ಹೊಸದಾಗಿ ಸೇರ್ಪಡೆಗೊಂಡವರಿಗೆ ಸುಮಾರು 51,000 ನೇಮಕಾತಿ ಪತ್ರಗಳನ್ನು ವಿತರಿಸಿದರು
"ಉದ್ಯೋಗ ಮೇಳವು ಯುವಕರಿಗೆ 'ವಿಕಸಿತ ಭಾರತʼ ನಿರ್ಮಾತೃಗಳಾಗಲು ದಾರಿ ಮಾಡಿಕೊಡುತ್ತದೆ"
"ನಾಗರಿಕರಿಗೆ ಜೀವನವನ್ನು ಸುಲಭಗೊಳಿಸುವುದು ನಿಮ್ಮ ಮೊದಲ ಆದ್ಯತೆಯಾಗಿರಬೇಕು"
"ಯಾವುದೇ ಪ್ರಯೋಜನಗಳನ್ನು ಪಡೆಯದವರ ಮನೆ ಬಾಗಿಲಿಗೆ ಸರ್ಕಾರ ತಲುಪುತ್ತಿದೆ"
"ಭಾರತವು ಮೂಲಸೌಕರ್ಯ ಕ್ರಾಂತಿಗೆ ಸಾಕ್ಷಿಯಾಗಿದೆ"
"ಅಪೂರ್ಣ ಯೋಜನೆಗಳು ದೇಶದ ಪ್ರಾಮಾಣಿಕ ತೆರಿಗೆದಾರರಿಗೆ ಪಾಲಿಗೆ ಎಸಗಿದ ದೊಡ್ಡ ಅನ್ಯಾಯ. ನಾವು ಈ ಸಮಸ್ಯೆಯನ್ನು ಪರಿಹರಿಸುತ್ತಿದ್ದೇವೆ "
ಜಾಗತಿಕ ಸಂಸ್ಥೆಗಳು ಭಾರತದ ಬೆಳವಣಿಗೆಯ ಬಗ್ಗೆ ಆಶಾವಾದಿಯಾಗಿವೆ".

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ʻಉದ್ಯೋಗ ಮೇಳʼವನ್ನು ಉದ್ದೇಶಿಸಿ ಮಾತನಾಡಿದರು ಮತ್ತು ವಿಡಿಯೋ ಕಾನ್ಫರೆನ್ಸ್ ಮೂಲಕ ಹೊಸದಾಗಿ ಸೇರ್ಪಡೆಗೊಂಡವರಿಗೆ ಸುಮಾರು 51,000 ನೇಮಕಾತಿ ಪತ್ರಗಳನ್ನು ವಿತರಿಸಿದರು. ದೇಶಾದ್ಯಂತ ಆಯ್ಕೆಯಾದ ಅಭ್ಯರ್ಥಿಗಳು ಕಂದಾಯ ಇಲಾಖೆ, ಗೃಹ ವ್ಯವಹಾರಗಳ ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಹಣಕಾಸು ಸೇವೆಗಳ ಇಲಾಖೆ, ರಕ್ಷಣಾ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಸೇರಿದಂತೆ ವಿವಿಧ ಸಚಿವಾಲಯಗಳು / ಇಲಾಖೆಗಳಲ್ಲಿ ಸರ್ಕಾರಿ ಸೇವೆಗೆ ಸೇರ್ಪಡೆಗೊಳ್ಳಲಿದ್ದಾರೆ.

ನೇಮಕಗೊಂಡವರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಸರ್ಕಾರದ ಅಭಿಯಾನವು ನಿರಂತರವಾಗಿ ಮುಂದುವರಿಯುತ್ತಿದೆ ಎಂದರು.  ಇದರ ಭಾಗವಾಗಿ ಇಂದು ದೇಶಾದ್ಯಂತ 50,000ಕ್ಕೂ ಹೆಚ್ಚು ಯುವಕರಿಗೆ ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದ ಸಂದರ್ಭವನ್ನು ಉಲ್ಲೇಖಿಸಿದರು. ನೇಮಕಾತಿ ಪತ್ರಗಳು ನೇಮಕಗೊಂಡವರ ಕಠಿಣ ಪರಿಶ್ರಮದ ಫಲಿತಾಂಶವಾಗಿವೆ ಎಂದು ಅವರು ಒತ್ತಿ ಹೇಳಿದರು. ಈ ಸಂದರ್ಭದಲ್ಲಿ ಹೊಸದಾಗಿ ನೇಮಕಗೊಂಡವರನ್ನು ಮತ್ತು ಅವರ ಕುಟುಂಬಗಳನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದರು. ಹೊಸದಾಗಿ ನೇಮಕಗೊಂಡವರು ಸಾರ್ವಜನಿಕರೊಂದಿಗೆ ನೇರವಾಗಿ ವ್ಯವಹರಿಸುವ ವ್ಯವಸ್ಥೆಯ ಭಾಗವಾಗಲಿದ್ದಾರೆ ಎಂದರು. ಹೊಸದಾಗಿ ನೇಮಕಗೊಂಡವರು ಪೂರೈಸಬೇಕಾದ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ಒತ್ತಿ ಹೇಳಿದ ಪ್ರಧಾನಿ, ಸರ್ಕಾರಿ ಉದ್ಯೋಗಿಯಾಗಿ ಅವರ ಪಾಲಿಗೆ ಸಾಮಾನ್ಯ ಜನರ 'ಸುಗಮ ಜೀವನ' ಅತ್ಯುನ್ನತ ಆದ್ಯತೆಯಾಗಬೇಕು ಎಂದು ಹೇಳಿದರು.

 

ಈ ತಿಂಗಳ ಆರಂಭದಲ್ಲಿ ನವೆಂಬರ್ 26ರಂದು ನಡೆದ ಸಂವಿಧಾನ ದಿನದ ಆಚರಣೆಯನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, 1949ರಲ್ಲಿ ಈ ದಿನದಂದು ರಾಷ್ಟ್ರವು ಭಾರತದ ಸಂವಿಧಾನವನ್ನು ಅಂಗೀಕರಿಸಿತು ಮತ್ತು ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳನ್ನು ನೀಡಿತು ಎಂದರು. ಸಂವಿಧಾನ ಶಿಲ್ಪಿಯಾಗಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಸ್ಥಾಪಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆಗಳನ್ನು ಅವರು ಒತ್ತಿ ಹೇಳಿದರು. ಸ್ವಾತಂತ್ರ್ಯದ ಬಂದಾಗ ಸಮಾನತೆಯ ತತ್ವಗಳನ್ನು ನಿರ್ಲಕ್ಷಿಸಲಾಗಿತ್ತು. ಸಮಾಜದ ಪ್ರಮುಖ ವರ್ಗವು ಹಲವು ವರ್ಷಗಳಿಂದ ಸಂಪನ್ಮೂಲಗಳು ಮತ್ತು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿತ್ತು ಎಂದು ಪ್ರಧಾನಿ ಮೋದಿ ಗಮನಸೆಳೆದರು. 2014ರ ನಂತರ ಪ್ರಸ್ತುತ ಸರ್ಕಾರ ಅಧಿಕಾರಕ್ಕೆ ಬಂದ ನಂತರವೇ 'ವಂಚಿತರಿಗೆ ಆದ್ಯತೆ' ಮಂತ್ರವನ್ನು ಅಳವಡಿಸಿಕೊಳ್ಳಲಾಯಿತು ಮತ್ತು ಹೊಸ ಮಾರ್ಗವನ್ನು ರೂಪಿಸಲಾಯಿತು ಎಂದು ಪ್ರಧಾನಿ ಒತ್ತಿ ಹೇಳಿದರು. "ಸರ್ಕಾರವು ಇದುವರೆಗೂ ಯಾವುದೇ ಪ್ರಯೋಜನಗಳನ್ನು ಪಡೆಯದವರ ಮನೆ ಬಾಗಿಲಿಗೂ ತಲುಪಿದೆ" ಎಂದು ಅವರು ಒತ್ತಿ ಹೇಳಿದರು. ಸ್ವಾತಂತ್ರ್ಯದ ನಂತರ ದಶಕಗಳಿಂದ ನಿರ್ಲಕ್ಷಿಸಲ್ಪಟ್ಟವರ ಜೀವನವನ್ನು ಪರಿವರ್ತಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಸರ್ಕಾರದ ಚಿಂತನೆ ಮತ್ತು ಕೆಲಸದ ಸಂಸ್ಕೃತಿಯಲ್ಲಿನ ಬದಲಾವಣೆಯ ಪರಿಣಾಮವಾಗಿ ಇಂದು ಕಾಣುತ್ತಿರುವ ಅಭೂತಪೂರ್ವ ಬದಲಾವಣೆಗಳ ಬಗ್ಗೆ ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಅಧಿಕಾರಶಾಹಿ, ಜನರು ಮತ್ತು ಕಡತಗಳು ಒಂದೇ ಆಗಿದ್ದರೂ, ಬಡವರು ಮತ್ತು ಮಧ್ಯಮ ವರ್ಗದ ಅಭಿವೃದ್ಧಿಗೆ ಆದ್ಯತೆ ನೀಡಿರುವುದರಿಂದ ಇಡೀ ವ್ಯವಸ್ಥೆಯ ಕಾರ್ಯವಿಧಾನ ಮತ್ತು ಶೈಲಿಯಲ್ಲಿ ಸಮಗ್ರ ಬದಲಾವಣೆ ಸಾಧ್ಯವಾಗಿದೆ ಎಂದರು. ಇದರಿಂದ ಸಾಮಾನ್ಯ ಜನರ ಯೋಗಕ್ಷೇಮದ ಸಕಾರಾತ್ಮಕ ಫಲಿತಾಂಶಗಳಿಗೆ ಅನುವು ಮಾಡಿದೆ ಎಂದು ಅವರು ಹೇಳಿದರು. ಇತ್ತೀಚಿನ ಅಧ್ಯಯನದ ಪ್ರಕಾರ ಕಳೆದ 5 ವರ್ಷಗಳಲ್ಲಿ 13 ಕೋಟಿಗೂ ಹೆಚ್ಚು ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ಪ್ರಧಾನಿ ಮಾಹಿತಿ ನೀಡಿದರು. "ಸರ್ಕಾರದ ಯೋಜನೆಗಳು ಬಡವರನ್ನು ತಲುಪುತ್ತಿವೆ ಎಂಬುದಕ್ಕೆ ಇದು ಪುರಾವೆಯಾಗಿದೆ" ಎಂದು ಅವರು ಹೇಳಿದರು. ಸರ್ಕಾರದ ಯೋಜನೆಗಳನ್ನು ಸಾಮಾನ್ಯ ನಾಗರಿಕರ ಮನೆ ಬಾಗಿಲಿಗೆ ಕೊಂಡೊಯ್ಯುತ್ತಿರುವ ʻವಿಕಸತಿ ಭಾರತ ಸಂಕಲ್ಪ ಯಾತ್ರೆʼಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಹೊಸದಾಗಿ ನೇಮಕಗೊಂಡವರು ತಮ್ಮ ಸಮಯವನ್ನು ಜನರ ಸೇವೆಗೆ ಬಳಸುವಂತೆ ಒತ್ತಾಯಿಸಿದರು.

ಆಧುನಿಕ ಹೆದ್ದಾರಿಗಳು, ರೈಲ್ವೆ ನಿಲ್ದಾಣಗಳು, ವಿಮಾನ ನಿಲ್ದಾಣಗಳು ಮತ್ತು ಜಲಮಾರ್ಗಗಳ ಕ್ಷೇತ್ರಗಳಲ್ಲಿ ಭಾರತವನ್ನು ಬದಲಾಯಿಸುತ್ತಿರುವ ಮೂಲಸೌಕರ್ಯ ಕ್ರಾಂತಿಗೆ ಭಾರತ ಸಾಕ್ಷಿಯಾಗುತ್ತಿದೆ ಎಂದು ಹೊಸದಾಗಿ ನೇಮಕಗೊಂಡವರಿಗೆ ಪ್ರಧಾನಿ ಹೇಳಿದರು. ಮೂಲಸೌಕರ್ಯದಲ್ಲಿ ಭಾರಿ ಹೂಡಿಕೆಯು ಲಕ್ಷಾಂತರ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ ಎಂದರು.

ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ಸಮರೋಪಾದಿ ವೇಗದ(ಮಿಷನ್ ಮೋಡ್) ಬಗ್ಗೆ ಮಾತನಾಡಿದ ಪ್ರಧಾನಿ, "ಅಪೂರ್ಣ ಯೋಜನೆಗಳು ದೇಶದ ಪ್ರಾಮಾಣಿಕ ತೆರಿಗೆದಾರರಿಗೆ ಎಸಗಿದ ದೊಡ್ಡ ಅನ್ಯಾಯ. ಇತ್ತೀಚಿನ ವರ್ಷಗಳಲ್ಲಿ, ಕೇಂದ್ರ ಸರ್ಕಾರವು ಲಕ್ಷಾಂತರ ಕೋಟಿ ರೂಪಾಯಿಗಳ ಯೋಜನೆಗಳನ್ನು ಪರಿಶೀಲಿಸಿದೆ ಮತ್ತು ಅವುಗಳನ್ನು ತ್ವರಿತವಾಗಿ ಪೂರ್ಣಗೊಳಿಸಿದೆ", ಇದು ಉದ್ಯೋಗದ ಹೊಸ ಮಾರ್ಗಗಳಿಗೆ ಕಾರಣವಾಗಿದೆ,ʼʼ ಎಂದರು.
22-23 ವರ್ಷಗಳ ಹಿಂದೆ ಪ್ರಾರಂಭವಾದ ಮತ್ತು 3 ವರ್ಷಗಳಲ್ಲಿ ಪೂರ್ಣಗೊಂಡ ಬೀದರ್ ಕಲ್ಬುರ್ಗಿ ರೈಲ್ವೆ ಮಾರ್ಗ ಸೇರಿದಂತೆ ಇತ್ತೀಚಿನ ದಿನಗಳಲ್ಲಿ ಬೆಳಕನ್ನು ಕಂಡ ಹಳೆಯ ಯೋಜನೆಗಳ ಉದಾಹರಣೆಗಳನ್ನು ಅವರು ನೀಡಿದರು. ಸಿಕ್ಕಿಂನ ಪಕ್ಯೋಂಗ್ ವಿಮಾನ ನಿಲ್ದಾಣದ ಪರಿಕಲ್ಪನೆಯನ್ನು 2008ರಲ್ಲಿ ರೂಪಿಸಲಾಯಿತು. ಆದರೆ 2014ರವರೆಗೆ ಅದು ಕೇವಲ ಕಾಗದಕ್ಕೆ ಸೀಮಿತವಾಗಿತ್ತು. 2014ರ ನಂತರ ಕಾಮಗಾರಿ ಆರಂಭಗೊಂಡ ಈ ಯೋಜನೆ 2018ರ ವೇಳೆಗೆ ಪೂರ್ಣಗೊಂಡಿತು. ಪಾರಾದೀಪ್ ಸಂಸ್ಕರಣಾಗಾರವು 20-22 ವರ್ಷಗಳಿಂದ ಯಾವುದೇ ಗಮನಾರ್ಹ ಪ್ರಗತಿಯಿಲ್ಲದೆ ಚರ್ಚೆಯಲ್ಲಿತ್ತು. ಈ ಸಂಸ್ಕರಣಾಗಾರವು ಸಹ ಇತ್ತೀಚೆಗೆ ಪೂರ್ಣಗೊಂಡಿದೆ ಎಂದರು.

 

ದೇಶದ ರಿಯಲ್ ಎಸ್ಟೇಟ್ ಕ್ಷೇತ್ರದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಈ ಕ್ಷೇತ್ರದಲ್ಲಿ ಬಿಲ್ಡರ್‌ಗಳು ಮತ್ತು ಮಧ್ಯಮ ವರ್ಗದ ಸಂಖ್ಯೆ ಕುಸಿತದತ್ತ ಸಾಗುತ್ತಿತ್ತು. ಆದರೆ ʻರೇರಾʼ ಕಾನೂನು ಪಾರದರ್ಶಕತೆಯನ್ನು ಸ್ಥಾಪಿಸಿದೆ ಮತ್ತು ಹೂಡಿಕೆಯನ್ನು ಹೆಚ್ಚಿಸಿದೆ ಎಂದು ಗಮನಸೆಳೆದರು. "ಇಂದು, ದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ರಿಯಲ್ ಎಸ್ಟೇಟ್ ಯೋಜನೆಗಳು ʻರೇರಾʼ ಅಡಿಯಲ್ಲಿ ನೋಂದಾಯಿಸಲ್ಪಟ್ಟಿವೆ," ಎಂದು ಶ್ರೀ ಮೋದಿ ಮಾಹಿತಿ ನೀಡಿದರು. ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಯೋಜನೆಗಳು ಹೇಗೆ ಸ್ಥಗಿತಗೊಂಡಿದ್ದವು ಎಂಬುದರ ಬಗ್ಗೆ ಅವರು ಗಮನ ಸೆಳೆದರು. ದೇಶದಲ್ಲಿ ಬೆಳೆಯುತ್ತಿರುವ ರಿಯಲ್ ಎಸ್ಟೇಟ್ ಇಂದು ಹೆಚ್ಚಿನ ಸಂಖ್ಯೆಯ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಅವರು ಹೇಳಿದರು.

ಸರ್ಕಾರದ ನೀತಿಗಳು ಮತ್ತು ನಿರ್ಧಾರಗಳು ಇಂದು ದೇಶದ ಆರ್ಥಿಕತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿವೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. ವಿಶ್ವದ ಹೆಸರಾಂತ ಸಂಸ್ಥೆಗಳು ಭಾರತದ ಬೆಳವಣಿಗೆಯ ದರದ ಬಗ್ಗೆ ಅತ್ಯಂತ ಆಶಾವಾದಿಯಾಗಿವೆ. ಅಲ್ಲದೆ, ಹೆಚ್ಚುತ್ತಿರುವ ಉದ್ಯೋಗಾವಕಾಶಗಳು, ದುಡಿಯುವ ವಯಸ್ಸಿನ ಜನಸಂಖ್ಯೆಯ ದೊಡ್ಡ ವರ್ಗ ಮತ್ತು ಕಾರ್ಮಿಕ ಉತ್ಪಾದಕತೆಯ ಹೆಚ್ಚಳದಿಂದಾಗಿ ಭಾರತದ ತ್ವರಿತ ಬೆಳವಣಿಗೆ ದರ ಸಾಧಿಸಲಿದೆ ಎಂದು ಜಾಗತಿಕ ಹೂಡಿಕೆ ರೇಟಿಂಗ್‌ ದಿಗ್ಗಜ ಸಂಸ್ಥೆಯೊಂದು ಹೇಳಿದೆ. ಇದಕ್ಕೆ ಪ್ರಮುಖ ಕಾರಣ ಭಾರತದ ಉತ್ಪಾದನೆ ಮತ್ತು ನಿರ್ಮಾಣ ಕ್ಷೇತ್ರದ ಶಕ್ತಿ ಎಂದು ಪ್ರಧಾನಿ ಹೇಳಿದರು. ಮುಂಬರುವ ದಿನಗಳಲ್ಲಿ ಭಾರತದಲ್ಲಿ ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಸಾಧ್ಯತೆಗಳು ಹೆಚ್ಚುತ್ತಲೇ ಇರುತ್ತವೆ ಎಂಬುದಕ್ಕೆ ಈ ಸಂಗತಿಗಳು ಸಾಕ್ಷಿಯಾಗಿವೆ ಎಂದು ಪ್ರಧಾನಿ ಹೇಳಿದರು.

ಭಾರತದಲ್ಲಿ ನಡೆಯುತ್ತಿರುವ ಅಭಿವೃದ್ಧಿಯ ಪ್ರಯೋಜನಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ನೋಡಿಕೊಳ್ಳಲು ಸರ್ಕಾರಿ ನೌಕರರಾಗಿ ನೇಮಕಗೊಂಡವರ ಪಾತ್ರವನ್ನು ಶ್ರೀ ಮೋದಿ ಒತ್ತಿ ಹೇಳಿದರು. "ಒಂದು ಪ್ರದೇಶವು ಎಷ್ಟೇ ದೂರದಲ್ಲಿದ್ದರೂ, ಅದು ನಿಮ್ಮ ಆದ್ಯತೆಯಾಗಿರಬೇಕು. ಒಬ್ಬ ವ್ಯಕ್ತಿಯು ಎಷ್ಟೇ ದೂರದಲ್ಲಿದ್ದರೂ, ನೀವು ಅವರನ್ನು ತಲುಪಬೇಕು " ಎಂದು ಅವರು ಹೇಳಿದರು. ಭಾರತ ಸರ್ಕಾರದ ಉದ್ಯೋಗಿಗಳಾಗಿ ನೇಮಕಗೊಂಡವರು ಈ ಕಾರ್ಯವಿಧಾನದೊಂದಿಗೆ ಮುಂದೆ ಸಾಗಿದಾಗ ಮಾತ್ರ ʻಅಭಿವೃದ್ಧಿ ಹೊಂದಿದ ಭಾರತʼದ ಕನಸು ನನಸಾಗುತ್ತದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು.

ರಾಷ್ಟ್ರಕ್ಕೆ ಮುಂದಿನ 25 ವರ್ಷಗಳ ಮಹತ್ವವನ್ನು ಪ್ರಧಾನಿ ಒತ್ತಿ ಹೇಳಿದರು. ಹೊಸದಗಿ ನೇಮಕಗೊಂಡವರು ಹೊಸ ಕಲಿಕಾ ಮಾಡ್ಯೂಲ್‌ 'ಕರ್ಮಯೋಗಿ ಪ್ರರಂಭ್‌' ಅನ್ನು ಬಳಸಿಕೊಳ್ಳಬೇಕು ಮತ್ತು ತಮ್ಮ ಕಲಿಕೆಯ ಪ್ರಕ್ರಿಯೆಯನ್ನು ಮುಂದುವರಿಸಬೇಕು ಎಂದು ಅವರು ಸಲಹೆ ನೀಡಿದರು. ಒಂದು ವರ್ಷದ ಹಿಂದೆ ಪ್ರಾರಂಭವಾದಾಗಿನಿಂದ ಲಕ್ಷಾಂತರ ಹೊಸ ಸರ್ಕಾರಿ ನೌಕರರು 'ಕರ್ಮಯೋಗಿ ಪ್ರರಂಭ್‌' ಮಾಡ್ಯೂಲ್ ಮೂಲಕ ತರಬೇತಿ ಪಡೆದಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಆನ್‌ಲೈನ್ ತರಬೇತಿ ವೇದಿಕೆ ʻಐಜಿಒಟಿ ಕರ್ಮಯೋಗಿʼಯಲ್ಲಿ 800ಕ್ಕೂ ಹೆಚ್ಚು ಕೋರ್ಸ್‌ಗಳು ಲಭ್ಯವಿದೆ ಎಂದು ಅವರು ಮಾಹಿತಿ ನೀಡಿದರು. "ನಿಮ್ಮ ಕೌಶಲ್ಯಗಳನ್ನು ಹೆಚ್ಚಿಸಲು ಇದನ್ನು ಬಳಸಿ" ಎಂದು ಪ್ರಧಾನಮಂತ್ರಿಯವರು ಸಲಹೆ ನೀಡಿದರು. ಹೊಸದಾಗಿ ನೇಮಕಗೊಂಡವರ ಯಶಸ್ಸಿಗಾಗಿ ಮತ್ತೊಮ್ಮೆ ಅಭಿನಂದಿಸಿದರು. "ರಾಷ್ಟ್ರ ನಿರ್ಮಾಣದ ನಿಟ್ಟಿನಲ್ಲಿ ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಶುಭಾಶಯಗಳು" ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಮಾತು ಮುಗಿಸಿದರು.

ಹಿನ್ನೆಲೆ

ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡುವ ಪ್ರಧಾನಮಂತ್ರಿಯವರ ಬದ್ಧತೆಯನ್ನು ಈಡೇರಿಸುವ ನಿಟ್ಟಿನಲ್ಲಿ ಉದ್ಯೋಗ ಮೇಳವು ಮಹತ್ವದ ಹೆಜ್ಜೆಯಾಗಿದೆ. ಉದ್ಯೋಗ ಮೇಳವು ಮತ್ತಷ್ಟು ಉದ್ಯೋಗ ಸೃಷ್ಟಿಯಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಯುವಕರ ಸಬಲೀಕರಣ ಮತ್ತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಅವರ ಭಾಗವಹಿಸುವಿಕೆಗೆ ಅರ್ಥಪೂರ್ಣ ಅವಕಾಶಗಳನ್ನು ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಹೊಸದಾಗಿ ನೇಮಕಗೊಂಡವರು ತಮ್ಮ ನವೀನ ಆಲೋಚನೆಗಳು ಮತ್ತು ಪಾತ್ರ ಸಂಬಂಧಿತ ಸಾಮರ್ಥ್ಯಗಳೊಂದಿಗೆ, ರಾಷ್ಟ್ರದ ಕೈಗಾರಿಕಾ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಬಲಪಡಿಸುವ ಕಾರ್ಯದಲ್ಲಿ ಕೊಡುಗೆ ನೀಡಲಿದ್ದಾರೆ, ಆ ಮೂಲಕ ಪ್ರಧಾನ ಮಂತ್ರಿಯವರ ʻವಿಕಸಿತ ಭಾರತʼ ಆಶಯವನ್ನು ಸಾಕಾರಗೊಳಿಸಲು ಸಹಾಯ ಮಾಡುತ್ತಾರೆ.

ಹೊಸದಾಗಿ ನೇಮಕಗೊಂಡ ಉದ್ಯೋಗಿಗಳು ʻಐಜಿಒಟಿ ಕರ್ಮಯೋಗಿʼ ಪೋರ್ಟಲ್‌ನಲ್ಲಿ ಆನ್ಲೈನ್ ಕಲಿಕಾ ಮಾಡ್ಯೂಲ್ ʻಕರ್ಮಯೋಗಿ ಪ್ರರಂಭʼ ಮೂಲಕ ಸ್ವಯಂ ತರಬೇತಿ ಪಡೆಯಲು ಅವಕಾಶ ಪಡೆಯುತ್ತಿದ್ದಾರೆ. ಅಲ್ಲಿ 800ಕ್ಕೂ ಹೆಚ್ಚು ಇ-

ಲರ್ನಿಂಗ್ ಕೋರ್ಸ್‌ಗಳನ್ನು ಎಲ್ಲಿಂದ ಬೇಕಾದರೂ, ಯಾವುದೇ ಸಾಧನದ ಮೂಲಕ ಕಲಿಯಲು ಲಭ್ಯವಾಗುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ

ಜನಪ್ರಿಯ ಭಾಷಣಗಳು

77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ
India's exports growth momentum continues, services trade at all-time high in 2023-24

Media Coverage

India's exports growth momentum continues, services trade at all-time high in 2023-24
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 16 ಎಪ್ರಿಲ್ 2024
April 16, 2024

Viksit Bharat – PM Modi’s vision for Holistic Growth