PM's second interaction with Additional Secretaries and Joint Secretaries
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುರುವಾರ ಭಾರತ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ 80ಕ್ಕೂ ಹೆಚ್ಚು ಹೆಚ್ಚುವರಿ ಕಾರ್ಯದರ್ಶಿಗಳು ಮತ್ತು ಜಂಟಿ ಕಾರ್ಯದರ್ಶಿಗಳ ಗುಂಪನ್ನು ಭೇಟಿ ಮಾಡಿ, ಅವರೊಂದಿಗೆ ಸಂವಾದ ನಡೆಸಿದರು. ಇಂಥ ಐದು ಸಂವಾದಗಳಲ್ಲಿ ಇದು ಎರಡನೆಯದಾಗಿದೆ.
ಈ ಸಂವಾದದ ವೇಳೆ, ಅಧಿಕಾರಿಗಳು ಸಾಮರ್ಥ್ಯ ಆಧಾರಿತ ಆಡಳಿತ, ಆಡಳಿತದಲ್ಲಿ ನಾವಿನ್ಯತೆ, ತ್ಯಾಜ್ಯ ನಿರ್ವಹಣೆ, ನದಿ ಮತ್ತು ಪರಿಸರ ಮಾಲಿನ್ಯ, ಅರಣ್ಯ, ನೈರ್ಮಲ್ಯ, ಹವಾಮಾನ ಬದಲಾವಣೆ, ಕೃಷಿಯಲ್ಲಿ ಮೌಲ್ಯ ವರ್ಧನೆ, ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿಯಂಥ ವಿಷಯಗಳಲ್ಲಿನ ತಮ್ಮ ಅನುಭವವನ್ನು ಹಂಚಿಕೊಂಡರು.
ಅಧಿಕಾರಿಗಳ ಅಭಿಪ್ರಾಯಕ್ಕೆ ಸ್ಪಂದಿಸಿದ ಪ್ರಧಾನಿ, ಅಧಿಕಾರಿಗಳು ತಮ್ಮನ್ನು ಕೇವಲ ಕಡತಗಳಿಗೆ ಸೀಮಿತಗೊಳಿಸಿಕೊಳ್ಳಬಾರದು, ಅವರು ಕ್ಷೇತ್ರಕ್ಕೆ ಹೋಗಿ, ನೀತಿ ನಿರ್ಣಾಯಕಗಳ ವಾಸ್ತವವನ್ನು ಅರಿಯಬೇಕು ಎಂದು ಪ್ರತಿಪಾದಿಸಿದರು. ಈ ನಿಟ್ಟಿನಲ್ಲಿ 2001ರಲ್ಲಿ ಗುಜರಾತ್ ನಲ್ಲಿ ಸಂಭವಿಸಿದ ಭೂಕಂಪದ ತರುವಾಯ ನಡೆದ ಪುನರ್ನಿರ್ಮಾಣದಲ್ಲಿ ಅಧಿಕಾರಿಗಳ ಅನುಭವವನ್ನು ಸ್ಮರಿಸಿದರು.
ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಕೇವಲ ಒಂದು ಕೆಲಸ ಎಂದು ನೋಡಬಾರದು. ಬದಲಾಗಿ ದೇಶದ ಆಡಳಿತದಲ್ಲಿ ಧನಾತ್ಮಕ ಪರಿವರ್ತನೆ ತರಲು ತಮಗೆ ದೊರೆತಿರುವ ಅವಕಾಶ ಎಂದು ಪರಿಗಣಿಸಬೇಕು ಎಂದರು. ಆಡಳಿತ ಪ್ರಕ್ರಿಯೆಗಳನ್ನು ಸರಳೀಕರಿಸಲು ತಂತ್ರಜ್ಞಾನ ಬಳಕೆಗೆ ಅವರು ಆಗ್ರಹಿಸಿದರು. 100 ಅತಿ ಹಿಂದುಳಿದ ಜಿಲ್ಲೆಗಳ ಬಗ್ಗೆ ಗಮನ ಹರಿಸುವಂತೆ ಅಧಿಕಾರಿಗಳಿಗೆ ಕರೆ ನೀಡಿದ ಪ್ರಧಾನಿ, ಹೀಗೆ ಮಾಡಿದಾಗ, ವಿವಿಧ ಅಭಿವೃದ್ಧಿಯ ಮಾನದಂಡಕ್ಕೆ ಅನುಗುಣವಾಗಿ ಈ ಜಿಲ್ಲೆಗಳನ್ನೂ ರಾಷ್ಟ್ರೀಯ ಸರಾಸರಿ ಮಟ್ಟಕ್ಕೆ ತರಬಹುದು ಎಂದು ಹೇಳಿದರು.