ಫ್ರೆಂಚ್ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಎಮ್ಯಾನುಯೆಲ್ ಮ್ಯಾಕ್ರೋನ್ ಅವರ ಆಹ್ವಾನದ ಮೇರೆಗೆ ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025 ರ ಫೆಬ್ರವರಿ 10 ರಿಂದ 12 ರವರೆಗೆ  ಫ್ರಾನ್ಸ್ ಗೆ ಭೇಟಿ ನೀಡಿದರು. ಬ್ಲೆಚ್ಲಿ ಪಾರ್ಕ್ (ನವೆಂಬರ್ 2023) ಮತ್ತು ಸಿಯೋಲ್ (ಮೇ 2024) ಶೃಂಗಸಭೆಗಳಲ್ಲಿ ಸಾಧಿಸಲಾದ ಪ್ರಮುಖ ಮೈಲಿಗಲ್ಲುಗಳನ್ನು ಆಧರಿಸಿ ಮುಂದಿನ ಹಂತದ ಕಾರ್ಯಕ್ರಮದ ಅಂಗವಾಗಿ, 2025ರ ಫೆಬ್ರವರಿ 10 ಮತ್ತು 11 ರಂದು, ಫ್ರಾನ್ಸ್ ಮತ್ತು ಭಾರತವು ಕೃತಕ ಬುದ್ಧಿಮತ್ತೆ ಕ್ರಿಯಾ ಶೃಂಗಸಭೆಯ ಸಹ-ಅಧ್ಯಕ್ಷತೆ ವಹಿಸಿತು, ಅಂತರರಾಷ್ಟ್ರೀಯ ಸಂಸ್ಥೆಗಳ ಮುಖಂಡರು, ಸಣ್ಣ ಮತ್ತು ದೊಡ್ಡ ಉದ್ಯಮಗಳು, ಶೈಕ್ಷಣಿಕ ಪ್ರತಿನಿಧಿಗಳು, ಸರ್ಕಾರೇತರ ಸಂಸ್ಥೆಗಳು, ಕಲಾವಿದರು ಮತ್ತು ನಾಗರಿಕ ಸಮಾಜದ ಸದಸ್ಯರನ್ನು ಇದರಲ್ಲಿ ಒಟ್ಟುಗೂಡಿಸಲಾಗಿತ್ತು. ಜಾಗತಿಕ ಎಐ  (ಕೃತಕ ಬುದ್ಧಿಮತ್ತೆ) ವಲಯವು ಸಾರ್ವಜನಿಕ ಹಿತದೃಷ್ಟಿಯಿಂದ ಪ್ರಯೋಜನಕಾರಿಯಾಗುವುದನ್ನು ಖಾತ್ರಿಪಡಿಸಲು,  ಸಾಮಾಜಿಕ, ಆರ್ಥಿಕ ಮತ್ತು ಪರಿಸರ ಫಲಿತಾಂಶಗಳನ್ನು ನೀಡಬಲ್ಲದು ಎಂದು ಖಚಿತಪಡಿಸಿಕೊಳ್ಳಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುವ ಬದ್ಧತೆಯನ್ನು ಅವರು ಒತ್ತಿಹೇಳಿದರು. ಎಐ ಕ್ರಿಯಾ ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದರು. ಮುಂದಿನ ಎಐ ಶೃಂಗಸಭೆಯ ಆತಿಥ್ಯವನ್ನು ಭಾರತ ಆಯೋಜಿಸಲಿರುವುದನ್ನು ಫ್ರಾನ್ಸ್ ಸ್ವಾಗತಿಸಿದೆ.

ಇದು ಫ್ರಾನ್ಸಿಗೆ  ಪ್ರಧಾನಿ ಮೋದಿಯವರ ಆರನೇ ಭೇಟಿಯಾಗಿದ್ದು, ಭಾರತದ 75 ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಅಧ್ಯಕ್ಷ ಮ್ಯಾಕ್ರನ್ 2024 ರ ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ ನಂತರ ಪ್ರಧಾನಿಯವರು ಕೈಗೊಂಡ ಭೇಟಿಯಾಗಿದೆ. ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಮ್ಯಾಕ್ರನ್ ಅವರು ಅಸಾಧಾರಣವಾಗಿ  ಬಲಯುತವಾದ ಮತ್ತು ಬಹುಮುಖಿ ದ್ವಿಪಕ್ಷೀಯ ಸಹಕಾರದ ಸಂಪೂರ್ಣ ವ್ಯಾಪ್ತಿಯ ಬಗ್ಗೆ ಮತ್ತು ಜಾಗತಿಕ ಹಾಗು ಪ್ರಾದೇಶಿಕ ವಿಷಯಗಳ ಬಗ್ಗೆ ದ್ವಿಪಕ್ಷೀಯ ಚರ್ಚೆ ನಡೆಸಿದರು. ಇಬ್ಬರೂ ನಾಯಕರು ಮಾರ್ಸಿಲೆಗೆ ತೆರಳಿದರು, ಅಲ್ಲಿ ಅಧ್ಯಕ್ಷ ಮ್ಯಾಕ್ರನ್ ಅವರು ಪ್ರಧಾನಿ ಮೋದಿಯವರಿಗೆ ಖಾಸಗಿ ಔತಣಕೂಟವನ್ನು ಆಯೋಜಿಸಿದ್ದರು, ಇದು ಉಭಯ ನಾಯಕರ ನಡುವಿನ ಅತ್ಯುತ್ತಮ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಅವರು ಜಂಟಿಯಾಗಿ ಮಾರ್ಸಿಲೆಯಲ್ಲಿ ಭಾರತದ ಕಾನ್ಸುಲೇಟ್ ಜನರಲ್ ಅನ್ನು ಉದ್ಘಾಟಿಸಿದರು. ಅವರು ಅಂತರರಾಷ್ಟ್ರೀಯ ಥರ್ಮೋನ್ಯೂಕ್ಲಿಯರ್ ಪ್ರಾಯೋಗಿಕ ರಿಯಾಕ್ಟರ್ ಸೌಲಭ್ಯಕ್ಕೂ ಭೇಟಿ ನೀಡಿದರು.

ಅಧ್ಯಕ್ಷ ಮ್ಯಾಕ್ರನ್ ಮತ್ತು ಪ್ರಧಾನಿ ಮೋದಿ ಅವರು ದ್ವಿಪಕ್ಷೀಯ ಸಹಕಾರ ಮತ್ತು ಅಂತರರಾಷ್ಟ್ರೀಯ ಪಾಲುದಾರಿಕೆಗಾಗಿ ತಮ್ಮ ಹಂಚಿಕೆಯ ದೃಷ್ಟಿಕೋನವನ್ನು ಪುನರುಚ್ಚರಿಸಿದರು, ಇದನ್ನು 2024 ರ ಜನವರಿಯಲ್ಲಿ ಅಧ್ಯಕ್ಷ ಮ್ಯಾಕ್ರನ್ ಅವರ ಭಾರತ ಭೇಟಿಯ ನಂತರ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ಮತ್ತು ಕಾರ್ಯತಂತ್ರದ ಪಾಲುದಾರಿಕೆಯ 25 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬಾಸ್ಟಿಲ್ ಡೇ ಆಚರಣೆಯ ಮುಖ್ಯ ಅತಿಥಿಯಾಗಿ 2023ರ ಜುಲೈಯಲ್ಲಿ ಪ್ರಧಾನಿ ಮೋದಿ ಅವರ ಫ್ರಾನ್ಸ್ ಭೇಟಿಯ ಸಮಯದಲ್ಲಿ ಪ್ರಕಟವಾದ ಹೊರೈಜನ್ 2047 ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ. ತಮ್ಮ ದ್ವಿಪಕ್ಷೀಯ ಸಹಕಾರದಲ್ಲಿ ಸಾಧಿಸಿದ ಪ್ರಗತಿಯನ್ನು ಅವರು ಶ್ಲಾಘಿಸಿದರು ಮತ್ತು ಅದರ ಮೂರು ಸ್ತಂಭಗಳಲ್ಲಿ ಅದನ್ನು ಮತ್ತಷ್ಟು ವೇಗಗೊಳಿಸಲು ಬದ್ಧತೆಯನ್ನು ವ್ಯಕ್ತಪಡಿಸಿದರು.

ಇಬ್ಬರೂ ನಾಯಕರು ಸಮಾನ ಮತ್ತು ಶಾಂತಿಯುತ ಅಂತರರಾಷ್ಟ್ರೀಯ ವ್ಯವಸ್ಥಾಕ್ರಮವನ್ನು ಉಳಿಸಿಕೊಳ್ಳಲು, ಜಾಗತಿಕ ಸವಾಲುಗಳನ್ನು ಎದುರಿಸಲು ಮತ್ತು ತಾಂತ್ರಿಕ ಹಾಗು ಆರ್ಥಿಕ ಕ್ಷೇತ್ರಗಳು ಸೇರಿದಂತೆ ಉದಯೋನ್ಮುಖ ಬೆಳವಣಿಗೆಗಳಿಗೆ ಜಗತ್ತನ್ನು ಸಿದ್ಧಪಡಿಸಲು ಸುಧಾರಿತ ಮತ್ತು ಪರಿಣಾಮಕಾರಿ ಬಹುಪಕ್ಷೀಯತೆಯ ತಮ್ಮ ಕರೆಯನ್ನು ಪುನರುಚ್ಚರಿಸಿದರು. ಇಬ್ಬರೂ ನಾಯಕರು, ನಿರ್ದಿಷ್ಟವಾಗಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಯ ತುರ್ತು ಅಗತ್ಯವನ್ನು ಒತ್ತಿಹೇಳಿದರು ಮತ್ತು ಯುಎನ್ಎಸ್ಸಿ ವಿಷಯಗಳು ಸೇರಿದಂತೆ ಬಹುಪಕ್ಷೀಯ ವೇದಿಕೆಗಳಲ್ಲಿ ನಿಕಟವಾಗಿ ಸಮನ್ವಯ ಸಾಧಿಸಲು ಒಪ್ಪಿಕೊಂಡರು. ಯುಎನ್ಎಸ್ಸಿಯಲ್ಲಿ ಭಾರತದ ಖಾಯಂ ಸದಸ್ಯತ್ವಕ್ಕೆ ಫ್ರಾನ್ಸ್ ತನ್ನ ದೃಢ ಬೆಂಬಲವನ್ನು ಪುನರುಚ್ಚರಿಸಿತು. ಸಾಮೂಹಿಕ ದೌರ್ಜನ್ಯಗಳ ಸಂದರ್ಭದಲ್ಲಿ ವೀಟೋ ಬಳಕೆಯನ್ನು ನಿಯಂತ್ರಿಸುವ ಕುರಿತು ಮಾತುಕತೆಗಳನ್ನು ಬಲಪಡಿಸಲು ಉಭಯ ನಾಯಕರು ಒಪ್ಪಿಕೊಂಡರು. ಅವರು ದೀರ್ಘಕಾಲೀನ ಜಾಗತಿಕ ಸವಾಲುಗಳು ಮತ್ತು ಪ್ರಸ್ತುತ ಅಂತರರಾಷ್ಟ್ರೀಯ ಬೆಳವಣಿಗೆಗಳ ಬಗ್ಗೆ ವ್ಯಾಪಕ ಚರ್ಚೆಗಳನ್ನು ನಡೆಸಿದರು ಮತ್ತು ಬಹುಪಕ್ಷೀಯ ಉಪಕ್ರಮಗಳು ಮತ್ತು ಸಂಸ್ಥೆಗಳ ಮೂಲಕ ತಮ್ಮ ಜಾಗತಿಕ ಮತ್ತು ಪ್ರಾದೇಶಿಕ ಕಾರ್ಯಕ್ರಮಗಳನ್ನು ತೀವ್ರಗೊಳಿಸಲು ಒಪ್ಪಿಕೊಂಡರು.

ವೈಜ್ಞಾನಿಕ ಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆಯನ್ನು ಮುನ್ನಡೆಸುವ ನಿಟ್ಟಿನಲ್ಲಿ  ಅತ್ಯುನ್ನತ ಮಹತ್ವವನ್ನು ನೀಡಬೇಕಿರುವುದನ್ನು ಒಪ್ಪಿಕೊಂಡ ಅಧ್ಯಕ್ಷ ಮ್ಯಾಕ್ರನ್ ಮತ್ತು ಪ್ರಧಾನಿ ಮೋದಿ, ಆ ಕ್ಷೇತ್ರಗಳಲ್ಲಿ ಭಾರತ ಮತ್ತು ಫ್ರಾನ್ಸ್ ನಡುವಿನ ದೀರ್ಘ ಮತ್ತು ಶಾಶ್ವತ ಸಂಬಂಧವನ್ನು ನೆನಪಿಸಿಕೊಂಡರು, ಅಧ್ಯಕ್ಷ ಮ್ಯಾಕ್ರನ್ ಮತ್ತು ಪ್ರಧಾನಿ ಮೋದಿ ಅವರು 2026 ರ ಮಾರ್ಚ್ 2026 ನಲ್ಲಿ ಹೊಸದಿಲ್ಲಿಯಲ್ಲಿ ಭಾರತ-ಫ್ರಾನ್ಸ್ ನಾವೀನ್ಯತೆ/ಅನ್ವೇಷಣಾ ವರ್ಷದ ಭವ್ಯ ಉದ್ಘಾಟನೆಯನ್ನು ಅದರ ಲೋಗೋವನ್ನು ಬಿಡುಗಡೆ ಮಾಡುವ ಮೂಲಕ ಘೋಷಿಸಿದರು.

ಭದ್ರತೆ ಮತ್ತು ಸಾರ್ವಭೌಮತ್ವಕ್ಕಾಗಿ ಪಾಲುದಾರಿಕೆ

ವ್ಯೂಹಾತ್ಮಕ ಪಾಲುದಾರಿಕೆಯ ಭಾಗವಾಗಿ ಫ್ರಾನ್ಸ್ ಮತ್ತು ಭಾರತದ ನಡುವಿನ ಆಳವಾದ ಮತ್ತು ದೀರ್ಘಕಾಲೀನ ರಕ್ಷಣಾ ಸಹಕಾರವನ್ನು ನೆನಪಿಸಿಕೊಂಡ ಅಧ್ಯಕ್ಷ ಮ್ಯಾಕ್ರನ್ ಮತ್ತು ಪ್ರಧಾನಿ ಮೋದಿ, 2024 ರಲ್ಲಿ ಒಪ್ಪಿಕೊಂಡ ಮಹತ್ವಾಕಾಂಕ್ಷೆಯ ರಕ್ಷಣಾ ಕೈಗಾರಿಕಾ ಮಾರ್ಗಸೂಚಿಗೆ ಅನುಗುಣವಾಗಿ ವಾಯು ಮತ್ತು ಕಡಲ ಸ್ವತ್ತುಗಳ ಸಹಕಾರದ ಮುಂದುವರಿಕೆಯನ್ನು ಸ್ವಾಗತಿಸಿದರು. ಸ್ವದೇಶೀಕರಣ ಸೇರಿದಂತೆ ಭಾರತದಲ್ಲಿ ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಗಳ ನಿರ್ಮಾಣದಲ್ಲಿನ ಸಹಯೋಗದ ಪ್ರಗತಿಯನ್ನು ಇಬ್ಬರೂ ನಾಯಕರು ಶ್ಲಾಘಿಸಿದರು, ಮತ್ತು ವಿಶೇಷವಾಗಿ ಡಿಆರ್ ಡಿಒ ಅಭಿವೃದ್ಧಿಪಡಿಸಿದ ಏರ್ ಇಂಡಿಪೆಂಡೆಂಟ್ ಪ್ರೊಪಲ್ಷನ್ (ಎಐಪಿ) ಅನ್ನು ಪಿ 75-ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಗಳಾಗಿ ಸಂಯೋಜಿಸುವ ದೃಷ್ಟಿಯಿಂದ ಕೈಗೊಂಡ ಕೆಲಸ ಮತ್ತು ಭವಿಷ್ಯದ ಪಿ 75-ಎಎಸ್ ಜಲಾಂತರ್ಗಾಮಿ ನೌಕೆಗಳಲ್ಲಿ ಸಮಗ್ರ ಯುದ್ಧ ವ್ಯವಸ್ಥೆಯನ್ನು (ಐಸಿಎಸ್) ಸಂಯೋಜಿಸುವ ಬಗ್ಗೆ ನಡೆಸಿದ ವಿಶ್ಲೇಷಣೆಗಳನ್ನು ಶ್ಲಾಘಿಸಿದರು. ಪಿ 75 ಸ್ಕಾರ್ಪೀನ್-ವರ್ಗದ ಯೋಜನೆಯ ಆರನೇ ಮತ್ತು ಕೊನೆಯ  ಜಲಾಂತರ್ಗಾಮಿ ನೌಕೆ ಐಎನ್ಎಸ್ ವಾಘ್ಶೀರ್ ಅನ್ನು 2025 ರ ಜನವರಿ 15 ರಂದು ಕಾರ್ಯಾರಂಭ ಮಾಡಿರುವುದನ್ನು  ಇಬ್ಬರೂ ನಾಯಕರು ಸ್ವಾಗತಿಸಿದರು. ಕ್ಷಿಪಣಿಗಳು, ಹೆಲಿಕಾಪ್ಟರ್ ಎಂಜಿನ್ಗಳು ಮತ್ತು ಜೆಟ್ ಎಂಜಿನ್ಗಳಿಗೆ  ಸಂಬಂಧಿಸಿ  ನಡೆಯುತ್ತಿರುವ ಚರ್ಚೆಗಳನ್ನು ಎರಡೂ ಕಡೆಯವರು ಸ್ವಾಗತಿಸಿದರು. ಸಫ್ರಾನ್ ಸಮೂಹದ ಸಂಬಂಧಿತ ಘಟಕಗಳು ಮತ್ತು ಅವುಗಳ ಭಾರತೀಯ ಸಹವರ್ತಿಗಳ ನಡುವಿನ ಅತ್ಯುತ್ತಮ ಸಹಕಾರವನ್ನು ಅವರು ಸ್ವಾಗತಿಸಿದರು. ಪಿನಾಕಾ ಎಂಬಿಎಲ್ಆರ್ ಅನ್ನು ಸೂಕ್ಷ್ಮವಾಗಿ ನಿಕಟವಾಗಿ ಗಮನಿಸುವಂತೆ ಪ್ರಧಾನಿ ಮೋದಿ ಫ್ರೆಂಚ್ ಸೇನೆಯನ್ನು ಆಹ್ವಾನಿಸಿದರು, ಈ ವ್ಯವಸ್ಥೆಯನ್ನು ಫ್ರಾನ್ಸ್ ಸ್ವಾಧೀನಪಡಿಸಿಕೊಳ್ಳುವುದು ಇಂಡೋ-ಫ್ರೆಂಚ್ ರಕ್ಷಣಾ ಸಂಬಂಧಗಳಲ್ಲಿ ಮತ್ತೊಂದು ಮೈಲಿಗಲ್ಲಾಗಲಿದೆ ಎಂದು ಒತ್ತಿ ಹೇಳಿದರು. ಇದಲ್ಲದೆ, ಅಧ್ಯಕ್ಷ ಮ್ಯಾಕ್ರನ್ ಅವರು ಒಸಿಎಆರ್ ನಿರ್ವಹಿಸುವ ಯುರೋಡ್ರೋನ್ ಮಾಲೆ ಕಾರ್ಯಕ್ರಮಕ್ಕೆ ಭಾರತವನ್ನು ವೀಕ್ಷಕನಾಗಿ ಸೇರಿಸುವ ನಿರ್ಧಾರವನ್ನು ಸ್ವಾಗತಿಸಿದರು, ಇದು ರಕ್ಷಣಾ ಉಪಕರಣ ಕಾರ್ಯಕ್ರಮಗಳಲ್ಲಿ ನಮ್ಮ ಪಾಲುದಾರಿಕೆಯ ಹೆಚ್ಚು ಬಲಗೊಳ್ಳುತ್ತಿರುವ ನಿಟ್ಟಿನಲ್ಲಿ  ಮತ್ತೊಂದು ಹೆಜ್ಜೆಯಾಗಿದೆ.

ಕಡಲ ಸಮರಾಭ್ಯಾಸ ಮತ್ತು ಕಡಲ ಗಸ್ತು ವಿಮಾನಗಳ ಜಂಟಿ ಗಸ್ತು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮಿಲಿಟರಿ ವ್ಯಾಯಾಮಗಳನ್ನು/ಸಮರಾಭ್ಯಾಸಗಳನ್ನು ನಿಯಮಿತವಾಗಿ ನಡೆಸುತ್ತಿರುವುದನ್ನು ಇಬ್ಬರೂ ನಾಯಕರು ಶ್ಲಾಘಿಸಿದರು. 2025 ರ ಜನವರಿಯಲ್ಲಿ ಫ್ರೆಂಚ್ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್ ಚಾರ್ಲ್ಸ್ ಡಿ ಗೌಲ್ ಅವರ ಇತ್ತೀಚಿನ ಭಾರತ ಭೇಟಿ, ನಂತರ ಫ್ರೆಂಚ್ ಬಹುರಾಷ್ಟ್ರೀಯ ಸಮರಾಭ್ಯಾಸ  ಲಾ ಪೆರೋಸ್ನಲ್ಲಿ ಭಾರತೀಯ ನೌಕಾಪಡೆಯ ಭಾಗವಹಿಸುವಿಕೆ ಮತ್ತು 2025 ರ ಮಾರ್ಚ್ ನಲ್ಲಿ ನಡೆಯುವ ವರುಣಾ ವ್ಯಾಯಾಮ/ಸಮರಾಭ್ಯಾಸ ಸಹಿತ ವಿವಿಧ ವಿಷಯಗಳನ್ನು  ಅವರು ಪರಾಮರ್ಶಿಸಿದರು.

ಹೊರೈಜನ್ 2047 ಮತ್ತು ಭಾರತ-ಫ್ರಾನ್ಸ್ ರಕ್ಷಣಾ ಕೈಗಾರಿಕಾ ಮಾರ್ಗಸೂಚಿಗೆ ಅನುಗುಣವಾಗಿ ಡಿಜಿಎ ಮತ್ತು ಡಿಫೆನ್ಸ್ ಇನ್ನೋವೇಶನ್ ಏಜೆನ್ಸಿಯನ್ನು ಒಳಗೊಂಡ ಫ್ರಿಂಡ್-ಎಕ್ಸ್ (ಫ್ರಾನ್ಸ್-ಇಂಡಿಯಾ ಡಿಫೆನ್ಸ್ ಸ್ಟಾರ್ಟ್ಅಪ್ ಎಕ್ಸಲೆನ್ಸ್) ಅನ್ನು 2024 ರ ಡಿಸೆಂಬರ್ 5-6 ರಂದು ಪ್ಯಾರಿಸಿನಲ್ಲಿ ನಡೆಸಿದ್ದನ್ನು ಅವರು ಸ್ವಾಗತಿಸಿದರು. ಈ ಸಹಯೋಗದ ವೇದಿಕೆಯು ರಕ್ಷಣಾ ಸ್ಟಾರ್ಟ್ಅಪ್ಗಳು, ಹೂಡಿಕೆದಾರರು, ಇನ್ಕ್ಯುಬೇಟರ್ಗಳು, ವೇಗವರ್ಧಕಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಸೇರಿದಂತೆ ಎರಡೂ ರಕ್ಷಣಾ ಪರಿಸರ ವ್ಯವಸ್ಥೆಗಳಲ್ಲಿನ ಪ್ರಮುಖ ಮಧ್ಯಸ್ಥಗಾರರನ್ನು ಒಟ್ಟುಗೂಡಿಸುತ್ತದೆ, ಇದು ರಕ್ಷಣಾ ನಾವೀನ್ಯತೆ ಮತ್ತು ಸಹಭಾಗಿತ್ವದ ಹೊಸ ಯುಗವನ್ನು ಪೋಷಿಸುತ್ತದೆ.

ರಕ್ಷಣಾ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಪಾಲುದಾರಿಕೆಯನ್ನು ಆಳಗೊಳಿಸುವ ಸಲುವಾಗಿ, ಡಿಜಿಎ ಮತ್ತು ಡಿಆರ್ ಡಿಒ ನಡುವೆ ರಕ್ಷಣಾ ತಂತ್ರಜ್ಞಾನಗಳಲ್ಲಿ ಸಹಕಾರಕ್ಕಾಗಿ ತಾಂತ್ರಿಕ ವ್ಯವಸ್ಥೆ ಮೂಲಕ ಆರ್ &ಡಿ ಚೌಕಟ್ಟನ್ನು ಶೀಘ್ರವಾಗಿ ಪ್ರಾರಂಭಿಸಲು ಇಬ್ಬರೂ ನಾಯಕರು ಆದ್ಯತೆ ನೀಡಿದರು. ಇದಲ್ಲದೆ, ಸಂಶೋಧನೆ ಮತ್ತು ಅಭಿವೃದ್ಧಿ ಪಾಲುದಾರಿಕೆಗಾಗಿ ತಂತ್ರಜ್ಞಾನಗಳನ್ನು ಗುರುತಿಸಲು ಎಲ್'ಆಫೀಸ್ ನ್ಯಾಷನಲ್ ಡಿ ಎಟುಡೆಸ್ ಎಟ್ ಡಿ ರೆಚೆರ್ಚೆಸ್ ಏರೋಸ್ಪೇಷಿಯಲ್ಸ್ (ಒಎನ್ಇಆರ್ಎ) ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ನಡುವೆ ನಡೆಯುತ್ತಿರುವ ಚರ್ಚೆಗಳನ್ನು ಇಬ್ಬರೂ ನಾಯಕರು ಸ್ವಾಗತಿಸಿದರು. ಇದಲ್ಲದೆ, ಇನ್ಸ್ಟಿಟ್ಯೂಟ್ ಪಾಲಿಟೆಕ್ನಿಕ್ ಡಿ ಪ್ಯಾರಿಸ್ನಿಂದ ಇಂಟರ್ ಡಿಸಿಪ್ಲಿನರಿ ಸೆಂಟರ್ ಫಾರ್ ಡಿಫೆನ್ಸ್ ಅಂಡ್ ಸೆಕ್ಯುರಿಟಿ ಇತ್ತೀಚೆಗೆ ಪ್ರಾರಂಭಿಸಿದ ವಿತರಣಾ ಗುಪ್ತಚರ ಕುರಿತ ಸವಾಲಿನಲ್ಲಿ ಫ್ರೆಂಚ್ ವಿದ್ಯಾರ್ಥಿಗಳೊಂದಿಗೆ ಭಾರತೀಯ ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಭಾರತ ಸ್ವಾಗತಿಸುತ್ತದೆ ಮತ್ತು ಭವಿಷ್ಯದಲ್ಲಿ ರಕ್ಷಣಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಆಸಕ್ತಿಯನ್ನು ಪ್ರಚೋದಿಸಲು ಹೆಚ್ಚಿನ ಜಂಟಿ ಸವಾಲುಗಳನ್ನು ಆಯೋಜಿಸಲು ಪ್ರೋತ್ಸಾಹಿಸುತ್ತದೆ.

ಇಬ್ಬರೂ ನಾಯಕರು ಮಧ್ಯಪ್ರಾಚ್ಯ ಮತ್ತು ಉಕ್ರೇನ್ ಯುದ್ಧ ಸೇರಿದಂತೆ ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ವಿವರವಾದ ಮಾತುಕತೆ ನಡೆಸಿದರು. ತಮ್ಮ ಪ್ರಯತ್ನಗಳಲ್ಲಿ ಸಮನ್ವಯ ಸಾಧಿಸಲು ಮತ್ತು ನಿಯಮಿತವಾಗಿ ನಿಕಟವಾಗಿ ತೊಡಗಿಸಿಕೊಳ್ಳಲು ತಮ್ಮ ಪ್ರಯತ್ನಗಳನ್ನು ಮುಂದುವರಿಸಲು ಅವರು ಒಪ್ಪಿಕೊಂಡರು.

2023ರ ಸೆಪ್ಟೆಂಬರ್ ನಲ್ಲಿ ದಿಲ್ಲಿಯಲ್ಲಿ ನಡೆದ ಜಿ 20 ಶೃಂಗಸಭೆಯ ನೇಪಥ್ಯದಲ್ಲಿ  ಭಾರತ-ಮಧ್ಯಪ್ರಾಚ್ಯ-ಯುರೋಪ್ ಕಾರಿಡಾರ್ (ಐಎಂಇಸಿ) ಅನ್ನು ಪ್ರಾರಂಭಿಸಿದ್ದನ್ನು ಇಬ್ಬರೂ ನಾಯಕರು ನೆನಪಿಸಿಕೊಂಡರು ಮತ್ತು ಈ ಉಪಕ್ರಮವನ್ನು ಕಾರ್ಯಗತಗೊಳಿಸಲು ಹೆಚ್ಚು ನಿಕಟವಾಗಿ ಕೆಲಸ ಮಾಡಲು ಒಪ್ಪಿಕೊಂಡರು. ಈ ಪ್ರದೇಶಗಳಲ್ಲಿ ಸಂಪರ್ಕ, ಸುಸ್ಥಿರ ಬೆಳವಣಿಗೆಯ ಪಥ ಮತ್ತು ಶುದ್ಧ ಇಂಧನದ ಲಭ್ಯತೆಯನ್ನು ಉತ್ತೇಜಿಸಲು ಐಎಂಇಸಿಯ ಮಹತ್ವವನ್ನು ಇಬ್ಬರೂ ನಾಯಕರು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ, ಅವರು ಮೆಡಿಟರೇನಿಯನ್ ಸಮುದ್ರದಲ್ಲಿ ಮಾರ್ಸಿಲ್ಲೆಯ ಕಾರ್ಯತಂತ್ರದ ಕ್ಷೇತ್ರವನ್ನು ಒಪ್ಪಿಕೊಂಡರು.

ಹೊಸದಿಲ್ಲಿಯಲ್ಲಿ ಸದ್ಯದಲ್ಲಿಯೇ ನಡೆಯಲಿರುವ ಭಾರತ-ಇಯು ಶೃಂಗಸಭೆಯನ್ನು ಗಮನದಲ್ಲಿಟ್ಟು ಕೊಂಡು ಇಯು-ಭಾರತ ಸಂಬಂಧಗಳನ್ನು ಬಲಪಡಿಸುವ ಪ್ರಮುಖ ಮಹತ್ವವನ್ನು ಅವರು ಒತ್ತಿ ಹೇಳಿದರು.

ಆಸ್ಟ್ರೇಲಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನೊಂದಿಗೆ ತ್ರಿಪಕ್ಷೀಯ ಸ್ವರೂಪದಲ್ಲಿ ಬೆಳೆಯುತ್ತಿರುವ ಸಹಕಾರವನ್ನು ಅವರು ಶ್ಲಾಘಿಸಿದರು. ಫ್ರಾನ್ಸ್, ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವೆ ನಡೆದ ಜಂಟಿ ಮಿಲಿಟರಿ ಅಭ್ಯಾಸಗಳನ್ನು ಮತ್ತು ಪರಸ್ಪರ ಬಹುಪಕ್ಷೀಯ ಮಿಲಿಟರಿ ವ್ಯಾಯಾಮಗಳಲ್ಲಿ ಭಾರತ, ಫ್ರಾನ್ಸ್ ಮತ್ತು ಆಸ್ಟ್ರೇಲಿಯಾ ಭಾಗವಹಿಸಿದ್ದನ್ನು ಅವರು ಶ್ಲಾಘಿಸಿದರು. ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಭಾರತದ ಆಹ್ವಾನದ ಮೇರೆಗೆ, ಫ್ರಾನ್ಸ್ ಹವಾಮಾನಕ್ಕಾಗಿ ಮ್ಯಾಂಗ್ರೋವ್ ಒಕ್ಕೂಟಕ್ಕೆ ಸೇರಿಕೊಂಡಿತು. ಕಳೆದ ವರ್ಷ ವರ್ಚುವಲ್ ಆಗಿ ನಡೆದ ತ್ರಿಪಕ್ಷೀಯ ಮಾತುಕತೆಗಳ ಕೇಂದ್ರ ಬಿಂದು ಸಭೆಯಲ್ಲಿ ಗುರುತಿಸಲಾದ ಐಪಿಒಐ ಮತ್ತು ಐಒಆರ್ಎ ಸೇರಿದಂತೆ ಆರ್ಥಿಕತೆ, ನಾವೀನ್ಯತೆ, ಆರೋಗ್ಯ, ನವೀಕರಿಸಬಹುದಾದ ಇಂಧನ, ಶಿಕ್ಷಣ, ಸಂಸ್ಕೃತಿ ಮತ್ತು ಕಡಲ ಕ್ಷೇತ್ರದಲ್ಲಿ ತ್ರಿಪಕ್ಷೀಯ ಸಹಕಾರದ ದೃಢವಾದ ಯೋಜನೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಆಸ್ಟ್ರೇಲಿಯಾ ಸರ್ಕಾರಗಳ ಅಧಿಕಾರಿಗಳೊಂದಿಗೆ ಒಟ್ಟಾಗಿ ಕೆಲಸ ಮಾಡುವಂತೆ ಅವರು ತಮ್ಮ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇಬ್ಬರೂ ನಾಯಕರು ಮುಕ್ತ, ಅಂತರ್ಗತ, ಸುರಕ್ಷಿತ ಮತ್ತು ಶಾಂತಿಯುತ ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ತಮ್ಮ ಸಮಾನ ಬದ್ಧತೆಯನ್ನು ಒತ್ತಿ ಹೇಳಿದರು.

ಬಾಹ್ಯಾಕಾಶ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಆಳಗೊಳಿಸುವ ಬಯಕೆಯನ್ನು ಅವರು ಪುನರುಚ್ಚರಿಸಿದರು. ಈ ಉದ್ದೇಶವನ್ನು ಮುಂದುವರಿಸಲು ಭಾರತ-ಫ್ರಾನ್ಸ್ ಕಾರ್ಯತಂತ್ರದ ಬಾಹ್ಯಾಕಾಶ ಸಂವಾದದ ಮೊದಲ ಎರಡು ಅಧಿವೇಶನಗಳ ಗಣನೀಯ ಕೊಡುಗೆಯನ್ನು ಗಮನಿಸಿ, ಅದರ ಮೂರನೇ ಅಧಿವೇಶನವನ್ನು 2025 ರಲ್ಲಿ ನಡೆಸಲು ಅವರು ಒಪ್ಪಿಕೊಂಡರು. ಸಿಎನ್ಇಎಸ್ ಮತ್ತು ಇಸ್ರೋ ನಡುವಿನ ಸಹಭಾಗಿತ್ವದ ಶಕ್ತಿಯನ್ನು ಅವರು ಶ್ಲಾಘಿಸಿದರು ಮತ್ತು ತಮ್ಮ ಬಾಹ್ಯಾಕಾಶ ಕೈಗಾರಿಕೆಗಳ ನಡುವೆ ಸಹಯೋಗ ಹಾಗು ಸಿನರ್ಜಿಗಳ ಅಭಿವೃದ್ಧಿಗೆ ಬೆಂಬಲ ನೀಡಿದರು.

ಇಬ್ಬರೂ ನಾಯಕರು ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳ ಬಗ್ಗೆ ತಮ್ಮ ನಿಸ್ಸಂದಿಗ್ಧ ಖಂಡನೆಯನ್ನು ಪುನರುಚ್ಚರಿಸಿದರು. ಭಯೋತ್ಪಾದನೆಗೆ ಹಣಕಾಸು ಜಾಲಗಳನ್ನು ಧ್ವಂಸ ಮಾಡುವಂತೆ  ಮತ್ತು ಸುರಕ್ಷಿತ ತಾಣಗಳನ್ನು ಅಸ್ತವ್ಯಸ್ತಗೊಳಿಸುವಂತೆ  ಅವರು ಕರೆ ನೀಡಿದರು. ಭಯೋತ್ಪಾದಕ ಕೃತ್ಯಗಳಿಗೆ ಹಣಕಾಸು, ಯೋಜನೆ, ಬೆಂಬಲ ಅಥವಾ ಭಯೋತ್ಪಾದನೆ ಮಾಡುವವರಿಗೆ ಯಾವುದೇ ದೇಶವು ಸುರಕ್ಷಿತ ಆಶ್ರಯವನ್ನು ನೀಡಬಾರದು ಎಂಬುದನ್ನು ಅವರು ಒಪ್ಪಿಕೊಂಡರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ನಿರ್ಬಂಧಗಳ ಸಮಿತಿಯು ಪಟ್ಟಿ ಮಾಡಿರುವ ಗುಂಪುಗಳೊಂದಿಗೆ ಸಂಯೋಜಿತವಾಗಿರುವ ವ್ಯಕ್ತಿಗಳ ಪದನಾಮಗಳು ಸೇರಿದಂತೆ ಎಲ್ಲಾ ಭಯೋತ್ಪಾದಕರ ವಿರುದ್ಧ ಸಂಘಟಿತ ಕ್ರಮಕ್ಕೆ ನಾಯಕರು ಕರೆ ನೀಡಿದರು. ಹಣಕಾಸು ಕ್ರಿಯಾ ಕಾರ್ಯಪಡೆಯ ಶಿಫಾರಸುಗಳಿಗೆ ಅನುಗುಣವಾಗಿ ಅಕ್ರಮ ಹಣ ವರ್ಗಾವಣೆ ವಿರೋಧಿ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದನ್ನು ಎದುರಿಸುವ ಅಂತಾರಾಷ್ಟ್ರೀಯ ಮಾನದಂಡಗಳನ್ನು ಎತ್ತಿಹಿಡಿಯುವ ಮಹತ್ವವನ್ನು ಎರಡೂ ಕಡೆಯವರು ಒತ್ತಿ ಹೇಳಿದರು. ಎಫ್ಎಟಿಎಫ್, ನೋ ಮನಿ ಫಾರ್ ಟೆರರ್ (ಎನ್ಎಂಎಫ್ಟಿ) ಮತ್ತು ಇತರ ಬಹುಪಕ್ಷೀಯ ವೇದಿಕೆಗಳಲ್ಲಿ ಒಟ್ಟಾಗಿ ಕೆಲಸ ಮಾಡುವ ಬದ್ಧತೆಯನ್ನು ಎರಡೂ ದೇಶಗಳು ಪುನರುಚ್ಚರಿಸಿದವು.

ಭಯೋತ್ಪಾದನೆ ನಿಗ್ರಹ ಕ್ಷೇತ್ರದಲ್ಲಿ ಏಜೆನ್ಸಿ ಮಟ್ಟದ ಸಹಕಾರಕ್ಕಾಗಿ ಭಾರತದ ರಾಷ್ಟ್ರೀಯ ಭದ್ರತಾ ಪಡೆ (ಎನ್ ಎಸ್ ಜಿ) ಮತ್ತು ಗ್ರೂಪ್ ಡಿ ಇಂಟರ್ ವೆನ್ಷನ್ ಡಿ ಲಾ ಜೆಂಡರ್ ಮೆರಿ ನ್ಯಾಷನಲ್ (ಜಿಐಜಿಎನ್) ನಡುವಿನ ಸಹಕಾರವನ್ನು ಅವರು ಶ್ಲಾಘಿಸಿದರು. 2024 ರ ಏಪ್ರಿಲ್ ನಲ್ಲಿ ನಡೆದ ಭಯೋತ್ಪಾದನೆ ನಿಗ್ರಹ ಮಾತುಕತೆಯ ಫಲಿತಾಂಶಗಳನ್ನು ಉಭಯ ನಾಯಕರು ಸ್ವಾಗತಿಸಿದರು, ಇದು ಬೆಳೆಯುತ್ತಿರುವ ಭಾರತ-ಫ್ರಾನ್ಸ್ ಭಯೋತ್ಪಾದನೆ ನಿಗ್ರಹ ಮತ್ತು ಗುಪ್ತಚರ ಸಹಕಾರವನ್ನು ಪ್ರತಿಬಿಂಬಿಸುತ್ತದೆ. ಇಬ್ಬರೂ ನಾಯಕರು ಹೊಸದಿಲ್ಲಿಯಲ್ಲಿ ಮಿಲಿಪೋಲ್ 2025 ರ ಯಶಸ್ವಿ ಸಂಘಟನೆಯನ್ನು ಎದುರು ನೋಡುತ್ತಿರುವುದಾಗಿ ಹೇಳಿದರು.

ಪ್ರಗತಿಯ  ಹಂತದಲ್ಲಿರುವ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲು ಸಮಗ್ರ ಚೌಕಟ್ಟನ್ನು ರಚಿಸಲು ನಡೆಯುತ್ತಿರುವ ಚರ್ಚೆಗಳನ್ನು ಅವರು ಸ್ವಾಗತಿಸಿದರು.

ಸುರಕ್ಷಿತ, ಮುಕ್ತ, ಸುಭದ್ರ ಮತ್ತು ವಿಶ್ವಾಸಾರ್ಹ ಕೃತಕ ಬುದ್ಧಿಮತ್ತೆಯ ಅಭಿವೃದ್ಧಿಯನ್ನು ಕೇಂದ್ರೀಕರಿಸುವ ತಮ್ಮ ವಿಧಾನಗಳಲ್ಲಿ ತಾತ್ವಿಕ ಒಮ್ಮತದಲ್ಲಿ ಬೇರೂರಿರುವ ಕೃತಕ ಬುದ್ಧಿಮತ್ತೆ (ಎಐ) ಕುರಿತ ಭಾರತ-ಫ್ರಾನ್ಸ್ ಮಾರ್ಗಸೂಚಿಯನ್ನು ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಮ್ಯಾಕ್ರನ್ ಬಿಡುಗಡೆ ಮಾಡಿದರು. ಫ್ರೆಂಚ್ ಸ್ಟಾರ್ಟ್ ಅಪ್ ಇನ್ಕ್ಯುಬೇಟರ್ ಸ್ಟೇಷನ್ ಎಫ್ ನಲ್ಲಿ ಭಾರತೀಯ ಸ್ಟಾರ್ಟ್ ಅಪ್ ಗಳ ಸೇರ್ಪಡೆಯನ್ನು ಅವರು ಸ್ವಾಗತಿಸಿದರು. ಫ್ರಾನ್ಸ್ ನಲ್ಲಿ ಭಾರತದ ನೈಜ-ಸಮಯದ ಪಾವತಿ ವ್ಯವಸ್ಥೆಯಾದ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಅನ್ನು ಬಳಸುವ ವಿಸ್ತೃತ ಸಾಧ್ಯತೆಗಳನ್ನು ಅವರು ಸ್ವಾಗತಿಸಿದರು. ಇಬ್ಬರೂ ನಾಯಕರು ಸೈಬರ್ ಸ್ಪೇಸ್ ನ ಕಾರ್ಯತಂತ್ರದ ಮಹತ್ವವನ್ನು ಪುನರುಚ್ಚರಿಸಿದರು ಮತ್ತು ಅಂತರರಾಷ್ಟ್ರೀಯ ಕಾನೂನಿನ ಅನ್ವಯ ಮತ್ತು ಸೈಬರ್ ಸ್ಪೇಸ್ ನಲ್ಲಿ ಜವಾಬ್ದಾರಿಯುತ ಆಡಳಿತ  ನಡವಳಿಕೆಯ ಚೌಕಟ್ಟಿನ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯಲ್ಲಿ ತಮ್ಮ ಸಮನ್ವಯವನ್ನು ಬಲಪಡಿಸುವ ಬಯಕೆಯನ್ನು ಪುನರುಚ್ಚರಿಸಿದರು, ಜೊತೆಗೆ ದುರುದ್ದೇಶಪೂರಿತ ಸೈಬರ್ ಸಾಧನಗಳು ಮತ್ತು ಅಭ್ಯಾಸಗಳ ಪ್ರಸರಣದಿಂದ ಉದ್ಭವಿಸುವ ಸಮಸ್ಯೆಗಳನ್ನು ಪರಿಹರಿಸುವ ಅಗತ್ಯವನ್ನು ಪುನರುಚ್ಚರಿಸಿದರು. 2025 ರಲ್ಲಿ ನಡೆಯಲಿರುವ ಮುಂದಿನ ಭಾರತ-ಫ್ರಾನ್ಸ್ ಕಾರ್ಯತಂತ್ರದ ಸೈಬರ್ ಭದ್ರತೆ ಮತ್ತು ಸೈಬರ್ ಡಿಪ್ಲೋಮಸಿ ಸಂವಾದಗಳನ್ನು ಎದುರು ನೋಡುತ್ತಿರುವುದಾಗಿ ಹೇಳಿದರು.

ಭೂಗ್ರಹಕ್ಕಾಗಿ ಪಾಲುದಾರಿಕೆ

ಇಂಧನ ಭದ್ರತೆಯನ್ನು ಬಲಪಡಿಸಲು ಮತ್ತು ಕಡಿಮೆ ಇಂಗಾಲದ ಆರ್ಥಿಕತೆಯತ್ತ ಪರಿವರ್ತನೆಗೊಳ್ಳಲು ಪರಮಾಣು ಶಕ್ತಿಯು ಇಂಧನ ಮಿಶ್ರಣದ ಅತ್ಯಗತ್ಯ ಭಾಗವಾಗಿದೆ ಎಂದು ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಮ್ಯಾಕ್ರನ್ ಒತ್ತಿ ಹೇಳಿದರು. ಇಬ್ಬರೂ ನಾಯಕರು ಭಾರತ-ಫ್ರಾನ್ಸ್ ನಾಗರಿಕ ಪರಮಾಣು ಸಂಬಂಧಗಳು ಮತ್ತು ಪರಮಾಣು ಶಕ್ತಿಯ ಶಾಂತಿಯುತ ಬಳಕೆಯ ಸಹಕಾರದ ಪ್ರಯತ್ನಗಳನ್ನು ಒಪ್ಪಿಕೊಂಡರು, ವಿಶೇಷವಾಗಿ ಜೈತಾಪುರ ಪರಮಾಣು ವಿದ್ಯುತ್ ಸ್ಥಾವರ ಯೋಜನೆಗೆ ಸಂಬಂಧಿಸಿದಂತೆ. ನಾಗರಿಕ ಪರಮಾಣು ಇಂಧನ ಕುರಿತ ವಿಶೇಷ ಕಾರ್ಯಪಡೆಯ ಮೊದಲ ಸಭೆಯನ್ನು ಅವರು ಸ್ವಾಗತಿಸಿದರು ಮತ್ತು ಸಣ್ಣ ಮಾಡ್ಯುಲರ್ ರಿಯಾಕ್ಟರ್ (ಎಸ್ ಎಂಆರ್) ಮತ್ತು ಸುಧಾರಿತ ಮಾಡ್ಯುಲರ್ ರಿಯಾಕ್ಟರ್ (ಎಎಂಆರ್) ಕುರಿತ ಉದ್ದೇಶಿತ ಪತ್ರಕ್ಕೆ ಸಹಿ ಹಾಕಿರುವುದನ್ನು ಮತ್ತು ಪರಮಾಣು ವೃತ್ತಿಪರರ ತರಬೇತಿ ಹಾಗು  ಶಿಕ್ಷಣದಲ್ಲಿ ಸಹಕಾರಕ್ಕಾಗಿ ಭಾರತದ ಜಿಸಿಎನ್ ಇಪಿ, ಡಿಎಇ ಮತ್ತು ಫ್ರಾನ್ಸ್ ನ ಐಎನ್ ಎಸ್ ಟಿಎನ್, ಸಿಇಎ ನಡುವೆ ಅನುಷ್ಠಾನ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಸ್ವಾಗತಿಸಿದರು.

ಹವಾಮಾನ ಬದಲಾವಣೆ ಮತ್ತು ಸುಸ್ಥಿರ ಜೀವನಶೈಲಿಯನ್ನು ಉತ್ತೇಜಿಸುವುದು ಸೇರಿದಂತೆ ಪರಿಸರ ಬಿಕ್ಕಟ್ಟುಗಳು ಮತ್ತು ಸವಾಲುಗಳನ್ನು ಜಂಟಿಯಾಗಿ ಎದುರಿಸಲು ತಮ್ಮ ದೇಶಗಳ ಬದ್ಧತೆಯನ್ನು ಉಭಯ ನಾಯಕರು ಪುನರುಚ್ಚರಿಸಿದರು. ಪರಿಸರ ಸಚಿವಾಲಯಗಳ ನಡುವೆ ಪರಿಸರ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರದ ನವೀಕರಣವನ್ನು ನಾಯಕರು ಸ್ವಾಗತಿಸಿದರು. ಬಡತನ ನಿರ್ಮೂಲನೆ ಮತ್ತು ಭೂಗ್ರಹದ ಸಂರಕ್ಷಣೆ ಎರಡನ್ನೂ ನಿಭಾಯಿಸುವಲ್ಲಿ ದುರ್ಬಲ ದೇಶಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಹಣಕಾಸು ವ್ಯವಸ್ಥೆಯ ಸುಧಾರಣೆಗಾಗಿ ಪ್ಯಾರಿಸ್ ಪೀಪಲ್ ಮತ್ತು ಪ್ಲಾನೆಟ್ ಒಪ್ಪಂದ ಸ್ಥಾಪಿಸಿದ ತತ್ವಗಳಿಗೆ ತಮ್ಮ ಬದ್ಧತೆಯನ್ನು ಇಬ್ಬರೂ ನಾಯಕರು ಪುನರುಚ್ಚರಿಸಿದರು. ಸಾಗರಗಳ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಯ ಅಂತಾರಾಷ್ಟ್ರೀಯ ಪ್ರಯತ್ನಗಳಲ್ಲಿ ವಿಶ್ವಸಂಸ್ಥೆಯ ಸಾಗರ ಸಮ್ಮೇಳನ (ಯುಎನ್ ಒಸಿ-3) ಮಹತ್ವದ ಮೈಲಿಗಲ್ಲಾಗಿದೆ ಎಂದು ಇಬ್ಬರೂ ನಾಯಕರು ಪುನರುಚ್ಚರಿಸಿದರು. 2025 ರ ಜೂನ್ ನಲ್ಲಿ ನೈಸ್ ನಲ್ಲಿ ನಡೆಯಲಿರುವ ಮುಂಬರುವ ಯುಎನ್ ಒಸಿ -3 ರ ಹಿನ್ನೆಲೆಯಲ್ಲಿ, ಫ್ರಾನ್ಸ್ ಮತ್ತು ಭಾರತವು ನೈಸರ್ಗಿಕ ನ್ಯಾಯವ್ಯಾಪ್ತಿಯ ಪ್ರದೇಶಗಳನ್ನು ಮೀರಿ ಸಾಗರ ಜೈವಿಕ ವೈವಿಧ್ಯತೆಯ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಯ ಒಪ್ಪಂದದ ಮಹತ್ವವನ್ನು (ಬಿಬಿಎನ್ ಜೆ ಒಪ್ಪಂದ) ಅಂತರ್ಗತ ಮತ್ತು ಸಮಗ್ರ ಅಂತರರಾಷ್ಟ್ರೀಯ ಸಾಗರ ಆಡಳಿತದ ಆಧಾರಸ್ತಂಭಗಳಲ್ಲಿ ಒಂದಾಗಿದೆ ಎಂದು ಗುರುತಿಸಿದೆ. ಈಗಾಗಲೇ ಒಪ್ಪಂದಕ್ಕೆ ಸಹಿ ಹಾಕಿರುವ ಅವರು, ಅದನ್ನು ಆದಷ್ಟು ಬೇಗ ಜಾರಿಗೆ ತರುವಂತೆ ಕರೆ ನೀಡಿದರು. 2025 ರ ಜೂನ್ ನ  ಯುಎನ್ಒಸಿ -3 ಗಾಗಿ ಫ್ರಾನ್ಸ್ಗೆ ಭಾರತ  ಬೆಂಬಲ ನೀಡುವುದೆಂದು  ಪ್ರಧಾನಿ ಮೋದಿ ಹೇಳಿದರು.

ಇಂಡೋ-ಪೆಸಿಫಿಕ್ ಪ್ರದೇಶದ ಮೂರನೇ ರಾಷ್ಟ್ರಗಳಿಂದ ಹವಾಮಾನ ಮತ್ತು ಎಸ್ ಡಿಜಿ ಕೇಂದ್ರಿತ ಯೋಜನೆಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿರುವ ಭಾರತ-ಫ್ರಾನ್ಸ್ ಇಂಡೋ-ಪೆಸಿಫಿಕ್ ತ್ರಿಕೋನ ಅಭಿವೃದ್ಧಿ ಸಹಕಾರದ ಆರಂಭವನ್ನು ಅವರು ಶ್ಲಾಘಿಸಿದರು. ಹಣಕಾಸು ಸೇರ್ಪಡೆ ಮತ್ತು ಮಹಿಳಾ ಸಬಲೀಕರಣ ಕ್ಷೇತ್ರಗಳಲ್ಲಿ 13 ಮಿಲಿಯನ್ ಯುರೋಗಳ ಈಕ್ವಿಟಿ ಒಪ್ಪಂದಕ್ಕಾಗಿ ಪ್ರೊಪಾರ್ಕೊ ಮತ್ತು ಸಂಬಂಧಿತ ಭಾರತೀಯ ಮೈಕ್ರೋಫೈನಾನ್ಸ್ ಸಂಸ್ಥೆಗಳ ನಡುವಿನ ಪಾಲುದಾರಿಕೆಯನ್ನು ಇಬ್ಬರೂ ನಾಯಕರು ಸ್ವಾಗತಿಸಿದರು. ವಿಪತ್ತು ಸ್ಥಿತಿಸ್ಥಾಪಕತ್ವದ  ಮೂಲಸೌಕರ್ಯಗಳ ಒಕ್ಕೂಟ ಮತ್ತು ಅಂತರರಾಷ್ಟ್ರೀಯ ಸೌರ ಒಕ್ಕೂಟದ ಫ್ರಾಂಕೊ ಭಾರತೀಯ ಅಧ್ಯಕ್ಷತೆಯ ಚೌಕಟ್ಟಿನೊಳಗೆ ಬಲವಾದ ಮತ್ತು ಫಲಪ್ರದ ಸಹಕಾರವನ್ನು ಅವರು ಶ್ಲಾಘಿಸಿದರು.

2024 ರಲ್ಲಿ ದಾಖಲೆಯ ಮಟ್ಟದ ದ್ವಿಪಕ್ಷೀಯ ವ್ಯಾಪಾರವನ್ನು ಗಮನಿಸಿದ ಅವರು, ಉಭಯ ದೇಶಗಳ ನಡುವೆ ವ್ಯಾಪಾರ ಮತ್ತು ಹೂಡಿಕೆಗೆ ಅಪಾರ ಸಾಮರ್ಥ್ಯವಿದೆ ಎಂದು ಒಪ್ಪಿಕೊಂಡರು. ಫ್ರಾನ್ಸ್ ಮತ್ತು ಭಾರತದಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೆ ದೃಢವಾದ  ವಿಶ್ವಾಸವನ್ನು ಮೂಡಿಸಿ ಅದನ್ನು ಕಾಪಾಡಿಕೊಳ್ಳುವ ಅಗತ್ಯವನ್ನು ಇಬ್ಬರೂ ನಾಯಕರು ಎತ್ತಿ ತೋರಿಸಿದರು. ನಗರಾಭಿವೃದ್ಧಿ ಕ್ಷೇತ್ರದಲ್ಲಿ 2024 ರಲ್ಲಿ ಘೋಷಿಸಲಾದ ಹಲವಾರು ಆರ್ಥಿಕ ಸಹಕಾರ ಯೋಜನೆಗಳನ್ನು ಅವರು ಶ್ಲಾಘಿಸಿದರು. 2024ರ ಮೇ ತಿಂಗಳಲ್ಲಿ ವರ್ಸೇಲ್ಸ್ ನಲ್ಲಿ ನಡೆದ 7ನೇ ಫ್ರಾನ್ಸ್ ಆಯ್ಕೆ ಶೃಂಗಸಭೆಯಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾರತ ಭಾಗವಹಿಸಿದ್ದನ್ನು ಅವರು ಸ್ಮರಿಸಿದರು. ನವೆಂಬರ್ 2024 ಮತ್ತು ಫೆಬ್ರವರಿ 2025 ರಲ್ಲಿ ದ್ವಿಪಕ್ಷೀಯ ಸಿಇಓಗಳ ವೇದಿಕೆಯನ್ನು ಆಯೋಜಿಸಿದ್ದರ ಬಗ್ಗೆ ಇಬ್ಬರೂ ನಾಯಕರು ಹರ್ಷ ವ್ಯಕ್ತಪಡಿಸಿದರು.

ಕಳೆದ ಜನವರಿಯಲ್ಲಿ ಭಾರತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮೊದಲ ಮಿಷನ್ ಪ್ಯಾರಿಸ್ ನಲ್ಲಿ ಆರಂಭಗೊಂಡಿದ್ದು,  ಎರಡು ಆರೋಗ್ಯ ಸಚಿವಾಲಯಗಳ ನಡುವಿನ ಸಹಕಾರಕ್ಕೆ ಸಂಬಂಧಿಸಿದ  ಈ ಮಿಷನ್ ಆರಂಭಕ್ಕೆ ದಕ್ಕಿದ ಅಭೂತಪೂರ್ವ ವೇಗದ ಬಗ್ಗೆ ಇಬ್ಬರೂ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಡಿಜಿಟಲ್ ಆರೋಗ್ಯ, ಸೂಕ್ಷ್ಮಜೀವಿ ವಿರೋಧಿ ಪ್ರತಿರೋಧ ಮತ್ತು ಆರೋಗ್ಯ ವೃತ್ತಿಪರರ ವಿನಿಮಯವನ್ನು 2025 ರಲ್ಲಿ ದ್ವಿಪಕ್ಷೀಯ ಸಹಕಾರದ ಪ್ರಮುಖ ಆದ್ಯತೆಗಳಾಗಿ ಗುರುತಿಸಲಾಗಿದೆ. ಪರಿಸಂಟೇ ಕ್ಯಾಂಪಸ್ ಮತ್ತು ಸಿ-ಕ್ಯಾಂಪ್ (ಸೆಂಟರ್ ಫಾರ್ ಮಾಲಿಕ್ಯುಲರ್ ಪ್ಲಾಟ್ ಫಾರ್ಮ್ಸ್) ನಡುವೆ ಉದ್ದೇಶಿತ ಪತ್ರಕ್ಕೆ ಸಹಿ ಹಾಕಿರುವುದನ್ನು ಮತ್ತು ಇಂಡೋ-ಫ್ರೆಂಚ್ ಲೈಫ್ ಸೈನ್ಸಸ್ ಸಿಸ್ಟರ್ ಇನ್ನೋವೇಶನ್ ಹಬ್ ರಚನೆಯನ್ನು ಇಬ್ಬರೂ ನಾಯಕರು ಸ್ವಾಗತಿಸಿದರು.

ಜನರಿಗಾಗಿ ಪಾಲುದಾರಿಕೆ

2023ರ ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಂಕಿತ ಹಾಕಲಾದ ಉದ್ದೇಶಿತ ಪತ್ರದ ಮಹತ್ವಾಕಾಂಕ್ಷೆಯನ್ನು ಸ್ಮರಿಸಿದ ಅಧ್ಯಕ್ಷ ಮ್ಯಾಕ್ರನ್ ಮತ್ತು ಪ್ರಧಾನಿ ಮೋದಿ ಅವರು, ದಿಲ್ಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯ ಮತ್ತು ಫ್ರಾನ್ಸ್ ಮ್ಯೂಸಿಯಮ್ಸ್ ಡೆವೆಲೋಪೆಮೆಂಟ್ ನಡುವೆ 2024ರ ಡಿಸೆಂಬರ್ ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಸ್ವಾಗತಿಸಿದರು. ಈ ಒಪ್ಪಂದವು ಭಾರತೀಯ ವೃತ್ತಿಪರರ ತರಬೇತಿ ಸೇರಿದಂತೆ ಹೆಚ್ಚಿನ ಸಹಯೋಗ ಮತ್ತು ವಿಶಾಲ ವಸ್ತುಸಂಗ್ರಹಾಲಯ ಸಹಕಾರಕ್ಕೆ ದಾರಿ ಮಾಡಿಕೊಡುತ್ತದೆ. ರಾಷ್ಟ್ರೀಯ ಕಡಲ ಪರಂಪರೆ ಸಂಕೀರ್ಣದ ಅಭಿವೃದ್ಧಿಯಲ್ಲಿ ಭಾಗವಹಿಸುವ ಬಗ್ಗೆ ಸಮಾಲೋಚನೆಗಳನ್ನು ಮುಂದುವರಿಸಲು ಫ್ರಾನ್ಸ್ ಮುಂದೆ ಬಂದಿದೆ.

1966ರಲ್ಲಿ ಭಾರತ ಮತ್ತು ಫ್ರಾನ್ಸ್ ನಡುವೆ ಮೊದಲ ಸಾಂಸ್ಕೃತಿಕ ಒಪ್ಪಂದಕ್ಕೆ ಸಹಿ ಹಾಕಿದ 60 ನೇ ವಾರ್ಷಿಕೋತ್ಸವವನ್ನು ಆಚರಿಸಲು, ಸಂಸ್ಕೃತಿ ಸೇರಿದಂತೆ  ಅಂತರ-ವಲಯ ಉಪಕ್ರಮವಾಗಿ ಅನ್ವೇಷಣಾ ವರ್ಷ  2026 ರ ಸಂದರ್ಭದಲ್ಲಿ ಅನೇಕ ಸಾಂಸ್ಕೃತಿಕ ವಿನಿಮಯ ಮತ್ತು ಕಾರ್ಯಕ್ರಮಗಳನ್ನು ಕೈಗೊಳ್ಳಲು ಎರಡೂ ಕಡೆಯವರು ಒಪ್ಪಿಕೊಂಡರು.

ಪ್ಯಾರಿಸ್ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ 2024 ಅನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಅಧ್ಯಕ್ಷ ಮ್ಯಾಕ್ರನ್ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದರು ಮತ್ತು 2036 ರಲ್ಲಿ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಆತಿಥ್ಯ ವಹಿಸುವ ಭಾರತದ ಬಿಡ್ ಹಿನ್ನೆಲೆಯಲ್ಲಿ ಪ್ರಮುಖ ಅಂತರರಾಷ್ಟ್ರೀಯ ಕ್ರೀಡಾಕೂಟಗಳ ಸಂಘಟನೆ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಫ್ರಾನ್ಸ್ ನ ಅನುಭವ ಮತ್ತು ಪರಿಣತಿಯನ್ನು ಹಂಚಿಕೊಳ್ಳುವ ಅಧ್ಯಕ್ಷ ಮ್ಯಾಕ್ರನ್ ಅವರ ಇಚ್ಛೆಗೆ ಧನ್ಯವಾದ ಅರ್ಪಿಸಿದರು.

ಮೆಡಿಟರೇನಿಯನ್ ಮತ್ತು ಇಂಡೋ-ಪೆಸಿಫಿಕ್ ಪ್ರದೇಶಗಳ ನಡುವೆ ವ್ಯಾಪಾರ ಮತ್ತು ಸಂಪರ್ಕವನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರಗಳ ಪ್ರತಿನಿಧಿಗಳು, ಉದ್ಯಮ ಮುಖಂಡರು, ವ್ಯಾಪಾರ ಮತ್ತು ಸಂಪರ್ಕ ವಿಷಯಗಳ ತಜ್ಞರು ಮತ್ತು ಇತರ ಸಂಬಂಧಿತ ಮಧ್ಯಸ್ಥಗಾರರನ್ನು ಒಳಗೊಂಡ ಉನ್ನತ ಮಟ್ಟದ ಸಂವಾದವನ್ನು ಉತ್ತೇಜಿಸಲು 2025 ರಲ್ಲಿ ಮಾರ್ಸಿಲೆಯಲ್ಲಿ ಮೆಡಿಟರೇನಿಯನ್ ಸಮಸ್ಯೆಗಳನ್ನು ಕೇಂದ್ರವಾಗಿಸಿದ ರೈಸಿನಾ ಸಂವಾದದ ಪ್ರಾದೇಶಿಕ ಆವೃತ್ತಿಯನ್ನು ಪ್ರಾರಂಭಿಸುವುದನ್ನು ಇಬ್ಬರೂ ನಾಯಕರು ಸ್ವಾಗತಿಸಿದರು.

2024ರ ಸೆಪ್ಟೆಂಬರ್ ನಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಫ್ರೆಂಚ್ ಅನ್ನು ವಿದೇಶಿ ಭಾಷೆಯಾಗಿ ಕಲಿಸುವ ಮತ್ತು ಫ್ರಾನ್ಸ್ ನ ಅತ್ಯಂತ ಪ್ರತಿಷ್ಠಿತ ಫ್ರೆಂಚ್ ವಿಶ್ವವಿದ್ಯಾಲಯಗಳಲ್ಲಿ ವಿಧಾನ ಮತ್ತು ಶೈಕ್ಷಣಿಕ ವಿಷಯಗಳನ್ನು ಒಂದು ಶೈಕ್ಷಣಿಕ ವರ್ಷದಲ್ಲಿ ಕಲಿಸುವ ಅಂತರರಾಷ್ಟ್ರೀಯ ತರಗತಿಗಳ ಯೋಜನೆಯ ಯಶಸ್ವಿ ಆರಂಭವನ್ನು ಇಬ್ಬರೂ ನಾಯಕರು ಸ್ವಾಗತಿಸಿದರು. ಇದು ವಿದ್ಯಾರ್ಥಿಗಳ ಚಲನಶೀಲತೆಯನ್ನು ಹೆಚ್ಚಿಸಲು ಅನುಕೂಲಕರ ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆ ಮತ್ತು 2030 ರ ವೇಳೆಗೆ ಫ್ರಾನ್ಸ್ ನಲ್ಲಿ 30,000 ಭಾರತೀಯ ವಿದ್ಯಾರ್ಥಿಗಳ ಗುರಿಯನ್ನು ಪೂರೈಸುತ್ತದೆ. ಆ ನಿಟ್ಟಿನಲ್ಲಿ, ಫ್ರಾನ್ಸ್ ನಲ್ಲಿ ಹೆಚ್ಚುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯನ್ನು ಅವರು ಸ್ವಾಗತಿಸಿದರು, 2025 ರ ಅಂಕಿಅಂಶಗಳು ಅಭೂತಪೂರ್ವ 10,000 ವನ್ನು ತಲುಪುವ ನಿರೀಕ್ಷೆಯಿದೆ.

ಭಾರತ-ಫ್ರಾನ್ಸ್ ವಲಸೆ ಮತ್ತು ಚಲನಶೀಲತೆ ಪಾಲುದಾರಿಕೆ ಒಪ್ಪಂದ (ಎಂಎಂಪಿಎ) ಅಡಿಯಲ್ಲಿ ಯುವ ವೃತ್ತಿಪರರ ಯೋಜನೆ (ವೈಪಿಎಸ್) ಕಾರ್ಯಾರಂಭವನ್ನು ಇಬ್ಬರೂ ನಾಯಕರು ಸ್ವಾಗತಿಸಿದರು, ಇದು ಯುವಜನರು ಮತ್ತು ವೃತ್ತಿಪರರ ದ್ವಿಮುಖ ಚಲನಶೀಲತೆಗೆ ಅವಕಾಶ ನೀಡುತ್ತದೆ, ಭಾರತ ಮತ್ತು ಫ್ರಾನ್ಸ್ ಜನರ ನಡುವಿನ ಸ್ನೇಹದ ಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ಇದಲ್ಲದೆ, ಕೌಶಲ್ಯ ಅಭಿವೃದ್ಧಿ, ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಕ್ಷೇತ್ರಗಳಲ್ಲಿ ಸಹಕಾರವನ್ನು ಉತ್ತೇಜಿಸಲು ತಿಳಿವಳಿಕೆ ಒಡಂಬಡಿಕೆಯನ್ನು ಶೀಘ್ರವಾಗಿ ಅಂತಿಮಗೊಳಿಸುವುದನ್ನು ಇಬ್ಬರೂ ನಾಯಕರು ಒತ್ತಿ ಹೇಳಿದರು, ಇದು ಈ ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸಲು ಎರಡೂ ದೇಶಗಳಿಗೆ ಅವಕಾಶಗಳನ್ನು ಸೃಷ್ಟಿಸುತ್ತದೆ.

ತಮ್ಮ ಕ್ರಿಯಾತ್ಮಕ ಮತ್ತು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಪೋಷಿಸಲು, ದ್ವಿಪಕ್ಷೀಯ ಹೊರೈಜನ್ 2047 ಮಾರ್ಗಸೂಚಿಯಲ್ಲಿ ವ್ಯಕ್ತಪಡಿಸಿದ ಮಹತ್ವಾಕಾಂಕ್ಷೆಗಳನ್ನು ಅನುಸರಿಸಿ ತಮ್ಮ ದೀರ್ಘಕಾಲೀನ ಸಹಕಾರವನ್ನು ನಿರಂತರವಾಗಿ ಆಳಗೊಳಿಸಲು ಎರಡೂ ದೇಶಗಳು ಬದ್ಧವಾಗಿವೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
'Will walk shoulder to shoulder': PM Modi pushes 'Make in India, Partner with India' at Russia-India forum

Media Coverage

'Will walk shoulder to shoulder': PM Modi pushes 'Make in India, Partner with India' at Russia-India forum
NM on the go

Nm on the go

Always be the first to hear from the PM. Get the App Now!
...
Prime Minister condoles loss of lives in fire mishap in Arpora, Goa
December 07, 2025
Announces ex-gratia from PMNRF

The Prime Minister, Shri Narendra Modi has condoled the loss of lives in fire mishap in Arpora, Goa. Shri Modi also wished speedy recovery for those injured in the mishap.

The Prime Minister informed that he has spoken to Goa Chief Minister Dr. Pramod Sawant regarding the situation. He stated that the State Government is providing all possible assistance to those affected by the tragedy.

The Prime Minister posted on X;

“The fire mishap in Arpora, Goa is deeply saddening. My thoughts are with all those who have lost their loved ones. May the injured recover at the earliest. Spoke to Goa CM Dr. Pramod Sawant Ji about the situation. The State Government is providing all possible assistance to those affected.

@DrPramodPSawant”

The Prime Minister also announced an ex-gratia from PMNRF of Rs. 2 lakh to the next of kin of each deceased and Rs. 50,000 for those injured.

The Prime Minister’s Office posted on X;

“An ex-gratia of Rs. 2 lakh from PMNRF will be given to the next of kin of each deceased in the mishap in Arpora, Goa. The injured would be given Rs. 50,000: PM @narendramodi”