ಇಂದು ನಾವು ನಮ್ಮ ರಾಷ್ಟ್ರದ ಹೆಮ್ಮೆಯಾಗಿರುವ ಮತ್ತು ಭಾರತದ ಅಪ್ರತಿಮ ಧೈರ್ಯ ಹಾಗೂ ಶೌರ್ಯದ ಉನ್ನತ ಆದರ್ಶಗಳನ್ನು ಪ್ರತಿಬಿಂಬಿಸುವ ಸಾಹಸಿ ಸಾಹಿಬ್‌ಜಾದೆಯರನ್ನು ಸ್ಮರಿಸುತ್ತೇವೆ: ಪ್ರಧಾನಮಂತ್ರಿ
ಮಾತಾ ಗುಜ್ರಿ ಜಿ, ಶ್ರೀ ಗುರು ಗೋಬಿಂದ್ ಸಿಂಗ್ ಜಿ ಮತ್ತು ನಾಲ್ವರು ಸಾಹಿಬ್‌ಜಾದೆಯರ ಧೈರ್ಯ ಮತ್ತು ಆದರ್ಶಗಳು ಪ್ರತಿಯೊಬ್ಬ ಭಾರತೀಯನಿಗೂ ಶಕ್ತಿಯನ್ನು ನೀಡುತ್ತಲೇ ಇವೆ: ಪ್ರಧಾನಮಂತ್ರಿ
ವಸಾಹತುಶಾಹಿ ಮನಸ್ಥಿತಿಯಿಂದ ಸಂಪೂರ್ಣವಾಗಿ ಮುಕ್ತಿ ಪಡೆಯಲು ಭಾರತ ಸಂಕಲ್ಪ ಮಾಡಿದೆ: ಪ್ರಧಾನಮಂತ್ರಿ
ಭಾರತವು ವಸಾಹತುಶಾಹಿ ಮನಸ್ಥಿತಿಯಿಂದ ಮುಕ್ತವಾಗುತ್ತಿದ್ದಂತೆ, ಅದರ ಭಾಷಾ ವೈವಿಧ್ಯತೆಯು ಶಕ್ತಿಯ ಮೂಲವಾಗಿ ಹೊರಹೊಮ್ಮುತ್ತಿದೆ: ಪ್ರಧಾನಮಂತ್ರಿ
ಜೆನ್ ಝಿ (Gen Z) ಮತ್ತು ಜೆನ್ ಆಲ್ಫಾ (Gen Alpha) ತಲೆಮಾರುಗಳು ಭಾರತವನ್ನು 'ವಿಕಸಿತ ಭಾರತ'ದ ಗುರಿಯತ್ತ ಮುನ್ನಡೆಸಲಿವೆ: ಪ್ರಧಾನಮಂತ್ರಿ

ನವದೆಹಲಿಯ ಭಾರತ ಮಂಟಪದಲ್ಲಿ ಇಂದು ನಡೆದ 'ವೀರ ಬಾಲ ದಿವಸ್' ರಾಷ್ಟ್ರೀಯ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು, ದೇಶದಾದ್ಯಂತ ಆಗಮಿಸಿದ್ದ ಅತಿಥಿಗಳನ್ನು ಸ್ವಾಗತಿಸಿದರು ಮತ್ತು ಅಲ್ಲಿ ನೆರೆದಿದ್ದ ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ, ಇಂದು ದೇಶವು 'ವೀರ ಬಾಲ ದಿವಸ್' ಆಚರಿಸುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಾದ 'ವಂದೇ ಮಾತರಂ'ನ ಸುಂದರ ಪ್ರದರ್ಶನವನ್ನು ಅವರು ಶ್ಲಾಘಿಸಿದರು ಹಾಗೂ ಪ್ರದರ್ಶನಕಾರರ ಸಮರ್ಪಣೆ ಮತ್ತು ಶ್ರಮವು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಹೇಳಿದರು.

ಭಾರತದ ಹೆಮ್ಮೆಯಾಗಿರುವ ಹಾಗೂ ಅದಮ್ಯ ಧೈರ್ಯ ಮತ್ತು ಶೌರ್ಯದ ಪರಾಕಾಷ್ಠೆಯನ್ನು ಪ್ರತಿನಿಧಿಸುವ ಸಾಹಸಿ ಸಾಹಿಬ್‌ಜಾದೆಯರನ್ನು ಈ ದಿನದಂದು ದೇಶವು ಸ್ಮರಿಸುತ್ತದೆ ಎಂದು ಒತ್ತಿಹೇಳಿದ ಶ್ರೀ ಮೋದಿಯವರು, ಈ ಸಾಹಿಬ್‌ಜಾದೆಯರು ತಮ್ಮ ಎಳೆಯ ಪ್ರಾಯದ ಮಿತಿಗಳನ್ನು ಮೀರಿ, ಕ್ರೂರ ಮೊಘಲ್ ಸಾಮ್ರಾಜ್ಯದ ವಿರುದ್ಧ ಬಂಡೆಯಂತೆ ಅಚಲವಾಗಿ ನಿಂತರು, ಆ ಮೂಲಕ ಧಾರ್ಮಿಕ ಮತಾಂಧತೆ ಮತ್ತು ಭಯೋತ್ಪಾದನೆಯ ಅಸ್ತಿತ್ವವನ್ನೇ ನಡುಗಿಸಿದರು ಎಂದು ತಿಳಿಸಿದರು.ಇಂತಹ ಅದ್ಭುತ ಇತಿಹಾಸವನ್ನು ಹೊಂದಿರುವ ಮತ್ತು ಅಷ್ಟೇ ಸ್ಪೂರ್ತಿದಾಯಕ ಪರಂಪರೆಯನ್ನು ಉತ್ತರದಾಯಿಯಾಗಿ ಪಡೆದಿರುವ ಯುವ ಪೀಳಿಗೆಯನ್ನು ಹೊಂದಿರುವ ರಾಷ್ಟ್ರವು ಏನನ್ನಾದರೂ ಸಾಧಿಸಲು ಸಮರ್ಥವಾಗಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು.

ಡಿಸೆಂಬರ್ 26 ಬಂತೆಂದರೆ, ಸಾಹಿಬ್‌ಜಾದೆಯರ ಶೌರ್ಯದಿಂದ ಪ್ರೇರಿತಗೊಂಡು ಸರ್ಕಾರವು 'ವೀರ ಬಾಲ ದಿವಸ್' ಆಚರಿಸಲು ಪ್ರಾರಂಭಿಸಿದೆ ಎಂಬ ಭಾವನೆ ನನ್ನದು ಎಂದು ಶ್ರೀ ಮೋದಿ ಅವರು ತಿಳಿಸಿದರು. ಕಳೆದ ನಾಲ್ಕು ವರ್ಷಗಳಲ್ಲಿ ಈ ಹೊಸ ಸಂಪ್ರದಾಯವು ಸಾಹಿಬ್‌ಜಾದೆಯರ ಸ್ಫೂರ್ತಿಯನ್ನು ಯುವ ಪೀಳಿಗೆಗೆ ತಲುಪಿಸಿದೆ ಮತ್ತು ಧೈರ್ಯವಂತ ಹಾಗೂ ಪ್ರತಿಭಾವಂತ ಯುವಕರನ್ನು ರೂಪಿಸಲು ಒಂದು ವೇದಿಕೆಯನ್ನು ನಿರ್ಮಿಸಿದೆ ಎಂದು ಅವರು ಒತ್ತಿ ಹೇಳಿದರು. ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ದೇಶಕ್ಕಾಗಿ ಗಮನಾರ್ಹ ಸಾಧನೆ ಮಾಡಿದ ಮಕ್ಕಳಿಗೆ 'ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ' ನೀಡಿ ಗೌರವಿಸಲಾಗುತ್ತದೆ ಮತ್ತು ಈ ವರ್ಷವೂ ದೇಶಾದ್ಯಂತ 20 ಮಕ್ಕಳು ಈ ಪ್ರಶಸ್ತಿಯನ್ನು ಪಡೆದಿದ್ದಾರೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಮುಂದುವರಿದು ಆ ಮಕ್ಕಳೊಂದಿಗಿನ ಸಂವಾದದ ಬಗ್ಗೆ ಮಾತನಾಡುತ್ತಾ, ಕೆಲವರು ಅಸಾಧಾರಣ ಶೌರ್ಯವನ್ನು ಪ್ರದರ್ಶಿಸಿದ್ದಾರೆ, ಕೆಲವರು ಸಮಾಜ ಸೇವೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ಶ್ಲಾಘನೀಯ ಕೊಡುಗೆ ನೀಡಿದ್ದಾರೆ, ಕೆಲವರು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರಗಳನ್ನು ಮಾಡಿದ್ದಾರೆ, ಇನ್ನು ಅನೇಕರು ಕ್ರೀಡೆ, ಕಲೆ ಮತ್ತು ಸಂಸ್ಕೃತಿಯಲ್ಲಿ ಕೊಡುಗೆ ನೀಡಿದ್ದಾರೆ ಎಂದು ಉಲ್ಲೇಖಿಸಿದರು. ಈ ಗೌರವವು ಕೇವಲ ನಿಮಗಷ್ಟೇ ಅಲ್ಲದೆ, ನಿಮ್ಮ ಪ್ರಯತ್ನಗಳನ್ನು ಗುರುತಿಸುವಲ್ಲಿ ಶ್ರಮಿಸಿದ ನಿಮ್ಮ ಪೋಷಕರು, ಶಿಕ್ಷಕರು ಮತ್ತು ಮಾರ್ಗದರ್ಶಕರಿಗೂ ಸಲ್ಲುತ್ತದೆ ಎಂದು ಶ್ರೀ ಮೋದಿ ಹೇಳಿದರು ಮತ್ತು ಪ್ರಶಸ್ತಿ ಪುರಸ್ಕೃತರಿಗೆ ಹಾಗೂ ಅವರ ಕುಟುಂಬಗಳಿಗೆ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದರು.

 

ವೀರ ಬಾಲ ದಿವಸ್ ಭಾವನೆ ಮತ್ತು ಗೌರವದಿಂದ ತುಂಬಿದ ದಿನ ಎಂದು ತಿಳಿಸಿದ ಶ್ರೀ ಮೋದಿಯವರು, ಅತ್ಯಂತ ಎಳೆಯ ವಯಸ್ಸಿನಲ್ಲಿಯೇ ಅಂದಿನ ಕಾಲದ ಅತ್ಯುನ್ನತ ಶಕ್ತಿಯನ್ನು ಎದುರಿಸಬೇಕಾಗಿ ಬಂದ ಸಾಹಿಬ್‌ಜಾದ ಅಜಿತ್ ಸಿಂಗ್ ಜಿ, ಸಾಹಿಬ್‌ಜಾದ ಜುಜಾರ್ ಸಿಂಗ್ ಜಿ, ಸಾಹಿಬ್‌ಜಾದ ಜೊರಾವರ್ ಸಿಂಗ್ ಜಿ ಮತ್ತು ಸಾಹಿಬ್‌ಜಾದ ಫತೇಹ್ ಸಿಂಗ್ ಜಿ ಅವರನ್ನು ಸ್ಮರಿಸಿದರು. ಅವರ ಹೋರಾಟವು ಭಾರತದ ಮೂಲಭೂತ ವಿಚಾರಗಳು ಮತ್ತು ಧಾರ್ಮಿಕ ಮತಾಂಧತೆಯ ನಡುವೆ, ಸತ್ಯ ಮತ್ತು ಅಸತ್ಯದ ನಡುವೆ ನಡೆದ ಹೋರಾಟವಾಗಿತ್ತು; ಒಂದು ಕಡೆ 10ನೇ ಗುರು ಶ್ರೀ ಗುರು ಗೋಬಿಂದ್ ಸಿಂಗ್ ಅವರ ನೇತೃತ್ವವಿದ್ದರೆ, ಇನ್ನೊಂದು ಕಡೆ ಔರಂಗಜೇಬನ ಕ್ರೂರ ಆಡಳಿತವಿತ್ತು ಎಂದು ಅವರು ಪ್ರತಿಪಾದಿಸಿದರು. ಸಾಹಿಬ್‌ಜಾದೆಯರು ತುಂಬಾ ಚಿಕ್ಕವರಾಗಿದ್ದರೂ, ಮತಾಂತರಕ್ಕೆ ಒತ್ತಾಯಿಸಲು ಭಾರತೀಯರ ಮನೋಸ್ಥೈರ್ಯವನ್ನು ಕುಗ್ಗಿಸಲು ಔರಂಗಜೇಬನು ಅವರನ್ನು ಗುರಿಯಾಗಿಸಿಕೊಂಡಿದ್ದನು ಎಂದು ಪ್ರಧಾನಮಂತ್ರಿ ಹೇಳಿದರು. ಗುರು ಗೋಬಿಂದ್ ಸಿಂಗ್ ಅವರು ಸಾಮಾನ್ಯ ವ್ಯಕ್ತಿಯಲ್ಲ, ಬದಲಿಗೆ ತಪಸ್ಸು ಮತ್ತು ತ್ಯಾಗದ ಪ್ರತಿರೂಪವಾಗಿದ್ದರು ಮತ್ತು ಸಾಹಿಬ್‌ಜಾದೆಯರು ಇದೇ ಪರಂಪರೆಯನ್ನು ಉತ್ತರದಾಯಿಯಾಗಿ ಪಡೆದಿದ್ದರು ಎಂಬುದನ್ನು ಔರಂಗಜೇಬ ಮತ್ತು ಅವನ ಕಮಾಂಡರ್‌ ಗಳು ಮರೆತಿದ್ದರು ಎಂದು ಅವರು ವಿವರಿಸಿದರು. ಇಡೀ ಮೊಘಲ್ ಸಾಮ್ರಾಜ್ಯದ ಶಕ್ತಿಯಿದ್ದರೂ, ನಾಲ್ವರು ಸಾಹಿಬ್‌ಜಾದೆಯರಲ್ಲಿ ಒಬ್ಬರೂ ಸಹ ಅಲುಗಾಡಲಿಲ್ಲ ಎಂದು ಅವರು ಹೇಳಿದರು. ಸಾಹಿಬ್‌ಜಾದ ಅಜಿತ್ ಸಿಂಗ್ ಅವರ ಧೈರ್ಯವನ್ನು ಇಂದಿಗೂ ಪ್ರತಿಧ್ವನಿಸುವ ಅವರ ಮಾತುಗಳನ್ನು ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ಕೆಲವೇ ದಿನಗಳ ಹಿಂದೆ ಕುರುಕ್ಷೇತ್ರದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ರಾಷ್ಟ್ರವು ಶ್ರೀ ಗುರು ತೇಜ್ ಬಹದ್ದೂರ್ ಅವರ 350ನೇ ಹುತಾತ್ಮ ದಿನವನ್ನು ಸ್ಮರಿಸಿದ್ದನ್ನು ನೆನಪಿಸಿಕೊಂಡ ಶ್ರೀ ಮೋದಿಯವರು, ಶ್ರೀ ಗುರು ತೇಜ್ ಬಹದ್ದೂರ್ ಅವರ ತ್ಯಾಗದಿಂದ ಸ್ಫೂರ್ತಿ ಪಡೆದ ಸಾಹಿಬ್‌ಜಾದೆಯರು ಮೊಘಲರ ದೌರ್ಜನ್ಯಕ್ಕೆ ಹೆದರುತ್ತಾರೆ ಎಂದು ಭಾವಿಸಿದ್ದು ತಪ್ಪು ಎಂದು ಅಭಿಪ್ರಾಯಪಟ್ಟರು. ಮಾತಾ ಗುಜ್ರಿ, ಶ್ರೀ ಗುರು ಗೋಬಿಂದ್ ಸಿಂಗ್ ಜಿ ಮತ್ತು ನಾಲ್ವರು ಸಾಹಿಬ್‌ಜಾದೆಯರ ಧೈರ್ಯ ಮತ್ತು ಆದರ್ಶಗಳು ಪ್ರತಿಯೊಬ್ಬ ಭಾರತೀಯನಿಗೂ ಶಕ್ತಿಯನ್ನು ನೀಡುತ್ತಲೇ ಇವೆ ಮತ್ತು ಸ್ಫೂರ್ತಿಯ ಚಿಲುಮೆಯಾಗಿವೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಸಾಹಿಬ್‌ಜಾದೆಯರ ಬಲಿದಾನದ ಗಾಥೆ ಪ್ರತಿಯೊಬ್ಬ ನಾಗರಿಕನ ಬಾಯಲ್ಲಿ ಇರಬೇಕಿತ್ತು, ಆದರೆ ದುರದೃಷ್ಟವಶಾತ್ ಸ್ವಾತಂತ್ರ್ಯದ ನಂತರವೂ ವಸಾಹತುಶಾಹಿ ಮನಸ್ಥಿತಿಯೇ ಮೇಲುಗೈ ಸಾಧಿಸಿತು ಎಂದು ಅವರು ವಿಷಾದಿಸಿದರು. ಈ ಮನಸ್ಥಿತಿಯನ್ನು 1835 ರಲ್ಲಿ ಬ್ರಿಟಿಷ್ ರಾಜಕಾರಣಿ ಮೆಕಾಲೆಯು ಬಿತ್ತಿದ್ದನು ಮತ್ತು ಸ್ವಾತಂತ್ರ್ಯದ ನಂತರವೂ ಅದನ್ನು ನಿರ್ಮೂಲನೆ ಮಾಡಲು ಬಿಡಲಿಲ್ಲ; ಇದು ದಶಕಗಳ ಕಾಲ ಇಂತಹ ಸತ್ಯಗಳನ್ನು ಹತ್ತಿಕ್ಕುವ ಪ್ರಯತ್ನಗಳಿಗೆ ಕಾರಣವಾಯಿತು ಎಂದು ಅವರು ಹೇಳಿದರು. ಭಾರತವು ಈಗ ವಸಾಹತುಶಾಹಿ ಮನಸ್ಥಿತಿಯಿಂದ ಮುಕ್ತವಾಗಲು ಸಂಕಲ್ಪ ಮಾಡಿದೆ ಎಂದು ಪ್ರತಿಪಾದಿಸಿದ ಶ್ರೀ ಮೋದಿಯವರು, ಭಾರತೀಯರ ತ್ಯಾಗ ಮತ್ತು ಶೌರ್ಯದ ನೆನಪುಗಳನ್ನು ಇನ್ನು ಮುಂದೆ ಹತ್ತಿಕ್ಕಲಾಗುವುದಿಲ್ಲ ಮತ್ತು ರಾಷ್ಟ್ರದ ನಾಯಕ-ನಾಯಕಿಯರನ್ನು ಇನ್ನು ಮುಂದೆ ಮೂಲೆಗುಂಪು ಮಾಡಲಾಗುವುದಿಲ್ಲ ಎಂದು ಘೋಷಿಸಿದರು. ಇದೇ ಕಾರಣಕ್ಕಾಗಿ 'ವೀರ ಬಾಲ ದಿವಸ್' ಅನ್ನು ಪೂರ್ಣ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು. ಸರ್ಕಾರವು ಇಲ್ಲಿಗೇ ನಿಂತಿಲ್ಲ ಎಂದು ಹೇಳಿದ ಅವರು, 2035 ಕ್ಕೆ ಮೆಕಾಲೆಯ ಪಿತೂರಿಗೆ 200 ವರ್ಷಗಳು ತುಂಬಲಿವೆ ಮತ್ತು ಇನ್ನು 10 ವರ್ಷಗಳು ಬಾಕಿ ಇರುವಂತೆಯೇ ಭಾರತವು ವಸಾಹತುಶಾಹಿ ಮನಸ್ಥಿತಿಯಿಂದ ಸಂಪೂರ್ಣ ವಿಮೋಚನೆಯನ್ನು ಪ್ರದರ್ಶಿಸಲಿದೆ ಎಂದು ತಿಳಿಸಿದರು. ಒಮ್ಮೆ ರಾಷ್ಟ್ರವು ಈ ಮನಸ್ಥಿತಿಯಿಂದ ಮುಕ್ತವಾದರೆ, ಅದು ದೇಶೀಯ ಸಂಪ್ರದಾಯಗಳ ಬಗ್ಗೆ ಹೆಚ್ಚಿನ ಹೆಮ್ಮೆ ಪಡುತ್ತದೆ ಮತ್ತು ಸ್ವಾವಲಂಬನೆಯ ಹಾದಿಯಲ್ಲಿ ಮತ್ತಷ್ಟು ಮುನ್ನಡೆಯುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

 

ರಾಷ್ಟ್ರವನ್ನು ವಸಾಹತುಶಾಹಿ ಮನಸ್ಥಿತಿಯಿಂದ ಮುಕ್ತಗೊಳಿಸುವ ಅಭಿಯಾನದ ಒಂದು ಝಲಕು ಇತ್ತೀಚೆಗೆ ಸಂಸತ್ತಿನಲ್ಲಿ ಕಂಡುಬಂದಿತು ಎಂದು ಪ್ರಧಾನಿ ಹೇಳಿದರು. ಚಳಿಗಾಲದ ಅಧಿವೇಶನದಲ್ಲಿ ಸಂಸತ್ ಸದಸ್ಯರು ಹಿಂದಿ ಮತ್ತು ಇಂಗ್ಲಿಷ್ ಹೊರತುಪಡಿಸಿ ಇತರ ಭಾರತೀಯ ಭಾಷೆಗಳಲ್ಲಿ ಸುಮಾರು 160 ಭಾಷಣಗಳನ್ನು ಮಾಡಿದರು ಎಂದು ಅವರು ತಿಳಿಸಿದರು. ಈ ಪೈಕಿ ಸುಮಾರು 50 ಭಾಷಣಗಳು ತಮಿಳಿನಲ್ಲಿ, 40ಕ್ಕೂ ಹೆಚ್ಚು ಮರಾಠಿಯಲ್ಲಿ ಮತ್ತು ಸುಮಾರು 25 ಭಾಷಣಗಳು ಬಂಗಾಳಿ ಭಾಷೆಯಲ್ಲಿದ್ದವು ಎಂದು ಅವರು ಹೇಳಿದರು. ಇಂತಹ ದೃಶ್ಯವು ವಿಶ್ವದ ಯಾವುದೇ ಸಂಸತ್ತಿನಲ್ಲಿ ಅಪರೂಪ ಮತ್ತು ಇದು ಎಲ್ಲರಿಗೂ ಹೆಮ್ಮೆಯ ವಿಷಯ ಎಂದು ಅವರು ತಿಳಿಸಿದರು. ಮೆಕಾಲೆಯು ಭಾರತದ ಭಾಷಾ ವೈವಿಧ್ಯತೆಯನ್ನು ಹತ್ತಿಕ್ಕಲು ಪ್ರಯತ್ನಿಸಿದ್ದನು, ಆದರೆ ಈಗ ದೇಶವು ವಸಾಹತುಶಾಹಿ ಮನಸ್ಥಿತಿಯಿಂದ ಮುಕ್ತವಾಗುತ್ತಿದ್ದಂತೆ, ಭಾಷಾ ವೈವಿಧ್ಯತೆಯೇ ಒಂದು ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದು ಅವರು ಒತ್ತಿ ಹೇಳಿದರು.

ಯುವ ಭಾರತ ಸಂಘಟನೆಯ ಯುವಕರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮೋದಿಯವರು, ನೀವು 'ಜೆನ್ ಝಿ' (Gen Z) ಮತ್ತು 'ಜೆನ್ ಆಲ್ಫಾ' (Gen Alpha) ತಲೆಮಾರುಗಳನ್ನು ಪ್ರತಿನಿಧಿಸುತ್ತೀರಿ ಮತ್ತು ನಿಮ್ಮ ಪೀಳಿಗೆಯೇ ಭಾರತವನ್ನು 'ವಿಕಸಿತ ಭಾರತ'ದ ಗುರಿಯತ್ತ ಮುನ್ನಡೆಸಲಿದೆ ಎಂದು ತಿಳಿಸಿದರು. ನಿಮ್ಮ ಸಾಮರ್ಥ್ಯ ಮತ್ತು ಆತ್ಮವಿಶ್ವಾಸವನ್ನು ನಾನು ಕಾಣುತ್ತಿದ್ದೇನೆ ಮತ್ತು ಅರ್ಥಮಾಡಿಕೊಳ್ಳುತ್ತಿದ್ದೇನೆ, ಆದ್ದರಿಂದಲೇ ನಿಮ್ಮ ಮೇಲೆ ನನಗೆ ಅಪಾರ ನಂಬಿಕೆಯಿದೆ ಎಂದು ಅವರು ಹೇಳಿದರು. "ಬಾಲಾದಪಿ ಸುಭಾಷಿತಂ ಗ್ರಾಹ್ಯಂ" ಎಂಬ ಉಕ್ತಿಯನ್ನು ಉಲ್ಲೇಖಿಸಿದ ಶ್ರೀ ಮೋದಿಯವರು, ಮಗುವು ಬುದ್ಧಿವಂತಿಕೆಯಿಂದ ಮಾತನಾಡಿದರೂ ಅದನ್ನು ಸ್ವೀಕರಿಸಬೇಕು, ಅಂದರೆ ಶ್ರೇಷ್ಠತೆಯು ವಯಸ್ಸಿನಿಂದಲ್ಲ, ಬದಲಿಗೆ ಕಾರ್ಯಗಳು ಮತ್ತು ಸಾಧನೆಗಳಿಂದ ನಿರ್ಧರಿತವಾಗುತ್ತದೆ ಎಂದು ವಿವರಿಸಿದರು. ಯುವಜನರು ಇತರರಿಗೆ ಸ್ಫೂರ್ತಿ ನೀಡುವಂತಹ ಕಾರ್ಯಗಳನ್ನು ಸಾಧಿಸಬಲ್ಲರು ಮತ್ತು ಈಗಾಗಲೇ ಅನೇಕರು ಇದನ್ನು ಸಾಬೀತುಪಡಿಸಿದ್ದಾರೆ ಎಂದು ಅವರು ಒತ್ತಿ ಹೇಳಿದರು. ಆದಾಗ್ಯೂ, ಈ ಸಾಧನೆಗಳನ್ನು ಕೇವಲ ಒಂದು ಆರಂಭ ಎಂದು ಪರಿಗಣಿಸಬೇಕು, ಏಕೆಂದರೆ ನಾವು ಇನ್ನೂ ಬಹಳ ದೂರ ಸಾಗಬೇಕಿದೆ ಮತ್ತು ಕನಸುಗಳನ್ನು ಗಗನಕ್ಕೆ ಕೊಂಡೊಯ್ಯಬೇಕಿದೆ ಎಂದು ಅವರು ಕರೆ ನೀಡಿದರು. ನಿಮ್ಮ ತಲೆಮಾರು ಅದೃಷ್ಟಶಾಲಿಯಾಗಿದೆ ಎಂದು ಹೇಳಿದ ಶ್ರೀ ಮೋದಿಯವರು, ಈ ಹಿಂದೆ ನಿರಾಶಾದಾಯಕ ವಾತಾವರಣದಿಂದಾಗಿ ಯುವಜನರು ಕನಸು ಕಾಣಲು ಕೂಡ ಹೆದರುತ್ತಿದ್ದರು, ಆದರೆ ಇಂದು ರಾಷ್ಟ್ರವು ನಿಮ್ಮ ಪ್ರತಿಭೆಯ ಜೊತೆಗೆ ದೃಢವಾಗಿ ನಿಂತಿದೆ ಎಂದು ಹೇಳಿದರು. ಇಂದು ದೇಶವು ಪ್ರತಿಭೆಯನ್ನು ಹುಡುಕಿ ಹೊರತೆಗೆಯುತ್ತಿದೆ, ವೇದಿಕೆಗಳನ್ನು ಒದಗಿಸುತ್ತಿದೆ ಮತ್ತು 140 ಕೋಟಿ ನಾಗರಿಕರ ಬಲವನ್ನು ನಿಮ್ಮ ಆಕಾಂಕ್ಷೆಗಳಿಗೆ ಪೂರಕವಾಗಿ ಜೋಡಿಸುತ್ತಿದೆ ಎಂದು ಅವರು ತಿಳಿಸಿದರು. 'ಡಿಜಿಟಲ್ ಇಂಡಿಯಾ' ಯಶಸ್ಸಿನೊಂದಿಗೆ ಯುವಕರಿಗೆ ಇಂಟರ್ನೆಟ್ ಶಕ್ತಿ ಮತ್ತು ಕಲಿಯಲು ಸಂಪನ್ಮೂಲಗಳು ಸಿಕ್ಕಿವೆ; ವಿಜ್ಞಾನ, ತಂತ್ರಜ್ಞಾನ ಮತ್ತು ಉದ್ಯಮಶೀಲತೆಯಲ್ಲಿ ತೊಡಗಿರುವವರಿಗಾಗಿ 'ಸ್ಟಾರ್ಟ್-ಅಪ್ ಇಂಡಿಯಾ' ಮತ್ತು ಕ್ರೀಡೆಯಲ್ಲಿ ಮುನ್ನಡೆಯುವವರಿಗಾಗಿ 'ಖೇಲೋ ಇಂಡಿಯಾ' ದಂತಹ ಮಿಷನ್‌ ಗಳಿವೆ ಎಂದು ಅವರು ಹೇಳಿದರು. ಕೇವಲ ಎರಡು ದಿನಗಳ ಹಿಂದೆ ತಾವೂ ಕೂಡ 'ಸಂಸದ್ ಖೇಲ್ ಮಹೋತ್ಸವ'ದಲ್ಲಿ ಪಾಲ್ಗೊಂಡಿದ್ದನ್ನು ನೆನಪಿಸಿದ ಅವರು, ಯುವಜನರ ಪ್ರಗತಿಗೆ ಬೆಂಬಲ ನೀಡಲು ಅನೇಕ ವೇದಿಕೆಗಳು ಲಭ್ಯವಿವೆ ಎಂದು ಒತ್ತಿ ಹೇಳಿದರು. ಅಲ್ಪಾವಧಿಯ ಜನಪ್ರಿಯತೆಯ ಹೊಳಪಿಗೆ ಮರುಳಾಗಬೇಡಿ ಎಂದು ಎಚ್ಚರಿಸಿದ ಪ್ರಧಾನಮಂತ್ರಿಯವರು, ಯುವಜನರು ತಮ್ಮ ಗುರಿಯತ್ತ ಗಮನ ಹರಿಸಬೇಕು ಮತ್ತು ಚಿಂತನೆ ಹಾಗೂ ತತ್ವಗಳಲ್ಲಿ ಸ್ಪಷ್ಟತೆ ಹೊಂದುವುದು ಅತ್ಯಗತ್ಯ ಎಂದು ತಿಳಿಸಿದರು. ರಾಷ್ಟ್ರದ ಆದರ್ಶಗಳು ಮತ್ತು ಮಹಾನ್ ವ್ಯಕ್ತಿಗಳಿಂದ ಕಲಿಯುವಂತೆ ಮತ್ತು ಯಶಸ್ಸು ಕೇವಲ ನಿಮಗೆ ಸೀಮಿತವಾಗದೆ ಅದು ದೇಶದ ಯಶಸ್ಸಾಗುವಂತೆ ನೋಡಿಕೊಳ್ಳುವಂತೆ ಅವರು ಕರೆ ನೀಡಿದರು.

 

ಯುವಜನತೆಯ ಸಬಲೀಕರಣದ ಮೇಲೆ ಕೇಂದ್ರೀಕರಿಸಿ ಹೊಸ ನೀತಿಗಳನ್ನು ರೂಪಿಸಲಾಗುತ್ತಿದೆ ಮತ್ತು ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ಯುವಜನರನ್ನು ಕೇಂದ್ರಬಿಂದುವಾಗಿಸಲಾಗಿದೆ ಎಂದು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. 'ಮೇರಾ ಯುವ ಭಾರತ್' ನಂತಹ ವೇದಿಕೆಗಳ ಮೂಲಕ ಯುವಕರನ್ನು ಪರಸ್ಪರ ಸಂಪರ್ಕಿಸಲು, ಅವರಿಗೆ ಅವಕಾಶಗಳನ್ನು ಒದಗಿಸಲು ಮತ್ತು ನಾಯಕತ್ವದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಬಾಹ್ಯಾಕಾಶ ಆರ್ಥಿಕತೆಯನ್ನು ಮುನ್ನಡೆಸುವುದಾಗಲಿ, ಕ್ರೀಡೆಯನ್ನು ಉತ್ತೇಜಿಸುವುದಾಗಲಿ, ಫಿನ್‌ಟೆಕ್ ಮತ್ತು ಉತ್ಪಾದನಾ ವಲಯಗಳನ್ನು ವಿಸ್ತರಿಸುವುದಾಗಲಿ ಅಥವಾ ಕೌಶಲ್ಯಾಭಿವೃದ್ಧಿ ಮತ್ತು ಇಂಟರ್ನ್‌ಶಿಪ್‌ಗಾಗಿ ಅವಕಾಶಗಳನ್ನು ಸೃಷ್ಟಿಸುವುದಾಗಲಿ - ಹೀಗೆ ಪ್ರತಿಯೊಂದು ಉಪಕ್ರಮದ ಕೇಂದ್ರದಲ್ಲಿಯೂ ಯುವಜನರೇ ಇದ್ದಾರೆ ಎಂದು ಶ್ರೀ ಮೋದಿಯವರು ಒತ್ತಿ ಹೇಳಿದರು. ಪ್ರತಿಯೊಂದು ವಲಯದಲ್ಲೂ ಯುವಜನರಿಗಾಗಿ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ ಎಂದು ಅವರು ಒತ್ತಿ ಹೇಳಿದರು.

ಇಂದು ಭಾರತವು ಅಭೂತಪೂರ್ವ ಸಂದರ್ಭಗಳನ್ನು ಎದುರಿಸುತ್ತಿದೆ ಮತ್ತು ವಿಶ್ವದ ಅತ್ಯಂತ ಕಿರಿಯ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಹೇಳಿದ ಶ್ರೀ ಮೋದಿಯವರು, ಮುಂಬರುವ 25 ವರ್ಷಗಳು ರಾಷ್ಟ್ರದ ದಿಕ್ಕನ್ನು ನಿರ್ಧರಿಸಲಿವೆ ಎಂದು ತಿಳಿಸಿದರು. ಸ್ವಾತಂತ್ರ್ಯದ ನಂತರ ಇದೇ ಮೊದಲ ಬಾರಿಗೆ ಭಾರತದ ಸಾಮರ್ಥ್ಯಗಳು, ಆಕಾಂಕ್ಷೆಗಳು ಮತ್ತು ವಿಶ್ವದ ನಿರೀಕ್ಷೆಗಳು ಒಂದೇ ಬಿಂದುವಿನಲ್ಲಿ ಸಂಗಮಿಸುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು. ಇಂದಿನ ಯುವಜನರು ಹಿಂದೆಂದಿಗಿಂತಲೂ ಹೆಚ್ಚಿನ ಅವಕಾಶಗಳ ಕಾಲದಲ್ಲಿ ಬೆಳೆಯುತ್ತಿದ್ದಾರೆ ಮತ್ತು ಅವರ ಪ್ರತಿಭೆ, ಆತ್ಮವಿಶ್ವಾಸ ಹಾಗೂ ನಾಯಕತ್ವವನ್ನು ಬಳಸಿಕೊಳ್ಳಲು ಉತ್ತಮ ಅವಕಾಶಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದರು.

 

ಯುವಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಶಿಕ್ಷಣ ನೀತಿಯಲ್ಲಿ ತಂದಿರುವ ಮಹತ್ವದ ಸುಧಾರಣೆಗಳ ಮೂಲಕ ವಿಕಸಿತ ಭಾರತಕ್ಕೆ ಬಲವಾದ ಅಡಿಪಾಯವನ್ನು ಹಾಕಲಾಗುತ್ತಿದೆ ಎಂದು ಒತ್ತಿ ಹೇಳಿದರು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು 21ನೇ ಶತಮಾನದ ಆಧುನಿಕ ಕಲಿಕಾ ವಿಧಾನಗಳ ಮೇಲೆ ಕೇಂದ್ರೀಕರಿಸಿದ್ದು, ಪ್ರಾಯೋಗಿಕ ಕಲಿಕೆಗೆ ಒತ್ತು ನೀಡುತ್ತಿದೆ; ಇದು ಮಕ್ಕಳಿಗೆ ವಿಷಯಗಳನ್ನು ಕಂಠಪಾಠ ಮಾಡುವ ಬದಲು ಆಳವಾಗಿ ಯೋಚಿಸಲು ಪ್ರೇರೇಪಿಸುತ್ತದೆ, ಪ್ರಶ್ನೆಗಳನ್ನು ಕೇಳುವ ಧೈರ್ಯವನ್ನು ತುಂಬುತ್ತದೆ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು ಬೆಳೆಸುತ್ತದೆ ಎಂದು ಅವರು ವಿವರಿಸಿದರು. ಮಲ್ಟಿಡಿಸಿಪ್ಲಿನರಿ (ಬಹುಶಿಸ್ತೀಯ) ಅಧ್ಯಯನಗಳು, ಕೌಶಲ್ಯಾಧಾರಿತ ಕಲಿಕೆ, ಕ್ರೀಡೆಗೆ ಉತ್ತೇಜನ ಮತ್ತು ತಂತ್ರಜ್ಞಾನದ ಬಳಕೆಯು ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತಿದ್ದು, ಈ ನಿಟ್ಟಿನಲ್ಲಿ ಮೊದಲ ಬಾರಿಗೆ ಅರ್ಥಪೂರ್ಣ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ದೇಶಾದ್ಯಂತ ಲಕ್ಷಾಂತರ ಮಕ್ಕಳು 'ಅಟಲ್ ಟಿಂಕರಿಂಗ್ ಲ್ಯಾಬ್‌'ಗಳ ಮೂಲಕ ನಾವೀನ್ಯತೆ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ; ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ರೋಬೋಟಿಕ್ಸ್, ಎಐ, ಸುಸ್ಥಿರತೆ ಮತ್ತು ಡಿಸೈನ್ ಥಿಂಕಿಂಗ್ ವಿಷಯಗಳನ್ನು ಪರಿಚಯಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಪ್ರಯತ್ನಗಳ ಜೊತೆಗೆ, ರಾಷ್ಟ್ರೀಯ ಶಿಕ್ಷಣ ನೀತಿಯು ಮಾತೃಭಾಷೆಯಲ್ಲಿ ಕಲಿಯುವ ಆಯ್ಕೆಯನ್ನು ನೀಡಿದೆ, ಇದು ಕಲಿಕೆಯನ್ನು ಸುಲಭಗೊಳಿಸಿದೆ ಮತ್ತು ಮಕ್ಕಳು ವಿಷಯಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತಿದೆ ಎಂದು ಅವರು ತಿಳಿಸಿದರು.

ಸಾಹಸಿ ಸಾಹಿಬ್‌ಜಾದೆಯರು ದಾರಿ ಎಷ್ಟು ಕಠಿಣವಾಗಿದೆ ಎಂದು ನೋಡಲಿಲ್ಲ, ಬದಲಿಗೆ ಆ ದಾರಿ ಸರಿಯಾಗಿದೆಯೇ ಅಥವಾ ಇಲ್ಲವೇ ಎಂದು ನೋಡಿದರು ಎಂದು ಹೇಳಿದ ಪ್ರಧಾನಿ, ಇಂದಿಗೂ ಅದೇ ಮನೋಭಾವದ ಅಗತ್ಯವಿದೆ ಎಂದರು. ಭಾರತದ ಯುವಜನತೆಯು ದೊಡ್ಡ ಕನಸುಗಳನ್ನು ಕಾಣಬೇಕು, ಕಠಿಣ ಪರಿಶ್ರಮ ಪಡಬೇಕು ಮತ್ತು ತಮ್ಮ ಆತ್ಮವಿಶ್ವಾಸ ಎಂದಿಗೂ ಕುಗ್ಗದಂತೆ ನೋಡಿಕೊಳ್ಳಬೇಕು ಎಂದು ಅವರು ಆಶಿಸಿದರು. ಭಾರತದ ಭವಿಷ್ಯವು ಅದರ ಮಕ್ಕಳು ಮತ್ತು ಯುವಜನರ ಭವಿಷ್ಯದ ಮೂಲಕ ಪ್ರಕಾಶಿಸಲಿದೆ; ಅವರ ಧೈರ್ಯ, ಪ್ರತಿಭೆ ಮತ್ತು ಸಮರ್ಪಣಾ ಮನೋಭಾವವು ದೇಶದ ಪ್ರಗತಿಗೆ ಮಾರ್ಗದರ್ಶನ ನೀಡಲಿದೆ ಎಂದು ಶ್ರೀ ಮೋದಿಯವರು ಹೇಳಿದರು. ಈ ನಂಬಿಕೆ, ಜವಾಬ್ದಾರಿ ಮತ್ತು ನಿರಂತರ ವೇಗದಿಂದ ಭಾರತವು ತನ್ನ ಭವಿಷ್ಯದತ್ತ ಮುನ್ನಡೆಯುತ್ತಲೇ ಇರುತ್ತದೆ ಎಂದು ಭರವಸೆ ನೀಡುವ ಮೂಲಕ ಪ್ರಧಾನಮಂತ್ರಿಯವರು ಭಾಷಣವನ್ನು ಮುಕ್ತಾಯಗೊಳಿಸಿದರು. ಅವರು ಮತ್ತೊಮ್ಮೆ ಸಾಹಿಬ್‌ಜಾದೆಯರಿಗೆ ಗೌರವ ಸಲ್ಲಿಸಿದರು ಮತ್ತು ಪ್ರಶಸ್ತಿ ವಿಜೇತ ಯುವಜನರಿಗೆ ಅಭಿನಂದನೆ ತಿಳಿಸಿದರು, ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.

 

ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ, ಶ್ರೀಮತಿ ಸಾವಿತ್ರಿ ಠಾಕೂರ್, ಶ್ರೀ ರವನೀತ್ ಸಿಂಗ್, ಶ್ರೀ ಹರ್ಷ ಮಲ್ಹೋತ್ರಾ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

ಹಿನ್ನೆಲೆ

'ವೀರ ಬಾಲ ದಿವಸ್' ಅಂಗವಾಗಿ ಭಾರತ ಸರ್ಕಾರವು ದೇಶಾದ್ಯಂತ ಜನಭಾಗವಹಿಸುವಿಕೆಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಸಾಹಿಬ್‌ಜಾದೆಯರ ಅಸಾಧಾರಣ ಧೈರ್ಯ ಮತ್ತು ಪರಮೋಚ್ಚ ಬಲಿದಾನದ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡುವುದು ಮತ್ತು ಶಿಕ್ಷಣ ನೀಡುವುದು ಹಾಗೂ ಭಾರತದ ಇತಿಹಾಸದ ಈ ಯುವ ವೀರರ ಅದಮ್ಯ ಸಾಹಸ, ತ್ಯಾಗ ಮತ್ತು ಶೌರ್ಯವನ್ನು ಗೌರವಿಸಿ ಸ್ಮರಿಸುವುದು ಈ ಕಾರ್ಯಕ್ರಮಗಳ ಉದ್ದೇಶವಾಗಿದೆ. ಈ ಚಟುವಟಿಕೆಗಳಲ್ಲಿ ಕಥಾ ಗೋಷ್ಠಿಗಳು, ವಾಚನಗೋಷ್ಠಿಗಳು, ಪೋಸ್ಟರ್ ತಯಾರಿಕೆ ಮತ್ತು ಪ್ರಬಂಧ ಬರವಣಿಗೆ ಸ್ಪರ್ಧೆಗಳು ಸೇರಿದಂತೆ ವಿವಿಧ ಸ್ಪರ್ಧೆಗಳು ಒಳಗೊಂಡಿವೆ. ಇವುಗಳನ್ನು ಶಾಲೆಗಳು, ಮಕ್ಕಳ ಆರೈಕೆ ಸಂಸ್ಥೆಗಳು, ಅಂಗನವಾಡಿ ಕೇಂದ್ರಗಳು ಮತ್ತು ಇತರ ಶೈಕ್ಷಣಿಕ ವೇದಿಕೆಗಳಲ್ಲಿ ಹಾಗೂ MyGov ಮತ್ತು MyBharat ಪೋರ್ಟಲ್‌ಗಳ ಮೂಲಕ ಆನ್‌ಲೈನ್ ಚಟುವಟಿಕೆಗಳ ಮೂಲಕ ನಡೆಸಲಾಗುವುದು.

ಜನವರಿ 9, 2022 ರಂದು ಶ್ರೀ ಗುರು ಗೋಬಿಂದ್ ಸಿಂಗ್ ಅವರ ಪ್ರಕಾಶ್ ಪೂರಬ್ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ಡಿಸೆಂಬರ್ 26 ಅನ್ನು 'ವೀರ ಬಾಲ ದಿವಸ್' ಎಂದು ಆಚರಿಸಲಾಗುವುದು ಎಂದು ಘೋಷಿಸಿದ್ದರು. ಶ್ರೀ ಗುರು ಗೋಬಿಂದ್ ಸಿಂಗ್ ಅವರ ಪುತ್ರರಾದ ಸಾಹಿಬ್‌ಜಾದಾ ಬಾಬಾ ಜೊರಾವರ್ ಸಿಂಗ್ ಜಿ ಮತ್ತು ಬಾಬಾ ಫತೇಹ್ ಸಿಂಗ್ ಜಿ ಅವರ ಹುತಾತ್ಮತೆಯನ್ನು ಸ್ಮರಿಸಲು ಈ ದಿನವನ್ನು ನಿಗದಿಪಡಿಸಲಾಗಿದೆ; ಅವರ ಸರಿಸಾಟಿಯಿಲ್ಲದ ತ್ಯಾಗವು ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತಲೇ ಇದೆ.

ಕಾರ್ಯಕ್ರಮದಲ್ಲಿ 'ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ' (ಪಿ ಎಂ ಆರ್‌ ಬಿ ಪಿ) ವಿಜೇತರು ಕೂಡ ಉಪಸ್ಥಿತರಿದ್ದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Tricolour to be hoisted for first time since 1947 in 92 Bastar villages on Independence Day

Media Coverage

Tricolour to be hoisted for first time since 1947 in 92 Bastar villages on Independence Day
NM on the go

Nm on the go

Always be the first to hear from the PM. Get the App Now!
...
Prime Minister highlights India’s strong conservation efforts on World Elephant Day
August 12, 2026

Prime Minister Shri Narendra Modi today stated that on World Elephant Day, we celebrate the majestic elephant, which has remained an integral part of India’s ecological heritage. He expressed gladness that India is home to over 60% of the world’s wild Asian elephants.

The Prime Minister noted that our nation has 33 Elephant Reserves, which provide habitats for elephants and strengthen our efforts towards their long-term conservation. Shri Modi also expressed pride in all forest personnel, scientists, veterinarians, mahouts, and the local communities who are integral to all such efforts.

In a post on X, the Prime Minister shared:

"On World Elephant Day, we celebrate the majestic elephant which has remained an integral part of India’s ecological heritage. It is gladdening that India is home to over 60% of the world’s wild Asian elephants. Our nation has 33 Elephant Reserves, which provide habitats for elephants and strengthen our efforts towards their long-term conservation. We are also proud of all forest personnel, scientists, veterinarians, mahouts and the local communities who are integral to all such efforts."