ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉತ್ತರಾಖಂಡದಲ್ಲಿ ನಮಾಮಿ ಗಂಗೆ ಅಭಿಯಾನದ ಅಡಿಯಲ್ಲಿ 6 ಬೃಹತ್ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು.

ಶ್ರೀ ನರೇಂದ್ರ ಮೋದಿ ಅವರು ಹರಿದ್ವಾರದಲ್ಲಿ ಗಂಗಾನದಿ ಕುರಿತ ಪ್ರಪ್ರಥಮ ಗಂಗಾವಲೋಕನ ವಸ್ತುಸಂಗ್ರಹಾಲಯವನ್ನೂ ಉದ್ಘಾಟಿಸಿದರು. “ರೋಯಿಂಗ್ ಡೌನ್ ದಿ ಗ್ಯಾಂಜಿಸ್” ಎಂಬ ಹೆಸರಿನ ಪುಸ್ತಕವನ್ನು ಅನಾವರಣ ಮಾಡಿದ ಅವರು ಜಲ ಜೀವನ ಅಭಿಯಾನದ ಹೊಸ ಲಾಂಛನವನ್ನೂ ಬಿಡುಗಡೆ ಮಾಡಿದರು. ಪ್ರಧಾನಮಂತ್ರಿಯವರು ‘ಜಲ್ ಜೀವನ ಅಭಿಯಾನದ ಅಡಿಯಲ್ಲಿ ಜಲ ಸಮಿತಿ ಮತ್ತು ಗ್ರಾಮ ಪಂಚಾಯಿತಿಗಳಿಗೆ ಮಾರ್ಗದರ್ಶಕ’ವನ್ನೂ ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಜಲ್ ಜೀವನ ಅಭಿಯಾನ ದೇಶದ ಪ್ರತಿಯೊಂದು ಗ್ರಾಮೀಣ ವಸತಿಗೂ ಕೊಳವೆಯ ನೀರು ಸಂಪರ್ಕ ಕಲ್ಪಿಸುವ ಗುರಿ ಹೊಂದಿದೆ ಎಂದರು. ಅಭಿಯಾನದ ಹೊಸ ಲಾಂಛನ ಪ್ರತಿ ಹನಿ ನೀರು ಸಂರಕ್ಷಿಸುವ ಅಗತ್ಯದ ಬಗ್ಗೆ ನಿರಂತರವಾಗಿ ಸ್ಫೂರ್ತಿ ನೀಡುತ್ತದೆ ಎಂದರು.

ಮಾರ್ಗದರ್ಶಕದ ಪ್ರಸ್ತಾಪ ಮಾಡಿದ ಪ್ರಧಾನಮಂತ್ರಿಯವರು, ಗ್ರಾಮ ಪಂಚಾಯ್ತಿ, ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರು ಮತ್ತು ಸರ್ಕಾರಿ ಯಂತ್ರಕ್ಕೂ ಇದು ಅತ್ಯಂತ ಮಹತ್ವದ್ದು ಎಂದರು.

ರೋಯಿಂಗ್ ಡೌನ್ ದಿ ಗ್ಯಾಂಜಿಸ್ ಪುಸ್ತಕದ ಕುರಿತಂತೆ ಮಾತನಾಡಿದ ಅವರು, ಇದು ಗಂಗಾ ನದಿ ಹೇಗೆ ನಮ್ಮ ಸಂಸ್ಕೃತಿಯ ವೈಭವದ ಸಂಕೇತ, ನಂಬಿಕೆ ಮತ್ತು ಪರಂಪರೆಯಾಗಿದೆ ಎಂಬುದನ್ನು ವಿವರಿಸುತ್ತದೆ ಎಂದರು.

ಉತ್ತರಾಖಂಡದ ತನ್ನ ಮೂಲದಿಂದ ಪಶ್ಚಿಮಬಂಗಾಳದವರೆಗೆ ದೇಶದ ಶೇ.50ರಷ್ಟು ಜೀವನಕ್ಕೆ ಆಧಾರವಾಗಿ ಮಹತ್ವದ ಪಾತ್ರ ವಹಿಸುತ್ತಿರುವ ಗಂಗಾ ನದಿಯನ್ನು ನಿರ್ಮಲವಾಗಿಡುವ ಮಹತ್ವವನ್ನು ಶ್ರೀ ಮೋದಿ ಒತ್ತಿ ಹೇಳಿದರು.

ನಮಾಮಿ ಗಂಗೆ ಅಭಿಯಾನವು ಅತಿ ದೊಡ್ಡ ಸಮಗ್ರ ನದಿ ಸಂರಕ್ಷಣೆ ಅಭಿಯಾನವಾಗಿದ್ದು, ಇದು ಗಂಗಾನದಿಯ ಸ್ವಚ್ಛತೆಯ ಗುರಿಯನ್ನು ಮಾತ್ರ ಹೊಂದದೆ, ನದಿಯ ಸಮಗ್ರ ಪಾಲನೆಯ ಮೇಲೆ ಕೇಂದ್ರೀಕರಿಸುತ್ತದೆ. ಈ ಹೊಸ ಆಲೋಚನೆ ಮತ್ತು ವಿಧಾನವು ಗಂಗಾ ನದಿಗೆ ಮತ್ತೆ ಜೀವಕಳೆ ತಂದಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಹಳೆಯ ವಿಧಾನಗಳನ್ನು ಅಳವಡಿಸಿಕೊಂಡಿದ್ದರೆ, ಇಂದಿನ ಪರಿಸ್ಥಿತಿಯೂ ಅಷ್ಟೇ ಕೆಟ್ಟದಾಗಿರುತ್ತಿತ್ತು. ಹಳೆಯ ವಿಧಾನಗಳಲ್ಲಿ ಸಾರ್ವಜನಿಕ ಭಾಗವಹಿಸುವಿಕೆ ಮತ್ತು ದೂರದೃಷ್ಟಿಯ ಕೊರತೆಯಿತ್ತು ಎಂದರು.

ಈ ಉದ್ದೇಶದ ಈಡೇರಿಕೆಗಾಗಿ ಸರ್ಕಾರ ನಾಲ್ಕು ಹಂತದ ಕಾರ್ಯತಂತ್ರದೊಂದಿಗೆ ಮುಂದಡಿ ಇಟ್ಟಿತು ಎಂದು ಪ್ರಧಾನಿ ಹೇಳಿದರು.

ಮೊದಲಿಗೆ ಗಂಗೆಗೆ ತ್ಯಾಜ್ಯ ನೀರು ಹರಿಯದಂತೆ ತಡೆಯಲು ಕೊಳಚೆನೀರಿನ ಸಂಸ್ಕರಣಾ ಘಟಕಗಳ (ಎಸ್‌.ಟಿಪಿ) ಜಾಲವನ್ನು ರೂಪಿಸಲು ಪ್ರಾರಂಭಿಸಲಾಗಿದೆ.

ಎರಡನೆಯದಾಗಿ, ಎಸ್.ಟಿ.ಪಿ. ಮುಂದಿನ 10-15 ವರ್ಷಗಳ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ.

ಮೂರನೆಯದು ಗಂಗಾನದಿಯ ಉದ್ದಕ್ಕೂ ಇರುವ ನೂರಾರು ದೊಡ್ಡ ಪಟ್ಟಣ/ ನಗರಗಳು ಮತ್ತು ಐದು ಸಾವಿರ ಹಳ್ಳಿಗಳನ್ನು ಬಯಲು ಶೌಚಮುಕ್ತ ಮಾಡಲಾಗಿದೆ.

ನಾಲ್ಕನೆಯದು ಗಂಗಾ ನದಿಯ ಉಪ ನದಿಗಳಲ್ಲಿ ಮಾಲಿನ್ಯ ತಡೆಯಲು ಸಕಲ ಪ್ರಯತ್ನ ಮಾಡಲಾಗಿದೆ.

ನಮಾಮಿ ಗಂಗೆ ಯೋಜನೆ ಅಡಿಯಲ್ಲಿ 30 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಯೋಜನೆಗಳು ಪೂರ್ಣಗೊಂಡಿವೆ ಇಲ್ಲ ಪ್ರಗತಿಯಲ್ಲಿವೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಈ ಯೋಜನೆಗಳಿಂದಾಗಿ ಉತ್ತರ ಖಂಡದಲ್ಲಿ ತ್ಯಾಜ್ಯ ನೀರು ಸಂಸ್ಕರಣೆ ಸಾಮರ್ಥ್ಯ ಕಳೆದ ಆರು ವರ್ಷಗಳಲ್ಲಿ 4 ಪಟ್ಟು ಹೆಚ್ಚಿದೆ ಎಂದರು.

ಉತ್ತರಖಂಡದಲ್ಲಿ ಗಂಗಾ ನದಿಗೆ ಹರಿಯುತ್ತಿದ್ದ 130 ಚರಂಡಿಗಳನ್ನು ಮುಚ್ಚಲು ಕೈಗೊಂಡ ಪ್ರಯತ್ನಗಳನ್ನು ಪ್ರಧಾನಮಂತ್ರಿ ಪಟ್ಟಿ ಮಾಡಿದರು. ಅವರು ವಿಶೇಷವಾಗಿ ಚಂದ್ರೇಶ್ವರ ನಗರ ಚರಂಡಿಯನ್ನು ಉಲ್ಲೇಖಿಸಿ, ಇದು ಋಷಿಕೇಶದ ಮುನಿ ಕಿ ರೆಟಿಯಲ್ಲಿ ಪ್ರವಾಸಿಗರು ಮತ್ತು ರಾಫ್ಟರ್‌ ಗಳ ಕಣ್ಣಿಗೆ ಬಿಳುತ್ತಾ ನೋವು ತರಿಸುತ್ತಿತ್ತು. ಚರಂಡಿ ಮುಚ್ಚಿ, ಮುನಿ ಕಿ ರೆಟಿಯಲ್ಲಿ ನಾಲ್ಕು ಅಂತಸ್ತಿನ ಎಸ್‌.ಟಿಪಿ ನಿರ್ಮಾಣ ಮಾಡಿರುವುದನ್ನು ಅವರು ಶ್ಲಾಘಿಸಿದರು.

ಪ್ರಯಾಗ್ ರಾಜ್ ಕುಂಭದಲ್ಲಿ ಯಾತ್ರಿಕರಿಗಾದ ಅನುಭವದಂತೆ, ಹರಿದ್ವಾರ ಕುಂಭಕ್ಕೆ ಭೇಟಿ ನೀಡುವವರಿಗೂ ಉತ್ತರಾಖಂಡದಲ್ಲಿ ಗಂಗಾ ನದಿಯ ಸ್ವಚ್ಛತೆ ಮತ್ತು ಶುದ್ಧ ಸ್ಥಾನದ ಅನುಭವ ಆಗುತ್ತದೆ ಎಂದು ಪ್ರಧಾನಿ ಹೇಳಿದರು. ಶ್ರೀ ನರೇಂದ್ರ ಮೋದಿ ಅವರು ಗಂಗೆಯ ನೂರಾರು ಘಾಟ್‌ ಗಳ ಸೌಂದರ್ಯೀಕರಣ ಮತ್ತು ಹರಿದ್ವಾರದಲ್ಲಿ ನದಿಯ ಮುಂಭಾಗದಲ್ಲಿ ಆಧುನಿಕ ಅಭಿವೃದ್ಧಿಯನ್ನು ಉಲ್ಲೇಖಿಸಿದರು..

ಗಂಗಾವಲೋಕನ ವಸ್ತುಸಂಗ್ರಹಾಲಯ ಯಾತ್ರಿಕರಿಗೆ ಒಂದು ವಿಶೇಷ ಆಕರ್ಷಣೆಯಾಗಿದ್ದು, ಗಂಗಾನದಿಯೊಂದಿಗೆ ಇರುವ ಸಾಂಪ್ರಾದಾಯಿಕತೆಯನ್ನು ತಿಳಿಯಲು ನೆರವಾಗುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

ಗಂಗೆಯ ಸ್ವಚ್ಛತೆಯ ಜೊತೆಗೆ, ನಮಾಮಿ ಗಂಗೆ ಯೋಜನೆ ಇಡೀ ಗಂಗಾ ನದಿಯ ಪಾತ್ರದಲ್ಲಿ ಪರಿಸರ ಮತ್ತು ಆರ್ಥಿಕ ಅಭಿವೃದ್ಧಿಯತ್ತಲೂ ಗಮನ ಹರಿಸಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಸರ್ಕಾರ ಇಲ್ಲಿ ಆಯುರ್ವೇದ ಕೃಷಿ ಮತ್ತು ಸಾವಯವ ಕೃಷಿ ಉತ್ತೇಜನಕ್ಕೆ ಸಮಗ್ರ ಯೋಜನೆ ರೂಪಿಸಿದೆ ಎಂದರು.

ಈ ಯೋಜನೆ ಈ ವರ್ಷ ಆಗಸ್ಟ್ 15ರಂದು ಪ್ರಕಟಿಸಲಾದ ಡಾಲ್ಫಿನ್ ಯೋಜನೆಯನ್ನೂ ಬಲಪಡಿಸಲಿದೆ ಎಂದರು.

ನೀರಿನಂತಹ ಪ್ರಮುಖ ವಿಷಯದಲ್ಲಿ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಕಾರ್ಯ ವಿಘಟನೆಯಾಗುವುದರಿಂದ ಸ್ಪಷ್ಟ ಮಾರ್ಗಸೂಚಿಗಳು ಮತ್ತು ಸಮನ್ವಯದ ಕೊರತೆಗೆ ಕಾರಣವಾಗಿತ್ತು ಎಂದು ಪ್ರಧಾನಿ ಹೇಳಿದರು. ಪರಿಣಾಮವಾಗಿ, ನೀರಾವರಿ ಮತ್ತು ಕುಡಿಯುವ ನೀರಿಗೆ ಸಂಬಂಧಿಸಿದ ಸಮಸ್ಯೆಗಳು ಮುಂದುವರೆದವು. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರವೂ ಕೊಲವೆ ಮೂಲಕ ಕುಡಿಯುವ ನೀರು ದೇಶದಲ್ಲಿ 15 ಕೋಟಿಗೂ ಹೆಚ್ಚು ಮನೆಗಳಿಗೆ ತಲುಪಿಲ್ಲ ಎಂದು ಅವರು ವಿಷಾದಿಸಿದರು.

ಜಲ ಶಕ್ತಿ ಸಚಿವಾಲಯ ಈ ಸವಾಲುಗಳನ್ನು ಎದುರಿಸಲು ಮತ್ತು ಒಮ್ಮತ ತರುವ ಉದ್ದಶದಿಂದ ರಚಿಸಲಾಗಿದೆ ಎಂದು ಶ್ರೀ ಮೋದಿ ಹೇಳಿದರು. ದೇಶದ ಎಲ್ಲ ಮನೆಗಳಿಗೂ ಕೊಳವೆಯ ಮೂಲಕ ಕುಡಿಯುವ ನೀರು ಪೂರೈಕೆ ಖಾತ್ರಿ ಪಡಿಸುವ ಅಭಿಯಾನದಲ್ಲಿ ಸಚಿವಾಲಯ ಈಗ ಕಾರ್ಯೋನ್ಮುಖವಾಗಿದೆ ಎಂದರು.

ಇಂದು, ಜಲ ಜೀವನ ಅಭಿಯಾನದ ಅಡಿಯಲ್ಲಿ ಪ್ರತಿ ನಿತ್ಯ 1 ಲಕ್ಷ ವಸತಿಗಳಿಗೆ ಕೊಳವೆಯ ಮೂಲಕ ಕುಡಿಯುವ ನೀರಿನ ಸಂಪರ್ಕವನ್ನು ಕಲ್ಪಿಸಲಾಗುತ್ತಿದೆ. 1 ವರ್ಷದ ಅವಧಿಯಲ್ಲಿ ದೇಶದ 2 ಕೋಟಿ ಕುಟುಂಬಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು.

ಕೊರೊನಾ ಕಾಲದಲ್ಲೂ ಕಳೆದ 4-5 ತಿಂಗಳುಗಳಲ್ಲಿ 50 ಸಾವಿರ ಕುಟುಂಬಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿರುವುದಕ್ಕಾಗಿ ಉತ್ತರಾಖಂಡ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.

ಹಿಂದಿನ ಕಾರ್ಯಕ್ರಮಗಳಿಗಿಂತ ಭಿನ್ನವಾಗಿ, ಜಲ ಜೀವನ್ ಅಭಿಯಾನ ಆದ್ಯಂತವಾಗಿ ಉನ್ನತ ವಿಧಾನವನ್ನು ಅಳವಡಿಸಿಕೊಂಡಿದೆ, ಅಲ್ಲಿ ಹಳ್ಳಿಗಳಲ್ಲಿನ ಬಳಕೆದಾರರು ಮತ್ತು ಜಲ ಸಮಿತಿಗಳು ಇಡೀ ಯೋಜನೆಯನ್ನು ಅನುಷ್ಠಾನದಿಂದ ನಿರ್ವಹಣೆ ಮತ್ತು ಕಾರ್ಯಾಚರಣೆಯವರೆಗೆ ರೂಪಿಸುತ್ತವೆ ಎಂದು ಪ್ರಧಾನಮಮಂತ್ರಿ ಹೇಳಿದರು. ಜಲ ಸಮಿತಿಯ ಸದಸ್ಯರಲ್ಲಿ ಕನಿಷ್ಠ ಶೇ.50 ಮಹಿಳೆಯರಿರುತ್ತಾರೆ ಎಂಬುದನ್ನು ಅಭಿಯಾನ ಖಾತ್ರಿಪಡಿಸುತ್ತದೆ ಎಂದು ಅವರು ಹೇಳಿದರು. ಇಂದು ಬಿಡುಗಡೆಯಾದ ಮರ್ಗದರ್ಶಿಕ ಸರಿಯಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ಜಲ ಸಮಿತಿ ಮತ್ತು ಗ್ರಾಮ ಪಂಚಾಯಿತಿಗಳ ಸದಸ್ಯರಿಗೆ ಮಾರ್ಗದರ್ಶನ ನೀಡಲಿದೆ ಎಂದು ಅವರು ಹೇಳಿದರು.

ದೇಶದ ಪ್ರತಿಯೊಂದು ಶಾಲೆ ಮತ್ತು ಅಂಗನವಾಡಿಗೆ ಕುಡಿಯುವ ನೀರಿನ ಸಂಪರ್ಕದ ಖಾತ್ರಿಪಡಿಸಲು 100 ದಿನಗಳ ವಿಶೇಷ ಅಭಿಯಾನವನ್ನು ಈ ವರ್ಷ ಅಕ್ಟೋಬರ್ 2ರಂದು ಜಲ ಜೀವನ ಅಭಿಯಾನದ ಅಡಿಯಲ್ಲಿ ಆರಂಭಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು.

ರೈತರಿಗೆ, ಕೈಗಾರಿಕಾ ಕಾರ್ಮಿಕರಿಗೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರ ಇತ್ತೀಚೆಗೆ ಪ್ರಮುಖ ಸುಧಾರಣೆ ತಂದಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು.

ಈ ಸುಧಾರಣೆಗಳನ್ನು ವಿರೋಧಿಸುತ್ತಿರುವವರು ಕೇವಲ ವಿರೋಧಿಸಬೇಕು ಎಂಬ ಕಾರಣಕ್ಕೆ ವಿರೋಧ ಮಾಡುತ್ತಿದ್ದಾರೆ ಎಂದು ಶ್ರೀ ಮೋದಿ ಹೇಳಿದರು. ಹಲವು ದಶಕಗಳ ಕಾಲ ದೇಶವನ್ನು ಆಳಿದವರು ದೇಶದ ಕಾರ್ಮಿಕರು, ಯುವಜನರು, ರೈತರು ಮತ್ತು ಮಹಿಳೆಯರ ಸಬಲೀಕರಣಕ್ಕೆ ಎಂದೂ ಕಾಳಜಿ ವಹಿಸಲಿಲ್ಲ ಎಂದು ಆರೋಪಿಸಿದರು.

ಈ ಜನರಿಗೆ ರೈತರು ತಮ್ಮ ಉತ್ಪನ್ನವನ್ನು ದೇಶದ ಎಲ್ಲಿ ಬೇಕಾದರೂ, ಯಾರಿಗೆ ಬೇಕಾದರೂ ಲಾಭದಾಯಕ ದರಕ್ಕೆ ಮಾರಾಟ ಮಾಡುವುದು ಬೇಕಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು,

ಜನ್ ಧನ್ ಬ್ಯಾಂಕ್ ಖಾತೆ, ಡಿಜಿಟಲ್ ಇಂಡಿಯಾ ಅಭಿಯಾನ, ಅಂತಾರಾಷ್ಟ್ರೀಯ ಯೋಗ ದಿನ ಮೊದಲಾದ ಸರ್ಕಾರದ ಉಪಕ್ರಮಗಳ ಪಟ್ಟಿ ಮಾಡಿದ ಪ್ರಧಾನಮಂತ್ರಿಯವರು, ಇವುಗಳಿಂದ ಜನರಿಗೆ ಆಗುವ ದೊಡ್ಡ ಲಾಭವನ್ನು ಬಿಟ್ಟು ಇದೆಲ್ಲಕ್ಕೂ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದವು ಎಂದರು.

ಇದೇ ಜನರು ವಾಯುಪಡೆಯ ಆಧುನೀಕರಣ ಮತ್ತು ಆಧುನಿಕ ಯುದ್ಧ ವಿಮಾನಗಳ ಸೇರ್ಪಡೆ ಅವಕಾಶಕ್ಕೂ ವಿರೋಧ ವ್ಯಕ್ತಪಡಿಸಿದ್ದರು. ಇದೇ ಜನ ಒಂದು ಶ್ರೇಣಿ, ಒಂದು ಪಿಂಚಣಿಯ ಸರ್ಕಾರದ ನೀತಿಯನ್ನೂ ವಿರೋಧಿಸಿದ್ದರು, ಆದರೆ ಸರ್ಕಾರ 11 ಸಾವಿರ ಕೋಟಿ ರೂಪಾಯಿ ಬಾಕಿಯನ್ನು ಸಶಸ್ತ್ರಪಡೆಗಳ ಪಿಂಚಣಿದಾರರಿಗೆ ಪಾವತಿ ಮಾಡಿದೆ ಎಂದು ತಿಳಿಸಿದರು.

ಇದೇ ಜನರು ಸರ್ಜಿಕಲ್ ದಾಳಿಯನ್ನೂ ಟೀಕಿಸಿ, ಸರ್ಜಿಕಲ್ ದಾಳಿ ನಡೆದಿರುವುದಕ್ಕೆ ಯೋಧರಿಂದ ಸಾಕ್ಷಿ ಕೇಳಿದ್ದರು ಎಂದೂ ಅವರು ಹೇಳಿದರು. ಇದು ಅವರುಗಳ ವಾಸ್ತವ ಉದ್ದೇಶ ಏನು ಎಂಬುದನ್ನು ಇಡೀ ದೇಶಕ್ಕೆ ಸ್ಪಷ್ಟಪಡಿಸಿದೆ ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.

ವಿರೋಧಿಸುವ ಮತ್ತು ಪ್ರತಿಭಟಿಸುವ ಈ ಜನರು ಕಾಲಕ್ರಮೇಣ ಅಪ್ರಸ್ತುತವಾಗುತ್ತಿದ್ದಾರೆ ಎಂದು ಅವರು ಹೇಳಿದರು.

 

Click here to read full text speech

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
How NPS transformed in 2025: 80% withdrawals, 100% equity, and everything else that made it a future ready retirement planning tool

Media Coverage

How NPS transformed in 2025: 80% withdrawals, 100% equity, and everything else that made it a future ready retirement planning tool
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 20 ಡಿಸೆಂಬರ್ 2025
December 20, 2025

Empowering Roots, Elevating Horizons: PM Modi's Leadership in Diplomacy, Economy, and Ecology