"ವಿಶ್ವಾದ್ಯಂತ ಯೋಗಾಭ್ಯಾಸ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ"
"ಯೋಗದ ವಾತಾವರಣ, ಅದರ ಶಕ್ತಿ ಮತ್ತು ಅನುಭವವನ್ನು ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಣಬಹುದಾಗಿದೆ"
"ಇಂದು ಹೊಸ ಯೋಗ ಆರ್ಥಿಕತೆ ಹೊರಹೊಮ್ಮುತ್ತಿರುವುದನ್ನು ಜಗತ್ತು ನೋಡುತ್ತಿದೆ"
"ವಿಶ್ವವು ಯೋಗವನ್ನು ಜಾಗತಿಕ ಒಳಿತಿನ ಪ್ರಬಲ ಸಾಧನವನ್ನಾಗಿ ನೋಡುತ್ತಿದೆ"
“ಯೋಗವು ಗತದ ಹೊರೆಯಿಂದ ಹೊರಬಂದು, ಪ್ರಸ್ತುತ ಕ್ಷಣದಲ್ಲಿ ಜೀವಿಸಲು ಸಹಾಯ ಮಾಡುತ್ತದೆ”
“ಯೋಗವು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತಿದೆ"
"ನಮ್ಮ ಕಲ್ಯಾಣವು ನಮ್ಮ ಸುತ್ತಲಿನ ಪ್ರಪಂಚದ ಕಲ್ಯಾಣದೊಂದಿಗೆ ನಂಟು ಹೊಂದಿದೆ ಎಂಬ ಅರಿವು ಮೂಡಲು ಯೋಗವು ನಮಗೆ ಸಹಾಯ ಮಾಡುತ್ತದೆ"
"ಯೋಗವು ಕೇವಲ ಶಿಸ್ತು ಮಾತ್ರವಲ್ಲ, ಅದೊಂದು ವಿಜ್ಞಾನವೂ ಹೌದು"

ಅಂತಾರಾಷ್ಟ್ರೀಯ ಯೋಗ ದಿನದಂದು ಯೋಗ ಮತ್ತು ಧ್ಯಾನದ ತಪೋಭೂಮಿ ಕಾಶ್ಮೀರದಲ್ಲಿ ಇರುವುದು ನನ್ನ ಸುದೈವವಾಗಿದೆ. ಕಾಶ್ಮೀರ ಮತ್ತು ಶ್ರೀನಗರದ ಪರಿಸರ, ಶಕ್ತಿ ಮತ್ತು ಅನುಭವಗಳು ಯೋಗದಿಂದ ನಾವು ಪಡೆಯುವ ಶಕ್ತಿಯನ್ನು ಅನುಭವಿಸಲು ಅನುವು ಮಾಡಿಕೊಡುತ್ತವೆ. ವಿಶ್ವ ಯೋಗ ದಿನದಂದು ನನ್ನೆಲ್ಲಾ ದೇಶವಾಸಿಗಳಿಗೆ ಮತ್ತು ಪ್ರಪಂಚದ ಮೂಲೆ ಮೂಲೆಯಲ್ಲಿ ಯೋಗಾಭ್ಯಾಸ ಮಾಡುತ್ತಿರುವವರಿಗೆ ನಾನು ಕಾಶ್ಮೀರದ ನೆಲದಿಂದ ಶುಭಾಶಯಗಳನ್ನು ಕೋರುತ್ತೇನೆ.

ಮಿತ್ರರೇ,

ಅಂತಾರಾಷ್ಟ್ರೀಯ ಯೋಗ ದಿನವು 10 ವರ್ಷಗಳ ಐತಿಹಾಸಿಕ ಪಯಣವನ್ನು ಪೂರ್ಣಗೊಳಿಸಿದೆ. 2014 ರಲ್ಲಿ ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಬಗ್ಗೆ ನಾನು ಪ್ರಸ್ತಾಪಿಸಿದೆ. ಭಾರತ ಸಲ್ಲಿಸಿದ ಈ ಪ್ರಸ್ತಾಪವನ್ನು 177 ದೇಶಗಳು ಬೆಂಬಲಿಸಿದವು, ಇದೂ ಕೂಡ ಸ್ವತಃ ದಾಖಲೆಯಾಗಿದೆ. ಅಂದಿನಿಂದ ಯೋಗ ದಿನ ಹೊಸ ದಾಖಲೆಗಳನ್ನು ಬರೆಯುತ್ತಿದೆ. 2015ರಲ್ಲಿ ದೆಹಲಿಯ ಕರ್ತವ್ಯ ಪಥದಲ್ಲಿ 35,000 ಜನರು ಒಗ್ಗೂಡಿ ಯೋಗಾಭ್ಯಾಸ ಮಾಡಿದ್ದು ವಿಶ್ವದಾಖಲೆಯಾಗಿತ್ತು. ಕಳೆದ ವರ್ಷ, ಯುನೈಟೆಡ್‌ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿನ ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ಯೋಗ ದಿನಾಚರಣೆಯನ್ನು ಮುನ್ನಡೆಸಲು ನನಗೆ ಅವಕಾಶ ಸಿಕ್ಕಿತ್ತು, ಅಲ್ಲಿ 130 ಕ್ಕೂ ಅಧಿಕ ದೇಶಗಳ ಜನರು ಭಾಗವಹಿಸಿದ್ದರು. ಯೋಗದ ಈ ಪಯಣ ಅಖಂಡವಾಗಿ ಮುಂದುವರಿಯುತ್ತದೆ. ಆಯುಷ್ ಇಲಾಖೆಯು ಭಾರತದಲ್ಲಿ ಯೋಗ ಸಾಧಕರಿಗೆ ಯೋಗ ಪ್ರಮಾಣೀಕರಣ ಮಂಡಳಿಯನ್ನು ಸ್ಥಾಪಿಸಿದೆ. ಇಂದು ದೇಶದ 100ಕ್ಕೂ ಅಧಿಕ ಪ್ರಮುಖ ಸಂಸ್ಥೆಗಳು ಈ ಮಂಡಳಿಯಿಂದ ಮಾನ್ಯತೆ ಪಡೆದುಕೊಂಡಿರುವುದು ನನಗೆ ಸಂತಸ ತಂದಿದೆ. ವಿದೇಶದ ಹತ್ತು ಪ್ರಮುಖ ಸಂಸ್ಥೆಗಳೂ ಈ ಮಂಡಳಿಯಿಂದ ಮನ್ನಣೆ ದೊರಕಿದೆ.

 

ಮಿತ್ರರೇ,

ಜಗತ್ತಿನಾದ್ಯಂತ ಯೋಗಾಭ್ಯಾಸ ಮಾಡುವವರ ಸಂಖ್ಯೆಯು ಸ್ಥಿರವಾಗಿ ಹೆಚ್ಚುತ್ತಿದೆ ಮತ್ತು ಯೋಗದಡೆಗಿನ  ಆಕರ್ಷಣೆಯೂ ದಿನೇ ದಿನೇ ಹೆಚ್ಚುತ್ತಿದೆ. ಯೋಗದ ಉಪಯುಕ್ತತೆಯ ಬಗ್ಗೆ ಜನರಿಗೆ ಹೆಚ್ಚಿನ ಮನವರಿಕೆಯಾಗಿದೆ. ನಾನು ಜಗತ್ತಿನ ಎಲ್ಲೆ  ಜಾಗತಿಕ ನಾಯಕರನ್ನು ಭೇಟಿಯಾದಾಗ, ಬಹುತೇಕ ಎಲ್ಲರೂ ನನ್ನೊಂದಿಗೆ ಯೋಗದ ಬಗ್ಗೆ ಮಾತನಾಡುತ್ತಾರೆ. ವಿಶ್ವದಾದ್ಯಂತದ ಹಿರಿಯ ನಾಯಕರು  ನನ್ನೊಂದಿಗೆ ಯೋಗದ ಬಗ್ಗೆ ಚರ್ಚಿಸುತ್ತಾರೆ ಮತ್ತು ಬಹಳ ಕುತೂಹಲದಿಂದ ಪ್ರಶ್ನೆಗಳನ್ನು ಕೇಳುತ್ತಾರೆ. ಅನೇಕ ದೇಶಗಳಲ್ಲಿ ಯೋಗವು ದೈನಂದಿನ ಜೀವನದ ಭಾಗವಾಗುತ್ತಿದೆ. 2015ರಲ್ಲಿ  ನಾನು ತುರ್ಕಮೆನಿಸ್ತಾನ್‌ದಲ್ಲಿ ಯೋಗ ಕೇಂದ್ರವನ್ನು ಉದ್ಘಾಟಿಸಿದ್ದು ನೆನಪಾಗುತ್ತಿದೆ. ಅಲ್ಲಿ ಇಂದು ಯೋಗವು ಬಹು ಜನಪ್ರಿಯವಾಗಿದೆ. ತುರ್ಕಮೆನಿಸ್ತಾನ್ ರಾಜ್ಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಯೋಗ ಚಿಕಿತ್ಸೆಯನ್ನು ಸೇರಿಸಿದೆ. ಸೌದಿ ಅರೇಬಿಯಾ ತನ್ನ ಶಿಕ್ಷಣ ವ್ಯವಸ್ಥೆಯಲ್ಲಿ ಯೋಗವನ್ನು ಕೂಡ ಸೇರಿಸಿದೆ. ಮಂಗೋಲಿಯನ್ ಯೋಗ ಫೌಂಡೇಶನ್ ಅಡಿಯಲ್ಲಿ ಮಂಗೋಲಿಯಾದಲ್ಲಿ ಹಲವಾರು ಯೋಗ ಶಾಲೆಗಳನ್ನು ನಡೆಸಲಾಗುತ್ತಿದೆ. ಯೂರೋಪ್ ರಾಷ್ಟ್ರಗಳಲ್ಲೂ ಯೋಗದ ಟ್ರೆಂಡ್ ದಿನೇ ದಿನೇ ವೇಗವಾಗಿ ಹೆಚ್ಚುತ್ತಿದೆ. ಇಂದು ಜರ್ಮನಿಯಲ್ಲಿ ಸುಮಾರು 1.5 ಕೋಟಿ ಜನರು ಯೋಗ ಪಟುಗಳಾಗಿದ್ದಾರೆ. ನಿಮಗೆ ನೆನಪಿರಬಹುದು, ಫ್ರಾನ್ಸ್‌ನ 101 ವರ್ಷದ ಮಹಿಳಾ ಯೋಗ ಶಿಕ್ಷಕಿಯೊಬ್ಬರು ಈ ವರ್ಷ ಭಾರತದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. ಅವರು ಭಾರತಕ್ಕೆ ಎಂದಿಗೂ ಬಂದಿರಲಿಲ್ಲ, ಆದರೆ ಅವರು ತನ್ನ ಇಡೀ ಜೀವನವನ್ನು ಯೋಗದ ಪ್ರಚಾರಕ್ಕೆ ಮೀಸಲಿದ್ದಾರೆ.  ಇಂದು ವಿಶ್ವಾದ್ಯಂತ ಪ್ರಮುಖ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳು ಯೋಗದ ಕುರಿತು ಸಂಶೋಧನೆ ನಡೆಸುತ್ತಿವೆ ಮತ್ತು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುತ್ತಿವೆ.

ಮಿತ್ರರೇ,

ಕಳೆದ ಹತ್ತು ವರ್ಷಗಳಲ್ಲಿ ಯೋಗದ ವಿಸ್ತರಣೆಯು ಯೋಗದ ಜತೆ ಸಂಬಂಧಿಸಿದ ಗ್ರಹಿಕೆ ಅಥವಾ ಪರಿಕಲ್ಪನೆಗಳನ್ನು ಬದಲಾಯಿಸಿದೆ. ಯೋಗ ಈಗ ಸೀಮಿತ ಗಡಿಗಳನ್ನು ದಾಟಿ ಹೊರಹೋಗುತ್ತಿದೆ. ಹೊಸ ಯೋಗ ಆರ್ಥಿಕತೆಯ ಉದಯಕ್ಕೆ ಜಗತ್ತು ಸಾಕ್ಷಿಯಾಗುತ್ತಿದೆ. ಭಾರತದಲ್ಲಿ, ಋಷಿಕೇಶ ಮತ್ತು ಕಾಶಿಯಿಂದ ಕೇರಳದವರೆಗೆ ಯೋಗ ಪ್ರವಾಸೋದ್ಯಮದ ಹೊಸ ಪ್ರವೃತ್ತಿಯನ್ನು ಗಮನಿಸಲಾಗುತ್ತಿದೆ. ಜಗತ್ತಿನಾದ್ಯಂತ ಪ್ರವಾಸಿಗರು ಭಾರತಕ್ಕೆ ಬರುತ್ತಿದ್ದಾರೆ, ಏಕೆಂದರೆ ಅವರು ಅಧಿಕೃತ ಯೋಗವನ್ನು ಕಲಿಯಲು ಬಯಸುತ್ತಿದ್ದಾರೆ. ಯೋಗ ಹಿಮ್ಮೆಟ್ಟುವಿಕೆ ಮತ್ತು ಯೋಗ ರೆಸಾರ್ಟ್‌ಗಳನ್ನು ಸ್ಥಾಪಿಸಲಾಗುತ್ತಿದೆ. ವಿಮಾನ ನಿಲ್ದಾಣಗಳು ಮತ್ತು ಹೋಟೆಲ್‌ಗಳಲ್ಲಿ ಯೋಗಕ್ಕಾಗಿ ಮೀಸಲಾದ ಸೌಲಭ್ಯಗಳನ್ನು ಸೃಷ್ಟಿಸಲಾಗುತ್ತಿದೆ. ಮಾರುಕಟ್ಟೆಯು ಯೋಗಕ್ಕಾಗಿ ವಿನ್ಯಾಸಕ ಉಡುಪುಗಳು ಮತ್ತು ಸಲಕರಣೆಗಳನ್ನು ನೋಡುತ್ತಿದೆ. ಜನರು ಈಗ ತಮ್ಮ ದೈಹಿಕ ಕ್ಷಮತೆ (ಫಿಟ್‌ನೆಸ್‌)ಗಾಗಿ ವೈಯಕ್ತಿಕ ಯೋಗ ತರಬೇತುದಾರರನ್ನು ನೇಮಿಸಿಕೊಳ್ಳುತ್ತಿದ್ದಾರೆ. ಉದ್ಯೋಗಿ ಕ್ಷೇಮ ಉಪಕ್ರಮಗಳ ಭಾಗವಾಗಿ ಕಂಪನಿಗಳು ಯೋಗ ಮತ್ತು ಸಾವಧಾನತೆ ಕಾರ್ಯಕ್ರಮಗಳನ್ನು ಆರಂಭಿಸುತ್ತಿವೆ. ಇವೆಲ್ಲವೂ ಯುವಕರಿಗೆ ಹೊಸ ಅವಕಾಶಗಳು ಮತ್ತು ಉದ್ಯೋಗಗಳನ್ನು ಸೃಷ್ಟಿಸಿವೆ

 

ಮಿತ್ರರೇ,

ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ ಘೋಷವಾಕ್ಯ 'ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ'. ಯೋಗವನ್ನು ಜಾಗತಿಕ ಒಳಿತಿನ ಪ್ರಬಲ ಪ್ರತಿನಿಧಿಯಾಗಿ ಜಗತ್ತು ನೋಡುತ್ತಿದೆ. ಯೋಗವು ಗತಕಾಲದ ಸಾಮಾನು ಸರಂಜಾಮು ಇಲ್ಲದೆ ಸದ್ಯದ ಕ್ಷಣದಲ್ಲಿ ಬದುಕಲು ನಮಗೆ ಸಹಾಯ ಮಾಡುತ್ತದೆ. ಇದು ನಮ್ಮೊಂದಿಗೆ ಮತ್ತು ನಮ್ಮ ಆಳವಾದ ಭಾವನೆಗಳೊಂದಿಗೆ ನಮ್ಮನ್ನು ಸಂಪರ್ಕಿಸುತ್ತದೆ. ಇದು ಮನಸ್ಸು, ದೇಹ ಮತ್ತು ಆತ್ಮದ ಏಕತೆಯನ್ನು ತರುತ್ತದೆ. ಯೋಗವು ನಮ್ಮ ಯೋಗಕ್ಷೇಮವು ನಮ್ಮ ಸುತ್ತಲಿನ ಪ್ರಪಂಚದ ಕಲ್ಯಾಣಕ್ಕೆ ಸಂಬಂಧಿಸಿದೆ ಎಂದು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ನಾವು ಶಾಂತವಾಗಿದ್ದಾಗ, ನಾವು ಪ್ರಪಂಚದ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಹುದು.

ಮಿತ್ರರೇ,

ಯೋಗವು ಕೇವಲ ಒಂದು ಶಿಸ್ತು ಮಾತ್ರವಲ್ಲ, ವಿಜ್ಞಾನವೂ ಆಗಿದೆ. ಮಾಹಿತಿ ಕ್ರಾಂತಿಯ ಈ ಯುಗದಲ್ಲಿ, ಎಲ್ಲೆಡೆ ಮಾಹಿತಿ ಸಂಪನ್ಮೂಲಗಳ ಪ್ರವಾಹವು ಹರಿಯುತ್ತಿದ್ದು,  ಯಾವುದೇ ಒಂದು ವಿಷಯದ ಮೇಲೆ ಕೇಂದ್ರೀಕರಿಸುವುದು ಮಾನವನ ಮನಸ್ಸಿಗೆ ದೊಡ್ಡ ಸವಾಲಾಗಿದೆ. ಇದಕ್ಕೂ ಯೋಗ ಪರಿಹಾರ ನೀಡುತ್ತದೆ. ಏಕಾಗ್ರತೆಯೇ ಮನುಷ್ಯನ ಮನಸ್ಸಿನ ದೊಡ್ಡ ಶಕ್ತಿ ಎಂಬುದು ನಮಗೆ ತಿಳಿದಿದೆ. ಯೋಗ ಮತ್ತು ಧ್ಯಾನದ ಮೂಲಕವೂ ಈ ಸಾಮರ್ಥ್ಯ ವೃದ್ಧಿಯಾಗುತ್ತದೆ. ಆದ್ದರಿಂದ, ಯೋಗವನ್ನು ಕ್ರೀಡೆಯಿಂದ ಸೇನೆಯವರೆಗೆ ಹಲವು ವಿಭಾಗಗಳಲ್ಲಿ ಸೇರ್ಪಡೆ ಮಾಡಲಾಗುತ್ತಿದೆ. ಗಗನಯಾತ್ರಿಗಳಿಗೆ ಅವರ ಬಾಹ್ಯಾಕಾಶ ಕಾರ್ಯಕ್ರಮದ ತರಬೇತಿಯ ಭಾಗವಾಗಿ ಯೋಗ ಮತ್ತು ಧ್ಯಾನ ತರಬೇತಿಯನ್ನು ಸಹ ನೀಡಲಾಗುತ್ತದೆ. ಇದು ಉತ್ಪಾದಕತೆ ಮತ್ತು ಸಹಿಷ್ಣುತೆಯನ್ನು ವೃದ್ಧಿಸುತ್ತದೆ. ಇತ್ತೀಚಿನ ದಿನಗಳಲ್ಲಿ, ಅನೇಕ ಜೈಲುಗಳಲ್ಲಿ ಕೈದಿಗಳಿಗೂ ಸಹ ಯೋಗಾಭ್ಯಾಸವನ್ನು ಮಾಡಿಸಲಾಗುತ್ತಿದೆ, ಆದ್ದರಿಂದ ಅವರು ತಮ್ಮ ಮನಸ್ಸನ್ನು ಸಕಾರಾತ್ಮಕ ಆಲೋಚನೆಗಳತ್ತ ಕೇಂದ್ರೀಕರಿಸಬಹುದು. ಯೋಗ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ನಾಂದಿ ಹಾಡುತ್ತಿದೆ.

 

ಮಿತ್ರರೇ,

ಯೋಗದಿಂದ ಸಿಗುತ್ತಿರುವ ಈ ಸ್ಪೂರ್ತಿ ನಮ್ಮ ಸಾಕಾರಾತ್ಮಕ ಪ್ರಯತ್ನಗಳನ್ನು ಮುಂದುವರಿಸಲು ನಮಗೆ ಶಕ್ತಿಯನ್ನು ನೀಡುತ್ತದೆಂದು ನಾನು ನಂಬಿದ್ದೇನೆ.

ಮಿತ್ರರೇ,

ಮಳೆಯ ಅಡ್ಡಿಯಿಂದಾಗಿ ಇಂದು ಸ್ವಲ್ಪ ವಿಳಂಬವಾಗಿದೆ, ಆದರೆ ನಿನ್ನೆಯಿಂದ ಯೋಗದತ್ತ ಆಕರ್ಷಣೆ ಮತ್ತು ಜಮ್ಮು ಮತ್ತು ಕಾಶ್ಮೀರದ ವಿಶೇಷವಾಗಿ ಶ್ರೀನಗರದ ಜನರು ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಲು ಅತ್ಯಂತ ಉತ್ಸುಕರಾಗಿರುವುದವನ್ನು ನಾನು ನೋಡಿದ್ದೇನೆ.  ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸೋದ್ಯಮವನ್ನು ಬಲವರ್ಧನೆಗೊಳಿಸಲು ಇದು ಒಂದು ಅವಕಾಶವಾಗಿದೆ. ಈ ಕಾರ್ಯಕ್ರಮದ ನಂತರ ನಾನು ಖಂಡಿತವಾಗಿಯೂ ಯೋಗಕ್ಕೆ ಸಂಬಂಧಿಸಿದ ಜನರನ್ನು ಭೇಟಿ ಮಾಡುತ್ತೇನೆ. ಮಳೆಯಿಂದಾಗಿ ಇಂದು ಇಲ್ಲಿಯೇ ಕಾರ್ಯಕ್ರಮ ನಡೆಸಬೇಕಾಯಿತು. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ 50-60 ಸಾವಿರ ಜನರು ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ದೊಡ್ಡ ಸಾಧನೆ ಎಂದು ನಾನು ಭಾವಿಸುತ್ತೇನೆ ಮತ್ತು ಅದಕ್ಕಾಗಿ ಜಮ್ಮು ಮತ್ತು ಕಾಶ್ಮೀರದ ಜನರನ್ನು ನಾನು ಅಭಿನಂದಿಸುತ್ತೇನೆ. ಮತ್ತೊಮ್ಮೆ ನಿಮ್ಮೆಲ್ಲರಿಗೂ ಯೋಗ ದಿನದ ಶುಭಾಶಯಗಳನ್ನು ಕೋರುತ್ತೇನೆ. ಜಗತ್ತಿನಾದ್ಯಂತ ಇರುವ ಎಲ್ಲಾ ಯೋಗಾಸಕ್ತರಿಗೂ ನನ್ನ ಶುಭಾಶಯಗಳು.

ತುಂಬಾ ತುಂಬಾ ಧನ್ಯವಾದಗಳು!

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India on track to becoming third-largest economy by FY31: S&P report

Media Coverage

India on track to becoming third-largest economy by FY31: S&P report
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 20 ಸೆಪ್ಟೆಂಬರ್ 2024
September 20, 2024

Appreciation for PM Modi’s efforts to ensure holistic development towards Viksit Bharat