ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಇಂದು ಪುಣೆ ಮೆಟ್ರೋ ರೈಲು ಯೋಜನೆಯ 2ನೇ ಹಂತದ ಅಡಿಯಲ್ಲಿ ಮಾರ್ಗ 4 (ಖರಾಡಿ–ಹಡಪ್ಸರ್–ಸ್ವರ್ಗೇಟ್–ಖಡಕವಾಸಲಾ) ಮತ್ತು ಮಾರ್ಗ 4ಎ (ನಾಲ್ ಸ್ಟಾಪ್–ವಾರ್ಜೆ–ಮಾಣಿಕ್ ಬಾಗ್) ಗೆ ಅನುಮೋದನೆ ನೀಡಿದ್ದು, ಪುಣೆ ತನ್ನ ಸಾರ್ವಜನಿಕ ಸಾರಿಗೆ ಜಾಲದಲ್ಲಿ ಮತ್ತೊಂದು ಪ್ರಮುಖ ಉತ್ತೇಜನಕ್ಕೆ ಸಜ್ಜಾಗಿದೆ. ಮಾರ್ಗ 2ಎ (ವನಜ್–ಚಂದಾನಿ ಚೌಕ್) ಮತ್ತು ಮಾರ್ಗ 2ಬಿ (ರಾಮ್ವಾಡಿ–ವಾಘೋಲಿ/ವಿಠ್ಠಲವಾಡಿ) ಮಂಜೂರಾದ ನಂತರ, ಹಂತ-2 ರ ಅಡಿಯಲ್ಲಿ ಅನುಮೋದಿಸಲಾದ ಎರಡನೇ ಪ್ರಮುಖ ಯೋಜನೆ ಇದು.
ಒಟ್ಟು 31.636 ಕಿ.ಮೀ. ಉದ್ದದ ಈ ಮಾರ್ಗವು 28 ಎತ್ತರದ ನಿಲ್ದಾಣಗಳನ್ನು ಒಳಗೊಂಡಿದ್ದು, ಪೂರ್ವ, ದಕ್ಷಿಣ ಮತ್ತು ಪಶ್ಚಿಮ ಪುಣೆಯ ಐಟಿ ಕೇಂದ್ರಗಳು, ವಾಣಿಜ್ಯ ವಲಯಗಳು, ಶಿಕ್ಷಣ ಸಂಸ್ಥೆಗಳು ಮತ್ತು ವಸತಿ ಸಮೂಹಗಳನ್ನು ಸಂಪರ್ಕಿಸುತ್ತದೆ. ಐದು ವರ್ಷಗಳಲ್ಲಿ ಪೂರ್ಣಗೊಳ್ಳಲಿರುವ ಈ ಯೋಜನೆಗೆ ಅಂದಾಜು ₹9,857.85 ಕೋಟಿ ವೆಚ್ಚವಾಗಲಿದೆ ಮತ್ತು ಭಾರತ ಸರ್ಕಾರ, ಮಹಾರಾಷ್ಟ್ರ ಸರ್ಕಾರ ಮತ್ತು ಬಾಹ್ಯ ದ್ವಿಪಕ್ಷೀಯ/ಬಹುಪಕ್ಷೀಯ ಹಣಕಾಸು ಸಂಸ್ಥೆಗಳು ಜಂಟಿಯಾಗಿ ಹಣಕಾಸು ಒದಗಿಸಲಿವೆ.
ಈ ಮಾರ್ಗಗಳು ಪುಣೆಯ ಸಮಗ್ರ ಸಂಚಾರ ಯೋಜನೆಯ (ಸಿಎಂಪಿ) ಅತ್ಯಗತ್ಯ ಭಾಗವಾಗಿದ್ದು, ಖರಾಡಿ ಬೈಪಾಸ್ ಮತ್ತು ನಾಲ್ ಸ್ಟಾಪ್ (ಮಾರ್ಗ 2), ಮತ್ತು ಸ್ವರ್ಗೇಟ್ (ಮಾರ್ಗ 1) ನಲ್ಲಿರುವ ಕಾರ್ಯಾಚರಣೆಯ ಮತ್ತು ಅನುಮೋದಿತ ಕಾರಿಡಾರ್ ಗಳೊಂದಿಗೆ ಸರಾಗವಾಗಿ ಸಂಪರ್ಕ ಸಾಧಿಸುತ್ತವೆ. ಅವು ಹಡಪ್ಸರ್ ರೈಲು ನಿಲ್ದಾಣದಲ್ಲಿ ಇಂಟರ್ ಚೇಂಜ್ ಅನ್ನು ಒದಗಿಸುತ್ತವೆ ಮತ್ತು ಲೋನಿ ಕಲ್ಭೋರ್ ಮತ್ತು ಸಾಸ್ವಾದ್ ರಸ್ತೆಯ ಕಡೆಗೆ ಭವಿಷ್ಯದ ಕಾರಿಡಾರ್ ಗಳೊಂದಿಗೆ ಸಂಪರ್ಕ ಸಾಧಿಸುತ್ತವೆ, ಮೆಟ್ರೋ, ರೈಲು ಮತ್ತು ಬಸ್ ಜಾಲಗಳಲ್ಲಿ ಸುಲಭವಾದ ಬಹುಮಾದರಿ ಸಂಪರ್ಕವನ್ನು ಖಚಿತಪಡಿಸುತ್ತವೆ.
ಖರಾಡಿ ಐಟಿ ಪಾರ್ಕ್‌ನಿಂದ ಹಿಡಿದು ಸುಂದರ ಪ್ರವಾಸಿ ಪ್ರದೇಶವಾದ ಖಡಕ್‌ವಾಸ್ಲಾದವರೆಗೆ ಮತ್ತು ಕೈಗಾರಿಕಾ ಕೇಂದ್ರವಾದ ಹಡಪ್ಸರ್ ನಿಂದ ವಾರ್ಜೆಯ ವಸತಿ ಸಮೂಹದವರೆಗೆ, 4 ಮತ್ತು 4ಎ ಮಾರ್ಗಗಳು ವೈವಿಧ್ಯಮಯ ಪ್ರದೇಶಗಳನ್ನು ಸಂಪರ್ಕಿಸುತ್ತವೆ. ಸೋಲಾಪುರ ರಸ್ತೆ, ಮಗರಪಟ್ಟ ರಸ್ತೆ, ಸಿಂಹಗಡ್ ರಸ್ತೆ, ಕಾರ್ವೆ ರಸ್ತೆ ಮತ್ತು ಮುಂಬೈ-ಬೆಂಗಳೂರು ಹೆದ್ದಾರಿಯನ್ನು ಹಾದುಹೋಗುವ ಈ ಯೋಜನೆಯು ಪುಣೆಯ ಅತ್ಯಂತ ಜನನಿಬಿಡ ಮಾರ್ಗಗಳಲ್ಲಿನ ದಟ್ಟಣೆಯನ್ನು ಕಡಿಮೆ ಮಾಡುತ್ತದೆ, ಜೊತೆಗೆ ಸುರಕ್ಷತೆಯನ್ನು ಸುಧಾರಿಸುತ್ತದೆ ಮತ್ತು ಹಸಿರು, ಸುಸ್ಥಿರ ಸಾರಿಗೆಯನ್ನು ಉತ್ತೇಜಿಸುತ್ತದೆ.
ಅಂದಾಜುಗಳ ಪ್ರಕಾರ, 4 ಮತ್ತು 4ಎ ಮಾರ್ಗಗಳಲ್ಲಿ ಒಟ್ಟು ದೈನಂದಿನ ಪ್ರಯಾಣಿಕರ ಸಂಖ್ಯೆ 2028 ರಲ್ಲಿ 4.09 ಲಕ್ಷ ತಲುಪುವ ನಿರೀಕ್ಷೆಯಿದೆ, ಇದು 2038 ರಲ್ಲಿ ಸುಮಾರು 7 ಲಕ್ಷ, 2048 ರಲ್ಲಿ 9.63 ಲಕ್ಷ ಮತ್ತು 2058 ರಲ್ಲಿ 11.7 ಲಕ್ಷಕ್ಕೆ ಹೆಚ್ಚಾಗುತ್ತದೆ. ಇದರಲ್ಲಿ, ಖರಾಡಿ-ಖಡಕ್ವಾಸ್ಲಾ ಕಾರಿಡಾರ್ 2028 ರಲ್ಲಿ 3.23 ಲಕ್ಷ ಪ್ರಯಾಣಿಕರನ್ನು ಹೊಂದಿರುತ್ತದೆ, 2058 ರ ವೇಳೆಗೆ 9.33 ಲಕ್ಷಕ್ಕೆ ಹೆಚ್ಚಾಗುತ್ತದೆ, ನಾಲ್ ಸ್ಟಾಪ್-ವಾರ್ಜೆ-ಮಾಣಿಕ್ ಬಾಗ್ ಸ್ಪರ್ ಮಾರ್ಗವು ಅದೇ ಅವಧಿಯಲ್ಲಿ 85,555 ರಿಂದ 2.41 ಲಕ್ಷಕ್ಕೆ ಗಮನಾರ್ಹ ಏರಿಕೆಯನ್ನು ಕಾಣಲಿದೆ. ಈ ಅಂದಾಜುಗಳು ಮುಂಬರುವ ದಶಕಗಳಲ್ಲಿ 4 ಮತ್ತು 4ಎ ಮಾರ್ಗಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವನ್ನು ಸೂಚಿಸುತ್ತವೆ.
ಈ ಯೋಜನೆಯನ್ನು ಮಹಾರಾಷ್ಟ್ರ ಮೆಟ್ರೋ ರೈಲು ನಿಗಮ ಲಿಮಿಟೆಡ್ (ಮಹಾ-ಮೆಟ್ರೋ) ಕಾರ್ಯಗತಗೊಳಿಸಲಿದ್ದು, ಇದು ಎಲ್ಲಾ ಸಿವಿಲ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್ ಮತ್ತು ಸಿಸ್ಟಮ್ಸ್ ಕೆಲಸಗಳನ್ನು ಕೈಗೊಳ್ಳುತ್ತದೆ. ಭೂಪ್ರದೇಶ ಸಮೀಕ್ಷೆಗಳು ಮತ್ತು ವಿವರವಾದ ವಿನ್ಯಾಸ ಸಲಹೆಗಳು ಮುಂತಾದ ನಿರ್ಮಾಣ ಪೂರ್ವ ಚಟುವಟಿಕೆಗಳು ಈಗಾಗಲೇ ನಡೆಯುತ್ತಿವೆ.
ಈ ಹೊಸ ಅನುಮೋದನೆಯೊಂದಿಗೆ, ಪುಣೆ ಮೆಟ್ರೋ ಜಾಲವು 100 ಕಿ.ಮೀ ಮೈಲಿಗಲ್ಲನ್ನು ದಾಟಲಿದ್ದು, ಆಧುನಿಕ, ಸಮಗ್ರ ಮತ್ತು ಸುಸ್ಥಿರ ನಗರ ಸಾರಿಗೆ ವ್ಯವಸ್ಥೆಯತ್ತ ನಗರದ ಪ್ರಯಾಣದಲ್ಲಿ ಮಹತ್ವದ ಹೆಜ್ಜೆಯಾಗಿದೆ.
4 ಮತ್ತು 4ಎ ಮಾರ್ಗಗಳೊಂದಿಗೆ, ಪುಣೆ ಹೆಚ್ಚು ಮೆಟ್ರೋ ಮಾರ್ಗಗಳನ್ನು ಪಡೆಯುವುದಲ್ಲದೆ, ವೇಗವಾದ, ಹಸಿರು ಮತ್ತು ಹೆಚ್ಚು ಸಂಪರ್ಕಿತ ಭವಿಷ್ಯವನ್ನು ಪಡೆಯುತ್ತದೆ. ಈ ಕಾರಿಡಾರ್ ಗಳನ್ನು ಪ್ರಯಾಣದ ಸಮಯವನ್ನು ಕಡಿಮೆ ಮಾಡಲು, ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಜನರಿಗೆ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಕೈಗೆಟುಕುವ ಆಯ್ಕೆಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಮುಂಬರುವ ವರ್ಷಗಳಲ್ಲಿ, ಅವು ಪುಣೆಯ ನಿಜವಾದ ಜೀವನಾಡಿಗಳಾಗಿ ಹೊರಹೊಮ್ಮುತ್ತವೆ, ನಗರ ಸಂಚಾರ ವ್ಯವಸ್ಥೆಯನ್ನು ಮರುರೂಪಿಸುತ್ತವೆ ಮತ್ತು ನಗರದ ಬೆಳವಣಿಗೆಯ ಕಥೆಯನ್ನು ಮರು ವ್ಯಾಖ್ಯಾನಿಸುತ್ತವೆ.

A major boost to Pune’s public transport network.
— Narendra Modi (@narendramodi) November 26, 2025
Cabinet approves Phase-2 of Pune Metro (Lines 4 & 4A) connecting various areas of the city. This decision ensures faster and more comfortable commute for the people of Pune, which is an important centre for growth and…


