ವಂದೇ ಮಾತರಂ ನಮ್ಮ ಸ್ವಾತಂತ್ರ್ಯ ಚಳವಳಿಗೆ ಶಕ್ತಿ ತುಂಬಿತು: ಪ್ರಧಾನಮಂತ್ರಿ
ವಂದೇ ಮಾತರಂನ 150 ವರ್ಷಗಳಿಗೆ ಸಾಕ್ಷಿಯಾಗುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ: ಪ್ರಧಾನಮಂತ್ರಿ
ವಂದೇ ಮಾತರಂ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸುಗಳನ್ನು ನನಸಾಗಿಸಲು ನಮ್ಮನ್ನು ಪ್ರೇರೇಪಿಸುವ ಶಕ್ತಿಯಾಗಿದೆ: ಪ್ರಧಾನಮಂತ್ರಿ
ವಂದೇ ಮಾತರಂ ಸಾವಿರಾರು ವರ್ಷಗಳಿಂದ ಭಾರತದಲ್ಲಿ ಆಳವಾಗಿ ಬೇರೂರಿರುವ ಕಲ್ಪನೆಯನ್ನು ಪುನರುಜ್ಜೀವನಗೊಳಿಸಿತು: ಪ್ರಧಾನಮಂತ್ರಿ
ವಂದೇ ಮಾತರಂ ಸಾವಿರಾರು ವರ್ಷಗಳ ಸಾಂಸ್ಕೃತಿಕ ಶಕ್ತಿಯನ್ನು ಸಹ ಒಳಗೊಂಡಿತ್ತು, ಇದು ಸ್ವಾತಂತ್ರ್ಯದ ಉತ್ಸಾಹ ಮತ್ತು ಸ್ವತಂತ್ರ ಭಾರತದ ದೃಷ್ಟಿಕೋನವನ್ನು ಸಹ ಹೊಂದಿತ್ತು: ಪ್ರಧಾನಮಂತ್ರಿ
ಜನರೊಂದಿಗೆ ವಂದೇ ಮಾತರಂನ ಆಳವಾದ ಸಂಪರ್ಕವು ನಮ್ಮ ಸ್ವಾತಂತ್ರ್ಯ ಚಳವಳಿಯ ಪ್ರಯಾಣವನ್ನು ಪ್ರತಿಬಿಂಬಿಸುತ್ತದೆ: ಪ್ರಧಾನಮಂತ್ರಿ
ವಂದೇ ಮಾತರಂ ನಮ್ಮ ಸ್ವಾತಂತ್ರ್ಯ ಚಳವಳಿಗೆ ಶಕ್ತಿ ಮತ್ತು ನಿರ್ದೇಶನವನ್ನು ನೀಡಿತು: ಪ್ರಧಾನಮಂತ್ರಿ
ವಂದೇ ಮಾತರಂ ಸ್ವಾತಂತ್ರ್ಯ, ತ್ಯಾಗ, ಶಕ್ತಿ, ಶುದ್ಧತೆ, ಸಮರ್ಪಣೆ ಮತ್ತು ದೃಢತೆಯನ್ನು ಪ್ರೇರೇಪಿಸಿದ ಸರ್ವವ್ಯಾಪಿ ಮಂತ್ರವಾಗಿತ್ತು: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಲೋಕಸಭೆಯಲ್ಲಿ ರಾಷ್ಟ್ರೀಯ ಗೀತೆ ವಂದೇ ಮಾತರಂನ 150ನೇ ವಾರ್ಷಿಕೋತ್ಸವದ ವಿಶೇಷ ಚರ್ಚೆಯಲ್ಲಿ ಮಾತನಾಡಿದರು. ಈ ಮಹತ್ವದ ಸಂದರ್ಭದಲ್ಲಿ ಸಾಮೂಹಿಕ ಚರ್ಚೆಯ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಸದನದ ಎಲ್ಲಾ ಗೌರವಾನ್ವಿತ ಸದಸ್ಯರಿಗೆ ಪ್ರಧಾನಮಂತ್ರಿಯವರು ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ರಾಷ್ಟ್ರದ ಸ್ವಾತಂತ್ರ್ಯ ಚಳವಳಿಗೆ ಶಕ್ತಿ ತುಂಬಿದ ಮತ್ತು ಸ್ಫೂರ್ತಿ ನೀಡಿದ, ತ್ಯಾಗ ಮತ್ತು ತಪಸ್ಸಿನ ಮಾರ್ಗವನ್ನು ತೋರಿಸಿದ ವಂದೇ ಮಾತರಂ ಎಂಬ ಮಂತ್ರ ಮತ್ತು ಘೋಷವಾಕ್ಯವನ್ನು ನೆನಪಿಸಿಕೊಳ್ಳಲಾಗುತ್ತಿದೆ ಮತ್ತು ಇದು ಸದನದಲ್ಲಿರುವ ಎಲ್ಲರಿಗೂ ಒಂದು ದೊಡ್ಡ ಸೌಭಾಗ್ಯ ಎಂದು ಅವರು ಹೇಳಿದರು. ವಂದೇ ಮಾತರಂನ 150 ವರ್ಷಗಳ ಐತಿಹಾಸಿಕ ಸಂದರ್ಭಕ್ಕೆ ದೇಶ ಸಾಕ್ಷಿಯಾಗುತ್ತಿರುವುದು ಹೆಮ್ಮೆಯ ವಿಷಯ ಎಂದು ಶ್ರೀ ಮೋದಿ ಹೇಳಿದರು. ಈ ಅವಧಿಯು ಇತಿಹಾಸದ ಅಸಂಖ್ಯಾತ ಘಟನೆಗಳನ್ನು ನಮ್ಮ ಮುಂದೆ ತರುತ್ತದೆ ಎಂದು ಅವರು ಹೇಳಿದರು. ಈ ಚರ್ಚೆಯು ಸದನದ ಬದ್ಧತೆಯನ್ನು ಪ್ರತಿಬಿಂಬಿಸುವುದಲ್ಲದೆ, ಎಲ್ಲರೂ ಸಾಮೂಹಿಕವಾಗಿ ಇದನ್ನು ಸದುಪಯೋಗಪಡಿಸಿಕೊಂಡರೆ ಭವಿಷ್ಯದ ಪೀಳಿಗೆಗೆ ಶಿಕ್ಷಣದ ಮೂಲವೂ ಆಗುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

ಇತಿಹಾಸದ ಹಲವು ಸ್ಪೂರ್ತಿದಾಯಕ ಅಧ್ಯಾಯಗಳು ಮತ್ತೊಮ್ಮೆ ನಮ್ಮ ಮುಂದೆ ಅನಾವರಣಗೊಳ್ಳುತ್ತಿರುವ ಸಮಯ ಇದಾಗಿದೆ ಎಂದು ಶ್ರೀ ಮೋದಿ ಹೇಳಿದರು. ದೇಶವು ಇತ್ತೀಚೆಗೆ ಸಂವಿಧಾನದ 75 ವರ್ಷಗಳನ್ನು ಹೆಮ್ಮೆಯಿಂದ ಆಚರಿಸಿದೆ. ದೇಶವು ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಭಗವಾನ್ ಬಿರ್ಸಾ ಮುಂಡಾ ಅವರ 150 ನೇ ಜಯಂತಿಯನ್ನು ಸಹ ಆಚರಿಸುತ್ತಿದೆ ಎಂದು ಅವರು ಹೇಳಿದರು. ಇತ್ತೀಚೆಗೆ ರಾಷ್ಟ್ರವು ಗುರು ತೇಜ್ ಬಹದ್ದೂರ್ ಅವರ 350 ನೇ ಹುತಾತ್ಮ ದಿನವನ್ನು ಆಚರಿಸಿತು ಎಂದು ಅವರು ಹೇಳಿದರು.

ವಂದೇ ಮಾತರಂನ 150 ವರ್ಷಗಳ ಈ ಸಂದರ್ಭದಲ್ಲಿ, ಸದನವು ಅದರ ಸಾಮೂಹಿಕ ಶಕ್ತಿಯನ್ನು ಅನುಭವಿಸಲು ಪ್ರಯತ್ನಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ವಂದೇ ಮಾತರಂನ 150 ವರ್ಷಗಳ ಪಯಣವು ಅನೇಕ ಮೈಲಿಗಲ್ಲುಗಳನ್ನು ದಾಟಿದೆ ಎಂದು ಅವರು ಹೇಳಿದರು. ವಂದೇ ಮಾತರಂ 50 ವರ್ಷಗಳನ್ನು ಪೂರೈಸಿದಾಗ, ರಾಷ್ಟ್ರವು ವಸಾಹತುಶಾಹಿ ಆಳ್ವಿಕೆಯಲ್ಲಿ ಬದುಕುತ್ತಿತ್ತು ಎಂದು ನೆನಪಿಸಿಕೊಂಡ ಶ್ರೀ ಮೋದಿ, ಅದು 100 ವರ್ಷಗಳನ್ನು ತಲುಪಿದಾಗ, ದೇಶವು ತುರ್ತು ಪರಿಸ್ಥಿತಿಯ ಸರಪಳಿಗಳಿಂದ ಬಂಧಿಸಲ್ಪಟ್ಟಿತ್ತು ಎಂದು ಹೇಳಿದರು. ವಂದೇ ಮಾತರಂನ ಶತಮಾನೋತ್ಸವದ ಆಚರಣೆಯ ಸಮಯದಲ್ಲಿ, ಭಾರತದ ಸಂವಿಧಾನವನ್ನು ಹತ್ತಿಕ್ಕಲಾಯಿತು ಎಂದು ಅವರು ಹೇಳಿದರು. ವಂದೇ ಮಾತರಂ 100 ವರ್ಷಗಳನ್ನು ಪೂರೈಸಿದಾಗ, ದೇಶಭಕ್ತಿಗಾಗಿ ಬದುಕಿ ಮಡಿದವರನ್ನು ಜೈಲಿನಲ್ಲಿರಿಸಲಾಯಿತು ಎಂದು ಅವರು ಹೇಳಿದರು. ದೇಶದ ಸ್ವಾತಂತ್ರ್ಯಕ್ಕೆ ಶಕ್ತಿ ತುಂಬಿದ ಆ ಗೀತೆ, 100 ವರ್ಷಗಳನ್ನು ಪೂರೈಸಿದಾಗ, ದುರದೃಷ್ಟವಶಾತ್, ಪ್ರಜಾಪ್ರಭುತ್ವವು ತೀವ್ರ ಒತ್ತಡದಲ್ಲಿತ್ತು, ನಮ್ಮ ಇತಿಹಾಸದ ಕರಾಳ ಅಧ್ಯಾಯವೊಂದಕ್ಕೆ ಸಾಕ್ಷಿಯಾಯಿತು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

"ವಂದೇ ಮಾತರಂನ 150 ವರ್ಷಗಳು ಆ ಮಹಾನ್ ಅಧ್ಯಾಯ ಮತ್ತು ವೈಭವವನ್ನು ಪುನಃ ಸ್ಥಾಪಿಸಲು ಒಂದು ಅವಕಾಶವನ್ನು ಒದಗಿಸುತ್ತವೆ, ಮತ್ತು ಸದನ ಅಥವಾ ದೇಶವು ಈ ಅವಕಾಶವನ್ನು ಕಳೆದುಕೊಳ್ಳಬಾರದು" ಎಂದು ಶ್ರೀ ಮೋದಿ ಒತ್ತಿ ಹೇಳಿದರು. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟದ್ದು ವಂದೇ ಮಾತರಂ ಮತ್ತು ಸ್ವಾತಂತ್ರ್ಯ ಹೋರಾಟದ ಭಾವನಾತ್ಮಕ ನಾಯಕತ್ವವು ಅದರ ಸ್ಪಷ್ಟ ಕರೆಯ ಸಾಕಾರವಾಗಿತ್ತು ಎಂದು ಅವರು ಒತ್ತಿ ಹೇಳಿದರು.

150 ವರ್ಷಗಳ ವಂದೇ ಮಾತರಂ ಕುರಿತು ಚರ್ಚೆಯನ್ನು ಪ್ರಾರಂಭಿಸಲು ತಾವು ನಿಂತಾಗ, ಆಡಳಿತ ಅಥವಾ ವಿರೋಧ ಪಕ್ಷಗಳ ವಿಭಜನೆ ಇರಲಿಲ್ಲ, ಏಕೆಂದರೆ ಹಾಜರಿದ್ದ ಎಲ್ಲರಿಗೂ ವಂದೇ ಮಾತರಂಗೆ ಸಲ್ಲಿಸಬೇಕಾದ ಋಣವನ್ನು ತೀರಿಸುವ ಸಂದರ್ಭವಿದು ಎಂದು ಪ್ರಧಾನಮಂತ್ರಿ ಹೇಳಿದರು. ಇದು ಗುರಿ-ಆಧಾರಿತ ನಾಯಕರನ್ನು ಸ್ವಾತಂತ್ರ್ಯ ಚಳವಳಿಯನ್ನು ಮುಂದುವರಿಸಲು ಪ್ರೇರೇಪಿಸಿತು, ಇದರ ಪರಿಣಾಮವಾಗಿ ಇಂದು ಸದನದಲ್ಲಿ ಎಲ್ಲರೂ ಕುಳಿತುಕೊಳ್ಳಲು ಅವಕಾಶ ದೊರೆಯಿತು. ಎಲ್ಲಾ ಸಂಸತ್ ಸದಸ್ಯರು ಮತ್ತು ಪ್ರತಿನಿಧಿಗಳಿಗೆ, ಆ ಋಣವನ್ನು ಒಪ್ಪಿಕೊಳ್ಳಲು ಇದೊಂದು ಪವಿತ್ರ ಸಂದರ್ಭವಾಗಿದೆ ಎಂದು ಅವರು ಒತ್ತಿ ಹೇಳಿದರು. ಈ ಸ್ಫೂರ್ತಿಯಿಂದ, ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಸೇರಿದಂತೆ ಇಡೀ ರಾಷ್ಟ್ರವನ್ನು ಒಂದೇ ಧ್ವನಿಯಲ್ಲಿ ಒಗ್ಗೂಡಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವಂದೇ ಮಾತರಂನ ಚೈತನ್ಯವು ಮತ್ತೊಮ್ಮೆ ನಮಗೆ ಮಾರ್ಗದರ್ಶನ ನೀಡಬೇಕು ಎಂದು ಶ್ರೀ ಮೋದಿ ಹೇಳಿದರು. ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸುಗಳನ್ನು ನನಸಾಗಿಸಲು, 150 ನೇ ವರ್ಷದಲ್ಲಿ ವಂದೇ ಮಾತರಂ ಅನ್ನು ಎಲ್ಲರಿಗೂ ಸ್ಫೂರ್ತಿ ಮತ್ತು ಶಕ್ತಿಯ ಮೂಲವನ್ನಾಗಿ ಮಾಡಲು ಎಲ್ಲರೂ ಒಟ್ಟಾಗಿ ಮುನ್ನಡೆಯಬೇಕು ಎಂದು ಅವರು ಕರೆ ನೀಡಿದರು. 2047ರ ವೇಳೆಗೆ ಸ್ವಾವಲಂಬಿ ರಾಷ್ಟ್ರವನ್ನು ನಿರ್ಮಿಸುವ ಮತ್ತು ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನವನ್ನು ಸಾಧಿಸುವ ಸಂಕಲ್ಪವನ್ನು ಪುನರುಚ್ಚರಿಸಲು ಇದೊಂದು ಅವಕಾಶ ಎಂದು ಅವರು ಒತ್ತಿ ಹೇಳಿದರು.

1875ರಲ್ಲಿ ಬಂಕಿಮಚಂದ್ರ ಅವರೊಂದಿಗೆ ವಂದೇ ಮಾತರಂನ ಪಯಣ ಪ್ರಾರಂಭವಾಯಿತು ಎಂದು ಶ್ರೀ ಮೋದಿ ಹೇಳಿದರು. 1857ರ ಸ್ವಾತಂತ್ರ್ಯ ಹೋರಾಟದ ನಂತರ, ಬ್ರಿಟಿಷ್ ಸಾಮ್ರಾಜ್ಯವು ಅಸ್ಥಿರವಾಗಿದ್ದ ಮತ್ತು ಭಾರತದ ಮೇಲೆ ವಿವಿಧ ಒತ್ತಡಗಳು ಮತ್ತು ಅನ್ಯಾಯಗಳನ್ನು ಹೇರಿ, ಅದರ ಜನರನ್ನು ವಿಧೇಯರನ್ನಾಗಿ ಮಾಡುವಂತೆ ಒತ್ತಾಯಿಸಿದ ಸಮಯದಲ್ಲಿ ಈ ಹಾಡನ್ನು ರಚಿಸಲಾಗಿದೆ ಎಂದು ಅವರು ಒತ್ತಿ ಹೇಳಿದರು. ಆ ಅವಧಿಯಲ್ಲಿ, ಬ್ರಿಟಿಷರ ರಾಷ್ಟ್ರಗೀತೆ 'ಗಾಡ್ ಸೇವ್ ದಿ ಕ್ವೀನ್' ಅನ್ನು ಭಾರತದ ಪ್ರತಿಯೊಂದು ಮನೆಗೂ ಹರಡಲು ಪಿತೂರಿ ನಡೆಸಲಾಗುತ್ತಿತ್ತು ಎಂದು ಪ್ರಧಾನಮಂತ್ರಿ ಹೇಳಿದರು. ಆಗ ಬಂಕಿಮ್ ದಾ ಒಂದು ಸವಾಲನ್ನು ಹಾಕಿದರು, ಹೆಚ್ಚಿನ ಬಲದಿಂದ ಪ್ರತಿಕ್ರಿಯಿಸಿದರು ಮತ್ತು ಆ ಪ್ರತಿಭಟನೆಯಿಂದ ವಂದೇ ಮಾತರಂ ಹುಟ್ಟಿತು ಎಂದು ಅವರು ಒತ್ತಿ ಹೇಳಿದರು. ಕೆಲವು ವರ್ಷಗಳ ನಂತರ, 1882ರಲ್ಲಿ, ಬಂಕಿಮ್ ಚಂದ್ರ 'ಆನಂದ್ ಮಠ' ಬರೆದಾಗ, ಈ ಹಾಡನ್ನು ಕೃತಿಯಲ್ಲಿ ಸೇರಿಸಲಾಯಿತು ಎಂದು ಹೇಳಿದರು.

ವಂದೇ ಮಾತರಂ ಸಾವಿರಾರು ವರ್ಷಗಳಿಂದ ಭಾರತದ ನರನಾಡಿಗಳಲ್ಲಿ ಆಳವಾಗಿ ಬೇರೂರಿದ್ದ ಚಿಂತನೆಯನ್ನು ಪುನರುಜ್ಜೀವನಗೊಳಿಸಿತು ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಅದೇ ಚೈತನ್ಯ, ಅದೇ ಮೌಲ್ಯಗಳು, ಅದೇ ಸಂಸ್ಕೃತಿ ಮತ್ತು ಅದೇ ಸಂಪ್ರದಾಯವನ್ನು ಅತ್ಯುತ್ತಮ ಪದಗಳು ಮತ್ತು ಉದಾತ್ತ ಉದ್ದೇಶಗಳೊಂದಿಗೆ ವಂದೇ ಮಾತರಂ ಮೂಲಕ ರಾಷ್ಟ್ರಕ್ಕೆ ಉಡುಗೊರೆಯಾಗಿ ನೀಡಲಾಗಿದೆ ಎಂದು ಒತ್ತಿ ಹೇಳಿದರು. ವಂದೇ ಮಾತರಂ ಕೇವಲ ರಾಜಕೀಯ ಸ್ವಾತಂತ್ರ್ಯದ ಮಂತ್ರ ಅಥವಾ ಕೇವಲ ಬ್ರಿಟಿಷರನ್ನು ಓಡಿಸಿ ಸ್ವಂತ ದಾರಿಯನ್ನು ರೂಪಿಸಿಕೊಳ್ಳುವುದಷ್ಟೇ ಆಗಿರಲಿಲ್ಲ ಎಂದು ಅವರು ಒತ್ತಿ ಹೇಳಿದರು; ಅದಕ್ಕಿಂತಲೂ ಹೆಚ್ಚಿನದಾಗಿತ್ತು. ಸ್ವಾತಂತ್ರ್ಯ ಹೋರಾಟವು ಮಾತೃಭೂಮಿಯನ್ನು ಸಂಕೋಲೆಗಳಿಂದ ಮುಕ್ತಗೊಳಿಸಲು, ಭಾರತ ಮಾತೆಯನ್ನು ಮುಕ್ತಗೊಳಿಸಲು ನಡೆದ ಒಂದು ಪವಿತ್ರ ಯುದ್ಧವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ವಂದೇ ಮಾತರಂನ ಹಿನ್ನೆಲೆ ಮತ್ತು ಅದರ ಮೌಲ್ಯಗಳ ಹರಿವನ್ನು ನೋಡಿದಾಗ, ವೈದಿಕ ಯುಗದ ಪುನರಾವರ್ತಿತ ಸತ್ಯವನ್ನು ನಾವು ನೋಡುತ್ತೇವೆ ಎಂದು ಅವರು ಹೇಳಿದರು. ನಾವು ವಂದೇ ಮಾತರಂ ಎಂದು ಹೇಳುವಾಗ, ಈ ಭೂಮಿ ನನ್ನ ತಾಯಿ ಮತ್ತು ನಾನು ಅವಳ ಮಗ ಎಂಬ ವೈದಿಕ ಘೋಷಣೆಯನ್ನು ಅದು ನೆನಪಿಸುತ್ತದೆ ಎಂದು ಅವರು ಒತ್ತಿ ಹೇಳಿದರು.

"ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ" ಎಂದು ಘೋಷಿಸುವ ಮೂಲಕ ಭಗವಾನ್ ಶ್ರೀರಾಮನು ಲಂಕೆಯ ಭವ್ಯತೆಯನ್ನೂ ತ್ಯಜಿಸಿ ಇದೇ ಚಿಂತನೆಯನ್ನು ಪ್ರತಿಧ್ವನಿಸಿದನೆಂದು ಪ್ರಧಾನಮಂತ್ರಿ ಹೇಳಿದರು. ವಂದೇ ಮಾತರಂ ಈ ಮಹಾನ್ ಸಾಂಸ್ಕೃತಿಕ ಸಂಪ್ರದಾಯದ ಆಧುನಿಕ ಸಾಕಾರವಾಗಿದೆ ಎಂದು ಅವರು ಹೇಳಿದರು.

ಬಂಕಿಮ ದಾ ವಂದೇ ಮಾತರಂ ರಚಿಸಿದಾಗ, ಅದು ಸ್ವಾಭಾವಿಕವಾಗಿಯೇ ಸ್ವಾತಂತ್ರ್ಯ ಚಳವಳಿಯ ಧ್ವನಿಯಾಯಿತು ಎಂದು ಪ್ರಧಾನಮಂತ್ರಿ ಹೇಳಿದರು. ಪೂರ್ವದಿಂದ ಪಶ್ಚಿಮಕ್ಕೆ, ಉತ್ತರದಿಂದ ದಕ್ಷಿಣಕ್ಕೆ, ವಂದೇ ಮಾತರಂ ಪ್ರತಿಯೊಬ್ಬ ಭಾರತೀಯನ ಸಂಕಲ್ಪವಾಯಿತು ಎಂದು ಅವರು ಒತ್ತಿ ಹೇಳಿದರು.

ಕೆಲವು ದಿನಗಳ ಹಿಂದೆ, ವಂದೇ ಮಾತರಂ 150 ನೇ ವಾರ್ಷಿಕೋತ್ಸವದಲ್ಲಿ, ವಂದೇ ಮಾತರಂ ಸಾವಿರಾರು ವರ್ಷಗಳ ಸಾಂಸ್ಕೃತಿಕ ಶಕ್ತಿಯನ್ನು ಸಾಕಾರಗೊಳಿಸಿತು, ಸ್ವಾತಂತ್ರ್ಯದ ಚೈತನ್ಯವನ್ನು ಹೊಂದಿತ್ತು ಮತ್ತು ಸ್ವತಂತ್ರ ಭಾರತದ ದೃಷ್ಟಿಕೋನವನ್ನು ಹೊಂದಿತ್ತು ಎಂದು ಹೇಳಿದ್ದನ್ನು ಶ್ರೀ ಮೋದಿ ನೆನಪಿಸಿಕೊಂಡರು. ಬ್ರಿಟಿಷ್ ಯುಗದಲ್ಲಿ, ಭಾರತವನ್ನು ದುರ್ಬಲ, ಅಸಮರ್ಥ, ಸೋಮಾರಿ ಮತ್ತು ನಿಷ್ಕ್ರಿಯ ಎಂದು ಚಿತ್ರಿಸುವ ಒಂದು ಫ್ಯಾಷನ್ ಹೊರಹೊಮ್ಮಿತ್ತು ಮತ್ತು ವಸಾಹತುಶಾಹಿ ಪ್ರಭಾವದ ಅಡಿಯಲ್ಲಿ ಶಿಕ್ಷಣ ಪಡೆದವರು ಸಹ ಅದೇ ಭಾಷೆಯನ್ನು ಪ್ರತಿಧ್ವನಿಸಿದರು ಎಂದು ಅವರು ಹೇಳಿದರು. ಬಂಕಿಮ್ ದಾ ಅವರು ಈ ಕೀಳರಿಮೆಯನ್ನು ಹೋಗಲಾಡಿಸಿ ವಂದೇ ಮಾತರಂ ಮೂಲಕ ಭಾರತದ ಪ್ರಬಲ ಸ್ವರೂಪವನ್ನು ಬಹಿರಂಗಪಡಿಸಿದರು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಭಾರತ ಮಾತೆ ಜ್ಞಾನ ಮತ್ತು ಸಮೃದ್ಧಿಯ ದೇವತೆ ಹಾಗೂ ಶತ್ರುಗಳ ವಿರುದ್ಧ ಆಯುಧಗಳನ್ನು ಪ್ರಯೋಗಿಸುವ ಉಗ್ರ ಚಂಡಿಕಾ ಎಂದು ಒತ್ತಿ ಹೇಳುವ ಸಾಲುಗಳನ್ನು ಬಂಕಿಮ್ ದಾ ರಚಿಸಿದ್ದಾರೆ ಎಂದು ಅವರು ಹೇಳಿದರು.

ಗುಲಾಮಗಿರಿಯ ಹತಾಶೆಯಲ್ಲಿ ಭಾರತೀಯರಿಗೆ ಈ ಮಾತುಗಳು, ಭಾವನೆಗಳು ಮತ್ತು ಸ್ಫೂರ್ತಿಗಳು ಧೈರ್ಯವನ್ನು ನೀಡಿದವು ಎಂದು ಒತ್ತಿ ಹೇಳಿದ ಶ್ರೀ ಮೋದಿ, ಈ ಸಾಲುಗಳು ಲಕ್ಷಾಂತರ ದೇಶವಾಸಿಗಳಿಗೆ ಹೋರಾಟವು ಒಂದು ತುಂಡು ಭೂಮಿಗಾಗಿ ಅಥವಾ ಕೇವಲ ಅಧಿಕಾರದ ಸಿಂಹಾಸನವನ್ನು ವಶಪಡಿಸಿಕೊಳ್ಳಲು ಅಲ್ಲ, ಬದಲಿಗೆ ವಸಾಹತುಶಾಹಿಯ ಸರಪಳಿಗಳನ್ನು ಮುರಿದು ಸಾವಿರಾರು ವರ್ಷಗಳ ಶ್ರೇಷ್ಠ ಸಂಪ್ರದಾಯಗಳು, ಅದ್ಭುತ ಸಂಸ್ಕೃತಿ ಮತ್ತು ಹೆಮ್ಮೆಯ ಇತಿಹಾಸವನ್ನು ಪುನರುಜ್ಜೀವನಗೊಳಿಸಲು ಎಂಬುದನ್ನು ಅರಿತುಕೊಳ್ಳುವಂತೆ ಮಾಡಿದವು ಎಂದರು.

ಜನಸಾಮಾನ್ಯರೊಂದಿಗೆ ವಂದೇ ಮಾತರಂನ ಆಳವಾದ ಸಂಪರ್ಕವು ನಮ್ಮ ಸ್ವಾತಂತ್ರ್ಯ ಹೋರಾಟದ ದೀರ್ಘ ಚರಿತ್ರೆಯಾಗಿ ವ್ಯಕ್ತವಾಗುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಸಿಂಧು, ಸರಸ್ವತಿ, ಕಾವೇರಿ, ಗೋದಾವರಿ, ಗಂಗಾ ಅಥವಾ ಯಮುನಾ ನದಿಯನ್ನು ಉಲ್ಲೇಖಿಸಿದಾಗಲೆಲ್ಲಾ ಅದು ಸಂಸ್ಕೃತಿಯ ಪ್ರವಾಹ, ಅಭಿವೃದ್ಧಿಯ ಹರಿವು ಮತ್ತು ಮಾನವ ಜೀವನದ ಮೇಲೆ ಪ್ರಭಾವವನ್ನು ಬೀರುತ್ತದೆ ಎಂದು ಅವರು ಹೇಳಿದರು. ಅದೇ ರೀತಿ, ಸ್ವಾತಂತ್ರ್ಯ ಹೋರಾಟದ ಪ್ರತಿಯೊಂದು ಹಂತವೂ ವಂದೇ ಮಾತರಂನ ಉತ್ಸಾಹದಿಂದ ಹರಿಯಿತು ಮತ್ತು ಅದರ ತೀರಗಳು ಆ ಭಾವನೆಯನ್ನು ಪೋಷಿಸಿದವು ಎಂದು ಅವರು ಒತ್ತಿ ಹೇಳಿದರು. ಸ್ವಾತಂತ್ರ್ಯದ ಸಂಪೂರ್ಣ ಪ್ರಯಾಣವನ್ನು ವಂದೇ ಮಾತರಂನ ಭಾವನೆಗಳೊಂದಿಗೆ ಸಂಪರ್ಕಿಸುವ ಇಂತಹ ಕಾವ್ಯಾತ್ಮಕ ಅಭಿವ್ಯಕ್ತಿ ಜಗತ್ತಿನ ಬೇರೆಲ್ಲಿಯೂ ಕಂಡುಬರುವುದಿಲ್ಲ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

1857ರ ನಂತರ ಬ್ರಿಟಿಷರು ಭಾರತದಲ್ಲಿ ದೀರ್ಘಕಾಲ ಉಳಿಯುವುದು ಕಷ್ಟ ಎಂದು ಅರಿತುಕೊಂಡರು ಮತ್ತು ಭಾರತವನ್ನು ವಿಭಜಿಸದ ಹೊರತು, ಅದರ ಜನರನ್ನು ಪರಸ್ಪರ ಹೋರಾಡುವಂತೆ ಮಾಡದ ಹೊರತು, ಇಲ್ಲಿ ಆಳುವುದು ಅಸಾಧ್ಯ ಎಂದು ಅವರು ಭಾವಿಸಿದರು ಎಂದು ಶ್ರೀ ಮೋದಿ ಹೇಳಿದರು. ಆ ಸಮಯದಲ್ಲಿ ಬಂಗಾಳದ ಬೌದ್ಧಿಕ ಶಕ್ತಿಯು ರಾಷ್ಟ್ರಕ್ಕೆ ನಿರ್ದೇಶನ, ಶಕ್ತಿ ಮತ್ತು ಸ್ಫೂರ್ತಿಯನ್ನು ನೀಡಿತು, ಭಾರತದ ಸಾಮೂಹಿಕ ಶಕ್ತಿಯ ಕೇಂದ್ರಬಿಂದುವಾಯಿತು ಎಂದು ಅವರಿಗೆ ತಿಳಿದಿದ್ದರಿಂದ, ಬ್ರಿಟಿಷರು ಒಡೆದು ಆಳುವ ಮಾರ್ಗವನ್ನು ಆರಿಸಿಕೊಂಡರು ಮತ್ತು ಬಂಗಾಳವನ್ನು ತಮ್ಮ ಪ್ರಯೋಗಾಲಯವನ್ನಾಗಿ ಮಾಡಿಕೊಂಡರು ಎಂದು ಅವರು ಹೇಳಿದರುರು. ಬಂಗಾಳ ವಿಭಜನೆಯಾದ ನಂತರ, ದೇಶವೂ ಕುಸಿಯುತ್ತದೆ ಮತ್ತು ತಮ್ಮ ಆಡಳಿತವನ್ನು ಮುಂದುವರಿಸಬಹುದು ಎಂದು ನಂಬಿದ್ದ ಬ್ರಿಟಿಷರು ಮೊದಲು ಬಂಗಾಳವನ್ನು ಒಡೆಯುವ  ಕೆಲಸ ಮಾಡಿದರು ಎಂದು ಪ್ರಧಾನಮಂತ್ರಿ ಹೇಳಿದರು. 1905 ರಲ್ಲಿ, ಬ್ರಿಟಿಷರು ಬಂಗಾಳವನ್ನು ವಿಭಜಿಸುವ ಪಾಪವನ್ನು ಮಾಡಿದಾಗ, ವಂದೇ ಮಾತರಂ ಬಂಡೆಯಂತೆ ದೃಢವಾಗಿ ನಿಂತಿತು ಎಂದು ಅವರು ನೆನಪಿಸಿಕೊಂಡರು. ಬಂಗಾಳದ ಏಕತೆಗಾಗಿ, ವಂದೇ ಮಾತರಂ ಬೀದಿ ಬೀದಿಯಲ್ಲಿ ಪ್ರತಿಧ್ವನಿಸುವ ಕರೆಯಾಯಿತು, ಜನರಿಗೆ ಸ್ಫೂರ್ತಿ ನೀಡಿತು ಎಂದು ಅವರು ಹೇಳಿದರು. ಬಂಗಾಳ ವಿಭಜನೆಯೊಂದಿಗೆ, ಬ್ರಿಟಿಷರು ಭಾರತವನ್ನು ದುರ್ಬಲಗೊಳಿಸುವ ಬೀಜಗಳನ್ನು ಆಳವಾಗಿ ಬಿತ್ತಲು ಪ್ರಯತ್ನಿಸಿದರು, ಆದರೆ ವಂದೇ ಮಾತರಂ ಒಂದೇ ಧ್ವನಿ ಮತ್ತು ಒಗ್ಗಟ್ಟಿನ ದಾರವಾಗಿ ಬ್ರಿಟಿಷರಿಗೆ ಸವಾಲಾಗಿ ಮತ್ತು ರಾಷ್ಟ್ರಕ್ಕೆ ಶಕ್ತಿಯ ಬಂಡೆಯಾಗಿ ಮಾರ್ಪಟ್ಟಿತು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

ಬಂಗಾಳ ವಿಭಜನೆ ನಡೆದರೂ, ಅದು ಬೃಹತ್ ಸ್ವದೇಶಿ ಚಳುವಳಿಗೆ ನಾಂದಿ ಹಾಡಿತು ಮತ್ತು ಆ ಸಮಯದಲ್ಲಿ ವಂದೇ ಮಾತರಂ ಎಲ್ಲೆಡೆ ಪ್ರತಿಧ್ವನಿಸಿತು ಎಂದು ಪ್ರಧಾನಮಂತ್ರಿ ಹೇಳಿದರು. ಬಂಕಿಮ್ ಚಂದ್ರ ಚಟರ್ಜಿ ಅವರು ಸೃಷ್ಟಿಸಿದ ಭಾವನೆಯ ಶಕ್ತಿಯನ್ನು ಬ್ರಿಟಿಷರು ಅರಿತುಕೊಂಡರು, ಅವರ ಹಾಡು ಅವರ ಅಡಿಪಾಯವನ್ನು ಅಲುಗಾಡಿಸಿತು, ಅವರು ಅದರ ಮೇಲೆ ಕಾನೂನು ನಿಷೇಧಗಳನ್ನು ಹೇರಬೇಕಾಯಿತು ಎಂದು ಅವರು ಹೇಳಿದರು. ಅದನ್ನು ಹಾಡುವುದನ್ನು ಶಿಕ್ಷೆಗೆ ಒಳಪಡಿಸಲಾಯಿತು, ಮುದ್ರಿಸುವುದನ್ನು ಶಿಕ್ಷೆಗೆ ಒಳಪಡಿಸಲಾಯಿತು ಮತ್ತು ವಂದೇ ಮಾತರಂ ಎಂಬ ಪದಗಳನ್ನು ಉಚ್ಚರಿಸುವುದು ಕಠಿಣ ಕಾನೂನುಗಳ ಅಡಿಯಲ್ಲಿ ಶಿಕ್ಷೆಗೆ ಗುರಿಯಾಯಿತು ಎಂದು ಹೇಳಿದರು. ವಂದೇ ಮಾತರಂ ಹಾಡಿದ್ದಕ್ಕಾಗಿ ಅತ್ಯಂತ ದೊಡ್ಡ ದೌರ್ಜನ್ಯಗಳು ನಡೆದ ಬಾರಿಸಾಲ್‌ ನ ಉದಾಹರಣೆಯನ್ನು ಉಲ್ಲೇಖಿಸಿ ನೂರಾರು ಮಹಿಳೆಯರು ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದರು ಮತ್ತು ಕೊಡುಗೆ ನೀಡಿದರು ಎಂದು ಅವರು ಒತ್ತಿ ಹೇಳಿದರು. ವಂದೇ ಮಾತರಂನ ಘನತೆಯನ್ನು ರಕ್ಷಿಸಲು ಬಾರಿಸಾಲ್‌ ನಲ್ಲಿ ತಾಯಂದಿರು, ಸಹೋದರಿಯರು ಮತ್ತು ಮಕ್ಕಳು ಮುಂದೆ ಬಂದರು ಎಂದು ಅವರು ನೆನಪಿಸಿಕೊಂಡರು. ವಂದೇ ಮಾತರಂ ಮೇಲಿನ ನಿಷೇಧವನ್ನು ತೆಗೆದುಹಾಕುವವರೆಗೆ, ಅವರು ತಮ್ಮ ಬಳೆಗಳನ್ನು ಮತ್ತೆ ತೊಡುವುದಿಲ್ಲ ಎಂದು ಘೋಷಿಸಿದ ಧೈರ್ಯಶಾಲಿ ಸರೋಜಿನಿ ಘೋಷ್ ಅವರನ್ನು ಶ್ರೀ ಮೋದಿ ಉಲ್ಲೇಖಿಸಿದರು, ಇದು ಆ ಕಾಲದಲ್ಲಿ ಅಪಾರ ಮಹತ್ವದ ಪ್ರತಿಜ್ಞೆಯಾಗಿತ್ತು ಎಂದರು. ಮಕ್ಕಳನ್ನು ಸಹ ಬಿಡಲಾಗಲಿಲ್ಲ, ಎಳೆಯ ಮಕ್ಕಳನ್ನು ಥಳಿಸಲಾಯಿತು, ಜೈಲಿಗೆ ಹಾಕಲಾಯಿತು, ಆದರೆ ಅವರು ಬೆಳಿಗ್ಗೆ ಮೆರವಣಿಗೆಗಳಲ್ಲಿ ವಂದೇ ಮಾತರಂ ಜಪಿಸುತ್ತಾ ಬ್ರಿಟಿಷರನ್ನು ಧಿಕ್ಕರಿಸುತ್ತಾ ಮೆರವಣಿಗೆ ನಡೆಸಿದರು ಎಂದು ಅವರು ಹೇಳಿದರು. ಬಂಗಾಳದ ಬೀದಿಗಳಲ್ಲಿ, "ಪ್ರಿಯ ತಾಯಿ, ನಿನ್ನ ಸೇವೆ ಮಾಡುತ್ತಾ ವಂದೇ ಮಾತರಂ ಜಪಿಸುತ್ತಾ, ಪ್ರಾಣ ಹೋದರೂ ಆ ಜೀವ ಧನ್ಯ" ಎಂಬ ಅರ್ಥವಿರುವ ಬಂಗಾಳಿ ಹಾಡು ಪ್ರತಿಧ್ವನಿಸಿತು, ಅದು ಮಕ್ಕಳ ಧ್ವನಿಯಾಯಿತು ಮತ್ತು ರಾಷ್ಟ್ರಕ್ಕೆ ಧೈರ್ಯವನ್ನು ನೀಡಿತು ಎಂದು ಅವರು ಹೇಳಿದರು.

1905ರಲ್ಲಿ, ಹರಿತಪುರ ಗ್ರಾಮದಲ್ಲಿ, ವಂದೇ ಮಾತರಂ ಪಠಿಸುತ್ತಿದ್ದ ಚಿಕ್ಕ ಮಕ್ಕಳನ್ನು ಕ್ರೂರವಾಗಿ ಥಳಿಸಿ, ಸಾವು ಬದುಕಿನ ನಡುವಿನ ಹೋರಾಟಕ್ಕೆ ತಳ್ಳಲಾಯಿತು ಎಂದು ಶ್ರೀ ಮೋದಿ ಸ್ಮರಿಸಿದರು. ಅದೇ ರೀತಿ, 1906ರಲ್ಲಿ, ನಾಗ್ಪುರದ ನೀಲ್ ಸಿಟಿ ಪೌಢಶಾಲೆಯ ಮಕ್ಕಳು ಒಗ್ಗಟ್ಟಿನಿಂದ ವಂದೇ ಮಾತರಂ ಪಠಿಸಿದ "ಅಪರಾಧ"ಕ್ಕಾಗಿ ದೌರ್ಜನ್ಯವನ್ನು ಎದುರಿಸಿದರು, ತಮ್ಮ ಶಕ್ತಿಯ ಮೂಲಕ ಮಂತ್ರದ ಶಕ್ತಿಯನ್ನು ಸಾಬೀತುಪಡಿಸಿದರು. ಭಾರತದ ಧೈರ್ಯಶಾಲಿ ಪುತ್ರರು ಕೊನೆಯ ಉಸಿರಿನವರಗೂ ವಂದೇ ಮಾತರಂ ಪಠಿಸುತ್ತಾ ನಿರ್ಭಯವಾಗಿ ನೇಣುಗಂಬವನ್ನು ಏರಿದರು - ಖುದಿರಾಮ್ ಬೋಸ್, ಮದನಲಾಲ್ ಧಿಂಗ್ರಾ, ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾ ಖಾನ್, ರೋಶನ್ ಸಿಂಗ್, ರಾಜೇಂದ್ರನಾಥ್ ಲಹಿರಿ, ರಾಮಕೃಷ್ಣ ಬಿಸ್ವಾಸ್ ಮತ್ತು ಇನ್ನೂ ಅಸಂಖ್ಯಾತರು ವಂದೇ ಮಾತರಂ ಅನ್ನು ಜಪಿಸುತ್ತಾ ನೇಣುಗಂಬವನ್ನು ಏರಿದರು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಈ ತ್ಯಾಗಗಳು ವಿಭಿನ್ನ ಜೈಲುಗಳಲ್ಲಿ, ವಿಭಿನ್ನ ಪ್ರದೇಶಗಳಲ್ಲಿ, ವಿಭಿನ್ನ ಮುಖಗಳು ಮತ್ತು ಭಾಷೆಗಳಲ್ಲಿ ನಡೆದರೂ, ಮಂತ್ರವು ಒಂದೇ ಆಗಿತ್ತು - ವಂದೇ ಮಾತರಂ, ಇದು ಒಂದು ಭಾರತ, ಶ್ರೇಷ್ಠ ಭಾರತವನ್ನು ಸಂಕೇತಿಸುತ್ತದೆ. ಪ್ರಧಾನಮಂತ್ರಿಯವರು ಚಿತ್ತಗಾಂಗ್ ದಂಗೆಯನ್ನು ನೆನಪಿಸಿಕೊಂಡರು, ಅಲ್ಲಿ ಯುವ ಕ್ರಾಂತಿಕಾರಿಗಳು ಬ್ರಿಟಿಷರಿಗೆ ಸವಾಲು ಹಾಕಿದರು, ಹರಗೋಪಾಲ್ ಬಾಲ್, ಪುಲಿನ್ ಬಿಕಾಶ್ ಘೋಷ್ ಮತ್ತು ತ್ರಿಪುರ್ ಸೇನ್ ಅವರಂತಹವರು ಇತಿಹಾಸದಲ್ಲಿ ಮಿಂಚಿದರು. 1934 ರಲ್ಲಿ ಮಾಸ್ಟರ್ ಸೂರ್ಯ ಸೇನ್ ಅವರನ್ನು ಗಲ್ಲಿಗೇರಿಸಿದಾಗ, ಅವರು ತಮ್ಮ ಒಡನಾಡಿಗಳಿಗೆ ಪತ್ರ ಬರೆದರು ಮತ್ತು ಅದರಲ್ಲಿ ಕೇವಲ ಒಂದೇ ಪದವಿತ್ತು - ವಂದೇ ಮಾತರಂ.

ಭಾರತದ ಜನರು ಹೆಮ್ಮೆ ಪಡಬೇಕು, ಏಕೆಂದರೆ ವಿಶ್ವ ಇತಿಹಾಸದಲ್ಲಿ ಬೇರೆಲ್ಲಿಯೂ ಶತಮಾನಗಳಿಂದ ಲಕ್ಷಾಂತರ ಜನರನ್ನು ಒಂದೇ ಗುರಿಯತ್ತ ಪ್ರೇರೇಪಿಸಿದ, ತಮ್ಮ ಜೀವನವನ್ನು ಸಮರ್ಪಿಸುವಂತೆ ಮಾಡಿದ ವಂದೇ ಮಾತರಂನಂತಹ ಕವಿತೆ ಅಥವಾ ಹಾಡು ಕಾಣುವುದಿಲ್ಲ ಎಂದು ಒತ್ತಿ ಹೇಳಿದ ಶ್ರೀ ಮೋದಿ, ವಸಾಹತುಶಾಹಿಯ ಕಾಲದಲ್ಲಿಯೂ ಸಹ, ಭಾರತವು ಭಾವನೆಗಳ ಆಳವಾದ ಹಾಡನ್ನು ರಚಿಸುವ ಸಾಮರ್ಥ್ಯವಿರುವ ವ್ಯಕ್ತಿಗಳಿಗೆ ಜನ್ಮ ನೀಡಿತು ಎಂದು ಜಗತ್ತು ತಿಳಿದುಕೊಳ್ಳಬೇಕು ಎಂದು ಒತ್ತಿ ಹೇಳಿದರು. ಇದನ್ನು ನಾವು ಹೆಮ್ಮೆಯಿಂದ ಘೋಷಿಸಬೇಕು, ಆಗ ಜಗತ್ತು ಕೂಡ ಇದನ್ನು ಆಚರಿಸಲು ಪ್ರಾರಂಭಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ವಂದೇ ಮಾತರಂ ಸ್ವಾತಂತ್ರ್ಯದ ಮಂತ್ರ, ತ್ಯಾಗದ ಮಂತ್ರ, ಶಕ್ತಿಯ ಮಂತ್ರ, ಶುದ್ಧತೆಯ ಮಂತ್ರ, ಸಮರ್ಪಣೆಯ ಮಂತ್ರ, ತ್ಯಾಗ ಮತ್ತು ತಪಸ್ಸಿನ ಮಂತ್ರ ಮತ್ತು ಕಷ್ಟಗಳನ್ನು ಸಹಿಸಿಕೊಳ್ಳಲು ಶಕ್ತಿಯನ್ನು ನೀಡುವ ಮಂತ್ರ. ಆ ಮಂತ್ರವೇ ವಂದೇ ಮಾತರಂ ಎಂದು ಅವರು ಒತ್ತಿ ಹೇಳಿದರು. ಗುರುದೇವ ರವೀಂದ್ರನಾಥ ಟ್ಯಾಗೋರ್ ಅವರು "ಒಂದು ದಾರದಲ್ಲಿ ಸಾವಿರಾರು ಮನಸ್ಸುಗಳು ಬಂಧಿತವಾಗಿವೆ, ಸಾವಿರಾರು ಜೀವಗಳು ಒಂದು ಕೆಲಸಕ್ಕೆ ಸಮರ್ಪಿತವಾಗಿವೆ - ವಂದೇ ಮಾತರಂ" ಎಂದು ಬರೆದಿದ್ದಾರೆ ಎಂದು ಪ್ರಧಾನಮಂತ್ರಿ ನೆನಪಿಸಿಕೊಂಡರು.

ಆ ಅವಧಿಯಲ್ಲಿ ವಂದೇ ಮಾತರಂನ ಧ್ವನಿಮುದ್ರಣಗಳು ಪ್ರಪಂಚದ ವಿವಿಧ ಭಾಗಗಳನ್ನು ತಲುಪಿದವು ಮತ್ತು ಕ್ರಾಂತಿಕಾರಿಗಳಿಗೆ ಒಂದು ರೀತಿಯ ಯಾತ್ರಾ ಸ್ಥಳವಾಗಿ ಮಾರ್ಪಟ್ಟ ಲಂಡನ್ ಅನ್ನು ತಲುಪಿದವು ಎಂದು ಪ್ರಧಾನಮಂತ್ರಿ ಹೇಳಿದರು, ಜನರು ವೀರ್ ಸಾವರ್ಕರ್ ಅವರು ಇಂಡಿಯಾ ಹೌಸ್‌ ನಲ್ಲಿ ವಂದೇ ಮಾತರಂ ಹಾಡುವುದನ್ನು ನೋಡಿದರು, ಅಲ್ಲಿ ಹಾಡು ಪದೇ ಪದೇ ಪ್ರತಿಧ್ವನಿಸಿತು, ರಾಷ್ಟ್ರಕ್ಕಾಗಿ ಬದುಕಲು ಮತ್ತು ಸಾಯಲು ಸಿದ್ಧರಾಗಿರುವವರಿಗೆ ಸ್ಫೂರ್ತಿಯ ಮೂಲವಾಯಿತು. ಅದೇ ಸಮಯದಲ್ಲಿ, ಬಿಪಿನ್ ಚಂದ್ರ ಪಾಲ್ ಮತ್ತು ಮಹರ್ಷಿ ಅರಬಿಂದೋ ಘೋಷ್ ಒಂದು ಪತ್ರಿಕೆಯನ್ನು ಪ್ರಾರಂಭಿಸಿ ಅದಕ್ಕೆ 'ವಂದೇ ಮಾತರಂ' ಎಂದು ಹೆಸರಿಸಿದರು, ಏಕೆಂದರೆ ಆ ಹಾಡೊಂದೇ ಬ್ರಿಟಿಷರ ನಿದ್ರೆಯನ್ನು ಕೆಡಿಸಲು ಸಾಕಾಗಿತ್ತು. ಬ್ರಿಟಿಷರು ಪತ್ರಿಕೆಗಳ ಮೇಲೆ ನಿರ್ಬಂಧಗಳನ್ನು ವಿಧಿಸಿದಾಗ, ಮೇಡಂ ಭಿಕಾಜಿ ಕಾಮಾ ಪ್ಯಾರಿಸ್‌ ನಲ್ಲಿ ಒಂದು ಪತ್ರಿಕೆಯನ್ನು ಪ್ರಕಟಿಸಿ ಅದಕ್ಕೆ 'ವಂದೇ ಮಾತರಂ' ಎಂದು ಹೆಸರಿಟ್ಟರು ಎಂದು ಪ್ರಧಾನಮಂತ್ರಿ ಹೇಳಿದರು.

"ವಂದೇ ಮಾತರಂ ಭಾರತಕ್ಕೆ ಸ್ವಾವಲಂಬನೆಯ ಹಾದಿಯನ್ನು ತೋರಿಸಿತು" ಎಂದು ಶ್ರೀ ಮೋದಿ ಹೇಳಿದರು. ಬೆಂಕಿಕಡ್ಡಿಗಳಿಂದ ಹಿಡಿದು ದೊಡ್ಡ ಹಡಗುಗಳವರೆಗೆ ಎಲ್ಲದರಲ್ಲೂ ವಂದೇ ಮಾತರಂ ಬರೆಯುವ ಸಂಪ್ರದಾಯವು ವಿದೇಶಿ ಕಂಪನಿಗಳಿಗೆ ಸವಾಲೊಡ್ಡುವ ಸಾಧನವಾಯಿತು ಮತ್ತು ಸ್ವದೇಶಿಯ ಮಂತ್ರವಾಯಿತು ಎಂದು ಅವರು ವಿವರಿಸಿದರು. ಸ್ವಾತಂತ್ರ್ಯದ ಮಂತ್ರವು ಸ್ವದೇಶಿಯ ಮಂತ್ರವಾಗಿ ವಿಸ್ತರಿಸಿತು ಎಂದು ಅವರು ಒತ್ತಿ ಹೇಳಿದರು.

1907ರಲ್ಲಿ ವಿ.ಒ. ಚಿದಂಬರಂ ಪಿಳ್ಳೈ ಅವರು ಸ್ವದೇಶಿ ಕಂಪನಿಗಾಗಿ ಹಡಗನ್ನು ನಿರ್ಮಿಸಿ ಅದರ ಮೇಲೆ ವಂದೇ ಮಾತರಂ ಎಂದು ಬರೆದ ಘಟನೆಯನ್ನು ಪ್ರಧಾನಮಂತ್ರಿ ನೆನಪಿಸಿಕೊಂಡರು. ರಾಷ್ಟ್ರಕವಿ ಸುಬ್ರಮಣ್ಯ ಭಾರತಿ ಅವರು ವಂದೇ ಮಾತರಂ ಅನ್ನು ತಮಿಳಿಗೆ ಅನುವಾದಿಸಿದ್ದಾರೆ ಮತ್ತು ಸ್ತುತಿಗೀತೆಗಳನ್ನು ರಚಿಸಿದ್ದಾರೆ, ವಂದೇ ಮಾತರಂ ಮೇಲಿನ ಭಕ್ತಿ ಅವರ ಅನೇಕ ದೇಶಭಕ್ತಿ ಗೀತೆಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಅವರು ಹೇಳಿದರು. ವಂದೇ ಮಾತರಂ ಎಂಬ ಬರಹವಿರುವ ಧ್ವಜವನ್ನು ಉಲ್ಲೇಖಿಸುವ ಭಾರತದ ಧ್ವಜ ಗೀತೆಯನ್ನು ಭಾರತಿಯವರು ಬರೆದಿದ್ದಾರೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. "ಓ ದೇಶಭಕ್ತರೇ, ನನ್ನ ತಾಯಿಯ ಪವಿತ್ರ ಧ್ವಜವನ್ನು ನೋಡಿ ಮತ್ತು ಗೌರವದಿಂದ ಅದಕ್ಕೆ ನಮಸ್ಕರಿಸಿ" ಎಂಬ ಅರ್ಥವಿರುವ ತಮಿಳು ಕವಿತೆಯನ್ನು ಅವರು ಉಲ್ಲೇಖಿಸಿದರು.

ವಂದೇ ಮಾತರಂ ಬಗ್ಗೆ ಮಹಾತ್ಮಾ ಗಾಂಧಿಯವರ ಭಾವನೆಗಳನ್ನು ಸದನದ ಮುಂದೆ ಇಡಲು ಬಯಸುತ್ತೇನೆ ಎಂದು ಪ್ರಧಾನಮಂತ್ರಿ ಹೇಳಿದರು. ದಕ್ಷಿಣ ಆಫ್ರಿಕಾದಿಂದ ಪ್ರಕಟವಾಗುತ್ತಿದ್ದ 'ಇಂಡಿಯನ್ ಒಪೀನಿಯನ್' ಎಂಬ ವಾರಪತ್ರಿಕೆಯಲ್ಲಿ ಮಹಾತ್ಮ ಗಾಂಧಿಯವರು ಡಿಸೆಂಬರ್ 2, 1905 ರಂದು ಬರೆದಿದ್ದನ್ನು ಅವರು ನೆನಪಿಸಿಕೊಂಡರು. ಬಂಕಿಮಚಂದ್ರ ಅವರು ರಚಿಸಿದ ವಂದೇ ಮಾತರಂ ಬಂಗಾಳದಾದ್ಯಂತ ಅಪಾರ ಜನಪ್ರಿಯತೆಯನ್ನು ಗಳಿಸಿತು ಮತ್ತು ಸ್ವದೇಶಿ ಚಳವಳಿಯ ಸಮಯದಲ್ಲಿ, ಲಕ್ಷಾಂತರ ಜನರು ಬಂಕಿಮ್ ಅವರ ಗೀತೆಯನ್ನು ಹಾಡುವ ಬೃಹತ್ ಸಭೆಗಳು ನಡೆದವು ಎಂದು ಗಾಂಧೀಜಿ ಬರೆದರು. ಈ ಹಾಡು ಎಷ್ಟು ಜನಪ್ರಿಯವಾಗಿದೆಯೆಂದರೆ ಅದು ಬಹುತೇಕ ರಾಷ್ಟ್ರಗೀತೆಯಂತಿದೆ ಎಂಬ ಗಾಂಧೀಜಿ ಅವರ ಮಾತುಗಳನ್ನು ಪ್ರಧಾನಮಂತ್ರಿ ಎತ್ತಿ ತೋರಿಸಿದರು. ಇದರ ಭಾವನೆಗಳು ಉದಾತ್ತವಾಗಿವೆ, ಇತರ ರಾಷ್ಟ್ರಗಳ ಹಾಡುಗಳಿಗಿಂತ ಮಧುರವಾಗಿದೆ ಮತ್ತು ನಮ್ಮಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸುವುದು ಇದರ ಏಕೈಕ ಉದ್ದೇಶವಾಗಿದೆ ಎಂದು ಗಾಂಧೀಜಿ ಬರೆದಿದ್ದಾರೆ. ಈ ಗೀತೆಯು ಭಾರತವನ್ನು ತಾಯಿಯಾಗಿ ನೋಡುತ್ತದೆ ಮತ್ತು ಅವಳನ್ನು ಪೂಜಿಸುತ್ತದೆ ಎಂದು ಗಾಂಧೀಜಿ ಹಾಡನ್ನು ವಿವರಿಸಿದರು ಎಂದು ಪ್ರಧಾನಮಂತ್ರಿ ಹೇಳಿದರು.

1905ರಲ್ಲಿ ಮಹಾತ್ಮ ಗಾಂಧಿಯವರು ರಾಷ್ಟ್ರಗೀತೆಯಾಗಿ ಕಂಡಿದ್ದ ಮತ್ತು ದೇಶ ಮತ್ತು ವಿದೇಶಗಳಲ್ಲಿ ಪ್ರತಿಯೊಬ್ಬ ಭಾರತೀಯರಿಗೂ ಅಪಾರ ಶಕ್ತಿಯ ಮೂಲವಾಗಿದ್ದ ವಂದೇ ಮಾತರಂ, ನಂತರ ಕಳೆದ ಶತಮಾನದಲ್ಲಿ ತೀವ್ರ ಅನ್ಯಾಯವನ್ನು ಅನುಭವಿಸಿತು ಎಂದು ಪ್ರಧಾನಮಂತ್ರಿ ಹೇಳಿದರು. ವಂದೇ ಮಾತರಂನೊಂದಿಗೆ ಅಂತಹ ದ್ರೋಹ ಏಕೆ ಸಂಭವಿಸಿತು, ಅಂತಹ ಅನ್ಯಾಯ ಏಕೆ ಮಾಡಲಾಯಿತು ಮತ್ತು ಯಾವ ಶಕ್ತಿಗಳು ಪೂಜ್ಯ ಬಾಪು ಅವರ ಭಾವನೆಗಳನ್ನು ಸಹ ಮರೆಮಾಚಿ, ಈ ಪವಿತ್ರ ಸ್ಫೂರ್ತಿಯನ್ನು ವಿವಾದಕ್ಕೆ ಎಳೆದವು ಎಂದು ಅವರು ಪ್ರಶ್ನಿಸಿದರು. ವಂದೇ ಮಾತರಂನ 150 ವರ್ಷಗಳನ್ನು ನಾವು ಆಚರಿಸುತ್ತಿರುವಾಗ, ಈ ದ್ರೋಹಕ್ಕೆ ಕಾರಣವಾದ ಸಂದರ್ಭಗಳ ಬಗ್ಗೆ ಹೊಸ ಪೀಳಿಗೆಗೆ ತಿಳಿಸುವುದು ನಮ್ಮ ಕರ್ತವ್ಯ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಮುಸ್ಲಿಂ ಲೀಗ್‌ ನ ವಂದೇ ಮಾತರಂ ವಿರೋಧಿ ರಾಜಕೀಯ ತೀವ್ರಗೊಳ್ಳುತ್ತಿತ್ತು ಎಂದು ಅವರು ಎತ್ತಿ ತೋರಿಸಿದರು ಮತ್ತು ಮೊಹಮ್ಮದ್ ಅಲಿ ಜಿನ್ನಾ 1937 ರ ಅಕ್ಟೋಬರ್ 15 ರಂದು ಲಕ್ನೋದಲ್ಲಿ ವಂದೇ ಮಾತರಂ ವಿರುದ್ಧ ಘೋಷಣೆ ಕೂಗಿದರು. ಮುಸ್ಲಿಂ ಲೀಗ್‌ ನ ಆಧಾರರಹಿತ ಹೇಳಿಕೆಗಳನ್ನು ದೃಢವಾಗಿ ವಿರೋಧಿಸುವ ಮತ್ತು ಖಂಡಿಸುವ ಬದಲು, ಆಗಿನ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಜವಾಹರಲಾಲ್ ನೆಹರು ಅವರು ವಂದೇ ಮಾತರಂಗೆ ತಮ್ಮ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐ ಎನ್‌ ಸಿ) ಪಕ್ಷದ ಬದ್ಧತೆಯನ್ನು ಪುನರುಚ್ಚರಿಸಲಿಲ್ಲ ಮತ್ತು ವಂದೇ ಮಾತರಂ ಅನ್ನು ಸ್ವತಃ ಪ್ರಶ್ನಿಸಲು ಪ್ರಾರಂಭಿಸಿದರು ಎಂದು ಪ್ರಧಾನಮಂತ್ರಿ ಹೇಳಿದರು. ಜಿನ್ನಾ ಅವರ ವಿರೋಧದ ಕೇವಲ ಐದು ದಿನಗಳ ನಂತರ, ಅಕ್ಟೋಬರ್ 20, 1937 ರಂದು, ನೆಹರು ನೇತಾಜಿ ಸುಭಾಷ್ ಚಂದ್ರ ಬೋಸ್‌ ಅವರಿಗೆ ಪತ್ರ ಬರೆದರು, ಜಿನ್ನಾ ಅವರ ಭಾವನೆಯನ್ನು ಒಪ್ಪಿಕೊಂಡರು ಮತ್ತು ವಂದೇ ಮಾತರಂನ 'ಆನಂದ ಮಠ' ಹಿನ್ನೆಲೆ ಮುಸ್ಲಿಮರನ್ನು ಕೆರಳಿಸಬಹುದು ಎಂದು ಹೇಳಿದರು. "ವಂದೇ ಮಾತರಂ ಹಾಡಿನ ಹಿನ್ನೆಲೆಯನ್ನು ನಾನು ಓದಿದ್ದೇನೆ. ಈ ಹಿನ್ನೆಲೆ ಮುಸ್ಲಿಮರನ್ನು ಕೆರಳಿಸಬಹುದು ಎಂದು ನಾನು ಭಾವಿಸುತ್ತೇನೆ" ನೆಹರು ಅವರ ಮಾತುಗಳನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು.

ಇದರ ನಂತರ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ನಿಂದ 1937ರ ಅಕ್ಟೋಬರ್ 26ರಲ್ಲಿ ವಂದೇ ಮಾತರಂ ಬಳಕೆಯನ್ನು ಪರಿಶೀಲಿಸಲು ಕೋಲ್ಕತ್ತಾದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಸೇರಲಿದೆ ಎಂದು ಹೇಳಿಕೆ ಬಂದಿತು ಎಂದು ಪ್ರಧಾನಮಂತ್ರಿ ಹೇಳಿದರು. ಈ ವಿಮರ್ಶೆಗೆ ಬಂಕಿಮ್ ಬಾಬು ಅವರ ಬಂಗಾಳ, ಬಂಕಿಮ್ ಬಾಬು ಅವರ ಕೋಲ್ಕತ್ತಾವನ್ನು ಆಯ್ಕೆ ಮಾಡಲಾಯಿತು ಎಂದು ಅವರು ಎತ್ತಿ ತೋರಿಸಿದರು. ಇಡೀ ರಾಷ್ಟ್ರವು ದಿಗ್ಭ್ರಮೆಗೊಂಡಿತು ಮತ್ತು ಆಘಾತಕ್ಕೊಳಗಾಯಿತು ಮತ್ತು ದೇಶಾದ್ಯಂತ ದೇಶಭಕ್ತರು ಮೆರವಣಿಗೆಗಳನ್ನು ಆಯೋಜಿಸುವ ಮೂಲಕ ಮತ್ತು ವಂದೇ ಮಾತರಂ ಹಾಡುವ ಮೂಲಕ ಪ್ರಸ್ತಾಪವನ್ನು ವಿರೋಧಿಸಿದರು ಎಂದು ಪ್ರಧಾನಮಂತ್ರಿ ಹೇಳಿದರು. ದುರದೃಷ್ಟವಶಾತ್, 1937ರ ಅಕ್ಟೋಬರ್ 26 ರಂದು ಕಾಂಗ್ರೆಸ್ ವಂದೇ ಮಾತರಂನಲ್ಲಿ ರಾಜಿ ಮಾಡಿಕೊಂಡು, ಅದನ್ನು ವಿಭಜಿಸಿತು ಎಂದು ಅವರು ಒತ್ತಿ ಹೇಳಿದರು. ಈ ನಿರ್ಧಾರವನ್ನು ಸಾಮಾಜಿಕ ಸಾಮರಸ್ಯದ ಸೋಗಿನಲ್ಲಿ ಮರೆಮಾಚಲಾಗಿತ್ತು ಎಂದು ಅವರು ಹೇಳಿದರು, ಆದರೆ ಮುಸ್ಲಿಂ ಲೀಗ್ ಮುಂದೆ ಐ ಎನ್‌ ಸಿ ಶರಣಾಯಿತು ಮತ್ತು ಅದರ ಒತ್ತಡಕ್ಕೆ ಮಣಿದು ತುಷ್ಟೀಕರಣದ ರಾಜಕೀಯವನ್ನು ಅಳವಡಿಸಿಕೊಂಡಿತು ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ಓಲೈಕೆ ರಾಜಕೀಯದ ಒತ್ತಡದಲ್ಲಿ ಕಾಂಗ್ರೆಸ್ ಪಕ್ಷವು ವಂದೇ ಮಾತರಂನ ವಿಭಜನೆಗೆ ಮಣಿಯಿತು ಮತ್ತು ಆದ್ದರಿಂದ ಒಂದು ದಿನ ಅದು ಭಾರತದ ವಿಭಜನೆಗೆ ಮಣಿಯಬೇಕಾಯಿತು ಎಂದು ಪ್ರಧಾನಮಂತ್ರಿ ಹೇಳಿದರು. ಐ ಎನ್‌ ಸಿ ತನ್ನ ನಿರ್ಧಾರಗಳನ್ನು ಹೊರಗುತ್ತಿಗೆ ನೀಡಿತ್ತು ಮತ್ತು ವಿಷಾದವೆಂದರೆ, ಅದರ ನೀತಿಗಳು ಇನ್ನೂ ಹಾಗೆಯೇ ಉಳಿದಿವೆ ಎಂದು ಅವರು ಹೇಳಿದರು. ಓಲೈಕೆ ರಾಜಕೀಯದಲ್ಲಿ ತೊಡಗಿರುವ ಮತ್ತು ವಂದೇ ಮಾತರಂ ಬಗ್ಗೆ ನಿರಂತರವಾಗಿ ವಿವಾದವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವ ವಿರೋಧ ಪಕ್ಷಗಳು ಮತ್ತು ಅದರ ಮಿತ್ರಪಕ್ಷಗಳನ್ನು ಪ್ರಧಾನಮಂತ್ರಿ ಟೀಕಿಸಿದರು.

ಯಾವುದೇ ರಾಷ್ಟ್ರದ ನಿಜವಾದ ಸ್ವರೂಪವು ಅದರ ಒಳ್ಳೆಯ ಸಮಯದಲ್ಲಿ ಅಲ್ಲ, ಬದಲಾಗಿ ಸವಾಲು ಮತ್ತು ಬಿಕ್ಕಟ್ಟಿನ ಸಮಯದಲ್ಲಿ, ಅದರ ಸ್ಥಿತಿಸ್ಥಾಪಕತ್ವ, ಶಕ್ತಿ ಮತ್ತು ಸಾಮರ್ಥ್ಯವನ್ನು ಪರೀಕ್ಷಿಸಿದಾಗ ಬಹಿರಂಗಗೊಳ್ಳುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. 1947 ರಲ್ಲಿ ಸ್ವಾತಂತ್ರ್ಯದ ನಂತರ, ದೇಶದ ಸವಾಲುಗಳು ಮತ್ತು ಆದ್ಯತೆಗಳು ಬದಲಾದವು, ಆದರೆ ಅದರ ಚೈತನ್ಯ ಮತ್ತು ಶಕ್ತಿ ಒಂದೇ ಆಗಿರುತ್ತದೆ, ಅದು ನಿರಂತರವಾಗಿ ಸ್ಪೂರ್ತಿದಾಯಕವಾಗಿರುತ್ತದೆ ಎಂದು ಅವರು ಒತ್ತಿ ಹೇಳಿದರು. ಭಾರತವು ಬಿಕ್ಕಟ್ಟನ್ನು ಎದುರಿಸಿದಾಗಲೆಲ್ಲಾ, ದೇಶವು ವಂದೇ ಮಾತರಂನ ಉತ್ಸಾಹದೊಂದಿಗೆ ಮುನ್ನಡೆಯಿತು ಎಂದು ಪ್ರಧಾನಮಂತ್ರಿ ಹೇಳಿದರು. ಇಂದಿಗೂ, ಆಗಸ್ಟ್ 15 ಮತ್ತು ಜನವರಿ 26 ರಂತಹ ಸಂದರ್ಭಗಳಲ್ಲಿ, ತ್ರಿವರ್ಣ ಧ್ವಜವು ಪ್ರತಿ ಮನೆಯಲ್ಲೂ ಹೆಮ್ಮೆಯಿಂದ ಹಾರುತ್ತಿರುವಾಗ, ಈ ಚೈತನ್ಯವು ಎಲ್ಲೆಡೆ ಗೋಚರಿಸುತ್ತದೆ ಎಂದು ಅವರು ಹೇಳಿದರು. ಆಹಾರ ಬಿಕ್ಕಟ್ಟಿನ ಸಮಯದಲ್ಲಿ, ವಂದೇ ಮಾತರಂನ ಉತ್ಸಾಹವು ದೇಶದ ಧಾನ್ಯ ಸಂಗ್ರಹವನ್ನು ಹೆಚ್ಚಿಸಲು ರೈತರನ್ನು ಪ್ರೇರೇಪಿಸಿತು ಎಂದು ಅವರು ನೆನಪಿಸಿಕೊಂಡರು. ಭಾರತದ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಪ್ರಯತ್ನಗಳು ನಡೆದಾಗ, ಸಂವಿಧಾನದ ಮೇಲೆ ದಾಳಿಯಾದಾಗ ಮತ್ತು ತುರ್ತು ಪರಿಸ್ಥಿತಿ ಹೇರಿದಾಗ, ದೇಶವು ಎದ್ದು ನಿಲ್ಲಲು ಮತ್ತು ಜಯಗಳಿಸಲು ವಂದೇ ಮಾತರಂನ ಶಕ್ತಿಯೇ ಸಹಾಯ ಮಾಡಿತು ಎಂದು ಅವರು ಹೇಳಿದರು. ದೇಶದ ಮೇಲೆ ಯುದ್ಧಗಳನ್ನು ಹೇರಿದಾಗಲೆಲ್ಲಾ, ಸಂಘರ್ಷಗಳು ಉಂಟಾದಾಗಲೆಲ್ಲಾ, ವಂದೇ ಮಾತರಂನ ಸ್ಫೂರ್ತಿ ಸೈನಿಕರಿಗೆ ಗಡಿಗಳಲ್ಲಿ ಪ್ರೇರಣೆ ನೀಡಿತು, ಭಾರತ ಮಾತೆಯ ಧ್ವಜವು ವಿಜಯಪತಾಕೆಯಾಗಿ ಹಾರುವುದನ್ನು ಖಚಿತಪಡಿಸಿತು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಕೋವಿಡ್-19 ರ ಜಾಗತಿಕ ಬಿಕ್ಕಟ್ಟಿನ ಸಮಯದಲ್ಲೂ ದೇಶವು ಈ ಮನೋಭಾವದಿಂದ ದೃಢವಾಗಿ ನಿಂತಿತು, ಸವಾಲನ್ನು ಜಯಿಸಿತು ಮತ್ತು ಮುನ್ನಡೆಯಿತು ಎಂದು ಅವರು ಹೇಳಿದರು.

ಇದು ರಾಷ್ಟ್ರದ ಶಕ್ತಿ, ದೇಶವನ್ನು ಭಾವನಾತ್ಮಕವಾಗಿ ಸಂಪರ್ಕಿಸುವ ಶಕ್ತಿಶಾಲಿ ಹರಿವು, ಪ್ರಜ್ಞೆಯ ಪ್ರವಾಹ ಮತ್ತು ಪ್ರಗತಿಗೆ ಕಾರಣವಾಗುವ ಸಾಂಸ್ಕೃತಿಕ ಪ್ರವಾಹದ ಪ್ರತಿಬಿಂಬ ಎಂದು ಪ್ರಧಾನಮಂತ್ರಿ ಹೇಳಿದರು. "ವಂದೇ ಮಾತರಂ ಕೇವಲ ಸ್ಮರಣೆಯ ಅವಧಿಯಲ್ಲ, ಬದಲಾಗಿ ಹೊಸ ಶಕ್ತಿ ಮತ್ತು ಸ್ಫೂರ್ತಿಯನ್ನು ಸೆಳೆಯುವ ಮತ್ತು ಅದಕ್ಕೆ ನಮ್ಮನ್ನು ಅರ್ಪಿಸಿಕೊಳ್ಳುವ ಸಮಯ" ಎಂದು ಶ್ರೀ ಮೋದಿ ಹೇಳಿದರು, ನಮ್ಮನ್ನು ಇಲ್ಲಿಗೆ ಕರೆತಂದ ಮಾರ್ಗವನ್ನು ಸೃಷ್ಟಿಸಿದ ವಂದೇ ಮಾತರಂಗೆ ರಾಷ್ಟ್ರವು ಋಣಿಯಾಗಿದೆ ಮತ್ತು ಆದ್ದರಿಂದ ಅದನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಪುನರುಚ್ಚರಿಸಿದರು. ಭಾರತವು ಪ್ರತಿಯೊಂದು ಸವಾಲನ್ನು ಜಯಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ವಂದೇ ಮಾತರಂನ ಮನೋಭಾವವು ಆ ಶಕ್ತಿಯನ್ನು ಸಾಕಾರಗೊಳಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ವಂದೇ ಮಾತರಂ ಕೇವಲ ಹಾಡು ಅಥವಾ ಸ್ತೋತ್ರವಲ್ಲ, ಬದಲಾಗಿ ಅದು ರಾಷ್ಟ್ರದ ಕರ್ತವ್ಯಗಳ ಬಗ್ಗೆ ನಮ್ಮನ್ನು ಜಾಗೃತಗೊಳಿಸುವ ಸ್ಫೂರ್ತಿಯ ಮೂಲವಾಗಿದೆ ಮತ್ತು ಅದನ್ನು ನಿರಂತರವಾಗಿ ಎತ್ತಿಹಿಡಿಯಬೇಕು ಎಂದು ಹೇಳಿದರು. ಆತ್ಮನಿರ್ಭರ ಭಾರತದ ಕನಸನ್ನು ನಾವು ಕಾಣುತ್ತಿರುವಾಗ, ವಂದೇ ಮಾತರಂ ನಮ್ಮ ಸ್ಫೂರ್ತಿಯಾಗಿ ಉಳಿದಿದೆ ಎಂದು ಒತ್ತಿ ಹೇಳಿದರು. ಕಾಲ ಮತ್ತು ರೂಪಗಳು ಬದಲಾಗಬಹುದಾದರೂ, ಮಹಾತ್ಮಾ ಗಾಂಧಿಯವರು ವ್ಯಕ್ತಪಡಿಸಿದ ಭಾವನೆ ಇಂದಿಗೂ ಬಲವಾಗಿದೆ ಮತ್ತು ವಂದೇ ಮಾತರಂ ನಮ್ಮನ್ನು ಒಂದುಗೂಡಿಸುತ್ತದೆ ಎಂದು ಅವರು ಹೇಳಿದರು. ಮಹಾನ್ ನಾಯಕರು ಸ್ವತಂತ್ರ ಭಾರತದ ಕನಸು ಕಂಡಿದ್ದರು, ಇಂದಿನ ಪೀಳಿಗೆ ಸಮೃದ್ಧ ಭಾರತದ ಕನಸು ಕಾಣುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ವಂದೇ ಮಾತರಂ ಗೀತೆಯ ಚೈತನ್ಯ ಸ್ವಾತಂತ್ರ್ಯದ ಕನಸಿಗೆ ಶಕ್ತಿ ನೀಡಿದಂತೆಯೇ, ಅದು ಸಮೃದ್ಧಿಯ ಕನಸಿಗೂ ಶಕ್ತಿ ನೀಡುತ್ತದೆ ಎಂದು ಅವರು ಒತ್ತಿ ಹೇಳಿದರು. ಈ ಮನೋಭಾವದಿಂದ ಎಲ್ಲರೂ ಮುಂದುವರಿಯಬೇಕು, ಸ್ವಾವಲಂಬಿ ಭಾರತವನ್ನು ನಿರ್ಮಿಸಬೇಕು ಮತ್ತು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸಬೇಕು ಎಂದು ಅವರು ಕರೆ ನೀಡಿದರು. ಸ್ವಾತಂತ್ರ್ಯ ಬರುವ 50 ವರ್ಷಗಳ ಮೊದಲೇ ಯಾರಾದರೂ ಸ್ವತಂತ್ರ ಭಾರತದ ಕನಸು ಕಾಣಬಹುದಾಗಿದ್ದರೆ, ನಾವು ಕೂಡ 2047ಕ್ಕೆ 25 ವರ್ಷಗಳ ಮೊದಲು ಸಮೃದ್ಧ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಕನಸು ಕಾಣಬಹುದು ಮತ್ತು ಅದನ್ನು ಸಾಧಿಸಲು ನಮ್ಮನ್ನು ತೊಡಗಿಸಿಕೊಳ್ಳಬಹುದು ಎಂದು ಅವರು ಹೇಳಿದರು. ಈ ಮಂತ್ರ ಮತ್ತು ಸಂಕಲ್ಪದೊಂದಿಗೆ, ವಂದೇ ಮಾತರಂ ನಮಗೆ ಸದಾ ಸ್ಫೂರ್ತಿ ನೀಡುತ್ತದೆ, ನಮ್ಮ ಋಣವನ್ನು ನೆನಪಿಸುತ್ತದೆ, ಅದರ ಚೈತನ್ಯದಿಂದ ನಮಗೆ ಮಾರ್ಗದರ್ಶನ ನೀಡುತ್ತದೆ ಮತ್ತು ಈ ಕನಸನ್ನು ನನಸಾಗಿಸಲು ರಾಷ್ಟ್ರವನ್ನು ಒಗ್ಗೂಡಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಚರ್ಚೆಯು ರಾಷ್ಟ್ರವನ್ನು ಭಾವನೆಗಳಿಂದ ತುಂಬಲು, ದೇಶಕ್ಕೆ ಸ್ಫೂರ್ತಿ ನೀಡಲು ಮತ್ತು ಹೊಸ ಪೀಳಿಗೆಗೆ ಶಕ್ತಿ ತುಂಬಲು ಒಂದು ಕಾರಣವಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು ಮತ್ತು ಈ ಅವಕಾಶಕ್ಕಾಗಿ ಅವರು ತಮ್ಮ ತುಂಬು ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

 

 

 

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Indian Products Must Be Synonymous With Top Quality: PM Modi

Media Coverage

Indian Products Must Be Synonymous With Top Quality: PM Modi
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam highlighting the importance of Republic Day
January 26, 2026

The Prime Minister, Shri Narendra Modi said that Republic Day is a powerful symbol of India’s freedom, Constitution and democratic values. He noted that the occasion inspires the nation with renewed energy and motivation to move forward together with a firm resolve towards nation-building.

The Prime Minister shared a Sanskrit Subhashitam on the occasion-
“पारतन्त्र्याभिभूतस्य देशस्याभ्युदयः कुतः। अतः स्वातन्त्र्यमाप्तव्यमैक्यं स्वातन्त्र्यसाधनम्॥”

The Subhashitam conveys that a nation that is dependent or under subjugation cannot progress. Therefore, only by adopting freedom and unity as our guiding principles can the progress of the nation be ensured.

The Prime Minister wrote on X;

“गणतंत्र दिवस हमारी स्वतंत्रता, संविधान और लोकतांत्रिक मूल्यों का सशक्त प्रतीक है। यह पर्व हमें एकजुट होकर राष्ट्र निर्माण के संकल्प के साथ आगे बढ़ने की नई ऊर्जा और प्रेरणा देता है।

पारतन्त्र्याभिभूतस्य देशस्याभ्युदयः कुतः।

अतः स्वातन्त्र्यमाप्तव्यमैक्यं स्वातन्त्र्यसाधनम्॥”