ಇಂದು ಉದ್ಘಾಟನೆಗೊಳ್ಳುತ್ತಿರುವ ದೆಹಲಿ-ಡೆಹ್ರಾಡೂನ್ ಎಕನಾಮಿಕ್ ಕಾರಿಡಾರ್ ಒಂದು ವಿಶ್ವದರ್ಜೆಯ ಮೂಲಸೌಕರ್ಯ ಯೋಜನೆಯಾಗಿದ್ದು, ಇದು ಸಂಪರ್ಕವನ್ನು ಬಲಪಡಿಸುತ್ತದೆ ಮತ್ತು ಆರ್ಥಿಕತೆ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತದೆ: ಪ್ರಧಾನಮಂತ್ರಿ
ಉತ್ತರಾಖಂಡ ರಾಜ್ಯ ರಚನೆಯಾಗಿ 25 ವರ್ಷಗಳು ಪೂರೈಸಿ ಈಗ 26ನೇ ವರ್ಷಕ್ಕೆ ಕಾಲಿಟ್ಟಿದೆ; ಇಂದು ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯೊಂದಿಗೆ ಮತ್ತೊಂದು ಮಹತ್ವದ ಮೈಲಿಗಲ್ಲು ಸೇರ್ಪಡೆಯಾಗಿದೆ: ಪ್ರಧಾನಮಂತ್ರಿ
ಡೆಹ್ರಾಡೂನ್-ದೆಹಲಿ ಎಕನಾಮಿಕ್ ಕಾರಿಡಾರ್ ಇಡೀ ಪ್ರದೇಶದ ಚಿತ್ರಣವನ್ನೇ ಬದಲಿಸಲಿದೆ: ಪ್ರಧಾನಮಂತ್ರಿ
ಈ ಕಾರಿಡಾರ್ ಸಮಯವನ್ನು ಉಳಿಸುತ್ತದೆ, ಪ್ರಯಾಣವು ಅಗ್ಗ ಮತ್ತು ವೇಗವಾಗುತ್ತದೆ, ಜನರು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕಡಿಮೆ ಖರ್ಚು ಮಾಡುತ್ತಾರೆ ಮತ್ತು ಪ್ರಯಾಣ ದರ ಹಾಗೂ ಸರಕು ಸಾಗಣೆ ವೆಚ್ಚಗಳು ಕಡಿಮೆಯಾಗುತ್ತವೆ; ಇದು ಉದ್ಯೋಗಾವಕಾಶಗಳನ್ನೂ ಹೆಚ್ಚಿಸುತ್ತದೆ: ಪ್ರಧಾನಮಂತ್ರಿ
ನಮ್ಮ ಪರ್ವತಗಳು, ಅರಣ್ಯ ಪ್ರದೇಶಗಳು, ದೇವಭೂಮಿಯ ಈ ಪರಂಪರೆಯು ಅತ್ಯಂತ ಪವಿತ್ರವಾದ ಸ್ಥಳಗಳಾಗಿವೆ; ಇಂತಹ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಕರ್ತವ್ಯ: ಪ್ರಧಾನಮಂತ್ರಿ
ಈ ಪ್ರದೇಶಗಳಲ್ಲಿನ ಪ್ಲಾಸ್ಟಿಕ್ ಬಾಟಲಿಗಳು, ಕಸದ ರಾಶಿಗಳು ದೇವಭೂಮಿಯ ಪಾವಿತ್ರ್ಯತೆಗೆ ಧಕ್ಕೆ ತರುತ್ತವೆ; ನಮ್ಮ ದೇವಭೂಮಿಯ ತಾಣಗಳನ್ನು, ಯಾತ್ರಾ ಸ್ಥಳಗಳನ್ನು ಸ್ವಚ್ಛವಾಗಿ ಮತ್ತು ಸುಂದರವಾಗಿಟ್ಟುಕೊಳ್ಳುವುದು ಬಹಳ ಅವಶ್ಯಕ: ಪ್ರಧಾನಮಂತ್ರಿ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೆಹಲಿ-ಡೆಹ್ರಾಡೂನ್ ಎಕನಾಮಿಕ್ ಕಾರಿಡಾರ್ ಅನ್ನು ಉದ್ಘಾಟಿಸಿದರು, ಇದು ಉತ್ತರಾಖಂಡ ಮತ್ತು ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿಯಲ್ಲಿ ಒಂದು ಐತಿಹಾಸಿಕ ಕ್ಷಣವಾಗಿದೆ. ಡೆಹ್ರಾಡೂನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಬೈಸಾಖಿ, ಬೊಹಾಗ್ ಬಿಹು ಮತ್ತು ಪುತಾಂಡು ಹಬ್ಬಗಳ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯಗಳನ್ನು ಕೋರಿದರು. ಈ ಉದ್ಘಾಟನೆಯು ಭಾರತದಾದ್ಯಂತ ಹಬ್ಬದ ಸಂಭ್ರಮದ ಸಮಯದಲ್ಲಿ ನಡೆಯುತ್ತಿರುವುದಕ್ಕೆ  ಸಂತೋಷ ವ್ಯಕ್ತಪಡಿಸಿದರು.

ದೇವಭೂಮಿಯ ಪವಿತ್ರ ಭೂಮಿಗೆ ನಮಸ್ಕರಿಸಿದ ಪ್ರಧಾನಮಂತ್ರಿಯವರು, ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥಗಳನ್ನು ಒಳಗೊಂಡ ಚಾರ್ ಧಾಮ್ ಯಾತ್ರೆಯು ಮುಂದಿನ ದಿನಗಳಲ್ಲಿ ಪ್ರಾರಂಭವಾಗಲಿದ್ದು, ದೇಶದಾದ್ಯಂತ ಲಕ್ಷಾಂತರ ಜನರು ಈ ಕ್ಷಣಕ್ಕಾಗಿ ಭಕ್ತಿಯಿಂದ ಕಾಯುತ್ತಿದ್ದಾರೆ ಎಂದು ತಿಳಿಸಿದರು. ಅವರು ಪಂಚ ಬದರಿ, ಪಂಚ ಕೇದಾರ, ಪಂಚ ಪ್ರಯಾಗ ಮತ್ತು ಈ ಪ್ರದೇಶದ ಪೂಜ್ಯ ದೇವತೆಗಳಾದ ಮಾ ಸಂಕಟ್ಲಾ ಮತ್ತು ಮಾ ದಾತ್ ಕಾಲಿಗೆ  ಪ್ರಾರ್ಥನೆ ಸಲ್ಲಿಸಿದರು. ಕಾರ್ಯಕ್ರಮಕ್ಕೂ ಮುನ್ನ ಅವರು ಮಾ ದಾತ್ ಕಾಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. "ಇಷ್ಟು ದೊಡ್ಡ ಮಟ್ಟದ ಯೋಜನೆಯನ್ನು ಪೂರ್ಣಗೊಳಿಸಲು ಮಾ ದಾತ್ ಕಾಲಿಯ ಆಶೀರ್ವಾದವು ಒಂದು ದೊಡ್ಡ ಶಕ್ತಿಯಾಗಿದೆ" ಎಂದು ಪ್ರಧಾನಮಂತ್ರಿ ಶ್ರೀ ಮೋದಿ ತಿಳಿಸಿದರು.

 

ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ ಪ್ರಧಾನಮಂತ್ರಿಯವರು ಇಡೀ ರಾಷ್ಟ್ರದ ಪರವಾಗಿ ಬಾಬಾಸಾಹೇಬರಿಗೆ ನಮನ ಸಲ್ಲಿಸಿದರು. ಬಡವರು ಮತ್ತು ತುಳಿತಕ್ಕೊಳಗಾದವರಿಗೆ ನ್ಯಾಯ ಕೊಡಿಸುವಲ್ಲಿ ಅಂಬೇಡ್ಕರ್ ಅವರ ಜೀವಮಾನದ ಬದ್ಧತೆಯನ್ನು  ಉಲ್ಲೇಖಿಸಿದ ಅವರು, ಕಳೆದ ದಶಕದಲ್ಲಿ ಸರ್ಕಾರದ ನೀತಿಗಳು 370ನೇ ವಿಧಿಯ ರದ್ದತಿಯಿಂದ ಹಿಡಿದು ಡಜನ್ ಗಟ್ಟಲೆ ಜಿಲ್ಲೆಗಳಲ್ಲಿ ಮಾವೋವಾದ ಮತ್ತು ನಕ್ಸಲಿಸಂ ನಿರ್ಮೂಲನೆಯವರೆಗೆ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಶ್ರಮಿಸಿವೆ ಎಂದು ತಿಳಿಸಿದರು. "ಏಕರೂಪ ನಾಗರಿಕ ಸಂಹಿತೆಯ ಸಾಂವಿಧಾನಿಕ ಆಶಯವನ್ನು ಮುಂದುವರಿಸುವ ಮೂಲಕ ಉತ್ತರಾಖಂಡ ರಾಜ್ಯ ಇಡೀ ದೇಶಕ್ಕೆ ದಾರಿ ತೋರಿಸಿದೆ" ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಪ್ರತಿಪಾದಿಸಿದರು.

ಉತ್ತರಾಖಂಡವು 26ನೇ ವರ್ಷಕ್ಕೆ ಕಾಲಿಡುತ್ತಿರುವ ಪ್ರಯಾಣವನ್ನು ಮೆಲುಕು ಹಾಕಿದ ಪ್ರಧಾನಮಂತ್ರಿಯವರು, ಈ ಶತಮಾನದ ಮೂರನೇ ದಶಕವು ಉತ್ತರಾಖಂಡದ ದಶಕವಾಗಲಿದೆ ಎಂದು ತಾವು ಈ ಹಿಂದೆ ಘೋಷಿಸಿದ್ದನ್ನು ಸ್ಮರಿಸಿದರು. ಪ್ರಸ್ತುತ ಸರ್ಕಾರದ ನೀತಿಗಳು ಮತ್ತು ಜನರ ಪರಿಶ್ರಮದಿಂದ ಈ ಯುವ ರಾಜ್ಯವು ತನ್ನ ಅಭಿವೃದ್ಧಿಯಲ್ಲಿ ಹೊಸ ಆಯಾಮಗಳನ್ನು ಸೇರಿಸುತ್ತಿದೆ ಎಂದು ಅವರು ಗಮನಿಸಿದರು. "ಈ ಎಕ್ಸ್‌ಪ್ರೆಸ್‌ವೇ ಉತ್ತರಾಖಂಡದ ಬೆಳವಣಿಗೆಗೆ ಹೊಸ ವೇಗವನ್ನು ನೀಡುತ್ತದೆ" ಎಂದು ಶ್ರೀ ಮೋದಿಯವರು ಹೇಳಿದರು.

 

ರಾಷ್ಟ್ರದ ಭವಿಷ್ಯವು ಅದರ ರಸ್ತೆಗಳು, ಹೆದ್ದಾರಿಗಳು, ಎಕ್ಸ್‌ಪ್ರೆಸ್‌ವೇಗಳು, ವಾಯುಮಾರ್ಗಗಳು, ರೈಲ್ವೆ ಮತ್ತು ಜಲಮಾರ್ಗಗಳಲ್ಲಿ ಬರೆಯಲ್ಪಟ್ಟಿದೆ ಎಂದು ಪ್ರಧಾನಮಂತ್ರಿ ಅಭಿಪ್ರಾಯಪಟ್ಟರು. ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ಅಭೂತಪೂರ್ವ ವೇಗವನ್ನು ಒತ್ತಿ ಹೇಳಿದ ಅವರು, 2014 ಕ್ಕಿಂತ ಮೊದಲು ಮೂಲಸೌಕರ್ಯ ವೆಚ್ಚವು ವರ್ಷಕ್ಕೆ ₹2 ಲಕ್ಷ ಕೋಟಿಗಿಂತ ಕಡಿಮೆಯಿತ್ತು, ಈಗ ಅದು ವಾರ್ಷಿಕವಾಗಿ ₹12 ಲಕ್ಷ ಕೋಟಿಗಿಂತ ಹೆಚ್ಚು ಅಂದರೆ ಆರಕ್ಕಿಂತ ಹೆಚ್ಚು ಪಟ್ಟು ಹೆಚ್ಚಾಗಿದೆ ಎಂದು ಸೂಚಿಸಿದರು. "ಉತ್ತರಾಖಂಡ ಒಂದರಲ್ಲೇ ₹2.25 ಲಕ್ಷ ಕೋಟಿಗಿಂತ ಹೆಚ್ಚಿನ ಮೌಲ್ಯದ ಮೂಲಸೌಕರ್ಯ ಯೋಜನೆಗಳು ಪ್ರಸ್ತುತ ನಡೆಯುತ್ತಿವೆ" ಎಂದು ಶ್ರೀ ಮೋದಿ ಅವರು ದೃಢಪಡಿಸಿದರು.

ದೆಹಲಿ-ಪಶ್ಚಿಮ, ಯುಪಿ-ಉತ್ತರಾಖಂಡ ಪ್ರದೇಶದ ಇತ್ತೀಚಿನ ಅಭಿವೃದ್ಧಿಗಳನ್ನು ಪಟ್ಟಿ ಮಾಡಿದ ಪ್ರಧಾನಮಂತ್ರಿಯವರು, ಅತಿ ಕಡಿಮೆ ಅವಧಿಯಲ್ಲಿ ದೆಹಲಿ ಮೆಟ್ರೋ ವಿಸ್ತರಣೆ, ಮೀರತ್‌ನಲ್ಲಿ ಮೆಟ್ರೋ ಸೇವೆಗಳ ಆರಂಭ, ದೆಹಲಿ-ಮೀರತ್ ನಮೋ ಭಾರತ್ ರೈಲು ಉದ್ಘಾಟನೆ, ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಎಂಆರ್‌ಒ (MRO) ಸೌಲಭ್ಯದ ಆರಂಭವನ್ನು ಗಮನಿಸಿದರು. "ಇಡೀ ದೇಶಾದ್ಯಂತ ಮೂಲಸೌಕರ್ಯ ನಿರ್ಮಾಣವಾಗುತ್ತಿರುವ ಪ್ರಮಾಣವನ್ನು ಒಮ್ಮೆ ಕಲ್ಪಿಸಿಕೊಳ್ಳಿ, ಈ ಒಂದು ಚಿಕ್ಕ ಪ್ರದೇಶದಲ್ಲಿ ನಡೆಯುತ್ತಿರುವುದು ಅದರ ಒಂದು ಕಿರುನೋಟವಷ್ಟೇ" ಎಂದು ಶ್ರೀ ಮೋದಿ ಅವರು ಹೇಳಿದರು.

ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್‌ನ ಪರಿವರ್ತನಾ ಪ್ರಯೋಜನಗಳನ್ನು ವಿವರಿಸಿದ ಪ್ರಧಾನಮಂತ್ರಿ ಅವರು, ಈ ಪ್ರದೇಶದ ಮೇಲೆ ಯೋಜನೆಯ ಬಹು ಆಯಾಮದ ಪ್ರಭಾವವನ್ನು ಉಲ್ಲೇಖಿಸಿದರು. ಈ ಎಕ್ಸ್‌ಪ್ರೆಸ್‌ವೇ ಪ್ರಯಾಣಿಕರ ಪ್ರಯಾಣದ ಸಮಯ ಮತ್ತು ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ, ಇದು ಗಣನೀಯ ಇಂಧನ ಉಳಿತಾಯ ಮತ್ತು ಕಡಿಮೆ ಸರಕು ಸಾಗಣೆ ವೆಚ್ಚಕ್ಕೆ ಕಾರಣವಾಗುತ್ತದೆ ಎಂದು ಅವರು ಗಮನಿಸಿದರು. ಈಗಾಗಲೇ ನಿರ್ಮಾಣಕ್ಕಾಗಿ ₹12,000 ಕೋಟಿ ಹೂಡಿಕೆಯಾಗಿದ್ದು, ಈ ಯೋಜನೆಯು ಸಾವಿರಾರು ಎಂಜಿನಿಯರ್‌ಗಳು, ಕಾರ್ಮಿಕರು ಮತ್ತು ಸಾರಿಗೆ ಕಾರ್ಮಿಕರಿಗೆ ಜೀವನೋಪಾಯವನ್ನು ಒದಗಿಸುವ ಪ್ರಮುಖ ಉದ್ಯೋಗ ಇಂಜಿನ್ ಆಗಿ ಹೊರಹೊಮ್ಮಿದೆ. ರೈತರು ಮತ್ತು ಪಶುಪಾಲಕರು ತಮ್ಮ ಉತ್ಪನ್ನಗಳನ್ನು ಹೆಚ್ಚಿನ ವೇಗದೊಂದಿಗೆ ದೊಡ್ಡ ಮಾರುಕಟ್ಟೆಗಳಿಗೆ ತಲುಪಿಸುವುದರಿಂದ ಅವರಿಗೂ ಪ್ರಯೋಜನವಾಗಲಿದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. ಗಾಜಿಯಾಬಾದ್, ಬಾಗ್‌ಪತ್, ಬರೌತ್, ಶಾಮ್ಲಿ ಮತ್ತು ಸಹರಾನ್‌ಪುರದ ಮೂಲಕ ಹಾದುಹೋಗುವ ಈ ಕಾರಿಡಾರ್ ಉತ್ತರ ಪ್ರದೇಶದ ಈ ನಗರಗಳಿಗೆ ಮರುಜೀವ ನೀಡಲು ಸಿದ್ಧವಾಗಿದೆ ಎಂದು ಅವರು ಗಮನಿಸಿದರು. "ಇದು ಕೇವಲ ರಸ್ತೆಯಲ್ಲ; ಇದು ಇಡೀ ಪ್ರದೇಶದಾದ್ಯಂತ ವ್ಯಾಪಾರ, ಕೈಗಾರಿಕೆ, ಗೋದಾಮು ಮತ್ತು ಲಾಜಿಸ್ಟಿಕ್ಸ್ ಸೌಲಭ್ಯಗಳಿಗೆ ಹೊಸ ದಾರಿಗಳನ್ನು ತೆರೆಯುತ್ತದೆ" ಎಂದು ಶ್ರೀ ಮೋದಿ ಅವರು ಹೇಳಿದರು.

 

ಹೊಸ ಎಕ್ಸ್‌ಪ್ರೆಸ್‌ವೇನ ಪ್ರವಾಸೋದ್ಯಮ ಸಾಮರ್ಥ್ಯವನ್ನು ಒತ್ತಿಹೇಳಿದ ಪ್ರಧಾನಮಂತ್ರಿ ಅವರು, ಡೆಹ್ರಾಡೂನ್, ಹರಿದ್ವಾರ, ಋಷಿಕೇಶ, ಮುಸ್ಸೋರಿ ಮತ್ತು ಚಾರ್ ಧಾಮ್ ಸರ್ಕ್ಯೂಟ್‌ಗಳು ಈಗ ಹೆಚ್ಚು ಸುಲಭವಾಗಿ ತಲುಪಬಹುದಾದ ತಾಣಗಳಾಗುತ್ತವೆ ಎಂದು ತಿಳಿಸಿದರು. ಉತ್ತರಾಖಂಡವು ಚಳಿಗಾಲದ ಪ್ರವಾಸೋದ್ಯಮ, ಚಳಿಗಾಲದ ಕ್ರೀಡೆಗಳು ಮತ್ತು ಡೆಸ್ಟಿನೇಶನ್ ವೆಡ್ಡಿಂಗ್‌ಗಳಿಗೆ ಪ್ರಮುಖ ತಾಣವಾಗಿ ಬೆಳೆಯುತ್ತಿದೆ ಎಂದು ಅವರು ಹೇಳಿದರು. ಉತ್ತರಾಖಂಡದ ಆರ್ಥಿಕತೆಗೆ ವರ್ಷವಿಡೀ ಪ್ರವಾಸೋದ್ಯಮದ ಪ್ರಾಮುಖ್ಯತೆಯನ್ನು ಗಮನಿಸಿದ ಅವರು, ಚಳಿಗಾಲದ ಯಾತ್ರೆಗಳಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ ಎಂದು ಹಂಚಿಕೊಂಡರು. ಆದಿ ಕೈಲಾಶ್ ಮತ್ತು ಓಂ ಪರ್ವತಕ್ಕೆ ಭೇಟಿ ನೀಡುವವರ ಸಂಖ್ಯೆ ಕೆಲವೇ ನೂರರಿಂದ 2025 ರಲ್ಲಿ 36,000 ಕ್ಕೆ ಬೆಳೆದಿದೆ, ಆದರೆ ಚಳಿಗಾಲದ ಚಾರ್ ಧಾಮ್ ಯಾತ್ರೆಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆ 2024 ರಲ್ಲಿ 80,000 ರಿಂದ 2025 ರಲ್ಲಿ 1.5 ಲಕ್ಷಕ್ಕೆ ಏರಿದೆ. "ಪ್ರವಾಸೋದ್ಯಮ ಬೆಳೆದಾಗ ಎಲ್ಲರಿಗೂ ಪ್ರಯೋಜನವಾಗುತ್ತದೆ - ಹೋಟೆಲ್‌ಗಳು, ಧಾಬಾಗಳು, ಟ್ಯಾಕ್ಸಿಗಳು, ಹೋಮ್ ಸ್ಟೇಗಳು, ಇಡೀ ಸ್ಥಳೀಯ ಆರ್ಥಿಕತೆಗೆ ಉತ್ತೇಜನ ಸಿಗುತ್ತದೆ" ಎಂದು ಶ್ರೀ ಮೋದಿ ಅವರು ಅಭಿಪ್ರಾಯಪಟ್ಟರು.

ಪ್ರಗತಿಯೊಂದಿಗೆ ಪ್ರಕೃತಿ ಮತ್ತು ಸಂಸ್ಕೃತಿಯನ್ನು ಸಮತೋಲನಗೊಳಿಸುವ ಸರ್ಕಾರದ ಬದ್ಧತೆಯನ್ನು ಒತ್ತಿಹೇಳಿದ ಪ್ರಧಾನಮಂತ್ರಿಯವರು, ಎಕ್ಸ್‌ಪ್ರೆಸ್‌ವೇಯ ಭಾಗವಾಗಿ ಸುಮಾರು 12 ಕಿಲೋಮೀಟರ್ ಉದ್ದದ ಎಲಿವೇಟೆಡ್ ವೈಲ್ಡ್ ಲೈಫ್ ಕಾರಿಡಾರ್ ನಿರ್ಮಾಣವನ್ನು ಎತ್ತಿ ತೋರಿಸಿದರು. ಇದು ಆನೆಗಳು ಸೇರಿದಂತೆ ಪ್ರಾಣಿಗಳಿಗೆ ಯಾವುದೇ ಅಡೆತಡೆಯಾಗದಂತೆ ವಿನ್ಯಾಸಗೊಳಿಸಲಾಗಿದೆ. ದೇವಭೂಮಿಯ ಪರ್ವತಗಳು ಮತ್ತು ಕಾಡುಗಳಿಗೆ ಭೇಟಿ ನೀಡುವ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳು ಈ ಪವಿತ್ರ ಸ್ಥಳಗಳನ್ನು ಸ್ವಚ್ಛವಾಗಿ ಮತ್ತು ಪ್ಲಾಸ್ಟಿಕ್ ಮುಕ್ತವಾಗಿಡಲು ಅವರು ಮನವಿ ಮಾಡಿದರು. "ಮೂಲಸೌಕರ್ಯವು ಜನರಿಗೆ ಸೇವೆ ನೀಡುವಾಗ, ಈ ಪ್ರದೇಶಗಳ ವನ್ಯಜೀವಿ ಮತ್ತು ನೈಸರ್ಗಿಕ ಪರಂಪರೆಯನ್ನು ಸಹ ಸಂರಕ್ಷಿಸಬೇಕು ಎಂಬುದು ನಮ್ಮ ಪ್ರಯತ್ನ" ಎಂದು ಶ್ರೀ ಮೋದಿ ಅವರು ಹೇಳಿದರು.

ಮುಂದಿನ ವರ್ಷ ಹರಿದ್ವಾರದಲ್ಲಿ ನಡೆಯಲಿರುವ ಕುಂಭಮೇಳದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ಅವರು, ಈ ಕಾರ್ಯಕ್ರಮವು ಭವ್ಯವಾಗಿ, ದೈವಿಕವಾಗಿ ಮತ್ತು ಸ್ವಚ್ಛವಾಗಿ ನಡೆಯುವಂತೆ ನೋಡಿಕೊಳ್ಳಲು ಎಲ್ಲಾ ಪಾಲುದಾರರಿಗೆ ಕರೆ ನೀಡಿದರು. ಭಾರತದ ಸಾಂಸ್ಕೃತಿಕ ಪ್ರಜ್ಞೆಯ ಜೀವಂತ ಉದಾಹರಣೆಯಾದ ನಂದಾ ದೇವಿ ರಾಜ್ಯಾತ್ ಯಾತ್ರೆಯ ಬಗ್ಗೆಯೂ ಅವರು ಮಾತನಾಡಿದರು. ಇಲ್ಲಿ ನಂದಾ ದೇವಿಯನ್ನು ಮಗಳೆಂದು ಪೂಜಿಸಲಾಗುತ್ತದೆ ಮತ್ತು ಪೂರ್ಣ ಗೌರವದೊಂದಿಗೆ ಬೀಳ್ಕೊಡಲಾಗುತ್ತದೆ, ಮಹಿಳೆಯರ ಗಮನಾರ್ಹ ಭಾಗವಹಿಸುವಿಕೆ ಇದನ್ನು ವಿಶೇಷವಾಗಿಸುತ್ತದೆ. " ರಜ್ಜತ್ ಯಾತ್ರೆಯು ಕೇವಲ ನಂಬಿಕೆಯ ಪ್ರಯಾಣವಲ್ಲ; ಇದು ನಮ್ಮ ಜೀವಂತ ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿಯಾಗಿದೆ" ಎಂದು ಶ್ರೀ ಮೋದಿ ಅವರು ಹೇಳಿದರು.

 

ಮಹಿಳಾ ಸಬಲೀಕರಣದ ವಿಷಯಕ್ಕೆ ಬಂದಾಗ, ಮಹಿಳೆಯರ ಸುರಕ್ಷತೆ, ಭದ್ರತೆ ಮತ್ತು ರಾಜಕೀಯ ಭಾಗವಹಿಸುವಿಕೆಗೆ ಸರ್ಕಾರವು ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ನಾಲ್ಕು ದಶಕಗಳ ಕಾಯುವಿಕೆಯ ನಂತರ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿಯನ್ನು ಖಾತರಿಪಡಿಸುವ ನಾರಿ ಶಕ್ತಿ ವಂದನಾ ಅಧಿನಿಯಮವನ್ನು ಸಂಸತ್ತು ಅಂಗೀಕರಿಸಿದೆ ಎಂದು ಅವರು ಸ್ಮರಿಸಿದರು. ಇದನ್ನು ಮುಂದಕ್ಕೆ ಕೊಂಡೊಯ್ಯಲು ಏಪ್ರಿಲ್ 16 ರಿಂದ ಸಂಸತ್ತಿನಲ್ಲಿ ವಿಶೇಷ ಚರ್ಚೆಯನ್ನು ನಿಗದಿಪಡಿಸಲಾಗಿದೆ ಎಂದು ಅವರು ಘೋಷಿಸಿದರು. ದೇವಭೂಮಿಯ ಮಣ್ಣಿನಿಂದ ಎಲ್ಲಾ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದ ಅವರು, 2029 ರ ಸಾರ್ವತ್ರಿಕ ಚುನಾವಣೆಯಿಂದ ಕಾನೂನು ಜಾರಿಗೆ ಬರುವುದನ್ನು ಖಚಿತಪಡಿಸಿಕೊಳ್ಳಲು ತಿದ್ದುಪಡಿಯನ್ನು ಬೆಂಬಲಿಸುವಂತೆ ಕೋರಿದರು. "ಇದು ಈ ದೇಶದ ಪ್ರತಿ ಸಹೋದರಿ ಮತ್ತು ಮಗಳ ಹಾರೈಕೆಯಾಗಿದೆ ಮತ್ತು ನಾವು ಅದನ್ನು ಸರ್ವಾನುಮತದಿಂದ ಪೂರೈಸಬೇಕು" ಎಂದು ಶ್ರೀ ಮೋದಿ ಅವರು ಹೇಳಿದರು.

 

ಗಢಿ ಕಂಟೋನ್ಮೆಂಟ್‌ನ ಐತಿಹಾಸಿಕ ಸ್ಥಳದಿಂದ ಉತ್ತರಾಖಂಡದ ಹೆಮ್ಮೆಯ ಮಿಲಿಟರಿ ಸಂಪ್ರದಾಯಕ್ಕೆ ನಮನ ಸಲ್ಲಿಸಿದ ಪ್ರಧಾನಮಂತ್ರಿಯವರು, 1962 ರ ಯುದ್ಧದಲ್ಲಿ ರೈಫಲ್‌ಮನ್ ಜಸ್ವಂತ್ ಸಿಂಗ್ ರಾವತ್ ಅವರಂತಹ ಹುತಾತ್ಮರ ಶೌರ್ಯವನ್ನು ಸ್ಮರಿಸಿದರು. ಮಾಜಿ ಸೈನಿಕರಿಗಾಗಿ ಹಲವಾರು ಕಲ್ಯಾಣ ಕ್ರಮಗಳನ್ನು ಅವರು ವಿವರಿಸಿದರು, ಇದರಲ್ಲಿ ಒನ್ ರ್ಯಾಂಕ್ ಒನ್ ಪೆನ್ಷನ್ ಅಡಿಯಲ್ಲಿ ಸುಮಾರು ₹1.25 ಲಕ್ಷ ಕೋಟಿ ವಿತರಣೆ, ಹಿರಿಯ ಸೈನಿಕರ ಆರೋಗ್ಯ ಯೋಜನೆಯ ಬಜೆಟ್‌ನಲ್ಲಿ ಶೇಕಡಾ 36 ರಷ್ಟು ಹೆಚ್ಚಳ, 70 ವರ್ಷ ಮೇಲ್ಪಟ್ಟ ಮಾಜಿ ಸೈನಿಕರಿಗೆ ಮನೆಬಾಗಿಲಿಗೆ ಔಷಧಿ ವಿತರಣೆ, ಮಕ್ಕಳ ಶಿಕ್ಷಣ ಅನುದಾನ ದ್ವಿಗುಣಗೊಳಿಸುವಿಕೆ ಮತ್ತು ಹೆಣ್ಣುಮಕ್ಕಳ ಮದುವೆಯ ನೆರವನ್ನು ₹50,000 ರಿಂದ ₹1 ಲಕ್ಷಕ್ಕೆ ಹೆಚ್ಚಿಸಿರುವುದು ಸೇರಿದೆ. "ಸಶಸ್ತ್ರ ಪಡೆಗಳನ್ನು ಬಲಪಡಿಸುವುದು ಮತ್ತು ನಮ್ಮ ಸೈನಿಕ ಕುಟುಂಬಗಳನ್ನು ಗೌರವಿಸುವುದು ಈ ಸರ್ಕಾರದ ಮೊದಲ ಆದ್ಯತೆಗಳಾಗಿವೆ" ಎಂದು ಶ್ರೀ ಮೋದಿ ಅವರು ದೃಢಪಡಿಸಿದರು.

ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ ಪ್ರಧಾನಮಂತ್ರಿ ಅವರು, ವಿಕಸಿತ ಭಾರತದ ದೃಷ್ಟಿಕೋನವು ಪ್ರಗತಿ, ಪ್ರಕೃತಿ ಮತ್ತು ಸಂಸ್ಕೃತಿಯನ್ನು ಸಮಾನ ಪ್ರಮಾಣದಲ್ಲಿ ಒಳಗೊಂಡಿರಬೇಕು ಎಂದು ಹೇಳಿದರು. ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯ ಸಂದರ್ಭದಲ್ಲಿ ದೆಹಲಿ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಇಡೀ ರಾಷ್ಟ್ರದ ಜನತೆಗೆ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. "ದೇಶಭಕ್ತಿ, ಭಕ್ತಿ ಮತ್ತು ಅಭಿವೃದ್ಧಿಯನ್ನು ಪ್ರತಿಯೊಂದು ಆಯಾಮದಲ್ಲೂ ಸಂಯೋಜಿಸುವುದು, ಹಾಗೆಯೇ ನಾವು ನಿಜವಾದ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುತ್ತೇವೆ" ಎಂದು ಶ್ರೀ ಮೋದಿ ಅವರು ಪ್ರತಿಪಾದಿಸಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
'More strict actions to come against paper leaks': PM Modi announces new Bill push in video message

Media Coverage

'More strict actions to come against paper leaks': PM Modi announces new Bill push in video message
NM on the go

Nm on the go

Always be the first to hear from the PM. Get the App Now!
...
Prime Minister shares a Sanskrit Subhashitam, highlights the importance of fostering beneficial thoughts, words, and actions
July 24, 2026

Prime Minister Shri Narendra Modi shared a Sanskrit Subhashitam today, highlighting how continuous practice in thought, word, and action shapes one's character and direction in life.

The Prime Minister wrote on X;

"कर्मणा मनसा वाचा यदभीक्ष्णं निषेवते।

तदेवापहरत्येनं तस्मात् कल्याणमाचरेत्॥"

Whatever a person continuously practices through their actions, thoughts, and words ultimately shapes their personality and draws them in that very direction; therefore, one should always give space only to beneficial subjects in one's thoughts and conversations.