ಗೌರವಾನ್ವಿತ, ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರೇ ,

ಎರಡೂ ದೇಶಗಳ ಪ್ರತಿನಿಧಿಗಳೇ,

ಮಾಧ್ಯಮ ಮಿತ್ರರೇ ...

ಎಲ್ಲರಿಗೂ ನಮಸ್ಕಾರ,

ಪ್ರಧಾನ ಮಂತ್ರಿ  ಶೇಖ್ ಹಸೀನಾ ಮತ್ತು ಅವರ ನಿಯೋಗಕ್ಕೆ ನಾನು ಹೃತ್ಪೂರ್ವಕ ಸ್ವಾಗತ ಕೋರುತ್ತೇನೆ. ಕಳೆದ ಒಂದು ವರ್ಷದಲ್ಲಿ ನಾವು ಸುಮಾರು ಹತ್ತು ಬಾರಿ ಭೇಟಿಯಾಗಿದ್ದರೂ, ಇಂದಿನ ಭೇಟಿ ಬಹು ವಿಶೇಷವಾಗಿದೆ. ಏಕೆಂದರೆ  ಪ್ರಧಾನಿ ಶೇಖ್ ಹಸೀನಾ ಅವರು ನಮ್ಮ ಸರ್ಕಾರದ ಮೂರನೇ ಅವಧಿಯ ಮೊದಲ ರಾಜ್ಯ ಅತಿಥಿಯಾಗಿದ್ದಾರೆ.

ಸ್ನೇಹಿತರೇ, 

ಬಾಂಗ್ಲಾದೇಶವು ನಮ್ಮ 'ನೆರೆಹೊರೆಯೇ ಮೊದಲು', ಆಕ್ಟ್ ಈಸ್ಟ್ ನೀತಿ, ವಿಷನ್ ಸಾಗರ್ ಮತ್ತು ಇಂಡೋ-ಪೆಸಿಫಿಕ್ ವಿಷನ್‌ ಕಾರ್ಯಕ್ರಮಗಳು ಒಮ್ಮುಖವಾಗುವಲ್ಲಿ ನೆಲೆಗೊಂಡಿದೆ.

ಕಳೆದ ಒಂದು ವರ್ಷದಲ್ಲಿ, ನಾವು ಅನೇಕ ಪ್ರಮುಖ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಒಟ್ಟಾಗಿ ಪೂರ್ಣಗೊಳಿಸಿದ್ದೇವೆ. ಅಖೌರಾ-ಅಗರ್ತಲಾ ನಡುವೆ  ಭಾರತ-ಬಾಂಗ್ಲಾದೇಶ ಗಡಿಯಾಚೆಗಿನ  6 ನೇ ರೈಲು ಸಂಪರ್ಕವನ್ನು ಪ್ರಾರಂಭಿಸಲಾಗಿದೆ.  ಖುಲ್ನಾ-ಮೊಂಗ್ಲಾ ಬಂದರಿನ ಮೂಲಕ ಭಾರತದ ಈಶಾನ್ಯ ರಾಜ್ಯಗಳಿಗೆ ಸರಕು ಸಾಗಣೆ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ. ಮೊಂಗ್ಲಾ ಬಂದರನ್ನು ಮೊದಲ ಬಾರಿಗೆ ರೈಲಿನ ಮೂಲಕ ಸಂಪರ್ಕಿಸಲಾಗಿದೆ.  1,320 MW ಸಾಮರ್ಥ್ಯದ  ಮೈತ್ರೀ ಥರ್ಮಲ್ ಪವರ್ ಪ್ಲಾಂಟ್‌ನ ಎರಡೂ ಘಟಕಗಳು ವಿದ್ಯುತ್ ಉತ್ಪಾದಿಸಲು ಪ್ರಾರಂಭಿಸಿವೆ. ಎರಡು ದೇಶಗಳ ನಡುವೆ ಭಾರತದ ರೂಪಾಯಿಯಲ್ಲಿ (INR) ವ್ಯಾಪಾರ ಪ್ರಾರಂಭವಾಗಿದೆ. ಭಾರತ ಮತ್ತು ಬಾಂಗ್ಲಾದೇಶದ ನಡುವೆ ಗಂಗಾ ನದಿಯಲ್ಲಿ ವಿಶ್ವದ ಅತಿ ಉದ್ದದ ನದಿ ವಿಹಾರ (river cruise) ಯಶಸ್ವಿಯಾಗಿ ಪೂರ್ಣಗೊಂಡಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವೆ ಮೊದಲ ಗಡಿಯಾಚೆಗಿನ ಪೈಪ್‌ಲೈನ್ ಪೂರ್ಣಗೊಂಡಿದೆ. ನೇಪಾಳದಿಂದ ಬಾಂಗ್ಲಾದೇಶಕ್ಕೆ ಭಾರತೀಯ ಗ್ರಿಡ್ ಮೂಲಕ ವಿದ್ಯುತ್ ರಫ್ತು ಮಾಡಿರುವುದು ಇಂಧನ ವಲಯದಲ್ಲಿನ ಉಪ-ಪ್ರಾದೇಶಿಕ ಸಹಕಾರದ ಮೊದಲ ಉದಾಹರಣೆಯಾಗಿದೆ. ಕೇವಲ ಒಂದು ವರ್ಷದೊಳಗೆ ಬಹು ಕ್ಷೇತ್ರಗಳಲ್ಲಿ ಇಂತಹ ದೊಡ್ಡ ಉಪಕ್ರಮಗಳನ್ನು ಅನುಷ್ಠಾನಗೊಳಿಸಿರುವುದು ಉಭಯ ದೇಶಗಳ ನಡುವಿನ  ಸಂಬಂಧದ ವೇಗ ಮತ್ತು ಪ್ರಮಾಣವನ್ನು ಪ್ರತಿಬಿಂಬಿಸುತ್ತದೆ.

ಸ್ನೇಹಿತರೇ, 

ಇಂದು ನಾವು ಹೊಸ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರಕ್ಕಾಗಿ ಭವಿಷ್ಯದ ದೃಷ್ಟಿಕೋನವನ್ನು ಸಿದ್ಧಪಡಿಸಿಕೊಂಡಿದ್ದೇವೆ.  ಹಸಿರು ಸಹಭಾಗಿತ್ವ, ಡಿಜಿಟಲ್ ಪಾಲುದಾರಿಕೆ, ನೀಲಿ ಆರ್ಥಿಕತೆ, ಬಾಹ್ಯಾಕಾಶ ಮುಂತಾದ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರದ ಕುರಿತು ನಾವು ಮಾಡಿಕೊಂಡಿರುವ ಒಪ್ಪಂದಗಳಿಂದಾಗಿ ಎರಡೂ ದೇಶಗಳ ಯುವಕರು ಪ್ರಯೋಜನ ಪಡೆಯಲಿದ್ದಾರೆ. ಭಾರತ-ಬಾಂಗ್ಲಾದೇಶ "ಮೈತ್ರಿ ಉಪಗ್ರಹ" ನಮ್ಮ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ. ಸಂಪರ್ಕ, ವಾಣಿಜ್ಯ ಮತ್ತು ಸಹಯೋಗ ಕ್ಷೇತ್ರಗಳು ನಮ್ಮ ಆದ್ಯತೆಯ ಕ್ಷೇತ್ರಗಳಾಗಿವೆ. 

ಕಳೆದ ಹತ್ತು ವರ್ಷಗಳಲ್ಲಿ, 1965 ಕ್ಕಿಂತ ಮೊದಲು ಅಸ್ತಿತ್ವದಲ್ಲಿದ್ದ ಸಂಪರ್ಕವನ್ನು ನಾವು ಪುನಃಸ್ಥಾಪಿಸಿದ್ದೇವೆ. ಈಗ ನಾವು ಡಿಜಿಟಲ್ ಮತ್ತು ಇಂಧನ ಸಂಪರ್ಕದ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದೇವೆ. ಇದು ಎರಡೂ ದೇಶಗಳ ಆರ್ಥಿಕತೆ ಅಭಿವೃದ್ಧಿಗೆ ಸಹಾಯಕಾರಿಯಾಗಲಿದೆ. ನಮ್ಮ ಆರ್ಥಿಕ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು, ಎರಡೂ ದೇಶಗಳು CEPA ಕುರಿತು ಮಾತುಕತೆ ಪ್ರಾರಂಭಿಸಲು ಒಪ್ಪಿಕೊಂಡಿವೆ. ಬಾಂಗ್ಲಾದೇಶದ ಸಿರಾಜ್‌ಗಂಜ್‌ನಲ್ಲಿ ಇನ್‌ಲ್ಯಾಂಡ್ ಕಂಟೈನರ್ ಡಿಪೋ ನಿರ್ಮಾಣಕ್ಕೆ ಭಾರತ ಬೆಂಬಲಿಸಲಿದೆ. 

ಸ್ನೇಹಿತರೇ, 

54 ನದಿಗಳು ಭಾರತ ಮತ್ತು ಬಾಂಗ್ಲಾದೇಶವನ್ನು ಸಂಪರ್ಕಿಸುತ್ತವೆ. ನಾವು ಪ್ರವಾಹ ನಿರ್ವಹಣೆ, ಮುನ್ನೆಚ್ಚರಿಕೆ, ಕುಡಿಯುವ ನೀರಿನ ಯೋಜನೆಗಳಿಗೆ ಪರಸ್ಪರ ಸಹಕಾರ ನೀಡುತ್ತಿದ್ದೇವೆ. 1996ರ ಗಂಗಾ ವಾಟರ್ ಟ್ರೀಟಿಯ ನವೀಕರಣಕ್ಕಾಗಿ ತಾಂತ್ರಿಕ ಮಟ್ಟದ ಚರ್ಚೆಗಳನ್ನು ಆರಂಭಿಸಲು ನಾವು ನಿರ್ಧರಿಸಿದ್ದೇವೆ. ಬಾಂಗ್ಲಾದೇಶದಲ್ಲಿನ ತೀಸ್ತಾ ನದಿಯ ಸಂರಕ್ಷಣೆ ಮತ್ತು ನಿರ್ವಹಣೆ ಕುರಿತು ಚರ್ಚಿಸಲು ಭಾರತದ ತಾಂತ್ರಿಕ ತಂಡವು ಶೀಘ್ರದಲ್ಲೇ ಬಾಂಗ್ಲಾದೇಶಕ್ಕೆ ಭೇಟಿ ನೀಡಲಿದೆ.

ಸ್ನೇಹಿತರೇ, 

ರಕ್ಷಣಾ ಉತ್ಪಾದನೆಯಿಂದ ಹಿಡಿದು ಸಶಸ್ತ್ರ ಪಡೆಗಳ ಆಧುನೀಕರಣದವರೆಗೆ ನಮ್ಮ ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಕುರಿತು ನಾವು ಸಮಗ್ರ ಚರ್ಚೆಗಳನ್ನು ನಡೆಸಿದ್ದೇವೆ. ಭಯೋತ್ಪಾದನೆ ನಿಗ್ರಹ, ಮೂಲಭೂತವಾದವನ್ನು ಎದುರಿಸುವುದು ಮತ್ತು ಗಡಿಯಲ್ಲಿ ಶಾಂತಿ ನೆಲೆಸುವಂತೆ ಮಾಡುವ ನಿಟ್ಟಿನಲ್ಲಿ ನಮ್ಮ ಸಹಕಾರವನ್ನು ಬಲಪಡಿಸಲು ನಾವು ನಿರ್ಧರಿಸಿದ್ದೇವೆ.

ಹಿಂದೂ ಮಹಾಸಾಗರ ಪ್ರದೇಶಕ್ಕೆ ಸಂಬಂಧಪಟ್ಟಂತೆ, ಉಭಯ ದೇಶಗಳು ಸಾಮಾನ್ಯ ದೃಷ್ಟಿಕೋನವನ್ನು ಹೊಂದಿದ್ದೇವೆ. ಇಂಡೋ-ಪೆಸಿಫಿಕ್ ಸಾಗರಗಳಿಗೆ ಸಂಬಂಧಿಸಿದಂತೆ  ಕೈಗೊಳ್ಳಲಾಗಿರುವ ಉಪಕ್ರಮಗಳಿಲ್ಲಿ ಭಾಗಿಯಾಗುವ ಬಾಂಗ್ಲಾದೇಶದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. BIMSTEC ಸೇರಿದಂತೆ ಇತರ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ನಾವು ನಮ್ಮ ಸಹಕಾರವನ್ನು ಮುಂದುವರಿಸುತ್ತೇವೆ.

ಸ್ನೇಹಿತರೇ, 

ಉಭಯ ದೇಶಗಳ ನಡುವಿನ ಸಂಸ್ಕೃತಿ ಮತ್ತು ಜನರೊಂದಿಗಿನ ನೇರ  ವಿನಿಮಯಗಳು ನಮ್ಮ ಸಂಬಂಧದ ಅಡಿಪಾಯವಾಗಿವೆ. ಸ್ಕಾಲರ್‌ಶಿಪ್, ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಯನ್ನು ಮತ್ತಷ್ಟು ಹೆಚ್ಚಿಸಲು ನಾವು ನಿರ್ಧರಿಸಿದ್ದೇವೆ. ವೈದ್ಯಕೀಯ ಚಿಕಿತ್ಸೆಗಾಗಿ ಬಾಂಗ್ಲಾದೇಶದಿಂದ ಭಾರತಕ್ಕೆ ಬರುವ ಜನರಿಗೆ ಭಾರತವು ಇ-ವೈದ್ಯಕೀಯ ವೀಸಾ ಸೌಲಭ್ಯವನ್ನು ಪ್ರಾರಂಭಿಸಲಿದೆ. ಬಾಂಗ್ಲಾದೇಶದ ವಾಯುವ್ಯ ಪ್ರದೇಶದ ಜನರಿಗೆ ಅನುಕೂಲವಾಗುವಂತೆ ರಂಗ್‌ಪುರದಲ್ಲಿ ಹೊಸ ಸಹಾಯಕ ಹೈಕಮಿಷನ್ ಅನ್ನು  ತೆರೆಯಲು ನಾವು ನಿರ್ಧರಿಸಿದ್ದೇವೆ.

ಇಂದು ನಡೆಯಲಿರುವ ಕ್ರಿಕೆಟ್ ವಿಶ್ವಕಪ್ ಪಂದ್ಯಕ್ಕಾಗಿ ಉಭಯ ತಂಡಗಳಿಗೆ ಶುಭ ಹಾರೈಸುತ್ತೇನೆ.

ಸ್ನೇಹಿತರೇ,

ಬಾಂಗ್ಲಾದೇಶವು ಭಾರತದ ಅತಿದೊಡ್ಡ ಅಭಿವೃದ್ಧಿ ಪಾಲುದಾರನಾಗಿದ್ದು ನಾವು ಬಾಂಗ್ಲಾದೇಶದೊಂದಿಗಿನ ನಮ್ಮ ಸಂಬಂಧಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತೇವೆ. ಸ್ಥಿರ, ಸಮೃದ್ಧ ಮತ್ತು ಪ್ರಗತಿಪರ ಬಾಂಗ್ಲಾದೇಶ ನಿರ್ಮಿಸುವ ಕುರಿತ ಬಂಗಬಂಧು ಅವರ  ದೃಷ್ಟಿಕೋನವನ್ನು ಸಾಕಾರಗೊಳಿಸುವ ಭಾರತದ ಬದ್ಧತೆಯನ್ನು ನಾನು ಪುನರುಚ್ಚರಿಸುತ್ತೇನೆ. 2026 ರಲ್ಲಿ ಬಾಂಗ್ಲಾದೇಶವು ಅಭಿವೃದ್ಧಿ ಹೊಂದುತ್ತಿರುವ ದೇಶವಾಗಲಿದೆ. "ಸೋನಾರ್ ಬಾಂಗ್ಲಾ" ವನ್ನು ಮುನ್ನಡೆಸುತ್ತಿರುವುದಕ್ಕಾಗಿ ನಾನು ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರನ್ನು ಶ್ಲಾಘಿಸುತ್ತೇನೆ. ನಾವು ಒಟ್ಟಾಗಿ 'ವಿಕಸಿತ ಭಾರತ್ 2047' ಮತ್ತು 'ಸ್ಮಾರ್ಟ್ ಬಾಂಗ್ಲಾದೇಶ 2041' ನ ಗುರಿಯನ್ನು ಸಾಕಾರಗೊಳಿಸುತ್ತೇವೆ ಎಂದು ನನಗೆ ವಿಶ್ವಾಸವಿದೆ.

ಧನ್ಯವಾದಗಳು. 

 

 

 

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
MSME exports touch Rs 9.52 lakh crore in April–September FY26: Govt tells Parliament

Media Coverage

MSME exports touch Rs 9.52 lakh crore in April–September FY26: Govt tells Parliament
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2025
December 21, 2025

Assam Rising, Bharat Shining: PM Modi’s Vision Unlocks North East’s Golden Era