"ಸುಧಾರಣೆ, ಕಾರ್ಯಕ್ಷಮತೆ(ಸಾಧನೆ) ಮತ್ತು ಪರಿವರ್ತನೆಯೇ ನಮ್ಮ ಆಡಳಿತ ಮಂತ್ರವಾಗಿದೆ"
"ಕಳೆದ ದಶಕದಲ್ಲಿ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ, ಅವರು ನವ-ಮಧ್ಯಮ ವರ್ಗವನ್ನು ಸೃಷ್ಟಿಸಿದ್ದಾರೆ"
ಭಾರತವನ್ನು ಜಾಗತಿಕ ಉತ್ಪಾದನಾ ತಾಣವಾಗಿ ರೂಪಿಸುವುದು ಪ್ರತಿಯೊಬ್ಬ ಭಾರತೀಯನ ಆಶಯವಾಗಿದೆ
"ಮೂಲಸೌಕರ್ಯವು ನಮ್ಮ ನಾಗರಿಕರಿಗೆ ಅನುಕೂಲತೆ ಮತ್ತು ಜೀವನ ಸೌಕರ್ಯ ಸುಧಾರಿಸುವ ಸಾಧನವಾಗಿದೆ"
"21ನೇ ಶತಮಾನದ ಈ 3ನೇ ದಶಕವು ಭಾರತವನ್ನು ಮೇಲೆತ್ತುವ ದಶಕದಂತಿದೆ"
" ಭೂತಕಾಲ ಆಧರಿಸಿ ನಾವು ನಮ್ಮ ನೀತಿಗಳನ್ನು ರೂಪಿಸಿಲ್ಲ, ಆದರೆ ಭವಿಷ್ಯದ ಮೇಲೆ ಕಣ್ಣಿಟ್ಟು ರೂಪಿಸುತ್ತಿದ್ದೇವೆ"
“ಇಂದಿನ ಭಾರತ ಅವಕಾಶಗಳ ನಾಡು, ಇಂದಿನ ಭಾರತ ಸಂಪತ್ತಿನ ಸೃಷ್ಟಿಕರ್ತರನ್ನು ಗೌರವಿಸುತ್ತದೆ”
"ಸಮೃದ್ಧ ಭಾರತವು ಜಾಗತಿಕ ಸಮೃದ್ಧಿಗೆ ದಾರಿ ಮಾಡಿಕೊಡುತ್ತದೆ"

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿಂದು ಎಕನಾಮಿಕ್ ಟೈಮ್ಸ್ ವಿಶ್ವ ನಾಯಕರ ವೇದಿಕೆ(ವರ್ಲ್ಡ್ ಲೀಡರ್ಸ್ ಫೋರಂ) ಉದ್ದೇಶಿಸಿ ಭಾಷಣ ಮಾಡಿದರು.

ದೇಶದ ಉಜ್ವಲ ಭವಿಷ್ಯಕ್ಕಾಗಿ ಎಕನಾಮಿಕ್ ಟೈಮ್ಸ್ ವರ್ಲ್ಡ್ ಲೀಡರ್ಸ್ ಫೋರಮ್‌ನಲ್ಲಿ ಅದ್ಭುತ ಚರ್ಚೆಗಳು ನಡೆದಿವೆ, ಇಡೀ ಜಗತ್ತು ಭಾರತದ ಮೇಲೆ ವಿಶ್ವಾಸವಿಟ್ಟಿರುವ ಕಾಲಘಟ್ಟದಲ್ಲಿ ಈ ಅರ್ಥಪೂರ್ಣ ಚರ್ಚೆಗಳು ನಡೆಯುತ್ತಿವೆ ಎಂದು ಪ್ರಧಾನಿ ಹೇಳಿದರು.

ಭಾರತವಿಂದು ಹೊಸ ಯಶೋಗಾಥೆ ಬರೆಯುತ್ತಿದೆ, ಆರ್ಥಿಕತೆಯ ಕಾರ್ಯಕ್ಷಮತೆಯ ಮೂಲಕ ಆಗಿರುವ ಸುಧಾರಣೆಗಳ ಪರಿಣಾಮವನ್ನು ನೀವೆಲ್ಲರೂ ವೀಕ್ಷಿಸಬಹುದು. ಭಾರತವು ಕೆಲವೊಮ್ಮೆ ನಿರೀಕ್ಷೆಗಿಂತ ಉತ್ತಮ ಪ್ರದರ್ಶನ ನೀಡಿದೆ. ಕಳೆದ 10 ವರ್ಷಗಳಲ್ಲಿ ಭಾರತದ ಆರ್ಥಿಕತೆಯು ಶೇಕಡ 90ರಷ್ಟು ಬೆಳವಣಿಗೆ ಸಾಧಿಸಿದ್ದರೆ, ಜಾಗತಿಕ ಆರ್ಥಿಕತೆಯು ಶೇಕಡ 35ರಷ್ಟು ಬೆಳವಣಿಗೆಯಾಗಿದೆ. ನಾವು ಭರವಸೆ ನೀಡಿದಂತೆ, ಆರ್ಥಿಕತೆಯು ನಿರಂತರ ಬೆಳವಣಿಗೆ ಸಾಧಿಸಲಿದೆ ಮತ್ತು ಭವಿಷ್ಯದಲ್ಲೂ ಇದು ಮುಂದುವರಿಯುತ್ತದೆ ಎಂದರು.

 

ಕಳೆದ ವರ್ಷಗಳಲ್ಲಿ ಜನರ ಒಳಿತಿಗಾಗಿ ಸರ್ಕಾರ ಸರ್ವತೋಮುಖ ಬದಲಾವಣೆಗಳನ್ನು ತಂದಿದೆ, ಈ ಎಲ್ಲಾ ಪ್ರಯತ್ನಗಳು ಕೋಟ್ಯಂತರ ನಾಗರಿಕರ ಬದುಕನ್ನು ಮುಟ್ಟಿದೆ. "ಜನರಿಗೆ ಉತ್ತಮ ಆಡಳಿತ ನೀಡುವುದು ಸರ್ಕಾರದ ಸಂಕಲ್ಪವಾಗಿದೆ", "ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆ ನಮ್ಮ ಆಡಳಿತ ಮಂತ್ರವಾಗಿದೆ". ಕಳೆದ 10 ವರ್ಷಗಳಲ್ಲಿ ಸರ್ಕಾರದ ಸೇವಾ ಮನೋಭಾವ ಮತ್ತು ದೇಶದ ಸಾಧನೆಗಳನ್ನು ಭಾರತದ ಜನರು ಕಂಡಿದ್ದಾರೆ. ಆದ್ದರಿಂದ, ಭಾರತದ ಜನರು ಹೊಸ ನಂಬಿಕೆಗಳಿಂದ ತುಂಬಿದ್ದಾರೆ. ತಮ್ಮ ಮೇಲಿನ ನಂಬಿಕೆ, ರಾಷ್ಟ್ರದ ಪ್ರಗತಿ, ನೀತಿಗಳು, ನಿರ್ಧಾರಗಳು ಮತ್ತು ಸರ್ಕಾರದ ಉದ್ದೇಶಗಳು ಈ ಎಲ್ಲಾ ನಂಬಿಕೆಗಳಿಗೆ ಕಾರಣವಾಗಿವೆ. ವಿಶ್ವದ  ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಚುನಾವಣೆಗಳ ಮೇಲೆ ಬೆಳಕು ಚೆಲ್ಲಿದ ಪ್ರಧಾನಿ, ಜನರು ಹೆಚ್ಚಿನ ಸಂದರ್ಭಗಳಲ್ಲಿ ಬದಲಾವಣೆಗಾಗಿ ಮತ ಚಲಾಯಿಸಿದರೂ, ಹಲವಾರು ದೇಶಗಳಲ್ಲಿ ಸರ್ಕಾರಗಳು ತೊಂದರೆಗಳನ್ನು ಎದುರಿಸಬೇಕಾಯಿತು. ಇದಕ್ಕೆ ಪ್ರತಿಯಾಗಿ, 60 ವರ್ಷಗಳಲ್ಲೇ ಮೊದಲ ಬಾರಿಗೆ ಭಾರತೀಯ ಮತದಾರರು ನಮ್ಮ ಸರ್ಕಾರಕ್ಕೆ 3 ಬಾರಿ ಗೆಲುವು ತಂದುಕೊಟ್ಟು ಹ್ಯಾಟ್ರಿಕ್ ಸಾಧನೆ ಮಾಡಿದರು. ಭಾರತದ ಮಹತ್ವಾಕಾಂಕ್ಷೆಯ ಯುವಕರು ಮತ್ತು ಮಹಿಳೆಯರು ನಿರಂತರತೆ, ರಾಜಕೀಯ ಸ್ಥಿರತೆ ಮತ್ತು ಆರ್ಥಿಕ ಬೆಳವಣಿಗೆಗೆ ಮತ ಹಾಕಿದ್ದಾರೆ, ಅವರ ಬೆಂಬಲಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

"ಭಾರತದ ಪ್ರಗತಿಯು ಜಾಗತಿಕ ಮುಖ್ಯಾಂಶಗಳ ಭಾಗವಾಗುತ್ತಿದೆ". ಅಂಕಿಅಂಶಗಳು ತಮ್ಮದೇ ಆದ ಪ್ರಾಮುಖ್ಯತೆ ಹೊಂದಿದ್ದರೂ, ಎಷ್ಟು ಜನರ ಜೀವನವನ್ನು ಪರಿವರ್ತಿಸಿದೆ ಎಂಬುದನ್ನು ನೋಡುವುದಷ್ಟೇ ಪ್ರಸ್ತುತವಾಗಿದೆ. ಭಾರತದ ಭವಿಷ್ಯದ ರಹಸ್ಯವು ಎರಡನೇ ವಿಚಾರದಲ್ಲಿ ಅಡಗಿದೆ. "ಕಳೆದ ದಶಕದಲ್ಲಿ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ, ಅವರೆಲ್ಲರೂ ನವ-ಮಧ್ಯಮ ವರ್ಗ ಸೃಷ್ಟಿಸಿದ್ದಾರೆ". ಇದರ ವೇಗ ಮತ್ತು ಪ್ರಮಾಣವು ಐತಿಹಾಸಿಕವಾಗಿದೆ. ಈ ಹಿಂದೆ ವಿಶ್ವದ ಯಾವುದೇ ಪ್ರಜಾಪ್ರಭುತ್ವ ಸಮಾಜದಲ್ಲಿ ಇದು ಸಂಭವಿಸಿಲ್ಲ. ಬಡವರ ಬಗೆಗಿನ ಸರಕಾರದ ಧೋರಣೆ ಬದಲಾವಣೆಯಿಂದಾಗಿ ಈ ಪರಿವರ್ತನೆ ಸಾಧ್ಯವಾಗಿದೆ. ಆಕಾಂಕ್ಷೆಗಳು ಮತ್ತು ಹೋರಾಟದ ಮನೋಭಾವ ಹೊಂದಿದ್ದರೂ, ಬಡವರು ಮೂಲಸೌಕರ್ಯಗಳ ಕೊರತೆಯಂತಹ ಅನೇಕ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ. ಬಡವರ ಅಡೆತಡೆಗಳನ್ನು ನಿವಾರಿಸಿ ಅವರನ್ನು ಬೆಂಬಲಿಸುವ ಮೂಲಕ ಅವರ ಸಬಲೀಕರಣದ ಮಾರ್ಗವನ್ನು ಸರ್ಕಾರ ಆಯ್ಕೆ ಮಾಡಿಕೊಂಡಿದೆ. ಈ ಮಾರ್ಗವು ಡಿಜಿಟಲ್ ವಹಿವಾಟು ಮತ್ತು ಖಾತರಿ-ಮುಕ್ತ ಸಾಲದಂತಹ ಪ್ರಯೋಜನಗಳೊಂದಿಗೆ ಬಡವರ ಜೀವನ ಪರಿವರ್ತಿಸಲು ಕಾರಣವಾಯಿತು. ಇಂದು ಅನೇಕ ಬಡವರು ಉದ್ಯಮಿಗಳಾಗುತ್ತಿದ್ದಾರೆ, ಸಂಪರ್ಕ ಮತ್ತು ಸಾಧನಗಳ ಸಹಾಯದಿಂದ ಅವರು ಈಗ 'ಉತ್ತಮ ತಿಳುವಳಿಕೆಯುಳ್ಳ ನಾಗರಿಕರು' ಆಗುತ್ತಿದ್ದಾರೆ. ಬಡತನದಿಂದ ಹೊರಬರುತ್ತಿರುವ ಜನರು ಪ್ರಗತಿಯ ಬಲವಾದ ಬಯಕೆ ಹೊಂದಿದ್ದಾರೆ, ಅವರ ಆಕಾಂಕ್ಷೆಗಳು ಹೊಸ ಮೂಲಸೌಕರ್ಯಗಳ ಅಭಿವೃದ್ಧಿಗೆ ಕಾರಣವಾಗಿವೆ. ಅವರ ಸೃಜನಶೀಲತೆಯು ನಾವೀನ್ಯತೆಯ ಹೊಸ ಮಾರ್ಗಗಳನ್ನು ಕೆತ್ತುತ್ತಿರುವಾಗ, ಅವರ ಕೌಶಲ್ಯಗಳು ಉದ್ಯಮದ ದಿಕ್ಕನ್ನು ರೂಪಿಸುತ್ತಿವೆ. ಅವರ ಅಗತ್ಯಗಳು ಮಾರುಕಟ್ಟೆಯ ದಿಕ್ಕನ್ನು ರೂಪಿಸುತ್ತಿವೆ, ಅವರ ಆದಾಯದ ಬೆಳವಣಿಗೆಯು ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸುತ್ತಿದೆ. "ಭಾರತದ ನವ-ಮಧ್ಯಮ ವರ್ಗವು ದೇಶದ ಪ್ರಗತಿಗೆ ದೊಡ್ಡ ಶಕ್ತಿ ಎಂಬುದು ಸಾಬೀತಾಗಿದೆ" ಎಂದು ಶ್ರೀ ಮೋದಿ ಶ್ಲಾಘಿಸಿದರು.

 

ಸರ್ಕಾರದ 3ನೇ ಅವಧಿಯಲ್ಲಿ 3 ಪಟ್ಟು ವೇಗದಲ್ಲಿ ಕೆಲಸ ಮಾಡುವ ಬಗ್ಗೆ ಮಾತನಾಡಿದ ಪ್ರಧಾನಿ, ಚುನಾವಣಾ ಫಲಿತಾಂಶದ ದಿನವನ್ನು ನೆನಪಿಸಿಕೊಂಡರು. ಉದ್ದೇಶಗಳು ಇಂದು ಇನ್ನಷ್ಟು ಬಲವಾಗಿವೆ. ನಾಗರಿಕರಂತೆಯೇ ಸರ್ಕಾರವೂ ಹೊಸ ನಂಬಿಕೆಗಳು ಮತ್ತು ಭರವಸೆಗಳಿಂದ ತುಂಬಿದೆ. ಸರ್ಕಾರದ 3ನೇ ಅವಧಿಯು ಇನ್ನೂ 100 ದಿನಗಳನ್ನು ಪೂರೈಸಿಲ್ಲ ಎಂದು ಗಮನಿಸಿದ ಪ್ರಧಾನಿ, ಭೌತಿಕ ಮೂಲಸೌಕರ್ಯಗಳನ್ನು ಆಧುನೀಕರಿಸುವುದು, ಸಾಮಾಜಿಕ ಮೂಲಸೌಕರ್ಯಗಳನ್ನು ವಿಸ್ತರಿಸುವುದು ಮತ್ತು ಸುಧಾರಣೆಗಳೊಂದಿಗೆ ಮುಂದುವರಿಯುವುದಕ್ಕೆ ಒತ್ತು ನೀಡಲಾಗುತ್ತಿದೆ. ಕಳೆದ 3 ತಿಂಗಳಲ್ಲಿ ಸರ್ಕಾರ ಬಡವರು, ಯುವಕರು, ಮಹಿಳೆಯರು ಮತ್ತು ರೈತರಿಗಾಗಿ ಅನೇಕ ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡಿದೆ. ಇತ್ತೀಚಿನ ಸಾಧನೆಗಳನ್ನು ಪಟ್ಟಿ ಮಾಡಿದ ಪ್ರಧಾನಿ, ಬಡವರಿಗೆ 3 ಕೋಟಿ ಪಕ್ಕಾ ಮನೆ, ಏಕೀಕೃತ ಪಿಂಚಣಿ ಯೋಜನೆ, ಕೃಷಿ ಮೂಲಸೌಕರ್ಯ ವಿಸ್ತರಣೆಗೆ 1 ಲಕ್ಷ ಕೋಟಿ ರೂ. ನಿಧಿ, ರೈತರಿಗೆ ಉತ್ತಮ ಗುಣಮಟ್ಟದ ಬಹು ಬೀಜಗಳ ಬಿಡುಗಡೆ, 2 ಲಕ್ಷ ಕೋಟಿ ರೂ. ಮೌಲ್ಯದ ಪ್ರಧಾನಮಂತ್ರಿ ಪ್ಯಾಕೇಜ್, 4 ಕೋಟಿಗೂ ಹೆಚ್ಚು ಯುವಕರು ಮತ್ತು ಗ್ರಾಮೀಣ ಹಿನ್ನೆಲೆಯಿಂದ ಬಂದ 11 ಲಕ್ಷ ಹೊಸ ಲಕ್ಷಾಧಿಪತಿ(ಲಖ್ಪತಿ) ದೀದಿಗಳು ನೇರವಾಗಿ ಪ್ರಯೋಜನ ಪಡೆಯುತ್ತಿದ್ದಾರೆ. ಲಖ್ಪತಿ ದೀದಿ ಕಾರ್ಯಕ್ರಮವನ್ನು ಉಲ್ಲೇಖಿಸಿದ ಶ್ರೀ ಮೋದಿ, ಮಹಿಳೆಯರ ಆರ್ಥಿಕ ಸಬಲೀಕರಣದಲ್ಲಿ ಇದು ದೊಡ್ಡ ಪಾತ್ರ ವಹಿಸಿದೆ ಎಂದು ಹೇಳಿದರು.

75,000 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ವಧ್ವಾನ್ ಬಂದರಿಗೆ ಶಂಕುಸ್ಥಾಪನೆ ಮಾಡಲು ನಿನ್ನೆ ಮಹಾರಾಷ್ಟ್ರದ ಪಾಲ್ಘರ್‌ಗೆ ಭೇಟಿ ನೀಡಿದ್ದನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದರು. 3 ದಿನಗಳ ಹಿಂದೆ 30 ಸಾವಿರ ಕೋಟಿ ರೂ. ಬಂಡವಾಳದಲ್ಲಿ 12 ಹೊಸ ಕೈಗಾರಿಕಾ ನಗರಗಳನ್ನು ಅಭಿವೃದ್ಧಿಪಡಿಸುವ ನಿರ್ಧಾರ, 50 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ 9 ಹೈಸ್ಪೀಡ್ ಕಾರಿಡಾರ್ ನಿರ್ಮಾಣ ಹಾಗೂ 30 ಸಾವಿರ ಕೋಟಿ ರೂ.ಗಳಲ್ಲಿ ಪುಣೆ, ಥಾಣೆ ಮತ್ತು ಬೆಂಗಳೂರು ಮೆಟ್ರೊ ವಿಸ್ತರಣೆ ಯೋಜನೆಗಳನ್ನು ಪ್ರಸ್ತಾಪಿಸಿದರು. ಲಡಾಖ್‌ನಲ್ಲಿ ವಿಶ್ವದ ಅತಿ ಎತ್ತರದ ಸುರಂಗಗಳ ನಿರ್ಮಾಣ ಕಾರ್ಯ ಆರಂಭವಾಗಿದೆ ಎಂದು ಮಾಹಿತಿ ನೀಡಿದರು.

 

ಇಂದು 3 ಹೊಸ ವಂದೇ ಭಾರತ್ ರೈಲುಗಳಿಗೆ ಹಸಿರುನಾಶಾನೆ ತೋರುವ ಮೂಲಕ ಭಾರತದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲು ಗುರುತಿಸಲಾಗಿದೆ. ಸರ್ಕಾರದ ಪರಿವರ್ತಕ ವಿಧಾನಕ್ಕೆ ಒತ್ತು ನೀಡಿದ ಅವರು, "ನಮಗೆ ಮೂಲಸೌಕರ್ಯವು ಕೇವಲ ಉದ್ದ, ಅಗಲ ಮತ್ತು ಎತ್ತರವನ್ನು ಹೆಚ್ಚಿಸುವುದಲ್ಲ, ಇದು ಭಾರತದ ನಾಗರಿಕರಿಗೆ ಸುಲಭವಾಗಿ ಬದುಕುವ ಒಂದು ಸಾಧನವಾಗಿದೆ. ರೈಲು ಬೋಗಿಗಳನ್ನು ನಿರಂತವಾಗಿ ನಿರ್ಮಿಸುತ್ತಾ ಬರಲಾಗಿದೆ. ವೇಗ ಮತ್ತು ಸೌಕರ್ಯ ಎರಡನ್ನೂ ನೀಡುವ ವಂದೇ ಭಾರತ್‌ನಂತಹ ಆಧುನಿಕ ರೈಲುಗಳನ್ನು ಪರಿಚಯಿಸಲಾಗಿದೆ. "ಈ ಹೊಸ ರೈಲುಗಳ ಆರಂಭವು ದೇಶದ ಸಾರಿಗೆ ಮೂಲಸೌಕರ್ಯವನ್ನು ಕ್ರಾಂತಿಕಾರಿಗೊಳಿಸುವ ವಿಶಾಲ ದೃಷ್ಟಿಯ ಭಾಗವಾಗಿದೆ, ವೇಗವಾಗಿ ಆಧುನೀಕರಣಗೊಳ್ಳುತ್ತಿರುವ ರಾಷ್ಟ್ರದ ಅಗತ್ಯಗಳಿಗೆ ಇದು ಹೊಂದಿಕೆಯಾಗುತ್ತದೆ" ಎಂದರು.

ದೇಶದ ಸಂಪರ್ಕ ಜಾಲ ಮೇಲ್ದರ್ಜೆಗೇರಿಸುವ ಸರ್ಕಾರದ ಬದ್ಧತೆಯನ್ನು ಪ್ರಸ್ತಾಪಿಸಿದ ಮೋದಿ, "ದೇಶದಲ್ಲಿ ಮೊದಲು ಕೇವಲ ರಸ್ತೆಗಳನ್ನು ನಿರ್ಮಿಸಲಾಗುತ್ತಿತ್ತು, ಆದರೆ ನಾವು ಭಾರತದಾದ್ಯಂತ ಆಧುನಿಕ ಎಕ್ಸ್‌ಪ್ರೆಸ್‌ವೇಗಳ ಜಾಲ ವಿಸ್ತರಿಸುತ್ತಿದ್ದೇವೆ".  ವಿಶೇಷವಾಗಿ ಸಣ್ಣ ನಗರಗಳಲ್ಲಿ ವೈಮಾನಿಕ ಸಂಪರ್ಕ ಹೆಚ್ಚಿಸುವ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ವಿಮಾನ ನಿಲ್ದಾಣಗಳು ಮೊದಲು ಅಸ್ತಿತ್ವದಲ್ಲಿದ್ದವು, ಆದರೆ ಸರ್ಕಾರವು ಶ್ರೇಣಿ -2 ಮತ್ತು ಶ್ರೇಣಿ -3 ನಗರಗಳಿಗೆ ವೈಮಾನಿಕ ಸಂಪರ್ಕ ಒದಗಿಸುತ್ತಿದೆ, ಆಧುನಿಕ ಸಾರಿಗೆಯ ಪ್ರಯೋಜನಗಳನ್ನು ಭಾರತದ ಎಲ್ಲಾ ಮೂಲೆಗಳಿಗೆ ತರುತ್ತಿದೆ ಎಂದು ವಿವರಿಸಿದರು.

 

ಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಪ್ರಸ್ತಾಪಿಸಿದ ಅವರು, ಇದು ಸರ್ಕಾರಿ ಇಲಾಖೆಗಳಲ್ಲಿನ ಅಡ್ಡಿ ಆತಂಕಗಳನ್ನು ನಿವಾರಿಸುವ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಏಕೀಕೃತ, ಸಂಘಟಿತ ಕಾರ್ಯವಿಧಾನ ರೂಪಿಸುವ ಗುರಿ ಹೊಂದಿದೆ. "ಈ ಪ್ರಯತ್ನಗಳು ಗಮನಾರ್ಹವಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ. ಜತೆಗೆ, ನಮ್ಮ ಆರ್ಥಿಕತೆ ಮತ್ತು ಉದ್ಯಮದ ಮೇಲೆ ಆಳವಾದ ಸಕಾರಾತ್ಮಕ ಪ್ರಭಾವ ಬೀರುತ್ತಿವೆ". ಸರ್ಕಾರದ ಉಪಕ್ರಮಗಳಿಂದ ವಿಶಾಲ ಆರ್ಥಿಕ ಪ್ರಯೋಜನಗಳು ಸಿಗುತ್ತಿವೆ ಎಂದರು.

21ನೇ ಶತಮಾನದ 3ನೇ ದಶಕವು ಭಾರತಕ್ಕೆ ಉತ್ಥಾನದ ದಶಕದಂತೆ ಎದುರು ಕಾಣುತ್ತಿದೆ. ಈ ಆವೇಗವನ್ನು ಮುಂದುವರಿಸಿಕೊಂಡು ಹೋಗಲು ಸಾಮೂಹಿಕ ಅಥವಾ ಸಂಘಟಿತ ಜವಾಬ್ದಾರಿ ಹೊರಬೇಕು. ಅಭಿವೃದ್ಧಿಯ ಪ್ರಯೋಜನಗಳು ರಾಷ್ಟ್ರಾದ್ಯಂತ ಎಲ್ಲಾ ನಾಗರಿಕರಿಗೂ ತಲುಪುವುದನ್ನು ಖಾತ್ರಿಪಡಿಸುತ್ತಿದ್ದೇವೆ. ಭಾರತದ ಆರ್ಥಿಕತೆ ಮತ್ತು ಖಾಸಗಿ ವಲಯದ ಪಾಲುದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಪ್ರಗತಿಯು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸುವ ಆಧಾರಸ್ತಂಭಗಳನ್ನು ಹೊಂದಿದೆ. "ಈ ಆಧಾರಸ್ತಂಭಗಳು ಭಾರತದ ಸಮೃದ್ಧಿಯ ಭದ್ರ ಬುನಾದಿ ಆಗಿರುವುದು ಮಾತ್ರವಲ್ಲ, ಜಾಗತಿಕ ಸಮೃದ್ಧಿಗೂ ಬಲಿಷ್ಠ ಆಧಾರಸ್ತಂಭಗಳಾಗಿವೆ." ಭಾರತವು ವಿವಿಧ ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳ ಹೆಚ್ಚಳ ಕಾಣುತ್ತಿರುವಂತೆ, ದೇಶದ ದೀರ್ಘಾವಧಿಯ ದೃಷ್ಟಿಗೆ ಕೊಡುಗೆ ನೀಡುವ ಎಲ್ಲಾ ಉಪಕ್ರಮಗಳಿಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು. ದೇಶದ ಆರ್ಥಿಕತೆಯು ದೈತ್ಯಾಕಾರದ ಜಿಗಿತ ಕಾಣುವ ಅಗತ್ಯವಿದೆ, ಈ ನಿಟ್ಟಿನಲ್ಲಿ ಸರ್ಕಾರವು ದೀರ್ಘಾವಧಿಯ ದೃಷ್ಟಿಕೋನದಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

 

"ಭಾರತವನ್ನು ಜಾಗತಿಕ ಉತ್ಪಾದನಾ ತಾಣವನ್ನಾಗಿ ಮಾಡುವುದು ಪ್ರತಿಯೊಬ್ಬ ಭಾರತೀಯನ ಆಕಾಂಕ್ಷೆಯಾಗಿದೆ". ಇದು ಭಾರತದಿಂದ ವಿಶ್ವ ಹೊಂದಿರುವ ನಿರೀಕ್ಷೆಯೂ ಆಗಿದೆ. ಇಂದು ಈ ನಿಟ್ಟಿನಲ್ಲಿ ದೇಶದಲ್ಲಿ ಕ್ರಾಂತಿ ಆಗುತ್ತಿದೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಇಂದು ಎಂಎಸ್‌ಎಂಇಗಳು ದೇಶದಲ್ಲಿ ಹೆಚ್ಚು ಅಗತ್ಯವಿರುವ ಬೆಂಬಲ ಪಡೆಯುತ್ತಿವೆ. ಸರ್ಕಾರ ಕೈಗೊಂಡ ಉಪಕ್ರಮಗಳನ್ನು ಪಟ್ಟಿ ಮಾಡಿದ ಶ್ರೀ ಮೋದಿ, ನಿರ್ಣಾಯಕ ಖನಿಜಗಳ ಉತ್ಪಾದನೆ ಉತ್ತೇಜಿಸುವ ಸಂದರ್ಭದಲ್ಲಿ ಸಕಲ ಸೌಲಭ್ಯವುಳ್ಳ ಕೈಗಾರಿಕಾ ಪಾರ್ಕ್‌ಗಳು ಮತ್ತು ಆರ್ಥಿಕ ಕಾರಿಡಾರ್‌ಗಳನ್ನು ನಿರ್ಮಿಸಲಾಗುತ್ತಿದೆ. ಭಾರತದಲ್ಲಿ ಉತ್ಪಾದನೆ ಸಂಪರ್ಕಿತ ಉತ್ತೇಜನಾ ಯೋಜನೆಗಳು(ಪಿಎಲ್ಐ) ಸಾಧಿಸಿದ ಯಶಸ್ಸು ಅಭೂತಪೂರ್ವವಾಗಿದೆ ಎಂದರು.

ಗುಲಾಮಗಿರಿಯ ಹಿಂದಿನ ಅವಧಿಯನ್ನು ವಿವರಿಸಿದ ಪ್ರಧಾನಿ, ಭಾರತದ ಸಮೃದ್ಧಿಯ ಪ್ರಮುಖ ಆಧಾರವೆಂದರೆ ನಮ್ಮ ಜ್ಞಾನ ವ್ಯವಸ್ಥೆ, ಇದು ಅಭಿವೃದ್ಧಿ ಹೊಂದಿದ ಭಾರತದ ಪ್ರಮುಖ ಆಧಾರಸ್ತಂಭವಾಗಿದೆ. ಭಾರತವನ್ನು ಕೌಶಲ್ಯ, ಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆಯ ಕೇಂದ್ರವನ್ನಾಗಿ ಮಾಡಲು ಸರ್ಕಾರವು ಉದ್ಯಮ ಮತ್ತು ಶೈಕ್ಷಣಿಕ ಪಾಲುದಾರರನ್ನು ಬಳಸಿಕೊಳ್ಳುತ್ತಿದೆ. ಈ ವರ್ಷದ ಬಜೆಟ್‌ನಲ್ಲಿ ಇದಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, 1 ಲಕ್ಷ ಕೋಟಿ ರೂಪಾಯಿ ಮೊತ್ತದ ಸಂಶೋಧನಾ ನಿಧಿಯಲ್ಲಿ ಇದನ್ನು ಪ್ರತಿಬಿಂಬಿಸಲಾಗಿದೆ. ಮಧ್ಯಮ ವರ್ಗದ ಕುಟುಂಬಗಳ ಮಕ್ಕಳು ವಿದೇಶದಲ್ಲಿ ವ್ಯಾಸಂಗಕ್ಕಾಗಿ ಅಪಾರ ಪ್ರಮಾಣದ ಹಣ ವ್ಯಯಿಸುತ್ತಿದ್ದಾರೆ. ಅತಿಯಾದ ವೆಚ್ಚದಿಂದ ಜನರಿಗೆ ಸಹಾಯ ಮಾಡಲು ಭಾರತದಲ್ಲಿ ಉನ್ನತ ವಿದೇಶಿ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳನ್ನು ತೆರೆಯುವ ಕ್ರಮಗಳಿಗೆ ಸರ್ಕಾರ ಒತ್ತು ನೀಡಿದೆ. ಸ್ವಾತಂತ್ರ್ಯದ ನಂತರದ ಮೊದಲ 7 ದಶಕಗಳಲ್ಲಿ ಇದ್ದ 80 ಸಾವಿರಕ್ಕೆ ಹೋಲಿಸಿದರೆ, ಕಳೆದ ದಶಕದಲ್ಲಿ ಸುಮಾರು 1 ಲಕ್ಷ ಹೊಸ ಎಂಬಿಬಿಎಸ್-ಎಂಡಿ ಸೀಟುಗಳನ್ನು ಹೆಚ್ಚಿಸಲಾಗಿದೆ. ಮುಂದಿನ 5 ವರ್ಷಗಳಲ್ಲಿ 75 ಸಾವಿರ ಹೊಸ ವೈದ್ಯಕೀಯ ಸೀಟುಗಳನ್ನು ಸೃಷ್ಟಿಸುವ ಈ ವರ್ಷದ ಸ್ವಾತಂತ್ರ್ಯ ದಿನ ಭಾಷಣದ ಘೋಷಣೆಯನ್ನು ಅವರು ನೆನಪಿಸಿಕೊಂಡರು. ಇದು ಮುಂದಿನ ದಿನಗಳಲ್ಲಿ ಭಾರತವನ್ನು ವಿಶ್ವದಲ್ಲೇ ಆರೋಗ್ಯ ಮತ್ತು ಸ್ವಾಸ್ಥ್ಯದ ನಿರ್ಣಾಯಕ ಕೇಂದ್ರವನ್ನಾಗಿ ಮಾಡುತ್ತದೆ ಎಂದರು.

ಭಾರತವು ‘ಜಾಗತಿಕ ಆಹಾರ ಬುಟ್ಟಿ(ತಾಣ)’ಯಾಗಲು ರಾಷ್ಟ್ರ ಹೊಂದಿರುವ  ಬದ್ಧತೆಯನ್ನು ವಿವರಿಸಿದ ಪ್ರಧಾನಿ, ವಿಶ್ವದ ಪ್ರತಿ ಮನೆಯ ಡೈನಿಂಗ್ ಟೇಬಲ್‌ ಮೇಲೆ ಕನಿಷ್ಠ ಒಂದು ಆಹಾರ ಉತ್ಪನ್ನ ಭಾರತದ್ದಾಗಿರಬೇಕು ಎಂಬ ಸರ್ಕಾರದ ಸಂಕಲ್ಪವನ್ನು ಒತ್ತಿ ಹೇಳಿದರು. ಈ ದೃಷ್ಟಿಕೋನ ಸಾಕಾರಗೊಳಿಸಲು, ಸರ್ಕಾರವು ಭಾರತದ ಡೇರಿ ಮತ್ತು ಸಮುದ್ರಾಹಾರ ಉತ್ಪನ್ನಗಳ ಗುಣಮಟ್ಟ ಹೆಚ್ಚಿಸುವುದರೊಂದಿಗೆ ಸಾವಯವ ಮತ್ತು ನೈಸರ್ಗಿಕ ಕೃಷಿ ಪದ್ಧತಿಗಳನ್ನು ಏಕಕಾಲದಲ್ಲಿ ಉತ್ತೇಜಿಸುತ್ತಿದೆ. ಭಾರತದ ಇತ್ತೀಚಿನ ಸಾಧನೆಗಳನ್ನು ಪ್ರಸ್ತಾಪಿಸಿದ ಅವರು, ಭಾರತವು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷದ ಜಾಗತಿಕ ಆಚರಣೆ ನಡೆಸಿದೆ. "ಜಗತ್ತಿನ ಅತಿ ಹೆಚ್ಚು ಸಿರಿಧಾನ್ಯಗಳ ಉತ್ಪಾದಕರು ಯಾರು? ಅದು ಭಾರತ". ಪ್ರಕೃತಿ ಮತ್ತು ಪ್ರಗತಿ ಎರಡಕ್ಕೂ ಇದು ಉತ್ಕೃಷ್ಟ ಆಹಾರವಾಗಿದೆ. ಜಾಗತಿಕ ಆಹಾರ ಬ್ರಾಂಡ್‌ಗಳಲ್ಲಿ ಭಾರತದ ಬೆಳೆಯುತ್ತಿರುವ ಉಪಸ್ಥಿತಿಯ ಬಗ್ಗೆ ಪ್ರಧಾನ ಮಂತ್ರಿ ಅವರು ತಮ್ಮ ತೃಪ್ತಿ ವ್ಯಕ್ತಪಡಿಸಿದರು, ಇದು ಆಹಾರ ಉದ್ಯಮದಲ್ಲಿ ದೇಶದ ಏರುತ್ತಿರುವ ಸ್ಥಾನಮಾನವನ್ನು ಸೂಚಿಸುತ್ತದೆ ಎಂದರು.

 

ವಿಕಸಿತ ಭಾರತದ ಮತ್ತೊಂದು ನಿರ್ಣಾಯಕ ಆಧಾರಸ್ತಂಭದತ್ತ ಗಮನ ಕೇಂದ್ರೀಕರಿಸಿದ ಪ್ರಧಾನ ಮಂತ್ರಿ, ಹಸಿರು ಇಂಧನ ಗ್ರೀನ್ ಹೈಡ್ರೋಜನ್ ಉಪಕ್ರಮವು ಜಿ-20 ಶೃಂಗಸಭೆಯಲ್ಲಿ ಎಲ್ಲಾ ದೇಶಗಳಿಂದ ಬೆಂಬಲ ಪಡೆದಿದೆ, 2030ರ ವೇಳೆಗೆ 5 ದಶಲಕ್ಷ ಟನ್ ಹಸಿರು ಜಲಜನಕ ಉತ್ಪಾದಿಸುವ ಸಾಮರ್ಥ್ಯ ಅಭಿವೃದ್ಧಿಪಡಿಸುವ ಭಾರತದ ಮಹತ್ವಾಕಾಂಕ್ಷೆಯ ಗುರಿಯನ್ನು ಘೋಷಿಸಿದರು, ಜತೆಗೆ ಅದೇ ಅವಧಿಯ ಹೊತ್ತಿಗೆ 500 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದನೆ ಗುರಿ ಹೊಂದಲಾಗಿದೆ ಎಂದರು.

ಈಗಾಗಲೇ ರಾಷ್ಟ್ರದ ಪ್ರಗತಿ ವೇಗಗೊಳಿಸಿರುವ ತಂತ್ರಜ್ಞಾನದ ಜತೆಗೆ, ಭಾರತದ ಬೆಳವಣಿಗೆಗೆ ಪ್ರಬಲ ಆಧಾರಸ್ತಂಭವಾಗಿ ಪ್ರವಾಸೋದ್ಯಮ ಉತ್ತೇಜನಕ್ಕೆ ಒತ್ತು ನೀಡಲಾಗಿದೆ. "ಭಾರತವು ಜಾಗತಿಕ ಪ್ರವಾಸಿಗರಿಗೆ ಅಗ್ರ ತಾಣವಾಗಲು ಶ್ರಮಿಸುತ್ತಿದೆ", ಭಾರತದ ಐತಿಹಾಸಿಕ ಮತ್ತು ಸಾಂಸ್ಕೃತಿಕ ತಾಣಗಳನ್ನು ಹೆಚ್ಚಿಸಲು ಮತ್ತು ಸಣ್ಣ ಕಡಲತೀರಗಳನ್ನು ಅಭಿವೃದ್ಧಿಪಡಿಸಲು ನಡೆಯುತ್ತಿರುವ ಪ್ರಯತ್ನಗಳಿಗೆ ಒತ್ತು ನೀಡಿದರು. 'ದೇಖೋ ಅಪ್ನಾ ದೇಶ್, ಪೀಪಲ್ಸ್ ಚಾಯ್ಸ್' ಅಭಿಯಾನಕ್ಕೆ ಆದ್ಯತೆ ನೀಡಲಾಗಿದೆ. ಅಲ್ಲಿ ನಾಗರಿಕರು ಭಾರತದ ಪ್ರಮುಖ ಪ್ರವಾಸಿ ತಾಣಗಳನ್ನು ಗುರುತಿಸಲು ಮತ ಚಲಾಯಿಸುತ್ತಿದ್ದಾರೆ, ನಂತರ ಅದನ್ನು ಕಾರ್ಯಾಚರಣೆ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. "ಈ ಉಪಕ್ರಮವು ಗಮನಾರ್ಹ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ" ಎಂದರು.

ಎಲ್ಲರನ್ನೂ ಒಳಗೊಂಡ ಜಾಗತಿಕ ಅಭಿವೃದ್ಧಿಯ ಪ್ರಾಮುಖ್ಯತೆಗೆ ಒತ್ತು ನೀಡಿದ ಪ್ರಧಾನಿ, ವಿಶೇಷವಾಗಿ ಜಾಗತಿಕ ದಕ್ಷಿಣಕ್ಕೆ ಭಾರತದ ಜಿ-20 ಅಧ್ಯತೆಯಲ್ಲಿ ಒತ್ತು ನೀಡಲಾಗಿದೆ. "ಭಾರತವು ಜಾಗತಿಕ ದಕ್ಷಿಣದ ಧ್ವನಿಯನ್ನು ಹೆಚ್ಚಿಸಿದೆ. ನಮ್ಮ ಆಫ್ರಿಕಾ ಸ್ನೇಹಿತರನ್ನು ಸಬಲೀಕರಣಗೊಳಿಸಲು ಸಹಾಯ ಮಾಡಲಾಗಿದೆ". ಜಾಗತಿಕ ಭ್ರಾತೃತ್ವದ ಉತ್ಸಾಹದಲ್ಲಿ ಭಾರತವು ಈ ರಾಷ್ಟ್ರಗಳಿಗೆ ಧ್ವನಿಯಾಗಿ ಕಾರ್ಯ ನಿರ್ವಹಿಸುವುದರೊಂದಿಗೆ ಜಾಗತಿಕ ದಕ್ಷಿಣವು ಹೆಚ್ಚಿನ ಸಾಮರ್ಥ್ಯ ಹೊಂದಿದೆ. "ನಾವು ಎಲ್ಲರನ್ನು ಒಳಗೊಂಡ ಅಭಿವೃದ್ಧಿ ಖಾತ್ರಿಪಡಿಸುವ ವಿಶ್ವ ಕ್ರಮವನ್ನು ಬಯಸುತ್ತೇವೆ, ವಿಶೇಷವಾಗಿ ಜಾಗತಿಕ ದಕ್ಷಿಣ" ಎಂದು ಅವರು ಪ್ರತಿಪಾದಿಸಿದರು.

ಪ್ರಪಂಚದ ಕ್ರಿಯಾತ್ಮಕ ಸ್ವರೂಪ ಗುರುತಿಸಿದ ಶ್ರೀ ಮೋದಿ, ಭಾರತ ಸರ್ಕಾರದ ನೀತಿಗಳು ಮತ್ತು ಕಾರ್ಯತಂತ್ರಗಳ ಹೊಂದಾಣಿಕೆ ಅತ್ಯಗತ್ಯ. “ನಮ್ಮ ಗಮನ ಭವಿಷ್ಯದ ಮೇಲೆ. ನಾಳಿನ ಸವಾಲುಗಳು ಮತ್ತು ಅವಕಾಶಗಳಿಗಾಗಿ ನಾವು ಇಂದು ದೇಶವನ್ನು ಸಿದ್ಧಪಡಿಸುತ್ತಿದ್ದೇವೆ. ಗ್ರೀನ್ ಹೈಡ್ರೋಜನ್ ಮಿಷನ್, ಕ್ವಾಂಟಮ್ ಮಿಷನ್, ಸೆಮಿಕಂಡಕ್ಟರ್ ಮಿಷನ್ ಮತ್ತು ಡೀಪ್ ಓಷನ್ ಮಿಷನ್‌ನಂತಹ ಉಪಕ್ರಮಗಳನ್ನು ಪ್ರಧಾನಿ ಉಲ್ಲೇಖಿಸಿದರು. ಬಾಹ್ಯಾಕಾಶ ತಂತ್ರಜ್ಞಾನ ಉತ್ತೇಜಿಸಲು ಸರ್ಕಾರವು ಇತ್ತೀಚೆಗೆ 1,000 ಕೋಟಿ ರೂಪಾಯಿ ಮೀಸಲಿಟ್ಟಿದೆ. "ಇಂದಿನ ಭಾರತವು ಅವಕಾಶಗಳ ಭೂಮಿಯಾಗಿದೆ, ಭಾರತದ ಭವಿಷ್ಯ ಇನ್ನಷ್ಟು ಉಜ್ವಲವಾಗಲಿದೆ ಎಂಬುದನ್ನು ನಾವು ನಂಬುತ್ತೇವೆ" ಎಂದರು.

 

2047ರ ವೇಳೆಗೆ ವಿಕಸಿತ ಭಾರತವಾಗುವ ಸಂಕಲ್ಪ ಪುನರುಚ್ಚರಿಸಿದ ಪ್ರಧಾನಿ,  ಈ ಪ್ರಯಾಣದಲ್ಲಿ ಸಕ್ರಿಯವಾಗಿ ಭಾಗವಹಿಸಲು ಎಲ್ಲಾ ನಾಗರಿಕರು ಮತ್ತು ಪಾಲುದಾರರನ್ನು ಪ್ರೋತ್ಸಾಹಿಸಿದರು. ಭಾರತದಲ್ಲಿ ಹೆಚ್ಚಿನ ಕಂಪನಿಗಳು ಜಾಗತಿಕ ಬ್ರ್ಯಾಂಡ್ ಆಗುವುದನ್ನು ನೋಡುವ ಉತ್ಸುಕತೆ ನನ್ನದಾಗಿದೆ. "ಭಾರತವು ವಿಶ್ವಾದ್ಯಂತ ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆಸಬೇಕೆಂದು ನಾವು ಬಯಸುತ್ತೇವೆ". “ನಾವು ಸುಗಮಗೊಳಿಸುವ, ಸುಧಾರಣೆ ಮತ್ತು ಸ್ಥಿರವಾದ ನೀತಿ ಆಡಳಿತ ಮತ್ತು ಬೆಳವಣಿಗೆಗೆ ಬೆಂಬಲ ಒದಗಿಸುವ ಭರವಸೆ ನೀಡುತ್ತೇವೆ. ನೀವು ಆವಿಷ್ಕಾರ, ಪ್ರದರ್ಶನ, ಸಕಾರಾತ್ಮಕ ಬೆಳವಣಿಗೆಗಳನ್ನು ಸೃಷ್ಟಿಸಲು ಮತ್ತು ಉತ್ತಮ ಗುಣಮಟ್ಟದ ಮೇಲೆ ಗಮನ ಕೇಂದ್ರೀಕರಿಸುವ ಭರವಸೆ ನೀಡಬೇಕು. ಪ್ರತಿಯೊಬ್ಬರೂ ದೊಡ್ಡದಾಗಿ ಯೋಚಿಸಲು ಮತ್ತು ಭಾರತದ ಯಶೋಗಾಥೆಗಳನ್ನು ಬರೆಯಲು ಸಹಕರಿಸಬೇಕು. “ಇಂದಿನ ಭಾರತವು ಸಂಪತ್ತಿನ ಸೃಷ್ಟಿಕರ್ತರನ್ನು ಗೌರವಿಸುತ್ತದೆ. ಸಮೃದ್ಧ ಭಾರತವು ಜಾಗತಿಕ ಸಮೃದ್ಧಿಗೆ ದಾರಿ ಮಾಡಿಕೊಡಬಹುದು. ನಾವೀನ್ಯತೆ, ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಮತ್ತು ಅಂತಾರಾಷ್ಟ್ರೀಯ ಸಹಕಾರದ ಮಂತ್ರಗಳನ್ನು ನೆನಪಿಟ್ಟುಕೊಳ್ಳಬೇಕು ಎಂದು ದೇಶ ಮತ್ತು ವಿದೇಶಗಳಲ್ಲಿ ವಾಸಿಸುವ ಪ್ರತಿಯೊಬ್ಬ ಭಾರತೀಯನಿಗೆ ಮನವಿ ಮಾಡಿದರು, "ಪ್ರಗತಿಯ ಈ ಹಾದಿಯಲ್ಲಿ ಒಟ್ಟಾಗಿ ನಡೆಯೋಣ, ಏಕೆಂದರೆ ಭಾರತದ ಸಮೃದ್ಧಿಯಲ್ಲಿ ವಿಶ್ವದ ಸಮೃದ್ಧಿ ಅಡಗಿದೆ." ಈ ಗುರಿ ಸಾಧಿಸಬಹುದು ಎಂಬ ವಿಶ್ವಾಸ  ವ್ಯಕ್ತಪಡಿಸಿ, ಪ್ರಧಾನಿ ಮೋದಿ ಅವರು ತಮ್ಮ ಸಮಾರೋಪ ಭಾಷಣ ಮುಕ್ತಾಯಗೊಳಿಸಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
ISRO achieves milestone with successful sea-level test of CE20 cryogenic engine

Media Coverage

ISRO achieves milestone with successful sea-level test of CE20 cryogenic engine
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 13 ಡಿಸೆಂಬರ್ 2024
December 13, 2024

Milestones of Progress: Appreciation for PM Modi’s Achievements