ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡಿಸೆಂಬರ್ 7ರಂದು ಗೋರಖ್ ಪುರಕ್ಕೆ ಭೇಟಿ ನೀಡಲಿದ್ದು, ಅಂದು ಮಧ್ಯಾಹ್ನ 1 ಗಂಟೆಗೆ 9,600 ಕೋಟಿ ರೂ.ಗಿಂತ ಹೆಚ್ಚಿನ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಪ್ರಧಾನ ಮಂತ್ರಿ ಅವರು ಡಿಸೆಂಬರ್ 7ರಂದು ಗೋರಖ್ ಪುರ್ ರಸಗೊಬ್ಬರ ಘಟಕವನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಈ ಘಟಕಕ್ಕೆ ನರೇಂದ್ರ ಮೋದಿ ಅವರು 2016 ಜುಲೈ 22ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. 30 ವರ್ಷಗಳಿಗಿಂತ ಅಧಿಕ ದೀರ್ಘ ಕಾಲದಿಂದ ಸ್ಥಗಿತವಾಗಿದ್ದ ಈ ಘಟಕವನ್ನು ಸುಮಾರು 8,600 ಕೋಟಿ ರೂ. ವೆಚ್ಚದಲ್ಲಿ ಪುನಶ್ಚೇತನಗೊಳಿಸಿ, ಮರುನಿರ್ಮಾಣ ಮಾಡಲಾಗಿದೆ. ಯಾರಿಯಾ ರಸಗೊಬ್ಬರ ಉತ್ಪಾದನೆಯಲ್ಲಿ ದೇಶ ಸ್ವಾವಲಂಬನೆ ಸಾಧಿಸಬೇಕೆಂಬ ಪ್ರಧಾನ ಮಂತ್ರಿ ಅವರ ದೂರದೃಷ್ಟಿಯಂತೆ, ಗೋರಖ್ ಪುರ್ ರಸಗೊಬ್ಬರ ಘಚಟಕವನ್ನು ಪುನಶ್ಚೇತನಗೊಳಿಸಲಾಗಿದೆ. ಗೋರಖ್ ಪುರ್ ಘಟಕವು ವಾರ್ಷಿಕ 12.7 ಲಕ್ಷ ಮೆಟ್ರಿಕ್ ಟನ್ ಬೇವು ಮಿಶ್ರಿತ ಯಾರಿಯಾ ರಸಗೊಬ್ಬರ ಉತ್ಪಾದನೆ ಮಾಡಲಿದೆ. ಪೂರ್ವಾಂಚಲ ಮತ್ತು ಆಸುಪಾಸಿನ ಭಾಗಗಳ ರೈತರಿಗೆ ಈ ಘಟಕವು ರಸಗೊಬ್ಬರ ಬೇಡಿಕೆಯನ್ನು ಪೂರೈಸಲಿದೆ. ಜತೆಗೆ, ಈ ಭಾಗದ ಕೃಷಿಕರಿಗೆ ಅಪಾರ ಪ್ರಯೋಜನಗಳನ್ನು ಒದಗಿಸಲಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲಿದೆ.
ರಾಷ್ಟ್ರೀಯ ಥರ್ಮಲ್ ಪವರ್ ಕಾರ್ಪೊರೇಷನ್, ಕೋಲ್ ಇಂಡಿಯಾ ಲಿಮಿಟೆಡ್, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್, ಫರ್ಟಿಲೈಸರ್ ಕಾರ್ಪೊರೇಶನ್ ಆಫ್ ಇಂಡಿಯಾ ಮತ್ತು ಹಿಂದೂಸ್ತಾನ್ ಫರ್ಟಿಲೈಸರ್ ಕಾರ್ಪೊರೇಶನ್ ಲಿಮಿಟೆಡ್‌ನ ಜಂಟಿ ಉದ್ಯಮ ಕಂಪನಿಯಾದ ಹಿಂದೂಸ್ತಾನ್ ಉರ್ವರಕ್ ಮತ್ತು ರಸಾಯನ್ ಲಿಮಿಟೆಡ್ ಅಡಿಯಲ್ಲಿ ಈ ಯೋಜನೆಯನ್ನು ಸ್ಥಾಪಿಸಲಾಗಿದೆ. ಗೋರಖ್‌ಪುರ, ಸಿಂದ್ರಿ ಮತ್ತು ಬರೌನಿ ರಸಗೊಬ್ಬರ ಸ್ಥಾವರಗಳನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಇದು ಕೆಲಸ ಮಾಡಲಿದೆ. ಗೋರಖ್‌ಪುರ ರಸಗೊಬ್ಬರ ಘಟಕದ ಕಾಮಗಾರಿಯನ್ನು ಜಪಾನ್ ನ ಟೊಯೊ ಇಂಜಿನಿಯರಿಂಗ್ ಕಾರ್ಪೊರೇಷನ್ ಮತ್ತು ಟೊಯೊ ಇಂಜಿನಿಯರಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಅಮೆರಿಕದ ತಂತ್ರಜ್ಞಾನ ಮತ್ತು ಪರವಾನಗಿ ಕಂಪನಿ ಕೆಬಿಆರ್ ಸಹಭಾಗಿತ್ವದಲ್ಲಿ ನಡೆಸಲಾಗಿದೆ. ಅಮೆರಿಕದ ಕೆಬಿಆರ್ ಕಂಪನಿ ಅಮೋನಿಯಾ ಕಚ್ಚಾ ವಸ್ತು ಒದಗಿಸಿದರೆ, ಜಪಾನ್ ನ ಟೊಯೊ ಕಂಪನಿ ಯೂರಿಯಾ ಕಚ್ಚಾ ವಸ್ತು ಒದಗಿಸಲಿದೆ. ಈ ಯೋಜನೆಯು ವಿಶ್ವದ ಅತಿ ಎತ್ತರದ ಅಂದರೆ 149.2 ಮೀಟರ್ ಪ್ರಿಲ್ಲಿಂಗ್ ಟವರ್ ಹೊಂದಿದೆ. ಇದು ಸುರಕ್ಷತಾ ಅಂಶಗಳನ್ನು ಹೆಚ್ಚಿಸಲು ಭಾರತದ ಮೊದಲ ವಾಯುಚಾಲಿತ ರಬ್ಬರ್ ಡ್ಯಾಂ ಮತ್ತು ಸ್ಫೋಟ ಪ್ರತಿಬಂಧಕ ನಿಯಂತ್ರಣ ಕೊಠಡಿಯನ್ನು ಒಳಗೊಂಡಿದೆ.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಮಹಾಸಂಸ್ಥೆ ಎಐಐಎಂಎಸ್-ಕೋರಖ್ ಪುರ್ ಅನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಈ ಸಂಸ್ಥೆಯನ್ನು 1,000 ಕೋಟಿ ರೂ.ಗಿಂತ ಹೆಚ್ಚಿನ ಅನುದಾನದಲ್ಲಿ ನಿರ್ಮಾಣ ಮಾಡಲಾಗಿದೆ. 2017 ಜುಲೈ 22ರಂದು ಪ್ರಧಾನ ಮಂತ್ರಿ ಅವರು ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಪ್ರಧಾನ ಮಂತ್ರಿಗಳ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ, ಇದನ್ನು ಸ್ಥಾಪಿಸಲಾಗಿದೆ. ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸಲು ಎದುರಾಗಿರುವ ಪ್ರಾದೇಶಿಕ ಅಸಮಾತೋಲನವನ್ನು ನಿವಾರಿಸುವ ದೂರದೃಷ್ಟಿಯೊಂದಿಗೆ ಎಐಐಎಂಎಸ್-ಗೋರಖ್ ಪುರ್ ಸಂಕೀರ್ಣ ಸ್ಥಾಪಿಸಲಾಗಿದೆ. ಈ ಬೃಹತ್ ಆಸ್ಪತ್ರೆಯಲ್ಲಿ 750 ಹಾಸಿಗೆಗಳು, ವೈದ್ಯಕೀಯ ಕಾಲೇಜು, ನರ್ಸಿಂಗ್ ಕಾಲೇಜು, ಆಯುಷ್ ಕಟ್ಟಡ, ಎಲ್ಲಾ ಸಿಬ್ಬಂದಿಗೆ ವಸತಿ ಸೌಲಭ್ಯ, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರಥಿಗಳಿಗೆ ವಿದ್ಯಾರ್ಥಿನಿಲಯ ಇತ್ಯಾದಿ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ.
ಇದಲ್ಲದೆ, ಪ್ರಧಾನ ಮಂತ್ರಿ ಅವರು ಗೋರಖ್ ಪುರ್ ನಲ್ಲಿ ನಿರ್ಮಿಸಿರುವ ಐಸಿಎಂಆರ್-ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಈ ಕೇಂದ್ರವು ಜಪಾನ್ ಮೆದುಳು ಜ್ವರ ಹಾಗೂ ಗಂಭೀರ ಮೆದುಳು ಜ್ವರ ಸಂಬಂಧಿತ ರೋಗಗಳನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಲು ಅಗತ್ಯವಾದ ಸಂಶೋಧನೆಗಳನ್ನು ನಡೆಸಲಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಐಸಿಎಂಆರ್ ಹೊಸ ಕಟ್ಟಡವು ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ಕ್ಷೇತ್ರಗಳಲ್ಲಿ ಸಂಶೋಧನೆಯ ಹೊಸ ಆವಿಷ್ಕಾರಗಳನ್ನು ತೆರೆಯಲಿದೆ ಮತ್ತು ಸಾಮರ್ಥ್ಯ ವೃದ್ಧಿಗೆ ಸಹಾಯ ಮಾಡುತ್ತದೆ. ಈ ಭಾಗದಲ್ಲಿರುವ ಇತರೆ ವೈದ್ಯಕೀಯ ಸಂಸ್ಥೆಗಳಿಗೆ ಬೆಂಬಲ ನೀಡಲಿದೆ.