ಭಾರತವಿಂದು ತಡೆಗಟ್ಟುವ ಸಮಗ್ರ ಆರೋಗ್ಯದ ದೃಷ್ಟಿಕೋನದ ಮೇಲೆ ಕೆಲಸ ಮಾಡುತ್ತಿದೆ: ಪ್ರಧಾನ ಮಂತ್ರಿ
ಕಳೆದ ಕೆಲವು ವರ್ಷಗಳಲ್ಲಿ ದೇಶದ ಆರೋಗ್ಯ ಮೂಲಸೌಕರ್ಯವು ಬಲಗೊಂಡಿದೆ; ಆಯುಷ್ಮಾನ್ ಭಾರತ್ ಯೋಜನೆ ಮತ್ತು ಆರೋಗ್ಯ ಮಂದಿರಗಳ ಮೂಲಕ ನೂರಾರು ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳು ತೆರೆಯಲ್ಪಟ್ಟಿವೆ, ಆರೋಗ್ಯ ಸೇವೆಗಳ ವ್ಯಾಪ್ತಿಯನ್ನು ಪ್ರತಿ ಹಳ್ಳಿಗೂ ವಿಸ್ತರಿಸಲಾಗಿದೆ: ಪ್ರಧಾನ ಮಂತ್ರಿ
ನಮ್ಮ ಯೋಗ ಮತ್ತು ಆಯುರ್ವೇದವು ಇಡೀ ವಿಶ್ವಾದ್ಯಂತ ಜನಪ್ರಿಯವಾಗುತ್ತಿವೆ: ಪ್ರಧಾನಮಂತ್ರಿ
ನಮ್ಮ ಶಿಕ್ಷಣ ವ್ಯವಸ್ಥೆಯನ್ನು ನೈಜ-ಪ್ರಪಂಚದ ಆರ್ಥಿಕತೆಯೊಂದಿಗೆ ಸಂಪರ್ಕಿಸುವ ಪ್ರಕ್ರಿಯೆಯನ್ನು ನಾವು ಮತ್ತಷ್ಟು ವೇಗಗೊಳಿಸಬೇಕು; ಕೃತಕ ಬುದ್ಧಿಮತ್ತೆ, ಆಟೋಮೇಷನ್, ಡಿಜಿಟಲ್ ಆರ್ಥಿಕತೆ ಮತ್ತು ವಿನ್ಯಾಸ-ಚಾಲಿತ ಉತ್ಪಾದನೆಯಂತಹ ವಿಷಯಗಳ ಮೇಲೆ ನಾವು ನಮ್ಮ ಗಮನ ಹೆಚ್ಚಿಸಬೇಕಾಗಿದೆ: ಪ್ರಧಾನಮಂತ್ರಿ
ಭಾರತವು ನಾವೀನ್ಯತೆ-ಚಾಲಿತ ಆರ್ಥಿಕತೆಯತ್ತ ಸಾಗುತ್ತಿದೆ: ಪ್ರಧಾನಮಂತ್ರಿ
ನಾವು ಇಂದು ಭವಿಷ್ಯದ ತಂತ್ರಜ್ಞಾನಗಳಿಗೆ ತಯಾರಿ ನಡೆಸುತ್ತಿರುವಾಗ ಅವಕಾಶಗಳ ಕೊರತೆಯಿಂದಾಗಿ ಯಾವುದೇ ಹೆಣ್ಣು ಮಗಳನ್ನು ತಡೆಯಬಾರದು ಎಂಬುದು ನಿರ್ಣಾಯಕ : ಪ್ರಧಾನ ಮಂತ್ರಿ
ಕಳೆದ ಕೆಲವು ವರ್ಷಗಳಲ್ಲಿ, ಕ್ರೀಡೆಗಳನ್ನು ರಾಷ್ಟ್ರೀಯ ಅಭಿವೃದ್ಧಿಯ ಮಹತ್ವವೆಂದು ನೋಡಲಾಗಿದೆ, ಖೇಲೋ ಇಂಡಿಯಾದಂತಹ ಉಪಕ್ರಮಗಳು ದೇಶದ ಕ್ರೀಡಾ ಪರಿಸರ ವ್ಯವಸ್ಥೆಗೆ ಹೊಸ ಶಕ್ತಿ ನೀಡಿವೆ; ದೇಶಾದ್ಯಂತ, ಕ್ರೀಡಾ ಮೂಲಸೌಕರ್ಯ ಬಲಪಡಿಸಲಾಗುತ್ತಿದೆ: ಪ್ರಧಾನಮಂತ್ರಿ

ಸ್ನೇಹಿತರೆ,

ಬಜೆಟ್ ನಂತರದ ವೆಬಿನಾರ್‌ಗಳ ಸರಣಿಯಲ್ಲಿ ಇಂದು 4ನೇ ಮತ್ತು ಅತ್ಯಂತ ಮಹತ್ವದ ವೆಬಿನಾರ್‌ ನಡೆಸಲಾಗುತ್ತಿದೆ. ಜನರ ಆಕಾಂಕ್ಷೆಗಳನ್ನು ಈಡೇರಿಸುವುದು ಕೇವಲ ಚರ್ಚೆಯ ವಿಷಯವಲ್ಲ - ಇದು ಈ ಬಜೆಟ್‌ನ ಪ್ರಮುಖ ಉದ್ದೇಶ ಮತ್ತು ಈ ಸರ್ಕಾರದ ದೃಢ ಸಂಕಲ್ಪವಾಗಿದೆ. ಶಿಕ್ಷಣ, ಕೌಶಲ್ಯ, ಆರೋಗ್ಯ, ಪ್ರವಾಸೋದ್ಯಮ, ಕ್ರೀಡೆ ಮತ್ತು ಸಂಸ್ಕೃತಿ ಈ ಆಕಾಂಕ್ಷೆಗಳನ್ನು ಈಡೇರಿಸುವ ಪ್ರಮುಖ ಸಾಧನಗಳಾಗಿ ಕಾರ್ಯ ನಿರ್ವಹಿಸುವ ಮೂಲಭೂತ ಕ್ಷೇತ್ರಗಳಾಗಿವೆ. ಆದ್ದರಿಂದ, ಈ ವೆಬಿನಾರ್‌ನಲ್ಲಿ ನಾವು ಈ ನಿರ್ಣಾಯಕ ಆಯಾಮ(ವಿಷಯ)ಗಳ ಬಗ್ಗೆ ಚರ್ಚಿಸುತ್ತಿದ್ದೇವೆ. ಬಜೆಟ್ ಘೋಷಣೆಗಳ ಅನುಷ್ಠಾನಕ್ಕಾಗಿ ಇಲ್ಲಿ ಉಪಸ್ಥಿತರಿರುವ ಎಲ್ಲಾ ತಜ್ಞರು,  ನೀತಿ ನಿರೂಪಕರು, ವಿದ್ವಾಂಸರು, ಉದ್ಯಮಿಗಳು ಮತ್ತು ನನ್ನ ಯುವ ಒಡನಾಡಿಗಳ ಆಲೋಚನೆಗಳು ಮತ್ತು ಸಲಹೆಗಳು ಅತ್ಯಂತ ಮುಖ್ಯ. ಬಜೆಟ್ ವೆಬಿನಾರ್‌ನ ಈ 4ನೇ ಕಲಾಪದಲ್ಲಿ ನಾನು ನಿಮ್ಮೆಲ್ಲರನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.

ಸ್ನೇಹಿತರೆ,

ಭಾರತವಿಂದು ತಡೆಗಟ್ಟುವ ಸಮಗ್ರ ಆರೋಗ್ಯಕ್ಕಾಗಿ ವಿಶಾಲ ದೃಷ್ಟಿಕೋನದ ಮೇಲೆ ಕೆಲಸ ಮಾಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ದೇಶದ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಲಾಗಿದೆ, ಜಿಲ್ಲೆಗಳಲ್ಲಿ ನೂರಾರು ಹೊಸ ವೈದ್ಯಕೀಯ ಕಾಲೇಜುಗಳು ತೆರೆಯಲ್ಪಟ್ಟಿವೆ. ಆಯುಷ್ಮಾನ್ ಭಾರತ್ ಯೋಜನೆ ಮತ್ತು ಯೋಗಕ್ಷೇಮ ಕೇಂದ್ರಗಳ ಮೂಲಕ ಆರೋಗ್ಯ ಸೇವೆಗಳು ದೇಶಾದ್ಯಂತ ಹಳ್ಳಿಗಳಿಗೆ ವಿಸ್ತರಿಸಿವೆ. ನಮ್ಮ ಯೋಗ ಮತ್ತು ಆಯುರ್ವೇದವು ವಿಶ್ವಾದ್ಯಂತ ಜನಪ್ರಿಯತೆ ಗಳಿಸುತ್ತಿವೆ. ನೀವು ಇದರ ವಿವಿಧ ಅಂಶಗಳನ್ನು ಖಂಡಿತವಾಗಿಯೂ ಚರ್ಚಿಸುವಿರಿ, ಆದರೆ ನಾನು ಒಂದು ಪ್ರಮುಖ ವಿಷಯದ ಮೇಲೆ ಬೆಳಕು ಚೆಲ್ಲಲು ಬಯಸುತ್ತೇನೆ - ಅದೆಂದರೆ ಆರೈಕೆ ಆರ್ಥಿಕತೆ. ಮುಂಬರುವ ದಶಕದಲ್ಲಿ, ದೇಶದಲ್ಲಿ ಹಿರಿಯ ನಾಗರಿಕರ ಸಂಖ್ಯೆ ವೇಗವಾಗಿ ಏರುತ್ತದೆ. ಇದಲ್ಲದೆ, ಇಂದಿಗೂ ವಿಶ್ವಾದ್ಯಂತ ಅನೇಕ ದೇಶಗಳು ಆರೈಕೆದಾರರಿಗೆ ಭಾರಿ ಬೇಡಿಕೆ ಎದುರಿಸುತ್ತವೆ. ಆದ್ದರಿಂದ  ಆರೋಗ್ಯ ಕ್ಷೇತ್ರದಲ್ಲಿ ಲಕ್ಷಾಂತರ ಯುವಕರಿಗೆ ಹೊಸ ಕೌಶಲ್ಯ ಆಧಾರಿತ ಉದ್ಯೋಗಾವಕಾಶಗಳು ಹೊರಹೊಮ್ಮುತ್ತಿವೆ. ದೇಶದಲ್ಲಿ ತರಬೇತಿ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಹೊಸ ತರಬೇತಿ ಮಾದರಿಗಳು ಮತ್ತು ಪಾಲುದಾರಿಕೆಗಳನ್ನು ಸೂಚಿಸಲು ಈ ವೆಬಿನಾರ್‌ನಲ್ಲಿ ಹಾಜರಿರುವ ಆರೋಗ್ಯ ವಲಯದ ತಜ್ಞರನ್ನು ನಾನು ಒತ್ತಾಯಿಸುತ್ತೇನೆ.

 

ಸ್ನೇಹಿತರೆ,

ಇದಕ್ಕೆ ನಿಕಟ ಸಂಬಂಧ ಹೊಂದಿರುವ ವಿಷಯ ಟೆಲಿಮೆಡಿಸಿನ್. ಇಂದು ದೂರದ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಇದರಿಂದ ಪ್ರಯೋಜನ ಪಡೆಯುತ್ತಿದ್ದಾರೆ, ಅದರ ಮೇಲಿನ ನಂಬಿಕೆ ಸ್ಥಿರವಾಗಿ ಬೆಳೆಯುತ್ತಿದೆ. ಆದಾಗ್ಯೂ, ಈ ಕ್ಷೇತ್ರದಲ್ಲಿ ಜಾಗೃತಿ ಮತ್ತು ಸುಲಭ ಪ್ರವೇಶದ ಅವಶ್ಯಕತೆ ಇನ್ನೂ ಇದೆ ಎಂಬುದನ್ನು ನಾನು ನಂಬುತ್ತೇನೆ.

ಸ್ನೇಹಿತರೆ,

ಕಳೆದ ದಶಕದಲ್ಲಿ ದೇಶದ ಮನಸ್ಥಿತಿಯಲ್ಲಿ ಪ್ರಮುಖ ಪರಿವರ್ತನೆಯಾಗಿದೆ. ಇಂದು  ಹಳ್ಳಿಗಳು, ಪಟ್ಟಣಗಳು ​​ಮತ್ತು ನಗರಗಳ ಗಡಿಗಳನ್ನು ಮೀರಿ, ಪ್ರತಿಯೊಬ್ಬ ಯುವ ಭಾರತೀಯನು ಹೊಸದನ್ನು ಮಾಡಲು ಬಯಸುತ್ತಾನೆ, ಸಾಧಿಸುವ ಮನೋಭಾವದಿಂದ ಪ್ರೇರೇಪಿತನಾಗುತ್ತಿದ್ದಾನೆ. ಹೊಸ ಪೀಳಿಗೆಯ ಈ ಹೊಸ ಮನಸ್ಥಿತಿಯು ದೇಶದ ದೊಡ್ಡ ಶಕ್ತಿಯಾಗಿದೆ,  ಉಜ್ವಲ ಭವಿಷ್ಯಕ್ಕಾಗಿ ಅದೇ ಅತ್ಯಮೂಲ್ಯ ಬಂಡವಾಳವಾಗಿದೆ. ಇದರ ಲಾಭ ಮಾಡಿಕೊಳ್ಳಲು ನಾವು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ನಿರಂತರವಾಗಿ ಆಧುನೀಕರಿಸಬೇಕು ಮತ್ತು ನವೀಕರಿಸಬೇಕು. ಹೊಸ ಶಿಕ್ಷಣ ನೀತಿಯು ಇದಕ್ಕೆ ಅಗತ್ಯವಾದ ಅಡಿಪಾಯ ಹಾಕಿದೆ. ಈಗ ನಮ್ಮ ಪಠ್ಯಕ್ರಮವು ಮಾರುಕಟ್ಟೆಯ ಅಗತ್ಯಗಳಿಗೆ ಅನುಗುಣವಾಗಿ ನವೀಕರಿಸಲ್ಪಡುವುದು ಅತ್ಯಗತ್ಯ! ನಮ್ಮ ಶಿಕ್ಷಣ ವ್ಯವಸ್ಥೆಯನ್ನು ನೈಜ-ಪ್ರಪಂಚದ ಆರ್ಥಿಕತೆಯೊಂದಿಗೆ ಜೋಡಿಸುವ ಪ್ರಕ್ರಿಯೆಯನ್ನು ನಾವು ವೇಗಗೊಳಿಸಬೇಕು. ನಾವು ಎಐ ಮತ್ತು ಆಟೋಮೇಷನ್, ಡಿಜಿಟಲ್ ಆರ್ಥಿಕತೆ ಮತ್ತು ವಿನ್ಯಾಸ-ಚಾಲಿತ ಉತ್ಪಾದನೆಯಂತಹ ವಿಷಯಗಳ ಮೇಲೆ ಹೆಚ್ಚಿನ ಗಮನ ಹರಿಸಬೇಕಾಗಿದೆ.

ಸ್ನೇಹಿತರೆ,

ದೇಶವು ಶಿಕ್ಷಣವನ್ನು ಉದ್ಯೋಗ ಮತ್ತು ಉದ್ಯಮದೊಂದಿಗೆ ಸಂಪರ್ಕಿಸಲು ನಿರಂತರವಾಗಿ ಕೆಲಸ ಮಾಡುತ್ತಿದೆ. ವಿಶ್ವವಿದ್ಯಾನಿಲಯದ ಪಟ್ಟಣಗಳಂತಹ ಹೊಸ ಮಾದರಿಗಳು ಈ ವಿಧಾನವನ್ನು ಪ್ರತಿಬಿಂಬಿಸುತ್ತಿವೆ. ಇಂದು ಭಾರತವು ಎವಿಸಿಜಿ ವಲಯ – ಅಂದರೆ ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ ಅನ್ನು ಉತ್ತೇಜಿಸುತ್ತಿದೆ. ಭಾರತವು ನಾವೀನ್ಯತೆ-ಚಾಲಿತ ಆರ್ಥಿಕತೆಯತ್ತ ಸಾಗುತ್ತಿದೆ. ಅನೇಕ ಶಿಕ್ಷಣ ತಜ್ಞರು ಮತ್ತು ಶೈಕ್ಷಣಿಕ ಸಂಸ್ಥೆಗಳು ಇಂದು ಈ ವೆಬಿನಾರ್‌ಗೆ ಸಂಪರ್ಕ ಹೊಂದಿವೆ. ನಿಮ್ಮ ಕ್ಯಾಂಪಸ್‌ಗಳನ್ನು ಉದ್ಯಮ ಸಹಭಾಗಿತ್ವ ಮತ್ತು ಸಂಶೋಧನೆ-ಚಾಲಿತ ಕಲಿಕೆಯ ಕೇಂದ್ರಗಳಾಗಿ ಅಭಿವೃದ್ಧಿಪಡಿಸುವ ಬಗ್ಗೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಇದು ವಿದ್ಯಾರ್ಥಿಗಳಿಗೆ ನೈಜ-ಜಗತ್ತಿನ ಮಾನ್ಯತೆಯನ್ನು ಒದಗಿಸುತ್ತದೆ ಮತ್ತು ಕೌಶಲ್ಯ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತದೆ.

ಸ್ನೇಹಿತರೆ,

ಬಹಳ ಮುಖ್ಯವಾದ ವಿಷಯವೆಂದರೆ STEM-ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ. ನಮ್ಮ ದೇಶದಲ್ಲಿ STEM ವಿಷಯಗಳಲ್ಲಿ ಆಸಕ್ತಿ ತೋರುವ ಹೆಣ್ಣು ಮಕ್ಕಳ ಸಂಖ್ಯೆ ಸ್ಥಿರವಾಗಿ ಹೆಚ್ಚುತ್ತಿರುವುದು ಬಹಳ ಹೆಮ್ಮೆಯ ವಿಷಯ. ಭವಿಷ್ಯದ ತಂತ್ರಜ್ಞಾನಗಳಿಗೆ ನಾವು ತಯಾರಿ ನಡೆಸುತ್ತಿರುವಾಗ, ಅವಕಾಶಗಳ ಕೊರತೆಯಿಂದಾಗಿ ಯಾವುದೇ ಮಗಳು ಹಿಂದೆ ಸರಿಯಬಾರದು ಎಂಬುದು ಬಹಳ ಮುಖ್ಯ. ಈ ವೆಬಿನಾರ್‌ನಲ್ಲಿ, ನೀವು ಈ ದಿಕ್ಕಿನಲ್ಲಿ ಚರ್ಚಿಸಬೇಕು. ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸುವ ಬಗ್ಗೆ ನಾವು ಹೆಚ್ಚಿನ ಒತ್ತು ನೀಡಬೇಕಾಗಿದೆ. ಯುವ ಸಂಶೋಧಕರು ಹೊಸ ಆಲೋಚನೆಗಳ ಮೇಲೆ ಪ್ರಯೋಗ ಮಾಡಲು ಮತ್ತು ಕೆಲಸ ಮಾಡಲು ಪೂರ್ಣ ಅವಕಾಶಗಳನ್ನು ಹೊಂದಿರುವ ಸಂಶೋಧನಾ ಪರಿಸರ ವ್ಯವಸ್ಥೆಯನ್ನು ನಾವು ನಿರ್ಮಿಸಬೇಕು.

 

ಸ್ನೇಹಿತರೆ,

ಯುವ ಶಕ್ತಿಯು ಆರೋಗ್ಯಕರ, ಶಿಸ್ತುಬದ್ಧ ಮತ್ತು ಆತ್ಮವಿಶ್ವಾಸದಿಂದ ತುಂಬಿದಾಗ ಮಾತ್ರ ರಾಷ್ಟ್ರೀಯ ಶಕ್ತಿಯಾಗುತ್ತದೆ. ಅದಕ್ಕಾಗಿಯೇ ಇತ್ತೀಚಿನ ವರ್ಷಗಳಲ್ಲಿ ಕ್ರೀಡೆಗಳನ್ನು ರಾಷ್ಟ್ರೀಯ ಅಭಿವೃದ್ಧಿಯ ಪ್ರಮುಖ ಚಾಲನಾಶಕ್ತಿಯಾಗಿ ನೋಡಲಾಗುತ್ತಿದೆ. ಖೇಲೋ ಇಂಡಿಯಾದಂತಹ ಉಪಕ್ರಮಗಳು ದೇಶದ ಕ್ರೀಡಾ ಪರಿಸರ ವ್ಯವಸ್ಥೆಯಲ್ಲಿ ಹೊಸ ಶಕ್ತಿ ತುಂಬಿವೆ. ರಾಷ್ಟ್ರದಾದ್ಯಂತ ಕ್ರೀಡಾ ಮೂಲಸೌಕರ್ಯವನ್ನು ಬಲಪಡಿಸಲಾಗುತ್ತಿದೆ. ಈ ವೆಬಿನಾರ್‌ನಲ್ಲಿ ನೀವು ಕೆಲವು ಪ್ರಮುಖ ಪ್ರಶ್ನೆಗಳ ಕುರಿತು ಚರ್ಚಿಸಬೇಕು: ಸಣ್ಣ ಪಟ್ಟಣಗಳು ​​ಮತ್ತು ಹಳ್ಳಿಗಳಿಂದಲೂ ಪ್ರತಿಭೆಯನ್ನು ಹೇಗೆ ಹೆಚ್ಚು ನಿಖರವಾಗಿ ಗುರುತಿಸಬಹುದು? ಸಾವಿರಾರು ಕ್ರೀಡಾಪಟುಗಳಿಗೆ ರಚನಾತ್ಮಕ ಆರ್ಥಿಕ ಬೆಂಬಲವನ್ನು ಹೇಗೆ ಸುಧಾರಿಸಬಹುದು? ಮತ್ತು ಮೂರನೆಯದಾಗಿ, ನಮ್ಮ ಕ್ರೀಡಾ ಸಂಸ್ಥೆಗಳನ್ನು ಹೇಗೆ ಹೆಚ್ಚು ವೃತ್ತಿಪರರನ್ನಾಗಿ ಮಾಡಬಹುದು? ಮುಂಬರುವ ವರ್ಷಗಳಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಭಾರತದಲ್ಲಿ ನಡೆಸಲಾಗುವುದು. ದೇಶವು ಒಲಿಂಪಿಕ್ಸ್ ಆಯೋಜಿಸಲು ಶ್ರಮಿಸುತ್ತಿದೆ. ಅಂತಹ ಸನ್ನಿವೇಶದಲ್ಲಿ ನಾವು ಚಿಕ್ಕ ವಯಸ್ಸಿನಲ್ಲಿಯೇ ಯುವ ಕ್ರೀಡಾಪಟುಗಳನ್ನು ಗುರುತಿಸಿ ಅವರನ್ನು ಪೋಷಿಸಬೇಕು, ಆಗ ಮಾತ್ರ ಭಾರತವು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ತನ್ನ ಧ್ವಜವನ್ನು ಎತ್ತರಕ್ಕೆ ಹಾರಿಸಲು ಸಾಧ್ಯವಾಗುತ್ತದೆ.

ಸ್ನೇಹಿತರೆ,

ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರವಾಸೋದ್ಯಮವು ಒಂದು ಸ್ಥಳದಲ್ಲಿ ಬೆಳೆದಾಗ,  ಆ ಸ್ಥಳ ಅಥವಾ ನಗರದ ಬ್ರ್ಯಾಂಡಿಂಗ್ ಕೂಡ ಹೆಚ್ಚಾಗುತ್ತದೆ. ಇದು ಆ ನಗರದ ಒಟ್ಟಾರೆ ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ. ಭಾರತದಲ್ಲಿ ಐತಿಹಾಸಿಕ ತಾಣಗಳಿಗೆ ಕೊರತೆಯಿಲ್ಲ. ಆದರೆ ಬಹಳ ಕಾಲದವರೆಗೆ ಪ್ರವಾಸೋದ್ಯಮವು ಕೆಲವು ಆಯ್ದ ತಾಣಗಳಿಗೆ ಮಾತ್ರ ಸೀಮಿತವಾಗಿತ್ತು. ಈಗ ನಾವು ದೇಶದ ಪ್ರತಿಯೊಂದು ಮೂಲೆಯಲ್ಲೂ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಿದ್ದೇವೆ.

ಸ್ನೇಹಿತರೆ,

ಈ ವೆಬಿನಾರ್‌ನಲ್ಲಿ ಭಾರತದ ಪ್ರವಾಸೋದ್ಯಮ ಪರಿಸರ ವ್ಯವಸ್ಥೆ  ಬಲಪಡಿಸುವ ಸಮಗ್ರ ವಿಧಾನವನ್ನು ನೀವು ಚರ್ಚಿಸಬೇಕು. ತರಬೇತಿ ಪಡೆದ ಮಾರ್ಗದರ್ಶಿಗಳು, ಆತಿಥ್ಯ ಕೌಶಲ್ಯಗಳು,  ಡಿಜಿಟಲ್ ಸಂಪರ್ಕ, ಸಮುದಾಯ ಭಾಗವಹಿಸುವಿಕೆ, ಸ್ವಚ್ಛತೆ, ಪ್ರವಾಸೋದ್ಯಮ ಮತ್ತು ಸಂಬಂಧಿತ ವಿಷಯಗಳ ಕುರಿತು ನಿಮ್ಮ ಸಲಹೆಗಳು ಬಹಳ ಮುಖ್ಯವಾಗುತ್ತವೆ.

ಸ್ನೇಹಿತರೆ,

ಸಂಸ್ಥೆಗಳು, ಕೈಗಾರಿಕೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಿದಾಗ ಪರಿವರ್ತನೆಯ ವೇಗವು ಹೆಚ್ಚಾಗುತ್ತದೆ. ಬಜೆಟ್ ನಂತರದ ಈ ವೆಬಿನಾರ್‌ಗಳ ಸರಣಿಯು ಭವಿಷ್ಯಕ್ಕೆ ಸಂಕೀರ್ಣ ನಿರ್ದೇಶನ ಒದಗಿಸುತ್ತದೆ ಎಂಬ ವಿಶ್ವಾಸ ನನಗಿದೆ. ಅಂತಹ ಪ್ರಯತ್ನಗಳು ಅಭಿವೃದ್ಧಿ ಹೊಂದಿದ ಭಾರತದ ಅಡಿಪಾಯವನ್ನು ಮತ್ತಷ್ಟು ಬಲಪಡಿಸುತ್ತವೆ.

ಮತ್ತು ಸ್ನೇಹಿತರೆ,

ಬಜೆಟ್ ನಂತರ ಮತ್ತು ವಿಶೇಷವಾಗಿ ಅನುಷ್ಠಾನದ ಸಮಯದಲ್ಲಿ ವೆಬಿನಾರ್‌ಗಳ ಸಂಪ್ರದಾಯದಿಂದಾಗಿ ಈ ವರ್ಷ, ಈ ವಿಷಯಗಳಿಗೆ ಸಂಬಂಧಿಸಿದ ಲಕ್ಷಾಂತರ ಜನರು – ತಜ್ಞರು, ಫಲಾನುಭವಿಗಳು ಮತ್ತು ವ್ಯವಸ್ಥೆಯಲ್ಲಿ ತೊಡಗಿಸಿಕೊಂಡವರು ವೆಬಿನಾರ್‌ಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ ಎಂದು ನನಗೆ ತಿಳಿದುಬಂದಿದೆ ಎಂಬುದು ಬಹಳ ಆಹ್ಲಾದಕರ ಅನುಭವವಾಗಿದೆ. ಅತ್ಯುತ್ತಮ ಮತ್ತು ಪ್ರಾಯೋಗಿಕ ಸಲಹೆಗಳು ಬರುತ್ತಿವೆ ಎಂದು ನಮ್ಮ ಅಧಿಕಾರಿಗಳು ನನಗೆ ತಿಳಿಸಿದ್ದಾರೆ. ಇದರರ್ಥ ಸಮಸ್ಯೆಗಳಿಗೆ ಪರಿಹಾರಗಳು ಮಾತ್ರವಲ್ಲದೆ, ಹೊಸ ಶಕ್ತಿ ಮತ್ತು ಆತ್ಮವಿಶ್ವಾಸದಿಂದ ಮುಂದುವರಿಯಲು ಹೊಸ ಆವೇಗ ಬರುತ್ತಿದೆ. ಇದು ವೆಬಿನಾರ್‌ಗಳ ಅತ್ಯಂತ ಸಂತೋಷಕರ ಅನುಭವ ಎಂದು ನಾನು ಹೇಳುತ್ತೇನೆ. ಈ ವೆಬಿನಾರ್‌ಗಳಲ್ಲಿ ಭಾಗವಹಿಸಿದ ಎಲ್ಲರೂ ಮೆಚ್ಚುಗೆ ಮತ್ತು ಕೃತಜ್ಞತೆಗೆ ಅರ್ಹರು. ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು ಮತ್ತು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ನಮಸ್ಕಾರ!

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
The Nari Shakti Decade: How 12 years of policy reforms under Modi govt transformed lives of women in Bharat

Media Coverage

The Nari Shakti Decade: How 12 years of policy reforms under Modi govt transformed lives of women in Bharat
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 7 ಜೂನ್ 2026
June 07, 2026

India on the Rise: Celebrating Milestones from Grassroots to the Global Stage Under the Leadership of PM Modi