತುವೆ, ರಾ.ಹೆ.-716 ರಲ್ಲಿ ಪಾಪಾಗ್ನಿ ನದಿಯ ಮೇಲಿನ ಪ್ರಮುಖ ಸೇತುವೆ, ರಾ.ಹೆ.-565 ರಲ್ಲಿ ಕನಿಗಿರಿ ಬೈಪಾಸ್ ಮತ್ತು ರಾ.ಹೆ.-544ಡಿಡಿ ಯಲ್ಲಿ ಎನ್. ಗುಂಡ್ಲಪಲ್ಲಿ ಪಟ್ಟಣದ ಬೈಪಾಸ್ ಸುಧಾರಣೆ ಸೇರಿವೆ. ಈ ಯೋಜನೆಗಳು ಸುರಕ್ಷತೆಯನ್ನು ಹೆಚ್ಚಿಸುತ್ತವೆ, ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತವೆ ಮತ್ತು ಆಂಧ್ರಪ್ರದೇಶದಾದ್ಯಂತ ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸುತ್ತವೆ.

ಪ್ರಧಾನಮಂತ್ರಿಯವರು ₹1,200 ಕೋಟಿಗೂ ಹೆಚ್ಚು ಮೌಲ್ಯದ ಹಲವಾರು ಪ್ರಮುಖ ರೈಲು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು, ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಯೋಜನೆಗಳಲ್ಲಿ ಕೊಟ್ಟವಲಸ-ವಿಜಯನಗರಂ ನಾಲ್ಕನೇ ರೈಲ್ವೆ ಮಾರ್ಗದ ಶಿಲಾನ್ಯಾಸ ಮತ್ತು ಪೆಂಡುರ್ತಿ ಮತ್ತು ಸಿಂಹಾಚಲಂ ಉತ್ತರ ನಡುವಿನ ರೈಲು ಮೇಲ್ಸೇತುವೆ, ಕೊಟ್ಟವಲಸ-ಬೊಡ್ಡಾವರ ವಿಭಾಗ ಮತ್ತು ಸಿಮ್ಲಿಗುಡ-ಗೋರ್ಪುರ್ ವಿಭಾಗದ ಜೋಡಿ ಮಾರ್ಗ ಸೇರಿವೆ. ಈ ಯೋಜನೆಗಳು ದಟ್ಟಣೆಯನ್ನು ಕಡಿಮೆ ಮಾಡುತ್ತವೆ, ವೇಗದ ಮತ್ತು ಸುರಕ್ಷಿತ ಪ್ರಯಾಣವನ್ನು ಖಚಿತಪಡಿಸುತ್ತವೆ, ಪ್ರಯಾಣಿಕರು ಮತ್ತು ಸರಕುಗಳ ಸುಲಭ ಚಲನೆಯನ್ನು ಸುಗಮಗೊಳಿಸುತ್ತವೆ ಮತ್ತು ಈ ಪ್ರದೇಶದಲ್ಲಿ ಕೈಗಾರಿಕೆ, ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತವೆ ಮತ್ತು ಸ್ಥಳೀಯ ಸಮುದಾಯಗಳಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ.
ಇಂಧನ ವಲಯದಲ್ಲಿ, ಪ್ರಧಾನಮಂತ್ರಿಯವರು ಗೇಲ್ ಇಂಡಿಯಾ ಲಿಮಿಟೆಡ್ ನ ಶ್ರೀಕಾಕುಳಂ-ಅಂಗುಲ್ ನೈಸರ್ಗಿಕ ಅನಿಲ ಪೈಪ್‌ಲೈನ್ ಅನ್ನು ರಾಷ್ಟ್ರಕ್ಕೆ ಅರ್ಪಿಸಿದರು. ಸುಮಾರು ₹1,730 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಇದು ಆಂಧ್ರಪ್ರದೇಶದಲ್ಲಿ ಸುಮಾರು 124 ಕಿ.ಮೀ ಮತ್ತು ಒಡಿಶಾದಲ್ಲಿ 298 ಕಿ.ಮೀ ವ್ಯಾಪಿಸಿದೆ. ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಇಂಡಿಯನ್ ಆಯಿಲ್ ನ 60 ಟಿಎಂಟಿಪಿಎ (ವಾರ್ಷಿಕ ಸಾವಿರ ಮೆಟ್ರಿಕ್ ಟನ್) ಎಲ್ ಪಿ ಜಿ ಬಾಟ್ಲಿಂಗ್ ಸ್ಥಾವರವನ್ನು ಸಹ ಅವರು ಉದ್ಘಾಟಿಸಿದರು, ಇದನ್ನು ಸುಮಾರು ₹200 ಕೋಟಿ ಹೂಡಿಕೆಯೊಂದಿಗೆ ನಿರ್ಮಿಸಲಾಗಿದೆ. ಈ ಸ್ಥಾವರವು ಆಂಧ್ರಪ್ರದೇಶದ ನಾಲ್ಕು ಜಿಲ್ಲೆಗಳು, ತಮಿಳುನಾಡಿನ ಎರಡು ಜಿಲ್ಲೆಗಳು ಮತ್ತು ಕರ್ನಾಟಕದ ಒಂದು ಜಿಲ್ಲೆಯಲ್ಲಿ 80 ವಿತರಕರ ಮೂಲಕ 7.2 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸಲಿದೆ. ಈ ಪ್ರದೇಶದ ಮನೆಗಳು ಮತ್ತು ವ್ಯವಹಾರಗಳಿಗೆ ವಿಶ್ವಾಸಾರ್ಹ ಎಲ್ ಪಿ ಜಿ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.
ರಕ್ಷಣಾ ಉತ್ಪಾದನೆಯನ್ನು ಬಲಪಡಿಸಲು, ಪ್ರಧಾನಮಂತ್ರಿಯವರು ಕೃಷ್ಣಾ ಜಿಲ್ಲೆಯ ನಿಮ್ಮಲೂರಿನಲ್ಲಿರುವ ಅಡ್ವಾನ್ಸ್ಡ್ ನೈಟ್ ವಿಷನ್ ಉತ್ಪನ್ನಗಳ ಕಾರ್ಖಾನೆಯನ್ನು ಲೋಕಾರ್ಪಣೆ ಮಾಡಿದರು. ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸುಮಾರು ₹360 ಕೋಟಿ ಹೂಡಿಕೆಯೊಂದಿಗೆ ನಿರ್ಮಿಸಿರುವ ಈ ಕಾರ್ಖಾನೆಯು ಭಾರತೀಯ ರಕ್ಷಣಾ ಪಡೆಗಳಿಗೆ ಸುಧಾರಿತ ಎಲೆಕ್ಟ್ರೋ-ಆಪ್ಟಿಕಲ್ ವ್ಯವಸ್ಥೆಗಳನ್ನು ತಯಾರಿಸುತ್ತದೆ, ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಹೆಚ್ಚಿಸುತ್ತದೆ ಮತ್ತು ಈ ವಲಯದಲ್ಲಿ ಕೌಶಲ್ಯಪೂರ್ಣ ಉದ್ಯೋಗವನ್ನು ಉತ್ತೇಜಿಸುತ್ತದೆ.
ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
I feel blessed to be born in Gujarat, the land of Somnath, to serve in Kashi, the land of Baba Vishwanath and to receive the blessings of Srisailam today: PM @narendramodi pic.twitter.com/cM6j5B1Y0X
— PMO India (@PMOIndia) October 16, 2025
I had the opportunity to pay tribute at the Sree Shivaji Spoorthi Kendra. I bow to Chhatrapati Shivaji Maharaj: PM @narendramodi pic.twitter.com/Ka3JFgGITM
— PMO India (@PMOIndia) October 16, 2025
Andhra Pradesh is the land of 'Swabhimaan' and 'Sanskriti'. It is also a hub of science and innovation. pic.twitter.com/n2T3Uaxrn8
— PMO India (@PMOIndia) October 16, 2025
Today, from clean energy to total energy production, India is setting new records in every field. pic.twitter.com/KJoLC0Hx4P
— PMO India (@PMOIndia) October 16, 2025
Today, multi-modal infrastructure is developing rapidly across the country. We are focusing strongly on connectivity, from villages to cities and from cities to ports. pic.twitter.com/Uj3LE7k6wE
— PMO India (@PMOIndia) October 16, 2025
Today, the world is witnessing the speed and scale of both India and Andhra Pradesh. Google is set to establish India's first Artificial Intelligence Hub in Andhra Pradesh. pic.twitter.com/SfBNzsWMiE
— PMO India (@PMOIndia) October 16, 2025
Today, the world sees India as the new manufacturing centre of the 21st century. pic.twitter.com/cpuD4x9yYj
— PMO India (@PMOIndia) October 16, 2025
Our government's vision is citizen-centric development. Through continuous reforms, we are making people's lives easier. pic.twitter.com/OQe2MDHQLA
— PMO India (@PMOIndia) October 16, 2025


