ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು, ಇಂದು ರೈಲ್ವೆ ಸಚಿವಾಲಯದ 4 (ನಾಲ್ಕು) ಯೋಜನೆಗಳಿಗೆ ಅಂದಾಜು ರೂ. 11,169 ಕೋಟಿಗಳ ಒಟ್ಟು ವೆಚ್ಚದಲ್ಲಿ ಅನುಮೋದನೆ ನೀಡಿದೆ. ಈ ಯೋಜನೆಗಳು ಹೀಗಿವೆ:
(1) ಇಟಾರ್ಸಿ – ನಾಗ್ಪುರ್ 4ನೇ ಮಾರ್ಗ
(2) ಔರಂಗಾಬಾದ್ (ಛತ್ರಪತಿ ಸಂಭಾಜಿನಗರ) - ಪರ್ಭನಿ ಡಬ್ಲಿಂಗ್
(3) ಅಲುಅಬರಿ ರೋಡ್ - ನ್ಯೂ ಜಲ್ಪೈಗುರಿ 3ನೇ ಮತ್ತು 4ನೇ ಮಾರ್ಗ
(4) ಡಂಗೋವಾಪೊಸಿ - ಜರೋಲಿ 3ನೇ ಮತ್ತು 4ನೇ ಮಾರ್ಗ
ಹೆಚ್ಚಿದ ಮಾರ್ಗ ಸಾಮರ್ಥ್ಯವು ಸಂಚಾರವನ್ನು ಗಣನೀಯವಾಗಿ ಸುಧಾರಿಸಲಿದೆ. ಇದರ ಪರಿಣಾಮವಾಗಿ, ಭಾರತೀಯ ರೈಲ್ವೆಯ ಕಾರ್ಯಾಚರಣೆಯ ದಕ್ಷತೆ ಮತ್ತು ಸೇವೆಯ ವಿಶ್ವಾಸಾರ್ಹತೆ ಹೆಚ್ಚಾಗಲಿದೆ. ಈ ಬಹು-ಮಾರ್ಗಗಳ ಪ್ರಸ್ತಾಪಗಳು ಕಾರ್ಯಾಚರಣೆಯನ್ನು ಸುಗಮಗೊಳಿಸಿ, ಮಾರ್ಗಗಳಲ್ಲಿನ ದಟ್ಟಣೆಯನ್ನು ಕಡಿಮೆ ಮಾಡಲಿವೆ. ಈ ಯೋಜನೆಗಳು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರ 'ನವ ಭಾರತ'ದ ದೃಷ್ಟಿಗೆ ಅನುಗುಣವಾಗಿವೆ. ಈ ಪ್ರದೇಶದಲ್ಲಿ ಸಮಗ್ರ ಅಭಿವೃದ್ಧಿಯನ್ನು ಸಾಧಿಸುವ ಮೂಲಕ, ಸ್ಥಳೀಯ ಜನರ ಉದ್ಯೋಗ ಮತ್ತು ಸ್ವಯಂ ಉದ್ಯೋಗ ಅವಕಾಶಗಳನ್ನು ಹೆಚ್ಚಿಸಿ, ಅವರನ್ನು 'ಆತ್ಮನಿರ್ಭರ'ರನ್ನಾಗಿ ಮಾಡುವ ಗುರಿಯನ್ನು ಈ ಯೋಜನೆಗಳು ಹೊಂದಿವೆ.
ಈ ಯೋಜನೆಗಳನ್ನು 'ಪಿ.ಎಂ.-ಗತಿ ಶಕ್ತಿ ರಾಷ್ಟ್ರೀಯ ಮಹಾಯೋಜನೆ'ಯ ಅಡಿಯಲ್ಲಿ ರೂಪಿಸಲಾಗಿದ್ದು, ಸಮಗ್ರ ಯೋಜನೆ ಮತ್ತು ಪಾಲುದಾರರೊಂದಿಗೆ ಸಮಾಲೋಚನೆಗಳ ಮೂಲಕ ಬಹು-ಮಾದರಿ ಸಂಪರ್ಕ ಹಾಗೂ ಸರಕು ಸಾಗಣೆ ದಕ್ಷತೆಯನ್ನು ಹೆಚ್ಚಿಸುವುದರ ಮೇಲೆ ಗಮನಹರಿಸಲಾಗಿದೆ. ಈ ಯೋಜನೆಗಳು ಜನರು, ಸರಕುಗಳು ಮತ್ತು ಸೇವೆಗಳ ಸಂಚಾರಕ್ಕೆ ತಡೆರಹಿತ ಸಂಪರ್ಕವನ್ನು ಒದಗಿಸಲಿವೆ.
ಮಹಾರಾಷ್ಟ್ರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ ಮತ್ತು ಜಾರ್ಖಂಡ್ ರಾಜ್ಯಗಳಾದ್ಯಂತ 13 ಜಿಲ್ಲೆಗಳನ್ನು ಒಳಗೊಂಡಿರುವ ಈ 4 ಯೋಜನೆಗಳು ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ಜಾಲವನ್ನು ಸುಮಾರು 574 ಕಿ.ಮೀ.ಗಳಷ್ಟು ಹೆಚ್ಚಿಸುತ್ತವೆ.
ಪ್ರಸ್ತಾವಿತ ಬಹು-ಮಾರ್ಗ ಯೋಜನೆಗಳು ಸುಮಾರು 2,309 ಹಳ್ಳಿಗಳಿಗೆ ಸಂಪರ್ಕವನ್ನು ಹೆಚ್ಚಿಸುತ್ತವೆ, ಇದು ಸುಮಾರು 43.60 ಲಕ್ಷ ಜನಸಂಖ್ಯೆಯನ್ನು ಹೊಂದಿದೆ.
ಕಲ್ಲಿದ್ದಲು, ಸಿಮೆಂಟ್, ಕ್ಲಿಂಕರ್, ಜಿಪ್ಸಮ್, ಫ್ಲೈ ಆಶ್, ಕಂಟೈನರ್ ಗಳು, ಕೃಷಿ ಉತ್ಪನ್ನಗಳು ಮತ್ತು ಪೆಟ್ರೋಲಿಯಂ ಉತ್ಪನ್ನಗಳಂತಹ ಸರಕುಗಳ ಸಾಗಣೆಗೆ ಇವು ಪ್ರಮುಖ ಮಾರ್ಗಗಳಾಗಿವೆ. ಈ ಸಾಮರ್ಥ್ಯ ವೃದ್ಧಿ ಕಾಮಗಾರಿಗಳ ಪರಿಣಾಮವಾಗಿ, ವಾರ್ಷಿಕ 95.91 ಮಿಲಿಯನ್ ಟನ್ ಗಳಷ್ಟು ಹೆಚ್ಚುವರಿ ಸರಕು ಸಾಗಣೆಗೆ ಅವಕಾಶ ಸಿಗಲಿದೆ. ರೈಲ್ವೆಯು ಪರಿಸರ ಸ್ನೇಹಿ ಮತ್ತು ಇಂಧನ ದಕ್ಷ ಸಾರಿಗೆ ವಿಧಾನವಾಗಿದೆ. ಆದ್ದರಿಂದ, ಈ ಯೋಜನೆಗಳು ದೇಶದ ಹವಾಮಾನ ಗುರಿಗಳನ್ನು ಸಾಧಿಸಲು ಮತ್ತು ಸರಕು ಸಾಗಣೆ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡಲಿವೆ. ಜೊತೆಗೆ, ಇದು ತೈಲ ಆಮದನ್ನು (16 ಕೋಟಿ ಲೀಟರ್) ಕಡಿಮೆ ಮಾಡುವುದಲ್ಲದೆ, CO2 (ಕಾರ್ಬನ್ ಡೈಆಕ್ಸೈಡ್) ಹೊರಸೂಸುವಿಕೆಯನ್ನು (515 ಕೋಟಿ ಕೆ.ಜಿ.) ತಗ್ಗಿಸಲಿದೆ. ಈ ಇಂಗಾಲದ ಹೊರಸೂಸುವಿಕೆ ಕಡಿತವು, 20 ಕೋಟಿ ಮರಗಳನ್ನು ನೆಡುವುದಕ್ಕೆ ಸಮನಾಗಿದೆ.


