ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೋಹಾನ್ಸ್‌ಬರ್ಗ್ ನಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ಗಣರಾಜ್ಯದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಸಿರಿಲ್ ರಾಮಫೋಸಾ ಅವರನ್ನು ಇಂದು ಭೇಟಿ ಮಾಡಿದರು. ಶೃಂಗಸಭೆಯ ಆತ್ಮೀಯ ಆತಿಥ್ಯ ಮತ್ತು ಯಶಸ್ವಿ ನಡವಳಿಕೆಗಳಿಗಾಗಿ ಅಧ್ಯಕ್ಷ ಶ್ರೀ ರಾಮಫೋಸಾ ಅವರಿಗೆ ಪ್ರಧಾನಮಂತ್ರಿ ಅವರು ಧನ್ಯವಾದ ಅರ್ಪಿಸಿದರು. ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಮತ್ತು ನೂತನ ಹಂತ ನಿರ್ಮಿಸಲು ದಕ್ಷಿಣ ಆಫ್ರಿಕಾದ ಜಿ20 ಮಾಡಿರುವ ಪ್ರಯತ್ನಗಳನ್ನು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು.

ಭಾರತ - ದಕ್ಷಿಣ ಆಫ್ರಿಕಾ ಸಂಬಂಧಗಳಿಗೆ ಆಧಾರವಾಗಿರುವ ಐತಿಹಾಸಿಕ ಸಂಬಂಧಗಳನ್ನು ನೆನಪಿಸಿಕೊಳ್ಳುತ್ತಾ, ಇಬ್ಬರೂ ನಾಯಕರು ಎರೆಡೂ ದೇಶಗಳ ದ್ವಿಪಕ್ಷೀಯ ಸಂಬಂಧಗಳನ್ನು ಪರಿಶೀಲಿಸಿದರು ಮತ್ತು ವ್ಯಾಪಾರ ಮತ್ತು ಹೂಡಿಕೆ, ಆಹಾರ ಭದ್ರತೆ, ಕೌಶಲ್ಯ ಅಭಿವೃದ್ಧಿ, ಗಣಿಗಾರಿಕೆ, ಯುವ ವಿನಿಮಯ ಮತ್ತು ಜನರಿಂದ ಜನರ ನಡುವಿನ ಸಂಬಂಧಗಳು ಸೇರಿದಂತೆ ಸಹಕಾರದ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಲಾದ ಪ್ರಗತಿಯ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಕೃತಕ ಬುದ್ಧಿಮತ್ತೆ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ನಿರ್ಣಾಯಕ ಖನಿಜ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಮಾರ್ಗಗಳನ್ನು ಉಭಯ ನಾಯಕರು ಚರ್ಚಿಸಿದರು. ದಕ್ಷಿಣ ಆಫ್ರಿಕಾದಲ್ಲಿ ಭಾರತೀಯ ಸಂಸ್ಥೆಗಳ ಹೆಚ್ಚುತ್ತಿರುವ ಉಪಸ್ಥಿತಿಯನ್ನು ನಾಯಕರು ಸ್ವಾಗತಿಸಿದರು ಮತ್ತು ಪರಸ್ಪರ ಹೂಡಿಕೆಗಳನ್ನು, ವಿಶೇಷವಾಗಿ ಮೂಲಸೌಕರ್ಯ, ತಂತ್ರಜ್ಞಾನ, ನಾವೀನ್ಯತೆ, ಗಣಿಗಾರಿಕೆ ಮತ್ತು ಸ್ಟಾರ್ಟ್-ಅಪ್ ವಲಯಗಳಲ್ಲಿ ಸುಗಮಗೊಳಿಸಲು ಒಪ್ಪಿಕೊಂಡರು. ದಕ್ಷಿಣ ಆಫ್ರಿಕಾದ ಚಿರತೆಗಳನ್ನು ಭಾರತಕ್ಕೆ ಸ್ಥಳಾಂತರಿಸಿದ್ದಕ್ಕಾಗಿ ಪ್ರಧಾನಮಂತ್ರಿ ಅವರು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಶ್ರೀ ರಾಮಫೋಸಾ ಅವರಿಗೆ ಧನ್ಯವಾದ ಅರ್ಪಿಸಿದರು ಮತ್ತು ಭಾರತದ ನೇತೃತ್ವದ ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲೈಯನ್ಸ್ ಗೆ ಸೇರಲು ಅವರನ್ನು ಪ್ರಧಾನಮಂತ್ರಿ ಅವರು ಆಹ್ವಾನಿಸಿದರು.

ಜಾಗತಿಕ ದಕ್ಷಿಣದ ಧ್ವನಿಯನ್ನು ವರ್ಧಿಸಲು ಜಂಟಿಯಾಗಿ ಕೆಲಸ ಮಾಡಲು ನಾಯಕರು ಒಪ್ಪಿಕೊಂಡರು. ಈ ಸಂದರ್ಭದಲ್ಲಿ, ಐ.ಬಿ.ಎಸ್.ಎ ನಾಯಕರ ಸಭೆಯನ್ನು ನಡೆಸಲು ದಕ್ಷಿಣ ಆಫ್ರಿಕಾ ತೆಗೆದುಕೊಂಡ ಉಪಕ್ರಮವನ್ನು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು. 2026ರಲ್ಲಿ ಭಾರತದ ಮುಂಬರುವ ಬ್ರಿಕ್ಸ್ ಅಧ್ಯಕ್ಷತೆಗೆ ದಕ್ಷಿಣ ಆಫ್ರಿಕಾದ ಸಂಪೂರ್ಣ ಬೆಂಬಲವನ್ನು ಅಧ್ಯಕ್ಷ ಶ್ರೀ ರಾಮಫೋಸಾ ಭರವಸೆ ನೀಡಿದರು.

Had an excellent meeting with President Cyril Ramaphosa during the G20 Summit in Johannesburg. We reviewed the full range of the India-South Africa partnership, especially in boosting linkages of commerce, culture, investment and diversifying cooperation in technology, skilling,… pic.twitter.com/WuLLsh3yVf
— Narendra Modi (@narendramodi) November 23, 2025


