ಮಾ ಕಾಮಾಖ್ಯ ದಿವ್ಯ ಲೋಕ ಪರಿಯೋಜನೆಗೆ ಶಂಕುಸ್ಥಾಪನೆ
3400 ಕೋಟಿ ರೂ.ಗೂ ಅಧಿಕ ಮೌಲ್ಯದ ಬಹು ರಸ್ತೆ ಮೇಲ್ದರ್ಜೆಗೇರಿಸುವ ಯೋಜನೆಗಳಿಗೆ ಶಂಕುಸ್ಥಾಪನೆ
ಕ್ರೀಡೆ ಮತ್ತು ವೈದ್ಯಕೀಯ ಮೂಲಸೌಕರ್ಯವನ್ನು ಉತ್ತೇಜಿಸುವ ಯೋಜನೆಗಳಿಗೆ ಶಂಕುಸ್ಥಾಪನೆ
"ಮಾ ಕಾಮಾಖ್ಯ ದರ್ಶನಕ್ಕಾಗಿ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗುವುದರೊಂದಿಗೆ ಈಶಾನ್ಯದಲ್ಲಿ ಅಸ್ಸಾಂ ಪ್ರವಾಸೋದ್ಯಮದ ಹೆಬ್ಬಾಗಿಲಾಗಲಿದೆ"
"ನಮ್ಮ ತೀರ್ಥಯಾತ್ರೆಗಳು, ದೇವಾಲಯಗಳು ಮತ್ತು ನಂಬಿಕೆಯ ಸ್ಥಳಗಳು ನಮ್ಮ ನಾಗರಿಕತೆಯ ಸಾವಿರಾರು ವರ್ಷಗಳ ಪ್ರಯಾಣದ ಅಳಿಸಲಾಗದ ಗುರುತುಗಳಾಗಿವೆ"
"ಜೀವನವನ್ನು ಸುಲಭಗೊಳಿಸುವುದು, ಅನುಕೂಲಕರ ವಾತಾವರಣ ನಿರ್ಮಾಣ ಮಾಡುವುದು ಪ್ರಸ್ತುತ ಸರ್ಕಾರದ ಆದ್ಯತೆಯಾಗಿದೆ"
"ಐತಿಹಾಸಿಕ ಪ್ರಸ್ತುತತೆಯ, ಮಹತ್ವದ ಸ್ಥಳಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹೊಸ ಯೋಜನೆಗಳನ್ನು ಪ್ರಾರಂಭಿಸಲಿದೆ"
"ಮೋದಿ ಭರವಸೆ ಎಂದರೆ ಈಡೇರಿಕೆಯ ಖಾತರಿ"
"ಈ ವರ್ಷ ಮೂಲಸೌಕರ್ಯಕ್ಕಾಗಿ 11 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡುವುದಾಗಿ ಸರ್ಕಾರ ಪ್ರಮಾಣ ಮಾಡಿದೆ"
"ಹಗಲು ರಾತ್ರಿ ಕೆಲಸ ಮಾಡುವ ಮೂಲಕ ಮೋದಿ ನೀಡುವ ಭರವಸೆಗಳನ್ನು ಈಡೇರಿಸುವ ಸಂಕಲ್ಪವನ್ನು ಮೋದಿ ಹೊಂದಿದ್ದಾರೆ"
ಗುವಾಹಟಿಯಲ್ಲಿ ಕ್ರೀಡೆ ಹಾಗು ವೈದ್ಯಕೀಯ ಮೂಲಸೌಕರ್ಯ ಮತ್ತು ಸಂಪರ್ಕವನ್ನು ಹೆಚ್ಚಿಸುವ ಯೋಜನೆಗಳು ಪ್ರಮುಖ ಗಮನ ಹರಿಸಿದ ಕ್ಷೇತ್ರಗಳಾಗಿವೆ.

ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

ಅಸ್ಸಾಂ ರಾಜ್ಯಪಾಲರಾದ ಗುಲಾಬ್ ಚಂದ್ ಕಟಾರಿಯಾ ಜಿ, ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ ಜಿ, ಸಂಪುಟದ ನನ್ನ ಸಹೋದ್ಯೋಗಿಗಳೆ, ಸರ್ಬಾನಂದ ಸೋನೋವಾಲ್ ಜಿ ಮತ್ತು ರಾಮೇಶ್ವರ ತೇಲಿ ಜಿ, ಅಸ್ಸಾಂ ಸರ್ಕಾರದ ಸಚಿವರೆ,  ಸಂಸದರೆ ಮತ್ತು ಶಾಸಕರೆ, ವಿವಿಧ ಮಂಡಳಿಗಳ ಮುಖ್ಯಸ್ಥರೆ ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೇ!

ನಿಮ್ಮೆಲ್ಲರಿಗೂ ನನ್ನ ಹೃದಯಪೂರ್ವಕ ಶುಭಾಶಯಗಳು!

ಮಾತೆ ಕಾಮಾಕ್ಯಳ ಆಶೀರ್ವಾದದೊಂದಿಗೆ, ಮತ್ತೊಮ್ಮೆ ಅಸ್ಸಾಂ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳನ್ನು ನಿಮಗೆ ಸಮರ್ಪಿಸಲು ನಾನು ಅದೃಷ್ಟಶಾಲಿಯಾಗಿದ್ದೇನೆ. ಸ್ವಲ್ಪ ಸಮಯದ ಹಿಂದೆ 11,000 ಕೋಟಿ ರೂಪಾಯಿ ಯೋಜನೆಗಳ ಶಂಕುಸ್ಥಾಪನೆ ಅಥವಾ ಉದ್ಘಾಟನೆ ನೆರವೇರಿತ್ತು. ಈ ಎಲ್ಲಾ ಯೋಜನೆಗಳು ಅಸ್ಸಾಂ ಮತ್ತು ಈಶಾನ್ಯದೊಂದಿಗೆ, ದಕ್ಷಿಣ ಏಷ್ಯಾದ ಇತರ ದೇಶಗಳೊಂದಿಗೆ ಸಂಪರ್ಕ ಬಲಪಡಿಸುತ್ತದೆ. ಈ ಯೋಜನೆಗಳು ಅಸ್ಸಾಂನ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ, ಕ್ರೀಡಾ ಪ್ರತಿಭೆಗಳಿಗೆ ಹೊಸ ಅವಕಾಶಗಳನ್ನು ಒದಗಿಸುತ್ತವೆ. ಈ ಯೋಜನೆಗಳು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಕೇಂದ್ರಗಳಲ್ಲಿ ಅಸ್ಸಾಂನ ಪಾತ್ರವನ್ನು ವಿಸ್ತರಿಸುತ್ತವೆ. ಈ ಯೋಜನೆಗಳಿಗಾಗಿ ಅಸ್ಸಾಂ ಮತ್ತು ಈಶಾನ್ಯದಲ್ಲಿರುವ ನನ್ನ ಎಲ್ಲಾ ಕುಟುಂಬ ಸದಸ್ಯರಿಗೆ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಿನ್ನೆ ಸಂಜೆ ನಾನು ಇಲ್ಲಿಗೆ ಬಂದಿದ್ದೇನೆ. ಗುವಾಹತಿಯ ಜನರು ನನ್ನನ್ನು ಮಾರ್ಗದುದ್ದಕ್ಕೂ ಸ್ವಾಗತಿಸಿ, ಗೌರವಿಸಿದ ರೀತಿ ಮತ್ತು ಮಕ್ಕಳು ಮತ್ತು ಹಿರಿಯರು ಸೇರಿದಂತೆ ಎಲ್ಲರೂ ನನ್ನನ್ನು ಆಶೀರ್ವದಿಸುತ್ತಿದ್ದರು. ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ನೀವು ಲಕ್ಷಾಂತರ ದೀಪಗಳನ್ನು ಹಚ್ಚಿದ್ದನ್ನು ನಾನು ಟಿವಿಯಲ್ಲಿ ನೋಡಿದೆ. ನಿಮ್ಮ ಪ್ರೀತಿ ಮತ್ತು ವಾತ್ಸಲ್ಯ ನನಗೆ ಬಹಳ ಅಮೂಲ್ಯವಾದ ಸಂಪತ್ತು. ನಿಮ್ಮ ಪ್ರೀತಿ ಮತ್ತು ಆಶೀರ್ವಾದಗಳು ನನಗೆ ನಿರಂತರವಾಗಿ ಶಕ್ತಿ ತುಂಬುತ್ತಿವೆ. ನಿಮ್ಮೆಲ್ಲರಿಗೂ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ನನಗೆ ಹೇಳಲು ಪದಗಳೇ ಇಲ್ಲ.

 

ಸಹೋದರ ಸಹೋದರಿಯರೇ,

ಕಳೆದ ಕೆಲವು ದಿನಗಳಿಂದ ದೇಶದ ಅನೇಕ ಪವಿತ್ರ ಕ್ಷೇತ್ರಗಳಿಗೆ ಪ್ರಯಾಣ ಕೈಗೊಳ್ಳುವ ಅವಕಾಶ ನನಗೆ ಸಿಕ್ಕಿದೆ. ಅಯೋಧ್ಯೆಯಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದ ನಂತರ ನಾನೀಗ ಇಲ್ಲಿ ಮಾತೆ ಕಾಮಾಕ್ಯಳ ಬಾಗಿಲಲ್ಲಿ ಇದ್ದೇನೆ. ಇಂದು ಮಾತೆ ಕಾಮಾಕ್ಯಳ ದಿವ್ಯ ಲೋಕ ಪರಿಯೋಜನಕ್ಕೆ ಶಂಕುಸ್ಥಾಪನೆ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ. ಈ ದಿವ್ಯ ಲೋಕ ಯೋಜನೆಯ ದೂರದೃಷ್ಟಿಯ ಬಗ್ಗೆ ನನಗೆ ವಿವರವಾಗಿ ಹೇಳಿದ್ದಾರೆ. ಇದು ಪೂರ್ಣಗೊಂಡ ನಂತರ ದೇಶ ಮತ್ತು ಪ್ರಪಂಚದಾದ್ಯಂತದ ಮಾತೆ ಕಾಮಾಕ್ಯಳ ಭಕ್ತರಿಗೆ ಅಪಾರ ಸಂತೋಷ ತರುತ್ತದೆ. ಮಾತೆ ಕಾಮಾಕ್ಯಳ ದಿವ್ಯ ಲೋಕ ಪರಿಯೋಜನಾ ಕಾರ್ಯ ಮುಗಿದ ನಂತರ ಪ್ರತಿ ವರ್ಷ ಹೆಚ್ಚು ಹೆಚ್ಚು ಭಕ್ತರು ಇಲ್ಲಿಗೆ ಬಂದು ದರ್ಶನ ಪಡೆಯುತ್ತಾರೆ. ಇಲ್ಲಿಗೆ ಯಾತ್ರಿಕರ ಸಂಖ್ಯೆ ಹೆಚ್ಚಾದಂತೆ, ಇದು ಇಡೀ ಈಶಾನ್ಯ ಪ್ರವಾಸೋದ್ಯಮದ ಹೆಬ್ಬಾಗಿಲು ಆಗುತ್ತದೆ ಎಂದು ನಾನು ಭಾವಿಸುತ್ತೇನೆ. ಇಲ್ಲಿಗೆ ಬರುವವರು ಇಡೀ ಈಶಾನ್ಯದ ಪ್ರವಾಸೋದ್ಯಮಕ್ಕೆ ಕೊಡುಗೆ ನೀಡುತ್ತಾರೆ. ಒಂದು ರೀತಿಯಲ್ಲಿ, ಇದು ಪ್ರವಾಸೋದ್ಯಮದ ಹೆಬ್ಬಾಗಿಲು ಆಗಲಿದೆ. ಅಂತಹ ದೊಡ್ಡ ಯೋಜನೆಯು ಈ ದಿವ್ಯ ಲೋಕದೊಂದಿಗೆ ಸಂಬಂಧ ಹೊಂದಿದೆ. ಈ ಭವ್ಯವಾದ ಯೋಜನೆಗಾಗಿ ನಾನು ಹಿಮಂತ ಜಿ ಮತ್ತು ಅವರ ಸರ್ಕಾರವನ್ನು ಶ್ಲಾಘಿಸುತ್ತೇನೆ.

ಸ್ನೇಹಿತರೆ,

ನಮ್ಮ ಯಾತ್ರಾ ಸ್ಥಳಗಳು, ನಮ್ಮ ದೇವಾಲಯಗಳು, ನಮ್ಮ ನಂಬಿಕೆಯ ಸ್ಥಳಗಳು ಕೇವಲ ಭೇಟಿ ನೀಡುವ ಸ್ಥಳಗಳಲ್ಲ. ಅವು ಸಾವಿರಾರು ವರ್ಷಗಳಿಂದ ನಮ್ಮ ನಾಗರಿಕತೆಯ ಅನಂತ ಹೆಗ್ಗುರುತುಗಳಾಗಿವೆ. ಪ್ರತಿ ಬಿಕ್ಕಟ್ಟನ್ನು ಎದುರಿಸುವ ಭಾರತದ ಆತ್ಮಸ್ಥೈರ್ಯಕ್ಕೆ ಇವು ಸಾಕ್ಷಿಯಾಗಿವೆ. ಒಂದು ಕಾಲದಲ್ಲಿ ಅತ್ಯಂತ ಸಮೃದ್ಧವಾಗಿದ್ದ ನಾಗರಿಕತೆಗಳನ್ನು ನಾವು ನೋಡಿದ್ದೇವೆ, ಈಗ ಅವಶೇಷಗಳಾಗಿ ಕುಸಿದಿವೆ. ದುರದೃಷ್ಟವಶಾತ್, ಸ್ವಾತಂತ್ರ್ಯದ ನಂತರ ದೇಶವನ್ನು ದೀರ್ಘಕಾಲ ಆಳಿದವರು ಈ ಪವಿತ್ರ ನಂಬಿಕೆಯ ಸ್ಥಳಗಳ ಮಹತ್ವವನ್ನು ಅರ್ಥ ಮಾಡಿಕೊಳ್ಳಲು ವಿಫಲರಾದರು. ಅವರು ರಾಜಕೀಯ ಲಾಭಕ್ಕಾಗಿ ತಮ್ಮದೇ ಆದ ಸಂಸ್ಕೃತಿಯ ಬಗ್ಗೆ, ತಮ್ಮದೇ ಆದ ಗತಕಾಲದ ಬಗ್ಗೆ ನಾಚಿಕೆಪಡುವ ಪ್ರವೃತ್ತಿ ಹೊಂದಿದ್ದಾರೆ. ಯಾವುದೇ ದೇಶವು ತನ್ನ ಭೂತಕಾಲವನ್ನು ಅಳಿಸಿ, ಮರೆತು ಅಥವಾ ತನ್ನ ಬೇರುಗಳನ್ನು ಕತ್ತರಿಸುವ ಮೂಲಕ ಎಂದಿಗೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಪರಿಸ್ಥಿತಿ ಬದಲಾಗಿದೆ ಎಂದು ನನಗೆ ತೃಪ್ತಿ ಇದೆ. ಬಿಜೆಪಿಯ ಡಬಲ್ ಇಂಜಿನ್ ಸರ್ಕಾರಕ್ಕೆ 'ವಿಕಾಸ್' (ಅಭಿವೃದ್ಧಿ) ಮತ್ತು 'ವಿರಾಸತ್' (ಪರಂಪರೆ) ತನ್ನ ನೀತಿಯ ಭಾಗವಾಗಿದೆ. ಇದರ ಫಲಿತಾಂಶವನ್ನು ಇಂದು ಅಸ್ಸಾಮಿನ ವಿವಿಧ ಭಾಗಗಳಲ್ಲಿ ಕಾಣಬಹುದು. ಅಸ್ಸಾಂನ ನಂಬಿಕೆ, ಆಧ್ಯಾತ್ಮಿಕತೆ ಮತ್ತು ಇತಿಹಾಸಕ್ಕೆ ಸಂಬಂಧಿಸಿದ ಎಲ್ಲಾ ಸ್ಥಳಗಳನ್ನು ಆಧುನಿಕ ಸೌಲಭ್ಯಗಳೊಂದಿಗೆ ಸಂಪರ್ಕಿಸಲಾಗುತ್ತಿದೆ. ಪರಂಪರೆಯನ್ನು ಉಳಿಸುವ ಅಭಿಯಾನದ ಜತೆಗೆ ಅಭಿವೃದ್ಧಿಯ ಅಭಿಯಾನವೂ ವೇಗವಾಗಿ ಸಾಗುತ್ತಿದೆ. ಕಳೆದ 10 ವರ್ಷಗಳಲ್ಲಿ ನಾವು ನೋಡಿದರೆ, ದೇಶದಲ್ಲಿ ದಾಖಲೆ ಸಂಖ್ಯೆಯ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಿರುವುದನ್ನು ನಾವು ನೋಡಿದ್ದೇವೆ. ಹಿಂದೆ, ದೊಡ್ಡ ನಗರಗಳಲ್ಲಿ ಮಾತ್ರ ಪ್ರಮುಖ ಸಂಸ್ಥೆಗಳನ್ನು ಸ್ಥಾಪಿಸಲಾಯಿತು. ನಾವು ದೇಶದಾದ್ಯಂತ ಐಐಟಿಗಳು, ಏಮ್ಸ್ ಮತ್ತು ಐಐಎಂಗಳಂತಹ ಸಂಸ್ಥೆಗಳ ಜಾಲವನ್ನು ವಿಸ್ತರಿಸಿದ್ದೇವೆ. ಕಳೆದ 10 ವರ್ಷಗಳಲ್ಲಿ ದೇಶದ ವೈದ್ಯಕೀಯ ಕಾಲೇಜುಗಳ ಸಂಖ್ಯೆ ಸುಮಾರು ದುಪ್ಪಟ್ಟಾಗಿದೆ. ಅಸ್ಸಾಂನಲ್ಲಿ ಕೂಡ ಬಿಜೆಪಿ ಸರ್ಕಾರ ರಚನೆಗೆ ಮುನ್ನ 6 ವೈದ್ಯಕೀಯ ಕಾಲೇಜುಗಳಿದ್ದವು. ಇಂದು ಅಸ್ಸಾಂನಲ್ಲಿ 12 ವೈದ್ಯಕೀಯ ಕಾಲೇಜುಗಳಿವೆ. ಅಸ್ಸಾಂ ಇಂದು ಈಶಾನ್ಯದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಪ್ರಮುಖ ಕೇಂದ್ರವಾಗುತ್ತಿದೆ.

 

ಸ್ನೇಹಿತರೆ,

ನಮ್ಮ ನಾಗರಿಕರಿಗೆ ಜೀವನ ಸುಲಭಗೊಳಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. 4 ಕೋಟಿಗೂ ಹೆಚ್ಚು ಬಡ ಕುಟುಂಬಗಳಿಗೆ ಪಕ್ಕಾ ಮನೆಗಳನ್ನು ನಿರ್ಮಿಸಿದ್ದೇವೆ. ನಾವು ಪ್ರತಿ ಮನೆಗೆ ನೀರು ಮತ್ತು ವಿದ್ಯುತ್ ಒದಗಿಸುವ ಅಭಿಯಾನ ಪ್ರಾರಂಭಿಸಿದ್ದೇವೆ. ಉಜ್ವಲಾ ಯೋಜನೆಯು ಇಂದು ಅಸ್ಸಾಂನಲ್ಲಿ ಲಕ್ಷಾಂತರ ಸಹೋದರಿಯರು ಮತ್ತು ಹೆಣ್ಣು ಮಕ್ಕಳಿಗೆ ಹೊಗೆಯಿಂದ ವಿಮೋಚನೆ ನೀಡಿದೆ. ಸ್ವಚ್ಛ ಭಾರತ ಅಭಿಯಾನದಡಿ ನಿರ್ಮಿಸಲಾದ ಶೌಚಾಲಯಗಳು ಅಸ್ಸಾಂನಲ್ಲಿ ಲಕ್ಷಾಂತರ ಸಹೋದರಿಯರು ಮತ್ತು ಹೆಣ್ಣು ಮಕ್ಕಳ ಘನತೆಯನ್ನು ಕಾಪಾಡಿವೆ.

ಸ್ನೇಹಿತರೆ,

ಅಭಿವೃದ್ಧಿ ಮತ್ತು ಪರಂಪರೆಯತ್ತ ನಾವು ಹೊಂದಿರುವ ಗಮನದ ನೇರ ಪ್ರಯೋಜನವನ್ನು ದೇಶದ ಯುವಕರು ಅನುಭವಿಸಿದ್ದಾರೆ. ಇಂದು ದೇಶದಲ್ಲಿ ಪ್ರವಾಸೋದ್ಯಮ ಮತ್ತು ತೀರ್ಥಯಾತ್ರೆಯ ಉತ್ಸಾಹ ಹೆಚ್ಚುತ್ತಿದೆ. ಕಾಶಿ ಕಾರಿಡಾರ್ ಅಭಿವೃದ್ಧಿಯ ನಂತರ, ಅಲ್ಲಿಗೆ ಭೇಟಿ ನೀಡುವ ಯಾತ್ರಿಕರ ಸಂಖ್ಯೆ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಕಳೆದ ವರ್ಷವೊಂದರಲ್ಲೇ ಎಂಟೂವರೆ ಕೋಟಿ ಜನರು ಕಾಶಿಗೆ ಭೇಟಿ ನೀಡಿದ್ದಾರೆ. ಉಜ್ಜಯಿನಿಯ ಮಹಾಕಾಲ್ ಮಹಾಲೋಕಕ್ಕೆ 5 ಕೋಟಿಗೂ ಹೆಚ್ಚು ಜನರು ಭೇಟಿ ನೀಡಿದ್ದಾರೆ. 19 ಲಕ್ಷಕ್ಕೂ ಹೆಚ್ಚು ಜನರು ಕೇದಾರನಾಥ ಧಾಮಕ್ಕೆ ಪ್ರಯಾಣ ಬೆಳೆಸಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಅಯೋಧ್ಯಾ ಧಾಮದ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ನಡೆದಿತ್ತು. ಕೇವಲ 12 ದಿನಗಳಲ್ಲಿ 24 ಲಕ್ಷಕ್ಕೂ ಹೆಚ್ಚು ಜನರು ಈಗಾಗಲೇ ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಮಾತೆ ಕಾಮಾಕ್ಯಳ ದಿವ್ಯ ಲೋಕವು ಮುಗಿದ ನಂತರ ಇಲ್ಲಿಯೂ ಇದೇ ರೀತಿಯ ಜನಸಂದಣಿಗೆ ಸಾಕ್ಷಿಯಾಗುವುದನ್ನು ನಾವು ನಿರೀಕ್ಷಿಸುತ್ತಿದ್ದೇವೆ.

 

ಸ್ನೇಹಿತರೆ,

ಯಾತ್ರಿಕರು ಮತ್ತು ಭಕ್ತರು ಬಂದಾಗ, ಬಡವರಲ್ಲಿ ಬಡವರು ಕೂಡ ಸಂಪಾದಿಸುತ್ತಾರೆ. ರಿಕ್ಷಾ ಚಾಲಕರು, ಟ್ಯಾಕ್ಸಿ ಚಾಲಕರು, ಹೋಟೆಲ್ ಉದ್ಯಮಿಗಳು ಅಥವಾ ಬೀದಿ ವ್ಯಾಪಾರಿಗಳು ಸೇರಿದಂತೆ ಪ್ರತಿಯೊಬ್ಬರ ಆದಾಯವು ಹೆಚ್ಚಾಗುತ್ತದೆ. ಅದಕ್ಕಾಗಿಯೇ ಈ ಬಾರಿಯ ಬಜೆಟ್‌ನಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿದ್ದೇವೆ. ಕೇಂದ್ರದ ಬಿಜೆಪಿ ಸರ್ಕಾರ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಐತಿಹಾಸಿಕ ತಾಣಗಳ ಅಭಿವೃದ್ಧಿಗೆ ಹೊಸ ಅಭಿಯಾನ ಆರಂಭಿಸಲು ಹೊರಟಿದೆ. ಅಸ್ಸಾಂ ಮತ್ತು ಈಶಾನ್ಯದಲ್ಲಿ ಇದಕ್ಕೆ ಸಾಕಷ್ಟು ಅವಕಾಶಗಳಿವೆ. ಹಾಗಾಗಿ ಬಿಜೆಪಿ ಸರಕಾರ ಈಶಾನ್ಯ ಭಾಗದ ಅಭಿವೃದ್ಧಿಗೆ ವಿಶೇಷ ಒತ್ತು ನೀಡುತ್ತಿದೆ.

ಸ್ನೇಹಿತರೆ,

ಕಳೆದ 10 ವರ್ಷಗಳಲ್ಲಿ ಈಶಾನ್ಯಕ್ಕೆ ಭೇಟಿ ನೀಡಿದ ಪ್ರವಾಸಿಗರು ದಾಖಲೆಯ ಸಂಖ್ಯೆಯಲ್ಲಿದ್ದಾರೆ. ಇದು ಹೇಗಾಯಿತು? ಈ ಪ್ರವಾಸೋದ್ಯಮ ಕೇಂದ್ರಗಳು ಮತ್ತು ಈಶಾನ್ಯದ ಸುಂದರ ಪ್ರದೇಶಗಳು ಇಲ್ಲಿ ಮೊದಲು ಕೂಡ ಇದ್ದವು. ಆದರೆ ಆಗ ಇಲ್ಲಿಗೆ ಅಷ್ಟು ಪ್ರವಾಸಿಗರು ಬಂದಿರಲಿಲ್ಲ. ಹಿಂಸಾಚಾರ, ಮೂಲಸೌಕರ್ಯಗಳ ಕೊರತೆ ಮತ್ತು ಸೌಲಭ್ಯಗಳ ಕೊರತೆಯ ನಡುವೆ ಇಲ್ಲಿಗೆ ಬರಲು ಯಾರು ಬಯಸುತ್ತಾರೆ? 10 ವರ್ಷಗಳ ಹಿಂದಿನ ಅಸ್ಸಾಂ ಮತ್ತು ಇಡೀ ಈಶಾನ್ಯದ ಪರಿಸ್ಥಿತಿ ನಿಮಗೆ ತಿಳಿದಿದೆ. ಇಡೀ ಈಶಾನ್ಯದಲ್ಲಿ ರೈಲು ಮತ್ತು ವಿಮಾನ ಪ್ರಯಾಣ ಬಹಳ ಸೀಮಿತವಾಗಿತ್ತು. ರಸ್ತೆಗಳು ಕಿರಿದಾಗಿದ್ದವು ಮತ್ತು ಕಳಪೆಯಾಗಿದ್ದವು. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಪ್ರಯಾಣಿಸುವುದು ಬಿಡಿ, ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಪ್ರಯಾಣಿಸಲು ಹಲವು ಗಂಟೆಗಳು ಬೇಕಾಗುತ್ತಿತ್ತು. ಇಂದು ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ, ಎನ್‌ಡಿಎ ಸರ್ಕಾರ ಈ ಎಲ್ಲಾ ಪರಿಸ್ಥಿತಿಗಳನ್ನು ಬದಲಾಯಿಸಿದೆ.

ಸ್ನೇಹಿತರೆ,

ಕಳೆದ 10 ವರ್ಷಗಳಲ್ಲಿ ನಮ್ಮ ಸರ್ಕಾರ ಇಲ್ಲಿನ ಅಭಿವೃದ್ಧಿಗೆ 4 ಪಟ್ಟು ವೆಚ್ಚ ಮಾಡಿದೆ. 2014ರಿಂದ ರೈಲ್ವೆ ಮಾರ್ಗವು 1,900 ಕಿಲೋಮೀಟರ್‌ಗಳಷ್ಟು ಹೆಚ್ಚಾಗಿದೆ. 2014ಕ್ಕೆ ಹೋಲಿಸಿದರೆ ರೈಲ್ವೆ ಬಜೆಟ್ ಶೇ.400ರಷ್ಟು ಹೆಚ್ಚಾಗಿದೆ. ಆಗ, ನಿಮ್ಮ ಅಸ್ಸಾಂ ನವರೇ ಪ್ರಧಾನಿಯಾಗಿ ಆಯ್ಕೆಯಾಗಿದ್ದರು, ಆದರೆ ಈಗ, ನಿಮ್ಮ ಸಹೋದ್ಯೋಗಿ ಅವರಿಗಿಂತ ಹೆಚ್ಚು ಕೆಲಸ ಮಾಡುತ್ತಿದ್ದಾರೆ. 2014ರ ವರೆಗೆ ಇಲ್ಲಿ ಕೇವಲ 10 ಸಾವಿರ ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಗಳಿದ್ದವು. ಕಳೆದ 10 ವರ್ಷಗಳಲ್ಲಿ ನಾವು 6 ಸಾವಿರ ಕಿಲೋಮೀಟರ್ ಹೊಸ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಿದ್ದೇವೆ. ಇಂದು ಮತ್ತೆರಡು ಹೊಸ ರಸ್ತೆ ಯೋಜನೆಗಳು ಉದ್ಘಾಟನೆಗೊಂಡಿವೆ. ಇದು ಇಟಾನಗರಕ್ಕೆ ಸಂಪರ್ಕ  ಸುಧಾರಿಸುತ್ತದೆ. ಇದರಿಂದ ನಿಮ್ಮೆಲ್ಲರ ತೊಂದರೆಗಳು ಕಡಿಮೆಯಾಗುತ್ತವೆ.

 

 

ಸ್ನೇಹಿತರೆ,

ಇಂದು ಇಡೀ ದೇಶವೇ ಮೋದಿ ಗ್ಯಾರಂಟಿ ಎಂದರೆ ಗ್ಯಾರಂಟಿ ಈಡೇರಿಕೆ ಎಂದು ಹೇಳುತ್ತಿದೆ. ಬಡವರು, ಮಹಿಳೆಯರು, ಯುವಕರು, ರೈತರಿಗೆ ಮೂಲಸೌಕರ್ಯ ಕಲ್ಪಿಸುವ ಭರವಸೆ ನೀಡಿದ್ದು, ಇಂದು ಬಹುತೇಕ ಭರವಸೆಗಳು ಈಡೇರುತ್ತಿವೆ. ಇದನ್ನು ‘ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆ’ಯ ಸಂದರ್ಭದಲ್ಲೂ ನೋಡಿದ್ದೇವೆ. ಸರ್ಕಾರದ ಯೋಜನೆಗಳಿಂದ ವಂಚಿತರಾದವರಿಗೆ ಮೋದಿ ಅವರ ಗ್ಯಾರಂಟಿ ವಾಹನ ತಲುಪಿದೆ. ದೇಶಾದ್ಯಂತ ಸುಮಾರು 20 ಕೋಟಿ ಜನರು ‘ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆ’ಯಲ್ಲಿ ನೇರವಾಗಿ ಭಾಗವಹಿಸಿದ್ದಾರೆ. ಅಸ್ಸಾಂನ ಹೆಚ್ಚಿನ ಸಂಖ್ಯೆಯ ಜನರು ಈ ಯಾತ್ರೆಯಿಂದ ಪ್ರಯೋಜನ ಪಡೆದಿದ್ದಾರೆ.

ಸ್ನೇಹಿತರೆ,

ಬಿಜೆಪಿಯ ಡಬಲ್ ಎಂಜಿನ್ ಸರ್ಕಾರವು ಪ್ರತಿಯೊಬ್ಬ ಫಲಾನುಭವಿಯನ್ನು ತಲುಪಲು ಬದ್ಧವಾಗಿದೆ. ಪ್ರತಿಯೊಬ್ಬ ನಾಗರಿಕನ ಜೀವನ ಸುಲಭಗೊಳಿಸುವುದು ನಮ್ಮ ಗುರಿಯಾಗಿದೆ. ಮೂರು ದಿನಗಳ ಹಿಂದೆ ಘೋಷಿಸಲಾದ ಬಜೆಟ್‌ನಲ್ಲಿ ಈ ಗಮನವು ಸ್ಪಷ್ಟವಾಗಿದೆ. ಬಜೆಟ್‌ನಲ್ಲಿ ಮೂಲಸೌಕರ್ಯಕ್ಕಾಗಿ 11 ಲಕ್ಷ ಕೋಟಿ ರೂಪಾಯಿ ವೆಚ್ಚ ಮಾಡಲು ಸರ್ಕಾರ ವಾಗ್ದಾನ ಮಾಡಿದೆ. ಇದು ಗಮನಾರ್ಹ ಮೊತ್ತವಾಗಿದೆ.ಇದನ್ನು ಇನ್ನೊಂದು ದೃಷ್ಟಿಕೋನದಿಂದಲೂ ಅಂದಾಜು ಮಾಡಬಹುದು. ನನ್ನ ಸಹೋದರ ಸಹೋದರಿಯರೇ, ಈ ಅಂಕಿ ಅಂಶವನ್ನು ನೆನಪಿಡಿ - 2014ರ ಹಿಂದಿನ 10 ವರ್ಷಗಳಲ್ಲಿ, ಒಟ್ಟು ಮೂಲಸೌಕರ್ಯ ಬಜೆಟ್ 12 ಲಕ್ಷ ಕೋಟಿ ರೂಪಾಯಿಗೆ ಸೀಮಿತವಾಗಿತ್ತು.  ಅಂದರೆ 10 ವರ್ಷಗಳಲ್ಲಿ ಅದು 12 ಲಕ್ಷ ಕೋಟಿ ರೂಪಾಯಿಗೆ ಏರಿಕೆ ಕಂಡಿದೆ. ಅಂದರೆ ಮುಂದಿನ ವರ್ಷದಲ್ಲಿ ನಮ್ಮ ಸರ್ಕಾರ ಖರ್ಚು ಮಾಡಲಿರುವ ಮೊತ್ತವು ಹಿಂದಿನ ಕೇಂದ್ರ ಸರ್ಕಾರವು ತನ್ನ 10 ವರ್ಷಗಳಲ್ಲಿ ಖರ್ಚು ಮಾಡಿದ ಮೊತ್ತಕ್ಕೆ ಸಮನಾಗಿರುತ್ತದೆ. ದೇಶದಲ್ಲಿ ಎಷ್ಟು ವ್ಯಾಪಕವಾದ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ ಎಂಬುದನ್ನು ನೀವು ಊಹಿಸಬಹುದು. ಅಂತಹ ದೊಡ್ಡ ಮೊತ್ತವನ್ನು ನಿರ್ಮಾಣ ಯೋಜನೆಗಳಲ್ಲಿ ಹೂಡಿಕೆ ಮಾಡಿದಾಗ, ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ ಮತ್ತು ಕೈಗಾರಿಕೆಗಳು ಹೊಸ ಆವೇಗ ಪಡೆಯುತ್ತವೆ.

ಸ್ನೇಹಿತರೆ,

ಈ ವರ್ಷದ ಬಜೆಟ್‌ನಲ್ಲಿ ಮತ್ತೊಂದು ದೊಡ್ಡ ಯೋಜನೆಯನ್ನು ಘೋಷಿಸಲಾಗಿದೆ. ಕಳೆದ 10 ವರ್ಷಗಳಿಂದ ಪ್ರತಿ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಅಭಿಯಾನ ನಡೆಸಿದ್ದೇವೆ. ಈಗ, ನಾವು ಅಸ್ಸಾಂ ಮತ್ತು ದೇಶದ ಸಹೋದರ ಸಹೋದರಿಯರಿಗೆ ಶೂನ್ಯ ವಿದ್ಯುತ್ ಬಿಲ್ ಮಾಡಲು ಕೆಲಸ ಮಾಡುತ್ತಿದ್ದೇವೆ. ಬಜೆಟ್‌ನಲ್ಲಿ ರೂಫ್‌ಟಾಪ್ ಸೋಲಾರ್‌ಗೆ ಪ್ರಮುಖ ಯೋಜನೆಯನ್ನು ಸರ್ಕಾರ ಘೋಷಿಸಿದೆ. ಈ ಯೋಜನೆಯಡಿ,  ಸೌರ ಮೇಲ್ಛಾವಣಿ ಫಲಕಗಳನ್ನು ಸ್ಥಾಪಿಸಲು ಸರ್ಕಾರವು ಆರಂಭದಲ್ಲಿ 1 ಕೋಟಿ ಕುಟುಂಬಗಳಿಗೆ ಸಹಾಯ ಮಾಡಲಿದೆ. ಇದರಿಂದ ಅವರ ವಿದ್ಯುತ್ ಬಿಲ್ ಕೂಡ ಶೂನ್ಯವಾಗಲಿದ್ದು, ಅದೇ ಸಮಯದಲ್ಲಿ ಸಾಮಾನ್ಯ ಕುಟುಂಬಗಳು ಮನೆಯಲ್ಲೇ ವಿದ್ಯುತ್ ಉತ್ಪಾದಿಸಿ ಮಾರಾಟ ಮಾಡುವ ಮೂಲಕ ಆದಾಯ ಗಳಿಸಲಿವೆ.

 

ಸ್ನೇಹಿತರೆ,

ದೇಶದಲ್ಲಿ 2 ಕೋಟಿ ಸಹೋದರಿಯರನ್ನು ‘ಲಖಪತಿ’ ಮಾಡುವ ಭರವಸೆ ನೀಡಿದ್ದೆ. ನನ್ನ ಬಳಿ ಇರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ನಮ್ಮ ಒಂದು ಕೋಟಿ ಸಹೋದರಿಯರು ಈಗಾಗಲೇ ‘ಲಖಪತಿ ದೀದಿ’ಗಳಾಗಿದ್ದಾರೆ. ಸ್ವ-ಸಹಾಯ ಗುಂಪುಗಳಲ್ಲಿ ಕೆಲಸ ಮಾಡುವ 1 ಕೋಟಿ ಸಹೋದರಿಯರು ‘ಲಖಪತಿ ದೀದಿ’ಗಳಾದಾಗ, ನೆಲ ಮಟ್ಟದಲ್ಲಿ ಗಮನಾರ್ಹ ಬದಲಾವಣೆ ಕಂಡು ಬರುತ್ತದೆ. ಸ್ನೇಹಿತರೆ, ಈಗ ಬಜೆಟ್‌ನಲ್ಲಿ ‘ಲಖಪತಿ ದೀದಿ’ ಮಾಡುವ ಗುರಿ ಹೆಚ್ಚಿಸಿದ್ದೇವೆ. 2 ಕೋಟಿಯ ಬದಲು ಈಗ 3 ಕೋಟಿ ಸಹೋದರಿಯರನ್ನು ‘ಲಖಪತಿ ದೀದಿ’ಗಳನ್ನಾಗಿ ಮಾಡಲಾಗುವುದು. ಇದರಿಂದ ಅಸ್ಸಾಂನಲ್ಲಿರುವ ನನ್ನ ಲಕ್ಷಾಂತರ ಸಹೋದರಿಯರಿಗೆ ಖಂಡಿತವಾಗಿಯೂ ಪ್ರಯೋಜನವಾಗಲಿದೆ. ಇಲ್ಲಿ, ಭವಿಷ್ಯದಲ್ಲಿ ಸ್ವ-ಸಹಾಯ ಗುಂಪುಗಳೊಂದಿಗೆ ಸಂಪರ್ಕ ಹೊಂದಿರುವ ಎಲ್ಲಾ ಸಹೋದರಿಯರಿಗೆ ಅವಕಾಶಗಳಿವೆ. ಇಲ್ಲಿ ಅಂತಹ ಗಮನಾರ್ಹ ಸಂಖ್ಯೆಯ ತಾಯಂದಿರು ಮತ್ತು ಸಹೋದರಿಯರು ಇದ್ದಾರೆ, ಖಂಡಿತವಾಗಿಯೂ ಅವರಲ್ಲಿ ಕೆಲವು ‘ಲಖಪತಿ ದೀದಿಗಳು’ ಸಹ ಇರುತ್ತಾರೆ. ಈ ಬಾರಿಯ ಬಜೆಟ್‌ನಲ್ಲಿ ಅಂಗನವಾಡಿ ಮತ್ತು ಆಶಾ ಸಹೋದರಿಯರನ್ನು ಆಯುಷ್ಮಾನ್ ಯೋಜನೆಯ ವ್ಯಾಪ್ತಿಗೆ ನಮ್ಮ ಸರ್ಕಾರ ಸೇರಿಸಿದೆ. ಇದರಿಂದ ಅವರಿಗೆ 5 ಲಕ್ಷ ರೂಪಾಯಿವರೆಗೆ ಉಚಿತ ಚಿಕಿತ್ಸೆ ಸೌಲಭ್ಯ ದೊರೆಯಲಿದೆ. ಸಹೋದರಿಯರು ಮತ್ತು ಹೆಣ್ಣು ಮಕ್ಕಳ ಜೀವನ ಸುಲಭಗೊಳಿಸಲು ಸರ್ಕಾರ ಬದ್ಧವಾಗಿರುವಾಗ, ಸಹಾನುಭೂತಿಯಾಗಿ ಕೆಲಸ ಮಾಡಲಿದೆ.

ಸಹೋದರ ಸಹೋದರಿಯರೆ,

ಮೋದಿ ಭರವಸೆ ನೀಡಿದಾಗ ಹಗಲಿರುಳು ದುಡಿದು ಈಡೇರಿಸುವ ಸಂಕಲ್ಪವೂ ಅವರಲ್ಲಿದೆ. ಹಾಗಾಗಿ ಇಂದು ಈಶಾನ್ಯದಲ್ಲಿ ಮೋದಿ ಅವರ ಗ್ಯಾರಂಟಿ ಮೇಲೆ ನಂಬಿಕೆ ಇದೆ. ಇಂದು ಅಸ್ಸಾಂನಲ್ಲಿ ನೋಡಿ, ಅನೇಕ ವರ್ಷಗಳ ಕಾಲ ಪ್ರಕ್ಷುಬ್ಧವಾಗಿದ್ದ ಪ್ರದೇಶಗಳಲ್ಲಿ ಶಾಶ್ವತ ಶಾಂತಿ ಸ್ಥಾಪನೆಯಾಗಿದೆ. ರಾಜ್ಯಗಳ ನಡುವಿನ ಗಡಿ ವಿವಾದಗಳನ್ನು ಬಗೆಹರಿಸಲಾಗುತ್ತಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇಲ್ಲಿ 10ಕ್ಕೂ ಹೆಚ್ಚು ಪ್ರಮುಖ ಶಾಂತಿ ಒಪ್ಪಂದಗಳಾಗಿವೆ. ಕಳೆದ ಕೆಲವು ವರ್ಷಗಳಿಂದ ಈಶಾನ್ಯ ಭಾಗದ ಸಾವಿರಾರು ಯುವಕರು ಹಿಂಸಾಚಾರಕ್ಕಿಂತ ಅಭಿವೃದ್ಧಿಯ ಹಾದಿ ಆರಿಸಿಕೊಂಡಿದ್ದಾರೆ. ನಾನು ಹಲವು ವರ್ಷಗಳಿಂದ ಅಸ್ಸಾಂನಲ್ಲಿ ನನ್ನ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ನಾನು ಇಲ್ಲಿನ ಪ್ರತಿಯೊಂದು ಪ್ರದೇಶಕ್ಕೂ ಪ್ರಯಾಣಿಸಿದ್ದೇನೆ. ಗುವಾಹತಿಯೊಳಗೆ ರಸ್ತೆ ತಡೆಗಳು, ಸ್ಥಗಿತಗೊಳ್ಳುವ ಕರೆಗಳು ಮತ್ತು ಬಾಂಬ್ ಸ್ಫೋಟಗಳಿಂದಾಗಿ ಪ್ರಯಾಣದಲ್ಲಿ ಅಡಚಣೆಗಳಾಗುತ್ತಿದ್ದ ಸಮಯವನ್ನು ನಾನು ನೆನಪಿಸಿಕೊಳ್ಳುತ್ತೇನೆ. ಇಂದು, ಇದು ಇತಿಹಾಸವಾಗಿದೆ. ನನ್ನ ಸ್ನೇಹಿತರೆ, ಇಂದು ಜನರು ಶಾಂತಿಯಿಂದ ಬದುಕುತ್ತಿದ್ದಾರೆ. ಅಸ್ಸಾಂನಲ್ಲಿ 7,000ಕ್ಕೂ ಹೆಚ್ಚು ಯುವಕರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದಾರೆ, ದೇಶದ ಅಭಿವೃದ್ಧಿ ಯಾತ್ರೆಯಲ್ಲಿ ಸೇರಲು ಸಂಕಲ್ಪ ಮಾಡಿದ್ದಾರೆ. ಹಲವಾರು ಜಿಲ್ಲೆಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯಿದೆ(AFSPA)ಯನ್ನು ತೆಗೆದುಹಾಕಲಾಗಿದೆ. ಹಿಂಸಾಚಾರಪೀಡಿತ ಪ್ರದೇಶಗಳು ಈಗ ಅವರ ಆಶಯಗಳಿಗೆ ಅನುಗುಣವಾಗಿ ಅಭಿವೃದ್ಧಿ ಹೊಂದುತ್ತಿವೆ, ಸರ್ಕಾರವು ಸಹ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತಿದೆ.

 

ಸ್ನೇಹಿತರೆ,

ಸಣ್ಣ ಗುರಿಗಳನ್ನು ಇಟ್ಟುಕೊಂಡು ಯಾವುದೇ ದೇಶ, ಯಾವುದೇ ರಾಜ್ಯವು ತ್ವರಿತ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ. ಹಿಂದಿನ ಸರ್ಕಾರಗಳು ದೊಡ್ಡ ಗುರಿಗಳನ್ನು ಹೊಂದಿರಲಿಲ್ಲ. ಆ ಗುರಿಗಳನ್ನು ಸಾಧಿಸಲು ಸಾಕಷ್ಟು ಶ್ರಮಿಸಲಿಲ್ಲ. ಹಿಂದಿನ ಸರಕಾರಗಳ ಧೋರಣೆಯನ್ನೂ ಬದಲಾಯಿಸಿದ್ದೇವೆ. ಪ್ರಪಂಚವು ಪೂರ್ವ ಏಷ್ಯಾವನ್ನು ನೋಡುವ ರೀತಿಯಲ್ಲಿ ಈಶಾನ್ಯವು ಅಭಿವೃದ್ಧಿ ಹೊಂದುತ್ತಿರುವುದನ್ನು ನಾನು ನೋಡಬಲ್ಲೆ. ಇಂದು ದಕ್ಷಿಣ ಏಷ್ಯಾ ಮತ್ತು ಪೂರ್ವ ಏಷ್ಯಾದೊಂದಿಗಿನ ಸಂಪರ್ಕವು ಈಶಾನ್ಯದ ಮೂಲಕ ವಿಸ್ತರಿಸುತ್ತಿದೆ. ಇಂದು ದಕ್ಷಿಣ ಏಷ್ಯಾ ಉಪಪ್ರಾದೇಶಿಕ ಆರ್ಥಿಕ ಸಹಕಾರದ (SASEC) ಚೌಕಟ್ಟಿನ ಅಡಿ, ಹಲವಾರು ರಸ್ತೆಗಳನ್ನು ನವೀಕರಿಸುವ ಕೆಲಸ ಪ್ರಾರಂಭವಾಗಿದೆ. ಈ ಎಲ್ಲಾ ಸಂಪರ್ಕ ಯೋಜನೆಗಳು ಪೂರ್ಣಗೊಂಡಾಗ, ಈ ಪ್ರದೇಶವು ಎಷ್ಟು ದೊಡ್ಡ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗುತ್ತದೆ ಎಂದು ನೀವೆ ಊಹಿಸಿ. ಅಸ್ಸಾಂ ಮತ್ತು ಈಶಾನ್ಯದ ಪ್ರತಿಯೊಬ್ಬ ಯುವಕರು ಪೂರ್ವ ಏಷ್ಯಾದಂತಹ ಅಭಿವೃದ್ಧಿಯನ್ನು ಇಲ್ಲಿ ಕಾಣುವ ಕನಸು ಕಾಣುತ್ತಾರೆ ಎಂಬುದು ನನಗೆ ತಿಳಿದಿದೆ. ನಿಮ್ಮ ಕನಸು ಮೋದಿ ಅವರ ಸಂಕಲ್ಪ ಎಂದು ಅಸ್ಸಾಂ ಮತ್ತು ಈಶಾನ್ಯದ ಪ್ರತಿಯೊಬ್ಬ ಯುವಕನಿಗೆ ನಾನು ಹೇಳಲು ಬಯಸುತ್ತೇನೆ. ಮೋದಿ ನಿಮ್ಮ ಕನಸುಗಳನ್ನು ಈಡೇರಿಸಲು ಯಾವುದೇ ಕ್ಷಣ ಬಿಡುವುದಿಲ್ಲ. ಇದು ಮೋದಿ ಅವರ ಗ್ಯಾರಂಟಿ.

ಸಹೋದರ ಸಹೋದರಿಯರೆ,

ಇಂದು ನಡೆಯುತ್ತಿರುವ ಎಲ್ಲಾ ಕೆಲಸಗಳು ಒಂದೇ ಗುರಿ ಹೊಂದಿವೆ. ಭಾರತ ಮತ್ತು ಭಾರತೀಯರಿಗೆ ಸಂತೋಷ ಮತ್ತು ಸಮೃದ್ಧ ಜೀವನವೇ ಆ ಗುರಿಯಾಗಿದೆ. ಭಾರತವನ್ನು ವಿಶ್ವದ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದೇ ಗುರಿಯಾಗಿದೆ. ಈ ನಿಟ್ಟಿನಲ್ಲಿ ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳು ಬಹಳ ಮಹತ್ವದ ಪಾತ್ರ ಹೊಂದಿವೆ. ಮತ್ತೊಮ್ಮೆ, ಈ ಅಭಿವೃದ್ಧಿ ಯೋಜನೆಗಳಿಗೆ ನಿಮ್ಮೆಲ್ಲರಿಗೂ ಅಭಿನಂದನೆಗಳು. ಈಗ ಮಾತೆ ಕಾಮಾಕ್ಯಳ ಆಶೀರ್ವಾದಗಳು ಗಮನಾರ್ಹವಾಗಿ ಹೆಚ್ಚಾಗಲಿವೆ. ಅದಕ್ಕಾಗಿಯೇ ನಾನು ಅಸ್ಸಾಂನ ಭವ್ಯವಾದ ಮತ್ತು ದೈವಿಕ ಚಿತ್ರವನ್ನು ನೋಡಬಹುದು, ನನ್ನ ಸ್ನೇಹಿತರೆ, ನಿಮ್ಮ ಕನಸುಗಳು ನನಸಾಗುತ್ತವೆ, ನಾವು ಅದನ್ನು ನಮ್ಮ ಕಣ್ಣುಗಳಿಂದ ನೋಡುತ್ತೇವೆ. ನಾನು ನಿಮಗೆ ಭರವಸೆ ನೀಡುತ್ತೇನೆ, ಮತ್ತೊಮ್ಮೆ, ನಿಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. 

ನಿಮ್ಮೆರಡು ಕೈಗಳನ್ನು ಮೇಲೆತ್ತಿ ನನ್ನೊಂದಿಗೆ ಹೇಳಿ

ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

ತುಂಬ ಧನ್ಯವಾದಗಳು!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
FDI inflows into India cross $1 trillion, establishes country as key investment destination

Media Coverage

FDI inflows into India cross $1 trillion, establishes country as key investment destination
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 9 ಡಿಸೆಂಬರ್ 2024
December 09, 2024

Appreciation for Innovative Solutions for Sustainable Development in India under PM Modi