“ಒಂದು ಕಡೆ ನಾವು ಏಕ ಬಳಕೆ ಪ್ಲಾಸ್ಟಿಕ್ ನಿಷೇಧಿಸಿದ್ದೇವೆ, ಮತ್ತೊಂದೆಡೆ ನಾವು ಪ್ಲಾಸ್ಟಿಕ್‌ ತ್ಯಾಜ್ಯ ಸಂಸ್ಕರಣೆ ಕಡ್ಡಾಯಗೊಳಿಸಿದ್ದೇವೆ’’
“21ನೇ ಶತಮಾನದ ಭಾರತ ಹವಾಮಾನ ಬದಲಾವಣೆ ಮತ್ತು ಪರಿಸರ ಸಂರಕ್ಷಣೆ ಕುರಿತು ಸ್ಪಷ್ಟ ನೀಲನಕ್ಷೆಯೊಂದಿಗೆ ಮುನ್ನಡೆಯುತ್ತಿದೆ’’
“ಕಳೆದ 9 ವರ್ಷಗಳಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಜೌಗು ಪ್ರದೇಶಗಳು ಮತ್ತು ರಾಮ್ಸರ್‌ ಸ್ಥಳಗಳ ಸಂಖ್ಯೆ ಬಹುತೇಕ ಮೂರು ಪಟ್ಟು ಹೆಚ್ಚಳವಾಗಿದೆ’’
“ಜಾಗತಿಕ ಹವಾಮಾನ ಸಂರಕ್ಷಣೆಗೆ ಪ್ರತಿಯೊಂದು ದೇಶವೂ ಪಟ್ಟಭದ್ರ ಹಿತಾಸಕ್ತಿಗಳನ್ನು ಬದಿಗೊತ್ತಿ ಆಲೋಚಿಸಬೇಕು’’
“ಸಾವಿರಾರು ವರ್ಷಗಳಷ್ಟು ಹಳೆಯದಾದ ಭಾರತದ ಸಂಸ್ಕೃತಿಯಲ್ಲಿ ಪ್ರಕೃತಿಯ ಜೊತೆ ಪ್ರಗತಿಯೂ ಸಾಗಿದೆ’’
“ಮಿಷನ್ ಲೈಫ್‌ ಮೂಲ ತತ್ವ ಎಂದರೆ, ಜಗತ್ತನ್ನು ಬದಲಾಯಿಸಲು ನಾವು ನಮ್ಮ ಸ್ವಭಾವವನ್ನು ಬದಲಿಸಿಕೊಳ್ಳುವುದು’’
“ಹವಾಮಾನ ಬದಲಾವಣೆಯ ಪ್ರಜ್ಞೆಯು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ, ಈ ಉಪಕ್ರಮಕ್ಕೆ ವಿಶ್ವದಾದ್ಯಂತ ಜಾಗತಿಕ ಬೆಂಬಲ ವ್ಯಕ್ತವಾಗುತ್ತಿದೆ’’
“ಮಿಷನ್ ಲೈಫ್ ನಿಟ್ಟಿನಲ್ಲಿ ಕೈಗೊಳ್ಳುವ ಪ್ರತಿಯೊಂದು ಹೆಜ್ಜೆಯೂ ಮುಂದಿನ ದಿನಗಳಲ್ಲಿ ಪರಿಸರಕ್ಕೆ ಬಲಿಷ್ಠ ಕವಚವಾಗಲಿದೆ’’

ನಮಸ್ಕಾರ!

ವಿಶ್ವ ಪರಿಸರ ದಿನಾಚರಣೆಯಂದು ನಿಮ್ಮೆಲ್ಲರಿಗೂ, ದೇಶ ಹಾಗೂ ಜಗತ್ತಿನಾದ್ಯಂತ ಜನರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ. "ಏಕ ಬಳಕೆ ಪ್ಲಾಸ್ಟಿಕ್‌" ಬಳಕೆ ತೊಡೆದು ಹಾಕುವುದು ಈ ವರ್ಷದ ಪರಿಸರ ದಿನದ ಧ್ಯೇಯವಾಗಿದೆ. ಈ ಜಾಗತಿಕ ಉಪಕ್ರಮಕ್ಕೂ ಮೊದಲೇ ಭಾರತದವು ಕಳೆದ 4-5 ವರ್ಷಗಳಿಂದ ಈ ವಿಚಾರದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಲು ನನಗೆ ಸಂತೋಷವಾಗುತ್ತದೆ. ಹಿಂದೆ ಅಂದರೆ 2018ರ ಆರಂಭದಲ್ಲೇ ಭಾರತವು ಏಕ-ಬಳಕೆಯ ಪ್ಲಾಸ್ಟಿಕ್ ನಿರ್ಮೂಲನೆಗಾಗಿ ಎರಡು ಹಂತದ ಪ್ರಯತ್ನ ಆರಂಭಿಸಿತು. ಒಂದೆಡೆ ಏಕ ಬಳಕೆ ಪ್ಲಾಸ್ಟಿಕ್‌ ಮೇಲೆ ನಿಷೇಧ ಹೇರಿದ್ದರೆ ಮತ್ತೊಂದೆಡೆ ಪ್ಲಾಸ್ಟಿಕ್‌ ತ್ಯಾಜ್ಯದ ವೈಜ್ಞಾನಿಕ ಸಂಸ್ಕರಣೆಯನ್ನು ಕಡ್ಡಾಯಗೊಳಿಸಲಾಗಿತು. ಇದರ ಪರಿಣಾಮವಾಗಿ ದೇಶದಲ್ಲಿ ಸುಮಾರು 30 ಲಕ್ಷ ಟನ್‌ನಷ್ಟು ಪ್ಲಾಸ್ಟಿಕ್‌ ಪ್ಯಾಕೇಜಿಂಗ್‌ ಉತ್ಪನ್ನಗಳನ್ನು ಕಡ್ಡಾಯವಾಗಿ ಮರುಬಳಕೆ ಮಾಡಲಾಗುತ್ತಿದೆ. ಇದು ದೇಶದಲ್ಲಿ ವಾರ್ಷಿಕವಾಗಿ ಉತ್ಪತ್ತಿಯಾಗುವ ಶೇ. 75ರಷ್ಟು ಪ್ಲಾಸ್ಟಿಕ್‌ ತ್ಯಾಜ್ಯದಷ್ಟಾಗಿದೆ. ಈ ಪ್ಲಾಸ್ಟಿಕ್‌ ತ್ಯಾಜ್ಯ ಮರುಬಳಕೆ ಪ್ರಕ್ರಿಯೆಯಲ್ಲಿ 10000ಕ್ಕೂ ಹೆಚ್ಚು ಉತ್ಪಾದಕರು, ಆಮದುದಾರರು, ಪ್ರತಿಷ್ಠಿತ ಬ್ರ್ಯಾಂಡ್‌ನ ಮಾಲೀಕರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಸ್ನೇಹಿತರೇ,

21ನೇ ಶತಮಾನದಲ್ಲಿ, ಭಾರತವು ಹವಾಮಾನ ಬದಲಾವಣೆ ಮತ್ತು ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಸ್ಪಷ್ಟ ಮಾರ್ಗಸೂಚಿಯೊಂದಿಗೆ ಮುನ್ನಡೆಯುತ್ತಿದೆ. ಆ ಮೂಲಕ ಪ್ರಸ್ತುತ ಅಗತ್ಯಗಳು ಹಾಗೂ ಭವಿಷ್ಯದ ದೃಷ್ಟಿಕೋನದ ನಡುವೆ ಸಮತೋಲನ ಸಾಧಿಸಿದೆ. ಒಂದೆಡೆ ನಾವು ಕಡು ಬಡವರಾದವರಿಗೆ ನೆರವು ನೀಡಿ ಅವರ ಅಗತ್ಯಗಳಿಗೆ ಸ್ಪಂದಿಸಲು ಒತ್ತು ನೀಡಿದ್ದರೆ, ಮತ್ತೊಂದೆಡೆ, ಭವಿಷ್ಯದ ಇಂಧನದ (ವಿದ್ಯುತ್‌) ಅಗತ್ಯಗಳನ್ನು ಪರಿಣಾಮಕಾರಿಯಾಗಿ ಹೊಂದಿಸಿಕೊಳ್ಳುವಲ್ಲಿಯೂ ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದ್ದೇವೆ.

ಕಳೆದ ಒಂಬತ್ತು ವರ್ಷಗಳಲ್ಲಿ, ಭಾರತವು ಹಸಿರು ಮತ್ತು ಶುದ್ಧ ಇಂಧನ ಕ್ಷೇತ್ರದ ಅದ್ವಿತೀಯ ಆದ್ಯತೆ ನೀಡಲಾಗಿದೆ. ಆ ಮೂಲಕ ಸೌರಶಕ್ತಿ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡಲಾಗಿದ್ದು,  ಹಳೆಯ ಬಲ್ಬ್‌ಗಳಿಗೆ ಬದಲಾಗಿ ಎಲ್ಇಡಿ ಗಳು ದೊಡ್ಡ ಪ್ರಮಾಣಗಳಲ್ಲಿ ಮನೆಗಳಲ್ಲಿ ಬಳಕೆಯಾಗುತ್ತಿದೆ. ಇದರಿಂದ ನಮ್ಮ ಜನರಿಗೆ ಆರ್ಥಿಕ ಮಿತವ್ಯಯವಾಗಲಿದೆ. ವಿಶೇಷವಾಗಿ ಬಡ ಮತ್ತು ಮಧ್ಯಮ ವರ್ಗದವರಿಗೆ ಹಣ ಉಳಿತಾಯವಾಗುವ ಜತೆಗೆ ಪರಿಸರ ಸಂರಕ್ಷಣೆ ಕಾರ್ಯವೂ ನಡೆಯುತ್ತದೆ. ಪರಿಣಾಮಕವಾಗಿ, ವಿದ್ಯುತ್‌ ಬಳಕೆ ಶುಲ್ಕ ಮೊತ್ತ ನಿರಂತರವಾಗಿ ತಗ್ಗುತ್ತಿದೆ. ಜಗತ್ತನ್ನೇ ಕಾಡಿದ ಸಾಂಕ್ರಾಮಿಕ ರೋಗದ ಹಾವಳಿ ಸಮಯದಲ್ಲೂ ಈ ಕ್ಷೇತ್ರದಲ್ಲಿ ಭಾರತದ ನಾಯಕತ್ವವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಲಾಗಿದೆ. ಈ ಜಾಗತಿಕ ಸಾಂಕ್ರಾಮಿಕ ರೋಗ ಹಾವಳಿ ನಡುವೆಯೇ, ಭಾರತವು ʼಹಸಿರು ಜಲಜನಕ ಮಿಷನ್‌ʼ (ಮಿಷನ್ ಗ್ರೀನ್ ಹೈಡ್ರೋಜನ್) ಯೋಜನೆಯನ್ನೂ ಆರಂಭಿಸಿದೆ. ಜತೆಗೆ, ರಾಸಾಯನಿಕ ಗೊಬ್ಬರಗಳಿಂದ ಮಣ್ಣು ಮತ್ತು ನೀರನ್ನು ರಕ್ಷಿಸಲು ಹಾಗೂ ನೈಸರ್ಗಿಕ ಕೃಷಿ ಮತ್ತು ಸಾವಯವ ಕೃಷಿಯತ್ತ ಮುನ್ನಡೆಯಲು ದೇಶವು ಹಲವು ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದೆ.

ಸಹೋದರ ಸಹೋದರಿಯರೇ,

ಹಸಿರು ಭವಿಷ್ಯ ಮತ್ತು ಹಸಿರು ಆರ್ಥಿಕತೆಯ ಅಭಿಯಾನವನ್ನು ಮುಂದುವರಿಸುತ್ತಲೇ, ಇಂದು ಮತ್ತೆರಡು ಉಪ್ರಕಮಗಳ ಆರಂಭವನ್ನು ದಾಖಲಿಸಲಾಗುತ್ತಿದೆ. ಕಳೆದ ಒಂಬತ್ತು ವರ್ಷಗಳಲ್ಲಿ, ಭಾರತದಲ್ಲಿನ ಜೌಗು ಪ್ರದೇಶದ ಪ್ರಮಾಣವು ಹಿಂದಿನ ಸಂದರ್ಭಕ್ಕೆ ಹೋಲಿಸಿದರೆ ಸುಮಾರು ಮೂರು ಪಟ್ಟು ವೃದ್ಧಿಸಿದೆ. ಇದೀಗ ‘ಅಮೃತ ಧರೋಹರ್ ಯೋಜನೆ’ಯನ್ನು ಆರಂಭಿಸಲಾಗಿದೆ. ಈ ಯೋಜನೆಯಡಿ ಸಮುದಾಯದ ಸಹಭಾಗಿತ್ವದ ಮೂಲಕ ಈ ಜೌಗು ಪ್ರದೇಶಗಳ (ರಾಮ್‌ಸರ್ ಸೈಟ್‌ಗಳು) ಸಂರಕ್ಷಣೆಗೆ ಪ್ರಯತ್ನ ನಡೆಯಲಿದೆ. ಈ ತಾಣಗಳು ಪರಿಸರ ಪ್ರವಾಸೋದ್ಯಮದ ಕೇಂದ್ರಗಳಾಗುತ್ತವೆ. ಹಾಗೆಯೇ ಭವಿಷ್ಯದಲ್ಲಿ ಸಾವಿರಾರು ಜನರಿಗೆ ಪರಿಸರಸ್ನೇಹಿ ಉದ್ಯೋಗಗಳ ಮೂಲವಾಗಿ ಕಾರ್ಯನಿರ್ವಹಿಸಲಿವೆ. ಇನ್ನು ಎರಡನೇ ಉಪಕ್ರಮದ ಬಗ್ಗೆ ಹೇಳುವುದಾದರೆ, ದೇಶದ ವಿಸ್ತಾರವಾದ ಕರಾವಳಿ ಮತ್ತು ಅಲ್ಲಿ ನೆಲಸಿರುವ ಜನರಿಗೆ ಸಂಬಂಧಪಟ್ಟಿದ್ದಾಗಿದೆ. "ಮಿಷ್ಟಿ ಯೋಜನೆ" ಮೂಲಕ ದೇಶದ ಅಲ್ಲಿನ ಪರಿಸರ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವುದು ಹಾಗೂ ಸಂರಕ್ಷಿಸುವ ಗುರಿ ಹೊಂದಲಾಗಿದೆ. ಇದು ದೇಶದ ಒಂಬತ್ತು ರಾಜ್ಯಗಳಲ್ಲಿ 'ಮ್ಯಾಂಗ್ರೋವ್ʼ ಹೊದಿಕೆಯ ಮರುಸ್ಥಾಪನೆಗೆ ನೆರವಾಗಲಿದೆ. ಇದು ಸಮುದ್ರ ಮಟ್ಟವನ್ನು ಹೆಚ್ಚಿಸಲು ಮತ್ತು ಚಂಡಮಾರುತಗಳಂತಹ ವಿಪತ್ತುಗಳು ಕರಾವಳಿ ಪ್ರದೇಶಗಳ ಬೀರುವ ಪ್ರಭಾವವನ್ನು ತಗ್ಗಿಸಲು ಮಹತ್ವದ ಕೊಡುಗೆ ನೀಡಲಿವೆ. ಆ ಮೂಲಕ ಕರಾವಳಿ ಪ್ರದೇಶದ ಜನರ ಜೀವ ಸಂರಕ್ಷಣೆ ಜತೆಗೆ ಜೀವನ ಸುರಕ್ಷತೆಗೂ ಸಹಕಾರಿಯಾಗಲಿದೆ.

ಸ್ನೇಹಿತರೇ,
ಜಗತ್ತಿನ ಪ್ರತಿಯೊಂದು ದೇಶವು ತನ್ನ ಸ್ವ ಹಿತಾಸಕ್ತಿಯನ್ನೂ ಮೀರುವುದು ಹಾಗೂ ಜಾಗತಿಕ ಹವಾಮಾನದ ರಕ್ಷಣೆ ಬಗ್ಗೆ ಚಿಂತಿಸುವುದು ಬಹಳ ಮುಖ್ಯ. ಜಗತ್ತಿನ ಪ್ರಮುಖ ಮತ್ತು ಆಧುನಿಕ ದೇಶಗಳಲ್ಲಿ ದೀರ್ಘಕಾಲದವರೆಗೆ ಅಭಿವೃದ್ಧಿ ಮಾದರಿಯು ಹೆಚ್ಚು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಏಕೆಂದರೆ ಈ ಅಭಿವೃದ್ಧಿ ಮಾದರಿಯಲ್ಲಿ, ಮೊದಲಿಗೆ ತಮ್ಮ ದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡಿ ನಂತರದ ಒತ್ತನ್ನು ಪರಿಸರ ವಿಷಯಕ್ಕೆ ನೀಡಲಾಗುತ್ತದೆ. ಇದರಿಂದ ಈ ದೇಶಗಳು ತಮ್ಮ ಅಭಿವೃದ್ಧಿ ಗುರಿಗಳನ್ನು ಸಾಧಿಸಬಹುದು. ಆದರೆ ಆ ದೇಶಗಳ ಅಭಿವೃದ್ಧಿ ಮಾದರಿಯ ಹೊರೆಯನ್ನು ಜಗತ್ತಿನ ಇತರೆ ರಾಷ್ಟ್ರಗಳು  ಭರಿಸಬೇಕಾಗಿದೆ.  ಇಂದಿಗೂ ಸಹ ಅಭಿವೃದ್ಧಿ ಹೊಂದುತ್ತಿರುವ ಮತ್ತು ಹಿಂದುಳಿದ ದೇಶಗಳು ಕೆಲವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ತಪ್ಪು ಮಾದರಿ, ನೀತಿಗಳ ಅಡ್ಡ ಪರಿಣಾಮಗಳನ್ನು ಎದುರಿಸುವಂತಾಗಿವೆ. ದಶಕಗಳಿಂದ ಯಾರೊಬ್ಬರು, ಯಾವುದೇ ದೇಶವು ಸಹ ಆಯ್ದ ಅಭಿವೃದ್ಧಿ ಹೊಂದಿದ ದೇಶಗಳ ಈ ಅಭಿವೃದ್ಧಿ ಮಾದರಿಯನ್ನು ಪ್ರಶ್ನಿಸಲಿಲ್ಲ ಅಥವಾ ತಡೆಯಲಿಲ್ಲ. ಆದರೆ ಇಂದು ಭಾರತವು ಅಂತಹ ಪ್ರತಿಯೊಂದು ರಾಷ್ಟ್ರದ ಮುಂದೆ ಹವಾಮಾನ ನ್ಯಾಯದ ಪ್ರಶ್ನೆಯನ್ನು ಎತ್ತಿರುವುದಕ್ಕೆ ನನಗೆ ಸಂತೋಷವಾಗಿದೆ.

ಸ್ನೇಹಿತರೇ,
ಭಾರತದ ಪುರಾತನ ಸಂಸ್ಕೃತಿಯು ಪ್ರಕೃತಿ ಮತ್ತು ಪ್ರಗತಿ ಎರಡನ್ನೂ ಒಳಗೊಂಡಿತ್ತು. ಇದೇ ಸಿದ್ಧಾಂತದಿಂದ ಪ್ರೇರಿತವಾದ ಭಾರತವು ಇಂದು ಆರ್ಥಿಕತೆಗೆ ನೀಡುವಷ್ಟೇ ಆದ್ಯತೆಯನ್ನು ಪರಿಸರ ವಿಜ್ಞಾನದ ಮೇಲೂ ಕೇಂದ್ರೀಕರಿಸುತ್ತದೆ. ಭಾರತವು ತನ್ನ ಮೂಲಸೌಕರ್ಯ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿದ್ದರೂ ಪರಿಸರ ಸಂರಕ್ಷಣೆಗೂ ಅಷ್ಟೇ ಆದ್ಯತೆ ನೀಡುತ್ತಾ ಮುಂದುವರಿಯುತ್ತಿದೆ. ಒಂದೆಡೆ, ಭಾರತವು 4G ಮತ್ತು 5G ಸಂಪರ್ಕ ಜಾಲ ವಿಸ್ತರಿಸುತ್ತಿದ್ದು, ಮತ್ತೊಂದೆಡೆ, ಅದು ತನ್ನ ಅರಣ್ಯ ಹೊದಿಕೆಯನ್ನೂ ಹೆಚ್ಚಿಸಿಕೊಂಡಿದೆ. ಒಂದೆಡೆ, ದೇಶದಲ್ಲಿ ಬಡವರಿಗೆ ನಾಲ್ಕು ಕೋಟಿ ಮನೆಗಳನ್ನು ನಿರ್ಮಿಸಿದರೆ, ಮತ್ತೊಂದೆಡೆ, ದೇಶದ ವನ್ಯಜೀವಿಗಗಳು ಮತ್ತು ವನ್ಯಜೀವಿ ಅಭಯಾರಣ್ಯ ಪ್ರದೇಶದಲ್ಲೂ ಗಣನೀಯ ಬೆಳವಣಿಗೆ ದಾಖಲಿಸಿದೆ. ಒಂದೆಡೆ, ಭಾರತವು ಜಲ ಜೀವನ್ ಮಿಷನ್ ಯೋಜನೆ ಜಾರಿಗೊಳಿಸುತ್ತಿದ್ದರೆ, ಮತ್ತೊಂದೆಡೆ, ಇದು ಜಲ ಸಂರಕ್ಷಣೆಗೆ 50,000 ಅಮೃತ ಸರೋವರಗಳನ್ನು (ಜಲಮೂಲಗಳು) ಸೃಷ್ಟಿಸಲಾಗುತ್ತಿದೆ. ಒಂದೆಡೆ, ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಮಾರ್ಪಟ್ಟಿದ್ದರೆ, ಮತ್ತೊಂದೆಡೆ, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ ಜಗತ್ತಿನ ಮೊದಲ ಐದು ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಒಂದೆಡೆ, ಭಾರತವು ಕೃಷಿ ರಫ್ತು ಪ್ರಮಾಣವನ್ನು ಹಿಗ್ಗಿಸಿಕೊಳ್ಳುತ್ತಿದ್ದರೆ, ಮತ್ತೊಂದೆಡೆ, ಭಾರತವು ಪೆಟ್ರೋಲ್‌ನಲ್ಲಿ ಶೇ. 20 ಎಥೆನಾಲ್ ಮಿಶ್ರಣ ಅಭಿಯಾವನ್ನೂ ಉತ್ತೇಜಿಸುತ್ತಿದೆ. ಒಂದೆಡೆ, ಭಾರತವು ವಿಪತ್ತು ತಡೆ ಮೂಲಸೌಕರ್ಯ ಸಮನ್ವಯ (ಕೊಹಿಲಿಷನ್‌ ಫಾರ್‌ ಡಿಸಾಸ್ಟರ್‌ ರೆಸಿಲಿಯೆಂಟ್‌ ಇನ್‌ಫ್ರಾಸ್ಟ್ರಕ್ಚರ್‌- ಸಿಡಿಆರ್‌ಐ) ನಂತಹ ಸಂಸ್ಥೆಗಳನ್ನು ಸ್ಥಾಪಿಸಿದರೆ, ಮತ್ತೊಂದೆಡೆ, ಅದು ಇಂಟರ್‌ನ್ಯಾಷನಲ್‌ ಬಿಗ್‌ ಕ್ಯಾಟ್‌ ಅಲಯನ್ಸ್‌ ಕಾರ್ಯಕ್ರಮವನ್ನು ಘೋಷಿಸಿದ್ದು, ದೊಡ್ಡ ಬೆಕ್ಕುಗಳ (ಚಿರತೆ) ಸಂರಕ್ಷಣೆ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ ಎನಿಸಿದೆ

ಸ್ನೇಹಿತರೆ,

ಪರಿಸರಕ್ಕಾಗಿ ಜೀವನಶೈಲಿಯನ್ನು ಪ್ರತಿನಿಧಿಸುವ 'ಮಿಷನ್ ಲೈಫ್ʼ ಜಾಗತಿಕ ಸಾರ್ವಜನಿಕ ಆಂದೋಲನವು ಜನರ ಆಂದೋಲನವಾಗುತ್ತಿರುವುದು ನನಗೆ ವೈಯಕ್ತಿಕವಾಗಿ ಬಹಳ ಸಂತೋಷ ತಂದಿದೆ.  ಕಳೆದ ವರ್ಷ ಗುಜರಾತ್‌ನ ಕೆವಾಡಿಯಾ- ಏಕತಾ ನಗರದಲ್ಲಿ ಮಹತ್ವಾಕಾಂಕ್ಷಿ 'ಮಿಷನ್ ಲೈಫ್ʼ ಅಭಿಯಾನವನ್ನು ನಾನು ಆರಂಭಿಸಿದಾಗ ಜನರಲ್ಲಿ ಕುತೂಹಲವಿತ್ತು. ಆದರೆ ಇಂದು, ಈ ಅಭಿಯಾನವು ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಪೂರಕವಾದ ಜೀವನಶೈಲಿ ಬದಲಾವಣೆ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಕೇವಲ ಒಂದು ತಿಂಗಳ ಹಿಂದೆ, 'ಮಿಷನ್ ಲೈಫ್ʼ ಅಭಿಯಾನಕ್ಕೆ ಪ್ರಚಾರಾಂದೋಲನ ಆರಂಭಿಸಲಾಯಿತು. 30 ದಿನಕ್ಕಿಂತ ಕಡಿಮೆ ಅವಧಿಯಲ್ಲಿ ಸುಮಾರು ಎರಡು ಕೋಟಿ ಜನ ಸ್ಪಂದಿಸಿದ್ದಾರೆ ಎಂಬ ಮಾಹಿತಿ ಇದೆ. ‘ಗಿವಿಂಗ್ ಲೈಫ್ ಟು ಮೈ ಸಿಟಿ’ ಎಂಬ ಧ್ಯೇಯದೊಂದಿಗೆ ಸಾಕಷ್ಟು ರ್ಯಾಲಿ, ರಸಪ್ರಶ್ನೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಪರಿಸರ ಕ್ಲಬ್‌ಗಳ ಮೂಲಕ ಲಕ್ಷಾಂತರ ಶಾಲಾ ಮಕ್ಕಳು ಮತ್ತು ಅವರ ಶಿಕ್ಷಕರು ಈ ಅಭಿಯಾನದ ಭಾಗವಾಗಿದ್ದಾರೆ. ಲಕ್ಷಾಂತರ ಸಹೋದ್ಯೋಗಿಗಳು ತಮ್ಮ ದೈನಂದಿನ ಜೀವನದಲ್ಲಿ "ರೆಡ್ಯೂಸ್‌, ರೀಯೂಸ್‌, ರೀಸೈಕಲ್‌" (ಬಳಕೆ ತಗ್ಗಿಸಿ, ಮರುಬಳಕೆ ಮಾಡಿ, ಪುನರ್‌ ಬಳಕೆ) ಮಂತ್ರವನ್ನು ಅಳವಡಿಸಿಕೊಂಡಿದ್ದಾರೆ.  ಜನರ ದೈನಂದಿನ ಅಭ್ಯಾಸ, ಕಾರ್ಯವೈಖರಿಯನ್ನು ಬದಲಾಯಿಸಿಕೊಂಡು ಸಹಕರಿಸುವುದು "ಮಿಷನ್ ಲೈಫ್‌ʼನ ಮೂಲ ತತ್ವವಾಗಿದ್ದು, ಆ ಮೂಲಕ ಜಗತ್ತಿನಲ್ಲಿ ಪರಿವರ್ತನೆಯನ್ನು ತರುವ ಗುರಿ ಹೊಂದಲಾಗಿದೆ. 'ಮಿಷನ್ ಲೈಫ್ʼ ಮುಂದಿನ ಪೀಳಿಗೆಗೆ ಮತ್ತು ಮಾನವೀಯತೆಯ ಉಜ್ವಲ ಭವಿಷ್ಯಕ್ಕೆ ಮಹತ್ವದ್ದೆನಿಸಿದೆ.

ಸ್ನೇಹಿತರೇ,

ಈ ಜಾಗೃತಿ ಅಭಿಯಾನವು ನಮ್ಮ ದೇಶಕ್ಕಷ್ಟೇ ಸೀಮಿತವಾಗಿಲ್ಲ. ಭಾರತದ ಈ ಮಹತ್ವದ ಉಪಕ್ರಮಕ್ಕೆ ಜಗತ್ತಿನಾದ್ಯಂತ ಬೆಂಬಲ ವ್ಯಕ್ತವಾಗುತ್ತಿದೆ. ಕಳೆದ ವರ್ಷದ ವಿಶ್ವ ಪರಿಸರ ದಿನಾಚರಣೆಯಂದು ನಾನು ಜಾಗತಿಕ ಸಮುದಾಯಕ್ಕೆ ಮತ್ತೊಂದು ಮನವಿ ಮಾಡಿದ್ದೆ. ಜನರಲ್ಲಿ ವೈಯಕ್ತಿಕವಾಗಿ ಹಾಗೂ ಜನ ಸಮುದಾಯಗಳ ನಡುವೆ ಹವಾಮಾನ ಸ್ನೇಹಿ ವರ್ತನೆಯನ್ನು ರೂಢಿಸಿಕೊಳ್ಳಲು ಪೂರಕವಾದ ಹೊಸ ಪರಿಹಾರ, ಉಪಕ್ರಮಗಳನ್ನು ಹಂಚಿಕೊಳ್ಳುವಂತೆ ಕೋರಲಾಗಿತ್ತು. ಜಗತ್ತಿನ ಸುಮಾರು 70 ದೇಶಗಳು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿರುವುದು ಅತ್ಯಂತ ಸಮಾಧಾನಕರ ಸಂಗತಿಯಾಗಿದೆ.  ಅವರಲ್ಲಿ ವಿದ್ಯಾರ್ಥಿಗಳು, ಸಂಶೋಧಕರು ಸೇರಿದಂತೆ ನಾನಾ ಕ್ಷೇತ್ರಗಳ ತಜ್ಞರು, ವೃತ್ತಿಪರರು, ಎನ್‌ಜಿಒಗಳು ಮತ್ತು ಸಾಮಾನ್ಯ ನಾಗರಿಕರು ಇದ್ದಾರೆ. ಹೀಗೆ ಕ್ರಿಯಾಶೀಲವಾಗಿ ಪಾಲ್ಗೊಂಡು ಮಹತ್ವದ ಚಿಂತನೆಯನ್ನು ಹಂಚಿಕೊಂಡ ಕೆಲವರನ್ನು ಇಂದು ಅಭಿನಂದಿಸಲಾಗುತ್ತಿದೆ. ಪ್ರಶಸ್ತಿಗೆ ಭಾಜನರಾದ ಎಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ʼಮಿಷನ್ ಲೈಫ್ʼ ಅಭಿಯಾನದ ಕಡೆಗೆ ನಾವು ಇಡುವ ಪ್ರತಿಯೊಂದು ಹೆಜ್ಜೆಯೂ ಮುಂದಿನ ದಿನಗಳಲ್ಲಿ ಜಗತ್ತಿನಾದ್ಯಂತ ಪರಿಸರ ಸಂರಕ್ಷಣೆಗೆ ಬಲವಾದ ರಕ್ಷೆಯನ್ನು ಒದಗಿಸುವ ವಿಶ್ವಾಸವಿದೆ.  "ಲೈಫ್‌"ಗಾಗಿ ಸಂಗ್ರಹವಾದ ಚಿಂತನೆಯ ವಿವರಗಳು ಇಂದು ಬಿಡುಗಡೆಯಾಗಿದೆ. ಈ ರೀತಿಯ ಪ್ರಯತ್ನಗಳು ಹಸಿರು ವೃದ್ಧಿ ಬಗೆಗಿನ ನಮ್ಮ ಬದ್ಧತೆಯನ್ನು ಇನ್ನಷ್ಟು ಶಕ್ತಿಯುತ ಮತ್ತು ಸುಸ್ಥಿರವಾಗಿಸುವ ವಿಶ್ವಾಸವಿದೆ. ಮತ್ತೊಮ್ಮೆ, ವಿಶ್ವ ಪರಿಸರ ದಿನಾಚರಣೆಯಂದು ಎಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ.
ಧನ್ಯವಾದಗಳು!

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PM's Vision Turns Into Reality As Unused Urban Space Becomes Sports Hubs In Ahmedabad

Media Coverage

PM's Vision Turns Into Reality As Unused Urban Space Becomes Sports Hubs In Ahmedabad
NM on the go

Nm on the go

Always be the first to hear from the PM. Get the App Now!
...
PM Modi shares Rashtrapati Ji's inspiring address on the eve of 76th Republic Day
January 25, 2025

The Prime Minister Shri Narendra Modi today thanked Rashtrapati ji for an inspiring address to the nation ahead of the Republic Day. He remarked that the President highlighted many subjects and emphasised the greatness of our Constitution and the need to keep working towards national progress.

Responding to a post by President of India handle on X, Shri Modi wrote:

“An inspiring address by Rashtrapati Ji, in which she highlights many subjects and emphasises the greatness of our Constitution and the need to keep working towards national progress.”