ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು, ಬಿಹಾರದ ಬಕ್ಸರ್-ಭಾಗಲ್ಪುರ್ ಹೈ-ಸ್ಪೀಡ್ ಕಾರಿಡಾರ್ ನ ಮೊಕಾಮಾ-ಮುಂಗೇರ್ ವಿಭಾಗದ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಇದು 4 ಪಥದ ಗ್ರೀನ್ ಫೀಲ್ಡ್, ಪ್ರವೇಶ-ನಿಯಂತ್ರಿತ ರಸ್ತೆಯಾಗಿದ್ದು, ಇದನ್ನು ಹೈಬ್ರಿಡ್ ಆನ್ಯುಟಿ ಮೋಡ್ (HAM) ಅಡಿಯಲ್ಲಿ ನಿರ್ಮಿಸಲಾಗುವುದು. ಈ ಯೋಜನೆಯ ಒಟ್ಟು ಉದ್ದ 82.400 ಕಿ.ಮೀ ಇದ್ದು, ಒಟ್ಟು ಬಂಡವಾಳ ವೆಚ್ಚ ₹4,447.38 ಕೋಟಿ ಆಗಿದೆ.
ಈ ವಿಭಾಗವು ಮೊಕಾಮಾ, ಬರಾಹಿಯಾ, ಲಖಿಸರಾಯ್, ಜಮಾಲ್ ಪುರ್, ಮುಂಗೇರ್ ನಂತಹ ಪ್ರಮುಖ ಪ್ರಾದೇಶಿಕ ನಗರಗಳನ್ನು ಹಾದುಹೋಗುತ್ತದೆ ಅಥವಾ ಸಂಪರ್ಕಿಸುತ್ತದೆ. ಇದು ಭಾಗಲ್ಪುರ್ ಗೂ ಸಂಪರ್ಕ ಒದಗಿಸುತ್ತದೆ, ಇದನ್ನು ಅನುಬಂಧ-Iರ ನಕ್ಷೆಯಲ್ಲಿ ಸೂಚಿಸಲಾಗಿದೆ.
ಪೂರ್ವ ಬಿಹಾರದಲ್ಲಿರುವ ಮುಂಗೇರ್-ಜಮಾಲ್ ಪುರ್-ಭಾಗಲ್ಪುರ್ ಪ್ರದೇಶವು ಒಂದು ಪ್ರಮುಖ ಕೈಗಾರಿಕಾ ವಲಯವಾಗಿ ಅಭಿವೃದ್ಧಿ ಹೊಂದುತ್ತಿದೆ. ಇಲ್ಲಿ ಆರ್ಡಿನೆನ್ಸ್ ಫ್ಯಾಕ್ಟರಿ (ಅಸ್ತಿತ್ವದಲ್ಲಿರುವ ಗನ್ ಫ್ಯಾಕ್ಟರಿ ಮತ್ತು ರಕ್ಷಣಾ ಸಚಿವಾಲಯವು ಪ್ರಸ್ತಾಪಿಸಿರುವ ಇನ್ನೊಂದು), ಲೋಕೋಮೋಟಿವ್ ಕಾರ್ಯಾಗಾರ (ಜಮಾಲ್ಪುರದಲ್ಲಿ), ಆಹಾರ ಸಂಸ್ಕರಣಾ ಘಟಕಗಳು (ಉದಾಹರಣೆಗೆ, ಮುಂಗೇರ್ ನಲ್ಲಿರುವ ಐಟಿಸಿ) ಮತ್ತು ಸಂಬಂಧಿತ ಲಾಜಿಸ್ಟಿಕ್ಸ್ ಹಾಗೂ ಗೋದಾಮುಗಳ ಹಬ್ ಗಳು ಕಾರ್ಯನಿರ್ವಹಿಸುತ್ತಿವೆ. ಭಾಗಲ್ಪುರ್ ತನ್ನ ಭಾಗಲ್ಪುರಿ ರೇಷ್ಮೆಗೆ ಹೆಸರುವಾಸಿಯಾಗಿದ್ದು, ಜವಳಿ ಮತ್ತು ಲಾಜಿಸ್ಟಿಕ್ಸ್ ಹಬ್ ಆಗಿ ಗಮನ ಸೆಳೆಯುತ್ತಿದೆ. ಬರಾಹಿಯಾ ಆಹಾರ ಪ್ಯಾಕೇಜಿಂಗ್, ಸಂಸ್ಕರಣೆ ಮತ್ತು ಕೃಷಿ-ಗೋದಾಮುಗಳ ಪ್ರದೇಶವಾಗಿ ಹೊರಹೊಮ್ಮುತ್ತಿದೆ. ಈ ವಲಯದಲ್ಲಿ ಹೆಚ್ಚುತ್ತಿರುವ ಆರ್ಥಿಕ ಚಟುವಟಿಕೆಗಳಿಂದಾಗಿ ಭವಿಷ್ಯದಲ್ಲಿ ಮೊಕಾಮಾ-ಮುಂಗೇರ್ ವಿಭಾಗದಲ್ಲಿ ಸರಕು ಸಾಗಣೆ ಮತ್ತು ಸಂಚಾರ ಹೆಚ್ಚಾಗುವ ನಿರೀಕ್ಷೆಯಿದೆ.
ಈ 4 ಪಥದ ಪ್ರವೇಶ-ನಿಯಂತ್ರಿತ ಕಾರಿಡಾರ್ ನಲ್ಲಿ ವಾಹನಗಳ ಸರಾಸರಿ ವೇಗ ಗಂಟೆಗೆ 80 ಕಿ.ಮೀ ಇದ್ದು, ಅದನ್ನು ಗಂಟೆಗೆ 100 ಕಿ.ಮೀ ವೇಗದಲ್ಲಿ ಸಂಚರಿಸಲು ವಿನ್ಯಾಸಗೊಳಿಸಲಾಗಿದೆ. ಇದು ಒಟ್ಟಾರೆ ಪ್ರಯಾಣದ ಸಮಯವನ್ನು ಸುಮಾರು 1.5 ಗಂಟೆಗಳಷ್ಟು ಕಡಿಮೆ ಮಾಡಲಿದೆ. ಇದು ಪ್ರಯಾಣಿಕ ಮತ್ತು ಸರಕು ವಾಹನಗಳಿಗೆ ಸುರಕ್ಷಿತ, ವೇಗದ ಮತ್ತು ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ.
82.40 ಕಿ.ಮೀ ಉದ್ದದ ಈ ಯೋಜನೆಯು ಸುಮಾರು 14.83 ಲಕ್ಷ ಮಾನವ ದಿನಗಳ ನೇರ ಉದ್ಯೋಗವನ್ನು ಮತ್ತು 18.46 ಲಕ್ಷ ಮಾನವ ದಿನಗಳ ಪರೋಕ್ಷ ಉದ್ಯೋಗವನ್ನು ಸೃಷ್ಟಿಸುತ್ತದೆ. ಈ ಕಾರಿಡಾರ್ ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುವುದರಿಂದ ಹೆಚ್ಚುವರಿ ಉದ್ಯೋಗಾವಕಾಶಗಳು ಕೂಡ ಸೃಷ್ಟಿಯಾಗಲಿವೆ.
ಅನುಬಂಧ-I
ಮೊಕಾಮಾ-ಮುಂಗರ್ಗಾಗಿ ಯೋಜನೆಯ ಜೋಡಣೆ ನಕ್ಷೆ



