ಭಾರತ - ಇಸ್ರೇಲ್ ಜಂಟಿ ಹೇಳಿಕೆ

Published By : Admin | February 26, 2026 | 19:44 IST

ದೆಹಲಿ ಶಾಂತಿನಾವೀನ್ಯತೆ ಮತ್ತು ಸಮೃದ್ಧಿಗಾಗಿ ಒಂದು ವಿಶೇಷ ಕಾರ್ಯತಂತ್ರದ ಪಾಲುದಾರಿಕೆ

ಭಾರತ ಮತ್ತು ಇಸ್ರೇಲ್ ನಡುವಿನ ಆತ್ಮೀಯತೆ, ಸದ್ಭಾವನೆ ಮತ್ತು ಆಳವಾದ ಕಾರ್ಯತಂತ್ರದ ಬಾಂಧವ್ಯವನ್ನು ಗೌರವಿಸಿ, ಇಸ್ರೇಲ್ ಪ್ರಧಾನಮಂತ್ರಿ ಶ್ರೀ ಬೆಂಜಮಿನ್ ನೆತನ್ಯಾಹು ಅವರ ಆಹ್ವಾನದ ಮೇರೆಗೆ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಫೆಬ್ರವರಿ 25 ರಿಂದ 26 ರವರೆಗೆ ಇಸ್ರೇಲ್‌ ಗೆ ಅಧಿಕೃತ ಭೇಟಿ ನೀಡಿದರು. ಪ್ರಧಾನಮಂತ್ರಿಯವರೊಂದಿಗೆ ಹಿರಿಯ ಸಚಿವರು ಮತ್ತು ಅಧಿಕಾರಿಗಳನ್ನೊಳಗೊಂಡ ಉನ್ನತ ಮಟ್ಟದ ನಿಯೋಗವು ಆಗಮಿಸಿತ್ತು.

2017ರಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಸ್ರೇಲ್‌ ಗೆ ನೀಡಿದ ಚಾರಿತ್ರಿಕ ಭೇಟಿ ಮತ್ತು 2018ರಲ್ಲಿ ಪ್ರಧಾನಮಂತ್ರಿ ನೆತನ್ಯಾಹು ಅವರು ಭಾರತಕ್ಕೆ ನೀಡಿದ ಭೇಟಿಯನ್ನು ಸ್ಮರಿಸಿದ ನಾಯಕರು, ಈ ಭೇಟಿಗಳು ಸಹಭಾಗಿತ್ವ ಮತ್ತು ಸಹಯೋಗದ ಹೊಸ ಯುಗಕ್ಕೆ ಅಡಿಪಾಯ ಹಾಕಿಕೊಟ್ಟಿವೆ ಎಂದು ತಿಳಿಸಿದರು. ಉದಯೋನ್ಮುಖ ತಂತ್ರಜ್ಞಾನಗಳು, ಸೈಬರ್, ಕೃಷಿ, ಜಲ ನಿರ್ವಹಣೆ, ಆರೋಗ್ಯ, ಉದ್ಯಮಶೀಲತೆ, ರಕ್ಷಣೆ ಮತ್ತು ಭದ್ರತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ-ಇಸ್ರೇಲ್ ದ್ವಿಪಕ್ಷೀಯ ಸಂಬಂಧದಲ್ಲಿ ಆಗಿರುವ ಅಪಾರ ಪ್ರಗತಿಯನ್ನು ಉಭಯ ನಾಯಕರು ಗುರುತಿಸಿದರು. ಈ ಹಿನ್ನೆಲೆಯಲ್ಲಿ, ಪ್ರಧಾನಮಂತ್ರಿ ನೆತನ್ಯಾಹು ಮತ್ತು ಪ್ರಧಾನಮಂತ್ರಿ ಮೋದಿ ಅವರು ಪ್ರಸ್ತುತ ಇರುವ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನೊಂದು ಉನ್ನತ ಮಟ್ಟಕ್ಕೆ ಏರಿಸಲು ಒಪ್ಪಿಕೊಂಡರು ಮತ್ತು ಇದನ್ನು 'ಶಾಂತಿ, ನಾವೀನ್ಯತೆ ಮತ್ತು ಸಮೃದ್ಧಿಗಾಗಿ ವಿಶೇಷ ಕಾರ್ಯತಂತ್ರದ ಪಾಲುದಾರಿಕೆ' ಎಂದು ಕರೆಯಲು ನಿರ್ಧರಿಸಿದರು.

ಭವಿಷ್ಯದತ್ತ ಜೊತೆಯಲ್ಲಿ

ತಾಂತ್ರಿಕ ನಾವೀನ್ಯತೆಗಳು ಮತ್ತು ಉದ್ಯಮಶೀಲತೆಯ ಮೂಲಕ ಶಾಂತಿ, ಭದ್ರತೆ ಮತ್ತು ಸಮೃದ್ಧಿಯನ್ನು ಸಾಧಿಸುವ ಪರಸ್ಪರ ಆಕಾಂಕ್ಷೆಗಳಲ್ಲಿ ಬೇರೂರಿರುವ ಈ ದೃಢವಾದ ಪಾಲುದಾರಿಕೆಗಾಗಿ ಪ್ರಧಾನಮಂತ್ರಿಗಳು ತಮ್ಮ ಹಂಚಿಕೆಯ ದೂರದೃಷ್ಟಿಯನ್ನು ಪುನರುಚ್ಚರಿಸಿದರು. ಭಾರತ ಮತ್ತು ಇಸ್ರೇಲ್‌ ನ ಸಾಮರ್ಥ್ಯಗಳು ಪರಸ್ಪರ ಪೂರಕವಾಗಿವೆ ಎಂದು ನಾಯಕರು ಒಪ್ಪಿಕೊಂಡರು - ಇಸ್ರೇಲ್ ತಂತ್ರಜ್ಞಾನ ಮತ್ತು ನಾವೀನ್ಯತೆಯ ಜಾಗತಿಕ ಶಕ್ತಿಯಾಗಿದ್ದರೆ, ಭಾರತವು ಪ್ರತಿಭೆ, ಉತ್ಪಾದನಾ ಶ್ರೇಷ್ಠತೆ ಮತ್ತು ಉದ್ಯಮಶೀಲತೆಯ ಶಕ್ತಿಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ, ಸೆಮಿಕಂಡಕ್ಟರ್‌ ಗಳು, ಕ್ವಾಂಟಮ್ ಕಂಪ್ಯೂಟಿಂಗ್, ಜೈವಿಕ ತಂತ್ರಜ್ಞಾನ, ಕೃಷಿ ಮತ್ತು ಜಲ ನಿರ್ವಹಣೆ, ರಕ್ಷಣಾ ವೇದಿಕೆಗಳು ಮತ್ತು ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತ ಮತ್ತು ಇಸ್ರೇಲ್ ಸಾಧಿಸಿರುವ ಪ್ರಗತಿಯನ್ನು ಪರಸ್ಪರ ಸಂಯೋಜಿಸಲು ಪ್ರಧಾನಮಂತ್ರಿಗಳು ತಮ್ಮ ಬದ್ಧತೆಯನ್ನು ದೃಢಪಡಿಸಿದರು. ಈ ಪಾಲುದಾರಿಕೆಯು ಭಾರತದ 'ಆತ್ಮನಿರ್ಭರ ಮತ್ತು ವಿಕಸಿತ ಭಾರತ 2047' ಗುರಿಯನ್ನು ಬಲಪಡಿಸುವುದಲ್ಲದೆ, ತಾಂತ್ರಿಕ ರೂಪಾಂತರದ ಮುಂದಿನ ಅಲೆ ಮತ್ತು ಎರಡೂ ದೇಶಗಳ ಹಂಚಿಕೆಯ ಪ್ರಗತಿಗೆ ನಾಂದಿ ಹಾಡುವ ಗುರಿಯನ್ನು ಹೊಂದಿದೆ. ಸರ್ಕಾರದ ನೀತಿ ಆದ್ಯತೆಗಳನ್ನು ನೇರವಾದ ಫಲಿತಾಂಶಗಳನ್ನಾಗಿ ಪರಿವರ್ತಿಸುವ ಹಂಚಿಕೆಯ ಬದ್ಧತೆಯನ್ನು ಒತ್ತಿಹೇಳುತ್ತಾ, ಈ ಸಹಯೋಗವು ನಿರಂತರವಾಗಿರಲು ಮತ್ತು ಅರ್ಥಪೂರ್ಣ ಪ್ರಭಾವ ಬೀರಲು ಸರ್ಕಾರದಿಂದ ಸರ್ಕಾರಕ್ಕೆ (G2G), ವ್ಯವಹಾರದಿಂದ ವ್ಯವಹಾರಕ್ಕೆ (B2B) ಮತ್ತು ಜನರ ನಡುವಿನ (P2P) ದ್ವಿಪಕ್ಷೀಯ ಕಾರ್ಯವಿಧಾನಗಳನ್ನು ಸಾಂಸ್ಥಿಕಗೊಳಿಸುವ ಪ್ರಾಮುಖ್ಯತೆಯನ್ನು ಪ್ರಧಾನ ಮಂತ್ರಿಗಳು ಒತ್ತಿಹೇಳಿದರು.

ರಕ್ಷಣೆ ಮತ್ತು ಭದ್ರತೆ

2025ರ ನವೆಂಬರ್ 4 ರಂದು ರಕ್ಷಣಾ ಸಹಕಾರಕ್ಕೆ ಸಂಬಂಧಿಸಿದಂತೆ ಸಹಿ ಮಾಡಲಾದ ಒಪ್ಪಂದವನ್ನು ಸ್ವಾಗತಿಸಿದ ಪ್ರಧಾನಮಂತ್ರಿ ನೆತನ್ಯಾಹು ಮತ್ತು ಪ್ರಧಾನಮಂತ್ರಿ ಮೋದಿ ಅವರು, ಉಭಯ ರಾಷ್ಟ್ರಗಳ ನಡುವಿನ ರಕ್ಷಣಾ ಸಹಕಾರದ ವ್ಯಾಪ್ತಿ ಮತ್ತು ಪ್ರಮಾಣದಲ್ಲಿ ಆಗಿರುವ ಗಮನಾರ್ಹ ಬೆಳವಣಿಗೆಯನ್ನು ಗುರುತಿಸಿದರು. ಉಭಯ ನಾಯಕರು ಭವಿಷ್ಯದ ರಕ್ಷಣಾ ಸಹಕಾರಕ್ಕಾಗಿ ಒಂದು ದೃಷ್ಟಿಕೋನ ಮತ್ತು ಮಾರ್ಗಸೂಚಿಯನ್ನು ಪ್ರಸ್ತುತಪಡಿಸಿದರು.

ತಂತ್ರಜ್ಞಾನ ಮತ್ತು ನಾವೀನ್ಯತೆ

ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನ (ಸಿಇಟಿ) ಕ್ಷೇತ್ರಗಳಲ್ಲಿ ಆಳವಾದ ಸಹಯೋಗಕ್ಕಾಗಿ ಅವಕಾಶಗಳನ್ನು ಸೃಷ್ಟಿಸುವ ಭಾರತ ಮತ್ತು ಇಸ್ರೇಲ್‌ ನ ತಾಂತ್ರಿಕ ಪರಾಕ್ರಮದ ಪೂರಕ ಸಾಮರ್ಥ್ಯಗಳನ್ನು ಗುರುತಿಸಿದ ಪ್ರಧಾನಮಂತ್ರಿ ನೆತನ್ಯಾಹು ಮತ್ತು ಪ್ರಧಾನಮಂತ್ರಿ ಮೋದಿ ಅವರು, ಎರಡೂ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ​​ನೇತೃತ್ವದ 'ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಹೊಸ ಉಪಕ್ರಮ'ವನ್ನು ಸ್ವಾಗತಿಸಿದರು. ಈ ಉಪಕ್ರಮವು ವಿಶಿಷ್ಟ ತಂತ್ರಜ್ಞಾನಗಳಲ್ಲಿ ಎರಡೂ ದೇಶಗಳ ಶಕ್ತಿಯನ್ನು ಒಗ್ಗೂಡಿಸಿ, ಕೇಂದ್ರೀಕೃತ ಮತ್ತು ಭವಿಷ್ಯದ ಪಾಲುದಾರಿಕೆಯನ್ನು ಬೆಳೆಸುತ್ತದೆ ಎಂದು ಅವರು ಒತ್ತಿಹೇಳಿದರು. ಈ ಯೋಜನೆಯನ್ನು ಆದ್ಯತೆಯ ಮೇಲೆ ಮುಂದಕ್ಕೆ ಕೊಂಡೊಯ್ಯಲು ನಾಯಕರು ಉಭಯ ದೇಶಗಳಿಗೆ ಕರೆ ನೀಡಿದರು. ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಇಸ್ರೇಲ್ ಇನ್ನೋವೇಶನ್ ಅಥಾರಿಟಿ ಜಂಟಿಯಾಗಿ ನಡೆಸುತ್ತಿರುವ 'ಭಾರತ-ಇಸ್ರೇಲ್ ಕೈಗಾರಿಕಾ ಆರ್&ಡಿ ಮತ್ತು ನಾವೀನ್ಯತೆ ನಿಧಿ' (ಐ4ಎಫ್) ಕಾರ್ಯನಿರ್ವಹಣೆಯನ್ನು ಪ್ರಧಾನ ಮಂತ್ರಿಗಳು ಪರಿಶೀಲಿಸಿದರು. ಉಭಯ ದೇಶಗಳ ಕೈಗಾರಿಕಾ ಸಹಯೋಗವನ್ನು ಹೆಚ್ಚಿಸುವಲ್ಲಿ ಇದರ ಪಾತ್ರ ಬಹಳ ಮುಖ್ಯ ಎಂದು ಅವರು ಪುನರುಚ್ಚರಿಸಿದರು. ಈ ನಿಧಿಯ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಮತ್ತು ಭಾರತೀಯ ಹಾಗೂ ಇಸ್ರೇಲಿ ಉದ್ಯಮಗಳ ನಡುವೆ ಹೆಚ್ಚಿನ ಸಹಕಾರವನ್ನು ವಿಸ್ತರಿಸಲು, ಕೈಗಾರಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡುವುದು ಮತ್ತು ಉತ್ತಮ ಗುಣಮಟ್ಟದ ಜಂಟಿ ಸಂಶೋಧನಾ ಪಾಲುದಾರಿಕೆಗಳನ್ನು ಸುಗಮಗೊಳಿಸುವುದು ಸೇರಿದಂತೆ ಐ4ಎಫ್ ಕಾರ್ಯವಿಧಾನವನ್ನು ಇನ್ನಷ್ಟು ಬಲಪಡಿಸಲು ಅವರು ಒಪ್ಪಿಕೊಂಡರು.

ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿ ಎಸ್‌ ಟಿ) ಮತ್ತು ಇಸ್ರೇಲ್‌ ನ ನಾವೀನ್ಯತೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ (ಎಂ ಒ ಎಸ್‌ ಟಿ) ಜಂಟಿಯಾಗಿ ಜಾರಿಗೊಳಿಸುತ್ತಿರುವ 'ಭಾರತ-ಇಸ್ರೇಲ್ ಜಂಟಿ ಸಂಶೋಧನಾ ಯೋಜನೆ' (ಐ ಐ ಜೆ ಆರ್‌ ಸಿ) ಯ ಯಶಸ್ಸನ್ನು ಗುರುತಿಸಿದ ಪ್ರಧಾನಮಂತ್ರಿಗಳು, ಈ ಯೋಜನೆಗೆ ಎರಡೂ ಕಡೆಯಿಂದ ನೀಡಲಾಗುವ ವಂತಿಕೆಯನ್ನು ಪ್ರಸ್ತುತ ಇರುವ 1 ಮಿಲಿಯನ್ ಡಾಲರ್‌ ನಿಂದ 1.5 ಮಿಲಿಯನ್ ಡಾಲರ್‌ ಗೆ ಹೆಚ್ಚಿಸಲು ಒಪ್ಪಿಕೊಂಡರು. ಇದು ಭಾರತ ಮತ್ತು ಇಸ್ರೇಲ್‌ ನ ವಿಶ್ವವಿದ್ಯಾಲಯಗಳ ನಡುವೆ ಸಂಶೋಧನಾ ಸೌಲಭ್ಯಗಳು ಮತ್ತು ಉಪಕರಣಗಳ ಹಂಚಿಕೆಗೆ ಉತ್ತೇಜನ ನೀಡಲಿದೆಯಲ್ಲದೆ, ವಿಜ್ಞಾನಿಗಳ ಪರಸ್ಪರ ಭೇಟಿಗೂ ಅವಕಾಶ ಕಲ್ಪಿಸುತ್ತದೆ. ಈ ಜಂಟಿ ಸಂಶೋಧನಾ ಯೋಜನೆಯನ್ನು ಸಂಯೋಜಿಸಲು ಮತ್ತು ಮುನ್ನಡೆಸಲು 'ಜಂಟಿ ವೈಜ್ಞಾನಿಕ ಸಮಿತಿ'ಗೆ ಅಧಿಕಾರ ನೀಡಲು ಉಭಯ ದೇಶಗಳು ಸಮ್ಮತಿಸಿದವು. ಅಲ್ಲದೆ, ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲಿನ ಜಂಟಿ ಸಮಿತಿಯನ್ನು ಸಚಿವಾಲಯ ಮಟ್ಟಕ್ಕೆ ಏರಿಸಿರುವುದನ್ನು ನಾಯಕರು ಸ್ವಾಗತಿಸಿದರು ಮತ್ತು ಇದರ ಮೊದಲ ಸಭೆಯನ್ನು ಶೀಘ್ರದಲ್ಲೇ ಭಾರತ ಅಥವಾ ಇಸ್ರೇಲ್‌ ನಲ್ಲಿ ನಡೆಸಲು ನಿರ್ಧರಿಸಿದರು.

ನಾವೀನ್ಯತೆಗೆ ಮುಖ್ಯ ಶಕ್ತಿಯಾಗಿರುವ ಶಿಕ್ಷಣ ಸಂಸ್ಥೆಗಳು ಮತ್ತು ಉದ್ದಿಮೆಗಳ ನಡುವಿನ ಸಂಬಂಧವನ್ನು ಬಲಪಡಿಸುವ ಅಗತ್ಯವನ್ನು ಪ್ರಧಾನಮಂತ್ರಿಗಳು ಗುರುತಿಸಿದರು. ಜಂಟಿ ಸಂಶೋಧನೆ, ತಂತ್ರಜ್ಞಾನದ ಅಭಿವೃದ್ಧಿ ಮತ್ತು ವಾಣಿಜ್ಯ ಪಾಲುದಾರಿಕೆಯನ್ನು ಉತ್ತೇಜಿಸಲು ಎರಡೂ ದೇಶಗಳ ಸಂಶೋಧಕರು, ಉದ್ಯಮದ ಮುಖಂಡರು ಮತ್ತು ತಂತ್ರಜ್ಞಾನ ತಜ್ಞರ ನಡುವೆ ವ್ಯವಸ್ಥಿತ ಸಂಪರ್ಕವನ್ನು ಬೆಳೆಸಲು ಅವರು ಒಪ್ಪಿಕೊಂಡರು.

ಉಭಯ ದೇಶಗಳ ನಡುವೆ ಜಂಟಿ ನಾವೀನ್ಯತೆ ಚಟುವಟಿಕೆಗಳನ್ನು ಮುನ್ನಡೆಸಲು ಸಾಂಸ್ಥಿಕ ಬೆಂಬಲವನ್ನು ನೀಡುವ ಅಗತ್ಯವನ್ನು ಪ್ರಧಾನಮಂತ್ರಿಗಳು ಒಪ್ಪಿಕೊಂಡರು. ಈ ನಿಟ್ಟಿನಲ್ಲಿ, ಭಾರತ ಮತ್ತು ಇಸ್ರೇಲ್‌ ನ ನಾವೀನ್ಯತೆ ಪರಿಸರ ವ್ಯವಸ್ಥೆಗಳ ನಡುವೆ ಸಂಶೋಧನೆ ಮತ್ತು ಅಭಿವೃದ್ಧಿ, ತಂತ್ರಜ್ಞಾನದ ಮೌಲ್ಯೀಕರಣ, ಪ್ರಾಯೋಗಿಕ ಯೋಜನೆಗಳು ಮತ್ತು ಜಂಟಿ ಅಭಿವೃದ್ಧಿ ಕಾರ್ಯಗಳನ್ನು ಸುಗಮಗೊಳಿಸಲು 'ಟೆಕ್ ಗೇಟ್‌ವೇ' ಕಾರ್ಯವಿಧಾನಗಳ ಅಭಿವೃದ್ಧಿಯ ಸಾಧ್ಯತೆಗಳನ್ನು ಪರಿಶೀಲಿಸಲು ಅವರು ಸಮ್ಮತಿಸಿದರು.

ಕೃತಕ ಬುದ್ಧಿಮತ್ತೆಯು ನಾವೀನ್ಯತೆಯ ಪ್ರಮುಖ ಚಾಲಕ ಶಕ್ತಿ ಎಂಬ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಗುರುತಿಸಿದ ಪ್ರಧಾನಮಂತ್ರಿಗಳು, ಈ ಕ್ಷೇತ್ರದಲ್ಲಿ ನೈಪುಣ್ಯತೆ ಮತ್ತು ಪ್ರತಿಭೆಗಳ ವಿನಿಮಯಕ್ಕಾಗಿ ಸಹಕಾರವನ್ನು ಹೆಚ್ಚಿಸಲು ನಿರ್ಧರಿಸಿದರು. ಎಐ ವೃತ್ತಿಪರರು, ಸಂಶೋಧನಾ ಸಂಸ್ಥೆಗಳು ಮತ್ತು ನವೀನ ಉದ್ಯಮಗಳ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವ ಚೌಕಟ್ಟುಗಳನ್ನು ರೂಪಿಸುವ ಪ್ರಯತ್ನಗಳನ್ನು ಅವರು ಸ್ವಾಗತಿಸಿದರು.

ಭಾರತ ಮತ್ತು ಇಸ್ರೇಲ್ ಕೃತಕ ಬುದ್ಧಿಮತ್ತೆಯಲ್ಲಿ ಸಾಧಿಸಿರುವ ಪ್ರಗತಿಯನ್ನು ಪರಿಗಣಿಸಿ, ಉಭಯ ನಾಯಕರು ಕೃತಕ ಬುದ್ಧಿಮತ್ತೆ ಸಹಕಾರದ ಕುರಿತಾದ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಸ್ವಾಗತಿಸಿದರು. ಜನರ ಕಲ್ಯಾಣಕ್ಕಾಗಿ ಈ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಆಳವಾದ ಸಹಯೋಗವನ್ನು ಹೊಂದಲು ಅವರು ಸಮ್ಮತಿಸಿದರು.

ಇಸ್ರೇಲ್ ಬಾಹ್ಯಾಕಾಶ ಸಂಸ್ಥೆ (ಐ ಎಸ್‌ ಎ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನಡುವೆ ನಡೆಯುತ್ತಿರುವ ಸಹಯೋಗವನ್ನು ಪ್ರಧಾನಮಂತ್ರಿಗಳು ಸ್ವಾಗತಿಸಿದರು. ಇಸ್ರೇಲ್‌ ನ ಬಾಹ್ಯಾಕಾಶ ಆಧಾರಿತ ನವೋದ್ಯಮಗಳು ಮತ್ತು ಕಂಪನಿಗಳು ಭಾರತದ ಕಂಪನಿಗಳೊಂದಿಗೆ ಹೆಚ್ಚು ಆಳವಾಗಿ ತೊಡಗಿಸಿಕೊಳ್ಳಲು ಇರುವ ಅಪಾರ ಅವಕಾಶಗಳನ್ನು ಅವರು ಗುರುತಿಸಿದರು. ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಉಭಯ ದೇಶಗಳ ಬಾಹ್ಯಾಕಾಶ ಉದ್ಯಮಗಳ ನಡುವೆ ಹೆಚ್ಚಿನ ಸಹಕಾರ, ಜಂಟಿ ಉದ್ಯಮಗಳು ಮತ್ತು ಜ್ಞಾನ ವಿನಿಮಯವನ್ನು ಉತ್ತೇಜಿಸುವ ಪ್ರಾಮುಖ್ಯತೆಯನ್ನು ಅವರು ಒತ್ತಿಹೇಳಿದರು.

'ಹಾರಿಜಾನ್ ಸ್ಕ್ಯಾನಿಂಗ್ / ಸ್ಟ್ರಾಟೆಜಿಕ್ ಫೋರ್‌ಸೈಟ್ ಮೆಕಾನಿಸಂ' ಸ್ಥಾಪಿಸುವ ಸಹಕಾರದ ಉದ್ದೇಶದ ಘೋಷಣೆಗೆ ಸಹಿ ಹಾಕಿರುವುದನ್ನು ಉಭಯ ನಾಯಕರು ಸ್ವಾಗತಿಸಿದರು. ಈ ಕಾರ್ಯವಿಧಾನವು ದತ್ತಾಂಶ, ಎಐ ಮತ್ತು ತಜ್ಞರ ಒಳನೋಟಗಳನ್ನು ಬಳಸಿಕೊಂಡು ತಂತ್ರಜ್ಞಾನ, ಅರ್ಥವ್ಯವಸ್ಥೆ ಮತ್ತು ಸಮಾಜದಂತಹ ಕ್ಷೇತ್ರಗಳಲ್ಲಿ ಜಾಗತಿಕವಾಗಿ ಉದಯಿಸುತ್ತಿರುವ ಪ್ರವೃತ್ತಿಗಳನ್ನು ಗುರುತಿಸಲು ಹಾಗೂ ಕಾರ್ಯತಂತ್ರದ ಯೋಜನೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

ಸೈಬರ್ ಭದ್ರತೆ

ಸರ್ಕಾರಿ ಮತ್ತು ಖಾಸಗಿ ವಲಯಗಳೆರಡರಲ್ಲೂ ಸೈಬರ್ ಭದ್ರತೆಯನ್ನು ಬಲಪಡಿಸುವ ತಮ್ಮ ಬದ್ಧತೆಯನ್ನು ಪ್ರಧಾನಮಂತ್ರಿಗಳು ಪುನರುಚ್ಚರಿಸಿದರು. ಎರಡೂ ದೇಶಗಳ ರಾಷ್ಟ್ರೀಯ ಸೈಬರ್ ಪ್ರಾಧಿಕಾರಗಳ ನಡುವೆ ದೃಢವಾದ ಸಂವಾದದ ಅಗತ್ಯವನ್ನು ಅವರು ಒತ್ತಿಹೇಳಿದರು ಮತ್ತು ಈ ಕ್ಷೇತ್ರದಲ್ಲಿ ಸಹಕಾರವನ್ನು ಆಳಗೊಳಿಸಲು ಪ್ರತಿಜ್ಞೆ ಮಾಡಿದರು. ಇದರ ಜೊತೆಗೆ, ಸೈಬರ್ ಭದ್ರತೆಯಲ್ಲಿ ದ್ವಿಪಕ್ಷೀಯ ಸಹಯೋಗವನ್ನು ಮಾರ್ಗದರ್ಶನ ಮಾಡಲು ಮತ್ತು ಅನುಷ್ಠಾನಕ್ಕಾಗಿ ಜಂಟಿ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸಲು ಬಹು-ವರ್ಷದ ಕಾರ್ಯತಂತ್ರದ ಕಾರ್ಯಕ್ರಮವನ್ನು ರೂಪಿಸಲು ಅವರು ನಿರ್ಧರಿಸಿದರು. ಈ ಮಾರ್ಗಸೂಚಿಯು ಮಾನವ ಸಾಮರ್ಥ್ಯ ವೃದ್ಧಿ, ಸೈಬರ್ ಭದ್ರತೆ ಮತ್ತು ಎಐ, ಅನ್ವಯಿಕ ಸಂಶೋಧನೆ, 'ಸೆಕ್ಯೂರಿಟಿ ಬೈ ಡಿಸೈನ್' ತತ್ವಗಳ ಏಕೀಕರಣ ಮತ್ತು ನಿಯಮಿತ ಜಂಟಿ ಅಭ್ಯಾಸಗಳನ್ನು ಒಳಗೊಂಡಿರುತ್ತದೆ. ಸೈಬರ್ ಸಹಕಾರವನ್ನು ಸಾಂಸ್ಥಿಕಗೊಳಿಸುವ ಪ್ರಾಮುಖ್ಯತೆಯನ್ನು ಗುರುತಿಸಿ, ಮಾರ್ಚ್ 2025 ರಲ್ಲಿ ನಡೆದ ಉದ್ಘಾಟನಾ 'ಭಾರತ-ಇಸ್ರೇಲ್ ಸೈಬರ್ ನೀತಿ ಸಂವಾದ'ದ ಯಶಸ್ಸನ್ನು ಅವರು ಸ್ವಾಗತಿಸಿದರು. ಈ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿ, ಭಾರತದಲ್ಲಿ 'ಭಾರತ-ಇಸ್ರೇಲ್ ಸೈಬರ್ ಭದ್ರತೆ ಶ್ರೇಷ್ಠತಾ ಕೇಂದ್ರ' ಸ್ಥಾಪಿಸಲು ಉದ್ದೇಶದ ಪತ್ರಕ್ಕೆ ಸಹಿ ಹಾಕಿರುವುದನ್ನು ಉಭಯ ನಾಯಕರು ಸ್ವಾಗತಿಸಿದರು.

ವ್ಯಾಪಾರ, ಹೂಡಿಕೆ ಮತ್ತು ಸಂಪರ್ಕ

ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಪ್ರಧಾನಮಂತ್ರಿ ಮೋದಿ ಮತ್ತು ಪ್ರಧಾನಮಂತ್ರಿ ನೆತನ್ಯಾಹು ಒತ್ತು ನೀಡಿದರು. ಸೆಪ್ಟೆಂಬರ್ 2025 ರಲ್ಲಿ ನವದೆಹಲಿಯಲ್ಲಿ ಉಭಯ ದೇಶಗಳ ಹಣಕಾಸು ಸಚಿವರು 'ಭಾರತ-ಇಸ್ರೇಲ್ ದ್ವಿಪಕ್ಷೀಯ ಹೂಡಿಕೆ ಒಪ್ಪಂದ'ಕ್ಕೆ ಸಹಿ ಹಾಕಿರುವುದನ್ನು ಅವರು ಸ್ವಾಗತಿಸಿದರು. ಇದು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸುತ್ತದೆ, ಹೂಡಿಕೆಗೆ ಪಾರದರ್ಶಕ ಮತ್ತು ಸ್ಪಷ್ಟ ಚೌಕಟ್ಟನ್ನು ಒದಗಿಸುತ್ತದೆ ಹಾಗೂ ಸ್ವತಂತ್ರ ವಿವಾದ ಪರಿಹಾರ ವ್ಯವಸ್ಥೆಯ ಮೂಲಕ ಹೂಡಿಕೆಗಳ ರಕ್ಷಣೆಯನ್ನು ಖಚಿತಪಡಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಮುಕ್ತ ವ್ಯಾಪಾರ ಪ್ರದೇಶ (ಎಫ್‌ ಟಿ ಎ) ಒಪ್ಪಂದದ ಮಾತುಕತೆಗಳಿಗಾಗಿ 'ಉಲ್ಲೇಖದ ನಿಯಮಗಳಿಗೆ' (ಟಿಒಆರ್) ಸಹಿ ಹಾಕಿರುವುದನ್ನು ಮತ್ತು ನವದೆಹಲಿಯಲ್ಲಿ ನಡೆದ ಮೊದಲ ಸುತ್ತಿನ ಮಾತುಕತೆಯನ್ನು ನಾಯಕರು ಸ್ವಾಗತಿಸಿದರು. ಎರಡೂ ದೇಶಗಳ ನಡುವೆ ಎಫ್‌ ಟಿ ಎ ಒಪ್ಪಂದವನ್ನು ಶೀಘ್ರವಾಗಿ ಪೂರ್ಣಗೊಳಿಸಲು ಮತ್ತು ಸಹಿ ಹಾಕಲು ಮಾತುಕತೆ ನಡೆಸುತ್ತಿರುವ ತಂಡಗಳಿಗೆ ಅವರು ಸೂಚನೆ ನೀಡಿದರು.

ಆರ್ಥಿಕ ಸ್ಥಿರತೆಗೆ ಸುಸ್ಥಿರ ಹಣಕಾಸು ವ್ಯವಸ್ಥೆಯು ಅಡಿಪಾಯ ಎಂದು ಪ್ರತಿಪಾದಿಸಿದ ನಾಯಕರು, ಹಣಕಾಸು-ಸೈಬರ್ ಕ್ಷೇತ್ರದಲ್ಲಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಸ್ವಾಗತಿಸಿದರು. ಈ ಸಹಯೋಗವು ಹಣಕಾಸು-ಸೈಬರ್ ಗುಪ್ತಚರ ವಿನಿಮಯ ಮತ್ತು ಎರಡೂ ದೇಶಗಳ 'ಹಣಕಾಸು ಕಂಪ್ಯೂಟರ್ ಭದ್ರತಾ ಘಟನಾ ಪ್ರತಿಕ್ರಿಯೆ ತಂಡಗಳ' ಮೂಲಕ ಜಂಟಿ ಕಾರ್ಯಾಚರಣೆಗಳ ಮೇಲೆ ಗಮನ ಕೇಂದ್ರೀಕರಿಸಲಿದೆ.

ವಿಶ್ವದರ್ಜೆಯ ಮಾದರಿಯಾಗಿರುವ ಭಾರತದ ಯುಪಿಐ ಕ್ರಾಂತಿಯನ್ನು ಪ್ರಧಾನಮಂತ್ರಿ ನೆತನ್ಯಾಹು ಅವರು ಶ್ಲಾಘಿಸಿದರು. ಆರ್ಥಿಕ ಸಂಬಂಧಗಳನ್ನು ಗಟ್ಟಿಗೊಳಿಸಲು ಭಾರತದ ಯುಪಿಐ ಅನ್ನು ಇಸ್ರೇಲ್‌ ನ ತ್ವರಿತ ಪಾವತಿ ವ್ಯವಸ್ಥೆಯೊಂದಿಗೆ ಜೋಡಿಸುವ ಸಾಧ್ಯತೆಗಳನ್ನು ಅನ್ವೇಷಿಸಲು ಎರಡೂ ಕಡೆಯವರು ಒಪ್ಪಿಕೊಂಡರು. ಇದರ ಭಾಗವಾಗಿ ಗಡಿಯಾಚೆಗಿನ ಪಾವತಿಗಳಿಗಾಗಿ ಎನ್‌ ಪಿ ಸಿ ಐ ಇಂಟರ್ನ್ಯಾಷನಲ್ ಮತ್ತು ಎಂ ಎ ಎಸ್‌ ಎ ವಿ ನಡುವಿನ ತಿಳುವಳಿಕೆ ಒಪ್ಪಂದವನ್ನು ಅವರು ಸ್ವಾಗತಿಸಿದರು.

ದ್ವಿಪಕ್ಷೀಯ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನೇರ ವಿಮಾನ ಸಂಪರ್ಕವು ಅತ್ಯಗತ್ಯ ಎಂದು ನಾಯಕರು ಅಭಿಪ್ರಾಯಪಟ್ಟರು. ಈ ನಿಟ್ಟಿನಲ್ಲಿ, ಟೆಲ್ ಅವಿವ್ ಮತ್ತು ಭಾರತದ ಪ್ರಮುಖ ನಗರಗಳ ನಡುವೆ ಹೆಚ್ಚಿನ ನೇರ ವಿಮಾನಗಳನ್ನು ಪ್ರಾರಂಭಿಸಲು ಅವರು ಇಚ್ಛೆ ವ್ಯಕ್ತಪಡಿಸಿದರು ಮತ್ತು ಭಾರತ ಮತ್ತು ಇಸ್ರೇಲಿ ವಿಮಾನಯಾನ ಸಂಸ್ಥೆಗಳು ಎರಡೂ ದೇಶಗಳ ನಡುವೆ ನೇರ ವಿಮಾನ ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ಅವಕಾಶವನ್ನು ಬಳಸಿಕೊಳ್ಳುವಂತೆ ಕರೆ ನೀಡಿದರು.

ನಿಕಟ ಆರ್ಥಿಕ ಸಹಕಾರವನ್ನು ಹೆಚ್ಚಿಸಲು ಭಾರತ-ಇಸ್ರೇಲ್ ಹಣಕಾಸು ಮಾತುಕತೆಯ ಪ್ರಾರಂಭವನ್ನು ನಾಯಕರು ಸ್ವಾಗತಿಸಿದರು.

ಇಸ್ರೇಲ್‌ ನಲ್ಲಿ ಮುಂಬರುವ ಪ್ರಮುಖ ಮೂಲಸೌಕರ್ಯ ಯೋಜನೆಗಳಾದ ಮೆಟ್ರೋ, ರೈಲು, ರಸ್ತೆ, ವಿಮಾನ ನಿಲ್ದಾಣಗಳು, ಸಮುದ್ರದ ನೀರನ್ನು ಸಿಹಿನೀರು ಮಾಡುವ ಘಟಕಗಳು ಮತ್ತು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಲ್ಲಿ ಹೆಚ್ಚಿನ ಭಾರತೀಯ ಕಂಪನಿಗಳು ಭಾಗವಹಿಸುವಂತೆ ಉಭಯ ನಾಯಕರು ಕರೆ ನೀಡಿದರು.

2025ರ ನವೆಂಬರ್‌ನಲ್ಲಿ ಟೆಲ್ ಅವಿವ್‌ ನಲ್ಲಿ ನಡೆದ ಭಾರತ-ಇಸ್ರೇಲ್ ಸಿಇಒ ಫೋರಂ ಮತ್ತು ಉದ್ಯಮ ಶೃಂಗಸಭೆಯ 4ನೇ ಸುತ್ತಿನ ಯಶಸ್ವಿ ಮುಕ್ತಾಯವನ್ನು ಉಭಯ ನಾಯಕರು ಸ್ವಾಗತಿಸಿದರು. ಉದ್ಯಮ ಮತ್ತು ಸರ್ಕಾರಿ ಮುಖಂಡರ ನಡುವಿನ ಅರ್ಥಪೂರ್ಣ ತೊಡಗಿಸಿಕೊಳ್ಳುವಿಕೆಯನ್ನು ಅವರು ಶ್ಲಾಘಿಸಿದರು; ಇದು ದ್ವಿಪಕ್ಷೀಯ ಆರ್ಥಿಕ ಸಹಕಾರವನ್ನು ಬಲಪಡಿಸಲು ಮತ್ತು ಪ್ರಮುಖ ವಲಯಗಳಲ್ಲಿ ಹೂಡಿಕೆ ಹಾಗೂ ಸಹಯೋಗದ ಹೊಸ ಅವಕಾಶಗಳನ್ನು ತೆರೆಯಲು ಕೊಡುಗೆ ನೀಡಿದೆ ಎಂದು ತಿಳಿಸಿದರು. ಭಾರತ-ಇಸ್ರೇಲ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಆಳಗೊಳಿಸಲು ಈ ಸಕಾರಾತ್ಮಕ ವೇಗವನ್ನು ಮುಂದುವರಿಸುವ ತಮ್ಮ ಬದ್ಧತೆಯನ್ನು ಉಭಯ ನಾಯಕರು ಪುನರುಚ್ಚರಿಸಿದರು. ಅಲ್ಲದೆ, ವಾಣಿಜ್ಯ ವಿವಾದಗಳ ಸುಗಮ ಪರಿಹಾರಕ್ಕೆ ಅನುವು ಮಾಡಿಕೊಡುವ ಮತ್ತು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿ, ಭಾರತೀಯ ಮಧ್ಯಸ್ಥಿಕೆ ಮಂಡಳಿ (ಐಸಿಎ) ಮತ್ತು ಇಸ್ರೇಲಿ ವಾಣಿಜ್ಯ ಮಧ್ಯಸ್ಥಿಕೆ ಸಂಸ್ಥೆ (ಐಐಸಿಎ) ನಡುವೆ 'ಮಧ್ಯಸ್ಥಿಕೆ ಕುರಿತಾದ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಅವರು ಸ್ವಾಗತಿಸಿದರು.

ಕೃಷಿ, ನೀರು ಮತ್ತು ಪರಿಸರ ಸಂರಕ್ಷಣೆ

ಸುಸ್ಥಿರ ಅಭಿವೃದ್ಧಿಯಲ್ಲಿ ನೀರು ಮತ್ತು ಕೃಷಿಯ ನಿರ್ಣಾಯಕ ಪಾತ್ರವನ್ನು ಗುರುತಿಸಿದ ಪ್ರಧಾನಮಂತ್ರಿ ಮೋದಿ ಮತ್ತು ಪ್ರಧಾನಮಂತ್ರಿ ನೆತನ್ಯಾಹು ಅವರು, ನೀರು ಮತ್ತು ಕೃಷಿ ಕ್ಷೇತ್ರದಲ್ಲಿನ ಪಾಲುದಾರಿಕೆಯನ್ನು ಬಲಪಡಿಸುವ ಪ್ರಯತ್ನಗಳ ಪ್ರಾಮುಖ್ಯತೆಯನ್ನು ದೃಢಪಡಿಸಿದರು. ಈ ಪಾಲುದಾರಿಕೆಯು ಮುಖ್ಯವಾಗಿ ಜಲ ಸಂರಕ್ಷಣೆ, ತ್ಯಾಜ್ಯ ನೀರು ಸಂಸ್ಕರಣೆ ಮತ್ತು ಕೃಷಿಗಾಗಿ ಅದರ ಮರುಬಳಕೆ, ಉಪ್ಪುನೀರಿನ ಸಂಸ್ಕರಣೆ, ನೀರಿನ ಸೌಲಭ್ಯಗಳ ಸುಧಾರಣೆ ಹಾಗೂ ಸುಧಾರಿತ ಜಲ ತಂತ್ರಜ್ಞಾನಗಳನ್ನು ಬಳಸಿಕೊಂಡು ಗಂಗಾ ಮತ್ತು ಇತರ ನದಿಗಳ ಶುದ್ಧೀಕರಣದಂತಹ ಪ್ರಮುಖ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ.

ಭಾರತದ ಕೃಷಿ ಸಚಿವಾಲಯದ ಸಹಯೋಗದೊಂದಿಗೆ ಇಸ್ರೇಲ್‌ ನ 'ಮಾಶಾವ್' (MASHAV) ಸಂಸ್ಥೆಯು ಇಸ್ರೇಲ್‌ ನಲ್ಲಿ ನಡೆಸುತ್ತಿರುವ ಕೃಷಿ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮವನ್ನು ಬಲಪಡಿಸಲು ಪ್ರಧಾನಮಂತ್ರಿಗಳು ಒಪ್ಪಿಕೊಂಡರು. ಈ ಬಹುಮುಖಿ ಕಾರ್ಯಕ್ರಮವು ತರಬೇತಿಗಳು, ವಿಶಿಷ್ಟ ಹಾಗೂ ನವೀನ ತಂತ್ರಗಳ ಪರಿಚಯ ಮತ್ತು ಜ್ಞಾನ ವಿನಿಮಯದ ಮೂಲಕ ಲಕ್ಷಾಂತರ ಭಾರತೀಯ ರೈತರಿಗೆ ಪ್ರಯೋಜನವನ್ನು ನೀಡುತ್ತದೆ.

ಭಾರತದಾದ್ಯಂತ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ 35 'ಕೃಷಿ ಶ್ರೇಷ್ಠತಾ ಕೇಂದ್ರಗಳ' ಪ್ರಗತಿಯನ್ನು ಮತ್ತು ಜಂಟಿಯಾಗಿ ಕಾರ್ಯರೂಪಕ್ಕೆ ತರಲಾಗುತ್ತಿರುವ ಉಳಿದ 8 ಕೇಂದ್ರಗಳ ಬಗ್ಗೆ ಪ್ರಧಾನಮಂತ್ರಿಗಳು ಮಾಹಿತಿ ಪಡೆದರು. ಈ ಶ್ರೇಷ್ಠತಾ ಕೇಂದ್ರಗಳಲ್ಲಿ ಇದುವರೆಗೆ ಹತ್ತು ಲಕ್ಷಕ್ಕೂ ಹೆಚ್ಚು ಭಾರತೀಯ ರೈತರು ತರಬೇತಿ ಪಡೆದಿರುವುದಕ್ಕೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು.

ಭಾರತದ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಮತ್ತು ಮಾಶಾವ್ ನಡುವೆ 'ಭಾರತ-ಇಸ್ರೇಲ್ ಕೃಷಿ ನಾವೀನ್ಯತೆ ಕೇಂದ್ರ' (ಐ ಐ ಎನ್‌ ಸಿ ಎ) ಸ್ಥಾಪನೆಯ ಕುರಿತಾದ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಪ್ರಧಾನಮಂತ್ರಿಗಳು ಸ್ವಾಗತಿಸಿದರು. ಈ ಉಪಕ್ರಮವು ಸಂಶೋಧನೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವುದಲ್ಲದೆ, ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಮತ್ತು ಕೃಷಿಯಲ್ಲಿ ಸುಸ್ಥಿರ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ. ಇದಲ್ಲದೆ, ಇಸ್ರೇಲ್‌ ನ 'ವೋಲ್ಕಾನಿ ಕೃಷಿ ಸಂಶೋಧನಾ ಸಂಸ್ಥೆ'ಯಲ್ಲಿ ಭಾರತೀಯ ಸಂಶೋಧಕರಿಗಾಗಿ 20 'ಜಂಟಿ ಸಂಶೋಧನಾ ಫೆಲೋಶಿಪ್‌'ಗಳನ್ನು ಪ್ರಾರಂಭಿಸಿರುವುದನ್ನು ಉಭಯ ನಾಯಕರು ಸ್ವಾಗತಿಸಿದರು.

2026ರ ಜನವರಿಯಲ್ಲಿ ಮೀನುಗಾರಿಕೆ ಮತ್ತು ಜಲಚರ ಸಾಕಣೆ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಸಹಿ ಮಾಡಲಾದ ಉದ್ದೇಶದ ಘೋಷಣೆಯನ್ನು ಇಬ್ಬರೂ ನಾಯಕರು ಸ್ವಾಗತಿಸಿದರು. ಈ ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸಲು ಮತ್ತು ಮೀನುಗಾರಿಕೆ ಹಾಗೂ ಜಲಚರ ಸಾಕಣೆಗಾಗಿ ಜಂಟಿ ಶ್ರೇಷ್ಠತಾ ಕೇಂದ್ರವನ್ನು ಸ್ಥಾಪಿಸಲು ಅವರು ಒಪ್ಪಿಕೊಂಡರು.

ಪರಿಸರ ಮತ್ತು ಹವಾಮಾನ ಬದಲಾವಣೆಯ ಕ್ಷೇತ್ರದಲ್ಲಿ ಸಹಕಾರದ ಪ್ರಾಮುಖ್ಯತೆಯನ್ನು ಪ್ರಧಾನಮಂತ್ರಿಗಳು ಒತ್ತಿಹೇಳಿದರು. ಹವಾಮಾನ ಕ್ರಮದ ಕುರಿತು ಸಾಮರ್ಥ್ಯ ವೃದ್ಧಿ, ತಂತ್ರಜ್ಞಾನ ವರ್ಗಾವಣೆಯ ಸಾಧ್ಯತೆಗಳ ಪರಿಶೀಲನೆ, ಜಂಟಿಯಾಗಿ ಮರುಬಳಕೆ ಆರ್ಥಿಕತೆಯನ್ನು ಉತ್ತೇಜಿಸುವುದು, ಜೀವವೈವಿಧ್ಯದ ರಕ್ಷಣೆ ಮತ್ತು ಪರಿಸರ ಮಾಲಿನ್ಯ ತಡೆಗಟ್ಟುವಿಕೆ ಸೇರಿದಂತೆ ವಿವಿಧ ವಿಷಯಗಳಲ್ಲಿ ಪಾಲುದಾರರ ನಡುವೆ ಸಹಯೋಗವನ್ನು ಬಲಪಡಿಸಲು ದ್ವಿಪಕ್ಷೀಯ ಸಮಾಲೋಚನೆಗಳನ್ನು ನಡೆಸಲು ಅವರು ಸಮ್ಮತಿಸಿದರು.

ಭಯೋತ್ಪಾದನೆಯ ವಿರುದ್ಧ ಹೋರಾಟ ಮತ್ತು ಶಾಂತಿ ಸ್ಥಾಪನೆ

ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಎಲ್ಲಾ ರೂಪದ ಭಯೋತ್ಪಾದನೆಯನ್ನು ಉಭಯ ನಾಯಕರು ಸ್ಪಷ್ಟವಾಗಿ ಮತ್ತು ಬಲವಾಗಿ ಖಂಡಿಸಿದರು. ಭಯೋತ್ಪಾದನೆಯನ್ನು ಸಮಗ್ರವಾಗಿ ಮತ್ತು ನಿರಂತರವಾಗಿ ಎದುರಿಸಲು ನಿರ್ಣಾಯಕ ಹಾಗೂ ಒಗ್ಗಟ್ಟಿನ ಅಂತರರಾಷ್ಟ್ರೀಯ ಪ್ರಯತ್ನಗಳಿಗೆ ಅವರು ಕರೆ ನೀಡಿದರು. ಈ ಸಾಮಾನ್ಯ ಸವಾಲಿನ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಪ್ರಧಾನಮಂತ್ರಿಗಳು, ಎರಡು ಚೈತನ್ಯಶೀಲ ಮತ್ತು ಸ್ಥಿತಿಸ್ಥಾಪಕ ಪ್ರಜಾಪ್ರಭುತ್ವಗಳ ನಾಯಕರಾಗಿ ಈ ಪಿಡುಗನ್ನು ಎದುರಿಸಲು ತಮ್ಮ ಸಾಮೂಹಿಕ ಸಂಕಲ್ಪವನ್ನು ಪುನರುಚ್ಚರಿಸಿದರು. ಅಕ್ಟೋಬರ್ 7, 2023 ರಂದು ಇಸ್ರೇಲ್ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿ, ಏಪ್ರಿಲ್ 22, 2025 ರಂದು ಭಾರತದ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ ನಲ್ಲಿ ಭಾರತೀಯ ಪ್ರವಾಸಿಗರ ಮೇಲೆ ನಡೆದ ಕ್ರೂರ ಭಯೋತ್ಪಾದಕ ದಾಳಿ ಮತ್ತು ನವೆಂಬರ್ 10, 2025 ರಂದು ನವದೆಹಲಿಯ ಕೆಂಪು ಕೋಟೆಯ ಸಮೀಪ ನಡೆದ ಭಯೋತ್ಪಾದಕ ಘಟನೆಯನ್ನು ಅವರು ತೀವ್ರವಾಗಿ ಖಂಡಿಸಿದರು.

ಜಾಗತಿಕ ಶಾಂತಿ ಮತ್ತು ಭದ್ರತೆಯನ್ನು ಮುನ್ನಡೆಸುವ ತಮ್ಮ ಅಚಲ ಬದ್ಧತೆಯನ್ನು ಪ್ರಧಾನಮಂತ್ರಿ ಮೋದಿ ಮತ್ತು ಪ್ರಧಾನಮಂತ್ರಿ ನೆತನ್ಯಾಹು ಪುನರುಚ್ಚರಿಸಿದರು. ಅಲ್ಲದೆ, ಗಾಜಾ ಸಂಘರ್ಷವನ್ನು ಕೊನೆಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ "ಸಮಗ್ರ ಯೋಜನೆ" ಯನ್ನು ಸ್ವಾಗತಿಸಿದರು. ಉಭಯ ನಾಯಕರು ಶಾಂತಿ ಪ್ರಕ್ರಿಯೆ ಸೇರಿದಂತೆ ಪ್ರಾದೇಶಿಕ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು. ಮಾತುಕತೆ ಮತ್ತು ಪರಸ್ಪರ ತಿಳುವಳಿಕೆಯ ಮೂಲಕ ಈ ಭಾಗದಲ್ಲಿ ನ್ಯಾಯಸಮ್ಮತ ಹಾಗೂ ಸುಸ್ಥಿರ ಶಾಂತಿಯನ್ನು ನೆಲೆಸುವಂತೆ ಮಾಡುವುದು, ಭದ್ರತೆಯನ್ನು ಕಾಪಾಡುವುದು ಮತ್ತು ನೌಕಾಯಾನ ಹಾಗೂ ವ್ಯಾಪಾರ ವಹಿವಾಟಿಗೆ ಮುಕ್ತ ಅವಕಾಶವಿರುವಂತೆ ನೋಡಿಕೊಳ್ಳುವುದು ಅಗತ್ಯ ಎಂದು ಅವರು ಒತ್ತಿಹೇಳಿದರು.

ಸಂಸದೀಯ ಸಹಕಾರ

ಭಾರತ ಮತ್ತು ಇಸ್ರೇಲ್ ಎಂಬ ಎರಡು ಚೈತನ್ಯಶೀಲ ಪ್ರಜಾಪ್ರಭುತ್ವಗಳ ನಡುವಿನ ಅತ್ಯುತ್ತಮ ಸಂಸದೀಯ ಸಹಕಾರವನ್ನು ಗಮನದಲ್ಲಿಟ್ಟುಕೊಂಡು, ಹಾಗೂ ಲೋಕಸಭೆಯ ಸ್ಪೀಕರ್ ಮತ್ತು ಕ್ನೆಸೆಟ್ (ಇಸ್ರೇಲ್ ಸಂಸತ್ತು) ಸ್ಪೀಕರ್ ಅವರು ಸಹಿ ಮಾಡಿರುವ ತಿಳುವಳಿಕೆ ಒಪ್ಪಂದದ ಅನ್ವಯ, ಭಾರತದ ಸಂಸತ್ತಿನಲ್ಲಿ 'ಭಾರತ-ಇಸ್ರೇಲ್ ಸಂಸದೀಯ ಸೌಹಾರ್ದ ಗುಂಪು' ಸ್ಥಾಪನೆಯಾಗಿರುವುದನ್ನು ಉಭಯ ನಾಯಕರು ಸ್ವಾಗತಿಸಿದರು.

ಜನರು - ಜನರ ನಡುವಿನ ಸಹಕಾರ

ರಾಷ್ಟ್ರಗಳ ನಡುವಿನ ನಿಜವಾದ ಸ್ನೇಹವು ಸಂಸ್ಕೃತಿ ಮತ್ತು ಕ್ರೀಡೆಯ ಮೂಲಕ ಬಲಗೊಳ್ಳುವ ಜನರ ನಡುವಿನ ಸಂಬಂಧಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಪ್ರಧಾನಮಂತ್ರಿಗಳು ಒತ್ತಿಹೇಳಿದರು. ಇಸ್ರೇಲ್ ದೇಶದ ಸಂಸ್ಕೃತಿ ಮತ್ತು ಕ್ರೀಡಾ ಸಚಿವಾಲಯವು ಸಿನಿಮಾ ಕ್ಷೇತ್ರದಲ್ಲಿ ಭಾರತದೊಂದಿಗೆ ಸಹಕಾರವನ್ನು ಆಳಗೊಳಿಸಲು ಕೆಲಸ ಮಾಡಲಿದೆ. ಇದು ಚಲನಚಿತ್ರ ತಯಾರಕರ ನಡುವಿನ ವಿನಿಮಯ, ಚಲನಚಿತ್ರ ಮತ್ತು ಸರಣಿಗಳ ಜಂಟಿ ನಿರ್ಮಾಣ, ಹಾಗೂ ಎರಡೂ ದೇಶಗಳ ವಿಶಿಷ್ಟ ಸಂಸ್ಕೃತಿಗಳನ್ನು ಪ್ರದರ್ಶಿಸುವ ಜೊತೆಗೆ ಚಿತ್ರರಂಗ ಮತ್ತು ಪ್ರೇಕ್ಷಕರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವ ವೇದಿಕೆಗಳನ್ನು ಒಳಗೊಂಡಿರುತ್ತದೆ.

ತಮ್ಮ ಕೆಲಸದ ಮೂಲಕ ಸ್ನೇಹದ ಬಂಧವನ್ನು ಗಟ್ಟಿಗೊಳಿಸುತ್ತಿರುವ ಇಸ್ರೇಲ್‌ ನಲ್ಲಿನ ಭಾರತೀಯ ಕಾರ್ಮಿಕರ ಕೊಡುಗೆಯನ್ನು ಪ್ರಧಾನಮಂತ್ರಿ ಮೋದಿ ಮತ್ತು ಪ್ರಧಾನಮಂತ್ರಿ ನೆತನ್ಯಾಹು ಗುರುತಿಸಿದರು. ನಿರ್ಮಾಣ ಮತ್ತು ಆರೈಕೆ ವಲಯಗಳಲ್ಲಿ ಭಾರತೀಯ ಕಾರ್ಮಿಕರ ಸುರಕ್ಷಿತ ಮತ್ತು ಸುಭದ್ರ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ನವೆಂಬರ್ 2023 ರಲ್ಲಿ ಸಹಿ ಮಾಡಲಾದ ಚೌಕಟ್ಟು ಒಪ್ಪಂದ ಮತ್ತು ಅನುಷ್ಠಾನ ಶಿಷ್ಟಾಚಾರಗಳ ಪ್ರಾಮುಖ್ಯತೆಯನ್ನು ಅವರು ಒಪ್ಪಿಕೊಂಡರು. ಈ ನಿಟ್ಟಿನಲ್ಲಿ, ವಾಣಿಜ್ಯ ಮತ್ತು ಸೇವೆಗಳು, ಉತ್ಪಾದನೆ ಮತ್ತು ರೆಸ್ಟೋರೆಂಟ್ ವಲಯಗಳಿಗೆ ಸಂಬಂಧಿಸಿದ ಶಿಷ್ಟಾಚಾರಗಳಿಗೆ ಸಹಿ ಹಾಕಿರುವುದನ್ನು ಉಭಯ ನಾಯಕರು ಸ್ವಾಗತಿಸಿದರು.

ಕಾರ್ಮಿಕರ ಸುರಕ್ಷತೆ, ಭದ್ರತೆ ಮತ್ತು ಕಾನೂನು ಹಕ್ಕುಗಳನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಪ್ರಧಾನಮಂತ್ರಿಗಳು ಒತ್ತಿಹೇಳಿದರು. ದತ್ತಾಂಶ ವಿಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಹೈಟೆಕ್‌ ನಂತಹ ಉನ್ನತ ಕೌಶಲ್ಯದ ವಲಯಗಳಲ್ಲಿ ಭಾರತೀಯ ವೃತ್ತಿಪರರಿಗೆ ಹೆಚ್ಚಿನ ಅವಕಾಶಗಳನ್ನು ವಿಸ್ತರಿಸುವ ಪ್ರಾಮುಖ್ಯತೆಯನ್ನು ಅವರು ಒತ್ತಿಹೇಳಿದರು.

ಮುಂದಿನ ಐದು ವರ್ಷಗಳಲ್ಲಿ ಹೆಚ್ಚುವರಿಯಾಗಿ 50,000 ಭಾರತೀಯ ಕಾರ್ಮಿಕರು ಇಸ್ರೇಲ್‌ ಗೆ ಬರಬಹುದು ಎಂದು ಉಭಯ ನಾಯಕರು ಒಪ್ಪಿಕೊಂಡರು. ಜಂಟಿ ಸಮನ್ವಯ ಸಮಿತಿಯ (ಜೆಸಿಸಿ) ಕಾರ್ಯವೈಖರಿಯನ್ನು ಪರಿಶೀಲಿಸಿದ ನಾಯಕರು, ಕಾರ್ಮಿಕರಿಗೆ ಸಂಬಂಧಿಸಿದ ಬಾಕಿ ಇರುವ ಸಮಸ್ಯೆಗಳನ್ನು ಚರ್ಚಿಸಲು ಮತ್ತು ಅವುಗಳನ್ನು ಆದಷ್ಟು ಬೇಗ ಪರಿಹರಿಸಲು ನಿಯಮಿತವಾಗಿ ಸಭೆ ನಡೆಸುವಂತೆ ಸಮಿತಿಗೆ ಸೂಚಿಸಿದರು.

ಆರೋಗ್ಯ

ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಮೊದಲ ಜಂಟಿ ಕಾರ್ಯಕಾರಿ ಗುಂಪಿನ ಸಭೆಯನ್ನು 2026ರ ಆರಂಭದಲ್ಲಿ ನಡೆಸಲು ಪ್ರಧಾನಮಂತ್ರಿಗಳು ಕರೆ ನೀಡಿದರು. ಆರೋಗ್ಯ ರಕ್ಷಣೆಯಲ್ಲಿ ನಾವೀನ್ಯತೆ, ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ರೂಪಾಂತರದ ವಿಷಯಗಳಲ್ಲಿ ಎರಡೂ ದೇಶಗಳ ಸಂಸ್ಥೆಗಳ ನಡುವೆ ಉತ್ತಮ ಅಭ್ಯಾಸಗಳ ವಿನಿಮಯ ಮತ್ತು ಸಹಕಾರವನ್ನು ಸಾಧಿಸಲು ಉಭಯ ನಾಯಕರು ಒಪ್ಪಿಕೊಂಡರು.

ಶಿಕ್ಷಣ - ಭವಿಷ್ಯವನ್ನು ಭದ್ರಪಡಿಸುವುದು

ಜ್ಞಾನಾಧಾರಿತ ಆರ್ಥಿಕತೆಗಳಾಗಿರುವ ಭಾರತ ಮತ್ತು ಇಸ್ರೇಲ್, ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಸಹಯೋಗದ ಪ್ರಯತ್ನಗಳನ್ನು ಇನ್ನಷ್ಟು ಆಳಗೊಳಿಸಬೇಕು ಎಂದು ಪ್ರಧಾನಮಂತ್ರಿ ಮೋದಿ ಮತ್ತು ಪ್ರಧಾನಮಂತ್ರಿ ನೆತನ್ಯಾಹು ಒಪ್ಪಿಕೊಂಡರು. ವಿಶ್ವವಿದ್ಯಾಲಯಗಳ ನಡುವೆ ಜಂಟಿ ಉಪಕ್ರಮಗಳು, ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಯ ವಿನಿಮಯ ಹಾಗೂ ಪರಸ್ಪರರ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್‌ ಗಳನ್ನು ಒದಗಿಸುವ ಮೂಲಕ ಸಹಕಾರವನ್ನು ಉತ್ತೇಜಿಸಲು ನಿರ್ಧರಿಸಿದರು. ನಳಂದ ವಿಶ್ವವಿದ್ಯಾಲಯ ಮತ್ತು ಜೆರುಸಲೆಮ್‌ ನ ಹೀಬ್ರೂ ವಿಶ್ವವಿದ್ಯಾಲಯ ನಡುವೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿರುವುದನ್ನು ಉಭಯ ನಾಯಕರು ಸ್ವಾಗತಿಸಿದರು. ಕೃತಕ ಬುದ್ಧಿಮತ್ತೆ ಬಳಸಿಕೊಂಡು ಶಿಕ್ಷಣವನ್ನು ಮುನ್ನಡೆಸುವ ಸಹಕಾರದ ಕುರಿತಾದ ಒಪ್ಪಂದವನ್ನೂ ಅವರು ಸ್ವಾಗತಿಸಿದರು. ಭಾರತೀಯ ನೈತಿಕ ಮೌಲ್ಯಗಳಲ್ಲಿ ಬೇರೂರಿರುವ ಮತ್ತು ಸುಸ್ಥಿರ ಅಭಿವೃದ್ಧಿಯ 2030ರ ಕಾರ್ಯಸೂಚಿಗೆ ಅನುಗುಣವಾಗಿರುವ ಭಾರತದ 'ರಾಷ್ಟ್ರೀಯ ಶಿಕ್ಷಣ ನೀತಿ 2020' ರ ಬಗ್ಗೆ ಪ್ರಧಾನಮಂತ್ರಿ ಮೋದಿಯವರು ಪ್ರಧಾನಮಂತ್ರಿ ನೆತನ್ಯಾಹು ಅವರಿಗೆ ಮಾಹಿತಿ ನೀಡಿದರು.

ಭಾರತ ಮತ್ತು ಇಸ್ರೇಲ್ ಜಂಟಿಯಾಗಿ 'ಭಾರತ-ಇಸ್ರೇಲ್ ಶೈಕ್ಷಣಿಕ ಸಹಕಾರ ವೇದಿಕೆ' (I2I ವೇದಿಕೆ) ಯನ್ನು ಸ್ಥಾಪಿಸಲು ಒಪ್ಪಿಕೊಂಡಿವೆ. ಇದು ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳು, ನೀತಿ ನಿರೂಪಕರು, ಉನ್ನತ ಶಿಕ್ಷಣ ತಜ್ಞರು ಮತ್ತು ಇತರ ಪ್ರಮುಖ ಪಾಲುದಾರರ ನಡುವೆ ಉನ್ನತ ಮಟ್ಟದ ಸಂವಾದ ನಡೆಸಲು ವಿಶ್ವವಿದ್ಯಾಲಯಗಳ ನೇತೃತ್ವದಲ್ಲಿ ರೂಪಿಸಲಾದ ವೇದಿಕೆಯಾಗಿದೆ. ಈ ವೇದಿಕೆಯು ಪ್ರತಿ ವರ್ಷ ಭಾರತ ಮತ್ತು ಇಸ್ರೇಲ್‌ ನಲ್ಲಿ ಸರದಿಯ ಆಧಾರದ ಮೇಲೆ ಸಭೆ ಸೇರುತ್ತದೆ.

ಜಾಗತಿಕ ವ್ಯಾಪಾರದ ಚಿತ್ರಣವನ್ನು ಬದಲಿಸುವುದು

ಜಾಗತಿಕ ಅನಿಶ್ಚಿತತೆಗಳ ಈ ಕಾಲದಲ್ಲಿ, ಪ್ರಧಾನಮಂತ್ರಿ ಮೋದಿ ಮತ್ತು ಪ್ರಧಾನಮಂತ್ರಿ ನೆತನ್ಯಾಹು ಅವರು 'I2U2' (ಭಾರತ, ಇಸ್ರೇಲ್, ಯುಎಇ ಮತ್ತು ಅಮೆರಿಕ) ಚತುಷ್ಕೋನ ಪಾಲುದಾರಿಕೆಯಂತಹ ಪರಿವರ್ತನಾತ್ಮಕ ಉಪಕ್ರಮಗಳನ್ನು ಮುನ್ನಡೆಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಈ ಚೌಕಟ್ಟು ಉಭಯ ರಾಷ್ಟ್ರಗಳ ಪೂರಕ ಸಾಮರ್ಥ್ಯಗಳನ್ನು ಬಳಸಿಕೊಳ್ಳಲು ಮತ್ತು ಆಳವಾದ ಒಡನಾಟ, ವ್ಯಾಪಾರ, ಹೂಡಿಕೆ ಹಾಗೂ ನಾವೀನ್ಯತೆಯನ್ನು ಉತ್ತೇಜಿಸಲು ಒಂದು ಪ್ರಮುಖ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ನಾಯಕರು 'ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್' (ಐಎಂಇಸಿ) ಬಗ್ಗೆ ಚರ್ಚಿಸಿದರು ಮತ್ತು ಈ ಉಪಕ್ರಮದ ಮೂಲಕ ಪ್ರಾದೇಶಿಕ ಸಂಪರ್ಕ, ಸ್ಥಿರತೆ ಮತ್ತು ಹಂಚಿಕೆಯ ಸಮೃದ್ಧಿಯನ್ನು ಉತ್ತೇಜಿಸಲು ಸಹಕಾರವನ್ನು ಹೆಚ್ಚಿಸುವ ಹಾಗೂ ಇದರ ಚೌಕಟ್ಟಿನೊಳಗೆ ಇಸ್ರೇಲ್‌ ನ ಪಾತ್ರವನ್ನು ಅನ್ವೇಷಿಸುವ ತಮ್ಮ ಉದ್ದೇಶವನ್ನು ವ್ಯಕ್ತಪಡಿಸಿದರು.

ಈ ದ್ವಿಪಕ್ಷೀಯ ಸಂಬಂಧಗಳನ್ನು ಸಮಗ್ರವಾಗಿ ಬಲಪಡಿಸುವ ಅಗತ್ಯವನ್ನು ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಗುರುತಿಸಿದ ಪ್ರಧಾನ ಮಂತ್ರಿಗಳು, ಈ ಕೆಳಗಿನ ಹೊಸ ಒಪ್ಪಂದಗಳಿಗೆ ಸಹಿ ಹಾಕುವುದನ್ನು ಸ್ವಾಗತಿಸಿದರು:

1. ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕೆ ಪತ್ರ ಒಪ್ಪಂದ.

2. ಭಾರತದಲ್ಲಿ 'ಭಾರತ-ಇಸ್ರೇಲ್ ಸೈಬರ್ ಶ್ರೇಷ್ಠತಾ ಕೇಂದ್ರ' ಸ್ಥಾಪಿಸುವ ಕುರಿತಾದ ಉದ್ದೇಶದ ಪತ್ರ.

3. ಕೃತಕ ಬುದ್ಧಿಮತ್ತೆ ಬಳಸಿಕೊಂಡು ಶಿಕ್ಷಣವನ್ನು ಮುನ್ನಡೆಸುವ ಸಹಕಾರದ ಕುರಿತು ಭಾರತದ ಶಿಕ್ಷಣ ಸಚಿವಾಲಯ ಮತ್ತು ಇಸ್ರೇಲ್‌ ನ ಶಿಕ್ಷಣ ಸಚಿವಾಲಯದ ನಡುವೆ ತಿಳುವಳಿಕೆ ಒಪ್ಪಂದ.

4. 2026-2029 ರ ವರ್ಷಗಳಿಗಾಗಿ ಭಾರತ ಮತ್ತು ಇಸ್ರೇಲ್ ಸರ್ಕಾರಗಳ ನಡುವೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ.

5. ಕೃಷಿ ಸಂಶೋಧನೆ ಮತ್ತು ಶಿಕ್ಷಣದಲ್ಲಿ ಸಹಕಾರಕ್ಕಾಗಿ 'ಭಾರತ-ಇಸ್ರೇಲ್ ಕೃಷಿ ನಾವೀನ್ಯತೆ ಕೇಂದ್ರ' (ಐ ಐ ಎನ್‌ ಸಿ ಎ) ಸ್ಥಾಪಿಸಲು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಮತ್ತು ಇಸ್ರೇಲ್‌‌ ನ ಅಂತರಾಷ್ಟ್ರೀಯ ಅಭಿವೃದ್ಧಿ ಸಹಕಾರ ಸಂಸ್ಥೆ (MASHAV) ನಡುವೆ ತಿಳುವಳಿಕೆ ಪತ್ರ.

6. ಭೂಭೌತ ಪರಿಶೋಧನೆ (Geophysical Exploration) ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಭಾರತದ ಗಣಿ ಸಚಿವಾಲಯ ಮತ್ತು ಇಸ್ರೇಲ್‌ನ ಇಂಧನ ಹಾಗೂ ಮೂಲಸೌಕರ್ಯ ಸಚಿವಾಲಯದ ನಡುವೆ ತಿಳುವಳಿಕೆ ಒಪ್ಪಂದ.

7. ಗುಜರಾತ್‌ ನ ಲೋಥಲ್‌ ನಲ್ಲಿ 'ರಾಷ್ಟ್ರೀಯ ಕಡಲ ಪರಂಪರೆ ಸಂಕೀರ್ಣ' (NMHC) ಅಭಿವೃದ್ಧಿಪಡಿಸಲು ಭಾರತದ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ಹಾಗೂ ಇಸ್ರೇಲ್‌ ನ ಪ್ರಾಚ್ಯವಸ್ತು ಪ್ರಾಧಿಕಾರದ (ಅಂಡರ್ ವಾಟರ್ ಆರ್ಕಿಯಾಲಜಿ ಯುನಿಟ್) ನಡುವೆ ತಿಳುವಳಿಕೆ ಒಪ್ಪಂದ.

8. 'ಹಾರಿಜಾನ್ ಸ್ಕ್ಯಾನಿಂಗ್' ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಭಾರತದ ಪ್ರಧಾನ ವೈಜ್ಞಾನಿಕ ಸಲಹೆಗಾರರ ​​ಕಚೇರಿ ಮತ್ತು ಇಸ್ರೇಲ್‌ ನ ನಾವೀನ್ಯತೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ನಡುವೆ ಉದ್ದೇಶದ ಘೋಷಣೆ.

9. ಮೀನುಗಾರಿಕೆ ಮತ್ತು ಜಲಚರ ಸಾಕಣೆ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಭಾರತದ ಮೀನುಗಾರಿಕೆ ಇಲಾಖೆ ಮತ್ತು ಇಸ್ರೇಲ್‌ ನ ಮೀನುಗಾರಿಕೆ ಹಾಗೂ ಜಲಚರ ಸಾಕಣೆ ಇಲಾಖೆಯ ನಡುವೆ ತಿಳುವಳಿಕೆ ಒಪ್ಪಂದ.

10. 4ನೇ ಭಾರತ-ಇಸ್ರೇಲ್ ಸಿಇಒ ಫೋರಂನ ವರದಿ ಸಲ್ಲಿಕೆ.

11. ಇಸ್ರೇಲ್‌ ನ ವಾಣಿಜ್ಯ ಮತ್ತು ಸೇವಾ ವಲಯದಲ್ಲಿ ಭಾರತೀಯ ಕಾರ್ಮಿಕರ ತಾತ್ಕಾಲಿಕ ಉದ್ಯೋಗಕ್ಕೆ ಅನುವು ಮಾಡಿಕೊಡುವ ಒಪ್ಪಂದದ ಪ್ರೋಟೋಕಾಲ್-ಸಿ ಅನುಷ್ಠಾನ.

12. ಇಸ್ರೇಲ್‌ನ ಉತ್ಪಾದನಾ ವಲಯದಲ್ಲಿ ಭಾರತೀಯ ಕಾರ್ಮಿಕರ ತಾತ್ಕಾಲಿಕ ಉದ್ಯೋಗಕ್ಕೆ ಅನುವು ಮಾಡಿಕೊಡುವ ಒಪ್ಪಂದದ ಪ್ರೋಟೋಕಾಲ್-ಇ ಅನುಷ್ಠಾನ.

13. ಇಸ್ರೇಲ್‌ ನ ರೆಸ್ಟೋರೆಂಟ್ ವಲಯದಲ್ಲಿ ಭಾರತೀಯ ಕಾರ್ಮಿಕರ ತಾತ್ಕಾಲಿಕ ಉದ್ಯೋಗಕ್ಕೆ ಅನುವು ಮಾಡಿಕೊಡುವ ಒಪ್ಪಂದದ ಪ್ರೋಟೋಕಾಲ್-ಡಿ ಅನುಷ್ಠಾನ.

14. ಭಾರತ ಮತ್ತು ಇಸ್ರೇಲ್‌ ನ ಪಾವತಿ ವ್ಯವಸ್ಥೆಗಳನ್ನು ಜೋಡಿಸಲು (ಇಸ್ರೇಲಿ ಪಾವತಿ ವ್ಯವಸ್ಥೆಯೊಂದಿಗೆ ಯುಪಿಐ ಜೋಡಣೆ) ಎನ್‌ ಪಿ ಸಿ ಐ ಇಂಟರ್ನ್ಯಾಷನಲ್ ಮತ್ತು ಮಾಶಾವ್‌ (MASAV) ನಡುವೆ ತಿಳುವಳಿಕೆ ಒಪ್ಪಂದ.

15. ಇಸ್ರೇಲಿ ವಾಣಿಜ್ಯ ಮಧ್ಯಸ್ಥಿಕೆ ಸಂಸ್ಥೆ (ಐಐಸಿಎ) ಮತ್ತು ಭಾರತೀಯ ಮಧ್ಯಸ್ಥಿಕೆ ಮಂಡಳಿ (ಐಸಿಎ) ನಡುವೆ ಸಹಕಾರ ಒಪ್ಪಂದ.

16. ಪರಸ್ಪರ ಸಹಕಾರಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳ ಪ್ರಾಧಿಕಾರ (ಐ ಎಫ್‌ ಎಸ್‌ ಸಿ ಎ) ಮತ್ತು ಇಸ್ರೇಲ್ ಸೆಕ್ಯೂರಿಟೀಸ್ ಅಥಾರಿಟಿ (ಐ ಎಸ್‌ ಎ) ನಡುವೆ ತಿಳುವಳಿಕೆ ಒಪ್ಪಂದ.

ಪ್ರಧಾನಮಂತ್ರಿ ನೆತನ್ಯಾಹು ಮತ್ತು ಪ್ರಧಾನಮಂತ್ರಿ ಮೋದಿ ಅವರು ಎರಡೂ ರಾಷ್ಟ್ರಗಳ ಸರ್ಕಾರಗಳು, ಉದ್ದಿಮೆಗಳು ಮತ್ತು ಜನರ ನಡುವೆ ಉನ್ನತ ಮಟ್ಟದ ಒಡನಾಟವನ್ನು ಮುಂದುವರಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಸೃಜನಶೀಲತೆ, ತಂತ್ರಜ್ಞಾನ, ಸಹಯೋಗ ಮತ್ತು ಹಂಚಿಕೆಯ ಯಶಸ್ಸಿನಿಂದ ವ್ಯಾಖ್ಯಾನಿಸಲ್ಪಡುವ ಭವಿಷ್ಯವನ್ನು ರೂಪಿಸಲು, ನಮ್ಮ ಜ್ಞಾನಾಧಾರಿತ ಆರ್ಥಿಕತೆಗಳ ಆಕಾಂಕ್ಷೆಗಳನ್ನು ಬಳಸಿಕೊಳ್ಳುವ ಮತ್ತು ಸುಸ್ಥಿರವಾದ ಭಾರತ-ಇಸ್ರೇಲ್ ಪಾಲುದಾರಿಕೆಯನ್ನು ನಿರ್ಮಿಸುವ ಹಂಚಿಕೆಯ ದೃಷ್ಟಿಕೋನವನ್ನು ಉಭಯ ನಾಯಕರು ವ್ಯಕ್ತಪಡಿಸಿದರು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Emerging cities see 42% growth in GCC jobs, outpacing metros: Report

Media Coverage

Emerging cities see 42% growth in GCC jobs, outpacing metros: Report
NM on the go

Nm on the go

Always be the first to hear from the PM. Get the App Now!
...
PM Modi chairs 51st PRAGATI Meeting
May 27, 2026
PM reviews seven critical infrastructure projects across the Railways, Power and Road sectors
Projects reviewed span across 9 States with cumulative investment of around ₹30,000 crore
PM also reviews Ken Betwa Link Project and Swachh Bharat Mission-Urban 2.0
PM says Ken-Betwa River Inter-linking Project should serve as a model for other States to resolve inter-State water issues amicably
PM asks States to expedite the completion of solid waste management-related infrastructure, including waste processing plants and GOBARdhan plants
PM calls for mission-mode rooftop solar coverage in urban areas
Acting upon the advice of PM, system of monthly review of social sector schemes at State level operationalised, starting with review of Swachh Bharat Mission

Prime Minister Shri Narendra Modi chaired the 51st meeting of PRAGATI, the ICT-enabled, multi-modal platform aimed at fostering Pro-Active Governance and Timely Implementation, by seamlessly integrating efforts of the Central and State governments, at Seva Teerth, earlier today.

During the meeting, the Prime Minister reviewed seven critical infrastructure projects across the Railways, Power and Road sectors covering nine States worth around ₹30,000 crore. These projects, pivotal to economic growth and public welfare, were reviewed with a focus on timelines, inter-agency coordination, and timely issue resolution. Prime Minister also reviewed Ken Betwa Link Project and Swachh Bharat Mission-Urban 2.0.

While reviewing power sector projects, Prime Minister emphasized the need to accelerate rooftop solar adoption across urban areas, with a special focus on cities, residential clusters and public institutions. He underlined that rooftop solar should be taken up in mission mode to reduce electricity costs, improve energy security and promote clean energy at the household and community level.

While reviewing road and port connectivity projects, it was emphasised that Vadhavan Port should be developed as a model of port-led, multi-modal development, where every major mode of transport is seamlessly integrated to create a future-ready logistics ecosystem. The project should not be seen merely as a port, but as a national gateway connected through coastal shipping, inland waterways, dedicated freight corridors, high-speed rail connectivity, highways and airport linkages.

Prime Minister emphasised the need for effective implementation of Swachh Bharat Mission 2.0 and underlined that the mission should move beyond infrastructure creation and ensure measurable outcomes through regular monitoring, citizen participation and convergence between various stakeholders. He asked States to expedite the completion of solid waste management-related infrastructure, including waste processing plants and GOBARdhan plants.

While reviewing Ken-Betwa River Inter-linking Project, Prime Minister observed that Ken-Betwa project should serve as a model for other States to resolve inter-State water issues through cooperation, timely clearances, technology-based monitoring and mission-mode execution. States were encouraged to identify similar opportunities where river-linking, water conservation, groundwater recharge and efficient irrigation can be taken up in an integrated manner to ensure long-term water security.

Prime Minister also underlined that the delay in the implementation of public projects leads not only to cost escalation but also deprives citizens of timely access to essential facilities and development benefits. He observed that every delay has a direct impact on people’s lives, regional growth and public resources. He stressed that Ministries, Departments and States must adopt a more proactive and time-bound approach to resolve pending issues, remove bottlenecks and ensure faster execution.

Prime Minister also emphasized that innovative use of canal networks should be explored, including installation of solar panels along canals and over canals for clean electricity generation. This would help optimize land use, reduce evaporation losses, generate renewable energy and create additional economic value from water infrastructure.

At the beginning of the meeting, the Cabinet Secretary informed that, in pursuance of the directions of the Prime Minister, a system of monthly review of social sector schemes at the State level has also been operationalised. This mechanism aims to ensure regular monitoring, faster resolution of implementation issues and greater accountability at the State and district levels. As part of this initiative, Swachh Bharat Mission has been taken up for review at the State level in the first instance.