ಗೌರವಾನ್ವಿತ ದೊರೆಗಳೇ,
140 ಕೋಟಿ ಭಾರತೀಯರ ಪರವಾಗಿ ನನಗೆ ಮತ್ತು ನನ್ನ ನಿಯೋಗಕ್ಕೆ ನೀಡಿದ ಆತ್ಮೀಯ ಸ್ವಾಗತಕ್ಕಾಗಿ ನಾನು ನಿಮಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಭಾರತ ಮತ್ತು ಜೋರ್ಡಾನ್ ನಡುವಿನ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನೀವು ತುಂಬಾ ಸಕಾರಾತ್ಮಕ ಚಿಂತನೆಗಳನ್ನು ಮುಂದಿಟ್ಟಿದ್ದೀರಿ. ನಿಮ್ಮ ಸ್ನೇಹ ಮತ್ತು ಭಾರತಕ್ಕೆ ನಿಮ್ಮ ಆಳವಾದ ಬದ್ಧತೆಗಾಗಿ ನಾನು ನಿಮಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ,
ಈ ವರ್ಷ ನಾವು ನಮ್ಮ ರಾಜಕೀಯ ಸಂಬಂಧಗಳ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ. ಈ ಮೈಲಿಗಲ್ಲು ಮುಂಬರುವ ಹಲವು ವರ್ಷಗಳವರೆಗೆ ಹೊಸ ಶಕ್ತಿಯೊಂದಿಗೆ ಮುಂದುವರಿಯಲು ನಮಗೆ ಸ್ಫೂರ್ತಿ ನೀಡುತ್ತದೆ. ಇಂದಿನ ಸಭೆಯು ನಮ್ಮ ಸಂಬಂಧಕ್ಕೆ ಹೊಸ ವೇಗ ಮತ್ತಷ್ಟು ಬಲವನ್ನು ನೀಡುತ್ತದೆಂಬ ಸಂಪೂರ್ಣ ವಿಶ್ವಾಸ ನನಗಿದೆ. ವ್ಯಾಪಾರ, ರಸಗೊಬ್ಬರಗಳು, ಡಿಜಿಟಲ್ ತಂತ್ರಜ್ಞಾನ, ಮೂಲಸೌಕರ್ಯ ಮತ್ತು ಜನರಿಂದ ಜನರ ನಡುವಿನ ಸಂಬಂಧಗಳಂತಹ ಕ್ಷೇತ್ರಗಳಲ್ಲಿ ನಾವು ಸಹಕಾರವನ್ನು ಮತ್ತಷ್ಟು ವೃದ್ಧಿಸಲು ಬಯಸುತ್ತೇವೆ.
ಗೌರವಾನ್ವಿತ ದೊರೆಗಳೇ,
ನಾವು ಜಾಗತಿಕ ಮಟ್ಟದಲ್ಲೂ ಸಹ ಅತ್ಯಂತ ನಿಕಟ ಸಂಪರ್ಕ ಹೊಂದಿದ್ದೇವೆ. ಗಾಜಾ ವಿಚಾರದಲ್ಲಿ ಆರಂಭದಿಂದಲೂ ನೀವು ಅತ್ಯಂತ ಸಕ್ರಿಯ ಹಾಗೂ ಸಕಾರಾತ್ಮಕ ಪಾತ್ರವನ್ನು ವಹಿಸುತ್ತಿದ್ದೀರಿ. ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಮೇಲುಗೈ ಸಾಧಿಸುತ್ತದೆ ಎಂದು ನಾವೆಲ್ಲರೂ ಭಾವಿಸುತ್ತೇವೆ. ಭಯೋತ್ಪಾದನೆಯ ವಿರುದ್ಧ ನಮಗೆ ಸ್ಪಷ್ಟ ಮತ್ತು ಒಗ್ಗಟ್ಟಿನ ನಿಲುವಿದೆ. ನಿಮ್ಮ ನಾಯಕತ್ವದಲ್ಲಿ ಜೋರ್ಡಾನ್ ಭಯೋತ್ಪಾದನೆ, ಉಗ್ರವಾದ ಮತ್ತು ಮೂಲಭೂತವಾದದ ವಿರುದ್ಧ ಎಲ್ಲಾ ಮಾನವೀಯತೆಗೆ ಬಲವಾದ ಮತ್ತು ಕಾರ್ಯತಂತ್ರದ ಸಂದೇಶವನ್ನು ರವಾನಿಸಿದೆ. ಸೀಮಿತ ಗೋಷ್ಠಿಯಲ್ಲಿ ಈ ಪ್ರಮುಖ ಕ್ಷೇತ್ರದಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ನಾವು ಚರ್ಚಿಸಿದ್ದೇವೆ. 2018ರಲ್ಲಿ ನೀವು ಭಾರತಕ್ಕೆ ಭೇಟಿ ನೀಡಿದಾಗ ನಾವು ಇಸ್ಲಾಮಿಕ್ ಪರಂಪರೆಯ ಕುರಿತಾದ ಸಮ್ಮೇಳನದಲ್ಲಿ ಭಾಗವಹಿಸಿದ್ದೇವೆ. 2015ರಲ್ಲಿ ನಮ್ಮ ಮೊದಲ ಸಭೆಯು ವಿಶ್ವಸಂಸ್ಥೆಯ ನೇಪಥ್ಯದಲ್ಲಿ ಹಿಂಸಾತ್ಮಕ ಉಗ್ರವಾದವನ್ನು ಎದುರಿಸುವತ್ತ ಗಮನಹರಿಸಿದ ಕಾರ್ಯಕ್ರಮದಲ್ಲಿ ನಡೆದಿರುವುದನ್ನು ನಾನು ನೆನಪಿಸಿಕೊಳ್ಳುತ್ತೇನೆ. ನೀವು ಆಗಲೂ ಈ ವಿಷಯದ ಬಗ್ಗೆ ಸ್ಪೂರ್ತಿದಾಯಕ ಹೇಳಿಕೆಗಳನ್ನು ನೀಡಿದ್ದೀರಿ. ಮಿತವ್ಯಯವನ್ನು ಉತ್ತೇಜಿಸುವ ನಿಮ್ಮ ಪ್ರಯತ್ನಗಳು ಪ್ರಾದೇಶಿಕ ಶಾಂತಿಗೆ ಮಾತ್ರವಲ್ಲದೆ ಜಾಗತಿಕ ಶಾಂತಿಗೂ ಸಹ ಬಹಳ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ನಾವು ಒಟ್ಟಾಗಿ ಮುಂದುವರಿಯುತ್ತೇವೆ. ನಮ್ಮ ಪರಸ್ಪರ ಸಹಕಾರದ ಎಲ್ಲಾ ಇತರ ಆಯಾಮಗಳನ್ನು ನಾವು ಮತ್ತಷ್ಟು ಬಲಪಡಿಸುತ್ತೇವೆ. ಮತ್ತೊಮ್ಮೆ, ನಿಮ್ಮ ಆತ್ಮೀಯ ಆತಿಥ್ಯಕ್ಕಾಗಿ ನಾನು ನಿಮಗೆ ಮತ್ತು ಜೋರ್ಡಾನ್ ಜನರಿಗೆ ಪ್ರಾಮಾಣಿಕವಾಗಿ ಧನ್ಯವಾದ ತಿಳಿಸಬಯಸುತ್ತೇನೆ.


