ಕೊರೋನಾ ಸೋಂಕಿನ ಕುರಿತು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಹಣಕಾಸು ಸಚಿವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಕೋವಿಡ್-19 ಆರ್ಥಿಕ ಪ್ರತಿಸ್ಪಂದನಾ ಕಾರ್ಯಪಡೆ ರಚಿಸಲಿದೆ ಎಂದು ಪ್ರಕಟಿಸಿದರು.
ಕಾರ್ಯಪಡೆ ನಿರಂತರವಾಗಿ ಸಂಬಂಧಿಸಿದ ಎಲ್ಲರೊಂದಿಗೆ ಸಂಪರ್ಕದಲ್ಲಿರಲಿದೆ ಮತ್ತು ಅವರುಗಳ ಪ್ರತಿಕ್ರಿಯೆಯನ್ನು ಪಡೆದುಕೊಳ್ಳಲಿದೆ ಹಾಗೂ ಕೊರೋನಾ ಸೋಂಕಿನಿಂದ ದೇಶದ ಆರ್ಥಿಕತೆಯ ಮೇಲೆ ಆಗುವ ಪರಿಣಾಮಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಪ್ರಸಕ್ತ ಸನ್ನಿವೇಶದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಬಡವರು, ಮಧ್ಯಮ ವರ್ಗ ಮತ್ತು ಕೆಳ ಮಧ್ಯಮ ವರ್ಗಕ್ಕೆ ಹೆಚ್ಚಿನ ತೊಂದರೆಯಾಗಲಿದೆ ಎಂದು ಹೇಳಿದರು. ಕೆಲವು ವಾರಗಳ ಕಾಲ ಉದ್ಯೋಗಿಗಳು ತಮ್ಮ ಕಚೇರಿಗಳನ್ನು ತಲುಪಲು ಸಾಧ್ಯವಾಗದೇ ಇರಬಹುದು ಎಂದ ಅವರು, ಉದ್ದಿಮೆಗಳು ತಮ್ಮ ಸಿಬ್ಬಂದಿಗೆ ಮನೆಯಿಂದಲೇ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಮತ್ತು ಅವರುಗಳ ವೇತನದಿಂದ ಯಾವುದೇ ಮೊತ್ತ ಕಡಿತ ಮಾಡಬಾರದು ಎಂದು ಆಗ್ರಹಿಸಿದರು.


