ಶೇರ್
 
Comments
ಭಾರತದ ಬೆಳವಣಿಗೆಯ ಕಥೆಯು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆಗಳ ಮೇಲೆ ಅವಲಂಬಿತವಾಗಿರುತ್ತದೆ: ಪ್ರಧಾನಿ ಮೋದಿ
‘ವಿಜ್ಞಾನದ ಕಾರ್ಯಗಳ ಸುಲಭಗೊಳಿಸುವಿಕೆಯನ್ನು’ ಖಚಿತಪಡಿಸಿಕೊಳ್ಳಲು ನಾವು ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತಿದ್ದೇವೆ ಮತ್ತು ಅತಿಯಾದ ಅಧಿಕೃತ ನಿಯಮಗಳು ಮತ್ತು ಔಪಚಾರಿಕತೆಗಳನ್ನು ಅನುಸರಿಸುವುದನ್ನು ಕಡಿಮೆ ಮಾಡಲು ಮಾಡಲು ಮಾಹಿತಿ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದೇವೆ. : ಪ್ರಧಾನಿ ಮೋದಿ
2024 ರ ವೇಳೆಗೆ ಭಾರತವನ್ನು ವಿಶ್ವ ದರ್ಜೆಯ, 100 ಶತಕೋಟಿ ಯುಎಸ್ ಡಾಲರ್ ಜೈವಿಕ ಉತ್ಪಾದನಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇವೆ: ಪ್ರಧಾನಿ ಮೋದಿ

ಸ್ನೇಹಿತರೇ, ಮೊದಲನೆಯದಾಗಿ ನಿಮ್ಮೆಲ್ಲರಿಗೂ 2020 ರ ಶುಭಾಶಯಗಳು. ಈ ವರ್ಷವು ನಿಮ್ಮ ಜೀವನದಲ್ಲಿ ಸಮೃದ್ಧಿ ಮತ್ತು ನಿಮ್ಮ ಪ್ರಯೋಗಾಲಯಗಳಲ್ಲಿ ಉತ್ಪಾದಕತೆಯನ್ನು ತರಲಿ. ನೂತನ ವರ್ಷ ಮತ್ತು ದಶಕದ ಆರಂಭದಲ್ಲಿ ನನ್ನ ಮೊದಲ ಕಾರ್ಯಕ್ರಮ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರಕ್ಕೆ ಸಂಬಂಧಿಸಿದ್ದಾಗಿದೆ ಎಂಬುದು ನನಗೆ ವಿಶೇಷ ಸಂತೋಷ ತಂದಿದೆ. ವಿಜ್ಞಾನ ಮತ್ತು ಆವಿಷ್ಕಾರಕ್ಕೆ ಸಂಬಂಧಿಸಿರುವ ನಗರವಾದ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ನಾನು ಕಳೆದ ಬಾರಿ ಬೆಂಗಳೂರಿಗೆ ಬಂದಿದ್ದು, ಇಡೀ ದೇಶದ ಕಣ್ಣು ಚಂದ್ರಯಾನ-2 ರ ಮೇಲಿದ್ದಾಗ. ಆ ಸಮಯದಲ್ಲಿ, ನಮ್ಮ ರಾಷ್ಟ್ರವು ವಿಜ್ಞಾನವನ್ನು ಸಂಭ್ರಮಿಸಿದ ರೀತಿ, ನಮ್ಮ ಬಾಹ್ಯಾಕಾಶ ಕಾರ್ಯಕ್ರಮ ಮತ್ತು ನಮ್ಮ ವಿಜ್ಞಾನಿಗಳ ಸಾಮರ್ಥ್ಯಗಳು ಯಾವಾಗಲೂ ನನ್ನ ನೆನಪಿನ ಒಂದು ಭಾಗವಾಗಿರುತ್ತವೆ.

ಸ್ನೇಹಿತರೇ, ಉದ್ಯಾನ ನಗರಿ ಬೆಂಗಳೂರು, ಈಗ ಸ್ಟಾರ್ಟ್ ಅಪ್‌ಗಳಿಗೆ ಅದ್ಭುತ ಕ್ಷೇತ್ರವಾಗಿದೆ. ಜಗತ್ತೇ ಇಲ್ಲಿಗೆ ಹೊಸತನಕ್ಕಾಗಿ ಬರುತ್ತಿದೆ.

ಈ ನಗರವು ಸಂಶೋಧನೆ ಮತ್ತು ಅಭಿವೃದ್ಧಿಯ ಅಂತಹ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಈ ನಗರ ಪ್ರತಿಯೊಬ್ಬ ಯುವ ವಿಜ್ಞಾನಿ, ಪ್ರತಿಯೊಬ್ಬ ಎಂಜಿನಿಯರ್ ಕನಸಾಗಿದೆ. ಆದರೆ ಈ ಕನಸಿನ ಆಧಾರ ಅವನ ಪ್ರಗತಿ, ವೃತ್ತಿ ಮಾತ್ರವೇ? ಅಲ್ಲ. ಈ ಕನಸು ದೇಶಕ್ಕಾಗಿ ಏನನ್ನಾದರೂ ಮಾಡಬೇಕೆನ್ನುವ ಮನೋಭಾವಕ್ಕೆ ಸಂಬಂಧಿಸಿದೆ. ಇದು ನಮ್ಮ ಸಾಧನೆಯನ್ನು ದೇಶದ ಸಾಧನೆಯನ್ನಾಗಿ ಮಾಡುತ್ತದೆ.

ಆದ್ದರಿಂದ, ನಾವು ವಿಜ್ಞಾನ ಮತ್ತು ತಂತ್ರಜ್ಞಾನ ಚಾಲಿತ ಅಭಿವೃದ್ಧಿಯ ಸಕಾರಾತ್ಮಕತೆ ಮತ್ತು ಆಶಾವಾದದೊಂದಿಗೆ 2020 ನೇ ವರ್ಷವನ್ನು ಪ್ರಾರಂಭಿಸಿದಾಗ, ನಮ್ಮ ಕನಸನ್ನು ಈಡೇರಿಸುವಲ್ಲಿ ನಾವು ಇನ್ನೂ ಒಂದು ಹೆಜ್ಜೆ ಮುಂದಿಡುತ್ತೇವೆ.

ಸ್ನೇಹಿತರೇ,

ಉತ್ತಮ ವಿಮರ್ಶೆಯ ವಿಜ್ಞಾನ ಮತ್ತು ಎಂಜಿನಿಯರಿಂಗ್ ಪ್ರಕಟಣೆಗಳ ಸಂಖ್ಯೆಯಲ್ಲಿ ಭಾರತ ಜಾಗತಿಕವಾಗಿ ಮೂರನೇ ಸ್ಥಾನಕ್ಕೆ ಏರಿದೆ ಎಂದು ನನಗೆ ಹೇಳಿದ್ದಾರೆ. ಜಾಗತಿಕ ಸರಾಸರಿ ಶೇ.4 ಕ್ಕೆ ಹೋಲಿಸಿದರೆ ಇದು ಸುಮಾರು ಶೇ.10ರ ದರದಲ್ಲಿ ಬೆಳೆಯುತ್ತಿದೆ. ನಾವೀನ್ಯತೆಯ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು 52 ಕ್ಕೆ ಸುಧಾರಿಸಿದೆ ಎಂಬುದು ನನಗೆ ಸಂತಸ ತಂದಿದೆ. ಕಳೆದ 50 ವರ್ಷಗಳಲ್ಲಿ ಸೃಷ್ಟಿಸಲಾಗಿದ್ದ ತಂತ್ರಜ್ಞಾನ ವ್ಯವಹಾರ ಇನ್ಕ್ಯುಬೇಟರ್‌ಗಳಿಗಿಂತ ಹೆಚ್ಚಿನವುಗಳನ್ನು ಕಳೆದ ಐದು ವರ್ಷಗಳಲ್ಲಿ ನಮ್ಮ ಕಾರ್ಯಕ್ರಮಗಳು ರೂಪಿಸಿವೆ. ಈ ಸಾಧನೆಗಾಗಿ ನಮ್ಮ ವಿಜ್ಞಾನಿಗಳನ್ನು ನಾನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ಭಾರತದ ಪ್ರಗತಿಯು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆಗಳ ಮೇಲೆ ಅವಲಂಬಿತವಾಗಿದೆ. ಭಾರತೀಯ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರದ ಕ್ಷೇತ್ರದಲ್ಲಿ ಕ್ರಾಂತಿಯುಂಟುಮಾಡುವ ಅವಶ್ಯಕತೆಯಿದೆ. ಈ ದೇಶದಲ್ಲಿ ಬೆಳೆಯುತ್ತಿರುವ ಯುವ ವಿಜ್ಞಾನಿಗಳಿಗೆ ನನ್ನ ಧ್ಯೇಯವಾಕ್ಯವೆಂದರೆ – “ಆವಿಷ್ಕರಿಸು, ಪೇಟೆಂಟ್ ಮಾಡಿಸು , ಉತ್ಪಾದಿಸು ಮತ್ತು ಪ್ರಗತಿ ಕಾಣು”. ಈ ನಾಲ್ಕು ಹಂತಗಳು ನಮ್ಮ ದೇಶವನ್ನು ವೇಗವಾಗಿ ಅಭಿವೃದ್ಧಿಯತ್ತ ಕೊಂಡೊಯ್ಯುತ್ತವೆ. ನಾವು ಹೊಸದನ್ನು ಆವಿಷ್ಕರಿಸಿದರೆ ಪೇಟೆಂಟ್ ಪಡೆಯುತ್ತೇವೆ ಮತ್ತು ಅದು ನಮ್ಮ ಉತ್ಪಾದನೆಯನ್ನು ಸುಗಮಗೊಳಿಸುತ್ತದೆ ಮತ್ತು ನಾವು ಈ ಉತ್ಪನ್ನಗಳನ್ನು ನಮ್ಮ ದೇಶದ ಜನರಿಗೆ ತಲುಪಿಸಿದಾಗ ಅವರು ಪ್ರಗತಿ ಕಾಣುತ್ತಾರೆ. ಜನರಿಂದ ಮತ್ತು ಜನರಿಗಾಗಿ ಆವಿಷ್ಕಾರ ಎಂಬುದು ನಮ್ಮ ‘ನವ ಭಾರತ’ದ ಗುರಿಯಾಗಿದೆ.

ಸ್ನೇಹಿತರೇ,

ನವ ಭಾರತಕ್ಕೆ ತಂತ್ರಜ್ಞಾನ ಮತ್ತು ತಾರ್ಕಿಕ ಮನೋಧರ್ಮದ ಅಗತ್ಯವಿದೆ. ಆದ್ದರಿಂದ ನಮ್ಮ ಸಾಮಾಜಿಕ ಮತ್ತು ಆರ್ಥಿಕ ಜೀವನದ ಅಭಿವೃದ್ಧಿಗೆ ನಾವು ಹೊಸ ದಿಕ್ಕು ತೋರಬಹುದು. ಸಮಾನ ಅವಕಾಶಗಳನ್ನು ತರುವಲ್ಲಿ ಭಾರತದ ಸಮಾಜವನ್ನು ಜೋಡಿಸುವಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ದೊಡ್ಡ ಪಾತ್ರವಿದೆ ಎಂಬುದು ನನ್ನ ಅಭಿಪ್ರಾಯ. ಈಗ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಅಭಿವೃದ್ಧಿಯಂತೆ, ಭಾರತದಲ್ಲಿ ಅಗ್ಗದ ಸ್ಮಾರ್ಟ್‌ಫೋನ್‌ಗಳು ಮತ್ತು ಅಗ್ಗದ ಡೇಟಾವನ್ನು ತಯಾರಿಸಲಾಗುತ್ತಿದೆ. ಈ ಕಾರಣದಿಂದಾಗಿ, ಸಾಮಾನ್ಯ ನಾಗರಿಕನು ಸಹ ನೇರವಾಗಿ ಸರ್ಕಾರದೊಂದಿಗೆ ಸಂಪರ್ಕ ಹೊಂದಿದ್ದಾನೆ. ಅವನ ಧ್ವನಿ ನೇರವಾಗಿ ಸರ್ಕಾರಕ್ಕೆ ತಲುಪುತ್ತಿದೆ ಎಂದು ಮನವರಿಕೆಯಾಗಿದೆ. ಅಂತಹ ಬದಲಾವಣೆಗಳನ್ನು ನಾವು ಪ್ರೋತ್ಸಾಹಿಸಬೇಕು ಮತ್ತು ಬಲಪಡಿಸಬೇಕು.

ಸ್ನೇಹಿತರೇ,

ಈ ಬಾರಿ ನೀವು ಗ್ರಾಮೀಣಾಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರವನ್ನು ಚರ್ಚಿಸಲಿದ್ದೀರಿ, ಆದ್ದರಿಂದ ನಾನು ಈ ಕ್ಷೇತ್ರದ ಬಗ್ಗೆ ಸ್ವಲ್ಪ ಹೆಚ್ಚು ವಿವರವಾಗಿ ಮಾತನಾಡುತ್ತೇನೆ. ಗ್ರಾಮೀಣಾಭಿವೃದ್ಧಿಯನ್ನು ಕಳೆದ 5 ವರ್ಷಗಳಲ್ಲಿ ಸಾಮಾನ್ಯ ಜನರು ಅನುಭವಿಸಿದ್ದಾರೆ. ಸ್ವಚ್ಛ ಭಾರತ ಅಭಿಯಾನದಿಂದ ಆಯುಷ್ಮಾನ್ ಭಾರತ್ ವರೆಗೆ ಇಂದು ಪರಿಣಾಮಕಾರಿಯಾದ ವಿತರಣೆಗೆ ಪ್ರಶಂಸೆಗೆ ಒಳಗಾಗುತ್ತಿವೆ. ಅವುಗಳ ಹಿಂದಿನ ಶಕ್ತಿ – ತಂತ್ರಜ್ಞಾನದ ಬಗೆಗಿನ ನಮ್ಮ ಬದ್ಧತೆ ಮತ್ತು ಉತ್ತಮ ಪರಿಣಾಮಕಾರಿ ಆಡಳಿತ.

ಸ್ನೇಹಿತರೇ, ಇಂದು, ಹಿಂದೆಂದೂ ಇಲ್ಲದ ರೀತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ದೇಶದಲ್ಲಿ ಆಡಳಿತಕ್ಕಾಗಿ ಬಳಸಲಾಗುತ್ತಿದೆ. ನಿನ್ನೆಯಷ್ಟೇ ನಮ್ಮ ಸರ್ಕಾರ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಹಣವನ್ನು ದೇಶದ 6 ಕೋಟಿ ರೈತರಿಗೆ ವರ್ಗಾಯಿಸುವ ಮೂಲಕ ದಾಖಲೆ ನಿರ್ಮಿಸಿದೆ. ಇದೆಲ್ಲ ಹೇಗೆ ಸಾಧ್ಯವಾಯಿತು? ಆಧಾರ್ ಆಧಾರಿತ ತಂತ್ರಜ್ಞಾನದ ಸಹಾಯದಿಂದ.

ಸ್ನೇಹಿತರೇ,

ದೇಶದ ಪ್ರತಿಯೊಂದು ಹಳ್ಳಿಗೂ ಶೌಚಾಲಯಗಳು ತಲುಪಿದ್ದರೆ, ಬಡ ಕುಟುಂಬಗಳಿಗೆ ವಿದ್ಯುತ್ ತಲುಪಿದ್ದರೆ, ಅದು ತಂತ್ರಜ್ಞಾನದಿಂದ ಮಾತ್ರ. ಈ ತಂತ್ರಜ್ಞಾನದಿಂದಾಗಿ ಹೊಗೆಯಿಂದ ಕಷ್ಟ ಅನುಭವಿಸುತ್ತಿದ್ದ 8 ಕೋಟಿ ಬಡ ಸಹೋದರಿಯರನ್ನು ಗುರುತಿಸಲು ಸರ್ಕಾರಕ್ಕೆ ಸಾಧ್ಯವಾಯಿತು. ತಂತ್ರಜ್ಞಾನದ ಬಳಕೆಯಿಂದ, ಕೇವಲ ಫಲಾನುಭವಿಯನ್ನು ಮಾತ್ರ ಗುರುತಿಸಿಲ್ಲ. ಎಲ್ಲಿ ಮತ್ತು ಎಷ್ಟು ಹೊಸ ವಿತರಣಾ ಕೇಂದ್ರಗಳನ್ನು ನಿರ್ಮಿಸಬೇಕೆಂಬುದನ್ನೂ ಸಹ ನಾವು ಅಲ್ಪಾವಧಿಯಲ್ಲಿಯೇ ನಿರ್ಧರಿಸಲು ಸಾಧ್ಯವಾಯಿತು. ಇಂದು ಹಳ್ಳಿಯ ರಸ್ತೆಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಂಡಿವೆ, ಬಡವರಿಗೆ 2 ಕೋಟಿಗೂ ಹೆಚ್ಚು ಮನೆಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲು ತಂತ್ರಜ್ಞಾನ ಕಾರಣವಾಗಿದೆ. ಜಿಯೋ ಟ್ಯಾಗಿಂಗ್ ಮತ್ತು ಡಾಟಾ ಸೈನ್ಸ್ ಬಳಕೆಯಿಂದ ಈಗ ಯೋಜನೆಗಳ ವೇಗ ಹೆಚ್ಚಾಗಿದೆ. ರಿಯಲ್ ಟೈಮ್ ಮಾನಿಟರಿಂಗ್ ಒದಗಿಸುವುದರೊಂದಿಗೆ ಯೋಜನೆ ಮತ್ತು ಫಲಾನುಭವಿಗಳ ನಡುವಿನ ಅಂತರ ಈಗ ಕೊನೆಗೊಳ್ಳುತ್ತಿದೆ. ಸಮಯಕ್ಕೆ ಸರಿಯಾಗಿ ಕೆಲಸ ಪೂರ್ಣಗೊಂಡ ಕಾರಣ ವೆಚ್ಚ ಕಡಿಮೆಯಾಗಿದೆ. ಅಪೂರ್ಣ ಯೋಜನೆಗಳ ಬಗೆಗಿನ ದೂರುಗಳು ಸಹ ಕೊನೆಗೊಂಡಿವೆ.

ಸ್ನೇಹಿತರೇ,

ನಾವು ‘ಸುಗಮ ವಿಜ್ಞಾನ’ವನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳನ್ನು ಮುಂದುವರಿಸುತ್ತಿದ್ದೇವೆ ಮತ್ತು ಅಧಿಕಾರಶಾಹಿಯನ್ನುಕಡಿಮೆ ಮಾಡಲು ಮಾಹಿತಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದೇವೆ. ಇಂದು, ರೈತರು ಮಧ್ಯವರ್ತಿಗಳ ಮುಲಾಜಿಲ್ಲದೇ ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರುಕಟ್ಟೆಯಲ್ಲಿ ಮಾರಲು ಸಮರ್ಥರಾಗಿದ್ದಾರೆ. ಡಿಜಿಟಲೀಕರಣ, ಇ-ಕಾಮರ್ಸ್, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಗ್ರಾಮೀಣ ಜನಸಂಖ್ಯೆಗೆ ಗಮನಾರ್ಹ ನೆರವು ಕಲ್ಪಿಸಿವೆ. ಇಂದು ರೈತರು ಹವಾಮಾನ ಮತ್ತು ಮುನ್ಸೂಚನೆಗಳ ಬಗ್ಗೆ ಅಗತ್ಯವಾದ ಮಾಹಿತಿಯನ್ನು ತಮ್ಮ ಬೆರಳ ತುದಿಯಲ್ಲಿಯೇ ಅನೇಕ ಇ-ಆಡಳಿತ ಉಪಕ್ರಮಗಳ ಮೂಲಕ ಪಡೆಯುತ್ತಿದ್ದಾರೆ.

ಸ್ನೇಹಿತರೇ,

ಭಾರತದ ಅಭಿವೃದ್ಧಿಯಲ್ಲಿ, ವಿಶೇಷವಾಗಿ ಗ್ರಾಮೀಣಾಭಿವೃದ್ಧಿಯಲ್ಲಿ ತಂತ್ರಜ್ಞಾನದ ಬಳಕೆಯನ್ನು ನಾವು ವಿಸ್ತರಿಸಬೇಕಾಗಿದೆ. ಮುಂಬರುವ ದಶಕವು ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಆಧಾರಿತ ಆಡಳಿತಕ್ಕೆ ನಿರ್ಣಾಯಕ ಸಮಯವಾಗಲಿದೆ. ನಿರ್ದಿಷ್ಟವಾಗಿ ವೆಚ್ಚ ಪರಿಣಾಮಕಾರಿ ಕೃಷಿಯು ಹೊಲದಿಂದ ಗ್ರಾಹಕರವರೆಗಿನ ಪೂರೈಕೆ ಸರಪಳಿ ಜಾಲವು ಅಭೂತಪೂರ್ವ ತಂತ್ರಜ್ಞಾನ ಸಾಮರ್ಥ್ಯವನ್ನು ತರುತ್ತದೆ. ಇದರ ನೇರ ಲಾಭ ಗ್ರಾಮಕ್ಕೆ, ಗ್ರಾಮೀಣ ಆರ್ಥಿಕತೆಗೆ ಆಗಲಿದೆ. ಭಾರತದ ಗ್ರಾಮೀಣ ಪ್ರದೇಶದ ಪ್ರತಿಯೊಂದು ಮನೆಗೂ ಕುಡಿಯುವ ನೀರು ಒದಗಿಸಲು, ಬೃಹತ್ ಅಭಿಯಾನ- ಜಲ ಜೀವನ್ ಮಿಷನ್ ಪ್ರಾರಂಭಿಸಲಾಗಿದೆ ಎಂಬುದು ನಿಮ್ಮೆಲ್ಲರಿಗೂ ತಿಳಿದಿದೆ. ಈ ಅಭಿಯಾನದ ಶಕ್ತಿ ಕೂಡ ತಂತ್ರಜ್ಞಾನವೇ ಆಗಿದೆ. ನೀರಿನ ಮರುಬಳಕೆಗಾಗಿ ಪರಿಣಾಮಕಾರಿ ಮತ್ತು ಉತ್ತಮ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು ಈಗ ನಿಮ್ಮ ಜವಾಬ್ದಾರಿಯಾಗಿದೆ. ಒಂದು ರೀತಿಯಲ್ಲಿ, ನೀರಿನ ಆಡಳಿತವು ನಿಮಗೆ ಹೊಸ ಗಡಿಯಾಗಿದೆ. ಹೊಲಗಳಲ್ಲಿನ ನೀರಾವರಿಗಾಗಿ ಮನೆಯಿಂದ ಹೊರಬರುವ ನೀರನ್ನು ಪಡೆಯಲು ನೀವು ಅಗ್ಗದ ಮತ್ತು ಪರಿಣಾಮಕಾರಿ ಪರಿಹಾರವನ್ನು ರೂಪಿಸಬಹುದು. ದೇಶಾದ್ಯಂತ ನೀಡಲಾಗಿರುವ ಮಣ್ಣಿನ ಆರೋಗ್ಯ ಕಾರ್ಡ್‌ಗಳನ್ನು ದೈನಂದಿನ ಕೃಷಿ ಕೆಲಸದಲ್ಲಿ ಆ ಡೇಟಾವನ್ನು ಹೇಗೆ ಬಳಸುವುದು ಎಂಬುದರ ಕುರಿತು ಮರುಚಿಂತನೆ ಮಾಡಬೇಕಾಗುತ್ತದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಸರಬರಾಜು ಸರಪಳಿಯಲ್ಲಿ ನಮ್ಮ ರೈತರ ನಷ್ಟವನ್ನು ರಕ್ಷಿಸಲು ತಾಂತ್ರಿಕ ಪರಿಹಾರಗಳು ಬಹಳ ಮುಖ್ಯ.

ಸ್ನೇಹಿತರೇ,

ಗ್ರಾಮೀಣ ಆರ್ಥಿಕತೆಯ ಮತ್ತೊಂದು ಪ್ರಮುಖ ಕೊಂಡಿಯೆಂದರೆ ನಮ್ಮ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ ಅಂದರೆ ಎಂಎಸ್‌ಎಂಇ. ಬದಲಾಗುತ್ತಿರುವ ಕಾಲದಲ್ಲಿ, ಅವರ ಶಕ್ತಿ ನಿಮ್ಮ ಎಲ್ಲ ಸಹೋದ್ಯೋಗಿಗಳಿಗೆ ಸಹ ಸಂಪರ್ಕ ಹೊಂದಿದೆ. ಈಗ ಏಕ ಬಳಕೆ ಪ್ಲಾಸ್ಟಿಕ್ ಬಳಕೆಯನ್ನು ತೆಗೆದುಕೊಳ್ಳಿ. ನಮ್ಮ ಪರಿಸರ, ನಮ್ಮ ಪ್ರಾಣಿಗಳು, ನಮ್ಮ ಮೀನುಗಳು, ನಮ್ಮ ಮಣ್ಣನ್ನು ಉಳಿಸಲು ದೇಶವು ಏಕ-ಬಳಕೆಯ ಪ್ಲಾಸ್ಟಿಕ್ ವಿಮೋಚನೆಯನ್ನು ಸಾಧಿಸುವುದಾಗಿ ಪ್ರತಿಜ್ಞೆ ಮಾಡಿದೆ. ಆದರೆ ನೀವು ಅಗ್ಗದ ಮತ್ತು ಬಾಳಿಕೆ ಬರುವ ಪ್ಲಾಸ್ಟಿಕ್ ಮತ್ತು ಕೆಲವು ಹೊಸ ಆಯ್ಕೆಯನ್ನು ಕಂಡುಹಿಡಿಯಬೇಕು. ಅದು ಲೋಹ, ಜೇಡಿಮಣ್ಣು ಅಥವಾ ಫೈಬರ್ ಆಗಿರಲಿ, ಪ್ಲಾಸ್ಟಿಕ್ ನಿಮ್ಮ ಪ್ರಯೋಗಾಲಯದಿಂದ ಹೊರಬರುತ್ತದೆ.

ಸ್ನೇಹಿತರೇ,

ಸುಸ್ಥಿರ ಆರ್ಥಿಕತೆಗೆ, ಗ್ರಾಮೀಣ ಆರ್ಥಿಕತೆಗಾಗಿ ಮೀಸಲಾದ ಸ್ಟಾರ್ಟ್ ಅಪ್‌ಗಳಿಗೆ ವ್ಯಾಪಕ ಅವಕಾಶಗಳಿವೆ. ಬೆಳೆಗಳ ಅವಶೇಷಗಳು ಮತ್ತು ಮನೆಗಳಿಂದ ಹೊರಬರುವ ತ್ಯಾಜ್ಯಗಳು ಸಹ ಮಾಲಿನ್ಯದ ಸವಾಲನ್ನು ಸೃಷ್ಟಿಸುತ್ತಿವೆ. ಈ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸಲು ನಾವು ವೇಗವಾಗಿ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. 2022 ರ ವೇಳೆಗೆ ಕಚ್ಚಾ ತೈಲ ಆಮದನ್ನು ಕನಿಷ್ಠ 10 ಪ್ರತಿಶತದಷ್ಟು ಕಡಿಮೆ ಮಾಡುವುದು ನಮ್ಮ ಪ್ರಯತ್ನ. ಆದ್ದರಿಂದ, ಎಥೆನಾಲ್ ಉತ್ಪಾದನಾ ವಲಯದಲ್ಲಿ ಸ್ಟಾರ್ಟ್ ಅಪ್‌ಗಳಿಗೆ ಸಾಕಷ್ಟು ಅವಕಾಶವಿದೆ.

ಅಂತಹ ಪರಿಸ್ಥಿತಿಯಲ್ಲಿ, ಉದ್ಯಮ ಆಧಾರಿತ ಸಂಶೋಧನೆಯು ನಮಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಬೇಕಾಗುತ್ತದೆ, ನಾವು ಪ್ರತಿ ಪಾಲುದಾರರ ನಡುವೆ ಸಂವಾದವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ನೆನಪಿಡಿ, ಭಾರತವನ್ನು 5 ಟ್ರಿಲಿಯನ್ ಆರ್ಥಿಕತೆಯನ್ನಾಗಿ ಮಾಡುವಲ್ಲಿ ನಿಮ್ಮ ಕೊಡುಗೆ ದೊಡ್ಡ ಪಾತ್ರ ವಹಿಸುತ್ತದೆ.

ನೀವು ನೀಡುವ ಪರಿಹಾರಗಳು ಈ ಸಣ್ಣ ಕೈಗಾರಿಕೆಗಳನ್ನು, ನಮ್ಮ ಕುಂಬಾರರು, ಬಡಗಿಗಳನ್ನು ಮಾರುಕಟ್ಟೆಯಲ್ಲಿ ಇರಿಸಲು ಸಾಧ್ಯವಾಗುತ್ತದೆ. ಇದು ಪರಿಸರವನ್ನು ಉಳಿಸುತ್ತದೆ ಮತ್ತು ನಮ್ಮ ಸಣ್ಣ ಕೈಗಾರಿಕೆಗಳನ್ನು ಸಹ ಅಭಿವೃದ್ಧಿಪಡಿಸುತ್ತದೆ.

ಸ್ನೇಹಿತರೇ,

ಕೃಷಿ ಪದ್ಧತಿಗಳಿಗೆ ಸಹಾಯ ಮಾಡುವ ತಂತ್ರಜ್ಞಾನಗಳಲ್ಲಿ ಕ್ರಾಂತಿಯ ಅವಶ್ಯಕತೆಯಿದೆ. ಉದಾಹರಣೆಗೆ ಕಾಂಡವನ್ನು ಸುಡುವ ಸಮಸ್ಯೆಗೆ ನಾವು ರೈತ-ಕೇಂದ್ರಿತ ಪರಿಹಾರಗಳನ್ನು ಕಂಡುಹಿಡಿಯಬಹುದೇ? ಕಡಿಮೆಯಾದ ಹೊರಸೂಸುವಿಕೆ ಮತ್ತು ಹೆಚ್ಚಿನ ಶಕ್ತಿಯ ದಕ್ಷತೆಗಾಗಿ ನಾವು ನಮ್ಮ ಇಟ್ಟಿಗೆ ಗೂಡುಗಳನ್ನು ಮರುವಿನ್ಯಾಸಗೊಳಿಸಬಹುದೇ? ದೇಶಾದ್ಯಂತ ಶುದ್ಧ ಕುಡಿಯುವ ನೀರಿನ ಸರಬರಾಜಿನ ಸಮಸ್ಯೆಗೆ ನಾವು ಉತ್ತಮ ಮತ್ತು ವೇಗವಾಗಿ ಪರಿಹಾರಗಳನ್ನು ಕಂಡುಹಿಡಿಯಬೇಕಾಗಿದೆ. ಮುಂದಿನ ವರ್ಷಗಳಲ್ಲಿ ನಮ್ಮ ಮಣ್ಣು ಮತ್ತು ನಮ್ಮ ಅಂತರ್ಜಲ ಮಟ್ಟಗಳನ್ನು ಹಾಳು ಮಾಡದಂತೆ ಕೈಗಾರಿಕೆಗಳಿಂದ ಹೊರಸೂಸುವಿಕೆಯನ್ನು ನಾವು ಹೇಗೆ ತಡೆಯಬೇಕು?

ಸ್ನೇಹಿತರೇ,

ರೋಗನಿರ್ಣಯದಲ್ಲಿನ ಪ್ರಗತಿಯ ಫಲವನ್ನು ನಮ್ಮ ಜನರಿಗೆ ಒದಗಿಸಲು ವೈದ್ಯಕೀಯ ಸಾಧನಗಳಲ್ಲಿ ಮೇಕ್ ಇನ್ ಇಂಡಿಯಾದ ಮಹತ್ವವನ್ನು ಹೇಳಲು ಬಯಸುತ್ತೇನೆ.

“ ಆರೋಗ್ಯವೇ ನಿಜವಾದ ಸಂಪತ್ತು. ಚಿನ್ನ ಮತ್ತು ಬೆಳ್ಳಿಯ ತುಂಡುಗಳಲ್ಲ.” ಎಂದು ಮಹಾತ್ಮ ಗಾಂಧಿಯವರು ಒಮ್ಮೆ ಹೇಳಿದ್ದರು. ಯೋಗಕ್ಷೇಮವನ್ನು ಉತ್ತೇಜಿಸಲು, ನಾವು ಕೆಲವು ಸಾಂಪ್ರದಾಯಿಕ ಅಭ್ಯಾಸಗಳನ್ನು ಅನುಸರಿಸಬೇಕು. ಹಾಗೆಯೇ ಆಧುನಿಕ ಉಪಕರಣಗಳು ಮತ್ತು ಸಮಕಾಲೀನ ಬಯೋಮೆಡಿಕಲ್ ಸಂಶೋಧನೆಯ ಪರಿಕಲ್ಪನೆಗಳನ್ನು ನಿರಂತರವಾಗಿ ವಿಸ್ತರಿಸಬೇಕು.

ನಮ್ಮ ದೃಷ್ಟಿಯು ನಿಫಾ, ಎಬೋಲಾ ಮುಂತಾದ ಅಪಾಯಕಾರಿ ಸಾಂಕ್ರಾಮಿಕ ರೋಗಗಳಿಂದ ಜನರನ್ನು ರಕ್ಷಿಸುವುದಾಗಿರಬೇಕು. 2025 ರ ವೇಳೆಗೆ ಕ್ಷಯರೋಗವನ್ನು ನಿರ್ಮೂಲನೆ ಮಾಡುವ ಭರವಸೆಯನ್ನು ಈಡೇರಿಸಲು ನಾವು ಹೆಚ್ಚಿನ ಕೆಲಸ ಮಾಡಬೇಕು. ಜಾಗತಿಕವಾಗಿ, ಲಸಿಕೆಗಳ ಪೂರೈಕೆಯಲ್ಲಿ ಭಾರತ ಮುಂದಿದೆ. 2024 ರ ವೇಳೆಗೆ ಭಾರತವನ್ನು ವಿಶ್ವ ದರ್ಜೆಯ, 100 ಬಿಲಿಯನ್ ಡಾಲರ್ ಜೈವಿಕ ಉತ್ಪಾದನಾ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇವೆ. ಇದು ಸೂಕ್ತ ನೀತಿ ಉಪಕ್ರಮಗಳು ಮತ್ತು ನವೀನ ಸಂಶೋಧನೆ, ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಉದ್ಯಮಶೀಲ ವ್ಯವಸ್ಥೆಯ ಬೆಂಬಲದೊಂದಿಗೆ ಸಾದ್ಯವಾಗುತ್ತದೆ.

ಸ್ನೇಹಿತರೇ,

ಸುಸ್ಥಿರ ಮತ್ತು ಪರಿಸರ ಸ್ನೇಹಿ ಸಾರಿಗೆ ಮತ್ತು ಇಂಧನ ಸಂಗ್ರಹ ಆಯ್ಕೆಗಳಿಗಾಗಿ ಭಾರತವು ದೀರ್ಘಾವಧಿಯ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸಬೇಕು. ನಮ್ಮ ನವೀಕರಣ ಇಂಧನ ಪೂರೈಕೆಯನ್ನು ನಾವು ವಿಸ್ತರಿಸುವುದರಿಂದ ಗ್ರಿಡ್ ನಿರ್ವಹಣೆ ಹೆಚ್ಚು ಮಹತ್ವದ್ದಾಗಿದೆ. ಇವುಗಳಿಗೆ ಭೂಮಿಯ ಸಮೃದ್ಧಿಯನ್ನು ಆಧರಿಸಿ, ಪರಿಸರಕ್ಕೆ ಹಾನಿಕರವಲ್ಲದ , 100 ರ ಗಿಗಾ ವ್ಯಾಟ್ ಮಾಪಕಗಳಲ್ಲಿ ಕೈಗೆಟುಕುವ ಮತ್ತು ಉಷ್ಣವಲಯದ ಹವಾಮಾನಕ್ಕೆ ಸೂಕ್ತವಾಗುವ ಹೊಸ ಬ್ಯಾಟರಿ ಪ್ರಕಾರಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿರುತ್ತದೆ.

ಸ್ನೇಹಿತರೇ,

ನಿಖರ ಹವಾಮಾನ ಮತ್ತು ಹವಾಮಾನ ಮುನ್ಸೂಚನೆಯ ಆರ್ಥಿಕ ಮತ್ತು ಸಾಮಾಜಿಕ ಪ್ರಯೋಜನಗಳು ಅಪಾರವಾಗಿವೆ. ಹವಾಮಾನ ಮುನ್ಸೂಚನೆ ಮತ್ತು ಎಚ್ಚರಿಕೆಯ ಸೇವೆಗಳಲ್ಲಿ ವಿಶೇಷವಾಗಿ ಉಷ್ಣವಲಯದ ಚಂಡಮಾರುತಗಳ ಸಂದರ್ಭದಲ್ಲಿ ಸಾಕಷ್ಟು ಸುಧಾರಣೆಗಳು ಕಂಡುಬಂದಿವೆ. ಸಾವು ನೋವುಗಳ ಸಂಖ್ಯೆಯಲ್ಲಿನ ಕಡಿತದಿಂದ ಇದು ಸ್ಪಷ್ಟವಾಗಿದೆ. ಬಾಹ್ಯಾಕಾಶ ಪರಿಶೋಧನೆಯಲ್ಲಿನ ನಮ್ಮ ಯಶಸ್ಸನ್ನು ಈಗ ಆಳ ಸಮುದ್ರದ ಹೊಸ ಗಡಿಯಲ್ಲಿ ಪ್ರತಿಬಿಂಬಿಸಬೇಕು. ನೀರು, ಇಂಧನ, ಆಹಾರ ಮತ್ತು ಖನಿಜಗಳ ಅಪಾರ ಸಾಗರ ಸಂಪನ್ಮೂಲಗಳನ್ನು ನಾವು ಅನ್ವೇಷಿಸಬೇಕು ಮತ್ತು ಜವಾಬ್ದಾರಿಯುತವಾಗಿ ಬಳಸಿಕೊಳ್ಳಬೇಕು. ಇದಕ್ಕೆ ಮಾನವಸಹಿತ ಸಬ್‌ಮರ್ಸಿಬಲ್‌ಗಳು, ಆಳ ಸಮುದ್ರ ಗಣಿಗಾರಿಕೆ ವ್ಯವಸ್ಥೆಗಳು ಮತ್ತು ಸ್ವಾಯತ್ತ ನೀರೊಳಗಿನ ವಾಹನಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಭೂ ವಿಜ್ಞಾನ ಸಚಿವಾಲಯವು ರೂಪಿಸಿರುವ ‘ಡೀಪ್ ಓಷನ್ ಮಿಷನ್’ ಮೂಲಕ ಇದು ಸಾಧ್ಯವಾಗಲಿದೆ ಎಂದು ನಾನು ಭಾವಿಸುತ್ತೇನೆ.

ಸ್ನೇಹಿತರೇ,

ಸಂಭಾವ್ಯ ಶಕ್ತಿಯು ಶಾಂತ ರೂಪದಲ್ಲಿರುತ್ತದೆ. ಅದನ್ನು ಚಲನಶಕ್ತಿಗೆ ಪರಿವರ್ತಿಸುವ ಮೂಲಕ ಪರ್ವತಗಳನ್ನೇ ತಳ್ಳಬಹುದು ಎಂದು ನಾನು ವಿಜ್ಞಾನಿಗಳಿಂದ ಕಲಿತಿದ್ದೇನೆ. ನಾವು ವಿಜ್ಞಾನದಲ್ಲಿ ಚಲನೆಯನ್ನು ನಿರ್ಮಿಸಬಹುದೇ? ಸಂಬಂಧಿತ ತಂತ್ರಜ್ಞಾನಗಳು, ಆವಿಷ್ಕಾರಗಳು, ಉದ್ಯಮಗಳು ಮತ್ತು ಉದ್ಯಮದ ಮೂಲಕ ನಮ್ಮ ವೈಜ್ಞಾನಿಕ ಸಾಮರ್ಥ್ಯದ ಅಭೂತಪೂರ್ವ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಅಗಾಧ ಪ್ರಭಾವವನ್ನು ಕಲ್ಪಿಸಿಕೊಳ್ಳಿ. ನವ ಭಾರತದ ಅವಕಾಶಗಳನ್ನು ಹುಡುಕಲು ಮತ್ತು ಸಂಪರ್ಕಿಸಲು ವಿಜ್ಞಾನ ಮತ್ತು ತಂತ್ರಜ್ಞಾನದ ವೇಗದ ಎಂಜಿನ್ ಅನ್ನು ನಾವು ಹೊಂದಬಹುದೇ?

ಸ್ನೇಹಿತರೇ,

ತಂತ್ರಜ್ಞಾನವು ಸರ್ಕಾರ ಮತ್ತು ಜನ ಸಾಮಾನ್ಯರ ನಡುವಿನ ಸೇತುವೆಯಾಗಿದೆ. ತಂತ್ರಜ್ಞಾನವು ತ್ವರಿತ ಪ್ರಗತಿ ಮತ್ತು ಅಭಿವೃದ್ಧಿಯನ್ನು ಸಮತೋಲನಗೊಳಿಸುತ್ತದೆ. ತಂತ್ರಜ್ಞಾನವು ತನ್ನದೇ ಆದ ಪಕ್ಷಪಾತವನ್ನು ಹೊಂದಿದ್ದು ಅದು ನ್ಯಾಯೋಚಿತವಾಗಿದೆ. ಮಾನವ ಸಂವೇದನೆ ಮತ್ತು ಆಧುನಿಕ ತಂತ್ರಜ್ಞಾನದ ಸಮನ್ವಯವು ಹೆಚ್ಚಾದಾಗ ಅಭೂತಪೂರ್ವ ಫಲಿತಾಂಶಗಳು ಲಭ್ಯವಾಗಲು ಇದು ಕಾರಣವಾಗಿದೆ. ಹೊಸ ವರ್ಷದಲ್ಲಿ, ಹೊಸ ದಶಕದಲ್ಲಿ, ನವ ಭಾರತದ ಹೊಸ ವರ್ತನೆಯನ್ನು ಇನ್ನಷ್ಟು ಬಲಪಡಿಸಲು ನಮಗೆ ಸಾಧ್ಯವಾಗುತ್ತದೆ ಎಂದು ನನಗೆ ವಿಶ್ವಾಸವಿದೆ. ಮತ್ತೊಮ್ಮೆ, ನಿಮ್ಮೆಲ್ಲರಿಗೂ, ಇಡೀ ವೈಜ್ಞಾನಿಕ ಸಮುದಾಯಕ್ಕೆ ಮತ್ತು ನಿಮ್ಮ ಕುಟುಂಬಕ್ಕೆ ಹೊಸ ವರ್ಷದ ಶುಭಾಶಯಗಳು. ಧನ್ಯವಾದಗಳು! 

 
Explore More
76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ

ಜನಪ್ರಿಯ ಭಾಷಣಗಳು

76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ
Railways achieves 1,000 million tons milestone in freight transportation for FY 2022-23

Media Coverage

Railways achieves 1,000 million tons milestone in freight transportation for FY 2022-23
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 8 ಡಿಸೆಂಬರ್ 2022
December 08, 2022
ಶೇರ್
 
Comments

Appreciation For PM Modi’s Relentless Efforts Towards Positive Transformation of the Nation

Citizens Congratulate Indian Railways as it Achieves a Milestone in Freight Transportation for FY 2022-23