ಇಂದು ಭಾರತವು ತನ್ನದೇ ಆದ ಜ್ಞಾನ, ಸಂಪ್ರದಾಯ ಮತ್ತು ಪ್ರಾಚೀನ ಬೋಧನೆಗಳ ಆಧಾರದ ಮೇಲೆ ಮುನ್ನಡೆಯುತ್ತಿದೆ: ಪ್ರಧಾನಮಂತ್ರಿ
ವಿಕಸಿತ ಭಾರತದ ದೃಢ ಸಂಕಲ್ಪದೊಂದಿಗೆ ನಾವು ಅಮೃತ್ ಕಾಲದ ಹೊಸ ಪ್ರಯಾಣವನ್ನು ಪ್ರಾರಂಭಿಸಿದ್ದೇವೆ, ನಾವು ಅದನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕು: ಪ್ರಧಾನಮಂತ್ರಿ
ನಾವಿಂದು ನಮ್ಮ ಯುವಕರನ್ನು ರಾಷ್ಟ್ರ ನಿರ್ಮಾಣದ ಎಲ್ಲಾ ಕ್ಷೇತ್ರಗಳಲ್ಲಿ ನಾಯಕತ್ವಕ್ಕೆ ಸಿದ್ಧಪಡಿಸಬೇಕು, ನಮ್ಮ ಯುವಕರು ರಾಜಕೀಯದಲ್ಲಿಯೂ ದೇಶವನ್ನು ಮುನ್ನಡೆಸಬೇಕು: ಪ್ರಧಾನಮಂತ್ರಿ
21ನೇ ಶತಮಾನದ ಭಾರತೀಯ ರಾಜಕೀಯದ ಹೊಸ ಮುಖ, ದೇಶದ ಭವಿಷ್ಯವಾಗಲಿರುವ 1 ಲಕ್ಷ ಅದ್ಭುತ ಮತ್ತು ಶಕ್ತಿಯುತ ಯುವಕರನ್ನು ರಾಜಕೀಯಕ್ಕೆ ತರುವುದು ನಮ್ಮ ಸಂಕಲ್ಪವಾಗಿದೆ: ಪ್ರಧಾನ ಮಂತ್ರಿ
ಆಧ್ಯಾತ್ಮಿಕತೆ ಮತ್ತು ಸುಸ್ಥಿರ ಅಭಿವೃದ್ಧಿಯ 2 ಪ್ರಮುಖ ವಿಚಾರಗಳನ್ನು ನೆನಪಿಟ್ಟುಕೊಳ್ಳುವುದು ಮುಖ್ಯ, ಈ 2 ವಿಚಾರಗಳನ್ನು ಸಮನ್ವಯಗೊಳಿಸುವ ಮೂಲಕ ನಾವು ಉತ್ತಮ ಭವಿಷ್ಯ ರೂಪಿಸಬಹುದು: ಪ್ರಧಾನಮಂತ್ರಿ

ಗೌರವಾನ್ವಿತ ಸ್ವಾಮಿ ಗೌತಮಾನಂದ ಜೀ ಮಹಾರಾಜ್, ದೇಶ ಮತ್ತು ವಿದೇಶಗಳಲ್ಲಿರುವ ರಾಮಕೃಷ್ಣ ಮಿಷನ್ ಮತ್ತು ಮಠದ ಗೌರವಾನ್ವಿತ ಸಾಧು ಸಂತರು, ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್ ಮತ್ತು ಈ ಕಾರ್ಯಕ್ರಮಕ್ಕೆ ಭಾಗವಹಿಸಿರುವ ಎಲ್ಲಾ ಗಣ್ಯ ಅತಿಥಿಗಳೆ, ಮಹಿಳೆಯರೆ ಮತ್ತು ಮಹನೀಯರೆ, ನಮಸ್ಕಾರ!

ಗುಜರಾತಿನ ಮಗನಾಗಿ ನಾನು ನಿಮ್ಮೆಲ್ಲರನ್ನು ಈ ಕಾರ್ಯಕ್ರಮಕ್ಕೆ ಸ್ವಾಗತಿಸುತ್ತೇನೆ, ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಾನು ಶಾರದ ಮಾತೆ, ಗುರುದೇವ ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರ ಪಾದಗಳಿಗೆ ತಲೆಬಾಗಿ ನಮಸ್ಕರಿಸುತ್ತೇನೆ. ಇಂದಿನ ಕಾರ್ಯಕ್ರಮವನ್ನು ಸ್ವಾಮಿ ಪ್ರೇಮಾನಂದ ಮಹಾರಾಜ್ ಅವರ ಜನ್ಮದಿನದ ಸಂದರ್ಭದಲ್ಲಿ ಆಯೋಜಿಸಲಾಗಿದೆ. ನಾನು ಅವರಿಗೂ ಸಹ ಗೌರವ ನಮನ ಸಲ್ಲಿಸುತ್ತೇನೆ.

ಸ್ನೇಹಿತರೆ,

ಮಹಾನ್ ವ್ಯಕ್ತಿಗಳ ಶಕ್ತಿಯು ಅನೇಕ ಶತಮಾನಗಳಿಂದ ಜಗತ್ತಿನಲ್ಲಿ ಸಕಾರಾತ್ಮಕ ಸೃಷ್ಟಿಯನ್ನು ವಿಸ್ತರಿಸುತ್ತಲೇ ಇದೆ. ಅದಕ್ಕಾಗಿಯೇ ಇಂದು ಸ್ವಾಮಿ ಪ್ರೇಮಾನಂದ ಮಹಾರಾಜ್ ಅವರ ಜನ್ಮದಿನದಂದು ಇಂತಹ ಪವಿತ್ರ ಘಟನೆಯನ್ನು ನಾವು ನೋಡುತ್ತಿದ್ದೇವೆ. ಲೇಖಾಂಬಾದಲ್ಲಿ ಹೊಸದಾಗಿ ನಿರ್ಮಿಸಲಾದ ಪ್ರಾರ್ಥನಾ ಮಂದಿರ ಮತ್ತು ಸಾಧು ನಿವಾಸವು ಭಾರತದ ಸಂತ ಸಂಪ್ರದಾಯವನ್ನು ಪೋಷಿಸುತ್ತಿದೆ. ಇಲ್ಲಿ ಸೇವೆ ಮತ್ತು ಶಿಕ್ಷಣದ ಪಯಣ ಆರಂಭವಾಗುತ್ತಿದ್ದು, ಇದು ಮುಂದಿನ ಹಲವು ತಲೆಮಾರಿಗೆ ಪ್ರಯೋಜನವಾಗಲಿದೆ. ಶ್ರೀರಾಮಕೃಷ್ಣ ದೇವಸ್ಥಾನ, ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗಳು, ವೃತ್ತಿಪರ ತರಬೇತಿ ಕೇಂದ್ರಗಳು, ಆಸ್ಪತ್ರೆಗಳು ಮತ್ತು ಅತಿಥಿ ಗೃಹಗಳು ಆಧ್ಯಾತ್ಮಿಕತೆಯ ಪ್ರಸಾರ ಮತ್ತು ಮಾನವತೆಯ ಸೇವೆಗೆ ಮಾಧ್ಯಮವಾಗುತ್ತವೆ. ಒಂದು ರೀತಿಯಲ್ಲಿ ಗುಜರಾತ್‌ನಲ್ಲಿ ನನಗೂ 2ನೇ ನೆಲೆ ಸಿಕ್ಕಿದೆ. ನನ್ನ ಹೃದಯವು ಸಾಧು ಸಂತರ ಸಹವಾಸದಲ್ಲಿ ಮತ್ತು ಆಧ್ಯಾತ್ಮಿಕ ವಾತಾವರಣದಲ್ಲಿ ಶಾಂತಿ ಅನುಭವಿಸುತ್ತಿದೆ. ಈ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ನನ್ನ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ತಿಳಿಸುತ್ತೇನೆ.

 

ಸ್ನೇಹಿತರೆ,

ಸನಂದದ ಈ ಪ್ರದೇಶವು ನನಗೆ ಅನೇಕ ನೆನಪುಗಳನ್ನು ಹೊಂದಿದೆ. ಅನೇಕ ಹಳೆಯ ಸ್ನೇಹಿತರು ಮತ್ತು ಆಧ್ಯಾತ್ಮಿಕ ಸಹಚರರು ಈ ಕಾರ್ಯಕ್ರಮದ ಭಾಗವಾಗಿದ್ದಾರೆ. ನಾನು ಇಲ್ಲಿ ತುಂಬಾ ಸಮಯ ಕಳೆದಿದ್ದೇನೆ, ಅನೇಕ ಮನೆಗಳಲ್ಲಿ ಉಳಿದುಕೊಂಡಿದ್ದೇನೆ, ತಾಯಂದಿರು ಮತ್ತು ಸಹೋದರಿಯರ ಕೈಯಿಂದ ಮಾಡಿದ ಆಹಾರವನ್ನು ಆನಂದಿಸಿದ್ದೇನೆ, ಅವರ ಸಂತೋಷ ಮತ್ತು ದುಃಖಗಳನ್ನು ಹಂಚಿಕೊಂಡಿದ್ದೇನೆ. ನನ್ನ ಜೊತೆಗಿದ್ದ ಆ ಸ್ನೇಹಿತರಿಗೆ ಈ ಪ್ರದೇಶ ಎದುರಿಸಿದ ಹೋರಾಟಗಳು ಗೊತ್ತು. ಈ ಪ್ರದೇಶದ ಆರ್ಥಿಕ ಅಭಿವೃದ್ಧಿ ಈಗ ನಿಜವಾಗುತ್ತಿದೆ. ಹಿಂದಿನ ಕಾಲದಲ್ಲಿ ಬಸ್ಸಿನಲ್ಲಿ ಪ್ರಯಾಣಿಸಬೇಕಾದಾಗ ಬೆಳಿಗ್ಗೆ ಮತ್ತು ಸಂಜೆ ಒಂದು ಬಸ್ ಮಾತ್ರ ಇರುತ್ತಿತ್ತು, ಆದ್ದರಿಂದ ಹೆಚ್ಚಿನ ಜನರು ಸೈಕಲ್ ನಲ್ಲಿ ಪ್ರಯಾಣಿಸಲು ಆದ್ಯತೆ ನೀಡುತ್ತಿದ್ದರು. ನಾನು ಈ ಪ್ರದೇಶವನ್ನು ಚೆನ್ನಾಗಿ ತಿಳಿದಿದ್ದೇನೆ, ಅದು ನನ್ನ ಭಾಗವಾಗಿದೆ. ನಮ್ಮ ಪ್ರಯತ್ನಗಳು ಮತ್ತು ನೀತಿಗಳ ಜೊತೆಗೆ, ಸಂತರ ಆಶೀರ್ವಾದವು ಈ ಪರಿವರ್ತನೆಯಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ನಾನು ನಂಬುತ್ತೇನೆ. ಈಗ ಕಾಲ ಬದಲಾಗಿದೆ, ಸಮಾಜದ ಅಗತ್ಯಗಳೂ ಬದಲಾಗಿವೆ. ಈ ಪ್ರದೇಶವು ಆರ್ಥಿಕ ಮತ್ತು ಆಧ್ಯಾತ್ಮಿಕ ಅಭಿವೃದ್ಧಿಗೆ ಕೇಂದ್ರವಾಗಲಿದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಸಮತೋಲಿತ ಜೀವನಕ್ಕಾಗಿ, ಭೌತಿಕ ಸಂಪತ್ತು ಮತ್ತು ಆಧ್ಯಾತ್ಮಿಕತೆ ಎರಡೂ ಸಮಾನವಾಗಿ ಅವಶ್ಯಕವಾಗಿದೆ. ನಮ್ಮ ಸಂತರು ಮತ್ತು ಚಿಂತಕರ ಮಾರ್ಗದರ್ಶನದಲ್ಲಿ ಸನಂದ್ ಮತ್ತು ಗುಜರಾತ್ ಈ ದಿಸೆಯಲ್ಲಿ ಮುನ್ನಡೆಯುತ್ತಿರುವುದನ್ನು ಕಂಡು ನನಗೆ ಸಂತೋಷವಾಗುತ್ತಿದೆ.

ಸ್ನೇಹಿತರೆ,

ಯಾವುದೇ ಮರದ ಹಣ್ಣಿನ ಸತ್ವವು ಅದರ ಬೀಜದಿಂದ ತಿಳಿಯುತ್ತದೆ. ರಾಮಕೃಷ್ಣ ಮಠವು ಆ ಮರವಾಗಿದೆ, ಅದರ ಬೀಜವು ಸ್ವಾಮಿ ವಿವೇಕಾನಂದರಂತಹ ಮಹಾನ್ ತಪಸ್ವಿಗಳ ಅನಂತ ಶಕ್ತಿಯನ್ನು ಒಳಗೊಂಡಿದೆ. ಆದ್ದರಿಂದ, ಅದರ ನಿರಂತರ ವಿಸ್ತರಣೆ ಮತ್ತು ಮಾನವತೆಗೆ ಅದು ಒದಗಿಸುವ ನೆರಳು ಅಪರಿಮಿತವಾಗಿದೆ. ರಾಮಕೃಷ್ಣ ಮಠದ ಸಾರವನ್ನು ಅರ್ಥ ಮಾಡಿಕೊಳ್ಳಲು, ಒಬ್ಬರು ಸ್ವಾಮಿ ವಿವೇಕಾನಂದರನ್ನು ಅರ್ಥ ಮಾಡಿಕೊಳ್ಳಬೇಕು, ಮುಖ್ಯವಾಗಿ ಅವರ ಬೋಧನೆಗಳನ್ನು ಬದುಕಬೇಕು. ಒಮ್ಮೆ ನೀವು ಅವರ ಆಲೋಚನೆಗಳನ್ನು ಜೀವಿಸಲು ಪ್ರಾರಂಭಿಸಿದಾಗ, ವಿಭಿನ್ನ ಬೆಳಕು ನಿಮಗೆ ಹೇಗೆ ಮಾರ್ಗದರ್ಶನ ನೀಡುತ್ತದೆ ಎಂದು ನೀವು ಭಾವಿಸುತ್ತೀರಿ. ನಾನು ಇದನ್ನು ವೈಯಕ್ತಿಕವಾಗಿ ಅನುಭವಿಸಿದ್ದೇನೆ. ರಾಮಕೃಷ್ಣ ಮಿಷನ್, ಅದರ ಸಾಧು ಸಂತರು ಮತ್ತು ಸ್ವಾಮಿ ವಿವೇಕಾನಂದರ ಚಿಂತನೆಗಳು ನನ್ನ ಜೀವನಕ್ಕೆ ಹೇಗೆ ಮಾರ್ಗದರ್ಶನ ನೀಡಿವೆ ಎಂಬುದು ಹಳೆಯ ಸಂತರಿಗೆ ತಿಳಿದಿದೆ. ಅದಕ್ಕಾಗಿಯೇ ನನಗೆ ಅವಕಾಶ ಸಿಕ್ಕಾಗಲೆಲ್ಲಾ ನಾನು ಈ ಕುಟುಂಬದ ಭಾಗವಾಗಲು ಪ್ರಯತ್ನಿಸುತ್ತೇನೆ ಮತ್ತು ನಿಮ್ಮೊಂದಿಗೆ ಸಂಪರ್ಕ ಸಾಧಿಸುತ್ತೇನೆ. ಸಂತರ ಆಶೀರ್ವಾದದಿಂದ ಮಿಷನ್‌ನ ಅನೇಕ ಚಟುವಟಿಕೆಗಳಿಗೆ ಕೊಡುಗೆ ನೀಡುವ ಭಾಗ್ಯ ನನಗೆ ಸಿಕ್ಕಿದೆ. 2005ರಲ್ಲಿ ವಡೋದರಾದ ದಿಲಾರಾಮ್ ಬಂಗಲೆಯನ್ನು ರಾಮಕೃಷ್ಣ ಮಿಷನ್‌ಗೆ ಹಸ್ತಾಂತರಿಸುವ ಭಾಗ್ಯ ನನಗೆ ಸಿಕ್ಕಿತ್ತು. ಸ್ವಾಮಿ ವಿವೇಕಾನಂದರು ಇಲ್ಲಿ ಸ್ವಲ್ಪ ಸಮಯ ಕಳೆದಿದ್ದರು. ಪೂಜ್ಯ ಸ್ವಾಮಿ ಆತ್ಮಸ್ಥಾನಂದ ಜಿ ಅವರೇ ಉಪಸ್ಥಿತರಿರುವುದು ನನ್ನ ಅದೃಷ್ಟ, ಏಕೆಂದರೆ ನನ್ನ ಆಧ್ಯಾತ್ಮಿಕ ಪ್ರಯಾಣದಲ್ಲಿ ಅವರಿಂದ ಕಲಿಯಲು ಮತ್ತು ಅವರ ಮಾರ್ಗದರ್ಶನವನ್ನು ಪಡೆಯಲು ನನಗೆ ಅವಕಾಶ ಸಿಕ್ಕಿತು. ನಾನು ಅವರಿಗೆ ಬಂಗಲೆಯ ದಾಖಲೆಗಳನ್ನು ಹಸ್ತಾಂತರಿಸಿದ್ದು ನನ್ನ ಸೌಭಾಗ್ಯ, ಮತ್ತು ಸ್ವಾಮಿ ಆತ್ಮಸ್ಥಾನಂದ ಜಿಯವರ ಪ್ರೀತಿ ಮತ್ತು ಆಶೀರ್ವಾದ ಅವರ ಕೊನೆಯ ಕ್ಷಣಗಳವರೆಗೂ ನನ್ನ ಜೀವನಕ್ಕೆ ದೊಡ್ಡ ಆಸ್ತಿಯಾಗಿದೆ.

ಸ್ನೇಹಿತರೆ,

ಮಿಷನ್ ಆಯೋಜಿಸುವ ಅನೇಕ ಕಾರ್ಯಕ್ರಮಗಳು ಮತ್ತು ಸಮಾರಂಭಗಳಲ್ಲಿ ಭಾಗವಾಗಲು ನನಗೆ ಅವಕಾಶ ಸಿಕ್ಕಿದೆ. ಇಂದು, ರಾಮಕೃಷ್ಣ ಮಿಷನ್ ವಿಶ್ವಾದ್ಯಂತ 280ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿದೆ, ಭಾರತದಲ್ಲಿ ರಾಮಕೃಷ್ಣ ಚಳುವಳಿಯೊಂದಿಗೆ ಸಂಯೋಜಿತವಾಗಿರುವ ಸುಮಾರು 1,200 ಆಶ್ರಮಗಳಿವೆ. ಈ ಆಶ್ರಮಗಳು ಮಾನವ ಸೇವೆಯ ಕೇಂದ್ರಗಳಾಗಿ ಕೆಲಸ ಮಾಡುತ್ತಿವೆ. ರಾಮಕೃಷ್ಣ ಮಿಷನ್ ಕಾರ್ಯಕ್ಕೆ ಗುಜರಾತ್ ಬಹಳ ಹಿಂದಿನಿಂದಲೂ ಸಾಕ್ಷಿಯಾಗಿದೆ. ಕಳೆದ ಕೆಲವು ದಶಕಗಳಲ್ಲಿ ಗುಜರಾತಿಗೆ ಯಾವುದೇ ಬಿಕ್ಕಟ್ಟು ಬಂದಾಗಲೆಲ್ಲಾ ರಾಮಕೃಷ್ಣ ಮಿಷನ್ ಜನರಿಗಾಗಿ ಕೆಲಸ ಮಾಡುತ್ತಿದೆ. ನಾನು ಹಿಂದಿನ ಎಲ್ಲಾ ಘಟನೆಗಳನ್ನು ನೆನಪಿಸಿಕೊಂಡರೆ, ಅದು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಆದರೆ ಸೂರತ್‌ನಲ್ಲಿನ ಪ್ರವಾಹದ ಸಮಯ, ಮೊರ್ಬಿ ಅಣೆಕಟ್ಟು ದುರಂತ, ಭುಜ್ ಭೂಕಂಪದ ನಂತರದ ಪರಿಣಾಮಗಳು, ಕ್ಷಾಮ ಎದುರಾದ ಅವಧಿ ಮತ್ತು ಅತಿಯಾದ ಮಳೆಯ ಸಮಯಗಳನ್ನು ನೀವು ನೆನಪಿಸಿಕೊಳ್ಳುತ್ತೀರಿ. ಗುಜರಾತಿನಲ್ಲಿ ವಿಪತ್ತು ಸಂಭವಿಸಿದಾಗಲೆಲ್ಲಾ ರಾಮಕೃಷ್ಣ ಮಿಷನ್‌ಗೆ ಸಂಬಂಧಿಸಿದ ಜನರು ಸಂತ್ರಸ್ತರನ್ನು ಬೆಂಬಲಿಸಲು ಮುಂದೆ ಬಂದರು. ಭೂಕಂಪದಿಂದ ಧ್ವಂಸಗೊಂಡ 80 ಶಾಲೆಗಳನ್ನು ಮರುನಿರ್ಮಾಣ ಮಾಡುವಲ್ಲಿ ರಾಮಕೃಷ್ಣ ಮಿಷನ್ ಪ್ರಮುಖ ಪಾತ್ರ ವಹಿಸಿದೆ. ಗುಜರಾತಿನ ಜನರು ಇಂದಿಗೂ ಈ ಸೇವೆಯನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಸ್ಫೂರ್ತಿ ಪಡೆಯುತ್ತಾರೆ.

ಸ್ನೇಹಿತರೆ,

ಸ್ವಾಮಿ ವಿವೇಕಾನಂದರು ಗುಜರಾತ್‌ನೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದ್ದರು. ಅವರ ಜೀವನ ಪಯಣದಲ್ಲಿ ಗುಜರಾತ್ ಮಹತ್ವದ ಪಾತ್ರ ವಹಿಸಿದೆ. ಸ್ವಾಮಿ ವಿವೇಕಾನಂದರು ಗುಜರಾತಿನ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದರು. ಇಲ್ಲಿ ಸ್ವಾಮೀಜಿಯವರು ಚಿಕಾಗೊ ವಿಶ್ವ ಧರ್ಮ ಸಂಸತ್ತಿನ ಬಗ್ಗೆ ಮೊದಲು ಕಲಿತರು. ಇಲ್ಲಿ, ಅವರು ಹಲವಾರು ಗ್ರಂಥಗಳನ್ನು ಅಧ್ಯಯನ ಮಾಡಿದರು ಮತ್ತು ವೇದಾಂತವನ್ನು ಹರಡಲು ಸ್ವತಃ ಸಿದ್ಧರಾದರು. 1891ರಲ್ಲಿ, ಸ್ವಾಮೀಜಿ ಪೋರಬಂದರ್‌ನ ಭೋಜೇಶ್ವರ ಭವನದಲ್ಲಿ ಹಲವಾರು ತಿಂಗಳ ಕಾಲ ತಂಗಿದ್ದರು. ಗುಜರಾತ್ ಸರ್ಕಾರವು ಈ ಕಟ್ಟಡವನ್ನು ರಾಮಕೃಷ್ಣ ಮಿಷನ್‌ಗೆ ಸ್ಮಾರಕ ಮಂದಿರವನ್ನಾಗಿ ಮಾಡಲು ಹಸ್ತಾಂತರಿಸಿತು. ಗುಜರಾತ್ ಸರ್ಕಾರವು 2012ರಿಂದ 2014ರ ವರೆಗೆ ಸ್ವಾಮಿ ವಿವೇಕಾನಂದರ 150ನೇ ಜಯಂತಿ ಆಚರಿಸಿದ್ದು ನಿಮಗೆ ನೆನಪಿರಬಹುದು. ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ಸಮಾರೋಪ ಸಮಾರಂಭವು ಅತ್ಯಂತ ಉತ್ಸಾಹದಿಂದ ನಡೆಯಿತು, ಭಾರತ ಮತ್ತು ವಿದೇಶಗಳಿಂದ ಸಾವಿರಾರು ಪ್ರತಿನಿಧಿಗಳು ಭಾಗವಹಿಸಿದ್ದರು. ಗುಜರಾತ್‌ನೊಂದಿಗೆ ಸ್ವಾಮೀಜಿ ಅವರ ಸಂಪರ್ಕದ ನೆನಪಿಗಾಗಿ ಸ್ವಾಮಿ ವಿವೇಕಾನಂದ ಟೂರಿಸ್ಟ್ ಸರ್ಕ್ಯೂಟ್ ಅಭಿವೃದ್ಧಿಪಡಿಸಲು ಗುಜರಾತ್ ಸರ್ಕಾರವು ಈಗ ಯೋಜನೆ ಸಿದ್ಧಪಡಿಸುತ್ತಿದೆ ಎಂಬುದನ್ನು ತಿಳಿದು ನನಗೆ ಸಂತೋಷವಾಗಿದೆ.

 

ಸಹೋದರ ಸಹೋದರಿಯರೆ,

ಸ್ವಾಮಿ ವಿವೇಕಾನಂದರು ಆಧುನಿಕ ವಿಜ್ಞಾನದ ದೊಡ್ಡ ಬೆಂಬಲಿಗರಾಗಿದ್ದರು. ವಿಜ್ಞಾನದ ಪ್ರಾಮುಖ್ಯತೆಯು ಕೇವಲ ವಿಷಯಗಳನ್ನು ಅಥವಾ ಘಟನೆಗಳನ್ನು ವಿವರಿಸುವಲ್ಲಿ ಮಾತ್ರವಲ್ಲದೆ, ನಮ್ಮನ್ನು ಪ್ರೇರೇಪಿಸುವ ಮತ್ತು ಮುನ್ನಡೆಸುವುದರಲ್ಲಿದೆ ಎಂದು ಸ್ವಾಮೀಜಿ ನಂಬಿದ್ದರು. ಇಂದು ಆಧುನಿಕ ತಂತ್ರಜ್ಞಾನದಲ್ಲಿ ಭಾರತದ ಬೆಳೆಯುತ್ತಿರುವ ಉಪಸ್ಥಿತಿ, ವಿಶ್ವದ 3ನೇ ಅತಿದೊಡ್ಡ ಸ್ಟಾರ್ಟಪ್ ಪರಿಸರ ವ್ಯವಸ್ಥೆ ಮತ್ತು ಆಧುನಿಕ ಮೂಲಸೌಕರ್ಯ ಯೋಜನೆಗಳೊಂದಿಗೆ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯತ್ತ ಹೆಜ್ಜೆ ಇಡುತ್ತಿದೆ. ಭಾರತವು ತನ್ನ ಜ್ಞಾನದ ಆಧಾರದ ಮೇಲೆ ವೇಗವಾಗಿ ಮುನ್ನಡೆಯುತ್ತಿದೆ. ಸಂಪ್ರದಾಯಗಳು ಮತ್ತು ಪ್ರಾಚೀನ ಬೋಧನೆಗಳು. ಯುವ ಶಕ್ತಿಯೇ ದೇಶದ ಬೆನ್ನೆಲುಬು ಎಂದು ಸ್ವಾಮಿ ವಿವೇಕಾನಂದರು ನಂಬಿದ್ದರು. ಸ್ವಾಮಿಜಿ ಒಮ್ಮೆ ಹೇಳಿದ್ದರು - "ನನಗೆ ಆತ್ಮಸ್ಥೈರ್ಯ ಮತ್ತು ಶಕ್ತಿ ತುಂಬಿದ 100 ಯುವಕರನ್ನು ನೀಡಿ, ನಾನು ಭಾರತವನ್ನು ಪರಿವರ್ತಿಸುತ್ತೇನೆ" ಎಂದು. ಈಗ ನಾವು ಈ ಜವಾಬ್ದಾರಿಯನ್ನು ನಿಭಾಯಿಸುವ ಸಮಯ ಬಂದಿದೆ. ನಾವು ‘ವಿಕಸಿತ ಭಾರತ’(ಅಭಿವೃದ್ಧಿ ಹೊಂದಿದ ಭಾರತ) ಕಟ್ಟುವ ಬಲವಾದ ಬದ್ಧತೆಯೊಂದಿಗೆ ಅಮೃತ್ ಕಾಲ್‌ಗೆ ಹೊಸ ಪ್ರಯಾಣ ಪ್ರಾರಂಭಿಸಿದ್ದೇವೆ. ನಾವು ಅದನ್ನು ನಿಗದಿತ ಸಮಯದೊಳಗೆ ಪೂರೈಸಬೇಕು. ಇಂದು ಭಾರತವು ವಿಶ್ವದ ಅತ್ಯಂತ ಚಿರಯೌವ್ವನ(ಕಿರಿಯ) ರಾಷ್ಟ್ರವಾಗಿದೆ, ಇಲ್ಲಿನ ಯುವಕರು ಈಗಾಗಲೇ ಜಾಗತಿಕ ವೇದಿಕೆಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ಭಾರತದ ಈ ಯುವಶಕ್ತಿಯೇ ವಿಶ್ವದ ಪ್ರಮುಖ ಕಂಪನಿಗಳನ್ನು ಮುನ್ನಡೆಸುತ್ತಿದೆ. ಭಾರತದ ಈ ಯುವಶಕ್ತಿಯೇ ರಾಷ್ಟ್ರದ ಅಭಿವೃದ್ಧಿಗೆ ಚಾಲನೆ ನೀಡುತ್ತಿದೆ. ಇಂದು, ರಾಷ್ಟ್ರವು ಸಮಯ, ಅವಕಾಶ, ಕನಸುಗಳು, ನಿರ್ಣಯ ಮತ್ತು ಯಶಸ್ಸಿಗೆ ಕಾರಣವಾಗುವ ಪ್ರಯತ್ನದ ಪ್ರಯಾಣ ಮಾಡುತ್ತಿದೆ. ಆದ್ದರಿಂದ, ರಾಷ್ಟ್ರ ನಿರ್ಮಾಣದ ಪ್ರತಿಯೊಂದು ಕ್ಷೇತ್ರದಲ್ಲೂ ನಾವು ನಮ್ಮ ಯುವಕರನ್ನು ನಾಯಕತ್ವಕ್ಕೆ ಸಿದ್ಧಪಡಿಸಬೇಕಾಗಿದೆ. ಇಂದು, ನಮ್ಮ ಯುವಕರು ತಂತ್ರಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲಿ ಮಾಡುವಂತೆ ರಾಜಕೀಯದಲ್ಲಿಯೂ ದೇಶವನ್ನು ಮುನ್ನಡೆಸಬೇಕು. ನಾವು ಇನ್ನು ಮುಂದೆ ರಾಜಕೀಯವನ್ನು ವಂಶ ಪಾರಂಪರ್ಯವಾಗಿಸಲು ಅಥವಾ ಅದನ್ನು ಅವರ ಕುಟುಂಬದ ಆಸ್ತಿ ಎಂದು ಪರಿಗಣಿಸಲು ಬಿಡುವುದಿಲ್ಲ. ಮುಂಬರುವ ವರ್ಷ 2025 ರಲ್ಲಿ ನಾವು ಹೊಸ ಆರಂಭಕ್ಕೆ ತಯಾರಿ ನಡೆಸುತ್ತಿದ್ದೇವೆ. ಜನವರಿ 12, 2025ರಂದು ಸ್ವಾಮಿ ವಿವೇಕಾನಂದರ ಜನ್ಮದಿನ ಮತ್ತು ರಾಷ್ಟ್ರೀಯ ಯುವ ದಿನಾಚರಣೆಯ ಸಂದರ್ಭದಲ್ಲಿ ದೆಹಲಿಯಲ್ಲಿ "ಯುವ ನಾಯಕರ ಸಂವಾದ" ನಡೆಯಲಿದೆ, ಅಲ್ಲಿ ದೇಶಾದ್ಯಂತ 2,000 ಆಯ್ದ ಯುವಕರನ್ನು ಆಹ್ವಾನಿಸಲಾಗುವುದು. ದೇಶಾದ್ಯಂತದ ಲಕ್ಷಾಂತರ ಯುವಕರು ವರ್ಚುವಲ್ ಆಗಿ ಸೇರುತ್ತಾರೆ. ಚರ್ಚೆಯು ಯುವ ದೃಷ್ಟಿಕೋನದಿಂದ ‘ವಿಕಸಿತ ಭಾರತ’ದ ದೃಷ್ಟಿಕೋನಕ್ಕೆ ಗಮನ ಕೇಂದ್ರೀಕರಿಸುತ್ತದೆ. ಯುವಕರನ್ನು ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗುತ್ತದೆ. 1 ಲಕ್ಷ ಪ್ರತಿಭಾವಂತ ಮತ್ತು ಶಕ್ತಿಯುತ ಯುವಕರನ್ನು ರಾಜಕೀಯಕ್ಕೆ ತರುವುದು ನಮ್ಮ ಗುರಿಯಾಗಿದೆ, ಈ ಯುವಕರು 21ನೇ ಶತಮಾನದ ಭಾರತದ ರಾಜಕೀಯ ಮತ್ತು ಭಾರತದ ಭವಿಷ್ಯದ ಹೊಸ ಮುಖವಾಗುತ್ತಾರೆ.

ಸ್ನೇಹಿತರೆ,

ಈ ಶುಭ ಸಂದರ್ಭದಲ್ಲಿ, ಭೂಮಿಯನ್ನು ಸುಂದರ ಗ್ರಹವನ್ನಾಗಿ ಮಾಡುವ 2 ಪ್ರಮುಖ ವಿಚಾರಗಳನ್ನು ನೆನಪಿಟ್ಟುಕೊಳ್ಳುವುದು ಸಹ ಅಗತ್ಯವಾಗಿದೆ: ಆಧ್ಯಾತ್ಮಿಕತೆ ಮತ್ತು ಸುಸ್ಥಿರ ಅಭಿವೃದ್ಧಿ. ಈ ಎರಡು ವಿಚಾರಗಳನ್ನು ಸಮನ್ವಯಗೊಳಿಸುವುದರಿಂದ ನಾವು ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಬಹುದು. ಸ್ವಾಮಿ ವಿವೇಕಾನಂದರು ಆಧ್ಯಾತ್ಮಿಕತೆಯ ಪ್ರಾಯೋಗಿಕ ಭಾಗಕ್ಕೆ ಒತ್ತಿ ನೀಡಿದ್ದರು. ಸಮಾಜದ ಅಗತ್ಯಗಳನ್ನು ಪರಿಹರಿಸಲು ಆಧ್ಯಾತ್ಮಿಕತೆಯನ್ನು ಅವರು ಬಯಸಿದ್ದರು. ಅವರು ಆಲೋಚನೆಗಳ ಶುದ್ಧೀಕರಣ ಮಾತ್ರವಲ್ಲದೆ ಸುತ್ತಮುತ್ತಲಿನ ಸ್ವಚ್ಛತೆಗೂ ಒತ್ತು ನೀಡಿದ್ದರು. ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಕಲ್ಯಾಣ ಮತ್ತು ಪರಿಸರ ಸಂರಕ್ಷಣೆಯನ್ನು ಸಮತೋಲನಗೊಳಿಸುವ ಮೂಲಕ ನಾವು ಸುಸ್ಥಿರ ಅಭಿವೃದ್ಧಿಯ ಗುರಿ ಸಾಧಿಸಬಹುದು. ಸ್ವಾಮಿ ವಿವೇಕಾನಂದರ ಚಿಂತನೆಗಳು ಈ ಗುರಿಯತ್ತ ನಮ್ಮನ್ನು ಮುನ್ನಡೆಸುತ್ತವೆ. ಆಧ್ಯಾತ್ಮಿಕತೆ ಮತ್ತು ಸುಸ್ಥಿರತೆ ಎರಡರಲ್ಲೂ ಸಮತೋಲನವು ಮುಖ್ಯವಾಗಿದೆ ಎಂದು ನಮಗೆ ತಿಳಿದಿದೆ. ಒಂದು ಮನಸ್ಸಿನಲ್ಲಿ ಸಮತೋಲನ ಸೃಷ್ಟಿಸುತ್ತದೆ, ಇನ್ನೊಂದು ಪ್ರಕೃತಿಯೊಂದಿಗೆ ಸಮತೋಲನ ಕಲಿಸುತ್ತದೆ. ಆದ್ದರಿಂದ, ರಾಮಕೃಷ್ಣ ಮಿಷನ್‌ನಂತಹ ಸಂಸ್ಥೆಗಳು ನಮ್ಮ ಅಭಿಯಾನಗಳನ್ನು ಮುನ್ನಡೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ನಾನು ನಂಬುತ್ತೇನೆ. ಮಿಷನ್ ಲೈಫ್‌, 'ಏಕ್ ಪೆಧ್ ಮಾ ಕೆ ನಾಮ್' ನಂತಹ ಅಭಿಯಾನಗಳನ್ನು ರಾಮಕೃಷ್ಣ ಮಿಷನ್ ಮೂಲಕ ಮತ್ತಷ್ಟು ವಿಸ್ತರಿಸಬಹುದು.

ಸ್ನೇಹಿತರೆ,

ಸ್ವಾಮಿ ವಿವೇಕಾನಂದರು ಭಾರತವನ್ನು ಶಕ್ತಿಯುತ ಮತ್ತು ಸ್ವಾವಲಂಬಿ ರಾಷ್ಟ್ರವಾಗಿ ನೋಡಲು ಬಯಸಿದ್ದರು. ಅವರ ಕನಸು ನನಸಾಗಿಸಲು ದೇಶ ಈಗ ಆ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ. ಈ ಕನಸು ಆದಷ್ಟು ಬೇಗ ನನಸಾಗಲಿ, ಬಲಿಷ್ಠ ಮತ್ತು ಸಮರ್ಥ ಭಾರತ ಮತ್ತೊಮ್ಮೆ ಮಾನವತೆಗೆ ಮಾರ್ಗದರ್ಶನ ನೀಡಲಿ. ಇದಕ್ಕಾಗಿ ದೇಶದ ಪ್ರತಿಯೊಬ್ಬ ಪ್ರಜೆಯೂ ಗುರುದೇವ ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರ ಬೋಧನೆಗಳನ್ನು ಅಳವಡಿಸಿಕೊಳ್ಳಬೇಕು. ಇದನ್ನು ಸಾಧಿಸಲು ಇಂತಹ ಘಟನೆಗಳು ಮತ್ತು ಸಾಧು ಸಂತರ ಪ್ರಯತ್ನಗಳು ಪ್ರಮುಖ ಸಾಧನಗಳಾಗಿವೆ. ಮತ್ತೊಮ್ಮೆ, ನಾನು ಈ ಕಾರ್ಯಕ್ರಮಕ್ಕೆ ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ ಮತ್ತು ಎಲ್ಲಾ ಪೂಜ್ಯ ಸಾಧು ಸಂತರಿಗೆ ನನ್ನ ಗೌರವಾನ್ವಿತ ನಮಸ್ಕಾರಗಳನ್ನು ಅರ್ಪಿಸುತ್ತೇನೆ. ಇಂದಿನ ಈ ಹೊಸ ಆರಂಭವು ಹೊಸ ಶಕ್ತಿಯೊಂದಿಗೆ ಸ್ವಾಮಿ ವಿವೇಕಾನಂದರ ಕನಸನ್ನು ನನಸಾಗಿಸಲು ಅಡಿಪಾಯವಾಗಲಿ.

ಎಲ್ಲರಿಗೂ ತುಂಬಾ ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PLI schemes attract ₹2 lakh crore investment till September, lift output and jobs across sectors

Media Coverage

PLI schemes attract ₹2 lakh crore investment till September, lift output and jobs across sectors
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 13 ಡಿಸೆಂಬರ್ 2025
December 13, 2025

PM Modi Citizens Celebrate India Rising: PM Modi's Leadership in Attracting Investments and Ensuring Security