"4ನೇ ಕೈಗಾರಿಕಾ ಕ್ರಾಂತಿಯ ಈ ಯುಗದಲ್ಲಿ, ತಂತ್ರಜ್ಞಾನವು ಉದ್ಯೋಗದ ಪ್ರಮುಖ ಚಾಲನಾಶಕ್ತಿಯಾಗಿ ಉಳಿಯುತ್ತದೆ"
"ನೈಪುಣ್ಯ, ಮರುಕೌಶಲ್ಯ ಮತ್ತು ಉನ್ನತ ಕೌಶಲ್ಯ ಭವಿಷ್ಯದ ಉದ್ಯೋಗಿಗಳಿಗೆ ಮಂತ್ರಗಳಾಗಿವೆ"
" ವಿಶ್ವದಲ್ಲೇ ನುರಿತ ಉದ್ಯೋಗಿಗಳ ಅತಿದೊಡ್ಡ ಪೂರೈಕೆದಾರ ರಾಷ್ಟ್ರವಾಗುವ ಸಾಮರ್ಥ್ಯವನ್ನು ಭಾರತ ಹೊಂದಿದೆ"
“ನಾವು ಪ್ರತಿಯೊಂದು ದೇಶದ ವಿಶಿಷ್ಟ ಆರ್ಥಿಕ ಸಾಮರ್ಥ್ಯಗಳು, ಬಲಗಳು ಮತ್ತು ಸವಾಲುಗಳನ್ನು ಪರಿಗಣಿಸಬೇಕು. ಸಾಮಾಜಿಕ ರಕ್ಷಣೆಯ ಸುಸ್ಥಿರ ಹಣಕಾಸಿಗಾಗಿ ಏಕ-ಮುಖ ನೀತಿಯ ಕಾರ್ಯ ವಿಧಾನ ಅಳವಡಿಸಿಕೊಳ್ಳುವುದು ಸೂಕ್ತವಲ್ಲ"

ಗೌರವಾನ್ವಿತರೇ, ಮಹಿಳೆಯರೇ ಮತ್ತು ಮಹನೀಯರೇ, ನಮಸ್ಕಾರ!

ನಿಮ್ಮೆಲ್ಲರಿಗೂ ಐತಿಹಾಸಿಕ ಮತ್ತು ರೋಮಾಂಚಕ ನಗರವಾದ ಇಂದೋರ್‌ಗೆ ಸ್ವಾಗತ. ಈ ನಗರವು ತನ್ನ ಶ್ರೀಮಂತ ಪಾಕಶಾಲೆ ಸಂಪ್ರದಾಯಗಳಿಂದ ಹೆಮ್ಮೆ ಗಳಿಸಿದೆ. ನೀವು ನಗರವನ್ನು ಅದರ ಎಲ್ಲಾ ವರ್ಣ ಮತ್ತು ರುಚಿಗಳಲ್ಲಿ ಆನಂದಿಸುತ್ತೀರಿ ಎಂದು ನಾನು ಭಾವಿಸುತ್ತೇನೆ.

ಸ್ನೇಹಿತರೇ,

ನಿಮ್ಮ ಕಾರ್ಯಪಡೆಯು ಪ್ರಮುಖ ಆರ್ಥಿಕ ಮತ್ತು ಸಾಮಾಜಿಕ ಅಂಶಗಳಲ್ಲಿ ಒಂದಾದ ಉದ್ಯೋಗದ ಬಗ್ಗೆ ಚರ್ಚಿಸುತ್ತಿದೆ. ನಾವು ಉದ್ಯೋಗ ಕ್ಷೇತ್ರದಲ್ಲಿನ ಕೆಲವು ಮಹತ್ತರ ಬದಲಾವಣೆಗಳ ಹಾದಿಯಲ್ಲಿದ್ದೇವೆ. ಈ ಕ್ಷಿಪ್ರ ಬದಲಾವಣೆಗಳನ್ನು ಪರಿಹರಿಸಲು ನಾವು ಸ್ಪಂದನಶೀಲ ಮತ್ತು ಪರಿಣಾಮಕಾರಿ ಕಾರ್ಯತಂತ್ರಗಳನ್ನು ಸಿದ್ಧಪಡಿಸಬೇಕಾಗಿದೆ. ನಾಲ್ಕನೇ ಕೈಗಾರಿಕಾ ಕ್ರಾಂತಿಯ ಈ ಯುಗದಲ್ಲಿ, ತಂತ್ರಜ್ಞಾನವು ಉದ್ಯೋಗದ ಮೂಲ ಚಾಲಕ ಶಕ್ತಿಯಾಗಿದ್ದು, ಅದು ಹಾಗೆಯೇ ಮುಂದುವರಿಯುತ್ತದೆ. ಕಳೆದ ಬಾರಿ ತಂತ್ರಜ್ಞಾನ-ನೇತೃತ್ವದ ಪರಿವರ್ತನೆಯ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ತಂತ್ರಜ್ಞಾನ ಆಧರಿತ ಉದ್ಯೋಗಗಳನ್ನು ಸೃಷ್ಟಿಸಿದ ಅನುಭವವನ್ನು ಹೊಂದಿರುವ ದೇಶದಲ್ಲಿ ಈ ಸಭೆ ನಡೆಯುತ್ತಿರುವುದು ನಮ್ಮ ಅದೃಷ್ಟ. ನಿಮ್ಮ ಆತಿಥೇಯ ನಗರವಾದ ಇಂದೋರ್ ಅಂತಹ ರೂಪಾಂತರಗಳ ಹೊಸ ಅಲೆಯನ್ನು ಮುನ್ನಡೆಸುವ ಅನೇಕ ನವೋದ್ಯಮಗಳಿಗೆ ನೆಲೆಯಾಗಿದೆ.

ಸ್ನೇಹಿತರೇ,

ಸುಧಾರಿತ ತಂತ್ರಜ್ಞಾನಗಳು ಮತ್ತು ಪ್ರಕ್ರಿಯೆಗಳ ಬಳಕೆಗೆ ಸಂಬಂಧಿಸಿದಂತೆ ನಾವೆಲ್ಲರೂ ನಮ್ಮ ಕಾರ್ಯಪಡೆಯ ಕೌಶಲ್ಯವನ್ನು ಬೆಳೆಸಬೇಕಾಗಿದೆ. ಕೌಶಲ್ಯ, ಮರು-ಕೌಶಲ್ಯ ಮತ್ತು ನವ-ಕೌಶಲ್ಯವು ಕಾರ್ಯಪಡೆಯ ಭವಿಷ್ಯದ ಮಂತ್ರಗಳಾಗಿವೆ. ಭಾರತದಲ್ಲಿ, ನಮ್ಮ 'ಸ್ಕಿಲ್ ಇಂಡಿಯಾ ಮಿಷನ್' ಅಭಿಯಾನವು ಈ ವಾಸ್ತವದೊಂದಿಗೆ ನಂಟು ಹೊಂದಿದೆ. ನಮ್ಮ 'ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ' ಅಡಿಯಲ್ಲಿ, ನಮ್ಮ 12.5 ದಶಲಕ್ಷಕ್ಕೂ ಹೆಚ್ಚು ಯುವಕರಿಗೆ ಈವರೆಗೆ ತರಬೇತಿ ನೀಡಲಾಗಿದೆ. ʻಇಂಡಸ್ಟ್ರಿ 4.0ʼ  ಕ್ಷೇತ್ರಗಳಾದ ʻಕೃತಕ ಬುದ್ಧಿಮತ್ತೆʼ(ಎಐ), ರೊಬೊಟಿಕ್ಸ್, ʻಇಂಟರ್ನೆಟ್ ಆಫ್ ಥಿಂಗ್ಸ್ʼ ಮತ್ತು ʻಡ್ರೋನ್‌ʼ ಮುಂತಾದವುಗಳಿಗೆ ವಿಶೇಷ ಗಮನ ನೀಡಲಾಗುತ್ತಿದೆ.

ಸ್ನೇಹಿತರೇ,

ಕೋವಿಡ್ ಸಮಯದಲ್ಲಿ ಭಾರತದಲ್ಲಿ ಆರೋಗ್ಯವಲಯದ ಮುಂಚೂಣಿ ಕಾರ್ಯಕರ್ತರು ಮತ್ತು ಇತರ ಕಾರ್ಮಿಕರು ಮಾಡಿದ ಅದ್ಭುತ ಕೆಲಸವು ಅವರ ಕೌಶಲ್ಯ ಮತ್ತು ಸಮರ್ಪಣೆಯನ್ನು ತೋರಿಸಿದೆ. ಇದು ನಮ್ಮ ಸೇವೆ ಮತ್ತು ಸಹಾನುಭೂತಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ವಾಸ್ತವವಾಗಿ, ಭಾರತವು ವಿಶ್ವಕ್ಕೆ ನುರಿತ ಕಾರ್ಯಪಡೆಯ ಅತಿದೊಡ್ಡ ಪೂರೈಕೆದಾರರಲ್ಲಿ ಒಂದಾಗಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಜಾಗತಿಕವಾಗಿ ಚಲನಶೀಲವಾಗಿರುವ ಕಾರ್ಯಪಡೆಯು ಭವಿಷ್ಯದಲ್ಲಿ ವಾಸ್ತವವಾಗಲಿದೆ. ಆದ್ದರಿಂದ, ನಿಜವಾದ ಅರ್ಥದಲ್ಲಿ ಕೌಶಲ್ಯಗಳ ಅಭಿವೃದ್ಧಿ ಮತ್ತು ಹಂಚಿಕೆಯನ್ನು ಜಾಗತೀಕರಣಗೊಳಿಸುವ ಸಮಯ ಇದಾಗಿದೆ. ಇದರಲ್ಲಿ ʻಜಿ-20ʼ ಪ್ರಮುಖ ಪಾತ್ರ ವಹಿಸಬೇಕು. ಕೌಶಲ್ಯಗಳು ಮತ್ತು ಅರ್ಹತೆಗಳ ಮೂಲಕ ಉದ್ಯೋಗಗಳ ಅಂತರರಾಷ್ಟ್ರೀಯ ಉಲ್ಲೇಖವನ್ನು ಪ್ರಾರಂಭಿಸುವ ನಿಮ್ಮ ಪ್ರಯತ್ನಗಳನ್ನು ನಾನು ಶ್ಲಾಘಿಸುತ್ತೇನೆ. ಇದಕ್ಕೆ ಅಂತರರಾಷ್ಟ್ರೀಯ ಸಹಕಾರ ಮತ್ತು ಸಮನ್ವಯ, ವಲಸೆ ಮತ್ತು ಚಲನಶೀಲತೆ ಸಹಭಾಗಿತ್ವದ ಹೊಸ ಮಾದರಿಗಳು ಬೇಕಾಗುತ್ತವೆ. ಈ ಉದ್ಯೋಗದಾತರು ಮತ್ತು ಕಾರ್ಮಿಕರಿಗೆ ಸಂಬಂಧಿಸಿದ ಅಂಕಿ-ಅಂಶಗಳು, ಮಾಹಿತಿ ಮತ್ತು ದತ್ತಾಂಶವನ್ನು ಹಂಚಿಕೊಳ್ಳುವುದು ಈ ನಿಟ್ಟಿನಲ್ಲಿ ಕಾರ್ಯಾರಂಭಕ್ಕೆ ಉತ್ತಮ ಮಾರ್ಗವಾಗಿದೆ. ಇದು ಉತ್ತಮ ಕೌಶಲ್ಯ, ಕಾರ್ಯಪಡೆ ಯೋಜನೆ ಮತ್ತು ಲಾಭದಾಯಕ ಉದ್ಯೋಗಕ್ಕಾಗಿ ಪುರಾವೆ ಆಧಾರಿತ ನೀತಿಗಳನ್ನು ರೂಪಿಸಲು ವಿಶ್ವದಾದ್ಯಂತದ ದೇಶಗಳಿಗೆ ಪುಷ್ಠಿ ನೀಡುತ್ತದೆ.

ಸ್ನೇಹಿತರೇ,

ಮತ್ತೊಂದು ಪರಿವರ್ತಕ ಬದಲಾವಣೆಯೆಂದರೆ ʻಗಿಗ್ʼ ಮತ್ತು ʻಪ್ಲಾಟ್ ಫಾರ್ಮ್ ಆರ್ಥಿಕತೆʼಯಲ್ಲಿ ಹೊಸ ವರ್ಗದ ಕಾರ್ಮಿಕರ ವಿಕಸನ. ಸಾಂಕ್ರಾಮಿಕ ಸಮಯದಲ್ಲಿ ಇದು ಸ್ಥಿತಿಸ್ಥಾಪಕತ್ವದ ಆಧಾರಸ್ತಂಭವಾಗಿ ಹೊರಹೊಮ್ಮಿತು. ಇದು ಹೊಂದಾಣಿಕೆಗೆ ಅವಕಾಶವಿರುವ ಕೆಲಸದ ವ್ಯವಸ್ಥೆಗಳನ್ನು ಒದಗಿಸುತ್ತದೆ ಮತ್ತು ಆದಾಯದ ಮೂಲಗಳಿಗೆ ಪೂರಕವಾಗಿದೆ. ಇದು ವಿಶೇಷವಾಗಿ ಯುವಕರಿಗೆ ಲಾಭದಾಯಕ ಉದ್ಯೋಗವನ್ನು ಸೃಷ್ಟಿಸುವ ಅಪಾರ ಸಾಮರ್ಥ್ಯವನ್ನು ಹೊಂದಿದೆ. ಇದು ಮಹಿಳೆಯರ ಸಾಮಾಜಿಕ-ಆರ್ಥಿಕ ಸಬಲೀಕರಣಕ್ಕೆ ಪರಿವರ್ತಕ ಸಾಧನವಾಗಬಹುದು. ಅದರ ಸಾಮರ್ಥ್ಯವನ್ನು ಅರಿತುಕೊಳ್ಳಲು, ಈ ಹೊಸ-ಯುಗದ ಕಾರ್ಮಿಕರಿಗೆ ನಾವು ಹೊಸ-ಯುಗದ ನೀತಿಗಳು ಮತ್ತು ಉಪಕ್ರಮಗಳನ್ನು ವಿನ್ಯಾಸಗೊಳಿಸಬೇಕಾಗಿದೆ. ನಿಯಮಿತ ಮತ್ತು ಸಮರ್ಪಕ ಕೆಲಸಕ್ಕೆ ಅವಕಾಶಗಳನ್ನು ಸೃಷ್ಟಿಸಲು ನಾವು ಸುಸ್ಥಿರ ಪರಿಹಾರಗಳನ್ನು ಕಂಡುಹಿಡಿಯಬೇಕಾಗಿದೆ. ಅವರಿಗೆ ಸಾಮಾಜಿಕ ಭದ್ರತೆ, ಸುರಕ್ಷತೆ ಮತ್ತು ಆರೋಗ್ಯವನ್ನು ಲಭ್ಯವಾಗುವಂತೆ ಮಾಡಲು ನಮಗೆ ಹೊಸ ಮಾದರಿಗಳು ಬೇಕಾಗುತ್ತವೆ. ಭಾರತದಲ್ಲಿ, ನಾವು 'ಇ-ಶ್ರಮ್ ಪೋರ್ಟಲ್' ಅನ್ನು ರಚಿಸಿದ್ದೇವೆ, ಇದನ್ನು ಈ ಕಾರ್ಮಿಕರ ಉದ್ದೇಶಿತ ಮಧ್ಯಸ್ಥಿಕೆಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಕೇವಲ ಒಂದು ವರ್ಷದಲ್ಲಿ, ಸುಮಾರು 280 ದಶಲಕ್ಷ ಕಾರ್ಮಿಕರು ಈ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಈಗ, ಕೆಲಸವು ಬಹುರಾಷ್ಟ್ರೀಯ ಸ್ವರೂಪ ಪಡೆದಿರುವ ಹಿನ್ನೆಲೆಯಲ್ಲಿ, ಪ್ರತಿಯೊಂದು ದೇಶವು ಇದೇ ರೀತಿಯ ಪರಿಹಾರಗಳನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗುತ್ತದೆ. ನಮ್ಮ ಅನುಭವವನ್ನು ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ.

ಸ್ನೇಹಿತರೇ,

ಜನರಿಗೆ ಸಾಮಾಜಿಕ ರಕ್ಷಣೆ ಒದಗಿಸುವುದು ʻಕಾರ್ಯಸೂಚಿ-2030ʼರ ಪ್ರಮುಖ ಅಂಶವಾಗಿದೆ. ಆದರೆ, ಅಂತರರಾಷ್ಟ್ರೀಯ ಸಂಸ್ಥೆಗಳು ಅಳವಡಿಸಿಕೊಂಡಿರುವ ಪ್ರಸ್ತುತ ನೀತಿ-ನಿಯಮಗಳು ಸಂಕುಚಿತ ರೀತಿಯ ಪ್ರಯೋಜನನ್ನು ಮಾತ್ರ ಹೊಂದಿವೆ. ಇತರ ರೂಪಗಳಲ್ಲಿ ಒದಗಿಸಲಾದ ಹಲವಾರು ಪ್ರಯೋಜನಗಳು ಈ ಚೌಕಟ್ಟಿನ ಅಡಿಯಲ್ಲಿ ಬರುವುದಿಲ್ಲ. ನಮ್ಮಲ್ಲಿ ಸಾರ್ವತ್ರಿಕ ಸಾರ್ವಜನಿಕ ಆರೋಗ್ಯ, ಆಹಾರ ಭದ್ರತೆ, ವಿಮೆ ಮತ್ತು ಪಿಂಚಣಿ ಕಾರ್ಯಕ್ರಮಗಳಿವೆ. ಅವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತಿಲ್ಲ. ನಾವು ಈ ಪ್ರಯೋಜನಗಳನ್ನು ಮರುಪರಿಶೀಲಿಸಬೇಕು, ಇದರಿಂದ ಸಾಮಾಜಿಕ ರಕ್ಷಣಾ ವ್ಯಾಪ್ತಿಯ ಸರಿಯಾದ ಚಿತ್ರವನ್ನು ಪಡೆಯಬಹುದು. ನಾವು ಪ್ರತಿ ದೇಶದ ವಿಶಿಷ್ಟ ಆರ್ಥಿಕ ಸಾಮರ್ಥ್ಯಗಳು ಮತ್ತು ಸವಾಲುಗಳನ್ನು ಪರಿಗಣಿಸಬೇಕು. ಸಾಮಾಜಿಕ ರಕ್ಷಣೆಗೆ ಸುಸ್ಥಿರ ಹಣಕಾಸು ಒದಗಿಸಲು ʻಎಲ್ಲರಿಗೂ ಒಕ್ಕುವ ಒಂದೇ ವಿಧಾನʼ ಅಳವಡಿಸಿಕೊಳ್ಳುವುದು ಸೂಕ್ತವಲ್ಲ. ವಿವಿಧ ದೇಶಗಳು ಮಾಡಿದ ಅಂತಹ ಪ್ರಯತ್ನಗಳನ್ನು ನಿಖರವಾಗಿ ಪ್ರತಿಬಿಂಬಿಸುವ ವ್ಯವಸ್ಥೆಯ ಬಗ್ಗೆ ಯೋಚಿಸಲು ನಿಮ್ಮ ಪರಿಣತಿಯನ್ನು ಬಳಸಿಕೊಳ್ಳುತ್ತೀರಿ ಎಂದು ನಾನು ಭಾವಿಸುತ್ತೇನೆ.

ಗೌರವಾನ್ವಿತರೇ,

ಈ ಕ್ಷೇತ್ರದ ಕೆಲವು ತುರ್ತು ಸಮಸ್ಯೆಗಳನ್ನು ಪರಿಹರಿಸುವಲ್ಲಿ ನೀವೆಲ್ಲರೂ ಮಾಡುತ್ತಿರುವ ಪ್ರಯತ್ನಗಳನ್ನು ನಾನು ಪ್ರಶಂಸಿಸುತ್ತೇನೆ. ವಿಶ್ವಾದ್ಯಂತ ಎಲ್ಲಾ ಕಾರ್ಮಿಕರ ಕಲ್ಯಾಣಕ್ಕಾಗಿ ನೀವು ಇಂದು ದೃಢ ಸಂದೇಶವನ್ನು ಕಳುಹಿಸುತ್ತೀರಿ ಎಂಬ ವಿಶ್ವಾಸ ನನಗಿದೆ. ಈ ಸಭೆ ಫಲಪ್ರದ ಮತ್ತು ಯಶಸ್ವಿಯಾಗಲೆಂದು ಆಶಿಸುತ್ತೇನೆ.

ತುಂಬ ಧನ್ಯವಾದಗಳು!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Operation Sagar Bandhu: India provides assistance to restore road connectivity in cyclone-hit Sri Lanka

Media Coverage

Operation Sagar Bandhu: India provides assistance to restore road connectivity in cyclone-hit Sri Lanka
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 5 ಡಿಸೆಂಬರ್ 2025
December 05, 2025

Unbreakable Bonds, Unstoppable Growth: PM Modi's Diplomacy Delivers Jobs, Rails, and Russian Billions