ಗೌರವಾನ್ವಿತ ಪ್ರಧಾನ ಮಂತ್ರಿ ಕ್ರಿಸ್ಟೋಫರ್ ಲಕ್ಸನ್,

ಭಾರತ ಮತ್ತು ನ್ಯೂಜಿಲೆಂಡ್‌ನ ಉದ್ಯಮ ರಂಗದ ದಿಗ್ಗಜರೆ,

ನಮಸ್ಕಾರ!

ಆಕ್ಲೆಂಡ್‌ನಲ್ಲಿ ನಿಮ್ಮೆಲ್ಲರೊಂದಿಗೆ ಇಲ್ಲಿರುವುದು ನನಗೆ ಸಂತೋಷ ತಂದಿದೆ. ಪ್ರಧಾನ ಮಂತ್ರಿ ಲಕ್ಸನ್ ಅವರ ಸಕಾರಾತ್ಮಕ ದೃಷ್ಟಿಕೋನ ಮತ್ತು ಭಾರತದ ಬಗ್ಗೆ ಅವರು ಹೊಂದಿರುವ ಆಳವಾದ ಬದ್ಧತೆಗಾಗಿ ನಾನು ಅವರಿಗೆ ನನ್ನ ವಿಶೇಷ ಕೃತಜ್ಞತೆ ವ್ಯಕ್ತಪಡಿಸಲು ಬಯಸುತ್ತೇನೆ.

ಇಲ್ಲಿ ನಿಮ್ಮ ಉಪಸ್ಥಿತಿಯು ನ್ಯೂಜಿಲೆಂಡ್‌ನ ನಾವೀನ್ಯತೆ, ಉದ್ಯಮಶೀಲತೆ ಮತ್ತು ಭವಿಷ್ಯದ ದೃಷ್ಟಿಕೋನದ ಮನೋಭಾವವನ್ನು ಪ್ರತಿಬಿಂಬಿಸುತ್ತಿದೆ. ಭಾರತದ ಪರವಾಗಿ, ನಾನು 140 ಕೋಟಿ ಜನರ ಆಕಾಂಕ್ಷೆಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಹೊತ್ತುಕೊಂಡು ಬಂದಿದ್ದೇನೆ.

ಸ್ನೇಹಿತರೆ,

ಭಾರತ-ನ್ಯೂಜಿಲೆಂಡ್ ಸಂಬಂಧಗಳು ಒಂದು ಮಹತ್ವದ ಘಟ್ಟದಲ್ಲಿರುವ ಸಮಯದಲ್ಲಿ ಈ ಸಭೆ ನಡೆಯುತ್ತಿದೆ. ಇಂದು ನಾವು ನಮ್ಮ ಸಂಬಂಧವನ್ನು ಕಾರ್ಯತಂತ್ರ ಪಾಲುದಾರಿಕೆಗೆ ಏರಿಸುತ್ತಿದ್ದೇವೆ. ಇದು ಕೇವಲ ರಾಜತಾಂತ್ರಿಕ ಮೈಲಿಗಲ್ಲು ಅಲ್ಲ, ಇದು ನಮ್ಮ ಹಂಚಿಕೆಯ ಭವಿಷ್ಯಕ್ಕೆ ಹೊಸ ಬದ್ಧತೆಯಾಗಿದೆ.

ಈ ವರ್ಷ ಭಾರತ ಮತ್ತು ನ್ಯೂಜಿಲೆಂಡ್ ಕೇವಲ 9 ತಿಂಗಳ ದಾಖಲೆಯ ಸಮಯದಲ್ಲಿ ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿವೆ. ಇದು ನಿಮ್ಮೆಲ್ಲರಿಗೂ ಮಾರುಕಟ್ಟೆ ಪ್ರವೇಶ, ಹೂಡಿಕೆ, ಸೇವೆಗಳು, ತಂತ್ರಜ್ಞಾನ ಮತ್ತು ಪ್ರತಿಭೆ ಚಲನಶೀಲತೆಯಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ನವೀಕೃತ ಶಕ್ತಿ ಮತ್ತು ಉತ್ಸಾಹದಿಂದ 2030ರ ವೇಳೆಗೆ ನಮ್ಮ ದ್ವಿಪಕ್ಷೀಯ ವ್ಯಾಪಾರವನ್ನು 2 ಪಟ್ಟು ಹೆಚ್ಚಿಸುತ್ತೇವೆ ಎಂಬ ವಿಶ್ವಾಸ ನನಗಿದೆ.

ನ್ಯೂಜಿಲೆಂಡ್ ಕೂಡ ಮುಂದಿನ 15 ವರ್ಷಗಳಲ್ಲಿ ಭಾರತದಲ್ಲಿ 20 ಶತಕೋಟಿ ಡಾಲರ್ ಮೊತ್ತದ ಹೂಡಿಕೆ ಮಾಡುವ ಬದ್ಧತೆ ಘೋಷಿಸಿದೆ. ಇದು ಹೂಡಿಕೆಯ ಬದ್ಧತೆ ಮಾತ್ರವಾಗಿರದೆ, ಭಾರತದ ಬೆಳವಣಿಗೆಯ ಪ್ರಯಾಣದಲ್ಲಿ ಪಾಲುದಾರನಾಗುವ ಬದ್ಧತೆಯನ್ನು ಸಹ ಪ್ರತಿಬಿಂಬಿಸುತ್ತಿದೆ.

ಸ್ನೇಹಿತರೆ,

ಇಂದು ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ನಮ್ಮ ವಿಸ್ತರಿಸುತ್ತಿರುವ ಮಧ್ಯಮ ವರ್ಗ, ದೊಡ್ಡ ಪ್ರಮಾಣದ ಡಿಜಿಟಲ್ ಅಳವಡಿಕೆ ಮತ್ತು ಬಲಿಷ್ಠ ಮೂಲಸೌಕರ್ಯವು ಭಾರತವನ್ನು ಒಂದು ವಿಶಿಷ್ಟ ಬೆಳವಣಿಗೆಯ ಯಶೋಗಾಥೆಯನ್ನಾಗಿ ಮಾಡಿದೆ.

ಭಾರತದಲ್ಲಿ ನಾವು ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆಯನ್ನು ಆಡಳಿತದ ಅಡಿಪಾಯವನ್ನಾಗಿ ಮಾಡಿದ್ದೇವೆ. ಇಂದು ಭಾರತವು ನೀತಿ ಸ್ಥಿರತೆ, ರಾಜಕೀಯ ಸ್ಥಿರತೆ ಮತ್ತು ಬೆಳವಣಿಗೆಯ ನಿರಂತರತೆಯನ್ನು ಕಾಣುತ್ತಿದೆ.

ಆದ್ದರಿಂದ, ಜಗತ್ತಿಗೆ ನಮ್ಮ ಸಂದೇಶ ಸ್ಪಷ್ಟವಾಗಿದೆ. ಭಾರತವು ಕೇವಲ ಮಾರುಕಟ್ಟೆಯಾಗಿರದೆ, ಭಾರತವು ಜಾಗತಿಕ ಬೆಳವಣಿಗೆಗೆ ಗಮ್ಯತಾಣವಾಗಿದೆ.

ಭಾರತದಲ್ಲಿ ಹೊರಹೊಮ್ಮುತ್ತಿರುವ ಅವಕಾಶಗಳ ಲಾಭ ಪಡೆಯುವಂತೆ ನಿಮಗೆ ಸಹಾಯ ಮಾಡಲು, ನಾನು ಕೆಲವು ಉದಾಹರಣೆಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ಉತ್ಪಾದನೆ ಹೆಚ್ಚಿಸಲು, ನಾವು ಉತ್ಪಾದನೆ ಸಂಬಂಧಿತ ಪ್ರೋತ್ಸಾಹಕ ಯೋಜನೆ ಪ್ರಾರಂಭಿಸಿದ್ದೇವೆ. ಈ ಉಪಕ್ರಮದಡಿ, ಆಹಾರ ಸಂಸ್ಕರಣೆಯಿಂದ ಹಿಡಿದು ಜವಳಿಗಳ ತನಕ 14 ವಲಯಗಳಲ್ಲಿ ಸುಮಾರು 20 ಶತಕೋಟಿ ಡಾಲರ್ ಬೆಂಬಲ ವಿಸ್ತರಿಸಲಾಗುತ್ತಿದೆ. ಈ ಉತ್ಪಾದನಾ ಆವೇಗದ ಭಾಗವಾಗಲು ನಾನು ನಿಮ್ಮೆಲ್ಲರನ್ನು ಆಹ್ವಾನಿಸುತ್ತೇನೆ.

ಭಾರತದಲ್ಲಿ ವಿಮಾನ ನಿಲ್ದಾಣಗಳು, ಪ್ರಾದೇಶಿಕ ಸಂಪರ್ಕ, ವಾಯು ಸರಕು ಮತ್ತು ಪ್ರವಾಸೋದ್ಯಮ ವೇಗವಾಗಿ ವಿಸ್ತರಿಸುತ್ತಿವೆ. ಇಂದು ಭಾರತವು ವಿಶ್ವದ 3ನೇ ಅತಿದೊಡ್ಡ ದೇಶೀಯ ವಾಯುಯಾನ ಮಾರುಕಟ್ಟೆಯಾಗಿದೆ. ಒಟ್ಟಾಗಿ, ನಾವು ಸರಕು ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸಬಹುದು, ವಿಮಾನ ಸಂಪರ್ಕವನ್ನು ಬಲಪಡಿಸಬಹುದು ಮತ್ತು ಜಂಟಿ ಪ್ರವಾಸೋದ್ಯಮ ಪ್ಯಾಕೇಜ್‌ಗಳನ್ನು ರೂಪಿಸಬಹುದು.

ಕಿವಿ ಹಣ್ಣು ಸೇಬು, ಜೇನುತುಪ್ಪ ಮತ್ತು ಸಮುದ್ರಾಹಾರದ ಹಾಳಾಗುವ(ಕೊಳೆಯುವ) ಸರಕುಗಳಿಗೆ ಪರಿಹಾರಗಳನ್ನು ಅಭಿವೃದ್ಧಿಪಡಿಸಬಹುದು. ನ್ಯೂಜಿಲೆಂಡ್ ತೋಟಗಾರಿಕೆ, ಡೇರಿ ವಿಜ್ಞಾನ ಮತ್ತು ಅರಣ್ಯೀಕರಣದಲ್ಲಿ ವ್ಯಾಪಕ ಪರಿಣತಿ ಹೊಂದಿದೆ, ಆದರೆ ಭಾರತವು ವಿಶಾಲವಾದ ಗ್ರಾಹಕ ಮಾರುಕಟ್ಟೆ, ಆಹಾರ ಉದ್ಯಾನವನಗಳು ಮತ್ತು ಕೃಷಿ-ತಂತ್ರಜ್ಞಾನ ಪ್ರತಿಭೆಯ ಬಲವನ್ನು ನೀಡುತ್ತದೆ. ಒಟ್ಟಾಗಿ, ನಾವು ಕೃಷಿಯಿಂದ ಮಾರುಕಟ್ಟೆ ತನಕ ಮೌಲ್ಯ ಸರಪಳಿಗಳು ಮತ್ತು ಜಾಗತಿಕ ರಫ್ತು ವೇದಿಕೆಗಳನ್ನು ನಿರ್ಮಿಸಬಹುದು.

ಇಂದು ಭಾರತವು ಹಣಕಾಸು ತಂತ್ರಜ್ಞಾನದಲ್ಲಿ ಜಾಗತಿಕ ಸರದಾರನಾಗಿದೆ. ವಿಶ್ವದ ನೈಜ-ಸಮಯದ ಡಿಜಿಟಲ್ ಪಾವತಿಗಳಲ್ಲಿ ಸುಮಾರು 50% ಪ್ರಮಾಣವನ್ನು ಭಾರತದಲ್ಲೇ ಸಂಸ್ಕರಿಸಲಾಗುತ್ತದೆ. ಈ ಬಲದ ಮೇಲೆ ನಿರ್ಮಿಸುವ ಮೂಲಕ, ನಾವು ಡಿಜಿಟಲ್ ಪಾವತಿಗಳಲ್ಲಿ ಮಾತ್ರವಲ್ಲದೆ, ಹಸಿರು ಬಾಂಡ್‌ಗಳು ಮತ್ತು ವೈವಿಧ್ಯಮಯ ಹಣಕಾಸುಗಳಲ್ಲಿಯೂ ನಮ್ಮ ಸಹಕಾರ ಆಳಗೊಳಿಸಬಹುದು.

ನಾವು ಬಾಹ್ಯಾಕಾಶ ವಲಯವನ್ನು ಖಾಸಗಿ ಭಾಗವಹಿಸುವಿಕೆಗೆ ಮುಕ್ತಗೊಳಿಸಿದ್ದೇವೆ. ಇಂದು ಭಾರತವು 400ಕ್ಕೂ ಹೆಚ್ಚು ಬಾಹ್ಯಾಕಾಶ ನವೋದ್ಯಮಗಳಿಗೆ ನೆಲೆಯಾಗಿದೆ. ಈ ವಲಯವು ಈಗಾಗಲೇ ತನ್ನ ಮೊದಲ ಯುನಿಕಾರ್ನ್ ತಯಾರಿಸಿದೆ. ನಮ್ಮ ಎರಡೂ ದೇಶಗಳ ಕಂಪನಿಗಳು ಭಾರತದ ಬಾಹ್ಯಾಕಾಶ ಪರಿಸರ ವ್ಯವಸ್ಥೆಯೊಳಗೆ ಸಣ್ಣ ಉಪಗ್ರಹಗಳು, ದೂರಸ್ಥ ಸಂವೇದನೆ ಮತ್ತು ಸಾಗರ ಮೇಲ್ವಿಚಾರಣೆಯಂತಹ ಕ್ಷೇತ್ರಗಳಲ್ಲಿ ಸಹಕಾರ ಹೊಂದಬಹುದು.

ಭಾರತದ ಸ್ಮಾರ್ಟ್ ಸಿಟಿಗಳ ಮಿಷನ್ ಅಡಿ, 100 ನಗರಗಳಲ್ಲಿ 8,000ಕ್ಕೂ ಹೆಚ್ಚು ಯೋಜನೆಗಳಲ್ಲಿ ಕೆಲಸ ನಡೆಯುತ್ತಿದೆ. ಒಟ್ಟಾಗಿ, ನಾವು ನಗರ ಚಲನಶೀಲತೆ, ನೀರು ನಿರ್ವಹಣೆ ಮತ್ತು ತ್ಯಾಜ್ಯ ನಿರ್ವಹಣೆಯಂತಹ ಕ್ಷೇತ್ರಗಳಲ್ಲಿ ಸಹಕಾರ ಹೊಂದಬಹುದು.

ಸ್ನೇಹಿತರೆ,

ಇಲ್ಲಿ ಉಪಸ್ಥಿತರಿರುವ ಮಾವೊರಿ ಉದ್ಯಮ ವ್ಯವಹಾರ ನಾಯಕರಿಗೆ ನಾನು ವಿಶೇಷವಾಗಿ ಸ್ವಾಗತ ಕೋರುತ್ತೇನೆ. ಭಾರತದ ನಾಗರಿಕತೆ ಮತ್ತು ಮಾವೊರಿ ಸಂಪ್ರದಾಯಗಳು ಪ್ರಕೃತಿ, ಸಮುದಾಯ ಮತ್ತು ಸುಸ್ಥಿರತೆಯ ಬಗ್ಗೆ ಆಳವಾದ ಗೌರವವನ್ನು ಹಂಚಿಕೊಳ್ಳುತ್ತವೆ. ನಮ್ಮ ಮುಕ್ತ ವ್ಯಾಪಾರ ಒಪ್ಪಂದವು ಮಾವೊರಿ ವ್ಯವಹಾರ ಅವಕಾಶಗಳಿಗೆ ವಿಶೇಷ ಒತ್ತು ನೀಡುತ್ತದೆ. ಈ ಹಂಚಿಕೆಯ ಮೌಲ್ಯಗಳನ್ನು ನಿರ್ಮಿಸುವ ಮೂಲಕ, ನಾವು ಎಲ್ಲರನ್ನೂ ಒಳಗೊಂಡ ಮತ್ತು ಸುಸ್ಥಿರ ವ್ಯಾಪಾರದ ಹೊಸ ಮಾದರಿ ರೂಪಿಸಬಹುದು.

ಸ್ನೇಹಿತರೆ,

ನಾವು ಜಂಟಿಯಾಗಿ ಹೆಚ್ಚು ಮಹತ್ವಾಕಾಂಕ್ಷೆಯ ವ್ಯಾಪಾರ ಮಾರ್ಗಸೂಚಿ ಅಭಿವೃದ್ಧಿಪಡಿಸಬೇಕೆಂದು ನಾನು ಪ್ರಸ್ತಾಪಿಸುತ್ತೇನೆ. ನಮ್ಮ ಸಾಮರ್ಥ್ಯಗಳನ್ನು ಒಟ್ಟುಗೂಡಿಸಿ, ಕನಿಷ್ಠ 5 ಪ್ರಮುಖ ಯೋಜನೆಗಳನ್ನು ಗುರುತಿಸಬೇಕು, ಅವುಗಳ ಯಶಸ್ವಿ ಅನುಷ್ಠಾನ ಖಚಿತಪಡಿಸಿಕೊಳ್ಳಲು ಸಮಯಕ್ಕೆ ಅನುಗುಣವಾಗಿ ಪರಿಶೀಲನಾ ಕಾರ್ಯವಿಧಾನ ಸ್ಥಾಪಿಸಬೇಕು. ಆಗ ಮಾತ್ರ ನಾವು ನಮ್ಮ ಪಾಲುದಾರಿಕೆಯ ಸಾಮರ್ಥ್ಯವನ್ನು ಸಂಪೂರ್ಣವಾಗಿ ಅರಿತುಕೊಳ್ಳಲು ಮತ್ತು ನಮ್ಮ ಎರಡೂ ದೇಶಗಳ ಜನರ ಆಕಾಂಕ್ಷೆಗಳು ಮತ್ತು ನಿರೀಕ್ಷೆಗಳಿಗೆ ತಕ್ಕಂತೆ ಬದುಕಲು ಸಾಧ್ಯವಾಗುತ್ತದೆ.

ಈ ಪ್ರಯಾಣದಲ್ಲಿ ನಮ್ಮೊಂದಿಗೆ ಸೇರುವಂತೆ, ಹೆಗಲಿಗೆ ಹೆಗಲು ಕೊಟ್ಟು ಮುಂದುವರಿಯುವಂತೆ ನಾನು ನಿಮ್ಮೆಲ್ಲರನ್ನು ಆಹ್ವಾನಿಸುತ್ತೇನೆ.

ನಮ್ಮ ಪಾಲುದಾರಿಕೆಯನ್ನು ಸಮೃದ್ಧಿಯ ವೇದಿಕೆಯನ್ನಾಗಿ, ನಾವೀನ್ಯತೆಯ ಸೇತುವೆಯನ್ನಾಗಿ ಮತ್ತು ಜಾಗತಿಕ ಒಳಿತಿಗಾಗಿ ಒಂದು ಶಕ್ತಿಯನ್ನಾಗಿ ಮಾಡೋಣ.

ಭಾರತ ಮತ್ತು ನ್ಯೂಜಿಲೆಂಡ್ ಒಟ್ಟಾಗಿ ಹೊಸ ಶಕ್ತಿಯಾಗಿ ಹೊರಹೊಮ್ಮಬೇಕೆಂದು ನಾನು ಬಯಸುತ್ತೇನೆ.

ನನ್ನ ಇನ್ನೊಂದು ಮನವಿ ಇದೆ. ನೀವು ಈಗಷ್ಟೇ ಹೇಳಿದಂತೆ, ಈ ವರ್ಷ ನಮ್ಮ ಎರಡೂ ದೇಶಗಳ ನಡುವಿನ ಕ್ರೀಡಾ ಸಂಬಂಧಗಳಿಗೆ 100 ವರ್ಷಗಳಾಗಿವೆ. ಇದು ಬಹಳ ಮಹತ್ವದ ಮೈಲಿಗಲ್ಲು.

ನಾವು ಖಂಡಿತವಾಗಿಯೂ ಈ ಮೈಲಿಗಲ್ಲನ್ನು ಆಚರಿಸುತ್ತೇವೆ. ಆದರೆ ನ್ಯೂಜಿಲೆಂಡ್‌ನಿಂದ 35 ವರ್ಷದೊಳಗಿನ ಉದ್ಯಮ ವ್ಯವಹಾರ ನಾಯಕರ ದೊಡ್ಡ ನಿಯೋಗವನ್ನು ಭಾರತಕ್ಕೆ ಕರೆತರುವ ಬಗ್ಗೆ ಮತ್ತು ಅದೇ ರೀತಿ, ಭಾರತದಿಂದ 35 ವರ್ಷದೊಳಗಿನ ವ್ಯಾಪಾರ ನಾಯಕರ ನಿಯೋಗವನ್ನು ನ್ಯೂಜಿಲೆಂಡ್‌ಗೆ ಕಳುಹಿಸುವ ಬಗ್ಗೆಯೂ ನಾವು ಯೋಚಿಸಬಹುದೇ? ಈ ರೀತಿಯಾಗಿ, ಈ ಪಾಲುದಾರಿಕೆಯನ್ನು ಮುಂದಕ್ಕೆ ಕೊಂಡೊಯ್ಯಲು ನಾವು ಹೊಸ ಪೀಳಿಗೆಯನ್ನು ಸಿದ್ಧಪಡಿಸಬಹುದು.

ಈ ಶುಭಾಶಯಗಳೊಂದಿಗೆ, ನಾನು ನಿಮ್ಮೆಲ್ಲರಿಗೂ ತುಂಬಾ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
UPI completes 10 years, clocks nearly 13,000-fold rise in transaction volume

Media Coverage

UPI completes 10 years, clocks nearly 13,000-fold rise in transaction volume
NM on the go

Nm on the go

Always be the first to hear from the PM. Get the App Now!
...
Prime Minister invites citizens to share their UPI experiences as UPI completes a decade
August 25, 2026

The Prime Minister, Shri Narendra Modi recalled the transformative journey of the Unified Payments Interface (UPI), which was rolled out a decade ago and marked a major turning point in India’s digital payments journey.

Highlighting the scale and reach achieved by UPI over the past ten years, Shri Modi said that its remarkable journey is something every Indian can be proud of. The Prime Minister invited citizens to share their experiences of using UPI and how it has impacted their daily lives.

The Prime Minister posted on X:

A decade ago, UPI was rolled out, marking a major turning point in India’s digital payments journey.

The sheer scale and reach of UPI are something every Indian must be proud of.

Tell me about your UPI experience and how it impacted your life...

#10YearsOfUPI