ಸೂರತ್ ಆಹಾರ ಭದ್ರತೆ ಸ್ಯಾಚುರೇಶನ್ ಅಭಿಯಾನ ಕಾರ್ಯಕ್ರಮವು ಆಹಾರ ಮತ್ತು ಪೌಷ್ಠಿಕಾಂಶದ ಭದ್ರತೆಗಾಗಿ ಭಾರತದ ಧ್ಯೇಯದಲ್ಲಿ ಗಮನಾರ್ಹ ಹೆಜ್ಜೆಯಾಗಿದೆ: ಪ್ರಧಾನಮಂತ್ರಿ
ಸೂರತ್ ನಲ್ಲಿ ಪ್ರಾರಂಭಿಸಲಾದ ಆಹಾರ ಭದ್ರತಾ ಸ್ಯಾಚುರೇಶನ್ ಅಭಿಯಾನವು ದೇಶದ ಇತರ ಜಿಲ್ಲೆಗಳಿಗೂ ಸ್ಫೂರ್ತಿಯಾಗಲಿದೆ: ಪ್ರಧಾನಮಂತ್ರಿ
ನಮ್ಮ ಸರ್ಕಾರ ಸದಾ ಬಡವರೊಂದಿಗೆ ಅವರ ಸಹಭಾಗಿಯಾಗಿ ನಿಲ್ಲುತ್ತದೆ: ಪ್ರಧಾನಮಂತ್ರಿ
ವಿಕಸಿತ ಭಾರತದ ಪ್ರಯಾಣದಲ್ಲಿ ಪೌಷ್ಟಿಕ ಆಹಾರವು ದೊಡ್ಡ ಪಾತ್ರ ವಹಿಸುತ್ತದೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸೂರತ್ ನ ಲಿಂಬಾಯತ್ ನಲ್ಲಿ ಸೂರತ್ ಆಹಾರ ಭದ್ರತೆ ಸ್ಯಾಚುರೇಶನ್ (ಸಂತೃಪ್ತ) ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಧಾನಮಂತ್ರಿಯವರು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 2.3 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಪ್ರಯೋಜನಗಳನ್ನು ವಿತರಿಸಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಸೂರತ್ ನಗರದ ವಿಶಿಷ್ಟ ಮನೋಭಾವವನ್ನು ಒತ್ತಿ ಹೇಳಿದರು, ಕೆಲಸ ಮತ್ತು ದಾನದ ಬಲವಾದ ಅಡಿಪಾಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಸಾಮೂಹಿಕ ಬೆಂಬಲ ಮತ್ತು ಎಲ್ಲರ ಬೆಳವಣಿಗೆಯನ್ನು ಸಂಭ್ರಮಿಸುವ ಮೂಲಕ ನಗರದ ಸಾರವನ್ನು ಹೇಗೆ ಮರೆಯಲು ಸಾಧ್ಯವಾಗುವುದಿಲ್ಲ ಎಂಬುದನ್ನು  ಅವರು ವ್ಯಕ್ತಪಡಿಸಿದರು.

ಸೂರತ್ ಪರಸ್ಪರ ಬೆಂಬಲ ಮತ್ತು ಪ್ರಗತಿಯ ಸಂಸ್ಕೃತಿಗೆ ಹೆಸರುವಾಸಿಯಾಗಿದೆ, ಅಲ್ಲಿ ಜನರು ಎಲ್ಲರ ಪ್ರಯೋಜನಕ್ಕಾಗಿ ಒಟ್ಟಾಗಿ ಕೆಲಸ ಮಾಡುತ್ತಾರೆ ಎಂದು ಶ್ರೀ ಮೋದಿ ಹೇಳಿದರು. ಈ ಮನೋಭಾವವು ಸೂರತ್ ನ ಪ್ರತಿಯೊಂದು ಮೂಲೆಯಲ್ಲೂ ಗೋಚರಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು. ಇಂದಿನ ಕಾರ್ಯಕ್ರಮವು ಈ ಮನೋಭಾವವನ್ನು ಮತ್ತಷ್ಟು ಉತ್ತೇಜಿಸುವ ಮತ್ತು ಬಲಪಡಿಸುವ ಗುರಿಯನ್ನು ಹೊಂದಿದೆ, ನಗರದಲ್ಲಿ ಎಲ್ಲರಲ್ಲೂ  ಏಕತೆಯನ್ನು ಮತ್ತು ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂಬುದರತ್ತ ಪ್ರಧಾನಿ ಗಮನಸೆಳೆದರು. "ಸೂರತ್ ಗುಜರಾತ್ ಮತ್ತು ಭಾರತದ ಪ್ರಮುಖ ನಗರವಾಗಿದೆ, ಮತ್ತು ಈಗ ಬಡವರು ಮತ್ತು ಸಮಾಜದ ಅಂಚಿನಲ್ಲಿರುವ ದುರ್ಬಲರಿಗೆ ಆಹಾರ ಮತ್ತು ಪೌಷ್ಠಿಕಾಂಶದ ಭದ್ರತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ. ನಗರದ ಆಹಾರ ಭದ್ರತೆ ಸ್ಯಾಚುರೇಶನ್ ಅಭಿಯಾನವು ದೇಶಾದ್ಯಂತದ ಇತರ ಜಿಲ್ಲೆಗಳಿಗೆ ಸ್ಫೂರ್ತಿಯಾಗಲಿದೆ" ಎಂದು ಶ್ರೀ ಮೋದಿ ಹೇಳಿದರು.

 

ಈ ಅಭಿಯಾನವು ಯಾರನ್ನೂ ಹೊರಗಿಡಲು ಅವಕಾಶ ನೀಡುವುದಿಲ್ಲ, ಯಾರಿಗೂ ಮೋಸವಾಗುವುದಿಲ್ಲ ಮತ್ತು ಯಾವುದೇ ತಾರತಮ್ಯವಿಲ್ಲ ಎಂಬುದನ್ನು  ಖಚಿತಪಡಿಸುತ್ತದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಇದು ತುಷ್ಟೀಕರಣವನ್ನು ಮೀರಿ ಮುಂಚಲಿಸುತ್ತದೆ ಮತ್ತು ಎಲ್ಲರಿಗೂ ತೃಪ್ತಿಯ ಉದಾತ್ತ ಮನೋಭಾವದ ಮೇಲೆ ಗಮನ ಕೇಂದ್ರೀಕರಿಸುತ್ತದೆ. "ಸರ್ಕಾರವು ಫಲಾನುಭವಿಯ ಮನೆ ಬಾಗಿಲಿಗೆ ತಲುಪಿದಾಗ, ಯಾರೊಬ್ಬರೂ ಅದರಿಂದ ಹೊರಗುಳಿಯುವುದಿಲ್ಲ. ಎಲ್ಲರಿಗೂ ಪ್ರಯೋಜನವಾಗಬೇಕೆಂಬ ಬದ್ಧತೆಯೊಂದಿಗೆ, ವ್ಯವಸ್ಥೆಯನ್ನು ದುರ್ಬಳಕೆ ಮಾಡಲು ಪ್ರಯತ್ನಿಸುವವರನ್ನು ದೂರವಿಡಲಾಗಿದೆ", ಎಂದೂ ಶ್ರೀ ಮೋದಿ ಹೇಳಿದರು.

ಆಹಾರ ಭದ್ರತೆಯ ಸ್ಯಾಚುರೇಶನ್ ವಿಧಾನದ ಅಡಿಯಲ್ಲಿ, ಸೂರತ್ ಆಡಳಿತವು 2.5 ಲಕ್ಷಕ್ಕೂ ಹೆಚ್ಚು ಹೊಸ ಫಲಾನುಭವಿಗಳನ್ನು ಗುರುತಿಸಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಅವರಲ್ಲಿ ಅನೇಕ ವೃದ್ಧ ಮಹಿಳೆಯರು, ವೃದ್ಧ ಪುರುಷರು, ವಿಧವೆಯರು ಮತ್ತು ವಿಕಲಚೇತನರು ಇದ್ದಾರೆ. ಈ ಹೊಸ ಕುಟುಂಬ ಸದಸ್ಯರು ಈಗ ಉಚಿತ ಪಡಿತರ ಮತ್ತು ಪೌಷ್ಟಿಕ ಆಹಾರವನ್ನು ಪಡೆಯುತ್ತಾರೆ ಎಂದರು. ಈ ಮಹತ್ವದ ಉಪಕ್ರಮದಲ್ಲಿ ಸೇರ್ಪಡೆಗೊಂಡ ಎಲ್ಲ ಹೊಸ ಫಲಾನುಭವಿಗಳನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದರು.

ಆಹಾರದ ಬಗ್ಗೆ ಚಿಂತಿತರಾಗಿರುವ ಬಡವರ ನೋವು ತಾನು ಪುಸ್ತಕಗಳಿಂದ ಕಲಿಯಬೇಕಾದ ವಿಷಯವಲ್ಲ, ಆದರೆ ಅದು ಅನುಭವಿಸಬಹುದಾದ ವಿಷಯ ಎಂದು ಪ್ರಧಾನಿ ಒತ್ತಿ ಹೇಳಿದರು. "ಅದಕ್ಕಾಗಿಯೇ ಕಳೆದ ವರ್ಷಗಳಲ್ಲಿ, ಅಗತ್ಯವಿರುವವರಿಗೆ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಸರ್ಕಾರವು ಈ ಕಳವಳಗಳನ್ನು  ಪರಿಹರಿಸುವತ್ತ ಗಮನ ಹರಿಸಿದೆ. ಸರ್ಕಾರವು ಬಡವರೊಂದಿಗೆ ನಿಜವಾದ ಪಾಲುದಾರ ಮತ್ತು ಸೇವಕನಾಗಿ ನಿಂತಿದೆ", ಎಂದು ಶ್ರೀ ಮೋದಿ ನುಡಿದರು. ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ಸಮಯದಲ್ಲಿ, ದೇಶಕ್ಕೆ ಹೆಚ್ಚು ಬೆಂಬಲದ ಅಗತ್ಯವಿದ್ದಾಗ, ಬಡವರ ಅಡುಗೆಮನೆಗಳು ಕಾರ್ಯನಿರ್ವಹಿಸುವುದನ್ನು ಮುಂದುವರಿಸುವುದನ್ನು ಖಚಿತಪಡಿಸಿಕೊಳ್ಳಲು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ಪ್ರಾರಂಭಿಸಲಾಯಿತು. ವಿಶ್ವದ ಅತಿದೊಡ್ಡ ಮತ್ತು ವಿಶಿಷ್ಟವಾದ ಈ ಯೋಜನೆ ಇನ್ನೂ ನಡೆಯುತ್ತಿದೆ. ಗುಜರಾತ್ ಸರ್ಕಾರವು ಆದಾಯ ಮಿತಿಯನ್ನು ಹೆಚ್ಚಿಸುವ ಮೂಲಕ ಯೋಜನೆಯನ್ನು ವಿಸ್ತರಿಸಿ ಹೆಚ್ಚಿನ ಫಲಾನುಭವಿಗಳಿಗೆ ಪ್ರಯೋಜನ ಪಡೆಯಲು ಅನುವು ಮಾಡಿಕೊಟ್ಟಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು. ಬಡವರ ಅಡುಗೆಮನೆಗಳಲ್ಲಿ ಬೆಂಕಿ  ಉರಿಯುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ವಾರ್ಷಿಕವಾಗಿ ಸುಮಾರು 2.25 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ ಎಂದರು.

 

ಭಾರತದ ಅಭಿವೃದ್ಧಿಯ ಪಯಣದಲ್ಲಿ ಪೌಷ್ಟಿಕ ಆಹಾರದ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳಿದ ಶ್ರೀ ನರೇಂದ್ರ ಮೋದಿ, ಅಪೌಷ್ಟಿಕತೆ ಮತ್ತು ರಕ್ತಹೀನತೆಯಂತಹ ಸಮಸ್ಯೆಗಳನ್ನು ತೊಡೆದುಹಾಕಲು ದೇಶದ ಪ್ರತಿಯೊಂದು ಕುಟುಂಬಕ್ಕೂ ಸಾಕಷ್ಟು ಪೌಷ್ಠಿಕಾಂಶವನ್ನು ಒದಗಿಸುವುದು ಸರ್ಕಾರದ ಗುರಿಯಾಗಿದೆ ಎಂದು ಹೇಳಿದರು. "ಪಿಎಂ ಪೋಷಣ್ ಯೋಜನೆಯಡಿ ಸುಮಾರು 12 ಕೋಟಿ ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಒದಗಿಸಲಾಗುತ್ತಿದೆ. ಸಾಕ್ಷಮ್ ಅಂಗನವಾಡಿ ಕಾರ್ಯಕ್ರಮವು ಚಿಕ್ಕ ಮಕ್ಕಳು, ತಾಯಂದಿರು ಮತ್ತು ಗರ್ಭಿಣಿಯರ ಪೌಷ್ಠಿಕಾಂಶದ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಇದಲ್ಲದೆ, ಪಿಎಂ ಮಾತೃವಂದನಾ ಯೋಜನೆ ಅಡಿಯಲ್ಲಿ, ಗರ್ಭಿಣಿಯರಿಗೆ ಪೌಷ್ಟಿಕ ಆಹಾರಕ್ಕಾಗಿ ಆರ್ಥಿಕ ಬೆಂಬಲವನ್ನೂ ಒದಗಿಸಲಾಗುತ್ತದೆ" ಎಂದು ಶ್ರೀ ಮೋದಿ ಒತ್ತಿ ಹೇಳಿದರು.

ಪೌಷ್ಠಿಕಾಂಶವು ಆಹಾರವನ್ನು ಮೀರಿದ ಸಂಗತಿಯಾಗಿದೆ, ಸ್ವಚ್ಛತೆಯು ಅತ್ಯಗತ್ಯ ಅಂಶವಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಸ್ವಚ್ಛತೆಯನ್ನು ಕಾಪಾಡುವಲ್ಲಿ ಸೂರತ್ ನ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು. "ದೇಶದ ಪ್ರತಿಯೊಂದು ನಗರ ಮತ್ತು ಹಳ್ಳಿಗಳು ಕೊಳಕನ್ನು ತೊಡೆದುಹಾಕುವ ನಿಟ್ಟಿನಲ್ಲಿ ಕೆಲಸ ಮಾಡುತ್ತವೆ ಎಂದು ಖಚಿತಪಡಿಸಿಕೊಳ್ಳುವುದರತ್ತ ಸರ್ಕಾರ  ನಿರಂತರ ಪ್ರಯತ್ನಗಳನ್ನು ಕೈಗೊಂಡಿದೆ. ಸ್ವಚ್ಛ ಭಾರತ ಅಭಿಯಾನವು ಗ್ರಾಮೀಣ ಪ್ರದೇಶಗಳಲ್ಲಿ ರೋಗಗಳನ್ನು ಕಡಿಮೆ ಮಾಡಲು ಸಹಾಯ ಮಾಡಿದೆ ಎಂದು ಜಾಗತಿಕ ಸಂಸ್ಥೆಗಳು ಒಪ್ಪಿಕೊಂಡಿವೆ" ಎಂದು ಶ್ರೀ ಮೋದಿ ಹೇಳಿದರು. ಶ್ರೀ ಸಿ.ಆರ್. ಪಾಟೀಲ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ "ಹರ್ ಘರ್ ಜಲ್" ಅಭಿಯಾನದ ಮಹತ್ವವನ್ನು ಅವರು ಒತ್ತಿ ಹೇಳಿದರು, ಇದು ಪ್ರತಿ ಮನೆಗೂ ಶುದ್ಧ ನೀರನ್ನು ತಲುಪಿಸುವ ಗುರಿಯನ್ನು ಹೊಂದಿದೆ, ಆ ಮೂಲಕ ಇದು ವಿವಿಧ ರೋಗಗಳ ಇಳಿಕೆಗೆ ಕಾರಣವಾಗಿದೆ ಎಂದವರು ಅಭಿಪ್ರಾಯಪಟ್ಟರು.

ಲಕ್ಷಾಂತರ ಜನರ ಜೀವನವನ್ನು ಸುಲಭಗೊಳಿಸಿರುವ ಸರ್ಕಾರದ ಉಚಿತ ಪಡಿತರ ಯೋಜನೆಯ ಗಮನಾರ್ಹ ಪರಿಣಾಮವನ್ನು ಶ್ರೀ ನರೇಂದ್ರ ಮೋದಿ ಉಲ್ಲೇಖಿಸಿದರು. ಇಂದು, ನಿಜವಾದ ಫಲಾನುಭವಿಗಳು ತಮ್ಮ ಪಡಿತರದ ಪೂರ್ಣ ಪಾಲನ್ನು  ಪಡೆಯುತ್ತಿದ್ದಾರೆ, ಇಂತಹ ಸಾಧ್ಯತೆ  10 ವರ್ಷಗಳ ಹಿಂದೆ ಲಭ್ಯವಿರಲಿಲ್ಲ ಎಂದವರು ಹೇಳಿದರು.  ಸರ್ಕಾರವು 5 ಕೋಟಿಗೂ ಹೆಚ್ಚು ನಕಲಿ ಪಡಿತರ ಚೀಟಿದಾರರನ್ನು ತೆಗೆದುಹಾಕಿದೆ ಮತ್ತು ಇಡೀ ಪಡಿತರ ವಿತರಣಾ ವ್ಯವಸ್ಥೆಯನ್ನು ಆಧಾರ್ ಕಾರ್ಡ್ಗಳಿಗೆ ಜೋಡಣೆ ಮಾಡಿದೆ ಎಂಬುದರತ್ತ ಅವರು ಗಮನಸೆಳೆದರು. ಈ ಹಿಂದೆ ಇತರ ರಾಜ್ಯಗಳಲ್ಲಿ ತಮ್ಮ ಪಡಿತರ ಚೀಟಿಗಳನ್ನು ಬಳಸಲು ಸಾಧ್ಯವಾಗದ ಹಾಗು ಸೂರತ್ ನಲ್ಲಿ ವಲಸೆ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಯನ್ನು ಪ್ರಧಾನಿ ಪ್ರಸ್ತಾಪಿಸಿದರು. "ಒಬ್ಬ ವ್ಯಕ್ತಿಯ ಪಡಿತರ ಚೀಟಿ ಎಲ್ಲಿಂದ ಬಂದರೂ, ಅವರು ದೇಶಾದ್ಯಂತ ಯಾವುದೇ ನಗರದಲ್ಲಿ ಪ್ರಯೋಜನಗಳನ್ನು ಪಡೆಯಬಹುದು ಎಂದು ಖಚಿತಪಡಿಸಿಕೊಳ್ಳಲು "ಒಂದು ರಾಷ್ಟ್ರ, ಒಂದು ಪಡಿತರ ಚೀಟಿ" ಯೋಜನೆಯನ್ನು ಪರಿಚಯಿಸಲಾಯಿತು. ಸೂರತ್ ನ ಅನೇಕ ಕಾರ್ಮಿಕರು ಈಗ ಈ ಯೋಜನೆಯಿಂದ ಪ್ರಯೋಜನ ಪಡೆಯುತ್ತಿದ್ದಾರೆ, ಇದು ನಿಜವಾದ ಉದ್ದೇಶಗಳೊಂದಿಗೆ ನೀತಿಗಳನ್ನು ರೂಪಿಸಿದಾಗ, ಅವು ಬಡವರಿಗೆ ಪ್ರಯೋಜನವನ್ನು ನೀಡುತ್ತವೆ ಎಂಬುದನ್ನು ತೋರಿಸುತ್ತದೆ " ಎಂದೂ  ಶ್ರೀ ಮೋದಿ ಹೇಳಿದರು.

 

ಮಿಷನ್ ಮೋಡ್ ವಿಧಾನದ ಮೂಲಕ ಬಡವರನ್ನು ಸಬಲೀಕರಣಗೊಳಿಸಲು ಕಳೆದ ದಶಕದಲ್ಲಿ ಸರ್ಕಾರ ಕೈಗೊಂಡಿರುವ ಪ್ರಯತ್ನಗಳನ್ನು ಪ್ರಧಾನಿ ವಿವರಿಸಿದರು. ಬಡವರ ಸುತ್ತಲೂ ಸುರಕ್ಷತಾ ಜಾಲವನ್ನು ರಚನೆಯಾಗಿರುವುದನ್ನು ಅವರು ಒತ್ತಿ ಹೇಳಿದರು, ಬಡವರು ಎಂದಿಗೂ ಸಹಾಯಕ್ಕಾಗಿ ಭಿಕ್ಷೆ ಬೇಡಬೇಕಾಗಿಲ್ಲ ಎಂದು ಅವರು ದೃಢವಾಗಿ ಹೇಳಿದರು. ಕಾಂಕ್ರೀಟ್ ಮನೆಗಳು, ಶೌಚಾಲಯಗಳು, ಅನಿಲ ಸಂಪರ್ಕಗಳು ಮತ್ತು ನಲ್ಲಿ ನೀರಿನ ಸಂಪರ್ಕಗಳನ್ನು ಒದಗಿಸುವುದು ಬಡವರಲ್ಲಿ ಹೊಸ ವಿಶ್ವಾಸವನ್ನು ತುಂಬಿದೆ. ಸರ್ಕಾರವು ಬಡ ಕುಟುಂಬಗಳಿಗೆ ವಿಮಾ ಯೋಜನೆಗಳನ್ನು ಪರಿಚಯಿಸಿತು, ಸುಮಾರು 60 ಕೋಟಿ ಭಾರತೀಯರಿಗೆ 5 ಲಕ್ಷ ರೂ.ಗಳವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ಲಭ್ಯವಿದೆ ಎಂದು ಖಚಿತಪಡಿಸಿತು. "ಈ ಹಿಂದೆ ಬಡ ಕುಟುಂಬಗಳಿಗೆ ತಲುಪದ ಜೀವ ಮತ್ತು ಅಪಘಾತ ವಿಮೆ ಈಗ ವಾಸ್ತವವಾಗಿದೆ. ಇಂದು, 36 ಕೋಟಿಗೂ ಹೆಚ್ಚು ಜನರು ಸರ್ಕಾರಿ ವಿಮಾ ಯೋಜನೆಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ. ಬಡ ಕುಟುಂಬಗಳಿಗೆ 16,000 ಕೋಟಿ ರೂ.ಗಿಂತ ಹೆಚ್ಚಿನ ಕ್ಲೇಮ್ ಗಳನ್ನು ಪಾವತಿಸಲಾಗಿದೆ, ಇದು ಕಷ್ಟದ ಸಮಯದಲ್ಲಿ ಅವರಿಗೆ ಸಹಾಯ ಮಾಡುತ್ತದೆ" ಎಂದು ಶ್ರೀ ಮೋದಿ ಒತ್ತಿ ಹೇಳಿದರು.

ಈ ಹಿಂದೆ, ಬಡವರು ತಮ್ಮ ಸ್ವಂತ ವ್ಯವಹಾರಗಳನ್ನು ಪ್ರಾರಂಭಿಸುವಲ್ಲಿ ಅಪಾರ ಸವಾಲುಗಳನ್ನು ಎದುರಿಸುತ್ತಿದ್ದರು, ಬ್ಯಾಂಕುಗಳು ಖಾತರಿಯಿಲ್ಲದೆ ಸಾಲ ನೀಡಲು ನಿರಾಕರಿಸುತ್ತಿದ್ದವು ಎಂಬುದನ್ನು ಶ್ರೀ ನರೇಂದ್ರ ಮೋದಿ ಸ್ಮರಿಸಿದರು. ಮುದ್ರಾ ಯೋಜನೆಯನ್ನು ಪ್ರಾರಂಭಿಸುವ ಮೂಲಕ ಬಡವರಿಗೆ ಸಾಲ ಖಾತರಿ ನೀಡುವ ಜವಾಬ್ದಾರಿಯನ್ನು ತಾನು ವೈಯಕ್ತಿಕವಾಗಿ ಹೇಗೆ ತೆಗೆದುಕೊಂಡೆ ಎಂಬುದನ್ನು ಶ್ರೀ ಮೋದಿ ಎತ್ತಿ ತೋರಿಸಿದರು. "ಮುದ್ರಾ ಯೋಜನೆಯಡಿ, ಸುಮಾರು 32 ಲಕ್ಷ ಕೋಟಿ ರೂ.ಗಳನ್ನು ಯಾವುದೇ ಖಾತರಿಯಿಲ್ಲದೆ ಸಾಲವಾಗಿ ಒದಗಿಸಲಾಗಿದೆ, ಇದು ಬಡವರಿಗೆ ನೇರವಾಗಿ ಪ್ರಯೋಜನಕಾರಿಯಾಗಿದೆ. ಇಷ್ಟು ಮೊತ್ತದ ಪ್ರಮಾಣದ ಬಗ್ಗೆ ಪ್ರತಿಪಕ್ಷಗಳಿಗೆ ತಿಳುವಳಿಕೆ ಇಲ್ಲದಿದ್ದರೂ ಈ ಉಪಕ್ರಮವು ಲಕ್ಷಾಂತರ ಜನರಿಗೆ ಸಹಾಯ ಮಾಡಿದೆ", ಎಂದು ಪ್ರಧಾನಿ ಒತ್ತಿ ಹೇಳಿದರು.

ಈ ಹಿಂದೆ ಯಾವುದೇ ಆರ್ಥಿಕ ಬೆಂಬಲವಿಲ್ಲದ ಬೀದಿ ಬದಿ ವ್ಯಾಪಾರಿಗಳು ಮತ್ತು ಕಾರ್ಮಿಕರ ಹೋರಾಟಗಳನ್ನು ಉಲ್ಲೇಖಿಸಿದ ಶ್ರೀ ನರೇಂದ್ರ ಮೋದಿ, ಈ ವ್ಯಕ್ತಿಗಳು ಆಗಾಗ್ಗೆ ಲೇವಾದೇವಿಗಾರರಿಂದ ಹಣವನ್ನು ಎರವಲು ಪಡೆಯಬೇಕಾಗಿತ್ತು, ಅವರು ಪಡೆದುದಕ್ಕಿಂತ ಹೆಚ್ಚಿನದನ್ನು ಮರುಪಾವತಿಸಬೇಕಾಗುತ್ತಿತ್ತು ಎಂದರು. ಸರ್ಕಾರದ ಪಿಎಂ ಸ್ವನಿಧಿ ಯೋಜನೆ ಈ ಮಾರಾಟಗಾರರಿಗೆ ಬ್ಯಾಂಕ್ ಸಾಲಗಳಿಗೆ ಪ್ರವೇಶವನ್ನು ಒದಗಿಸುವ ಮೂಲಕ ಸಹಾಯ ಮಾಡಿದೆ. ಅಂತಹ ಕಾರ್ಮಿಕರಿಗೆ ವಿಶೇಷ ಕ್ರೆಡಿಟ್ ಕಾರ್ಡ್ ಪರಿಚಯಿಸುವುದಾಗಿ ಈ ವರ್ಷದ ಬಜೆಟ್ ನಲ್ಲಿ ಘೋಷಿಸಲಾಗಿದೆ ಎಂದು ಪ್ರಧಾನ ಮಂತ್ರಿ ಹೇಳಿದರು. "ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಅವರ ಕೌಶಲ್ಯಗಳನ್ನು ಸುಧಾರಿಸಲು ಮತ್ತು ವಿಸ್ತರಿಸಲು ತರಬೇತಿ, ಆಧುನಿಕ ಉಪಕರಣಗಳು ಮತ್ತು ಆರ್ಥಿಕ ಸಹಾಯವನ್ನು ಒದಗಿಸುವ ಮೂಲಕ ಅವರನ್ನು ಬೆಂಬಲಿಸುವ ಪಿಎಂ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಪ್ರಯತ್ನಗಳು ಅಂತರ್ಗತ ಬೆಳವಣಿಗೆಯ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತವೆ, ಕಳೆದ ದಶಕದಲ್ಲಿ 25 ಕೋಟಿಗೂ ಹೆಚ್ಚು ಜನರು ಬಡತನದಿಂದ ಹೊರಬಂದಿದ್ದಾರೆ" ಎಂದು ಶ್ರೀ ಮೋದಿ ಹೇಳಿದರು.

 

ದೇಶದ ಅಭಿವೃದ್ಧಿಗೆ ಮಧ್ಯಮವರ್ಗದ ಕೊಡುಗೆಯನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿ ಅವರು , ವಿಶೇಷವಾಗಿ ಹೆಚ್ಚಿನ ಸಂಖ್ಯೆಯ ಮಧ್ಯಮ ವರ್ಗದ ಕುಟುಂಬಗಳು ವಾಸಿಸುವ ಸೂರತ್ ನಲ್ಲಿ ಮಧ್ಯಮ ವರ್ಗದ ಗಮನಾರ್ಹ ಕೊಡುಗೆಯನ್ನೂ ಪ್ರಸ್ತಾಪಿಸಿದರು. ಈ ವರ್ಷದ ಬಜೆಟ್ ನಲ್ಲಿ ಒದಗಿಸಲಾದ ಪರಿಹಾರ ಸೇರಿದಂತೆ ಮಧ್ಯಮ ವರ್ಗದವರನ್ನು ಸಬಲೀಕರಣಗೊಳಿಸಲು ಕಳೆದ ದಶಕದಲ್ಲಿ ಸರ್ಕಾರ ಕೈಗೊಂಡ ಪ್ರಯತ್ನಗಳನ್ನು ಅವರು ವಿವರಿಸಿದರು. "ನೀಡಲಾದ ತೆರಿಗೆ ವಿನಾಯಿತಿ, ವಿಶೇಷವಾಗಿ 12 ಲಕ್ಷ ರೂ.ವರೆಗಿನ ಆದಾಯದ ಮೇಲೆ ಶೂನ್ಯ ತೆರಿಗೆ, ಅನೇಕರು ಎಂದಿಗೂ ನಿರೀಕ್ಷಿಸದ ಹೆಜ್ಜೆಯಾಗಿದೆ. ಹೆಚ್ಚುವರಿಯಾಗಿ, ಉದ್ಯೋಗಿಗಳಿಗೆ ಈಗ 12.87 ಲಕ್ಷ ರೂ.ವರೆಗಿನ ಆದಾಯದ ಮೇಲೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಎಲ್ಲಾ ತೆರಿಗೆದಾರರಿಗೆ ಅನುಕೂಲವಾಗುವಂತೆ ಹೊಸ ತೆರಿಗೆ ಸ್ಲ್ಯಾಬ್ ಗಳನ್ನು ಸಹ ಪರಿಚಯಿಸಲಾಗಿದೆ. ಇದು ಸೂರತ್, ಗುಜರಾತ್ ಮತ್ತು ದೇಶಾದ್ಯಂತದ ಮಧ್ಯಮ ವರ್ಗದ ಕುಟುಂಬಗಳು ತಮ್ಮ ಗಳಿಕೆಯ ಹೆಚ್ಚಿನ ಭಾಗವನ್ನು ಉಳಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ, ಇದನ್ನು ಅವರು ತಮ್ಮ ಅಗತ್ಯಗಳಿಗಾಗಿ ಮತ್ತು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಹೂಡಿಕೆ ಮಾಡಬಹುದು ", ಎಂದು ಪ್ರಧಾನಿ ಒತ್ತಿ ಹೇಳಿದರು.

ಲಕ್ಷಾಂತರ ಜನರಿಗೆ ಉದ್ಯೋಗವನ್ನು ಒದಗಿಸುವ ಗಮನಾರ್ಹ ಸಂಖ್ಯೆಯ ಸಣ್ಣ ಮತ್ತು ಮಧ್ಯಮ ಉದ್ಯಮಗಳೊಂದಿಗೆ (ಎಂಎಸ್ಎಂಇ) ಸೂರತ್ ಉದ್ಯಮಶೀಲತೆಯ ಕೇಂದ್ರವಾಗಿದೆ ಎಂದು ಪ್ರಧಾನಿ ಹೇಳಿದರು. ಎಂಎಸ್ಎಂಇಗಳಿಗೆ ಗಣನೀಯ ಬೆಂಬಲವನ್ನು ನೀಡುವ ಮೂಲಕ ಸ್ಥಳೀಯ ಪೂರೈಕೆ ಸರಪಳಿಯನ್ನು ಬಲಪಡಿಸುವ ಸರ್ಕಾರದ ಪ್ರಯತ್ನಗಳನ್ನು ಅವರು ಎತ್ತಿ ತೋರಿಸಿದರು. "ಬಜೆಟಿನಲ್ಲಿ ಎಸ್ಸಿ / ಎಸ್ಟಿ, ದಲಿತ, ಬುಡಕಟ್ಟು ಮತ್ತು ಮಹಿಳಾ ಉದ್ಯಮಿಗಳಿಗೆ 2 ಕೋಟಿ ರೂ.ಗಳವರೆಗೆ ಸಾಲವನ್ನು ಘೋಷಿಸಲಾಗಿದೆ, ಇದು ಎಂಎಸ್ಎಂಇ ವಲಯದಲ್ಲಿ ಅಭಿವೃದ್ಧಿ ಹೊಂದಲು ಸಹಾಯ ಮಾಡುತ್ತದೆ. ಸೂರತ್ ಮತ್ತು ಗುಜರಾತ್ ನ ಯುವಜನರು ಈ ಅವಕಾಶಗಳ ಲಾಭವನ್ನು ಪಡೆದುಕೊಳ್ಳಬೇಕು ಮತ್ತು ಸರ್ಕಾರ ಅವರನ್ನು ಬೆಂಬಲಿಸಲು ಸಿದ್ಧವಾಗಿದೆ " ಎಂದು ಶ್ರೀ ಮೋದಿ ಹೇಳಿದರು.

 

ಭಾರತದ ಅಭಿವೃದ್ಧಿಯಲ್ಲಿ, ವಿಶೇಷವಾಗಿ ಜವಳಿ, ರಾಸಾಯನಿಕ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಸೂರತ್ ನ ಮಹತ್ವದ ಪಾತ್ರವನ್ನು ಶ್ರೀ ಮೋದಿ ಗುರುತಿಸಿದರು. ನಗರದಲ್ಲಿ ಈ ಕೈಗಾರಿಕೆಗಳನ್ನು ವಿಸ್ತರಿಸುವ ಸರ್ಕಾರದ ಪ್ರಯತ್ನಗಳನ್ನು ಅವರು ಎತ್ತಿ ತೋರಿಸಿದರು. ಸೂರತ್ ವಿಮಾನ ನಿಲ್ದಾಣದಲ್ಲಿ ಹೊಸ ಸಮಗ್ರ ಟರ್ಮಿನಲ್ ಕಟ್ಟಡ, ವೆಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್, ದಿಲ್ಲಿ-ಮುಂಬೈ ಎಕ್ಸ್ ಪ್ರೆಸ್ ವೇ ಮತ್ತು ಬರಲಿರುವ ಬುಲೆಟ್ ರೈಲು, ಸೂರತ್ ಮೆಟ್ರೋ ಯೋಜನೆಯು ನಗರದ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸುತ್ತದೆ, ಇದು ದೇಶದ ಅತ್ಯಂತ ಉತ್ತಮ ಸಂಪರ್ಕ ಹೊಂದಿದ ನಗರಗಳಲ್ಲಿ ಒಂದಾಗಿದೆ. ಈ ಉಪಕ್ರಮಗಳು ಸೂರತ್ ನಿವಾಸಿಗಳ ಜೀವನದ ಗುಣಮಟ್ಟವನ್ನು ಸುಧಾರಿಸುತ್ತಿವೆ ಮತ್ತು ಅವರ ಜೀವನವನ್ನು ಸುಲಭಗೊಳಿಸುತ್ತಿವೆ ", ಎಂದು ಶ್ರೀ ಮೋದಿ ಒತ್ತಿ ಹೇಳಿದರು.

ನಮೋ ಆಪ್ ನಲ್ಲಿ ತಮ್ಮ ಸ್ಪೂರ್ತಿದಾಯಕ ಕಥೆಗಳನ್ನು ಹಂಚಿಕೊಳ್ಳುವಂತೆ ಶ್ರೀ ನರೇಂದ್ರ ಮೋದಿ ಅವರು ದೇಶಾದ್ಯಂತದ ಮಹಿಳೆಯರನ್ನು ಆಗ್ರಹಿಸಿದರು. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ದೇಶದ ಮತ್ತು ಸಮಾಜದ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಿದ ಈ ಸ್ಪೂರ್ತಿದಾಯಕ ಮಹಿಳೆಯರಿಗೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹಸ್ತಾಂತರಿಸುವುದಾಗಿ ಪ್ರಧಾನಿ ಘೋಷಿಸಿದರು. ವಿವಿಧ ಕ್ಷೇತ್ರಗಳಲ್ಲಿ, ವಿಶೇಷವಾಗಿ ಗುಜರಾತ್ ನಲ್ಲಿ ಮಹಿಳೆಯರ ಪಾತ್ರವನ್ನು ಅವರು ಎತ್ತಿ ತೋರಿಸಿದರು ಮತ್ತು ಈ ದಿನವು ಮಹಿಳೆಯರ ಸಾಧನೆಗಳನ್ನು ಸಂಭ್ರಮಿಸಲು ಒಂದು ಅವಕಾಶವಾಗಿದೆ ಎಂದು ಒತ್ತಿ ಹೇಳಿದರು. ಮಹಿಳಾ ಸಬಲೀಕರಣಕ್ಕಾಗಿ ಮೀಸಲಾಗಿರುವ ನವಸಾರಿಯಲ್ಲಿ ನಡೆಯುವ ಪ್ರಮುಖ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಅವರು ಹೇಳಿದರು. ಸೂರತ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಭಾಗವಹಿಸುತ್ತಿರುವುದನ್ನು ಗುರುತಿಸಿದ ಪ್ರಧಾನಮಂತ್ರಿಯವರು, ಈಗ ನಡೆಯುತ್ತಿರುವ ಕಾರ್ಯಕ್ರಮದಿಂದ ಅವರು ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ ಎಂದರು.

 

ಸೂರತ್ ಅನ್ನು ಮಿನಿ ಇಂಡಿಯಾ ಮತ್ತು ಜಾಗತಿಕ ವೇದಿಕೆಯಲ್ಲಿ ಗಮನಾರ್ಹ ನಗರವಾಗಿ ನಿರಂತರವಾಗಿ ಅಭಿವೃದ್ಧಿಪಡಿಸುವ ತಮ್ಮ ಬದ್ಧತೆಯನ್ನು ಪ್ರಧಾನಿ ವ್ಯಕ್ತಪಡಿಸಿದರು. "ಸೂರತ್ ನಲ್ಲಿರುವಂತಹ ರೋಮಾಂಚಕ ಮತ್ತು ಕ್ರಿಯಾತ್ಮಕ ಜನರಿಗೆ, ಎಲ್ಲವೂ ವಿಶಿಷ್ಟವಾಗಿರಬೇಕು/ಅಸಾಧಾರಣವಾಗಿರಬೇಕು. ನಡೆಯುತ್ತಿರುವ ಉಪಕ್ರಮಗಳ ಎಲ್ಲಾ ಫಲಾನುಭವಿಗಳನ್ನು ನಾನು ಅಭಿನಂದಿಸುತ್ತೇನೆ, ಅವರಿಗೆ ನಿರಂತರ ಯಶಸ್ಸು ಮತ್ತು ಪ್ರಗತಿಯನ್ನು ಹಾರೈಸುತ್ತೇನೆ" ಎಂದು ಶ್ರೀ ಮೋದಿ ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.

 

ಹಿನ್ನೆಲೆ
ಪ್ರಧಾನಮಂತ್ರಿಯವರು ಸೂರತ್ ನ ಲಿಂಬಾಯತ್ ನಲ್ಲಿ ಸೂರತ್ ಆಹಾರ ಭದ್ರತೆ ಸ್ಯಾಚುರೇಶನ್ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 2.3 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಪ್ರಯೋಜನಗಳನ್ನು ವಿತರಿಸಿದರು.
ಮಹಿಳಾ ಸಬಲೀಕರಣವು ಸರ್ಕಾರ ಮಾಡಿದ ಕೆಲಸದ ಮೈಲಿಗಲ್ಲಾಗಿದೆ. ಪ್ರಧಾನಮಂತ್ರಿಯವರ ದೃಷ್ಟಿಕೋನದಿಂದ ಮಾರ್ಗದರ್ಶನ ಪಡೆದ ಸರ್ಕಾರವು ಅವರ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮಗಳನ್ನು ತೆಗೆದುಕೊಳ್ಳಲು ಬದ್ಧವಾಗಿದೆ.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's new FTA playbook looks beyond trade and tariffs to investment ties

Media Coverage

India's new FTA playbook looks beyond trade and tariffs to investment ties
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 14 ಜನವರಿ 2026
January 14, 2026

Viksit Bharat Rising: Economic Boom, Tech Dominance, and Cultural Renaissance in 2025 Under the Leadership of PM Modi