ಕ್ವಾಡ್ ನಾಯಕರ ಜಂಟಿ ಹೇಳಿಕೆ

Published By : Admin | September 25, 2021 | 11:41 IST

ಕ್ವಾಡ್ ರಾಷ್ಟ್ರಗಳಾದ ಆಸ್ಟ್ರೇಲಿಯಾ, ಭಾರತ, ಜಪಾನ್ ಮತ್ತು ಅಮೆರಿಕದ ನಾಯಕರಾದ ನಾವು ಇದೇ ಮೊದಲ ಬಾರಿಗೆ ಮುಖಾಮುಖಿ ಭೇಟಿಯಾಗಿದ್ದೇವೆ. ಈ ಐತಿಹಾಸಿಕ ಸಂದರ್ಭದಲ್ಲಿ ಪಾಲುದಾರಿಕೆಗೆ ನಾವು ಬದ್ಧವೆಂದು ಘೋಷಿಸುತ್ತಿದ್ದೇವೆ ಮತ್ತು ಮುಕ್ತ ಮತ್ತು ಸ್ವತಂತ್ರ ಇಂಡೋ-ಪೆಸಿಫಿಕ್ ನ ಎಲ್ಲರನ್ನೊಳಗೊಂಡ ಸ್ಥಿತಿ ಸ್ಥಾಪಕತ್ವ, ಸುರಕ್ಷತೆ ಮತ್ತು ಸಮೃದ್ಧಿಗೆ ಸಮಾನ ಆದ್ಯತೆ ನೀಡುತ್ತಿದ್ದೇವೆ. ಆರು ತಿಂಗಳ ಹಿಂದೆಯಷ್ಟೇ ನಮ್ಮ ಹಿಂದಿನ ಸಭೆ ನಡೆದಿತ್ತು. ಮಾರ್ಚ್ ನಿಂದೀಚೆಗೆ ಕೋವಿಡ್-19 ಸಾಂಕ್ರಾಮಿಕ ಸಾಕಷ್ಟು ಜಾಗತಿಕ ಸಂಕಷ್ಟವನ್ನು ಮುಂದುವರಿಸಿದೆ. ಹವಾಮಾನ ಬಿಕ್ಕಟ್ಟು ವೃದ್ಧಿಯಾಗಿದೆ ಮತ್ತು ಪ್ರಾದೇಶಿಕ ಸುರಕ್ಷತೆ ಮತ್ತಷ್ಟು ಸಂಕೀರ್ಣವಾಗಿದೆ. ವೈಯಕ್ತಿಕವಾಗಿ ನಮ್ಮೆಲ್ಲಾ ರಾಷ್ಟ್ರಗಳು ಪರೀಕ್ಷೆಗಳನ್ನು ಎದುರಿಸುತ್ತಿವೆ ಮತ್ತು ಒಟ್ಟಾಗಿ ಹೋರಾಡುತ್ತಿವೆ. ಆದರೆ ನಮ್ಮ ಸಹಕಾರದಲ್ಲಿ ಕಿಂಚಿತ್ತೂ ಬದಲಾಗಿಲ್ಲ.

ಇಂಡೋ-ಪೆಸಿಫಿಕ್ ಜಗತ್ತಿನಲ್ಲಿ ಮತ್ತು ನಮಗೆ ನಾವು ಹೆಚ್ಚು ಗಮನಹರಿಸಲು ಈ ಕ್ವಾಡ್ ಸಮಾವೇಶದ ಸಂದರ್ಭ ಒಂದು ಅವಕಾಶವನ್ನು ಒದಗಿಸಿದೆ. ನಮ್ಮ ದೂರದೃಷ್ಟಿಯನ್ನು ಸಾಧಿಸುವ ಭರವಸೆಯನ್ನು ನೀಡಿದೆ. ಒಟ್ಟಾಗಿ ನಾವೆಲ್ಲಾ ಮುಕ್ತ, ಸ್ವತಂತ್ರ, ನಿಯಮಾಧಾರಿತ ಸಮಾಜ, ಅಂತಾರಾಷ್ಟ್ರೀಯ ಕಾನೂನುಗಳ ಪಾಲನೆಗೆ ಬದ್ಧವಾಗಿದ್ದೇವೆ. ಇಂಡೋ-ಪೆಸಿಫಿಕ್ ಪ್ರದೇಶ ಮತ್ತು ಅದರ ಹೊರತಾದ ಪ್ರದೇಶದ ಭದ್ರತೆ ಮತ್ತು ಸಮೃದ್ಧಿ ಗುರಿ ಇದೆ. ನಾವು ಕಾನೂನು ನಿಯಮಗಳ ಪಾಲನೆ, ನೌಕಾ ಸ್ವಾತಂತ್ರ್ಯಮತ್ತು ವ್ಯಾಜ್ಯಗಳ ಶಾಂತಿಯುತ ಪರಿಹಾರ, ಪ್ರಜಾಪ್ರಭುತ್ವಗಳ ಮೌಲ್ಯಗಳು ಮತ್ತು ರಾಷ್ಟ್ರಗಳ ಪ್ರಾದೇಶಿಕ ಸಮಗ್ರತೆಯನ್ನು ಎತ್ತಿಹಿಡಿಯಲು ಬದ್ಧವಾಗಿದ್ದೇವೆ.  ನಾವೆಲ್ಲರೂ ಪಾಲುದಾರರಾಗಿ ಒಟ್ಟಾಗಿ ಕಾರ್ಯನಿರ್ವಹಿಸಲು ಬದ್ಧವಾಗಿದ್ದೇವೆ. ಆಸಿಯಾನ್ ರಾಷ್ಟ್ರಗಳ ಒಗ್ಗಟ್ಟಿಗೆ ನಮ್ಮ ಬಲಿಷ್ಠ ಬೆಂಬಲವಿದೆ ಮತ್ತು ಇಂಡೋ-ಪೆಸಿಫಿಕ್ ಗೆ ಸಂಬಂಧಿಸಿದಂತೆ ಆಸಿಯಾನ್ ನಿಯಮಗಳಿಗೆ ಬದ್ಧವಾಗಿದ್ದೇವೆ. ಆಸಿಯಾನ್ ಮತ್ತು ಅದರ ಸದಸ್ಯ ರಾಷ್ಟ್ರಗಳ ಜತೆ ಕಾರ್ಯನಿರ್ವಹಣೆಗೆ ನಾವು ಸಿದ್ದವಿದ್ದೇವೆ, ಇಂಡೋ-ಪೆಸಿಫಿಕ್ ಪ್ರದೇಶ ಆಸಿಯಾನ್ ಮತ್ತು ಅದರ ಸದಸ್ಯರ ಹೃದಯದಂತಿದ್ದು, ಅದು ವಾಸ್ತವಿಕವಾಗಿ ಎಲ್ಲ ಮಾರ್ಗಗಳನ್ನು ಒಳಗೊಂಡಿದೆ. ನಾವೆಲ್ಲಾ ಇಂಡೋ-ಪೆಸಿಫಿಕ್ ಸಹಕಾರಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದಂತೆ 2021ರ ಸೆಪ್ಟೆಂಬರ್ ತಿಂಗಳ ಐರೋಪ್ಯ ಒಕ್ಕೂಟ ಕಾರ್ಯತಂತ್ರವನ್ನು ಸ್ವಾಗತಿಸುತ್ತೇವೆ. 

|

ಕಳೆದ ಸಭೆಯಿಂದೀಚೆಗೆ ನಾವು ವಿಶ್ವದ ಅತ್ಯಂತ ಕಠಿಣ ಸವಾಲುಗಳಾದ ಕೋವಿಡ್-19 ಸಾಂಕ್ರಾಮಿಕ, ಹವಾಮಾನ ಬಿಕ್ಕಟ್ಟು ಮತ್ತು ನಿರ್ಣಾಯಕ ಹಾಗು ಉದಯೋನ್ಮುಖ ತಂತ್ರಜ್ಞಾನಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸಾಕಷ್ಟು ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದೇವೆ.

ಕ್ವಾಡ್ ರಾಷ್ಟ್ರಗಳ ನಡುವಿನ ನಮ್ಮ ಪಾಲುದಾರಿಕೆ ಕೋವಿಡ್-19 ನಿಗ್ರಹ ಮತ್ತು ಪರಿಹಾರ ವಿಚಾರದಲ್ಲಿ ಐತಿಹಾಸಿಕವಾಗಿ ಹೊಸ ಆದ್ಯತೆ ದೊರೆತಿದೆ. ನಾವು ನಮ್ಮ ಸರ್ಕಾರಗಳ ಅಗ್ರ ತಜ್ಞರನ್ನೊಳಗೊಂಡ ಕ್ವಾಡ್ ಲಸಿಕೆ ತಜ್ಞರ ಸಮಿತಿಯನ್ನು ರಚಿಸಿದ್ದೇವೆ ಮತ್ತು ಕೋವಿಡ್-19 ಎದುರಿಸಲು ಇಂಡೋ-ಪೆಸಿಫಿಕ್ ಆರೋಗ್ಯ ಭದ್ರತೆಗೆ ಬೆಂಬಲ ನೀಡಲು ನಮ್ಮ ಯೋಜನೆಗಳನ್ನು ಉತ್ತಮ ರೀತಿಯಲ್ಲಿ ಸಮನ್ವಯಗೊಳಿಸಲು ಬಲಿಷ್ಠ ಸಂಬಂಧಗಳನ್ನು ನಿರ್ಮಿಸಲು ಇದು ಸಹಕಾರಿಯಾಗಿದೆ. ಆ ರೀತಿ ಮಾಡುವ ಮೂಲಕ ನಾವು ಸಾಂಕ್ರಾಮಿಕವನ್ನು ಎದುರಿಸುವ ಸಿದ್ಧತೆಗಳ ಅಂದಾಜು ಹಂಚಿಕೊಳ್ಳಲು ಸಹಕಾರಿಯಾಗಿದೆ ಮತ್ತು ಅದನ್ನು ನಿಗ್ರಹಿಸಲು ಸಮನ್ವಯದ ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆ ಮತ್ತು ಪ್ರದೇಶದಲ್ಲಿ ಕೋವಿಡ್-19 ನಿಯಂತ್ರಣಕ್ಕೆ ರಾಜತಾಂತ್ರಿಕ ಸಿದ್ಧಾಂತಗಳನ್ನು ಹಂಚಿಕೊಳ್ಳಲು ಸಾಧ್ಯವಾಗಿದೆ ಹಾಗೂ ಕೊವ್ಯಾಕ್ಸ್ ಸೌಕರ್ಯ ಸೇರಿದಂತೆ ಸುರಕ್ಷಿತ, ಪರಿಣಾಮಕಾರಿ ಮತ್ತು ಗುಣಮಟ್ಟ ಖಾತ್ರಿ ಲಸಿಕೆ ಉತ್ಪಾದನೆ ಮತ್ತು ಸಮಾನ ಲಭ್ಯತೆಯಲ್ಲಿ ನಿಕಟ ಸಹಭಾಗಿತ್ವ ಹೊಂದಲು ಬಹು ಹಂತದ ಪ್ರಯತ್ನಗಳನ್ನು ನಡೆಸಲು ಸಕ್ರಿಯ ಸಮನ್ವಯತೆ ಸಾಧಿಸಲು ಸಹಾಯಕವಾಗಿದೆ.

ಕೊವ್ಯಾಕ್ಸ್ ಮೂಲಕ ಹಣಕಾಸು ನೆರವಿನಿಂದ ಲಸಿಕೆಗೆ ಆರ್ಥಿಕ ನೆರವು ನೀಡುವ ಜತೆಗೆ ಆಸ್ಟ್ರೇಲಿಯಾ, ಭಾರತ, ಜಪಾನ್ ಮತ್ತು ಅಮೆರಿಕ 1.2 ಬಿಲಿಯನ್ ಡೋಸ್ ಗೂ ಅಧಿಕ ಸುರಕ್ಷಿತ ಮತ್ತು ಪರಿಣಾಮಕಾರಿ ಕೋವಿಡ್-19 ಲಸಿಕೆಗಳನ್ನು ಜಾಗತಿಕವಾಗಿ ದೇಣಿಗೆ ನೀಡುವ ಸಂಕಲ್ಪವನ್ನು ಕೈಗೊಂಡಿವೆ. ಈ ದಿನದವರೆಗೆ ನಾವು ಸುಮಾರು 79 ಮಿಲಿಯನ್ ಗೂ ಅಧಿಕ ಸುರಕ್ಷಿತ ಪರಿಣಾಮಕಾರಿ ಮತ್ತು ಗುಣಮಟ್ಟ ಖಾತ್ರಿಯ ಲಸಿಕೆಗಳನ್ನು ಇಂಡೋ-ಪೆಸಿಫಿಕ್ ನ ರಾಷ್ಟ್ರಗಳಿಗೆ ಪೂರೈಸಿದ್ದೇವೆ.

|

ಬಯಾಲಾಜಿಕಲ್ ಇ-ಲಿಮಿಟೆಡ್ ನಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಳಕ್ಕೆ ಕ್ವಾಡ್ ಲಸಿಕೆ ಪಾಲುದಾರಿಕೆಗೆ ಆರ್ಥಿಕ ನೆರವು ನೀಡಿರುವುದಕ್ಕೆ ಧನ್ಯವಾದಗಳು. ಇದಕ್ಕೆ ಹೆಚ್ಚುವರಿಯಾಗಿ ಈ ವರ್ಷಾಂತ್ಯದ ವೇಳೆಗೆ ಭಾರತದಲ್ಲೂ ಹೆಚ್ಚುವರಿ ಉತ್ಪಾದನೆ ಕೈಗೊಳ್ಳಲಾಗುವುದು. ಮಾರ್ಚ್ ನಲ್ಲಿ ನಾವು ಮಾಡಿದ್ದ ಘೋಷಣೆಗೆ ಅನುಗುಣವಾಗಿ ಮತ್ತು ಜಾಗತಿಕ ಪೂರೈಕೆ ಅಂತರ ಮುಂದುವರಿದಿರುವುದನ್ನು ಗುರುತಿಸಲಾಗಿದೆ. ಇದೀಗ ಉತ್ಪಾದನೆ ವಿಸ್ತರಣೆಯಿಂದಾಗಿ ಇಂಡೋ-ಪೆಸಿಫಿಕ್ ಮತ್ತು ಜಗತ್ತಿನ ಇತರ ರಾಷ್ಟ್ರಗಳಿಗೆ ಲಸಿಕೆ ರಫ್ತು ಮಾಡಲಾಗುವುದು ಮತ್ತು ನಾವು ಪ್ರಮುಖ ಸಂಸ್ಥೆಗಳ ಜತೆ ಅಂದರೆ ಕೊವ್ಯಾಕ್ಸ್ ಸೌಕರ್ಯ, ಸುರಕ್ಷಿತ, ಪರಿಣಾಮಕಾರಿ ಮತ್ತು ಗುಣಮಟ್ಟ ಖಾತ್ರಿಪಡಿಸಿದ ಕೋವಿಡ್-19 ಲಸಿಕೆಗಳನ್ನು ಕಡಿಮೆ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳಿಗಾಗಿ ಖರೀದಿಸಲಿದ್ದೇವೆ. ನಾವು ಲಸಿಕೆ ಉತ್ಪಾದನೆಯಲ್ಲಿ ಮುಕ್ತ ಹಾಗೂ ಸುರಕ್ಷಿತ ಪೂರೈಕೆ ಸರಣಿಯ ಪ್ರಾಮುಖ್ಯವನ್ನು ಮನಗಂಡಿದ್ದೇವೆ.

ಇಡೀ ಜಗತ್ತು ಮತ್ತು ಪ್ರದೇಶದಾದ್ಯಂತ ಸಾಂಕ್ರಾಮಿಕದ ಬಿಕ್ಕಟ್ಟಿನ ತಿಂಗಳುಗಳ ನಡುವೆಯೂ ನಾವು ಸಾಧನೆ ಮಾಡಿದ್ದೇವೆ. 2022ರ ಅಂತ್ಯದ ವೇಳೆಗೆ ಕನಿಷ್ಠ ಒಂದು ಬಿಲಿಯನ್ ಸುರಕ್ಷಿತ ಮತ್ತು ಪರಿಣಾಮಕಾರಿ ಕೋವಿಡ್-19 ಲಸಿಕೆಗಳನ್ನು ನಮ್ಮ ಕ್ವಾಡ್ ಹೂಡಿಕೆಗಳ ಮೂಲಕ ಉತ್ಪಾದಿಸುವುದು ಸೇರಿದಂತೆ ಬಯಾಲಾಜಿಕಲ್ ಇ-ಲಿಮಿಟೆಡ್ ನ ಉತ್ಪಾದನೆಯ ಹೆಚ್ಚಳಕ್ಕೆ ಕೈಗೊಂಡಿರುವ ಕ್ರಮಗಳನ್ನು ಸ್ವಾಗತಿಸಿದರು.

ಇಂದು ಸಾಂಕ್ರಾಮಿಕವನ್ನು ಕೊನೆಗಾಣಿಸಲು ಇಂಡೋ-ಪೆಸಿಫಿಕ್ ಹಾಗೂ ಇಡೀ ಜಗತ್ತಿಗೆ ತಕ್ಷಣಕ್ಕೆ ನೆರವು ನೀಡಲು ಪೂರೈಕೆ ಖಾತ್ರಿಗೆ ಆರಂಭಿಕ ಕ್ರಮ ಕೈಗೊಳ್ಳಲಾಗಿದೆ ಎಂದು ಘೋಷಿಸುವುದಕ್ಕೆ ಹೆಮ್ಮೆಯಾಗುತ್ತಿದೆ. ಅಲ್ಲದೆ 2021ರ ಅಕ್ಟೋಬರ್ ನಿಂದ ಜಾರಿಗೆ ಬರುವಂತೆ ಕೊವ್ಯಾಕ್ಸ್ ಸೇರಿದಂತೆ ಸುರಕ್ಷಿತ ಹಾಗು ಪರಿಣಾಮಕಾರಿ ಕೋವಿಡ್-19 ಲಸಿಕೆಗಳನ್ನು ರಫ್ತು ಪುನರಾರಂಭಿಸುವ ಭಾರತದ ಘೋಷಣೆಯನ್ನು ಕ್ವಾಡ್ ಸ್ವಾಗತಿಸುತ್ತದೆ. ಜಪಾನ್ ಪ್ರಾದೇಶಿಕ ಪಾಲುದಾರರಿಗೆ 3.3 ಬಿಲಿಯನ್  ಕೋವಿಡ್-19 ಬಿಕ್ಕಟ್ಟು ನಿರ್ವಹಣಾ ತುರ್ತು ಬೆಂಬಲ ಸಾಲದ ರೂಪದಲ್ಲಿ ಲಸಿಕೆ ಖರೀದಿಗೆ ಸಹಾಯ ನೀಡುವುದನ್ನು ಮುಂದುವರಿಸಲಿದೆ. ಆಸ್ಟ್ರೇಲಿಯಾ, ಆಗ್ನೇಯ ಏಷ್ಯಾ ಮತ್ತು ಪೆಸಿಫಿಕ್ ನ ಹಲವು ಪ್ರದೇಶಗಳಿಗೆ ಲಸಿಕೆ ಖರೀದಿಗೆ 212 ಮಿಲಿಯನ್ ನೆರವು ನೀಡುವುದನ್ನು ಮುಂದುವರಿಸಲಿದೆ. ಅಲ್ಲದೆ ಹೆಚ್ಚುವರಿಯಾಗಿ ಆಸ್ಟ್ರೇಲಿಯಾ ಕೊನೆಯ ಹಂತದವರೆಗೆ ಲಸಿಕೆಯನ್ನು ತಲುಪಿಸಲು ಮತ್ತು ಆ ಪ್ರದೇಶಗಳಿಗೆ ತಳಹಂತದ ಗ್ರಾಮಗಳವರೆಗೆ ಲಸಿಕೆ ಪೂರೈಕೆಯನ್ನು ಮುನ್ನಡೆಸಲು 219 ಮಿಲಿಯನ್ ನೆರವನ್ನು  ಹಂಚಿಕೆ ಮಾಡಿದೆ.

ಕ್ಲಿನಿಕಲ್ ಪ್ರಯೋಗಾಲಯ ಮತ್ತು ಜಿನೋಮಿಕ್ ಅನ್ವೇಷಣಾ ವಲಯಗಳಲ್ಲಿ ನಾವು ನಮ್ಮ ವಿಜ್ಞಾನ ಮತ್ತು ತಂತ್ರಜ್ಞಾನ(ಎಸ್&ಟಿ) ಸಹಕಾರವನ್ನು ಬಲವರ್ಧನೆಗೊಳಿಸಲಿದ್ದೇವೆ. ಇದರಿಂದಾಗಿ ಈ ಸಾಂಕ್ರಾಮಿಕವನ್ನು ಕೊನೆಗಾಣಿಸಲು ಮತ್ತು ಉತ್ತಮ ಆರೋಗ್ಯ ಭದ್ರತೆಯನ್ನು ನಿರ್ಮಿಸುವ ನಮ್ಮ ಪ್ರಯತ್ನಗಳನ್ನು ಚುರುಕುಗೊಳಿಸಲು ಸಾಧ್ಯವಾಗಲಿದೆ. ಇಡೀ ವಿಶ್ವಕ್ಕೆ ಲಸಿಕೆಯನ್ನು ನೀಡುವ ಹಂಚಿಕೆಯ ಜಾಗತಿಕ ಗುರಿಗೆ ನಾವು ಬದ್ಧವಾಗಿದ್ದೇವೆ. ಆ ಮೂಲಕ ಜೀವಗಳನ್ನು ಉಳಿಸುವುದು, ಮರು ನಿರ್ಮಾಣ ಹಾಗೂ ಜಾಗತಿಕ ಆರೋಗ್ಯ ಭದ್ರತೆ, ಹಣಕಾಸು ಮತ್ತು ರಾಜಕೀಯ ನಾಯಕತ್ವ ಬಲವರ್ಧನೆಯೂ ಸಹ ಒಳಗೊಂಡಿದೆ. ನಮ್ಮ ದೇಶಗಳು 2022ರಲ್ಲಿ ಸಾಂಕ್ರಾಮಿಕ ಎದುರಿಸಲು ಕೈಗೊಂಡ ಸಿದ್ಧತೆಗಳ ಟೇಬಲ್ ಟಾಪ್ ಅಥವಾ ಕ್ರಮಗಳ ಕುರಿತು ಜಂಟಿ ಸಮೀಕ್ಷೆಯನ್ನು ನಡೆಸಲಿವೆ.

ನಾವು ಹವಾಮಾನ ಬಿಕ್ಕಟ್ಟು ಎದುರಿಸಲು ಜಂಟಿಯಾಗಿ ಕೈಜೋಡಿಸಿದ್ದೇವೆ. ಇದು ಅತ್ಯಂತ ತುರ್ತು ಅವಶ್ಯಕವಾಗಿದೆ. ಪ್ಯಾರಿಸ್ ಒಪ್ಪಂದಕ್ಕೆ ಅನುಗುಣವಾಗಿ ತಾಪಮಾನದ  ಮಿತಿಯನ್ನು ಕಡಿತಗೊಳಿಸುವ ಮತ್ತು ಕೈಗಾರಿಕೆಗಳ ಮಟ್ಟಕ್ಕಿಂತ 1.5 ಡಿಗ್ರಿ ಸೆಲ್ಷಿಯಸ್ ಗೆ ಮಿತಿಗೊಳಿಸುವ ಪ್ರಯತ್ನಗಳನ್ನು ಕೈಗೊಳ್ಳಲು ಒಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ನಮ್ಮ ಕಡೆಯಿಂದ ಸಿಒಪಿ26 ಅನುಗುಣವಾಗಿ ಎನ್ ಡಿಸಿಎಸ್ ಗಳನ್ನು ಅಳವಡಿಕೆ ಮಾಡಲು ಹಾಗೂ ಈಗಾಗಲೇ ಅಳವಡಿಸಿಕೊಂಡಿರುವುದನ್ನು ನಾವು ಸ್ವಾಗತಿಸುತ್ತೇವೆ.

ಕ್ವಾಡ್ ರಾಷ್ಟ್ರಗಳು ಇಂಡೋ-ಪೆಸಿಫಿಕ್ ಪ್ರಾಂತ್ಯದ ಪ್ರಮುಖ ಪಾಲುದಾರರನ್ನು ತಲುಪುವುದು ಸೇರಿದಂತೆ ಜಾಗತಿಕ ಮಹತ್ವಾಕಾಂಕ್ಷೆ ಹೆಚ್ಚಿಸುವುದರ ಮೂಲಕ ರಾಜತಾಂತ್ರಿಕ ಸಮನ್ವಯವನ್ನು ಸಾಧಿಸಲಿದೆ. ಹವಾಮಾನ ವೈಪರೀತ್ಯ, ಶುದ್ಧ ಇಂಧನ ಆವಿಷ್ಕಾರ ಮತ್ತು ನಿಯೋಜನೆ ಹಾಗೂ ಹವಾಮಾನ ಹೊಂದಾಣಿಕೆ, ಸ್ಥಿತಿ ಸ್ಥಾಪಕತ್ವ ಮತ್ತು ಮುನ್ನೆಚ್ಚರಿಕೆ ಈ ಮೂರು ವಿಷಯವನ್ನು ಆಧರಿಸಿ ನಾವು ಕಾರ್ಯೋನ್ಮುಖವಾಗಿದ್ದೇವೆ. 2020ರಲ್ಲಿ ನಮ್ಮ ಕ್ರಿಯೆಗಳನ್ನು ಮುಂದುವರಿಸಲು ಇದು ಸಹಕಾರಿಯಾಗಿದ್ದು, 2050ರ ವೇಳೆಗೆ ಜಾಗತಿಕ ಶೂನ್ಯ ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸುವ ಗುರಿಗೆ ಕೊಡುಗೆ ನೀಡಲು ಬಯಸಿದ್ದೇವೆ. ಇದಕ್ಕೆ ರಾಷ್ಟ್ರೀಯ ಪರಿಸ್ಥಿತಿಗಳನ್ನು ಪರಿಗಣಿಸಲಾಗುವುದು. ಬಂದರು ಮತ್ತು ನೌಕಾ ಕಾರ್ಯಾಚರಣೆಗಳನ್ನು ಇಂಗಾಲ ಮುಕ್ತಗೊಳಿಸುವ ಗುರಿ ಮತ್ತು ಶುದ್ಧ ಹೈಡ್ರೋಜನ್ ತಂತ್ರಜ್ಞಾನ ನಿಯೋಜನೆ ಸೇರಿದಂತೆ ಹಲವು ವಲಯಗಳನ್ನು ಇಂಗಾಲ ಮುಕ್ತಗೊಳಿಸುವ ಪ್ರಯತ್ನಗಳನ್ನು ಕೈಗೊಂಡಿದ್ದೇವೆ. ಜವಾಬ್ದಾರಿಯುತ ಮತ್ತು ಸ್ಥಿತಿ ಸ್ಥಾಪಕತ್ವದ ಶುದ್ಧ ಇಂಧನ ಪೂರೈಕೆ ಸರಣಿಗೆ ಸಹಕಾರ ನೀಡಲು ನಾವು ಬದ್ಧವಾಗಿದ್ದೇವೆ ಮತ್ತು ನಾವು ಹವಾಮಾನ ಮಾಹಿತಿ ವ್ಯವಸ್ಥೆ ಹಾಗೂ ಪ್ರಾಕೃತಿಕ ಸ್ಥಿತಿ ಸ್ಥಾಪಕತ್ವ ಮೂಲಸೌಕರ್ಯ ಮೈತ್ರಿ ಬಲವರ್ಧನೆಗೆ ಒತ್ತು ನೀಡಿದ್ದೇವೆ. ಕ್ವಾಡ್ ರಾಷ್ಟ್ರಗಳೆಲ್ಲಾ ಸೇರಿ ಸಿಒಪಿ26ಅನ್ನು ಯಶಸ್ವಿಗೊಳಿಸಲು ಕಾರ್ಯೋನ್ಮುಖವಾಗಿದ್ದೇವೆ ಮತ್ತು ಈ ಸಂದರ್ಭದಲ್ಲಿ ಮಹತ್ವಾಕಾಂಕ್ಷೆಯ ಹವಾಮಾನ ಮತ್ತು ಆವಿಷ್ಕಾರದ ಮಟ್ಟಗಳನ್ನು ಜಿ20 ವೇದಿಕೆ ಎತ್ತಿಹಿಡಿದಿದೆ.

ನಾವು ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಸಹಕಾರ ಸ್ಥಾಪಿಸಿದ್ದೇವೆ. ಇದರಿಂದಾಗಿ ಸಾರ್ವತ್ರಿಕ ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ನಮ್ಮ ಸಮಾನ ಮೌಲ್ಯಗಳನ್ನು ಹಂಚಿಕೊಳ್ಳಲು ಹಾಗೂ ತಂತ್ರಜ್ಞಾನವನ್ನು ವಿನ್ಯಾಸ, ಅಭಿವೃದ್ಧಿಗೊಳಿಸಿ, ಆಡಳಿತದಲ್ಲಿ ಬಳಸಿಕೊಳ್ಳುವುದು ಖಾತ್ರಿಯಾಗುತ್ತದೆ. ಕೈಗಾರಿಕೆಗಳ ಸಹಯೋಗದೊಂದಿಗೆ ನಾವು ಮುಕ್ತ, ಸುರಕ್ಷಿತ ಮತ್ತು ಪಾರದರ್ಶಕ 5ಜಿ ಮತ್ತು 5ಜಿ ನಂತರದ ಅತ್ಯಾಧುನಿಕ ಜಾಲದ  ಸಂಪರ್ಕವನ್ನು ಒದಗಿಸಲಿದ್ದೇವೆ. Open-RAN ಸೇರಿದಂತೆ ನಮ್ಮ ಮನೋಭಾವ ಬದಲಿಸಲು ಹಾಗೂ ಖರೀದಿದಾರರ ವಿಶ್ವಾಸಾರ್ಹತೆ ಉತ್ತೇಜಿಸಲು ಆವಿಷ್ಕಾರಗಳಿಗೆ ಒತ್ತು ನೀಡಲು ಹಲವು ಪಾಲುದಾರರ ಜತೆ ಕಾರ್ಯ ನಿರ್ವಹಿಸಲಾಗುವುದು. 5ಜಿ ಸಂಪರ್ಕ ಒದಗಿಸುವುದಕ್ಕೆ ಪೂರಕವಾದ ವಾತಾವರಣಗಳನ್ನು ನಿರ್ಮಿಸಲು ಸರ್ಕಾರದ ಪಾತ್ರ ಇರುವುದನ್ನು ಮಾನ್ಯ ಮಾಡಲಾಗಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮತ್ತು ಮುಕ್ತ ಸೈಬರ್ ಭದ್ರತೆ ಮತ್ತು ತಂತ್ರಜ್ಞಾನ ಆಧಾರಿತ ಗುಣಮಟ್ಟದ ತಾಂತ್ರಿಕ ಮಾನದಂಡಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ನಾವು ವಲಯವಾರು ನಿರ್ದಿಷ್ಟ ಸಂಪರ್ಕ ಗುಂಪುಗಳನ್ನು ಸ್ಥಾಪಿಸಲಿದ್ದೇವೆ. ಅವು ಮುಕ್ತ, ಎಲ್ಲವನ್ನೊಳಗೊಂಡ, ಖಾಸಗಿ ವಲಯ ಆಧಾರಿತ ಬಹುಪಾಲುದಾರರು ಮತ್ತು ಸಹಮತ ಆಧಾರಿತ ಮನೋಭಾವವನ್ನು ಉತ್ತೇಜಿಸಲಿವೆ. ನಾವು ಅಂತಾರಾಷ್ಟ್ರೀಯ ದೂರ ಸಂಪರ್ಕ ಒಕ್ಕೂಟ ಸೇರಿದಂತೆ ಬಹು ಹಂತದ ಮಾನದಂಡದ ಸಂಸ್ಥೆಗಳ ಜೊತೆಗೆ ಸಹಕಾರ ಮತ್ತು ಸಮನ್ವಯ ಸಾಧಿಸಲಿದ್ದೇವೆ. 

ನಾವು ಸೆಮಿಕಂಡಕ್ಟರ್ ಸೇರಿದಂತೆ ನಿರ್ಣಾಯಕ ತಂತ್ರಜ್ಞಾನಗಳು ಹಾಗು ವಸ್ತುಗಳ ಪೂರೈಕೆ ಸರಣಿಯನ್ನು ಗುರುತಿಸಲಿದ್ದೇವೆ. ಸರ್ಕಾರದ ನೆರವಿನ ಕ್ರಮಗಳು ಮತ್ತು ನೀತಿಯ ಪ್ರಾಮುಖ್ಯವನ್ನು ಗುರುತಿಸಲಾಗುವುದು. ಅವು ಪಾರದರ್ಶಕ ಹಾಗೂ ಮಾರುಕಟ್ಟೆ ಆಧರಿತವಾಗಿರುತ್ತವೆ. ಜೈವಿಕ ತಂತ್ರಜ್ಞಾನ ಒಳಗೊಂಡಂತೆ ಭವಿಷ್ಯದಲ್ಲಿ ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು ಬದಲಾಗುತ್ತಿರುವ ಮೇಲೆ ನಿಗಾ ವಹಿಸಲಾಗುತ್ತಿದೆ ಮತ್ತು ಸಹಕಾರದ ಅವಕಾಶಗಳನ್ನು ಗುರುತಿಸಲಾಗುತ್ತಿದೆ. ಅಲ್ಲದೆ ಇಂದು ನಾವು ತಂತ್ರಜ್ಞಾನ ವಿನ್ಯಾಸ, ಅಭಿವೃದ್ಧಿ ಮತ್ತು ಆಡಳಿತಕ್ಕೆ ಸಂಬಂಧಿಸಿದಂತೆ ಕ್ವಾಡ್ ಸಿದ್ಧಾಂತಗಳನ್ನು ಬಿಡುಗಡೆ ಮಾಡುತ್ತಿದ್ದೇವೆ ಮತ್ತು ಅವುಗಳು ಕೇವಲ ಇಂಡೋ-ಪೆಸಿಫಿಕ್ ಪ್ರದೇಶ ಮಾತ್ರವಲ್ಲ, ಇಡೀ ವಿಶ್ವಕ್ಕೆ ಜವಾಬ್ದಾರಿಯುತ, ಮುಕ್ತ, ಉನ್ನತ ಗುಣಮಟ್ಟದ ಸಂಶೋಧನೆ ನಿಟ್ಟಿನಲ್ಲಿ ಮಾರ್ಗದರ್ಶಿಯಾಗಲಿವೆ ಎಂಬ ಭರವಸೆ ನಮಗಿದೆ. 

ಇನ್ನೂ ಮುಂದುವರಿದು ನಾವು ಕೇವಲ ನಿರ್ಣಾಯಕ ವಲಯಗಳಲ್ಲಿ ನಮ್ಮ ಸಹಕಾರವನ್ನು ವಿಸ್ತರಿಸುವುದಲ್ಲದೆ, ನಾವು ಹೊಸ ವಲಯಗಳಿಗೂ ಸಹ ವಿಸ್ತರಿಸುತ್ತೇವೆ. ನಮ್ಮ ಪ್ರತಿಯೊಂದು ಪ್ರಾದೇಶಿಕ ಮೂಲಸೌಕರ್ಯ ಪ್ರಯತ್ನಗಳು ಪ್ರತ್ಯೇಕವಾಗಿ ಮತ್ತು ಒಟ್ಟಾಗಿ ವೃದ್ಧಿಗೊಳಿಸುವ ಜತೆಗೆ ನಾವು ಹೊಸ ಕ್ವಾಡ್ ಮೂಲಸೌಕರ್ಯ ಪಾಲುದಾರಿಕೆಯನ್ನು ಆರಂಭಿಸಲಿದ್ದೇವೆ. ಕ್ವಾಡ್ ಸಂಘಟನೆಯಾಗಿ ನಾವು ನಮ್ಮ ಪ್ರಾದೇಶಿಕ ಮೂಲಸೌಕರ್ಯ ಅಗತ್ಯಗಳನ್ನು ಗುರುತಿಸಲು ನಾವು ನಿರಂತರವಾಗಿ ಸಮನ್ವಯದ ಪ್ರಯತ್ನಗಳನ್ನು ಕೈಗೊಳ್ಳುತ್ತೇವೆ. ಆಗಾಗ್ಗೆ ಭೇಟಿ ಮಾಡುತ್ತೇವೆ. ಪ್ರಾದೇಶಿಕ ಅಗತ್ಯಗಳು ಮತ್ತು ಅವಕಾಶಗಳನ್ನು ಕುರಿತು ಸಮನ್ವಯ ಸಾಧಿಸುತ್ತೇವೆ. ತಾಂತ್ರಿಕ ನೆರವು ಒದಗಿಸುವುದು, ಮೌಲ್ಯಮಾಪನ ಸಾಧನಗಳ ಮೂಲಕ ಪ್ರಾದೇಶಿಕ ಪಾಲುದಾರರನ್ನು ಸಬಲೀಕರಣಗೊಳಿಸುವುದು ಮತ್ತು ಸುಸ್ಥಿರ ಮೂಲಸೌಕರ್ಯ ಅಭಿವೃದ್ಧಿ ಉತ್ತೇಜನಕ್ಕೆ ಸಹಕಾರವನ್ನು ನೀಡುತ್ತೇವೆ.

ನಾವು ಜಿ7 ರಾಷ್ಟ್ರಗಳ ಮೂಲಸೌಕರ್ಯ ಪ್ರಯತ್ನಗಳನ್ನು ಬೆಂಬಲಿಸುತ್ತೇವೆ ಮತ್ತು ಐರೋಪ್ಯ ಒಕ್ಕೂಟ ಸೇರಿದಂತೆ ಸಮಾನ ಮನಸ್ಕ ಪಾಲುದಾರರೊಂದಿಗೆ ಸಹಕಾರ ಸಾಧಿಸಲು ಎದುರು ನೋಡುತ್ತಿದ್ದೇವೆ. ನಾವು ಜಿ-20 ಗುಣಮಟ್ಟ ಮೂಲಸೌಕರ್ಯ ಹೂಡಿಕೆ ತತ್ವಗಳಿಗೆ ಬದ್ಧವಾಗಿರುತ್ತೇವೆ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಉನ್ನತ ಗುಣಮಟ್ಟದ ಮೂಲಸೌಕರ್ಯ ಒದಗಿಸಲು ನಮ್ಮ ಪ್ರಯತ್ನಗಳಿಗೆ ಮತ್ತಷ್ಟು ಶಕ್ತಿ ತುಂಬಲಿದ್ದೇವೆ. ಬ್ಲೂಡಾಟ್ ನೆಟ್ವರ್ಕ್ ನೊಂದಿಗಿನ ನಮ್ಮ ಪಾಲುದಾರಿಕೆಯನ್ನು ಮುಂದುವರಿಸುವ ಆಸಕ್ತಿಯನ್ನು ನಾವು ಪುನರುಚ್ಚರಿಸುತ್ತೇವೆ. ಅಂತಾರಾಷ್ಟ್ರೀಯ ನಿಯಮಗಳು ಮತ್ತು ಮಾನದಂಡಗಳಿಗೆ ಅನುಗುಣವಾಗಿ ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ಸಾಲ ನೀತಿಗಳ ಪ್ರಾಮುಖ್ಯವನ್ನು ನಾವು ಬೆಂಬಲಿಸುತ್ತೇವೆ ಮತ್ತು ಪ್ರಮುಖ ಸಾಲಗಾರ ರಾಷ್ಟ್ರಗಳ ನಿಯಮ ಪಾಲನೆ ಮಾಡಲಾಗುವುದು. ಸಾಲ ಸುಸ್ಥಿರತೆ ಮತ್ತು ಹೊಣೆಗಾರಿಕೆ ಸೇರಿದಂತೆ ಎಲ್ಲ ಸಾಲಗಾರರು ಈ ನಿಯಮ ಮತ್ತು ಮಾನದಂಡಗಳಿಗೆ ಬದ್ಧವಾಗಿರಬೇಕೆಂದು ಕರೆ ನೀಡುತ್ತದೆ.

ಇಂದು ನಾವು ಸೈಬರ್ ಸ್ಪೇಸ್ ನಲ್ಲಿ ಹೊಸ ಸಹಕಾರಕ್ಕೆ ಚಾಲನೆ ನೀಡುತ್ತಿದ್ದೇವೆ. ಸೈಬರ್ ಅಪಾಯಗಳು ಸ್ಥಿತಿ ಸ್ಥಾಪಕತ್ವ ಉತ್ತೇಜನ ಮತ್ತು ನಮ್ಮ ನಿರ್ಣಾಯಕ ಮೂಲಸೌಕರ್ಯ ರಕ್ಷಣೆಗೆ ಒಟ್ಟಾಗಿ ಕಾರ್ಯನಿರ್ವಹಿಸುವ ಸಂಕಲ್ಪ ಮಾಡಿದ್ದೇವೆ. ಬಾಹ್ಯಾಕಾಶದಲ್ಲಿ ನಾವು ಹೊಸ ಪಾಲುದಾರಿಕೆ ಅವಕಾಶಗಳನ್ನು ಗುರುತಿಸಲಿದ್ದೇವೆ ಮತ್ತು ಹವಾಮಾನ ವೈಪರೀತ್ಯ, ಪ್ರಕೃತಿ ವಿಕೋಪಗಳ ನಿರ್ವಹಣೆ ಮತ್ತು ಮುನ್ನೆಚ್ಚರಿಕೆ, ಸಾಗರ ಮತ್ತು ಸಮುದ್ರ ಸಂಪನ್ಮೂಲಗಳ ಸುಸ್ಥಿರ ಉಪಯೋಗ ಮತ್ತು ಇತರೆ ಸವಾಲುಗಳ ಕುರಿತಂತೆ ಶಾಂತಿಯುತ ಉದ್ದೇಶಗಳಿಗಾಗಿ ಉಪಗ್ರಹ ದತ್ತಾಂಶವನ್ನು ಹಂಚಿಕೊಳ್ಳಲಿದ್ದೇವೆ. ನಮ್ಮ ಹೊರ ಬಾಹ್ಯಾಕಾಶವನ್ನು ಸುಸ್ಥಿರ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವುದನ್ನು ಖಾತ್ರಿಪಡಿಸಲು ನಿಯಮಗಳು, ನಿಬಂಧನೆಗಳು ಹಾಗೂ ಮಾರ್ಗಸೂಚಿಗಳು ಮತ್ತು ತತ್ವಗಳಿಗಾಗಿ ಎಲ್ಲರ ಜತೆ ಸಮಾಲೋಚನೆ ನಡೆಸುತ್ತೇವೆ.

ನಾವು ಶೈಕ್ಷಣಿಕ ವಲಯದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಕ್ವಾಡ್ ಫೆಲೋಶಿಪ್ ಗೆ ಚಾಲನೆ ನೀಡುವ ಮೂಲಕ ಜನರ ನಡುವಿನ ಸಹಕಾರಕ್ಕೆ ಒತ್ತು ನೀಡಲಾಗಿದೆ. ಅಸೆಂಚರ್, ಬ್ಲಾಕ್ ಸ್ಟೋನ್, ಬೋಯಿಂಗ್, ಗೂಗಲ್, ಮಾಸ್ಟರ್ ಕಾರ್ಡ್ ಮತ್ತು ವೆಸ್ಟರ್ನ್ ಡಿಜಿಟಲ್ ಮತ್ತಿತರ ಸಂಸ್ಥೆಗಳು ಈ ಪ್ರಾಯೋಗಿಕ ಫೆಲೋಶಿಪ್ ಯೋಜನೆಗೆ ಉಪಕ್ರಮಕ್ಕೆ ಉದಾರ ಬೆಂಬಲ ವ್ಯಕ್ತಪಡಿಸಿದ್ದು, ಇದರಡಿ ನಾಲ್ಕು ರಾಷ್ಟ್ರಗಳಾದ್ಯಂತ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ಶಾಸ್ತ್ರದ ಪದವಿ ವಿದ್ಯಾರ್ಥಿಗಳಿಗೆ ನೂರು ಪದವಿ ಫೆಲೋಶಿಪ್ ಗಳನ್ನು ನೀಡಲಾಗುವುದು. ಕ್ವಾಡ್ ಫೆಲೋಶಿಪ್ ಮೂಲಕ ನಮ್ಮ ಮುಂದಿನ ಪೀಳಿಗೆಯನ್ನು ಸ್ಟೆಮ್ ಪ್ರತಿಭೆಯೊಂದಿಗೆ ಕ್ವಾಡ್ ಮತ್ತು ಇತರೆ ಸಮಾನಮನಸ್ಕ ಪಾಲುದಾರರನ್ನು  ಮುನ್ನಡೆಸಲು ಸಜ್ಜುಗೊಳಿಸಲಾಗುವುದು. ಈ ಆವಿಷ್ಕಾರಗಳು ನಮ್ಮ ಭವಿಷ್ಯವನ್ನು ರೂಪಿಸಲಿವೆ. 

ದಕ್ಷಿಣ ಏಷ್ಯಾದಲ್ಲಿ ನಾವು ನಮ್ಮ ರಾಜತಾಂತ್ರಿಕ, ಆರ್ಥಿಕ ಮತ್ತು ಮಾನವ ಹಕ್ಕುಗಳ ನೀತಿಗಳ ನಿಟ್ಟಿನಲ್ಲಿ ನಿಕಟವಾಗಿ ಸಮನ್ವಯದಿಂದ ಕಾರ್ಯ ನಿರ್ವಹಿಸಲಿದ್ದೇವೆ. ಆಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ನಾವು ಯುಎನ್ಎಸ್ ಸಿಆರ್ 2593ಗೆ ಅನುಗುಣವಾಗಿ ಮುಂಬರುವ ತಿಂಗಳುಗಳಲ್ಲಿ  ಭಯೋತ್ಪಾದನೆ ನಿಗ್ರಹ ಮತ್ತು ಮಾನವೀಯ ಸಹಕಾರವನ್ನು ಇನ್ನಷ್ಟು ಬಲವರ್ಧನೆಗೊಳಿಸಲು ಬಯಸಿದ್ದೇವೆ. ಆಫ್ಘನ್ ಭೌಗೋಳಿಕ ಪ್ರದೇಶವನ್ನು ಯಾವುದೇ ರಾಷ್ಟ್ರದ ವಿರುದ್ಧ ದಾಳಿ ಮಾಡಲು ಅಥವಾ ಬೆದರಿಕೆಯೊಡ್ಡಲು ಅಥವಾ ಉಗ್ರರಿಗೆ ತರಬೇತಿ ನೀಡಲು ಅಥವಾ ವಸತಿ ಕಲ್ಪಿಸಲು ಅಥವಾ ಭಯೋತ್ಪಾದನಾ ಕೃತ್ಯಗಳಿಗೆ ಹಣಕಾಸು ಒದಗಿಸಲು ಅಥವಾ ಸಂಚು ರೂಪಿಸಲು ಬಳಕೆ ಮಾಡುವಂತಿಲ್ಲ ಮತ್ತು ಆಫ್ಘಾನಿಸ್ತಾನದಲ್ಲಿ ಭಯೋತ್ಪಾದನೆ ನಿಗ್ರಹಿಸುವ ಪ್ರಾಮುಖ್ಯತೆಯನ್ನು ಪುನರುಚ್ಚರಿಸಲಾಯಿತು ಮತ್ತು ನಾವು ಭಯೋತ್ಪಾದಕರ ಯಾವುದೇ ಅಣಕು ಕಾರ್ಯಾಚರಣೆ ಬಳಸುವುದನ್ನು ನಿರಾಕರಿಸುವುದು ಮತ್ತು ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಯಾವುದೇ ಉಗ್ರರ ದಾಳಿಗಳನ್ನು ನಡೆಸುವುದಕ್ಕೆ ಭಯೋತ್ಪಾದನಾ ಗುಂಪುಗಳಿಗೆ ಆರ್ಥಿಕ ಅಥವಾ ಮಿಲಿಟರಿ ಬೆಂಬಲ ನೀಡುವುದನ್ನು ತಡೆಯುವುದಕ್ಕೆ ಪ್ರಾಮುಖ್ಯ ನೀಡಲು ನಿರ್ಧರಿಸಲಾಯಿತು. ನಾವು ಆಫ್ಘನ್ ಪ್ರಜೆಗಳ ಬೆಂಬಲಕ್ಕೆ ನಿಲ್ಲಲು ಮತ್ತು ತಾಲಿಬಾನ್ ಗೆ ಯಾವುದೇ ವ್ಯಕ್ತಿ ಆಫ್ಘಾನಿಸ್ತಾನ ತೊರೆಯಲು ಬಯಸಿದರೆ ಅಂತಹವರ ಸುರಕ್ಷಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವಂತೆ ಕರೆ ನೀಡಲಾಗಿದೆ ಮತ್ತು ಅಲ್ಲಿ ಮಹಿಳೆಯರು, ಮಕ್ಕಳು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಆಫ್ಘನ್ನರ ಮಾನವ ಹಕ್ಕುಗಳನ್ನು ಖಾತ್ರಿಪಡಿಸಲು ಸೂಚಿಸಲಾಗಿದೆ.

ಇಂಡೋ-ಪೆಸಿಫಿಕ್ ಗೆ ಸಂಬಂಧಿಸಿದಂತೆ ನಾವು ಉತ್ತಮ ಹಂಚಿಕೆಯ ಭವಿಷ್ಯವನ್ನು ಗುರುತಿಸಲಿದ್ದೇವೆ ಮತ್ತು ಪ್ರಾದೇಶಿಕ ಶಾಂತಿ, ಸ್ಥಿರತೆ, ಭದ್ರತೆ ಮತ್ತು ಸಮೃದ್ಧಿಗೆ ಕ್ವಾಡ್ ಅನ್ನು ಒಂದು ಶಕ್ತಿಯನ್ನಾಗಿ ಖಾತ್ರಿಪಡಿಸುವ ನಿಟ್ಟಿನಲ್ಲಿ ನಾವು ನಮ್ಮ ಪ್ರಯತ್ನಗಳನ್ನು ದುಪ್ಪಟ್ಟುಗೊಳಿಸಲಿದ್ದೇವೆ. ಆ ನಿಟ್ಟಿನಲ್ಲಿ ನಾವು ಅಂತಾರಾಷ್ಟ್ರೀಯ ಕಾನೂನುಗಳ ಕಡ್ಡಾಯ ಪಾಲನೆ, ವಿಶೇಷವಾಗಿ ವಿಶ್ವಸಂಸ್ಥೆಯ ಸಾಗರ ಕಾನೂನುಗಳಿಗೆ ಸಂಬಂಧಿಸಿದ ಸಮಾವೇಶ (ಯುಎನ್ ಸಿಎಲ್ಒಎಸ್)ಕ್ಕೆ ಅನುಗುಣವಾಗಿ ನಡೆದುಕೊಳ್ಳುವುದನ್ನು ಮುಂದುವರಿಸುತ್ತೇವೆ. ಆ ಮೂಲಕ ಪೂರ್ವ ಮತ್ತು ದಕ್ಷಿಣ ಚೀನಾ ಸಮುದ್ರಗಳೂ ಸೇರಿದಂತೆ ಸಾಗರ ಪ್ರದೇಶದಲ್ಲಿ ನಿಮಯಗಳನ್ನು ಪಾಲಿಸಿ ಎಲ್ಲ ಸವಾಲುಗಳನ್ನು ಎದುರಿಸಲಾಗುವುದು. ನಾವು ಪೆಸಿಫಿಕ್ ನ ಸಣ್ಣ ದ್ವೀಪ ರಾಷ್ಟ್ರಗಳಿಗೆ ನೆರವು ನೀಡುವುದನ್ನು ಪುನರುಚ್ಚರಿಸುತ್ತೇವೆ. ಅವುಗಳ ಆರ್ಥಿಕ ಮತ್ತು ಪರಿಸರಾತ್ಮಕ ಸ್ಥಿತಿ ಸ್ಥಾಪಕತ್ವ ವೃದ್ಧಿಸಲಾಗುವುದು. ಕೋವಿಡ್-19 ನಿಂದಾಗಿರುವ ಆರ್ಥಿಕ ಮತ್ತು ಆರೋಗ್ಯದ ಪರಿಣಾಮಗಳ ನಿರ್ವಹಣೆಗೆ ಪೆಸಿಫಿಕ್ ದ್ವೀಪ ರಾಷ್ಟ್ರಗಳಿಗೆ ನೆರವು ನೀಡುವುದನ್ನು ನಾವು ಮುಂದುವರಿಸುತ್ತೇವೆ. ಅವುಗಳಿಗೆ ಗುಣಮಟ್ಟ ಮತ್ತು ಸುಸ್ಥಿರ ಮೂಲಸೌಕರ್ಯಕ್ಕೆ ನೆರವು ನೀಡಲಾಗುವುದು. ಜತೆಗೆ ಹವಾಮಾನ ವೈಪರೀತ್ಯ ಪರಿಣಾಮಗಳನ್ನು ಎದುರಿಸಲು ಮತ್ತು ನಿಯಂತ್ರಿಸಲು ಪಾಲುದಾರಿಕೆ ಒದಗಿಸಲಾಗುವುದು. ಇದು ಪೆಸಿಫಿಕ್ ಪ್ರದೇಶಕ್ಕೆ ಗಂಭೀರ ಸವಾಲಾಗಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದಂತೆ ಉತ್ತರ ಕೊರಿಯಾವನ್ನು ಸಂಪೂರ್ಣ ನಿಶಸ್ತ್ರೀಕರಣಗೊಳಿಸಲು ನಾವು ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ ಮತ್ತು ಅಪಹರಣಕ್ಕೊಳಗಾಗಿರುವ ಜಪಾನಿಯರ ವಿಷಯಕ್ಕೆ ಸಂಬಂಧಿಸಿದಂತೆ ತಕ್ಷಣದ ಪರಿಹಾರದ ಅಗತ್ಯವನ್ನು ನಾವು ಖಚಿತಪಡಿಸುತ್ತೇವೆ. ಯಾವುದೇ  ಒಳಗಾಗದೆ ಉತ್ತರ ಕೊರಿಯಾ, ವಿಶ್ವಸಂಸ್ಥೆಯ ನಿಬಂಧನೆಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕೆಂದು ನಾವು ಆಗ್ರಹಿಸುತ್ತೇವೆ. ಅಲ್ಲದೆ ನಾವು ಗುಣಾತ್ಮಕ ಸಮಾಲೋಚನೆಗಳಲ್ಲಿ ತೊಡಗುವಂತೆ ಉತ್ತರ ಕೊರಿಯಾಗೆ ಕರೆ ನೀಡುತ್ತೇವೆ. ಇಂಡೋ-ಪೆಸಿಫಿಕ್ ಮತ್ತು ಅದರ ಹೊರತಾದ ಪ್ರದೇಶದಲ್ಲಿ ಪ್ರಜಾಪ್ರಭುತ್ವದ ಮರುಸ್ಥಾಪನೆಗೆ ನಾವು ಬದ್ಧವಾಗಿದ್ದೇವೆ. ಮ್ಯಾನ್ಮಾರ್ ನಲ್ಲಿ ಹಿಂಸಾಚಾರವನ್ನು ಕೊನೆಗಾಣಿಸುವುದು, ವಿದೇಶಿಯರು ಸೇರಿದಂತೆ ಎಲ್ಲ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡುವುದು,  ಧನಾತ್ಮಕ ಸಂವಾದಗಳಲ್ಲಿ ತೊಡಗಿಕೊಳ್ಳುವುದು ಮತ್ತು ಶೀಘ್ರ ಪ್ರಜಾಪ್ರಭುತ್ವ ಮರುಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇವೆ. ಅಲ್ಲದೆ ನಾವು ಆಸಿಯಾನ್ ನ ಐದು ತತ್ವಗಳನ್ನು ಜಾರಿಗೊಳಿಸುವ ತುರ್ತು ಕರೆಯನ್ನು ನೀಡುತ್ತಿದ್ದೇವೆ.

ವಿಶ್ವಸಂಸ್ಥೆ ಸೇರಿದಂತೆ ಬಹು ಹಂತದ ಸಂಸ್ಥೆಗಳಲ್ಲಿ ನಾವು ನಮ್ಮ ಸಹಕಾರವನ್ನು ಇನ್ನಷ್ಟು ಮುಂದುವರಿಸಲಿದ್ದೇವೆ. ಆ ಮೂಲಕ ಬಹುಹಂತದ ವ್ಯವಸ್ಥೆಗಳಲ್ಲಿ ಸ್ಥಿತಿ ಸ್ಥಾಪಕತ್ವ ಆದ್ಯತೆಗಳು ಮುಂದುವರಿಯಲಿವೆ. ವೈಯಕ್ತಿಕವಾಗಿ ಹಾಗೂ ಒಟ್ಟಾರೆಯಾಗಿ ಕಾಲಘಟ್ಟದ ಎಲ್ಲ ಸವಾಲುಗಳನ್ನು ನಾವು ಎದುರಿಸಲಿದ್ದೇವೆ ಮತ್ತು ಇಡೀ ಪ್ರದೇಶ ಎಲ್ಲವನ್ನೊಳಗೊಂಡ ಮುಕ್ತ ಹಾಗೂ ಸಾರ್ವತ್ರಿಕ ನಿಯಮ ನಿಬಂಧನೆಗಳ ಪಾಲನೆಗೆ ಬದ್ಧವಾಗಿರುತ್ತದೆ ಎಂದು ಖಾತ್ರಿಪಡಿಸುತ್ತೇವೆ.

ಸಹಕಾರದ ಅಭ್ಯಾಸವನ್ನು ಮುಂದುವರಿಸುತ್ತೇವೆ. ನಮ್ಮ ನಾಯಕರು ಮತ್ತು ವಿದೇಶಾಂಗ ಸಚಿವರುಗಳು ವಾರ್ಷಿಕವಾಗಿ ಭೇಟಿ ಮಾಡುತ್ತಾರೆ ಮತ್ತು ನಮ್ಮ ಹಿರಿಯ ಅಧಿಕಾರಿಗಳು ಆಗಾಗ್ಗೆ ಭೇಟಿ ಮಾಡುತ್ತಾರೆ. ನಮ್ಮ ಕಾರ್ಯಕಾರಿ ಗುಂಪುಗಳು ಬಲಿಷ್ಠ, ಪ್ರಾದೇಶಿಕ ನಿರ್ಮಾಣಕ್ಕೆ ಅಗತ್ಯ ಸಹಕಾರವನ್ನು ವೃದ್ಧಿಸುವ ಮೂಲಕ ಸ್ಥಿರತೆಯನ್ನು ಮುಂದುವರಿಸಲಿದೆ.

ಕಾಲ ಎಲ್ಲವನ್ನೂ ಪರೀಕ್ಷಿಸುತ್ತಿರುವ ಈ ಸಂದರ್ಭದಲ್ಲಿ ನಾವು ಮುಕ್ತ ಮತ್ತು ಸ್ವತಂತ್ರ ಇಂಡೋ-ಪೆಸಿಫಿಕ್ ಪ್ರದೇಶವನ್ನು ಅರ್ಥ ಮಾಡಿಕೊಳ್ಳುವ  ನನ್ನ ಬದ್ಧತೆಯು ದೃಢವಾಗಿದೆ. ಈ ಪಾಲುದಾರಿಕೆಯ ನಮ್ಮ ದೂರದೃಷ್ಟಿಯು ಮಹತ್ವಾಕಾಂಕ್ಷಿ ಮತ್ತು ದೂರಗಾಮಿ ಆಲೋಚನೆಗಳು ಮುಂದುವರಿಯಲಿವೆ. ಸಹಕಾರದ ದೃಢಸಂಕಲ್ಪದೊಂದಿಗೆ ನಾವು ಈ ಸಂದರ್ಭವನ್ನು ಒಟ್ಟಾಗಿ ಎದುರಿಸಲು ಬದ್ಧವಾಗಿದ್ದೇವೆ.

 

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
When Narendra Modi woke up at 5 am to make tea for everyone: A heartwarming Trinidad tale of 25 years ago

Media Coverage

When Narendra Modi woke up at 5 am to make tea for everyone: A heartwarming Trinidad tale of 25 years ago
NM on the go

Nm on the go

Always be the first to hear from the PM. Get the App Now!
...
Prime Minister condoles the loss of lives in an accident in Sambhal, Uttar Pradesh
July 05, 2025
QuotePM announces ex-gratia from PMNRF

Prime Minister Shri Narendra Modi today condoled the loss of lives in an accident in Sambhal, Uttar Pradesh. He announced an ex-gratia of Rs. 2 lakh from PMNRF for the next of kin of each deceased and Rs. 50,000 to the injured.

The PMO India handle in post on X said:

“Deeply saddened by the loss of lives in an accident in Sambhal, Uttar Pradesh. Condolences to those who have lost their loved ones in the mishap. May the injured recover soon.

An ex-gratia of Rs. 2 lakh from PMNRF would be given to the next of kin of each deceased. The injured would be given Rs. 50,000: PM @narendramodi”