ಚೀನಾ ಪ್ರಜಾ ಗಣರಾಜ್ಯದ ಸ್ಟೇಟ್ ಕೌನ್ಸಿಲರ್ ಮತ್ತು ಗಡಿ ಪ್ರಶ್ನೆಗಳ ಕುರಿತ ಚೀನಾದ ವಿಶೇಷ ಪ್ರತಿನಿಧಿ ಶ್ರೀ ಯಾಂಗ್ ಜೀಚಿ ಅವರಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಶ್ರೀ ಯಾಂಗ್ ಜೀಚಿ ಅವರು ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಮತ್ತು ಪ್ರಧಾನಮಂತ್ರಿ ಲಿ ಕೆಕ್ವಿಯಾಂಗ್ ಅವರ ಶುಭಾಶಯಗಳನ್ನು ಪ್ರಧಾನಿಯವರಿಗೆ ತಿಳಿಸಿದರು.

ಇದಕ್ಕೂ ಮುನ್ನ ಇಂದು ಬೆಳಗ್ಗೆ ಗಡಿ ಪ್ರಶ್ನೆಗಳ ಕುರಿತಂತೆ ಚೀನಾ ಮತ್ತು ಭಾರತದ ವಿಶೇಷ ಪ್ರತಿನಿಧಿಗಳ ನಡುವೆ ನಡೆದ 20ನೇ ಸುತ್ತಿನ ಮಾತುಕತೆಯ ಬಗ್ಗೆ ಶ್ರೀ ಯಾಂಗ್ ಜೀಚಿ ಮತ್ತು ಶ್ರೀ ಅಜಿತ್ ದೋವಲ್ ಅವರು ಪ್ರಧಾನಿಯವರಿಗೆ ವಿವರಿಸಿದರು.

ಪ್ರಧಾನಮಂತ್ರಿಯವರು 9ನೇ ಬ್ರಿಕ್ಸ್ ಶೃಂಗಸಭೆಗಾಗಿ 2017ರ ಸೆಪ್ಟೆಂಬರ್ ನಲ್ಲಿ ಕ್ಸಿಯಾಮೆನ್ ಗೆ ತಾವು ನೀಡಿದ್ದ ಭೇಟಿಯನ್ನು ಮತ್ತು ಅಲ್ಲಿ ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರೊಂದಿಗೆ ನಡೆದ ಸಭೆಯನ್ನು ಹೆಮ್ಮೆಯಿಂದ ಸ್ಮರಿಸಿದರು. ಭಾರತ ಮತ್ತು ಚೀನಾ ನಡುವಿನ ಬಲವಾದ ಬಾಂಧವ್ಯವು ಭಾರತ ಮತ್ತು ಚೀನಾದ ಜನತೆಯ ಪರಸ್ಪರ ಲಾಭಕ್ಕಾಗಿ ಮಾತ್ರವಲ್ಲ, ಜೊತೆಗೆ ವಲಯದ ಮತ್ತು ವಿಶ್ವದ ಉಪಯುಕ್ತ ಎಂದು ಪ್ರಧಾನಿ ಹೇಳಿದರು.


