ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನೆದರ್‌ಲ್ಯಾಂಡ್ಸ್ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ರಾಬ್ ಜೆಟ್ಟನ್ ಅವರೊಂದಿಗೆ ಹೇಗ್ ನಲ್ಲಿರುವ ಡಚ್ ಪ್ರಧಾನಮಂತ್ರಿಯವರ ಅಧಿಕೃತ ನಿವಾಸದಲ್ಲಿ (ಕ್ಯಾಟ್ಶುಯಿಸ್) ಅಧಿಕೃತ ಮಾತುಕತೆ ನಡೆಸಿದರು.

ಭಾರತ- ನೆದರ್‌ಲ್ಯಾಂಡ್ಸ್ ಬಾಂಧವ್ಯವನ್ನು ಬಲಪಡಿಸುವ ಕುರಿತು ಉಭಯ ಪ್ರಧಾನಮಂತ್ರಿಗಳು ವ್ಯಾಪಕ ಚರ್ಚೆ ನಡೆಸಿದರು. ಉಭಯ ದೇಶಗಳ ನಡುವೆ ಪರಸ್ಪರ ಸಮಾನ ಮೌಲ್ಯಗಳು ಮತ್ತು ನಂಬಿಕೆಯ ಜೊತೆಗೆ ಹೆಚ್ಚುತ್ತಿರುವ ಒಮ್ಮುಖ ಮತ್ತು ಸಹಕಾರ ವೃದ್ಧಿಯ ಬಗ್ಗೆ ಪ್ರಸ್ತಾಪಿಸಿದ ನಾಯಕರು, ದ್ವಿಪಕ್ಷೀಯ ಸಂಬಂಧವನ್ನು "ಕಾರ್ಯತಂತ್ರದ ಪಾಲುದಾರಿಕೆ" ಮಟ್ಟಕ್ಕೆ ಏರಿಸಲು ನಿರ್ಧರಿಸಿದರು. ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತೆ, ಉದಯೋನ್ಮುಖ ಮತ್ತು ನಿರ್ಣಾಯಕ ತಂತ್ರಜ್ಞಾನಗಳು, ಕಡಲ ವಲಯ, ನವೀಕರಿಸಬಹುದಾದ ಇಂಧನ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಸಹಕಾರವನ್ನು ಆಳಗೊಳಿಸಲು ಕಾರ್ಯತಂತ್ರದ ಸಹಭಾಗಿತ್ವಕ್ಕಾಗಿ ಮಹತ್ವಾಕಾಂಕ್ಷೆಯ ಮಾರ್ಗಸೂಚಿಯನ್ನು ಅಳವಡಿಸಿಕೊಳ್ಳಲು ಅವರು ಸಮ್ಮತಿಸಿದರು. ವಾಣಿಜ್ಯ, ಹೂಡಿಕೆ, ತಂತ್ರಜ್ಞಾನ ಮತ್ತು ನಾವಿನ್ಯತೆಯ ಸಹಭಾಗಿತ್ವವನ್ನು ವಿಸ್ತರಿಸುತ್ತಿರುವುದನ್ನು ಉಲ್ಲೇಖಿಸಿದ ನಾಯಕರು, ಭಾರತದ ಬೆಳವಣಿಗೆಯಿಂದ ದೊರೆಯುವ ಅವಕಾಶಗಳು ಡಚ್ ಕಂಪನಿಗಳಿಗೆ ಭರವಸೆಯ ವಾಣಿಜ್ಯ ಭವಿಷ್ಯವನ್ನು ನೀಡುತ್ತವೆ ಎಂದು ಹೇಳಿದರು.

ನಿರಂತರ ಉನ್ನತ ಮಟ್ಟದ ವಿನಿಮಯದಿಂದ ಪ್ರೇರಿತವಾದ ದ್ವಿಪಕ್ಷೀಯ ಸಹಕಾರದ ಪ್ರಗತಿಯ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ʻಡಬ್ಲ್ಯುಎಎಚ್ʼ (ನೀರು, ಕೃಷಿ ಮತ್ತು ಆರೋಗ್ಯ) ಕ್ಷೇತ್ರದಲ್ಲಿನ ಸಹಕಾರದ ಮಹತ್ವವನ್ನು ಒತ್ತಿಹೇಳಿದ ಅವರು, ದೊಡ್ಡ ಪ್ರಮಾಣದ ನೀರಿನ ಯೋಜನೆಗಳಲ್ಲಿ ಸಹಯೋಗದ ಮೂಲಕ ನೀರಿನ ಕುರಿತಾದ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಆಳಗೊಳಿಸಲು ಒಪ್ಪಿಕೊಂಡರು. ಆರೋಗ್ಯ ಸಂಶೋಧನೆ, ಡಿಜಿಟಲ್ ಆರೋಗ್ಯ, ಕೃಷಿ ಮತ್ತು ಆಹಾರ ಸುರಕ್ಷತೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುತ್ತಿರುವುದನ್ನು ಪ್ರಧಾನಮಂತ್ರಿಗಳು ಸ್ವಾಗತಿಸಿದರು.

 

ಮಾತುಕತೆಯ ವೇಳೆ, ಉಭಯ ನಾಯಕರು ಉಭಯ ದೇಶಗಳ ನಡುವಿನ ವ್ಯಾಪಾರ ಮತ್ತು ಹೂಡಿಕೆ ಸಂಬಂಧವನ್ನು ವಿಸ್ತರಿಸುವ ಮಹತ್ವವನ್ನು ಒತ್ತಿ ಹೇಳಿದರು. ಭಾರತ-ಐರೋಪ್ಯ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದದ ಕ್ರಾಂತಿಕಾರಿ ಸಾಮರ್ಥ್ಯವನ್ನು ಒಪ್ಪಿಕೊಂಡ ಅವರು, ಅದಕ್ಕೆ ಶೀಘ್ರ ಸಹಿ ಹಾಕಲು ಮತ್ತು ತ್ವರಿತ ಅನುಷ್ಠಾನಕ್ಕೆ ಕರೆ ನೀಡಿದರು. ನಿರ್ಣಾಯಕ ಖನಿಜಗಳಲ್ಲಿ ಭಾರತ-ನೆದರ್‌ಲ್ಯಾಂಡ್ಸ್ ಸಹಕಾರವು ಸದೃಢ ಪೂರೈಕೆ ಸರಪಳಿಗಳನ್ನು ಬೆಂಬಲಿಸುತ್ತದೆ ಎಂದು ಅವರು ದೃಢಪಡಿಸಿದರು.

ಕೃತಕ ಬುದ್ಧಿಮತ್ತೆ ಮತ್ತು ಸೆಮಿಕಂಡಕ್ಟರ್‌ಗಳು ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಹೆಚ್ಚಿನ ಸಹಯೋಗಕ್ಕೆ ಉಭಯ ನಾಯಕರು ಕರೆ ನೀಡಿದರು. ಉಭಯ ದೇಶಗಳ ಯುವಕರನ್ನು ಒಳಗೊಂಡ ʻಹ್ಯಾಕಥಾನ್ʼ ನಡೆಸಲು ಅವರು ಪ್ರೋತ್ಸಾಹಿಸಿದರು. ನವೀಕರಿಸಬಹುದಾದ ಇಂಧನದಲ್ಲಿ ಸಹಕಾರವನ್ನು ಬಲಪಡಿಸಲು ಬದ್ಧತೆ ವ್ಯಕ್ತಪಡಿಸಿದ ಅವರು, ಸುಸ್ಥಿರ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಹಸಿರು ಹೈಡ್ರೋಜನ್, ಜೈವಿಕ ಇಂಧನಗಳು, ಹಸಿರು ಹಡಗು ಮತ್ತು ಕಡಲ ಸರಕು-ಸಾಗಣೆಯಲ್ಲಿ ಸಹಕಾರದ ಮಹತ್ವವನ್ನು ಉಲ್ಲೇಖಿಸಿದರು. ಉನ್ನತ ಶಿಕ್ಷಣದಲ್ಲಿ ಸಂಚಾರ ಪಾಲುದಾರಿಕೆ ಮತ್ತು ಸಹಕಾರವನ್ನು ಬಲಪಡಿಸಲು ಕೈಗೊಂಡ ಹೊಸ ಉಪಕ್ರಮಗಳಿಗೆ ಉಭಯ ಪ್ರಧಾನಮಂತ್ರಿಗಳು ಬೆಂಬಲ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ, ನಳಂದ ವಿಶ್ವವಿದ್ಯಾಲಯ ಮತ್ತು ಗ್ರೋನಿಂಗೆನ್ ವಿಶ್ವವಿದ್ಯಾಲಯದ ನಡುವೆ ಆಗಿರುವ ಒಪ್ಪಂದದ ಬಗ್ಗೆ ಅವರು ವಿಶೇಷ ಗಮನ ಹರಿಸಿದರು.

 

ಉಭಯ ರಾಷ್ಟ್ರಗಳ ನಡುವಿನ ಬಲವಾದ ಸಾಂಸ್ಕೃತಿಕ ಸಂಬಂಧಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಮೋದಿ, 11ನೇ ಶತಮಾನದ ಚೋಳ ಫಲಕಗಳನ್ನು ಹಿಂದಿರುಗಿಸಲು ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಡಚ್ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು. ಈ ನಿಟ್ಟಿನಲ್ಲಿ, ಉಭಯ ನಾಯಕರು ಲೈಡೆನ್ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ನಡುವಿನ ಸಹಯೋಗವನ್ನು ಸ್ವಾಗತಿಸಿದರು. ಇದು ಈ ಐತಿಹಾಸಿಕ ಕಲಾಕೃತಿಗಳ ಜ್ಞಾನವನ್ನು ಹೆಚ್ಚಿಸಲು ಸಹಾಯ ಮಾಡಲಿದೆ.

ಅಧಿಕೃತ ಮಾತುಕತೆಗಳ ನಂತರ, ತಂತ್ರಜ್ಞಾನ, ಹಸಿರು ಇಂಧನ, ವ್ಯಾಪಾರ, ಸಾರಿಗೆ, ʻಡಬ್ಲ್ಯುಎಎಚ್ʼ, ಶಿಕ್ಷಣ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ 14 ಒಪ್ಪಂದಗಳು ಮತ್ತು ಒಡಂಬಡಿಕೆಗಳನ್ನು ಅಂತಿಮಗೊಳಿಸಲಾಯಿತು. ಭೇಟಿಯ ಸಂದರ್ಭದಲ್ಲಿ ಜಂಟಿ ಹೇಳಿಕೆ ಮತ್ತು  ಕಾರ್ಯತಂತ್ರದ ಪಾಲುದಾರಿಕೆಯ ಮಾರ್ಗಸೂಚಿಯನ್ನು  ಅಂಗೀಕರಿಸಲಾಯಿತು.

 

ಅಧಿಕೃತ ಮಾತುಕತೆಗಳ ನಂತರ, ತಂತ್ರಜ್ಞಾನ, ಹಸಿರು ಇಂಧನ, ವ್ಯಾಪಾರ, ಸಾರಿಗೆ, ʻಡಬ್ಲ್ಯುಎಎಚ್ʼ, ಶಿಕ್ಷಣ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ 14 ಒಪ್ಪಂದಗಳು ಮತ್ತು ಒಡಂಬಡಿಕೆಗಳನ್ನು ಅಂತಿಮಗೊಳಿಸಲಾಯಿತು. ಭೇಟಿಯ ಸಂದರ್ಭದಲ್ಲಿ ಜಂಟಿ ಹೇಳಿಕೆ ಮತ್ತು  ಕಾರ್ಯತಂತ್ರದ ಪಾಲುದಾರಿಕೆಯ ಮಾರ್ಗಸೂಚಿಯನ್ನು  ಅಂಗೀಕರಿಸಲಾಯಿತು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಜೆಟ್ಟನ್ ಅವರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು ಮತ್ತು ಅವರು ಸಮ್ಮತಿಸಿದರು.

ಭಾರತ ಮತ್ತು ನೆದರ್‌ಲ್ಯಾಂಡ್ಸ್ ಪರಸ್ಪರ ಸಮಾನವಾದ ಪ್ರಜಾಪ್ರಭುತ್ವ ಮೌಲ್ಯಗಳ ಜೊತೆಗೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ಬಹುಮುಖಿ ಸಹಕಾರವನ್ನು ಆಧರಿಸಿದ ಬಲವಾದ ದ್ವಿಪಕ್ಷೀಯ ಸಂಬಂಧವನ್ನು ಹೊಂದಿವೆ. ಪ್ರಧಾನಮಂತ್ರಿ ಮೋದಿಯವರ ನೆದರ್‌ಲ್ಯಾಂಡ್ಸ್‌ ಭೇಟಿಯು ಈ ಪಾಲುದಾರಿಕೆಯಲ್ಲಿ ಮಹತ್ವದ ಮೈಲುಗಲ್ಲಾಗಿದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
West Asia conflict: 59 India-bound vessels transited Hormuz since war

Media Coverage

West Asia conflict: 59 India-bound vessels transited Hormuz since war
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 22 ಜುಲೈ 2026
July 22, 2026

From Scholarships to Homes to High-Speed Rail: Inclusive Growth Under PM Modi’s Leadership