ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) 25ನೇ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ನನಗೆ ಸಂತಸವಾಗಿದೆ. ಸಂಭ್ರಮದಿಂದ ಸ್ವಾಗತಿಸಿ, ಸಂತೋಷದಿಂದ ಆತಿಥ್ಯ ಸತ್ಕಾರ ನೀಡಿದ ಅಧ್ಯಕ್ಷರಾದ ಕ್ಸಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಇಂದು ಉಜ್ಬೇಕಿಸ್ತಾನದ ಸ್ವಾತಂತ್ರ್ಯೋತ್ಸವ ದಿನಾಚರಣೆ ಮತ್ತು ನಿನ್ನೆ ಕಿರ್ಗಿಜಸ್ತಾನನ ರಾಷ್ಟ್ರೀಯ ದಿನ. ಈ ಸಂದರ್ಭದಲ್ಲಿ ಈ ಉಭಯ ದೇಶಗಳ ನಾಯಕರಿಗೆ ನಾನು ಶುಭಾಶಯ ಕೋರುತ್ತೇನೆ.

ಗೌರವಾನ್ವಿತರೇ,
ಕಳೆದ 24 ವರ್ಷಗಳಲ್ಲಿ ಶಾಂಘೈ ಸಹಕಾರ ಸಂಘಟನೆಯು (ಎಸ್‌ಸಿಒ) ಯುರೇಷಿಯಾ ಪ್ರದೇಶದ ಒಗ್ಗಟ್ಟು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕ್ರಿಯಾಶೀಲ ಸದಸ್ಯನಾಗಿ, ಭಾರತವು ಸದಾ ರಚನಾತ್ಮಕ ಮತ್ತು ಸಕಾರಾತ್ಮಕ ರೀತಿಯಲ್ಲಿ ಸ್ಪಂದಿಸಿ, ತನ್ನದೇ ಆದ ಕೊಡುಗೆ ನೀಡಿದೆ.
ಎಸ್‌ಸಿಒ ಬಗ್ಗೆ ಭಾರತದ ದೂರದೃಷ್ಟಿ ಮತ್ತು ನೀತಿಯು ಮೂರು ಪ್ರಮುಖ ಅಂಶಗಳನ್ನು ಒಳಗೊಂಡಿದೆ.
ಎಸ್ – ಭದ್ರತೆ
ಸಿ – ಸಂಪರ್ಕ
ಒ – ಅವಕಾಶಗಳು
ಮೊದಲನೇ ಸ್ತಂಭ ‘ಎಸ್‘– ಭದ್ರತೆಯನ್ನು ಸೂಚಿಸುತ್ತದೆ. ಯಾವುದೇ ರಾಷ್ಟ್ರದ ಅಭಿವೃದ್ಧಿಗೆ ಭದ್ರತೆ, ಶಾಂತಿ ಮತ್ತು ಸ್ಥಿರತೆ ಪ್ರಮುಖ ಅಡಿಪಾಯಗಳಾಗಿವೆ. ಆದರೆ, ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಉಗ್ರವಾದವೂ ಅಭಿವೃದ್ಧಿ ಪಥಕ್ಕೆ ಪ್ರಮುಖ ಸವಾಲುಗಳಾಗಿವೆ.
ಭಯೋತ್ಪಾದನೆಯು ಕೇವಲ ಒಂದು ರಾಷ್ಟ್ರದ ಭದ್ರತೆಯ ಅಪಾಯಕ್ಕೆ ಸೀಮಿತವಾಗಿಲ್ಲ. ಇಡೀ ಮಾನವ ಕುಲಕ್ಕೆ ಸವಾಲಾಗಿದೆ. ಯಾವುದೇ ದೇಶ, ಯಾವುದೇ ಸಮಾಜ, ಯಾವುದೇ ನಾಗರಿಕ ತಾನು ಭಯೋತ್ಪಾದನೆಯಿಂದ ಸುರಕ್ಷಿತವಾಗಿದ್ದೇನೆ ಎಂದು ಭಾವಿಸಲು ಸಾಧ್ಯವೇ ಇಲ್ಲ. ಹೀಗಾಗಿಯೇ, ಭಾರತವು ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದು ನಿರಂತರವಾಗಿ ಒತ್ತಾಯಿಸುತ್ತಿದೆ.
ಈ ವಿಷಯದಲ್ಲಿ ಎಸ್‌ಸಿಒ–ಆರ್‌ಎಟಿಎಸ್ (SCO-RATS) ಪ್ರಮುಖ ಪಾತ್ರ ವಹಿಸಿದೆ. ಈ ವರ್ಷ, ಜಂಟಿ ಮಾಹಿತಿ ಕಾರ್ಯಾಚರಣೆಯ ನೇತೃತ್ವ ವಹಿಸಿದ ಸಂದರ್ಭದಲ್ಲಿ ಭಾರತವು ಅಲ್–ಖೈದಾ ಮತ್ತು ಅದರ ಭಯೋತ್ಪಾದಕ ಸಹ ಸಂಘಟನೆಗಳನ್ನು ನಿಗ್ರಹಿಸುವ ಕ್ರಮಗಳನ್ನು ಕೈಗೊಂಡಿತು. ಉಗ್ರವಾದವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಮನ್ವಯತೆಯನ್ನು ಹೆಚ್ಚಿಸಬೇಕು ಮತ್ತು ಜಂಟಿ ಕ್ರಮಗಳನ್ನು ಕೈಗೊಳ್ಳುವ ಪ್ರಸ್ತಾವವನ್ನು ಸಹ ನಾವು ಮುಂದಿಟ್ಟಿದ್ದೇವೆ.

ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸುವುದರ ವಿರುದ್ಧ ನಾವು ದನಿ ಎತ್ತಿದ್ದೇವೆ ಮತ್ತು ಈ ನಿಟ್ಟಿನಲ್ಲಿ ಸಹಕಾರ ಮತ್ತು ಬೆಂಬಲ ಸೂಚಿಸಿದ ಎಲ್ಲರಿಗೂ ಕೃತಜ್ಞತೆಗಳು.
ಗೌರವಾನ್ವಿತರೇ,
ಕಳೆದ ನಾಲ್ಕು ದಶಕಗಳಲ್ಲಿ, ಭಾರತವು ಭಯೋತ್ಪಾದನೆಯ ಕ್ರೂರ ಮತ್ತು ನಿರ್ದಯಿತನವನ್ನು ಕಂಡಿದೆ. ಅಸಂಖ್ಯಾತ ತಾಯಂದಿರು ತಮ್ಮ ಮಕ್ಕಳನ್ನು ಕಳೆದುಕೊಂಡಿದ್ದಾರೆ ಮತ್ತು ಲೆಕ್ಕವಿಲ್ಲದಷ್ಟು ಮಕ್ಕಳು ಅನಾಥರಾಗಿದ್ದಾರೆ.
ಇತ್ತೀಚೆಗೆ, ನಾವು ನೋಡಿದ ಪಹಲ್ಗಾಮ್ ಭಯೋತ್ಪಾದನೆಯ ಹೇಯ ಕೃತ್ಯ ಇದಕ್ಕೆ ಸಾಕ್ಷಿಯಾಗಿದೆ. ಇಂತಹ ದುಃಖದ ಸಂದರ್ಭದಲ್ಲಿ ನಮ್ಮನ್ನು ಬೆಂಬಲಿಸಿದ ಎಲ್ಲ ನಮ್ಮ ಸ್ನೇಹಿಮಯ ರಾಷ್ಟ್ರಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಇದು ಕೇವಲ ಭಾರತದ ಆತ್ಮಸಾಕ್ಷಿ ಮೇಲೆ ನಡೆದ ದಾಳಿಯಾಗಿರಲಿಲ್ಲ, ಪ್ರತಿಯೊಂದು ರಾಷ್ಟ್ರ ಮತ್ತು ಮಾನವೀಯತೆಯನ್ನು ನಂಬುವ ಪ್ರತಿಯೊಬ್ಬ ವ್ಯಕ್ತಿಗೂ ಬಹಿರಂಗ ಸವಾಲುವೊಡ್ಡಿದೆ.
ಇಂತಹ ಸಂದರ್ಭದಲ್ಲಿ, ಕೆಲವು ಪ್ರಶ್ನೆಗಳನ್ನು ಕೇಳುವುದು ಸಹಜ: ಕೆಲವು ದೇಶಗಳು ಬಹಿರಂಗವಾಗಿಯೇ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವುದನ್ನು ನಾವು ಒಪ್ಪಿಕೊಳ್ಳಬೇಕೇ?
ಗೌರವಾನ್ವಿತರೇ,
ನಾವು ಸ್ಪಷ್ಟವಾಗಿ ಮತ್ತು ಒಂದೇ ಧ್ವನಿಯಲ್ಲಿ ಹೇಳಬೇಕಾಗಿದೆ: ಭಯೋತ್ಪಾದನೆ ವಿಷಯದಲ್ಲಿ ದ್ವಿಮುಖ ನೀತಿ ಅನುಸರಿಸುವುದನ್ನು ಒಪ್ಪಿಕೊಳ್ಳುವುದಿಲ್ಲ. ಭಯೋತ್ಪಾದನೆಯ ಪ್ರತಿಯೊಂದು ಸ್ವರೂಪವನ್ನು ನಾವು ವಿರೋಧಿಸಬೇಕು. ಮಾನವೀಯತೆಗಾಗಿ ಇದು ನಮ್ಮ ಜವಾಬ್ದಾರಿ.
ಗೌರವಾನ್ವಿತರೇ,
ಈಗ ನಾನು ಎರಡನೇ ಸ್ತಂಭವಾಗಿರುವ ‘ಸಿ‘ ಕುರಿತು ಪ್ರಸ್ತಾಪಿಸಲು ಇಚ್ಛೆಪಡುತ್ತೇನೆ. ಸಿ– ಅಂದರೆ ಸಂಪರ್ಕ. ಬಲಿಷ್ಠವಾದ ಸಂಪರ್ಕ ಕೇವಲ ವ್ಯಾಪಾರ ಉತ್ತೇಜನಕ್ಕೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಭಾರತ ನಂಬಿದೆ. ಇದು ವಿಶ್ವಾಸ ಮತ್ತು ಅಭಿವೃದ್ಧಿಯ ಬಾಗಿಲುಗಳನ್ನು ತೆರೆಯುತ್ತದೆ.
ಈ ದೂರದೃಷ್ಟಿಯೊಂದಿಗೆ ನಾವು ಛಬಹಾರ್ ಬಂದರು ಮತ್ತು ಅಂತರರಾಷ್ಟ್ರೀಯ ಉತ್ತರ– ದಕ್ಷಿಣ ಸಾರಿಗೆ ಕಾರಿಡಾರ್‌ನಂತಹ ಕ್ರಮಗಳ ಅನುಷ್ಠಾನಗೊಳಿಸಲು ಕಾರ್ಯನಿರ್ವಹಿಸುತ್ತಿದ್ದೇವೆ. ಇವುಗಳ ಮೂಲಕ, ನಾವು ಅಫ್ಗಾನಿಸ್ತಾನ ಮತ್ತು ಕೇಂದ್ರ ಏಷ್ಯಾದಲ್ಲಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು ಸಾಧ್ಯವಾಗುತ್ತದೆ.
ಸಂಪರ್ಕಕ್ಕಾಗಿ ನಾವು ಕೈಗೊಂಡಿರುವ ಪ್ರತಿಯೊಂದು ಪ್ರಯತ್ನವು ಪ್ರಾದೇಶಿಕ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ತತ್ವವನ್ನು ಎತ್ತಿ ಹಿಡಿಯಬೇಕು ಎನ್ನುವ ನಂಬಿಕೆ ನಮ್ಮದು. ಇದು ಎಸ್‌ಸಿಒ ಗುಣಲಕ್ಷಣಗಳಲ್ಲಿಯೂ ಪ್ರಮುಖ ತತ್ವವಾಗಿದೆ.

ಸಾರ್ವಭೌಮತ್ವವನ್ನು ಕಡೆಗಣಿಸುವ ‘ಸಂಪರ್ಕ‘, ಅಂತಿಮವಾಗಿ ವಿಶ್ವಾಸ ಕಳೆದುಕೊಂಡು ಅರ್ಥಹೀನವಾಗುತ್ತದೆ.
ಗೌರವಾನ್ವಿತರೇ,
ಮೂರನೇ ಸ್ತಂಭ: ’ಒ‘– ಅವಕಾಶಗಳು. ಸಹಕಾರ ಮತ್ತು ಸುಧಾರಣೆಗೆ ಅವಕಾಶ.
2023ರಲ್ಲಿ, ಭಾರತದ ಅಧ್ಯಕ್ಷತೆಯಲ್ಲಿ ಎಸ್‌ಸಿಒಗೆ ಹೊಸ ಶಕ್ತಿ, ಚೈತನ್ಯ ತುಂಬಲಾಯಿತು. ಹೊಸ ಕಲ್ಪನೆಗಳು ಮೂಡಿದವು. ನವೋದ್ಯಮ, ಆವಿಷ್ಕಾರ, ಸಾಂಪ್ರದಾಯಿಕ ಔಷಧ, ಯುವ ಸಬಲೀಕರಣ, ಡಿಜಿಟಲ್ ಸೇರ್ಪಡೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರ ಕೋರುವುದನ್ನು ಆರಂಭಿಸಲಾಯಿತು.
ಎಸ್‌ಸಿಒ ಅನ್ನು ಸರ್ಕಾರಗಳ ಆಚೆಗೂ ಕೊಂಡೊಯ್ಯಬೇಕು ಎನ್ನುವುದು ನಮ್ಮ ಪ್ರಯತ್ನ. ಜನರು, ಯುವ ವಿಜ್ಞಾನಿಗಳು, ವಿದ್ವಾಂಸರು ಮತ್ತು ನವೋದ್ಯಮಗಳನ್ನು ಸಂಪರ್ಕಿಸುವುದು.
ಇಂದು, ಜನರ ನಡುವೆ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ನಾನು ಮತ್ತೊಂದು ಪ್ರಸ್ತಾವವನ್ನು ಮುಂದಿಡುತ್ತೇನೆ. ಎಸ್‌ಸಿಒ ಅಡಿಯಲ್ಲಿ ನಾಗರಿಕತೆ ಮಾತುಕತೆ ವೇದಿಕೆಯನ್ನು ಸೃಷ್ಟಿಸುವುದು. ಇಂತಹ ವೇದಿಕೆಯು ನಮ್ಮ ಪುರಾತನ ನಾಗರಿಕತೆ, ಕಲೆ, ಸಾಹಿತ್ಯ ಮತ್ತು ಸಂಪ್ರದಾಯಗಳ ಶ್ರೀಮಂತಿಕೆಯನ್ನು ಜಾಗತಿಕ ವೇದಿಕೆಯಲ್ಲಿ ಹಂಚಿಕೊಳ್ಳಲು ಅವಕಾಶ ಕಲ್ಪಿಸುತ್ತದೆ.
ಗೌರವಾನ್ವಿತರೇ,
ಇಂದು, ಭಾರತವು ಸುಧಾರಣೆ, ಕಾರ್ಯನಿರ್ವಹಣೆ ಮತ್ತು ಪರಿವರ್ತನೆಯ ಗುರಿಗಳೊಂದಿಗೆ ಮುನ್ನಡೆಯುತ್ತಿದೆ. ಕೋವಿಡ್ ಬಿಕ್ಕಟ್ಟಿನಿಂದ ಜಾಗತಿಕ ಆರ್ಥಿಕ ಅಸ್ಥಿರಗಳವರೆಗೆ ನಾವು ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಲು ಪ್ರಯತ್ನಿಸಿದ್ದೇವೆ.
ನಾವು ನಿರಂತರವಾಗಿ ವ್ಯಾಪಕ ಸುಧಾರಣೆಗಳನ್ನು ಕೈಗೊಳ್ಳುತ್ತಿರುವುದರಿಂದ, ರಾಷ್ಟ್ರದ ಅಭಿವೃದ್ಧಿಗೆ ಮತ್ತು ಅಂತರರಾಷ್ಟ್ರೀಯ ಸಹಕಾರಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸಿವೆ. ಭಾರತದ ಈ ಅಭಿವೃದ್ಧಿಯ ಪಥದಲ್ಲಿ ಸಾಗಲು ನಾನು ಹೃದಯಪೂರ್ವಕವಾಗಿ ನಿಮ್ಮೆಲ್ಲರನ್ನೂ ಸ್ವಾಗತಿಸುತ್ತೇನೆ.
ಗೌರವಾನ್ವಿತರೇ,
ಸಮಯಕ್ಕೆ ತಕ್ಕಂತೆ ಎಸ್‌ಸಿಒ ತನ್ನ ನಿಲುವುಗಳನ್ನು ವ್ಯಕ್ತಪಡಿಸುತ್ತಿರುವುದು ತೃಪ್ತಿದಾಯಕವಾಗಿದೆ. ಸಂಘಟಿತ ಅಪರಾಧ, ಮಾದಕ ವಸ್ತುಗಳ ಸಾಗಾಣಿಕೆ ಮತ್ತು ಸೈಬರ್ ಭದ್ರತೆಯಂತಹ ಪ್ರಸ್ತುತ ಸವಾಲುಗಳನ್ನು ಎದುರಿಸಲು ಮತ್ತು ಪರಿಹರಿಸಲು ಹೊಸದಾಗಿ ನಾಲ್ಕು ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಸುಧಾರಣೆಗಳನ್ನು ನಾವು ಸ್ವಾಗತಿಸುತ್ತೇವೆ.
ಜಾಗತಿಕ ಸಂಸ್ಥೆಗಳಲ್ಲಿ ಎಸ್‌ಸಿಒ ಸದಸ್ಯರು ಪರಸ್ಪರ ಸಹಕಾರ ವೃದ್ಧಿಸಿಕೊಳ್ಳಬಹುದು. ವಿಶ್ವಸಂಸ್ಥೆಯ 80ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ನಾವು ವಿಶ್ವಸಂಸ್ಥೆಯ ಸುಧಾರಣೆ ಕೈಗೊಳ್ಳಬೇಕು ಎಂದು ನಾವು ಸರ್ವಾನುಮತದಿಂದ ಒತ್ತಾಯಿಸಬೇಕು.
ಹೊಸ ಪೀಳಿಗೆಯ ವರ್ಣರಂಜಿತ ಕನಸುಗಳನ್ನು ಕಪ್ಪು–ಬಿಳುಪು ಪರದೆಯ ಮೇಲೆ ಪ್ರದರ್ಶನ ಮಾಡಲು ಸಾಧ್ಯ ಇಲ್ಲ. ಈ ಪರದೆಯನ್ನೇ ಬದಲಾಯಿಸುವ ಕಾಲ ಬಂದಿದೆ.
ಬಹುಪಕ್ಷೀಯ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ಮಾರ್ಗದರ್ಶನ ನೀಡಲು ಎಸ್‌ಸಿಒ ಪ್ರಮುಖ ಪಾತ್ರವಹಿಸುತ್ತದೆ. ಈ ಮಹತ್ವದ ವಿಷಯದ ಬಗ್ಗೆ ನೀಡುವ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ.
ಗೌರವಾನ್ವಿತರೇ,
ಎಲ್ಲ ಪಾಲುದಾರರೊಂದಿಗೆ ಸಮನ್ವಯ ಮತ್ತು ಸಹಕಾರದೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ. ಎಸ್‌ಸಿಒದ ಮುಂದಿನ ಅಧ್ಯಕ್ಷರಾಗಲಿರುವ ಕಿರ್ಗಿಜಸ್ತಾನದ ಅಧ್ಯಕ್ಷರಾದ ಮತ್ತು ನನ್ನ ಸ್ನೇಹಿತ ಜಪಾರೋವ್ ಅವರಿಗೆ ನನ್ನ ಶುಭಾಶಯಗಳನ್ನು ಕೋರುತ್ತೇನೆ.
ಧನ್ಯವಾದಗಳು.
We are moving forward in close coordination and cooperation with all partners. I extend my best wishes to the next Chairman of the SCO, the President of Kyrgyzstan, and my friend, President Japarov
Thank you very much.


