ಐಐಟಿ ಧಾರವಾಡ ಲೋಕಾರ್ಪಣೆ
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ನಿಲ್ದಾಣದಲ್ಲಿ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ರಾಷ್ಟ್ರಕ್ಕೆ ಸಮರ್ಪಣೆ
ಹಂಪಿ ಸ್ಮಾರಕಗಳನ್ನು ಹೋಲುವಂತೆ ವಿನ್ಯಾಸಗೊಳಿಸಿ ಪುನರಾಭಿವೃದ್ಧಿ ಮಾಡಿದ ಹೊಸಪೇಟೆ ರೈಲು ನಿಲ್ದಾಣ ಉದ್ಘಾಟನೆ
ಧಾರವಾಡ ಬಹುಗ್ರಾಮ ನೀರು ಸರಬರಾಜು ಯೋಜನೆಗೆ ಶಂಕುಸ್ಥಾಪನೆ
ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿಯ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ
"ಡಬಲ್ ಎಂಜಿನ್ ಸರ್ಕಾರವು ರಾಜ್ಯದ ಪ್ರತಿ ಜಿಲ್ಲೆ, ಗ್ರಾಮ ಮತ್ತು ಸಣ್ಣ ಹಳ್ಳಿಗಳ ಸಂಪೂರ್ಣ ಅಭಿವೃದ್ಧಿಗೆ ಅತ್ಯಂತ ಪ್ರಾಮಾಣಿಕತೆಯಿಂದ ಶ್ರಮಿಸುತ್ತಿದೆ"
“ಧಾರವಾಡ ವಿಶೇಷವಾದ್ದು. ಇದು ಭಾರತದ ಸಾಂಸ್ಕೃತಿಕ ಚೈತನ್ಯದ ಪ್ರತಿಬಿಂಬವಾಗಿದೆ.
“ಧಾರವಾಡದಲ್ಲಿರುವ ಐಐಟಿಯ ನೂತನ ಕ್ಯಾಂಪಸ್ ಗುಣಮಟ್ಟದ ಶಿಕ್ಷಣವನ್ನು ಸುಗಮಗೊಳಿಸುತ್ತದೆ. ಇದು ಉತ್ತಮ ನಾಳೆಗಾಗಿ ಯುವ ಮನಸ್ಸುಗಳನ್ನು ಪೋಷಿಸುತ್ತದೆ"
“ಯೋಜನೆಗಳ ಶಂಕುಸ್ಥಾಪನೆಯಿಂದ ಉದ್ಘಾಟನೆಯವರೆಗೆ ಡಬಲ್ ಎಂಜಿನ್ ಸರ್ಕಾರವು ನಿರಂತರ ವೇಗದಲ್ಲಿ ಕೆಲಸ ಮಾಡುತ್ತಿದೆ”
“ಉತ್ತಮ ಶಿಕ್ಷಣವು ಎಲ್ಲೆಡೆಗೂ, ಎಲ್ಲರಿಗೂ ತಲುಪಬೇಕು. ಹೆಚ್ಚಿನ ಸಂಖ್ಯೆಯ ಗುಣಮಟ್ಟದ ಸಂಸ್ಥೆಗಳು ಹೆಚ್ಚಿನ ಜನರಿಗೆ ಉತ್ತಮ ಶಿಕ್ಷಣ ತಲುಪುವುದನ್ನು ಖಚಿತಪಡಿಸುತ್ತವೆ”

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕರ್ನಾಟಕದ ಹುಬ್ಬಳ್ಳಿ-ಧಾರವಾಡದಲ್ಲಿ ಪ್ರಮುಖ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. 2019ರ ಫೆಬ್ರವರಿಯಲ್ಲಿ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ಮಾಡಿದ್ದ ಐಐಟಿ ಧಾರವಾಡ, ವಿಶ್ವದ ಅತಿ ದೊಡ್ಡ ರೈಲ್ವೆ ಪ್ಲಾಟ್‌ಫಾರ್ಮ್ ಎಂದು ಗಿನ್ನೆಸ್ ವಿಶ್ವದಾಖಲೆಯ ಪುಸ್ತಕದಲ್ಲಿ ಮಾನ್ಯತೆ ಪಡೆದಿರುವ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ನಿಲ್ದಾಣದ 1507 ಮೀಟರ್ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್, ಹೊಸಪೇಟೆ-ಹುಬ್ಬಳ್ಳಿ-ತಿನೈಘಾಟ್ ವಿಭಾಗದ ವಿದ್ಯುದ್ದೀಕರಣ ಮತ್ತು ಹೊಸಪೇಟೆ ರೈಲು ನಿಲ್ದಾಣದ ಉನ್ನತೀಕರಣ ಯೋಜನೆಗಳ ರಾಷ್ಟ್ರ ಸಮರ್ಪಣೆ ಇದರಲ್ಲಿ ಸೇರಿವೆ. ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿಯ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನೂ ಪ್ರಧಾನಮಂತ್ರಿಯವರು ನೆರವೇರಿಸಿದರು. ಜಯದೇವ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಧಾರವಾಡ ಬಹುಗ್ರಾಮ ನೀರು ಸರಬರಾಜು ಯೋಜನೆ ಹಾಗೂ ತುಪ್ಪರಿಹಳ್ಳ ಪ್ರವಾಹ ಹಾನಿ ನಿಯಂತ್ರಣ ಯೋಜನೆಗೆ ಶಂಕುಸ್ಥಾಪನೆಯನ್ನು ಪ್ರಧಾನಿಯವರು ನೆರವೇರಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಈ ವರ್ಷದ ಆರಂಭದಲ್ಲಿ ಹುಬ್ಬಳ್ಳಿಗೆ ಭೇಟಿ ನೀಡಿದ್ದನ್ನು ಮತ್ತು ತಮ್ಮನ್ನು ಸ್ವಾಗತಿಸಲು ಬಂದ ಜನರು ತಮಗೆ ಆಶೀರ್ವದಿಸಿದ್ದನ್ನು ಸ್ಮರಿಸಿಕೊಂಡರು. ಕಳೆದ ಕೆಲವು ವರ್ಷಗಳಲ್ಲಿ ಬೆಂಗಳೂರಿನಿಂದ ಬೆಳಗಾವಿ, ಕಲ್ಬುರಗಿಯಿಂದ ಶಿವಮೊಗ್ಗ ಮತ್ತು ಮೈಸೂರಿನಿಂದ ತುಮಕೂರಿನವರೆಗೆ ಕರ್ನಾಟಕದ ವಿವಿಧ ಬಾಗಗಳಿಗೆ ಭೇಟಿ ನೀಡಿದ್ದನ್ನು ಸ್ಮರಿಸಿದ ಪ್ರಧಾನಿ, ಕನ್ನಡಿಗರು ತೋರಿದ ಅಗಾಧ ಪ್ರೀತಿ ಮತ್ತು ವಾತ್ಸಲ್ಯಕ್ಕೆ ನಾನು ಋಣಿಯಾಗಿದ್ದೇನೆ ಎಂದರು. ಸರ್ಕಾರವು ಜನರ ಜೀವನವನ್ನು ಸುಲಭಗೊಳಿಸಲು ಅವರ ಅಗತ್ಯಗಳನ್ನು ಪೂರೈಸಲು, ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು, ಮಹಿಳೆಯರನ್ನು ಸಬಲೀಕರಣಗೊಳಿಸಲು ಕೆಲಸ ಮಾಡುತ್ತದೆ ಎಂದು ಒತ್ತಿ ಹೇಳಿದರು. ಕರ್ನಾಟಕದ ಡಬಲ್ ಎಂಜಿನ್ ಸರ್ಕಾರವು ರಾಜ್ಯದ ಪ್ರತಿ ಜಿಲ್ಲೆ, ಗ್ರಾಮ ಮತ್ತು ಸಣ್ಣ ಹಳ್ಳಿಗಳ ಸಂಪೂರ್ಣ ಅಭಿವೃದ್ಧಿಗಾಗಿ ಅತ್ಯಂತ ಪ್ರಾಮಾಣಿಕತೆಯಿಂದ ಶ್ರಮಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಶತಮಾನಗಳಿಂದಲೂ ಧಾರವಾಡವು ಮಲೆನಾಡು ಮತ್ತು ಬಯಲು ಸೀಮೆ ಪ್ರದೇಶಗಳಿಗೆ ಹೆಬ್ಬಾಗಿಲು ಆಗಿದ್ದು, ಎಲ್ಲರನ್ನೂ ಮುಕ್ತ ಹೃದಯದಿಂದ ಸ್ವಾಗತಿಸಿದೆ ಮತ್ತು ಪ್ರತಿಯೊಬ್ಬರಿಂದ ಕಲಿಯುವ ಮೂಲಕ ತನ್ನನ್ನು ತಾನು ಶ್ರೀಮಂತಗೊಳಿಸಿಕೊಂಡಿದೆ. ಆದ್ದರಿಂದ, ಧಾರವಾಡವು ಕೇವಲ ಹೆಬ್ಬಾಗಿಲಾಗಿ ಉಳಿಯದೆ ಕರ್ನಾಟಕ ಮತ್ತು ಭಾರತದ ಚೈತನ್ಯದ ಪ್ರತಿಬಿಂಬವಾಯಿತು ಎಂದು ಪ್ರಧಾನಮಂತ್ರಿ ಹೇಳಿದರು. ಸಾಹಿತ್ಯ ಮತ್ತು ಸಂಗೀತಕ್ಕೆ ಹೆಸರುವಾಸಿಯಾದ ಧಾರವಾಡವು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗಿದೆ ಎಂದ ಪ್ರಧಾನಿಯವರು, ಧಾರವಾಡದ ಸಾಂಸ್ಕತಿಕ ಧುರೀಣರಿಗೆ ನಮನ ಸಲ್ಲಿಸಿದರು.

ಪ್ರಧಾನಿಯವರು ತಮ್ಮ ಇಂದಿನ ಮಂಡ್ಯ ಭೇಟಿಯನ್ನು ಪ್ರಸ್ತಾಪಿಸಿದರು. ನೂತನ ಬೆಂಗಳೂರು -ಮೈಸೂರು ಎಕ್ಸ್‌ಪ್ರೆಸ್‌ವೇ ಸಾಫ್ಟ್‌ವೇರ್ ಹಬ್ ಎಂಬ ಕರ್ನಾಟಕದ ಗುರುತನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ದಾರಿಯಾಗಲಿದೆ ಎಂದು ಹೇಳಿದರು. ಅದೇ ರೀತಿ, ಬೆಳಗಾವಿಯಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಲೋಕಾರ್ಪಣೆ ಮಾಡಲಾಗಿದೆ ಅಥವಾ ಅವುಗಳಿಗೆ ಅಡಿಪಾಯವನ್ನು ಹಾಕಲಾಗಿದೆ ಎಂದು ಪ್ರಧಾನಿ ಹೇಳಿದರು. ಶಿವಮೊಗ್ಗ ಕುವೆಂಪು ವಿಮಾನ ನಿಲ್ದಾಣವನ್ನೂ ಅವರು ಪ್ರಸ್ತಾಪಿಸಿದರು. ಇಂದಿನ ಯೋಜನೆಗಳ ಜೊತೆಗೆ ಈ ಎಲ್ಲಾ ಯೋಜನೆಗಳು ಕರ್ನಾಟಕದ ಹೊಸ ಅಭಿವೃದ್ಧಿಗಾಥೆಯನ್ನು ಬರೆಯುತ್ತಿವೆ ಎಂದರು.

ಧಾರವಾಡದಲ್ಲಿರುವ ಐಐಟಿಯ ಹೊಸ ಕ್ಯಾಂಪಸ್ ಉತ್ತಮ ನಾಳೆಗಾಗಿ ಯುವ ಮನಸ್ಸುಗಳನ್ನು ಪೋಷಿಸುವ ಜೊತೆಗೆ ಗುಣಮಟ್ಟದ ಶಿಕ್ಷಣವನ್ನು ಸುಗಮಗೊಳಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ನೂತನ ಐಐಟಿ ಕ್ಯಾಂಪಸ್ ಕರ್ನಾಟಕದ ಅಭಿವೃದ್ಧಿ ಪಯಣದ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆಯುತ್ತಿದೆ ಎಂದು ಅವರು ಒತ್ತಿ ಹೇಳಿದರು. ಧಾರವಾಡ ಐಐಟಿ ಕ್ಯಾಂಪಸ್‌ನ ಹೈಟೆಕ್ ಸೌಲಭ್ಯಗಳನ್ನು ಪ್ರಸ್ತಾಪಿಸಿದ ಅವರು, ಇದು ಸ್ಫೂರ್ತಿಯ ಮೂಲವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಇದು ಸಂಸ್ಥೆಯನ್ನು ವಿಶ್ವದ ಇತರ ಪ್ರಮುಖ ಸಂಸ್ಥೆಗಳಂತೆಯೇ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದರು. ಐಐಟಿ ಧಾರವಾಡ ಕ್ಯಾಂಪಸ್ ಪ್ರಸ್ತುತ ಸರ್ಕಾರದ 'ಸಂಕಲ್ಪ ಸೇ ಸಿದ್ಧಿ' (ಸಂಕಲ್ಪಗಳ ಮೂಲಕ ಸಾಧನೆ) ಮನೋಭಾವಕ್ಕೆ ಒಂದು ಪ್ರಮುಖ ಉದಾಹರಣೆಯಾಗಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಫೆಬ್ರವರಿ 2019 ರಲ್ಲಿ ಈ ಕ್ಯಾಂಪಸ್‌ಗೆ ಅಡಿಗಲ್ಲು ಹಾಕಿದ್ದನ್ನು ಸ್ಮರಿಸಿದರು ಮತ್ತು ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಅನೇಕ ಅಡೆತಡೆಗಳು ಬಂದರೂ ಸಹ 4 ವರ್ಷಗಳ ಅವಧಿಯಲ್ಲಿ ಅದನ್ನು ಪೂರ್ಣಗೊಳಿಸಿದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಅಡಿಗಲ್ಲು ಹಾಕುವುದರಿಂದ ಹಿಡಿದು ಯೋಜನೆಗಳ ಉದ್ಘಾಟನೆಯವರೆಗೆ, ಡಬಲ್ ಎಂಜಿನ್ ಸರ್ಕಾರವು ನಿರಂತರ ವೇಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ನಾವು ಅಡಿಪಾಯ ಹಾಕುವ ಯೋಜನೆಗಳನ್ನು ಉದ್ಘಾಟಿಸುವ ಸಂಕಲ್ಪವನ್ನೂ ಮಾಡುತ್ತೇವೆ ಎಂದು ಅವರು ಹೇಳಿದರು.

ಗುಣಮಟ್ಟದ ಶಿಕ್ಷಣ ಸಂಸ್ಥೆಗಳ ವಿಸ್ತರಣೆಯು ಅವುಗಳ ಬ್ರ್ಯಾಂಡ್ ಅನ್ನು ದುರ್ಬಲಗೊಳಿಸುತ್ತದೆ ಎಂಬ ಹಿಂದಿನ ಸರ್ಕಾರಗಳ ಚಿಂತನೆಯ ಬಗ್ಗೆ ಪ್ರಧಾನಮಂತ್ರಿ ವಿಷಾದಿಸಿದರು. ಈ ಚಿಂತನೆಯು ಯುವ ಪೀಳಿಗೆಗೆ ಭಾರಿ ನಷ್ಟ ಉಂಟುಮಾಡಿತು. ನವ ಭಾರತವು ಈ ಚಿಂತನೆಯ ವಿಧಾನವನ್ನು ಬಿಟ್ಟಿದೆ ಎಂದು ಅವರು ಹೇಳಿದರು. ಉತ್ತಮ ಶಿಕ್ಷಣವು ಎಲ್ಲೆಡೆಗೂ, ಎಲ್ಲರಿಗೂ ತಲುಪಬೇಕು. ಹೆಚ್ಚಿನ ಸಂಖ್ಯೆಯ ಗುಣಮಟ್ಟದ ಸಂಸ್ಥೆಗಳು ಹೆಚ್ಚಿನ ಜನರಿಗೆ ಉತ್ತಮ ಶಿಕ್ಷಣವನ್ನು ತಲುಪುವುದನ್ನು ಖಚಿತಪಡಿಸುತ್ತವೆ ಎಂದು ಅವರು ಹೇಳಿದರು. ಅದಕ್ಕಾಗಿಯೇ ಕಳೆದ 9 ವರ್ಷಗಳಲ್ಲಿ ಭಾರತದಲ್ಲಿ ಗುಣಮಟ್ಟದ ಸಂಸ್ಥೆಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಎಐಐಎಂಎಸ್‌ (ಏಮ್ಸ್)‌ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ, ಸ್ವಾತಂತ್ರ್ಯದ ನಂತರದ ಏಳು ದಶಕಗಳಲ್ಲಿದ್ದ 380 ವೈದ್ಯಕೀಯ ಕಾಲೇಜುಗಳಿಗೆ ಹೋಲಿಸಿದರೆ ಕಳೆದ 9 ವರ್ಷಗಳಲ್ಲಿ 250 ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗಿದೆ. ಈ 9 ವರ್ಷಗಳಲ್ಲಿ ಅನೇಕ ಹೊಸ ಐಐಎಂ ಮತ್ತು ಐಐಟಿಗಳು ಆರಂಭವಾಗಿವೆ ಎಂದು ಪ್ರಧಾನಿ ಹೇಳಿದರು.

21ನೇ ಶತಮಾನದ ಭಾರತವು ತನ್ನ ನಗರಗಳನ್ನು ಆಧುನೀಕರಿಸುವ ಮೂಲಕ ಮುನ್ನಡೆಯುತ್ತಿದೆ ಎಂದು ಪ್ರಧಾನಿ ಹೇಳಿದರು. ಹುಬ್ಬಳ್ಳಿ-ಧಾರವಾಡವನ್ನು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸೇರಿಸಿ ಇಂದು ಹಲವು ಸ್ಮಾರ್ಟ್ ಯೋಜನೆಗಳನ್ನು ಲೋಕಾರ್ಪಣೆ ಮಾಡಲಾಗಿದೆ ಎಂದರು. ತಂತ್ರಜ್ಞಾನ, ಮೂಲಸೌಕರ್ಯ ಮತ್ತು ಸ್ಮಾರ್ಟ್ ಆಡಳಿತವು ಹುಬ್ಬಳ್ಳಿ-ಧಾರವಾಡ ಪ್ರದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಅವರು ಹೇಳಿದರು.

ಬೆಂಗಳೂರು, ಮೈಸೂರು ಮತ್ತು ಕಲ್ಬುರ್ಗಿಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮೇಲೆ ಕರ್ನಾಟಕದ ಜನತೆ ಇಟ್ಟಿರುವ ವಿಶ್ವಾಸದ ಬಗ್ಗೆ ಪ್ರಧಾನಿ ಒತ್ತಿ ಹೇಳಿದರು. ಈಗ ಹುಬ್ಬಳ್ಳಿಯಲ್ಲಿ ಇಂದು ಮೂರನೇ ಶಾಖೆಯ ಶಂಕುಸ್ಥಾಪನೆ ಮಾಡಲಾಗಿದೆ ಎಂದು ಅವರು ಹೇಳಿದರು.

ಧಾರವಾಡ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ತಿಳಿಸಿದ ಪ್ರಧಾನಿ, ಜಲ ಜೀವನ್ ಮಿಷನ್ ಅಡಿಯಲ್ಲಿ 1,000 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗಿದೆ ಎಂದು ತಿಳಿಸಿದರು. ರೇಣುಕಾ ಸಾಗರ ಜಲಾಶಯ ಮತ್ತು ಮಲಪ್ರಭಾ ನದಿಯ ನೀರನ್ನು ನಲ್ಲಿಗಳ ಮೂಲಕ 1.25 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ತಲುಪಿಸಲಾಗುವುದು. ಧಾರವಾಡದಲ್ಲಿ ಹೊಸ ನೀರು ಸಂಸ್ಕರಣಾ ಘಟಕ ಸಿದ್ಧವಾದಾಗ ಇಡೀ ಜಿಲ್ಲೆಯ ಜನತೆಗೆ ಇದರ ಪ್ರಯೋಜನ ದೊರೆಯಲಿದೆ ಎಂದು ತಿಳಿಸಿದರು. ಇಂದು ಶಂಕುಸ್ಥಾಪನೆ ನೆರವೇರಿಸಿದ ತುಪ್ಪರಿಹಳ್ಳ ಪ್ರವಾಹ ಹಾನಿ ನಿಯಂತ್ರಣ ಯೋಜನೆಯ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿಯವರು, ಯೋಜನೆಯು ಈ ಪ್ರದೇಶದಲ್ಲಿ ಪ್ರವಾಹದಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದರು.

ಸಿದ್ಧಾರೂಢ ಸ್ವಾಮೀಜಿ ನಿಲ್ದಾಣವು ವಿಶ್ವದ ಅತಿದೊಡ್ಡ ಪ್ಲಾಟ್‌ಪಾರ್ಮ್‌ ಹೊಂದಿದ್ದು, ಸಂಪರ್ಕದ ವಿಷಯದಲ್ಲಿ ಕರ್ನಾಟಕ ಮತ್ತೊಂದು ಮೈಲಿಗಲ್ಲನ್ನು ತಲುಪಿದೆ ಎಂದು ಪ್ರಧಾನಿ ಹರ್ಷ ವ್ಯಕ್ತಪಡಿಸಿದರು. ಇದು ಕೇವಲ ಯಾವುದೇ ದಾಖಲೆ ಅಥವಾ ಪ್ಲಾಟ್‌ಪಾರ್ಮ್‌ ವಿಸ್ತರಣೆಯಾಗಿರದೆ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುವ ಚಿಂತನೆಯನ್ನು ಮುಂದಿಡುತ್ತಿದೆ ಎಂದು ಅವರು ಒತ್ತಿ ಹೇಳಿದರು. ಹೊಸಪೇಟೆ-ಹುಬ್ಬಳ್ಳಿ-ತಿನೈಘಾಟ್ ವಿಭಾಗದ ವಿದ್ಯುದ್ದೀಕರಣ ಮತ್ತು ಹೊಸಪೇಟೆ ರೈಲು ನಿಲ್ದಾಣದ ಮೇಲ್ದರ್ಜೆಯು ಈ ದೃಷ್ಟಿಕೋನವನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು. ಈ ಮಾರ್ಗದ ಮೂಲಕ ದೊಡ್ಡ ಪ್ರಮಾಣದಲ್ಲಿ ಕೈಗಾರಿಕೆಗಳಿಗೆ ಕಲ್ಲಿದ್ದಲನ್ನು ಸಾಗಿಸಲಾಗುತ್ತದೆ ಮತ್ತು ಈ ಮಾರ್ಗದ ವಿದ್ಯುದ್ದೀಕರಣದ ನಂತರ, ಡೀಸೆಲ್ ಮೇಲಿನ ಅವಲಂಬನೆಯು ಕಡಿಮೆಯಾಗಿ ಪರಿಸರ ಸಂರಕ್ಷಣೆಯಾಗುತ್ತದೆ ಎಂದು ಪ್ರಧಾನಿ ಹೇಳಿದರು. ಈ ಪ್ರಯತ್ನಗಳು ಈ ಪ್ರದೇಶದ ಆರ್ಥಿಕ ಅಭಿವೃದ್ಧಿಯನ್ನು ವೇಗಗೊಳಿಸುತ್ತವೆ ಮತ್ತು ಪ್ರವಾಸೋದ್ಯಮವನ್ನೂ ಉತ್ತೇಜಿಸುತ್ತವೆ ಎಂದು ಪ್ರಧಾನಿ ಒತ್ತಿ ಹೇಳಿದರು.

ಉತ್ತಮ ಮತ್ತು ಸುಧಾರಿತ ಮೂಲಸೌಕರ್ಯವು ನೋಡಲು ಸುಂದರವಾಗಿರುವುದು ಮಾತ್ರವಲ್ಲದೇ, ಜನರ ಜೀವನವನ್ನು ಸುಲಭಗೊಳಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಉತ್ತಮ ರಸ್ತೆಗಳು ಮತ್ತು ಆಸ್ಪತ್ರೆಗಳ ಕೊರತೆಯಿಂದಾಗಿ ಎಲ್ಲಾ ಸಮುದಾಯಗಳು ಮತ್ತು ವಯೋಮಾನದ ಜನರು ಎದುರಿಸುತ್ತಿದ್ದ ತೊಂದರೆಗಳನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ರಾಷ್ಟ್ರದಾದ್ಯಂತ ಅಭಿವೃದ್ಧಿ ಪಡಿಸುತ್ತಿರುವ ಸುಧಾರಿತ ಮೂಲಸೌಕರ್ಯದ ಲಾಭವನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ಪಡೆಯುತ್ತಿದ್ದಾರೆ ಎಂದು ತಿಳಿಸಿದರು. ವಿದ್ಯಾರ್ಥಿಗಳು, ರೈತರು ಮತ್ತು ಮಧ್ಯಮ ವರ್ಗದವರು ತಮ್ಮ ಗಮ್ಯಸ್ಥಾನಗಳನ್ನು ತಲುಪಲು ಉತ್ತಮ ಸಂಪರ್ಕವನ್ನು ಬಳಸುತ್ತಿದ್ದಾರೆ ಎಂದು ಅವರು ಹೇಳಿದರು. ಕಳೆದ 9 ವರ್ಷಗಳಲ್ಲಿ ಮೂಲಸೌಕರ್ಯಗಳನ್ನು ಆಧುನೀಕರಿಸುವ ನಿಟ್ಟಿನಲ್ಲಿ ಮಾಡಿದ ಕೆಲಸಗಳ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಿಯವರು, ಪ್ರಧಾನಮಂತ್ರಿ ಸಡಕ್ ಯೋಜನೆ ಮೂಲಕ ಹಳ್ಳಿಗಳಲ್ಲಿನ ರಸ್ತೆಗಳ ಜಾಲವು ದ್ವಿಗುಣಗೊಂಡಿದೆ ಮತ್ತು ರಾಷ್ಟ್ರೀಯ ಹೆದ್ದಾರಿ ಜಾಲವು ಶೇ.55 ರಷ್ಟು ಹೆಚ್ಚಾಗಿದೆ. ಕಳೆದ 9 ವರ್ಷಗಳಲ್ಲಿ ದೇಶದ ವಿಮಾನ ನಿಲ್ದಾಣಗಳ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಹೇಳಿದರು.

ಮೊದಲು ಭಾರತವು ಅಂತರ್ಜಾಲ ಜಗತ್ತಿನಲ್ಲಿ ಅಷ್ಟು ಪ್ರಮುಖವಾಗಿರಲಿಲ್ಲ ಎಂದು ಪ್ರಧಾನಿ ಹೇಳಿದರು. ಇಂದು ಭಾರತವು ಅತ್ಯಂತ ಶಕ್ತಿಶಾಲಿ ಡಿಜಿಟಲ್ ಆರ್ಥಿಕತೆಯಾಗಿದೆ. ಸರ್ಕಾರ ಅಗ್ಗದ ಇಂಟರ್ನೆಟ್ ಲಭ್ಯವಾಗುವಂತೆ ಮಾಡಿ ಅದನ್ನು ಹಳ್ಳಿಗಳಿಗೆ ಕೊಂಡೊಯ್ದ ಕಾರಣ ಇದು ಸಾಧ್ಯವಾಯಿತು. ಕಳೆದ 9 ವರ್ಷಗಳಲ್ಲಿ ಪ್ರತಿದಿನ ಸರಾಸರಿ 2.5 ಲಕ್ಷ ಬ್ರಾಡ್‌ಬ್ಯಾಂಡ್ ಸಂಪರ್ಕಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು. ಈ ವೇಗವು ಮೂಲಸೌಕರ್ಯಗಳ ಅಭಿವೃದ್ಧಿಯಲ್ಲೂ ನಡೆಯುತ್ತಿದೆ, ಏಕೆಂದರೆ ಇಂದು, ದೇಶದ ಅಗತ್ಯಗಳಿಗೆ ಅನುಗುಣವಾಗಿ ಮೂಲಸೌಕರ್ಯಗಳನ್ನು ನಿರ್ಮಿಸಲಾಗುತ್ತಿದೆ. ಈ ಹಿಂದೆ ರಾಜಕೀಯ ಲಾಭ-ನಷ್ಟಗಳನ್ನು ಅಳೆದು ತೂಗಿ ರೈಲು ಮತ್ತು ರಸ್ತೆ ಯೋಜನೆಗಳನ್ನು ಘೋಷಿಸಲಾಗುತ್ತಿತ್ತು. ನಾವು ಇಡೀ ದೇಶಕ್ಕಾಗಿ ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್‌ ತಂದಿದ್ದೇವೆ. ಆದ್ದರಿಂದ ದೇಶದಲ್ಲಿ ಅಗತ್ಯವಿರುವಲ್ಲೆಲ್ಲಾ ಮೂಲಸೌಕರ್ಯಗಳನ್ನು ತ್ವರಿತ ಗತಿಯಲ್ಲಿ ನಿರ್ಮಿಸಲಾಗುತ್ತದೆ ಎಂದು ಅವರು ಹೇಳಿದರು.

ಸಾಮಾಜಿಕ ಮೂಲಸೌಕರ್ಯಗಳ ಮೇಲೆ ಅಭೂತಪೂರ್ವ ಗಮನ ಹರಿಸುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ವಸತಿ, ಶೌಚಾಲಯಗಳು, ಅಡುಗೆ ಅನಿಲ, ಆಸ್ಪತ್ರೆಗಳು ಮತ್ತು ಕುಡಿಯುವ ನೀರಿನಂತಹ ಪ್ರಮುಖ ಪ್ರದೇಶಗಳಲ್ಲಿದ್ದ ಅಭಾವದ ದಿನಗಳನ್ನು ನೆನಪಿಸಿಕೊಂಡರು. ಈ ಕ್ಷೇತ್ರಗಳ ಸಮಸ್ಯೆಗಳನ್ನು ಹೇಗೆ ಪರಿಹರಿಸಲಾಗಿದೆ ಮತ್ತು ಈ ಎಲ್ಲಾ ಸೌಲಭ್ಯಗಳನ್ನು ಹೇಗೆ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಅವರು ವಿವರಿಸಿದರು. ಮುಂದಿನ 25 ವರ್ಷಗಳಲ್ಲಿ ಯುವಕರು ತಮ್ಮ ಸಂಕಲ್ಪಗಳನ್ನು ಸಾಕಾರಗೊಳಿಸಲು ನಾವು ಇಂದು ಎಲ್ಲಾ ಸಂಪನ್ಮೂಲಗಳನ್ನು ಒದಗಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಭಗವಾನ್ ಬಸವೇಶ್ವರರ ಕೊಡುಗೆಗಳನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಅನುಭವ ಮಂಟಪದ ಸ್ಥಾಪನೆಯು ಹಲವು ಕೊಡುಗೆಗಳ ಪೈಕಿ ಪ್ರಮುಖವಾದುದು ಎಂದು ಉಲ್ಲೇಖಿಸಿದರು. ಈ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪ್ರಪಂಚದಾದ್ಯಂತ ಅಧ್ಯಯನ ಮಾಡಲಾಗಿದೆ ಎಂದು ಹೇಳಿದರು. ಲಂಡನ್‌ನಲ್ಲಿ ಭಗವಾನ್ ಬಸವೇಶ್ವರರ ಪ್ರತಿಮೆಯನ್ನು ಉದ್ಘಾಟಿಸಿದ್ದನ್ನು ಅವರು ಸ್ಮರಿಸಿದರು. ಆದರೆ, ಲಂಡನ್‌ನಲ್ಲಿಯೇ ಭಾರತದ ಪ್ರಜಾಪ್ರಭುತ್ವವನ್ನು ಪ್ರಶ್ನಿಸಿರುವುದು ದುರದೃಷ್ಟಕರ ಎಂದು ಪ್ರಧಾನಿ ಹೇಳಿದರು. ಭಾರತದ ಪ್ರಜಾಪ್ರಭುತ್ವದ ಬೇರುಗಳು ನಮ್ಮ ಶತಮಾನಗಳಷ್ಟು ಹಳೆಯದಾದ ಇತಿಹಾಸದಲ್ಲಿವೆ. ಜಗತ್ತಿನ ಯಾವುದೇ ಶಕ್ತಿಯು ಭಾರತದ ಪ್ರಜಾಸತ್ತಾತ್ಮಕ ಪರಂಪರೆಗಳಿಗೆ ಧಕ್ಕೆ ತರಲು ಸಾಧ್ಯವಿಲ್ಲ ಎಂದು ಪ್ರಧಾನಿ ತಿಳಿಸಿದರು. ಇದರ ಹೊರತಾಗಿಯೂ, ಕೆಲವರು ನಿರಂತರವಾಗಿ ಭಾರತದ ಪ್ರಜಾಪ್ರಭುತ್ವವನ್ನು ಪ್ರಶ್ನಿಸುತ್ತಿದ್ದಾರೆ. ಇಂತಹವರು ಬಸವೇಶ್ವರ, ಕರ್ನಾಟಕ ಹಾಗೂ ದೇಶದ ಜನತೆಗೆ ಅವಮಾನ ಮಾಡುತ್ತಿದ್ದಾರೆ. ಇಂತಹವರಿಂದ ಕರ್ನಾಟಕದ ಜನತೆ ಎಚ್ಚರವಾಗಿರಬೇಕು ಎಂದು ಹೇಳಿದರು.

ಭಾರತದ ಟೆಕ್-ಭವಿಷ್ಯದ ಗುರುತಾಗಿರುವ ಕರ್ನಾಟಕದ ಅಸ್ಮಿತೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಒತ್ತು ನೀಡಬೇಕು ಎಂದು ಪ್ರಧಾನಿ ಹೇಳಿದರು. ಕರ್ನಾಟಕವು ಹೈಟೆಕ್ ಭಾರತದ ಎಂಜಿನ್, ರಾಜ್ಯದ ಈ ಹೈಟೆಕ್ ಎಂಜಿನ್‌ಗೆ ಶಕ್ತಿ ತುಂಬಲು ಡಬಲ್ ಇಂಜಿನ್ ಸರ್ಕಾರದ ಅಗತ್ಯವಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು ತಮ್ಮ ಮಾತು ಮುಗಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ ಜೋಶಿ ಮತ್ತು ಕರ್ನಾಟಕ ಸರ್ಕಾರದ ಸಚಿವರುಗಳು ಉಪಸ್ಥಿತರಿದ್ದರು.

ಹಿನ್ನೆಲೆ

ಪ್ರಧಾನಮಂತ್ರಿಯವರು ಐಐಟಿ ಧಾರವಾಡವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಫೆಬ್ರುವರಿ 2019 ರಲ್ಲಿ ಪ್ರಧಾನ ಮಂತ್ರಿಯವರು ಈ ಸಂಸ್ಥೆಗೆ ಅಡಿಪಾಯ ಹಾಕಿದ್ದರು. 850 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. 850 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಸಂಸ್ಥೆಯು ಪ್ರಸ್ತುತ 4-ವರ್ಷದ ಬಿ.ಟೆಕ್ ಕೋರ್ಸ್‌, ತರ-ಶಿಸ್ತೀಯ 5-ವರ್ಷದ ಬಿಎಸ್-ಎಂಎಸ್, ಎಂ.ಟೆಕ್ ಮತ್ತು ಪಿಎಚ್.ಡಿ. ಕೋರ್ಸ್‌ ಗಳನ್ನು ಹೊಂದಿದೆ.

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ನಿಲ್ದಾಣದಲ್ಲಿ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ಅನ್ನು ಸಹ ಪ್ರಧಾನಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ದಾಖಲೆಯನ್ನು ಇತ್ತೀಚೆಗೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗುರುತಿಸಿದೆ. 1507 ಮೀ ಉದ್ದದ ಪ್ಲಾಟ್‌ಫಾರ್ಮ್ ಅನ್ನು ಸುಮಾರು 20 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಹೊಸಪೇಟೆ-ಹುಬ್ಬಳ್ಳಿ-ತಿನೈಘಾಟ್ ವಿಭಾಗದ ವಿದ್ಯುದ್ದೀಕರಣ ಮತ್ತು ಮೇಲ್ದರ್ಜೆಗೇರಿಸಿದ ಹೊಸಪೇಟೆ ರೈಲು ನಿಲ್ದಾಣವನ್ನು ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಿದರು. 530 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ವಿದ್ಯುದ್ದೀಕರಣ ಯೋಜನೆಯು ತಡೆರಹಿತ ರೈಲು ಕಾರ್ಯಾಚರಣೆಯನ್ನು ಸಾಧ್ಯವಾಗಿಸುತ್ತದೆ. ಹೊಸಪೇಟೆ ನಿಲ್ದಾಣವನ್ನು ಪುನರಾಭಿವೃದ್ಧಿ ಮಾಡಲಾಗಿದ್ದು, ಪ್ರಯಾಣಿಕರಿಗೆ ಅನುಕೂಲಕರ ಮತ್ತು ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಇದನ್ನು ಹಂಪಿ ಸ್ಮಾರಕಗಳನ್ನು ಹೋಲುವಂತೆ ವಿನ್ಯಾಸಗೊಳಿಸಲಾಗಿದೆ.

ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿಯ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿಯವರು ನೆರವೇರಿಸಿದರು. ಈ ಯೋಜನೆಗಳ ಒಟ್ಟು ಅಂದಾಜು ವೆಚ್ಚ ಸುಮಾರು 520 ಕೋಟಿ ರೂ.ಗಳು. ಈ ಪ್ರಯತ್ನಗಳು ನೈರ್ಮಲ್ಯ, ಸುರಕ್ಷಿತ ಮತ್ತು ಕಾರ್ಯಸಮರ್ಥ ಸಾರ್ವಜನಿಕ ಸ್ಥಳಗಳನ್ನು ನಿರ್ಮಿಸುವ ಮೂಲಕ ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತವೆ ಮತ್ತು ಪಟ್ಟಣವನ್ನು ಭವಿಷ್ಯದ ನಗರ ಕೇಂದ್ರವಾಗಿ ಪರಿವರ್ತಿಸುತ್ತವೆ.

ಜಯದೇವ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಶಂಕುಸ್ಥಾಪನೆಯನ್ನೂ ಪ್ರಧಾನಮಂತ್ರಿಯವರು ನೆರವೇರಿಸಿದರು. ಸುಮಾರು 250 ಕೋಟಿ ರೂಪಾಯಿ ವೆಚ್ಚದಲ್ಲಿ ಆಸ್ಪತ್ರೆಯನ್ನು ಅಭಿವೃದ್ಧಿಪಡಿಸಲಾಗುವುದು ಮತ್ತು ಆಸ್ಪತ್ರೆಯು ಈ ಪ್ರದೇಶದ ಜನರಿಗೆ ತೃತೀಯ ಹೃದ್ರೋಗ ಚಿಕಿತ್ಸೆ ಒದಗಿಸಲಿದೆ. ಈ ಪ್ರದೇಶದಲ್ಲಿ ನೀರು ಪೂರೈಕೆಯನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಪ್ರಧಾನ ಮಂತ್ರಿಯವರು ಧಾರವಾಡ ಬಹುಗ್ರಾಮ ನೀರು ಸರಬರಾಜು ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದು, ಇದನ್ನು 1040 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಸುಮಾರು 150 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ತುಪ್ಪರಿಹಳ್ಳ ಪ್ರವಾಹ ಹಾನಿ ನಿಯಂತ್ರಣ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಯೋಜನೆಯು ಪ್ರವಾಹದಿಂದ ಉಂಟಾಗುವ ಹಾನಿಯನ್ನು ತಗ್ಗಿಸುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ತಡೆಗೋಡೆಗಳು ಮತ್ತು ಒಡ್ಡುಗಳನ್ನು ನಿರ್ಮಿಸಲಾಗುವುದು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
ISRO achieves milestone with successful sea-level test of CE20 cryogenic engine

Media Coverage

ISRO achieves milestone with successful sea-level test of CE20 cryogenic engine
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 13 ಡಿಸೆಂಬರ್ 2024
December 13, 2024

Milestones of Progress: Appreciation for PM Modi’s Achievements