ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಭಾರತ-ಬಾಂಗ್ಲಾದೇಶ ಮೈತ್ರಿ ಪೈಪ್ಲೈನ್ ಅನ್ನು ಜಂಟಿಯಾಗಿ ಉದ್ಘಾಟಿಸಿದರು
ಐ ಬಿ ಎಫ್ ಪಿ ಭಾರತ ಮತ್ತು ಅದರ ನೆರೆಹೊರೆಯ ರಾಷ್ಟ್ರಗಳ ನಡುವಿನ ಎರಡನೇ ಗಡಿಯಾಚೆಗಿನ ಇಂಧನ ಪೈಪ್ಲೈನ್ ಆಗಿದೆ
ಬಾಂಗ್ಲಾದೇಶದೊಂದಿಗೆ ವರ್ಧಿತ ಸಂಪರ್ಕವು ಜನರ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ

ಗೌರವಾನ್ವಿತರಾದ

ಪ್ರಧಾನಿ ಶೇಖ್ ಹಸೀನಾ ಅವರೇ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೇ,

ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಶ್ರೀ ಹರ್ದೀಪ್ ಪುರಿ ಅವರೇ,

ಮತ್ತು ಅಸ್ಸಾಂ ಅನ್ನು ಪ್ರತಿನಿಧಿಸುವ ಭಾರತ ಸರಕಾರದ ಸಚಿವರಾದ ಶ್ರೀ ರಾಮೇಶ್ವರ್ ತೆಲಿ, ಬಾಂಗ್ಲಾದೇಶ ಸರಕಾರದ ಗೌರವಾನ್ವಿತ ಸಚಿವರು ಮತ್ತು ನಮ್ಮೊಂದಿಗೆ ಇಲ್ಲಿರುವ ಇತರ ಎಲ್ಲರಿಗೂ ನಮಸ್ಕಾರ! 

ಇಂದು ಭಾರತ-ಬಾಂಗ್ಲಾದೇಶ ಬಾಂಧವ್ಯದ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ʻಭಾರತ-ಬಾಂಗ್ಲಾದೇಶ ಸ್ನೇಹ ಕೊಳವೆ ಮಾರ್ಗʼಕ್ಕೆ (ಇಂಧನ ಕೊಳವೆ ಮಾರ್ಗಕ್ಕೆ) ನಾವು 2018ರ ಸೆಪ್ಟೆಂಬರ್‌ನಲ್ಲಿ ಶಂಕುಸ್ಥಾಪನೆ ನೆರವೇರಿಸಿದೆವು. ಇಂದು ಪ್ರಧಾನಮಂತ್ರಿ ಶೇಖ್ ಹಸೀನಾ ಅವರೊಂದಿಗೆ ಇದನ್ನು ಉದ್ಘಾಟಿಸುವ ಅವಕಾಶ ಬಂದಿರುವುದು ನನಗೆ ಸಂತೋಷ ತಂದಿದೆ.

ʻಕೋವಿಡ್-19ʼ ಸಾಂಕ್ರಾಮಿಕದ ಹೊರತಾಗಿಯೂ ಈ ಯೋಜನೆಯ ಕೆಲಸವು ಮುಂದುವರಿದಿದ್ದು ತೃಪ್ತಿಯ ವಿಷಯವಾಗಿದೆ. ಈ ಕೊಳವೆ ಮಾರ್ಗದೊಂದಿಗೆ, ಉತ್ತರ ಬಾಂಗ್ಲಾದೇಶದ ವಿವಿಧ ಜಿಲ್ಲೆಗಳಿಗೆ 1 ದಶಲಕ್ಷ ಮೆಟ್ರಿಕ್ ಟನ್ ಹೈಸ್ಪೀಡ್ ಡೀಸೆಲ್ ಪೂರೈಸಬಹುದು. ಕೊಳವೆ ಮಾರ್ಗವು ಸರಬರಾಜು ವೆಚ್ಚವನ್ನು ಕಡಿಮೆ ಮಾಡುವುದಲ್ಲದೆ, ಇಂಗಾಲದ ಹೊರಹೊಮ್ಮುವ ಪ್ರಮಾಣವನ್ನು ಸಹ ಕಡಿಮೆ ಮಾಡುತ್ತದೆ. ವಿಶ್ವಾಸಾರ್ಹ ಮತ್ತು ವೆಚ್ಚ-ಪರಿಣಾಮಕಾರಿ ಡೀಸೆಲ್ ಸರಬರಾಜಿಗೆ, ವಿಶೇಷವಾಗಿ ಕೃಷಿ ಕ್ಷೇತ್ರಕ್ಕೆ ಇದು ಪ್ರಯೋಜನಕಾರಿಯಾಗಿದೆ. ಇದರಿಂದ ಸ್ಥಳೀಯ ಕೈಗಾರಿಕೆಗಳಿಗೂ ಲಾಭವಾಗಲಿದೆ.

ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ಅನೇಕ ಅಭಿವೃದ್ಧಿಶೀಲ ಆರ್ಥಿಕತೆಗಳು ತಮ್ಮ ಆಹಾರ ಮತ್ತು ಇಂಧನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹೆಣಗಾಡುತ್ತಿವೆ. ಈ ಹಿನ್ನೆಲೆಯಲ್ಲಿ ಇಂದಿನ ಕಾರ್ಯಕ್ರಮಕ್ಕೆ ಹೆಚ್ಚಿನ ಮಹತ್ವವಿದೆ. 

ಸ್ನೇಹಿತರೇ, 

ಕಳೆದ ಕೆಲವು ವರ್ಷಗಳಲ್ಲಿ, ಪ್ರಧಾನಿ ಶೇಖ್ ಹಸೀನಾ ಅವರ ಸಮರ್ಥ ನಾಯಕತ್ವದಲ್ಲಿ, ಬಾಂಗ್ಲಾದೇಶವು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ ಮತ್ತು ಪ್ರತಿಯೊಬ್ಬ ಭಾರತೀಯನಿಗೂ ಅದರ ಬಗ್ಗೆ ಹೆಮ್ಮೆ ಇದೆ. ಬಾಂಗ್ಲಾದೇಶದ ಅಭಿವೃದ್ಧಿಯ ಈ ಪ್ರಯಾಣಕ್ಕೆ ನಾವು ಕೊಡುಗೆ ನೀಡಲು ಸಾಧ್ಯವಾಗಿರುವುದು . ನಮಗೆ ಸಂತಸ ತಂದಿದೆ. ಈ ಕೊಳವೆ ಮಾರ್ಗವು ಬಾಂಗ್ಲಾದೇಶದ ಬೆಳವಣಿಗೆಯನ್ನು ಮತ್ತಷ್ಟು ವೇಗಗೊಳಿಸುತ್ತದೆ ಮತ್ತು ಎರಡೂ ದೇಶಗಳ ನಡುವಿನ ಬಾಂಧವ್ಯವನ್ನು ಹೆಚ್ಚಿಸುವ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ನನಗೆ ಖಾತರಿಯಿದೆ. ನಮ್ಮ ಸಂಪರ್ಕದ ಪ್ರತಿಯೊಂದು ಸ್ತಂಭವನ್ನು ನಾವು ಬಲಪಡಿಸುತ್ತಲೇ ಇರುವುದು ಅವಶ್ಯಕ. ಅದು ಸಾರಿಗೆ ಕ್ಷೇತ್ರದಲ್ಲಿರಲಿ, ಇಂಧನ ಕ್ಷೇತ್ರದಲ್ಲಿರಲಿ, ವಿದ್ಯುಚ್ಛಕ್ತಿ ಕ್ಷೇತ್ರದಲ್ಲಿರಲಿ ಅಥವಾ ಡಿಜಿಟಲ್ ಕ್ಷೇತ್ರದಲ್ಲಿರಲಿ, ನಮ್ಮ ಸಂಪರ್ಕವು ಹೆಚ್ಚಾದಂತೆ, ನಮ್ಮ ಜನರ ನಡುವಿನ ಬಾಂಧವ್ಯ ಹೆಚ್ಚು ಬಲಗೊಳ್ಳುತ್ತವೆ.

ನನಗೆ ನೆನಪಿದೆ, ಕೆಲವು ವರ್ಷಗಳ ಹಿಂದೆ ಪ್ರಧಾನಿ ಶೇಖ್ ಹಸೀನಾ ಅವರು 1965ರ ಹಿಂದಿನ ರೈಲು ಸಂಪರ್ಕವನ್ನು ಪುನಃಸ್ಥಾಪಿಸುವ ತಮ್ಮ ಆಶಯದ ಬಗ್ಗೆ ಮಾತನಾಡಿದ್ದರು. ಮತ್ತು ಅಂದಿನಿಂದ ಎರಡೂ ದೇಶಗಳು ಆ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಿವೆ. ಅದರ ಪರಿಣಾಮವಾಗಿ, ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ, ನಾವು ಆ ರೈಲು ಜಾಲದ ಮೂಲಕ ಬಾಂಗ್ಲಾದೇಶಕ್ಕೆ ಆಮ್ಲಜನಕವನ್ನು ಕಳುಹಿಸಲು ಸಾಧ್ಯವಾಯಿತು. ಪ್ರಧಾನಮಂತ್ರಿ ಶೇಖ್ ಹಸೀನಾ ಅವರ ಈ ದೂರದೃಷ್ಟಿಗಾಗಿ ನಾನು ಹೃತ್ಪೂರ್ವಕವಾಗಿ ಅಭಿನಂದಿಸಲು ಬಯಸುತ್ತೇನೆ.

ಸ್ನೇಹಿತರೇ,

ವಿದ್ಯುತ್ ಕ್ಷೇತ್ರದಲ್ಲಿ ನಮ್ಮ ಪರಸ್ಪರ ಸಹಕಾರ ಬಹಳ ಯಶಸ್ವಿಯಾಗಿದೆ. ಇಂದು ಭಾರತವು ಬಾಂಗ್ಲಾದೇಶಕ್ಕೆ 1100 ಮೆಗಾವ್ಯಾಟ್‌ಗಿಂತ ಹೆಚ್ಚು ವಿದ್ಯುತ್ ಪೂರೈಸುತ್ತಿದೆ. ʻಮೈತ್ರಿ ಸೂಪರ್ ಥರ್ಮಲ್ ವಿದ್ಯುತ್ ಸ್ಥಾವರʼದ ಮೊದಲ ಘಟಕವೂ ಕಾರ್ಯಾರಂಭ ಮಾಡಿದೆ. ಕಳೆದ ವರ್ಷ ಪ್ರಧಾನಿ ಶೇಖ್ ಹಸೀನಾ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇದನ್ನು ಉದ್ಘಾಟಿಸಿದ್ದರು. ಮತ್ತು ಈಗ ನಾವು ಶೀಘ್ರದಲ್ಲೇ ಎರಡನೇ ಘಟಕವನ್ನು ನಿಯೋಜಿಸುವತ್ತ ಕೆಲಸ ಮಾಡುತ್ತಿದ್ದೇವೆ. ಇಂಧನ ಸಹಕಾರಕ್ಕೆ ಸಂಬಂಧಿಸಿದಂತೆ, ನಮ್ಮ ಪೆಟ್ರೋಲಿಯಂ ವ್ಯಾಪಾರವು 1 ಶತಕೋಟಿ ಡಾಲರ್ ದಾಟಿದೆ. ಹೈಡ್ರೋಕಾರ್ಬನ್‌ಗಳ ಸಂಪೂರ್ಣ ಮೌಲ್ಯ ಸರಪಳಿಯಲ್ಲಿ, ಅದು ಅಪ್-ಸ್ಟ್ರೀಮ್ ಆಗಿರಲಿ, ಮಿಡ್-ಸ್ಟ್ರೀಮ್ ಆಗಿರಲಿ ಅಥವಾ ಡೌನ್-ಸ್ಟ್ರೀಮ್ ಆಗಿರಲಿ ನಮ್ಮ ಸಂಪೂರ್ಣ ಸಹಕಾರವಿದೆ ಎಂಬುದು ಹೆಮ್ಮೆಯ ವಿಷಯವಾಗಿದೆ. ಈ ಕೊಳವೆ ಮಾರ್ಗದೊಂದಿಗೆ, ಈ ಸಹಕಾರವು ಮತ್ತಷ್ಟು ವಿಸ್ತಾರವಾಗಲಿದೆ.

ಈ ಯೋಜನೆಯಲ್ಲಿ ಭಾಗಿಯಾಗಿರುವ ಎಲ್ಲ ಅಧಿಕಾರಿಗಳನ್ನು, ವಿಶೇಷವಾಗಿ ʻನುಮಾಲಿಗಢ ಸಂಸ್ಕರಣಾಗಾರʼ ಮತ್ತು ʻಬಾಂಗ್ಲಾದೇಶ ಪೆಟ್ರೋಲಿಯಂ ಕಾರ್ಪೊರೇಷನ್ʼ ಅನ್ನು ನಾನು ಅಭಿನಂದಿಸಲು ಬಯಸುತ್ತೇನೆ.

ಗೌರವಾನ್ವಿತರೇ, 

ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ ಜನ್ಮ ದಿನಾಚರಣೆಯ ಒಂದು ದಿನದ ನಂತರ ಇಂದಿನ ಉದ್ಘಾಟನೆ ನಡೆಯುತ್ತಿರುವುದು ಎಂತಹ ಶುಭದಾಯಕ ಮತ್ತು ಕಾಕತಾಳೀಯ! ಬಂಗಬಂಧು ಅವರ 'ಶೋನಾರ್ ಬಾಂಗ್ಲಾ' ದೃಷ್ಟಿಕೋನವು ಇಡೀ ಪ್ರದೇಶದ ಸಾಮರಸ್ಯದ ಅಭಿವೃದ್ಧಿ ಮತ್ತು ಸಮೃದ್ಧಿಯನ್ನು ಒಳಗೊಂಡಿತ್ತು. ಈ ಜಂಟಿ ಯೋಜನೆಯು ಅವರ ದೂರದೃಷ್ಟಿಗೆ ಒಂದು ಪರಿಪೂರ್ಣ ಉದಾಹರಣೆಯಾಗಿದೆ. 

ಗೌರವಾನ್ವಿತರೇ,

ಭಾರತ-ಬಾಂಗ್ಲಾದೇಶದ ಸಹಕಾರದ ಪ್ರತಿಯೊಂದು ಅಂಶವೂ ನಿಮ್ಮ ಮಾರ್ಗದರ್ಶನದಿಂದ ಪ್ರಯೋಜನ ಪಡೆದಿದೆ. ಈ ಯೋಜನೆಯೂ ಅವುಗಳಲ್ಲಿ ಒಂದಾಗಿದೆ. ಈ ಕಾರ್ಯಕ್ರಮದಲ್ಲಿ ನನ್ನೊಂದಿಗೆ ಭಾಗವಹಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು. ಈ ಯೋಜನೆಯಿಂದ ಪ್ರಯೋಜನ ಪಡೆಯಲಿರುವ ಎಲ್ಲ ಜನರಿಗೆ ಅನೇಕಾನೇಕ ಅಭಿನಂದನೆಗಳು.

ಧನ್ಯವಾದಗಳು!

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India among top nations on CEOs confidence on investment plans: PwC survey

Media Coverage

India among top nations on CEOs confidence on investment plans: PwC survey
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಜನವರಿ 2025
January 21, 2025

Appreciation for PM Modi’s Effort Celebrating Culture and Technology