ಸುಮಾರು 1,560 ಕೋಟಿ ರೂಪಾಯಿ ಮೌಲ್ಯದ 218 ಮೀನುಗಾರಿಕಾ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ
ಸುಮಾರು 360 ಕೋಟಿ ರೂ. ವೆಚ್ಚದಲ್ಲಿ ಹಡಗು ಸಂವಹನ ಮತ್ತು ಬೆಂಬಲ ವ್ಯವಸ್ಥೆ ರಾಷ್ಟ್ರಕ್ಕೆ ಸಮರ್ಪಣೆ
ಮೀನುಗಾರ ಫಲಾನುಭವಿಗಳಿಗೆ ಟ್ರಾನ್ಸ್ ಪಾಂಡರ್ ಸೆಟ್ ಗಳು ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ ಗಳ ಹಸ್ತಾಂತರ
“ಮಹಾರಾಷ್ಟ್ರಕ್ಕೆ ಬಂದ ನಂತರ ನಾನು ಮಾಡಿದ ಮೊದಲ ಕೆಲಸವೆಂದರೆ ನನ್ನ ಪೂಜ್ಯ ದೇವರು ಛತ್ರಪತಿ ಶಿವಾಜಿ ಮಹಾರಾಜ್ ಅವರ ಪಾದಗಳಿಗೆ ನಮಸ್ಕರಿಸಿ ಸಿಂಧುದುರ್ಗದಲ್ಲಿ ನಡೆದ ಘಟನೆಯ ಬಗ್ಗೆ ಕ್ಷಮೆ ಯಾಚಿಸಿದೆ”
“ಛತ್ರಪತಿ ಶಿವಾಜಿ ಮಹಾರಾಜ್ ಅವರ ಸ್ಫೂರ್ತಿಯಿಂದ ನಾವು ವಿಕಸಿತ ಮಹಾರಾಷ್ಟ್ರ - ವಿಕಸಿತ ಭಾರತ ನಿರ್ಣಯದ ಮೇಲೆ ವೇಗವಾಗಿ ಮುಂದೆ ಸಾಗುತ್ತಿದ್ದೇವೆ”
“ವಿಕಸಿತ ಮಹಾರಾಷ್ಟ್ರವು ವಿಕಸಿತ ಭಾರತದ ನಿರ್ಣಯದ ಪ್ರಮುಖ ಭಾಗವಾಗಿದೆ”
“ಮಹಾರಾಷ್ಟ್ರವು ಅಭಿವೃದ್ಧಿಗೆ ಅಗತ್ಯವಾದ ಸಾಮರ್ಥ್ಯ ಮತ್ತು ಸಂಪನ್ಮೂಲಗಳನ್ನು ಹೊಂದಿದೆ”
“ಇಡೀ ಜಗತ್ತು ಇಂದು ವಾಧ್ವಾನ್ ಬಂದರಿನತ್ತ ನೋಡುತ್ತಿದೆ”
“ದಿಘಿ ಬಂದರು ಮಹಾರಾಷ್ಟ್ರದ ಗುರುತಾಗಲಿದೆ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಕನಸುಗಳ ಸಂಕೇತವಾಗಲಿದೆ”
“ಇದು ನವ ಭಾರತ. ಇದು ಇತಿಹಾಸದಿಂದ ಕಲಿಯುತ್ತದೆ ಮತ್ತು ಅದರ ಸಾಮರ್ಥ್ಯ ಹಾಗೂ ಹೆಮ್ಮೆಯನ್ನು ಗುರುತಿಸುತ್ತದೆ”
“ಮಹಾರಾಷ್ಟ್ರದಲ್ಲಿ ಮಹಿಳೆಯರ ಯಶಸ್ಸು 21 ನೇ ಶತಮಾನದ ಮಹಿಳಾ ಶಕ್ತಿ ಸಮಾಜಕ್ಕೆ ಹೊಸ ದಿಕ್ಕನ್ನು ನೀಡಲು ಸಿದ್ಧವಾಗಿದೆ ಎಂಬುದಕ್ಕೆ ಪುರಾವೆಯಾಗಿದೆ”

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಇಂದಿನ ಯೋಜನೆಗಳಲ್ಲಿ ಸುಮಾರು 76,000 ಕೋಟಿ ರೂ.ಗಳ ವೆಚ್ಚದಲ್ಲಿ ವಾಧ್ವಾನ್ ಬಂದರಿಗೆ ಶಂಕುಸ್ಥಾಪನೆ ಮತ್ತು ಸುಮಾರು 1,560 ಕೋಟಿ ರೂ.ಗಳ 218 ಮೀನುಗಾರಿಕೆ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸೇರಿವೆ. ಶ್ರೀ ಮೋದಿ ಅವರು ಸುಮಾರು 360 ಕೋಟಿ ರೂ.ಗಳ ವೆಚ್ಚದಲ್ಲಿ ಹಡಗು ಸಂವಹನ ಮತ್ತು ಬೆಂಬಲ ವ್ಯವಸ್ಥೆಯ ರಾಷ್ಟ್ರೀಯ ಮಟ್ಟದ ಕಾರ್ಯಾಚರಣೆಗೆ (ರೋಲ್ ಔಟ್ ಗೆ) ಚಾಲನೆ ನೀಡಿದರು. ಮೀನುಗಾರಿಕಾ ಬಂದರುಗಳ ಅಭಿವೃದ್ಧಿ, ಉನ್ನತೀಕರಣ ಮತ್ತು ಆಧುನೀಕರಣ, ಮೀನು ಇಳಿಯುವ ಕೇಂದ್ರಗಳು ಮತ್ತು ಮೀನು ಮಾರುಕಟ್ಟೆಗಳ ನಿರ್ಮಾಣ ಸೇರಿದಂತೆ ಪ್ರಮುಖ ಮೀನುಗಾರಿಕೆ ಮೂಲಸೌಕರ್ಯ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ಮೀನುಗಾರರ ಫಲಾನುಭವಿಗಳಿಗೆ ಟ್ರಾನ್ಸ್ ಪಾಂಡರ್ ಸೆಟ್ ಗಳು ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ ಗಳನ್ನು ವಿತರಿಸಿದರು.

ಸಂತ ಸೇನಾಜಿ ಮಹಾರಾಜ್ ಅವರ ಪುಣ್ಯ ತಿಥಿಯಂದು ಅವರಿಗೆ ಗೌರವ ಸಲ್ಲಿಸುವ ಮೂಲಕ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಆರಂಭಿಸಿದರು. ಶ್ರೀ ಮೋದಿ ಅವರು ಹೃದಯಪೂರ್ವಕವಾಗಿ ಮಾತುಗಳನ್ನು ಆರಂಭಿಸಿದರು ಮತ್ತು 2013 ರಲ್ಲಿ ತಾವು ಪ್ರಧಾನಿ ಹುದ್ದೆಗೆ ನಾಮನಿರ್ದೇಶನಗೊಂಡ ಸಮಯವನ್ನು ನೆನಪಿಸಿಕೊಂಡರು ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಅವರ ಸಮಾಧಿಯ ಎದುರು ಪ್ರಾರ್ಥಿಸಲು  ರಾಯಗಢ ಕೋಟೆಗೆ ಮೊದಲಿಗೆ ಭೇಟಿ ನೀಡಿದ್ದನ್ನೂ ಉಲ್ಲೇಖಿಸಿದರು. ತಾವು ಗುರುವನ್ನು ಭಕ್ತಿಭಾವದಿಂದ ಪೂಜಿಸಿದ ರೀತಿಯಲ್ಲೇ  ತಮಗೆ  ಆಶೀರ್ವಾದ ಲಭಿಸಿದೆ ಮತ್ತು ರಾಷ್ಟ್ರದ ಸೇವೆಗಾಗಿ ಹೊಸ ಪ್ರಯಾಣವನ್ನು ಕೈಗೊಳ್ಳಲು ಅದರಿಂದ ಸಾಧ್ಯವಾಯಿತು ಎಂದು ಅವರು ಹೇಳಿದರು. ಸಿಂಧುದುರ್ಗದಲ್ಲಿ ನಡೆದ ದುರದೃಷ್ಟಕರ ಘಟನೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಶಿವಾಜಿ ಮಹಾರಾಜರು ಕೇವಲ ಹೆಸರು, ಪೂಜ್ಯ ರಾಜ ಅಥವಾ ಮಹಾನ್ ವ್ಯಕ್ತಿತ್ವ ಮಾತ್ರವಲ್ಲ , ಅವರು ದೇವರು ಎಂದು ಒತ್ತಿ ಹೇಳಿದರು. ಶ್ರೀ ಶಿವಾಜಿ ಮಹಾರಾಜರ ಪಾದಗಳಿಗೆ ನಮಸ್ಕರಿಸುವ ಮೂಲಕ ವಿನಮ್ರವಾಗಿ ಕ್ಷಮೆಯಾಚಿಸಿದ ಅವರು ಈ ನೆಲದ ಮಹಾನ್ ಪುತ್ರ ವೀರ್ ಸಾವರ್ಕರ್ ಅವರನ್ನು ಅಗೌರವಿಸುವ  ಮತ್ತು ರಾಷ್ಟ್ರೀಯತೆಯ ಭಾವನೆಯನ್ನು ತುಳಿಯಲು ಬಯಸುವವರಿಗಿಂತ ಬೇರೆಯಾಗಿ ತಮ್ಮ  ಬೆಳವಣಿಗೆ  ಮತ್ತು ಸಂಸ್ಕೃತಿ ಇದೆ ಎಂದು ಹೇಳಿದರು. "ಮಹಾರಾಷ್ಟ್ರದ ಜನರು ವೀರ್ ಸಾವರ್ಕರ್ ಅವರನ್ನು ಅಗೌರವಿಸುವವರ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಅದಕ್ಕಾಗಿ ಯಾವುದೇ ಪಶ್ಚಾತ್ತಾಪ ಪಡಬಾರದು" ಎಂದು ಪ್ರಧಾನಿ ಹೇಳಿದರು. ಮಹಾರಾಷ್ಟ್ರಕ್ಕೆ ಭೇಟಿ ನೀಡಿದ ನಂತರ ತಾವು ಮಾಡಿದ ಮೊದಲ ಕೆಲಸವೆಂದರೆ ತಮ್ಮ ದೇವರಾದ ಛತ್ರಪತಿ ಶಿವಾಜಿ ಮಹಾರಾಜ್ ಅವರಲ್ಲಿ ಕ್ಷಮೆಯಾಚಿಸಿದ್ದು ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಶಿವಾಜಿ ಮಹಾರಾಜರನ್ನು ಆರಾಧಿಸುವ ಎಲ್ಲರ ಕ್ಷಮೆಯನ್ನೂ ಅವರು ಕೋರಿದರು.

 

ಈ ದಿನವನ್ನು ರಾಜ್ಯ ಮತ್ತು ದೇಶದ ಅಭಿವೃದ್ಧಿಯ ಪಯಣದಲ್ಲಿ ಐತಿಹಾಸಿಕ ಎಂದು ಶ್ಲಾಘಿಸಿದ ಪ್ರಧಾನಿ, ಕಳೆದ 10 ವರ್ಷಗಳಲ್ಲಿ ಮಹಾರಾಷ್ಟ್ರದ ಬೆಳವಣಿಗೆಗೆ ತಮ್ಮ ಸರ್ಕಾರ ಪ್ರಮುಖ ಕ್ರಮಗಳನ್ನು ಕೈಗೊಂಡಿದೆ, ಏಕೆಂದರೆ "ವಿಕ್ಷಿತ್ ಮಹಾರಾಷ್ಟ್ರವು ವಿಕ್ಷಿತ್ ಭಾರತ್ ನಿರ್ಣಯದ ಅತ್ಯಂತ ನಿರ್ಣಾಯಕ ಅಂಶವಾಗಿದೆ" ಎಂದು ಹೇಳಿದರು. ರಾಜ್ಯದ ಐತಿಹಾಸಿಕ ಕಡಲ ವ್ಯಾಪಾರವನ್ನು ಉಲ್ಲೇಖಿಸಿದ ಶ್ರೀ ಮೋದಿ, ಕರಾವಳಿ ಸಾಮೀಪ್ಯದಿಂದಾಗಿ ರಾಜ್ಯವು ಬೆಳೆಯಲು ಸಾಮರ್ಥ್ಯ ಮತ್ತು ಸಂಪನ್ಮೂಲಗಳನ್ನು ಹೊಂದಿದೆ, ಭವಿಷ್ಯಕ್ಕಾಗಿ ಅಪಾರ ಸಾಧ್ಯತೆಗಳನ್ನೂ ಅದು ಹೊಂದಿದೆ ಎಂದು ಹೇಳಿದರು. "ವಾಧ್ವಾನ್ ಬಂದರು ದೇಶದ ಅತಿದೊಡ್ಡ ಕಂಟೇನರ್ ಬಂದರಾಗಲಿದೆ ಮತ್ತು ವಿಶ್ವದ ಆಳವಾದ ನೀರಿನ ಬಂದರುಗಳಲ್ಲಿ ಒಂದಾಗಲಿದೆ. ಇದು ಮಹಾರಾಷ್ಟ್ರ ಮತ್ತು ಭಾರತದ ವ್ಯಾಪಾರ ಮತ್ತು ಕೈಗಾರಿಕಾ ಅಭಿವೃದ್ಧಿಯ ಕೇಂದ್ರಬಿಂದುವಾಗಲಿದೆ" ಎಂದು ಅವರು ಹೇಳಿದರು. ವಾಧ್ವಾನ್ ಬಂದರು ಯೋಜನೆಗಾಗಿ ಪಾಲ್ಘರ್, ಮಹಾರಾಷ್ಟ್ರ ಮತ್ತು ಇಡೀ ರಾಷ್ಟ್ರದ ಜನರನ್ನು ಪ್ರಧಾನಿ ಅಭಿನಂದಿಸಿದರು.

ದಿಘಿ ಬಂದರು ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸುವ ಸರ್ಕಾರದ ಇತ್ತೀಚಿನ ನಿರ್ಧಾರವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಇದು ಮಹಾರಾಷ್ಟ್ರದ ಜನರಿಗೆ ಇಮ್ಮಡಿ (ಡಬಲ್)  ಸಂತೋಷದ ಸಂದರ್ಭವಾಗಿದೆ ಎಂದರು. ಛತ್ರಪತಿ ಶಿವಾಜಿ ಮಹಾರಾಜರ ಸಾಮ್ರಾಜ್ಯದ ರಾಜಧಾನಿಯಾದ ರಾಯಗಢದಲ್ಲಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. ಆದ್ದರಿಂದ, ದಿಘಿ ಬಂದರು ಮಹಾರಾಷ್ಟ್ರದ ಗುರುತಾಗಲಿದೆ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಕನಸುಗಳ ಸಂಕೇತವಾಗಲಿದೆ ಎಂದು ಪ್ರಧಾನಿ ಹೇಳಿದರು. ಇದು ಪ್ರವಾಸೋದ್ಯಮ ಮತ್ತು ಪರಿಸರ ರೆಸಾರ್ಟ್ ಗಳನ್ನು ಉತ್ತೇಜಿಸುತ್ತದೆ ಎಂದು ಅವರು ಹೇಳಿದರು.

ಇಡೀ ಮೀನುಗಾರರ ಸಮುದಾಯವನ್ನು ಅಭಿನಂದಿಸಿದ ಪ್ರಧಾನಿ ಮೋದಿ, ಮೀನುಗಾರರಿಗೆ ಸಂಬಂಧಿಸಿದ 700 ಕೋಟಿ ರೂಗಳಿಗೂ ಹೆಚ್ಚು ಮೌಲ್ಯದ ಯೋಜನೆಗಳಿಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ ಮತ್ತು ದೇಶಾದ್ಯಂತ 400 ಕೋಟಿ ರೂಗಳಿಗೂ ಹೆಚ್ಚು ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಾಗಿದೆ ಎಂದು ಹೇಳಿದರು. ವಾಧ್ವಾನ್ ಬಂದರು, ದಿಘಿ ಬಂದರು ಕೈಗಾರಿಕಾ ಪ್ರದೇಶದ ಅಭಿವೃದ್ಧಿ ಮತ್ತು ಮೀನುಗಾರಿಕೆಗಾಗಿ ಹಲವು ಯೋಜನೆಗಳನ್ನು ಪ್ರಸ್ತಾಪಿಸಿದ ಅವರು, ಮಾತಾ ಮಹಾಲಕ್ಷ್ಮಿ ದೇವಿ, ಮಾತಾ ಜೀವದಾನಿ ಮತ್ತು ಭಗವಾನ್ ತುಂಗಾರೇಶ್ವರ್ ಅವರ ಆಶೀರ್ವಾದದಿಂದ ಎಲ್ಲಾ ಅಭಿವೃದ್ಧಿ ಕಾರ್ಯಗಳು ಸಾಧ್ಯವಾಗಿವೆ ಎಂದರು.

 

ಭಾರತದ ಸುವರ್ಣಯುಗವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಒಂದು ಕಾಲದಲ್ಲಿ ಭಾರತವು ತನ್ನ ಕಡಲ ಸಾಮರ್ಥ್ಯದಿಂದಾಗಿ ಅತ್ಯಂತ ಬಲಿಷ್ಠ ಮತ್ತು ಸಮೃದ್ಧ ರಾಷ್ಟ್ರಗಳಲ್ಲಿ ಒಂದಾಗಿತ್ತು ಎಂದರು. "ಮಹಾರಾಷ್ಟ್ರದ ಜನರು ಈ ಸಾಮರ್ಥ್ಯವನ್ನು ಚೆನ್ನಾಗಿ ತಿಳಿದಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ್ ಅವರು ತಮ್ಮ ನೀತಿಗಳು ಮತ್ತು ದೇಶದ ಅಭಿವೃದ್ಧಿಗಾಗಿ ಬಲವಾದ ನಿರ್ಧಾರಗಳಿಂದ ಭಾರತದ ಕಡಲ ಸಾಮರ್ಥ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು" ಎಂದು ಶ್ರೀ ಮೋದಿ ಹೇಳಿದರು, ಇಡೀ ಈಸ್ಟ್ ಇಂಡಿಯಾ ಕಂಪನಿ ಸಹ ದರಿಯಾ ಸಾರಂಗ್ ಕನ್ಹೋಜಿ ಯಾಗಂತಿಯ ಮುಂದೆ ನಿಲ್ಲಲು ಸಾಧ್ಯವಾಗಲಿಲ್ಲ. ಹಿಂದಿನ ಸರ್ಕಾರಗಳು ಭಾರತದ ಶ್ರೀಮಂತ ಗತಕಾಲದ ಬಗ್ಗೆ ಗಮನ ಹರಿಸುವಲ್ಲಿ ವಿಫಲವಾಗಿವೆ ಎಂದು ಪ್ರಧಾನಿ ಹೇಳಿದರು. "ಇದು ನವ ಭಾರತ. ಇದು ಇತಿಹಾಸದಿಂದ ಕಲಿಯುತ್ತದೆ ಮತ್ತು ಅದರ ಸಾಮರ್ಥ್ಯ ಮತ್ತು ಹೆಮ್ಮೆಯನ್ನು ಗುರುತಿಸುತ್ತದೆ", ಎಂದು ಹೇಳಿದ ಪ್ರಧಾನಿ, ಗುಲಾಮಗಿರಿಯ ಸಂಕೋಲೆಗಳ ಪ್ರತಿಯೊಂದು ಕುರುಹುಗಳನ್ನು ಬಿಟ್ಟು ನವ ಭಾರತವು ಕಡಲ ಮೂಲಸೌಕರ್ಯದಲ್ಲಿ ಹೊಸ ಮೈಲಿಗಲ್ಲುಗಳನ್ನು ಸೃಷ್ಟಿಸುತ್ತಿದೆ ಎಂದರು.

ಕಳೆದ ದಶಕದಲ್ಲಿ ಭಾರತದ ಕರಾವಳಿಯ ಅಭಿವೃದ್ಧಿ ಅಭೂತಪೂರ್ವ ವೇಗವನ್ನು ಪಡೆದುಕೊಂಡಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಬಂದರುಗಳ ಆಧುನೀಕರಣ, ಜಲಮಾರ್ಗಗಳ ಅಭಿವೃದ್ಧಿ ಮತ್ತು ಭಾರತದಲ್ಲಿ ಹಡಗು ನಿರ್ಮಾಣವನ್ನು ಉತ್ತೇಜಿಸುವ ಪ್ರಯತ್ನಗಳ ಉದಾಹರಣೆಗಳನ್ನು ಅವರು ನೀಡಿದರು. "ಈ ದಿಕ್ಕಿನಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗಿದೆ", ಭಾರತದ ಹೆಚ್ಚಿನ ಬಂದರುಗಳ ನಿರ್ವಹಣಾ ಸಾಮರ್ಥ್ಯವನ್ನು ದ್ವಿಗುಣಗೊಳಿಸುವುದು, ಖಾಸಗಿ ಹೂಡಿಕೆಗಳ ಹೆಚ್ಚಳ ಮತ್ತು ಹಡಗುಗಳ ಸರಕು ನಿರ್ವಹಣಾ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಮೂಲಕ ಫಲಿತಾಂಶಗಳನ್ನು ನೋಡಬಹುದಾಗಿದೆ ಎಂದು ಪ್ರಧಾನ ಮಂತ್ರಿ  ಮೋದಿ ಒತ್ತಿ ಹೇಳಿದರು. ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಕೈಗಾರಿಕೆಗಳು ಮತ್ತು ಉದ್ಯಮಿಗಳಿಗೆ ಲಾಭವಾಗಿದೆ ಮತ್ತು ಯುವಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. "ನಾವಿಕರಿಗೆ ಸೌಲಭ್ಯಗಳು ಕೂಡಾ  ಹೆಚ್ಚಾಗಿದೆ" ಎಂದು ಅವರು ನುಡಿದರು. 

 

"ಇಡೀ ಜಗತ್ತು ಇಂದು ವಾಧ್ವಾನ್ ಬಂದರಿನತ್ತ ನೋಡುತ್ತಿದೆ" ಎಂದು ಹೇಳಿದ ಪ್ರಧಾನಮಂತ್ರಿಯವರು, ವಿಶ್ವದ ಕೆಲವೇ ಬಂದರುಗಳು ವಾಧ್ವಾನ್ ಬಂದರಿನ 20 ಮೀಟರ್ ಆಳಕ್ಕೆ ಸರಿಸಾಟಿಯಾಗಬಲ್ಲವು ಎಂದರು. ರೈಲ್ವೆ ಮತ್ತು ಹೆದ್ದಾರಿ ಸಂಪರ್ಕದಿಂದಾಗಿ ಬಂದರು ಇಡೀ ಪ್ರದೇಶದ ಆರ್ಥಿಕ ಭೂದೃಶ್ಯವನ್ನು ಪರಿವರ್ತಿಸುತ್ತದೆ ಎಂದು ಅವರು ಒತ್ತಿ ಹೇಳಿದರು.  ಸರಕು ಸಾಗಾಣಿಕೆಗಾಗಿಯೇ ಮೀಸಲಾದ ಪಶ್ಚಿಮ ಸರಕು ಕಾರಿಡಾರ್ ಗೆ ಸಂಪರ್ಕ ಮತ್ತು ದಿಲ್ಲಿ-ಮುಂಬೈ ಎಕ್ಸ್ ಪ್ರೆಸ್ ವೇಗೆ ಸಾಮೀಪ್ಯದಿಂದಾಗಿ ಇದು ಹೊಸ ವ್ಯವಹಾರಗಳು ಮತ್ತು ಗೋದಾಮುಗಳಿಗೆ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಉಲ್ಲೇಖಿಸಿದರು. "ಸರಕು ವರ್ಷವಿಡೀ ಈ ಪ್ರದೇಶದ ಒಳಗೆ ಮತ್ತು ಹೊರಗೆ ಸಾಗುತ್ತದೆ, ಆ ಮೂಲಕ ಮಹಾರಾಷ್ಟ್ರದ ಜನರಿಗೆ ಪ್ರಯೋಜನವಾಗಲಿದೆ" ಎಂದು ಅವರು ಹೇಳಿದರು.

'ಮೇಕ್ ಇನ್ ಇಂಡಿಯಾ' ಮತ್ತು 'ಆತ್ಮನಿರ್ಭರ ಭಾರತ ಅಭಿಯಾನ' ಕಾರ್ಯಕ್ರಮಗಳ ಮೂಲಕ ಮಹಾರಾಷ್ಟ್ರ ಗಳಿಸಿದ ಲಾಭಗಳನ್ನು ಎತ್ತಿ ತೋರಿಸಿದ ಪ್ರಧಾನಿ ಮೋದಿ, "ಮಹಾರಾಷ್ಟ್ರದ ಅಭಿವೃದ್ಧಿ ನನಗೆ ಬಹಳ ದೊಡ್ಡ ಆದ್ಯತೆಯಾಗಿದೆ" ಎಂದು ಹೇಳಿದರು. ಭಾರತದ ಪ್ರಗತಿಯಲ್ಲಿ ಮಹಾರಾಷ್ಟ್ರದ ಪ್ರಮುಖ ಪಾತ್ರವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಅಭಿವೃದ್ಧಿಯನ್ನು ತಡೆಯಲು ಪ್ರಯತ್ನಿಸುತ್ತಿರುವವರ ಪ್ರಯತ್ನಗಳ ಬಗ್ಗೆ ವಿಷಾದಿಸಿದರು.

ವಾಧ್ವಾನ್ ಬಂದರು ಯೋಜನೆಯನ್ನು ಸುಮಾರು 60 ವರ್ಷಗಳ ಕಾಲ ಸ್ಥಗಿತಗೊಳಿಸಿದ್ದಕ್ಕಾಗಿ ಹಿಂದಿನ ಸರ್ಕಾರದ ಕ್ರಮಗಳ ಬಗ್ಗೆ ತೀವ್ರ  ವಿಷಾದ ವ್ಯಕ್ತಪಡಿಸಿದ ಪ್ರಧಾನಿ, ಭಾರತಕ್ಕೆ ಕಡಲ ವ್ಯಾಪಾರಕ್ಕಾಗಿ ಹೊಸ ಮತ್ತು ಸುಧಾರಿತ ಬಂದರಿನ ಅಗತ್ಯವಿತ್ತು ಆದರೆ ಈ ದಿಕ್ಕಿನಲ್ಲಿ ಕೆಲಸವು 2016 ರವರೆಗೆ ಪ್ರಾರಂಭವಾಗಲಿಲ್ಲ ಎಂದು ಹೇಳಿದರು. ದೇವೇಂದ್ರ ಫಡ್ನವೀಸ್ ಅಧಿಕಾರಕ್ಕೆ ಬಂದ ನಂತರವೇ ಈ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಲಾಯಿತು ಮತ್ತು 2020 ರ ವೇಳೆಗೆ ಪಾಲ್ಘರ್ ನಲ್ಲಿ ಬಂದರನ್ನು ನಿರ್ಮಿಸಲು ನಿರ್ಧರಿಸಲಾಯಿತು. ಆದಾಗ್ಯೂ, ಸರ್ಕಾರದ ಬದಲಾವಣೆಯಿಂದಾಗಿ ಈ ಯೋಜನೆ ಮತ್ತೆ 2.5 ವರ್ಷಗಳ ಕಾಲ ಸ್ಥಗಿತಗೊಂಡಿತು ಎಂದು ಅವರು ಹೇಳಿದರು. ಈ ಯೋಜನೆಯೊಂದರಲ್ಲೇ ಹಲವಾರು ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯನ್ನು ಅಂದಾಜಿಸಲಾಗಿದೆ ಮತ್ತು ಇಲ್ಲಿ ಸುಮಾರು 12 ಲಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದೂ ಪ್ರಧಾನಿ ಮಾಹಿತಿ ನೀಡಿದರು. ಈ ಯೋಜನೆಯನ್ನು ಮುಂದುವರಿಸಲು ಅವಕಾಶ ನೀಡದಿದ್ದಕ್ಕಾಗಿ ಅವರು ಹಿಂದಿನ ಸರ್ಕಾರಗಳನ್ನು ಪ್ರಶ್ನಿಸಿದರು.

 

ಸಾಗರ ಸಂಬಂಧಿತ ಅವಕಾಶಗಳ ವಿಷಯಕ್ಕೆ ಬಂದಾಗ ಭಾರತದ ಮೀನುಗಾರರ ಸಮುದಾಯವು ಅತ್ಯಂತ ಪ್ರಮುಖ ಪಾಲುದಾರ ಎಂದು ಪ್ರಧಾನಿ ಒತ್ತಿ ಹೇಳಿದರು. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಫಲಾನುಭವಿಗಳೊಂದಿಗಿನ ತಮ್ಮ ಸಂವಾದವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಕಳೆದ 10 ವರ್ಷಗಳಲ್ಲಿ ಸರ್ಕಾರದ ಯೋಜನೆಗಳು ಮತ್ತು ಸೇವಾ ಮನೋಭಾವದಿಂದಾಗಿ ಈ ಕ್ಷೇತ್ರದಲ್ಲಾದ  ಪರಿವರ್ತನೆಯನ್ನು ಎತ್ತಿ ತೋರಿಸಿದರು. ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೀನು ಉತ್ಪಾದಿಸುವ ದೇಶವಾಗಿದೆ ಎಂದು ತಿಳಿಸಿದ ಪ್ರಧಾನಮಂತ್ರಿಯವರು, 2014 ರಲ್ಲಿ ದೇಶದಲ್ಲಿ 80 ಲಕ್ಷ ಟನ್ ಮೀನು ಉತ್ಪಾದಿಸಲಾಗಿದೆ, ಇಂದು 170 ಲಕ್ಷ ಟನ್ ಮೀನು ಉತ್ಪಾದನೆಯಾಗುತ್ತಿದೆ ಎಂಬ ಅಂಶದತ್ತ  ಗಮನಸೆಳೆದರು. "ಕೇವಲ 10 ವರ್ಷಗಳಲ್ಲಿ ಮೀನು ಉತ್ಪಾದನೆ ದ್ವಿಗುಣಗೊಂಡಿದೆ" ಎಂದು ಅವರು ಉದ್ಗರಿಸಿದರು. ಭಾರತದ ಬೆಳೆಯುತ್ತಿರುವ ಸಮುದ್ರಾಹಾರ ರಫ್ತುಗಳನ್ನು ಅವರು ಉಲ್ಲೇಖಿಸಿದರು ಮತ್ತು ಹತ್ತು ವರ್ಷಗಳ ಹಿಂದೆ 20 ಸಾವಿರ ಕೋಟಿ ರೂ.ಗಿಂತ ಕಡಿಮೆ ಇದ್ದ ಸಿಗಡಿ ರಫ್ತು ಇಂದು 40 ಸಾವಿರ ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಸಿಗಡಿ ರಫ್ತಿಗೆ ಬಂದು ನಿಂತಿದೆ ಎಂದವರು ಉದಾಹರಣೆಯನ್ನು ನೀಡಿದರು. "ಸಿಗಡಿ ರಫ್ತು ಕೂಡ ಇಂದು ದ್ವಿಗುಣಗೊಂಡಿದೆ" ಎಂದು ಅವರು ಹೇಳಿದರು, ಲಕ್ಷಾಂತರ ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಸಹಾಯ ಮಾಡಿದ ನೀಲಿ ಕ್ರಾಂತಿ ಯೋಜನೆ ಈ ಯಶಸ್ಸಿಗೆ ಕಾರಣ ಎಂದವರು ಅಭಿಪ್ರಾಯಪಟ್ಟರು.  

ಮೀನುಗಾರಿಕೆ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಸರ್ಕಾರದ ಪ್ರಯತ್ನಗಳ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಅಡಿಯಲ್ಲಿ ಸಾವಿರಾರು ಮಹಿಳೆಯರಿಗೆ ನೆರವು ನೀಡುತ್ತಿರುವುದನ್ನು ಉಲ್ಲೇಖಿಸಿದರು. ಸುಧಾರಿತ ತಂತ್ರಜ್ಞಾನಗಳು ಮತ್ತು ಉಪಗ್ರಹಗಳ ಬಗ್ಗೆ ಮಾತನಾಡಿದ ಅವರು, ಇಂದು ಹಡಗು ಸಂವಹನ ವ್ಯವಸ್ಥೆಯ ಕಾರ್ಯಾರಂಭವನ್ನು ಪ್ರಸ್ತಾಪಿಸಿದರು, ಇದು ಮೀನುಗಾರರ ಸಮುದಾಯಕ್ಕೆ ವರದಾನವಾಗಲಿದೆ. ಮೀನುಗಾರರು ತಮ್ಮ ಕುಟುಂಬಗಳು, ದೋಣಿ ಮಾಲೀಕರು, ಮೀನುಗಾರಿಕೆ ಇಲಾಖೆ ಮತ್ತು ಕರಾವಳಿ ಕಾವಲು ಪಡೆಗಳೊಂದಿಗೆ ನಿರಂತರ ಸಂಪರ್ಕವನ್ನು ಸ್ಥಾಪಿಸಲು ಬಳಸುವ ಹಡಗುಗಳಲ್ಲಿ 1 ಲಕ್ಷ ಟ್ರಾನ್ಸ್ ಪಾಂಡರ್ ಗಳನ್ನು ಸ್ಥಾಪಿಸಲು ಸರ್ಕಾರ ಯೋಜಿಸಿದೆ ಎಂದು ಶ್ರೀ ಮೋದಿ ಘೋಷಿಸಿದರು. ಇದು ಮೀನುಗಾರರಿಗೆ ತುರ್ತು ಪರಿಸ್ಥಿತಿ, ಚಂಡಮಾರುತ ಅಥವಾ ಯಾವುದೇ ಅಹಿತಕರ ಘಟನೆಗಳ ಸಮಯದಲ್ಲಿ ಉಪಗ್ರಹಗಳ ಸಹಾಯದಿಂದ ಸಂವಹನ ನಡೆಸಲು ಸಹಾಯ ಮಾಡುತ್ತದೆ ಎಂದು ಪ್ರಧಾನಿ ಹೇಳಿದರು. "ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಜೀವಗಳನ್ನು ಉಳಿಸುವುದು ಸರ್ಕಾರದ ಆದ್ಯತೆಯಾಗಿದೆ" ಎಂದು ಅವರು ನುಡಿದರು.

 

ಮೀನುಗಾರರ ಹಡಗುಗಳು ಸುರಕ್ಷಿತವಾಗಿ ಹಿಂದಿರುಗಿ ಬರುವಂತಾಗಲು 110 ಕ್ಕೂ ಹೆಚ್ಚು ಮೀನುಗಾರಿಕಾ ಬಂದರುಗಳು ಮತ್ತು ಲ್ಯಾಂಡಿಂಗ್ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಶೀತಲ ಸರಪಳಿ, ಸಂಸ್ಕರಣಾ ಸೌಲಭ್ಯಗಳು, ದೋಣಿಗಳಿಗೆ ಸಾಲ ಯೋಜನೆಗಳು ಮತ್ತು ಪಿಎಂ ಮತ್ಸ್ಯ ಸಂಪದ ಯೋಜನೆಯ ಉದಾಹರಣೆಗಳನ್ನು ನೀಡಿದ ಪ್ರಧಾನಮಂತ್ರಿಯವರು, ಕರಾವಳಿ ಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಗಮನ ಹರಿಸುತ್ತಿದೆ ಮತ್ತು ಮೀನುಗಾರರ ಸರ್ಕಾರಿ ಸಂಸ್ಥೆಗಳನ್ನು ಸಹ ಬಲಪಡಿಸಲಾಗುತ್ತಿದೆ ಎಂದರು.

ಪ್ರಸ್ತುತ ಸರ್ಕಾರವು ಸದಾ ಹಿಂದುಳಿದ ವರ್ಗಗಳಿಗೆ ಸೇರಿದವರಿಗಾಗಿ ಕೆಲಸ ಮಾಡಿದೆ ಮತ್ತು ವಂಚಿತರಿಗೆ ಅವಕಾಶಗಳನ್ನು ನೀಡಿದೆ, ಆದರೆ ಹಿಂದಿನ ಸರ್ಕಾರಗಳು ರಚಿಸಿದ ನೀತಿಗಳು ಯಾವಾಗಲೂ ಮೀನುಗಾರರು ಮತ್ತು ಬುಡಕಟ್ಟು ಸಮುದಾಯವನ್ನು ಅಂಚಿನಲ್ಲಿರಿಸಿವೆ, ದೇಶದ ಇಷ್ಟು ದೊಡ್ಡ ಬುಡಕಟ್ಟು ಪ್ರಾಬಲ್ಯದ ಪ್ರದೇಶಗಳಲ್ಲಿ ಬುಡಕಟ್ಟು ಸಮುದಾಯಗಳ ಕಲ್ಯಾಣಕ್ಕಾಗಿ ಒಂದೇ ಒಂದು ಇಲಾಖೆಯೂ ಇಲ್ಲ ಎಂದು ಪ್ರಧಾನಿ ಹೇಳಿದರು. "ಮೀನುಗಾರರು ಮತ್ತು ಬುಡಕಟ್ಟು ಸಮುದಾಯಗಳಿಗೆ ಪ್ರತ್ಯೇಕ ಸಚಿವಾಲಯಗಳನ್ನು ರಚಿಸಿದ್ದು ನಮ್ಮ ಸರ್ಕಾರ. ಇಂದು, ನಿರ್ಲಕ್ಷಿತ ಬುಡಕಟ್ಟು ಪ್ರದೇಶಗಳು ಪಿಎಂ ಜನಮಾನ್ ಯೋಜನೆಯ ಪ್ರಯೋಜನಗಳನ್ನು ಪಡೆಯುತ್ತಿವೆ ಮತ್ತು ನಮ್ಮ ಬುಡಕಟ್ಟು ಹಾಗು ಮೀನುಗಾರರ ಸಮುದಾಯಗಳು ನಮ್ಮ ದೇಶದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡುತ್ತಿವೆ" ಎಂದೂ ಶ್ರೀ ಮೋದಿ ಹೇಳಿದರು.

ಮಹಿಳಾ ನೇತೃತ್ವದ ಅಭಿವೃದ್ಧಿ ವಿಧಾನಕ್ಕಾಗಿ ರಾಜ್ಯ ಸರ್ಕಾರವನ್ನು ಶ್ಲಾಘಿಸಿದ ಪ್ರಧಾನಿ, ಮಹಾರಾಷ್ಟ್ರವು ರಾಷ್ಟ್ರಕ್ಕೆ ಮಹಿಳಾ ಸಬಲೀಕರಣದ ಹಾದಿಯನ್ನು ಹಾಕುತ್ತಿದೆ ಎಂದು ಹೇಳಿದರು. ಮಹಾರಾಷ್ಟ್ರದಲ್ಲಿ ಮಹಿಳೆಯರು ಅನೇಕ ಉನ್ನತ ಹುದ್ದೆಗಳಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿರುವುದನ್ನು ಉಲ್ಲೇಖಿಸಿದ ಪ್ರಧಾನಿ, ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಮುಖ್ಯ ಕಾರ್ಯದರ್ಶಿಯಾಗಿ ರಾಜ್ಯ ಆಡಳಿತಕ್ಕೆ ಮಾರ್ಗದರ್ಶನ ನೀಡುತ್ತಿರುವ ಸುಜಾತಾ ಸೌನಿಕ್, ರಾಜ್ಯ ಪೊಲೀಸ್ ಪಡೆಯನ್ನು ಮುನ್ನಡೆಸುತ್ತಿರುವ ಡಿಜಿಪಿ ರಶ್ಮಿ ಶುಕ್ಲಾ, ರಾಜ್ಯದ ಅರಣ್ಯ ಪಡೆಯ ಮುಖ್ಯಸ್ಥರಾಗಿ ಶೋಮಿತಾ ಬಿಸ್ವಾಸ್ ಮತ್ತು ರಾಜ್ಯದ ಕಾನೂನು ವಿಭಾಗದ ಮುಖ್ಯಸ್ಥರಾಗಿ ಸುವರ್ಣ ಕೆವಾಲೆ ಅವರು ಜವಾಬ್ದಾರಿಯನ್ನು ನಿರ್ವಹಿಸುತ್ತಿರುವುದನ್ನೂ ಉಲ್ಲೇಖಿಸಿದರು. ರಾಜ್ಯದ ಪ್ರಧಾನ ಅಕೌಂಟೆಂಟ್ ಜನರಲ್ ಆಗಿ ಜಯಾ ಭಗತ್, ಮುಂಬೈನಲ್ಲಿ ಕಸ್ಟಮ್ಸ್ ಇಲಾಖೆಯನ್ನು ಮುನ್ನಡೆಸುತ್ತಿರುವ ಪ್ರಾಚಿ ಸ್ವರೂಪ್ ಮತ್ತು ಮುಂಬೈ ಮೆಟ್ರೋದ ಎಂಡಿಯಾಗಿ ಅಶ್ವಿನಿ ಭಿಡೆ ಅವರು ಕಾರ್ಯನಿರ್ವಹಿಸುತ್ತಿರುವುದನ್ನೂ ಪ್ರಧಾನ ಮಂತ್ರಿ ಅವರು ಉಲ್ಲೇಖಿಸಿದರು. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮಹಾರಾಷ್ಟ್ರದ ಮಹಿಳೆಯರನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಮಹಾರಾಷ್ಟ್ರ ಆರೋಗ್ಯ ವಿಶ್ವವಿದ್ಯಾಲಯದ ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಡಾ. ಮಾಧುರಿ ಕಾನಿಟ್ಕರ್ ಮತ್ತು ಮಹಾರಾಷ್ಟ್ರದ ಕೌಶಲ್ಯ ವಿಶ್ವವಿದ್ಯಾಲಯದ ಮೊದಲ ಉಪಕುಲಪತಿ ಡಾ. ಅಪೂರ್ವ ಪಾಲ್ಕರ್ ಅವರ ಹೆಸರನ್ನೂ ಉಲ್ಲೇಖಿಸಿದರು. "ಈ ಮಹಿಳೆಯರ ಯಶಸ್ಸು 21 ನೇ ಶತಮಾನದ ಮಹಿಳಾ ಶಕ್ತಿ ಸಮಾಜಕ್ಕೆ ಹೊಸ ದಿಕ್ಕನ್ನು ನೀಡಲು ಸಿದ್ಧವಾಗಿದೆ ಎಂಬುದಕ್ಕೆ ಪುರಾವೆಯಾಗಿದೆ" ಎಂದು ಶ್ರೀ ಮೋದಿ ಹೇಳಿದರು, ಈ ಮಹಿಳಾ ಶಕ್ತಿಯು ವಿಕ್ಷಿತ್ ಭಾರತದ ಅತಿದೊಡ್ಡ ಅಡಿಪಾಯವಾಗಿದೆ ಎಂದೂ ಅವರು ವಿವರಿಸಿದರು.  

 

ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವಾಗ  ಪ್ರಧಾನಮಂತ್ರಿಯವರು, ಈ ಸರ್ಕಾರ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್' ಎಂಬ ನಂಬಿಕೆಯೊಂದಿಗೆ ಕೆಲಸ ಮಾಡುತ್ತಿದೆ ಎಂದರು. ಮಹಾರಾಷ್ಟ್ರದ ಜನರ ಸಹಾಯದಿಂದ ರಾಜ್ಯವು ಅಭಿವೃದ್ಧಿಯ ಹೊಸ ಎತ್ತರವನ್ನು ತಲುಪಲಿದೆ ಎಂಬ ವಿಶ್ವಾಸವನ್ನೂ ಶ್ರೀ ಮೋದಿ ವ್ಯಕ್ತಪಡಿಸಿದರು.

ಮಹಾರಾಷ್ಟ್ರ ರಾಜ್ಯಪಾಲ ಶ್ರೀ ಸಿ.ಪಿ.ರಾಧಾಕೃಷ್ಣನ್, ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ, ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳಾದ ಶ್ರೀ ದೇವೇಂದ್ರ ಫಡ್ನವೀಸ್ ಮತ್ತು ಶ್ರೀ ಅಜಿತ್ ಪವಾರ್, ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಶ್ರೀ ಸರ್ಬಾನಂದ ಸೋನೊವಾಲ್ ಮತ್ತು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಶ್ರೀ ರಾಜೀವ್ ರಂಜನ್ ಸಿಂಗ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಪ್ರಧಾನಮಂತ್ರಿಯವರು ವಾಧ್ವಾನ್ ಬಂದರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಯ ಒಟ್ಟು ವೆಚ್ಚ ಸುಮಾರು 76,000 ಕೋಟಿ ರೂ. ದೊಡ್ಡ ಕಂಟೇನರ್ ಹಡಗುಗಳ ಅಗತ್ಯಗಳನ್ನು ಪೂರೈಸುವ ಮೂಲಕ, ಆಳವಾದ ಹಡಗು ಪಥಗಳನ್ನು (ಡ್ರಾಫ್ಟ್ ಸ್) ಒದಗಿಸುವ  ಮೂಲಕ ಮತ್ತು ಅತಿ ದೊಡ್ಡ ಸರಕು ಹಡಗುಗಳಿಗೆ ಸ್ಥಳಾವಕಾಶ ಒದಗಿಸುವ  ಮೂಲಕ ದೇಶದ ವ್ಯಾಪಾರ ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ವಿಶ್ವದರ್ಜೆಯ ಕಡಲ ಮಹಾದ್ವಾರವನ್ನು (ಗೇಟ್ವೇ ) ಸ್ಥಾಪಿಸುವ ಗುರಿಯನ್ನು ಇದು ಹೊಂದಿದೆ.

 

ಪಾಲ್ಘರ್ ಜಿಲ್ಲೆಯ ದಹನು ಪಟ್ಟಣದ ಬಳಿ ಇರುವ ವಾಧ್ವಾನ್ ಬಂದರು ಭಾರತದ ಅತಿದೊಡ್ಡ ಆಳ-ನೀರಿನ ಬಂದರುಗಳಲ್ಲಿ ಒಂದಾಗಿದೆ ಮತ್ತು ಅಂತರರಾಷ್ಟ್ರೀಯ ಹಡಗು ಮಾರ್ಗಗಳಿಗೆ ನೇರ ಸಂಪರ್ಕವನ್ನು ಒದಗಿಸುತ್ತದೆ, ಸಾರಿಗೆ ಸಮಯ ಮತ್ತು ವೆಚ್ಚವನ್ನು ಕಡಿಮೆ ಮಾಡುತ್ತದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಮೂಲಸೌಕರ್ಯಗಳನ್ನು ಹೊಂದಿರುವ ಈ ಬಂದರು ಆಳವಾದ ಬರ್ತ್ ಗಳು, ದಕ್ಷ ಸರಕು ನಿರ್ವಹಣಾ ಸೌಲಭ್ಯಗಳು ಮತ್ತು ಆಧುನಿಕ ಬಂದರು ನಿರ್ವಹಣಾ ವ್ಯವಸ್ಥೆಗಳನ್ನು ಒಳಗೊಂಡಿರುತ್ತದೆ. ಈ ಬಂದರು ಗಮನಾರ್ಹ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ, ಸ್ಥಳೀಯ ವ್ಯವಹಾರಗಳನ್ನು ಉತ್ತೇಜಿಸುತ್ತದೆ ಮತ್ತು ಪ್ರದೇಶದ ಒಟ್ಟಾರೆ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ವಾಧ್ವಾನ್ ಬಂದರು ಯೋಜನೆಯು ಪರಿಸರದ ಪರಿಣಾಮವನ್ನು ಕಡಿಮೆ ಮಾಡುವ ಮತ್ತು ಕಠಿಣ ಪರಿಸರ ಮಾನದಂಡಗಳಿಗೆ ಬದ್ಧವಾಗಿರುವುದರ ಮೇಲೆ ಗಮನ ಕೇಂದ್ರೀಕರಿಸಿ ಸುಸ್ಥಿರ ಅಭಿವೃದ್ಧಿ ಅಭ್ಯಾಸಗಳನ್ನು/ಪದ್ಧತಿಗಳನ್ನು ಅಳವಡಿಸಿಕೊಳ್ಳಲಿದೆ. ಈ ಬಂದರು ಕಾರ್ಯಾರಂಭ ಮಾಡಿದ ನಂತರ, ಭಾರತದ ಕಡಲ ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಜಾಗತಿಕ ವ್ಯಾಪಾರ ಕೇಂದ್ರವಾಗಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತದೆ.

ದೇಶಾದ್ಯಂತ ಈ ವಲಯದ ಮೂಲಸೌಕರ್ಯ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಸುಮಾರು 1,560 ಕೋಟಿ ರೂ.ಗಳ 218 ಮೀನುಗಾರಿಕೆ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಈ ಉಪಕ್ರಮಗಳು ಮೀನುಗಾರಿಕೆ ಕ್ಷೇತ್ರದಲ್ಲಿ ಐದು ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.

 

ಪ್ರಧಾನಮಂತ್ರಿಯವರು ಸುಮಾರು 360 ಕೋಟಿ ರೂ.ಗಳ ವೆಚ್ಚದಲ್ಲಿ ಹಡಗು ಸಂವಹನ ಮತ್ತು ಬೆಂಬಲ ವ್ಯವಸ್ಥೆಯ ರಾಷ್ಟ್ರೀಯ ರೋಲ್ ಔಟ್ ಗೆ ಚಾಲನೆ ನೀಡಿದರು. ಈ ಯೋಜನೆಯಡಿ, 13 ಕರಾವಳಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾಂತ್ರೀಕೃತ ಮೀನುಗಾರಿಕೆ ಹಡಗುಗಳಲ್ಲಿ ಹಂತ ಹಂತವಾಗಿ 1 ಲಕ್ಷ ಟ್ರಾನ್ಸ್ ಪಾಂಡರ್ ಗಳನ್ನು ಸ್ಥಾಪಿಸಲಾಗುವುದು. ಹಡಗು ಸಂವಹನ ಮತ್ತು ಬೆಂಬಲ ವ್ಯವಸ್ಥೆಯು ಇಸ್ರೋ ಅಭಿವೃದ್ಧಿಪಡಿಸಿದ ಸ್ಥಳೀಯ ತಂತ್ರಜ್ಞಾನವಾಗಿದ್ದು, ಇದು ಮೀನುಗಾರರು ಸಮುದ್ರದಲ್ಲಿದ್ದಾಗ ದ್ವಿಮುಖ ಸಂವಹನವನ್ನು ನಡೆಸಲು ಸಹಾಯ ಮಾಡುತ್ತದೆ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡುತ್ತದೆ ಹಾಗು ನಮ್ಮ ಮೀನುಗಾರರ ಸುರಕ್ಷತೆಯನ್ನು ಖಚಿತಪಡಿಸುತ್ತದೆ.

ಪ್ರಧಾನಮಂತ್ರಿಯವರು ಉದ್ಘಾಟಿಸಿದ ಇತರ ಉಪಕ್ರಮಗಳಲ್ಲಿ ಮೀನುಗಾರಿಕೆ ಬಂದರುಗಳು ಮತ್ತು ಸಮಗ್ರ ಜಲಚರ ಸಾಕಣೆ ಕೇಂದ್ರಗಳ ಅಭಿವೃದ್ಧಿ, ಜೊತೆಗೆ ಪುನಶ್ಚೇತನ ಜಲಚರ ಸಾಕಣೆ ವ್ಯವಸ್ಥೆ ಮತ್ತು ಬಯೋಫ್ಲೋಕ್  ನಂತಹ ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಸೇರಿದೆ. ಮೀನು ಉತ್ಪಾದನೆಯನ್ನು ಹೆಚ್ಚಿಸಲು, ಕೊಯಿಲಿನ  ನಂತರದ ನಿರ್ವಹಣೆಯನ್ನು ಸುಧಾರಿಸಲು ಹಾಗು  ಮೀನುಗಾರಿಕೆ ಕ್ಷೇತ್ರದಲ್ಲಿ ತೊಡಗಿರುವ ಲಕ್ಷಾಂತರ ಜನರಿಗೆ ಸುಸ್ಥಿರ ಜೀವನೋಪಾಯವನ್ನು ಸೃಷ್ಟಿಸಲು ನಿರ್ಣಾಯಕ ಮೂಲಸೌಕರ್ಯ ಮತ್ತು ಉತ್ತಮ ಗುಣಮಟ್ಟದ ಒಳಹರಿವುಗಳನ್ನು ಒದಗಿಸಲು ಈ ಯೋಜನೆಗಳನ್ನು ಅನೇಕ ರಾಜ್ಯಗಳಲ್ಲಿ ಜಾರಿಗೆ ತರಲಾಗುವುದು.

ಮೀನುಗಾರಿಕಾ ಬಂದರುಗಳ ಅಭಿವೃದ್ಧಿ, ಉನ್ನತೀಕರಣ ಮತ್ತು ಆಧುನೀಕರಣ, ಮೀನು ಇಳಿಯುವ ಕೇಂದ್ರಗಳು ಮತ್ತು ಮೀನು ಮಾರುಕಟ್ಟೆಗಳ ನಿರ್ಮಾಣ ಸೇರಿದಂತೆ ಪ್ರಮುಖ ಮೀನುಗಾರಿಕೆ ಮೂಲಸೌಕರ್ಯ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ಇದು ಮೀನು ಮತ್ತು ಸಮುದ್ರಾಹಾರದ ಕೊಯ್ಲಿನ ನಂತರದ ನಿರ್ವಹಣೆಗೆ ಅಗತ್ಯ ಸೌಲಭ್ಯಗಳು ಮತ್ತು ಆರೋಗ್ಯಕರ ಪರಿಸ್ಥಿತಿಗಳನ್ನು ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

 

Click here to read full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
ISRO achieves milestone with successful sea-level test of CE20 cryogenic engine

Media Coverage

ISRO achieves milestone with successful sea-level test of CE20 cryogenic engine
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 13 ಡಿಸೆಂಬರ್ 2024
December 13, 2024

Milestones of Progress: Appreciation for PM Modi’s Achievements