ಭಾರತ್ ಮಾತಾ ಕೀ ಜೈ!
ಭಾರತ್ ಮಾತಾ ಕೀ ಜೈ!
ಭಾರತ್ ಮಾತಾ ಕೀ ಜೈ!
ರಾಜಸ್ಥಾನ ರಾಜ್ಯಪಾಲರಾದ ಹರಿಭಾವು ಬಾಗ್ಡೆ ಜಿ, ಈ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಶ್ರೀಮನ್ ಭಜನ್ ಲಾಲ್ ಜಿ, ಮಾಜಿ ಮುಖ್ಯಮಂತ್ರಿ ಸಹೋದರಿ ವಸುಂಧರಾ ರಾಜೇ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಅಶ್ವಿನಿ ವೈಷ್ಣವ್ ಜಿ, ಅರ್ಜುನ್ ರಾಮ್ ಮೇಘವಾಲ್ ಜಿ, ರಾಜಸ್ಥಾನದ ಉಪಮುಖ್ಯಮಂತ್ರಿ ದಿಯಾ ಕುಮಾರಿ ಜಿ, ಪ್ರೇಮ್ ಚಂದ್ ಜಿ, ರಾಜಸ್ಥಾನ ಸರ್ಕಾರದ ಸಚಿವರುಗಳೆ, ಸಂಸತ್ತಿನ ನನ್ನ ಸಹೋದ್ಯೋಗಿ ಮದನ್ ರಾಥೋಡ್ ಜಿ, ಇತರೆ ಸಂಸದರು ಮತ್ತು ಶಾಸಕರೆ ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೆ.
ತೀವ್ರ ಬಿಸಿಲಿದ್ದರೂ ನೀವೆಲ್ಲರೂ ಇಲ್ಲಿಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದೀರಿ. ಇಂದು ಈ ಕಾರ್ಯಕ್ರಮಕ್ಕೆ ದೇಶದ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಲಕ್ಷಾಂತರ ಜನರು ಆನ್‌ಲೈನ್‌ನಲ್ಲಿ ನಮ್ಮೊಂದಿಗೆ ಸೇರಿದ್ದಾರೆ. ರಾಜ್ಯಪಾಲರು, ಮುಖ್ಯಮಂತ್ರಿಗಳು, ಲೆಫ್ಟಿನೆಂಟ್ ಗವರ್ನರ್‌ಗಳು ಮತ್ತು ಅನೇಕ ರಾಜ್ಯಗಳ ಇತರೆ ಸಾರ್ವಜನಿಕ ಪ್ರತಿನಿಧಿಗಳು ಇಂದು ನಮ್ಮೊಂದಿಗಿದ್ದಾರೆ. ದೇಶಾದ್ಯಂತದ ಎಲ್ಲಾ ಗಣ್ಯರು ಮತ್ತು ಸಾರ್ವಜನಿಕರನ್ನು ನಾನು ಅಭಿನಂದಿಸುತ್ತೇನೆ.
ಸಹೋದರ ಸಹೋದರಿಯರೆ,
ಕರ್ಣಿ ಮಾತೆಯ ಆಶೀರ್ವಾದ ಪಡೆದು ನಾನು ನಿಮ್ಮ ನಡುವೆ ಇಲ್ಲಿಗೆ ಬಂದಿದ್ದೇನೆ. ಕರ್ಣಿ ಮಾತೆಯ ಆಶೀರ್ವಾದದೊಂದಿಗೆ, ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ನಮ್ಮ ಸಂಕಲ್ಪ ಬಲಗೊಳ್ಳುತ್ತಿದೆ. ಸ್ವಲ್ಪ ಸಮಯದ ಹಿಂದೆ 26 ಸಾವಿರ ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ಇಲ್ಲಿ ಮಾಡಲಾಯಿತು. ಈ ಯೋಜನೆಗಳಿಗಾಗಿ ನಾನು ದೇಶವಾಸಿಗಳು ಮತ್ತು ರಾಜಸ್ಥಾನದ ನನ್ನ ಸಹೋದರ ಸಹೋದರಿಯರನ್ನು ಅಭಿನಂದಿಸುತ್ತೇನೆ.

ಸ್ನೇಹಿತರೆ,
ಭಾರತವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ, ದೇಶದಲ್ಲಿ ಆಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸಲು ಒಂದು ಬೃಹತ್ ಮಹಾಯಜ್ಞವೇ ನಡೆಯುತ್ತಿದೆ. ನಮ್ಮ ರಸ್ತೆಗಳನ್ನು, ನಮ್ಮ ವಿಮಾನ ನಿಲ್ದಾಣಗಳನ್ನು, ನಮ್ಮ ರೈಲ್ವೆ ಮತ್ತು ರೈಲು ನಿಲ್ದಾಣಗಳನ್ನು ಆಧುನೀಕರಿಸಲು ಕಳೆದ 11 ವರ್ಷಗಳಲ್ಲಿ ಹಿಂದೆಂದೂ ಕಾಣದ ವೇಗದಲ್ಲಿ ಕೆಲಸಗಳು ನಡೆದಿವೆ. ನೀವು ಊಹಿಸಬಹುದು, ಇಂದು ದೇಶವು ಈ ಮೂಲಸೌಕರ್ಯ ಕಾಮಗಾರಿಗಳಿಗೆ ಹಿಂದೆ ಖರ್ಚು ಮಾಡಿದ್ದಕ್ಕಿಂತ 6 ಪಟ್ಟು ಹೆಚ್ಚು ಹಣ ಖರ್ಚು ಮಾಡುತ್ತಿದೆ. ಇಂದು ಭಾರತದಲ್ಲಿ ನಡೆಯುತ್ತಿರುವ ಈ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಜಗತ್ತು ಆಶ್ಚರ್ಯಚಕಿತವಾಗಿದೆ. ನೀವು ಉತ್ತರಕ್ಕೆ ಹೋದರೆ, ಚೆನಾಬ್ ಸೇತುವೆ ನಿರ್ಮಾಣವನ್ನು ನೋಡಿ ಜನರು ಆಶ್ಚರ್ಯಚಕಿತರಾಗುತ್ತಾರೆ. ನೀವು ಪೂರ್ವಕ್ಕೆ ಹೋದರೆ, ಅರುಣಾಚಲದ ಸೆಲಾ ಸುರಂಗ ಮತ್ತು ಅಸ್ಸಾಂನ ಬೋಗಿಬೀಲ್ ಸೇತುವೆ ನಿಮ್ಮನ್ನು ಸ್ವಾಗತಿಸುತ್ತದೆ. ನೀವು ಪಶ್ಚಿಮ ಭಾರತಕ್ಕೆ ಬಂದರೆ, ಮುಂಬೈನಲ್ಲಿ ಸಮುದ್ರದ ಮೇಲೆ ನಿರ್ಮಿಸಲಾದ ಅಟಲ್ ಸೇತುವೆಯನ್ನು ನೀವು ನೋಡುತ್ತೀರಿ. ನೀವು ದೂರದ ದಕ್ಷಿಣದಲ್ಲಿ ನೀವು ಪಂಬನ್ ಸೇತುವೆಯನ್ನು ಕಾಣಬಹುದು, ಇದು ದೇಶದಲ್ಲಿ ಈ ರೀತಿಯ ಮೊದಲ ಸೇತುವೆಯಾಗಿದೆ.
ಸ್ನೇಹಿತರೆ,
ಇಂದು ಭಾರತವು ತನ್ನ ರೈಲು ಜಾಲವನ್ನು ಸಹ ಆಧುನೀಕರಿಸುತ್ತಿದೆ. ವಂದೇ ಭಾರತ್ ರೈಲುಗಳು, ಅಮೃತ್ ಭಾರತ್ ರೈಲುಗಳು, ನಮೋ ಭಾರತ್ ರೈಲುಗಳು, ದೇಶದ ಹೊಸ ಆವೇಗ ಮತ್ತು ಹೊಸ ಪ್ರಗತಿಯನ್ನು ಪ್ರತಿಬಿಂಬಿಸುತ್ತಿವೆ. ಪ್ರಸ್ತುತ, ವಂದೇ ಭಾರತ್ ರೈಲುಗಳು ದೇಶದಲ್ಲಿ ಸುಮಾರು 70 ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಇದು ದೂರದ ಪ್ರದೇಶಗಳಲ್ಲೂ ಆಧುನಿಕ ರೈಲುಗಳು ಸಂಚರಿಸುತ್ತಿವೆ. ಕಳೆದ 11 ವರ್ಷಗಳಲ್ಲಿ, ನೂರಾರು ರಸ್ತೆ ಮೇಲ್ಸೇತುವೆಗಳು ಮತ್ತು ರಸ್ತೆ ಕೆಳ ಸೇತುವೆಗಳನ್ನು ನಿರ್ಮಿಸಲಾಗಿದೆ. 34 ಸಾವಿರ ಕಿಲೋಮೀಟರ್‌ಗಳಿಗೂ ಹೆಚ್ಚು ಹೊಸ ರೈಲ್ವೆ ಹಳಿಗಳನ್ನು ಹಾಕಲಾಗಿದೆ. ಈಗ, ಬ್ರಾಡ್ ಗೇಜ್ ಮಾರ್ಗಗಳಲ್ಲಿ ಮಾನವರಹಿತ ಕ್ರಾಸಿಂಗ್‌ಗಳ ನಿರ್ಮಾಣ ಇತಿಹಾಸವಾಗಿವೆ, ಅವು ಪೂರ್ಣಗೊಂಡಿವೆ. ಸರಕು ರೈಲುಗಳಿಗಾಗಿ ಪ್ರತ್ಯೇಕ ವಿಶೇಷ ಹಳಿಗಳು, ಮೀಸಲಾದ ಸರಕು ಸಾಗಣೆ ಕಾರಿಡಾರ್‌ನ ಕೆಲಸವನ್ನು ನಾವು ವೇಗವಾಗಿ ಪೂರ್ಣಗೊಳಿಸುತ್ತಿದ್ದೇವೆ. ದೇಶದ ಮೊದಲ ಬುಲೆಟ್ ರೈಲು ಯೋಜನೆಯ ಕೆಲಸ ನಡೆಯುತ್ತಿದೆ. ಇದೆಲ್ಲದರ ಜತೆಗೆ, ನಾವು ದೇಶದ 1,300ಕ್ಕೂ ಹೆಚ್ಚು ರೈಲು ನಿಲ್ದಾಣಗಳನ್ನು ಏಕಕಾಲದಲ್ಲಿ ಆಧುನೀಕರಿಸುತ್ತಿದ್ದೇವೆ.
ಸ್ನೇಹಿತರೆ,
ದೇಶವು ಈ ಆಧುನೀಕರಿಸುತ್ತಿರುವ ರೈಲು ನಿಲ್ದಾಣಗಳನ್ನು ಅಮೃತ್ ಭಾರತ್ ನಿಲ್ದಾಣಗಳು ಎಂದು ಹೆಸರಿಸಿದೆ. ಇಂದು, ಈ ಅಮೃತ್ ಭಾರತ್ ನಿಲ್ದಾಣಗಳಲ್ಲಿ 100ಕ್ಕೂ ಹೆಚ್ಚು ಪೂರ್ಣಗೊಂಡಿವೆ. ಈ ರೈಲು ನಿಲ್ದಾಣಗಳ ಸ್ಥಿತಿ ಮೊದಲು ಹೇಗಿತ್ತು ಮತ್ತು ಈಗ ಅವುಗಳ ಚಿತ್ರಣ ಹೇಗೆ ಬದಲಾಗಿದೆ ಎಂಬುದನ್ನು ಜನರು ಸಾಮಾಜಿಕ ಮಾಧ್ಯಮಗಳಲ್ಲಿ ನೋಡುತ್ತಿದ್ದಾರೆ.

ಸ್ನೇಹಿತರೆ,
ಅಭಿವೃದ್ಧಿಯ ಜತೆಗೆ ಪರಂಪರೆ – ಈ ಮಂತ್ರವು ಅಮೃತ ಭಾರತ್ ರೈಲು ನಿಲ್ದಾಣಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದಿ. ಇವು ಸ್ಥಳೀಯ ಕಲೆ ಮತ್ತು ಸಂಸ್ಕೃತಿಯ ಹೊಸ ಸಂಕೇತಗಳಾಗಿವೆ. ರಾಜಸ್ಥಾನದ ಮಂಡಲ್‌ಗಢ ರೈಲು ನಿಲ್ದಾಣದಲ್ಲಿ ಶ್ರೇಷ್ಠ ರಾಜಸ್ಥಾನಿ ಕಲೆ ಮತ್ತು ಸಂಸ್ಕೃತಿ ಗೋಚರಿಸುವಂತೆಯೇ, ಬಿಹಾರದ ಥಾವೆ ನಿಲ್ದಾಣದಲ್ಲಿ ಮಾ ಥಾವೆವಾಲಿಯ ಪವಿತ್ರ ದೇವಾಲಯ ಮತ್ತು ಮಧುಬನಿ ಚಿತ್ರಕಲೆಯನ್ನು ಚಿತ್ರಿಸಲಾಗುತ್ತದೆ. ಮಧ್ಯಪ್ರದೇಶದ ಓರ್ಚಾ ರೈಲು ನಿಲ್ದಾಣದಲ್ಲಿ ನೀವು ರಾಮನ ಪ್ರಭೆಯನ್ನು ಅನುಭವಿಸುವಿರಿ. ಶ್ರೀರಂಗಂ ನಿಲ್ದಾಣದ ವಿನ್ಯಾಸವು ಭಗವಾನ್ ಶ್ರೀರಂಗನಾಥಸ್ವಾಮಿ ದೇವಾಲಯದಿಂದ ಪ್ರೇರಿತವಾಗಿದೆ. ಗುಜರಾತ್‌ನ ಡಾಕೋರ್ ನಿಲ್ದಾಣವು ರಾಂಚೋದ್ರಾಯ್ ಜಿ ಅವರಿಂದ ಪ್ರೇರಿತವಾಗಿದೆ. ತಿರುವಣ್ಣಾಮಲೈ ನಿಲ್ದಾಣವನ್ನು ದ್ರಾವಿಡ ವಾಸ್ತುಶಿಲ್ಪದ ಪ್ರಕಾರ ವಿನ್ಯಾಸಗೊಳಿಸಲಾಗಿದೆ. ಬೇಗಂಪೇಟೆ ನಿಲ್ದಾಣದಲ್ಲಿ, ನೀವು ಕಾಕತೀಯ ಸಾಮ್ರಾಜ್ಯದ ವಾಸ್ತುಶಿಲ್ಪ ನೋಡಬಹುದು. ಇದರರ್ಥ ಪ್ರತಿ ಅಮೃತ್ ನಿಲ್ದಾಣದಲ್ಲಿ, ನೀವು ಭಾರತದ ಸಾವಿರಾರು ವರ್ಷಗಳ ಹಳೆಯ ಪರಂಪರೆಯನ್ನು ಸಹ ನೋಡಬಹುದು. ಈ ನಿಲ್ದಾಣಗಳು ಪ್ರತಿ ರಾಜ್ಯದಲ್ಲೂ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮಾಧ್ಯಮವಾಗುತ್ತವೆ, ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಒದಗಿಸುತ್ತವೆ. ನಾನು ಆ ನಗರಗಳ ನಾಗರಿಕರಲ್ಲಿ, ರೈಲ್ವೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರಲ್ಲಿ ವಿನಂತಿಸುತ್ತೇನೆ, ನೀವು ಈ ಎಲ್ಲಾ ಆಸ್ತಿಗಳ ಮಾಲೀಕರು, ಅಲ್ಲಿ ಎಂದಿಗೂ ಯಾವುದೇ ಕೊಳಕು ಇರಬಾರದು, ಈ ಆಸ್ತಿಗೆ ಎಂದಿಗೂ ಹಾನಿಯಾಗಬಾರದು, ಏಕೆಂದರೆ ನೀವೇ ಅದರ ಮಾಲೀಕರಾಗಿದ್ದೀರಿ.
ಸ್ನೇಹಿತರೆ,
ಸರ್ಕಾರವು ಮೂಲಸೌಕರ್ಯಗಳನ್ನು ನಿರ್ಮಿಸಲು ಖರ್ಚು ಮಾಡುವ ಹಣವು ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ವ್ಯವಹಾರವನ್ನು ಹೆಚ್ಚಿಸುತ್ತದೆ. ಸರ್ಕಾರ ಹೂಡಿಕೆ ಮಾಡುತ್ತಿರುವ ಸಾವಿರಾರು ಕೋಟಿ ರೂಪಾಯಿಗಳು ಕಾರ್ಮಿಕರ ಜೇಬಿಗೆ ಹೋಗುತ್ತಿವೆ. ಇದನ್ನು ಮಳಿಗೆಗಳ ವರ್ತಕರು ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನೀಡಲಾಗುತ್ತಿದೆ. ಮರಳು-ಜಲ್ಲಿ-ಸಿಮೆಂಟ್ ಸಾಗಿಸುವ ಟ್ರಕ್-ಟೆಂಪೋ ಚಾಲಕರು ಸಹ ಇದರಿಂದ ಪ್ರಯೋಜನ ಪಡೆಯುತ್ತಾರೆ. ಈ ಮೂಲಸೌಕರ್ಯ ಸಿದ್ಧವಾದ ನಂತರ, ಇನ್ನೂ ಅನೇಕ ಪ್ರಯೋಜನಗಳಿವೆ. ರೈತರ ಉತ್ಪನ್ನಗಳು ಕಡಿಮೆ ಬೆಲೆಗೆ ಮಾರುಕಟ್ಟೆಯನ್ನು ತಲುಪುತ್ತವೆ, ವ್ಯರ್ಥವಾಗುವುದು ಕಡಿಮೆಯಾಗುತ್ತದೆ. ಉತ್ತಮ ರಸ್ತೆಗಳು ಇರುವಲ್ಲಿ, ಹೊಸ ರೈಲುಗಳು ಬರುತ್ತವೆ, ಹೊಸ ಕೈಗಾರಿಕೆಗಳು ಸ್ಥಾಪನೆಯಾಗುತ್ತವೆ, ಪ್ರವಾಸೋದ್ಯಮವು ದೊಡ್ಡ ಉತ್ತೇಜನ ಪಡೆಯುತ್ತದೆ, ಅಂದರೆ, ಪ್ರತಿ ಕುಟುಂಬ, ವಿಶೇಷವಾಗಿ ನಮ್ಮ ಯುವಕರು, ಮೂಲಸೌಕರ್ಯಕ್ಕಾಗಿ ಖರ್ಚು ಮಾಡುವ ಹಣದಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ.
ಸ್ನೇಹಿತರೆ,
ಮೂಲಸೌಕರ್ಯಕ್ಕಾಗಿ ನಡೆಯುತ್ತಿರುವ ಕೆಲಸದಿಂದ ನಮ್ಮ ರಾಜಸ್ಥಾನವು ಸಹ ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತಿದೆ. ಇಂದು, ರಾಜಸ್ಥಾನದ ಪ್ರತಿಯೊಂದು ಹಳ್ಳಿಯಲ್ಲಿ ಉತ್ತಮ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಗಡಿ ಪ್ರದೇಶಗಳಲ್ಲಿ ಅತ್ಯುತ್ತಮ ರಸ್ತೆಗಳನ್ನು ಸಹ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ, ಕಳೆದ 11 ವರ್ಷಗಳಲ್ಲಿ ರಾಜಸ್ಥಾನಕ್ಕೆ ಸುಮಾರು 70 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ರಾಜಸ್ಥಾನದಲ್ಲಿ ರೈಲ್ವೆ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಈ ವರ್ಷ ಸುಮಾರು 10 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಿದೆ. ಇದು 2014ಕ್ಕಿಂತ 15 ಪಟ್ಟು ಹೆಚ್ಚು. ಸ್ವಲ್ಪ ಸಮಯದ ಹಿಂದೆ, ಇಲ್ಲಿಂದ ಮುಂಬೈಗೆ ಹೊಸ ರೈಲಿಗೆ ಚಾಲನೆ ನೀಡಲಾಯಿತು. ಇಂದು ಆರೋಗ್ಯ, ನೀರು ಮತ್ತು ವಿದ್ಯುತ್‌ಗೆ ಸಂಬಂಧಿಸಿದ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ಅನೇಕ ಕ್ಷೇತ್ರಗಳಲ್ಲಿ ಮಾಡಲಾಗಿದೆ. ಈ ಎಲ್ಲಾ ಪ್ರಯತ್ನಗಳ ಉದ್ದೇಶವೆಂದರೆ, ರಾಜಸ್ಥಾನದ ನಗರಗಳು ಮತ್ತು ಹಳ್ಳಿಗಳು ತ್ವರಿತ ಪ್ರಗತಿಯತ್ತ ಸಾಗಬೇಕು. ರಾಜಸ್ಥಾನದ ಯುವಕರು ತಮ್ಮ ನಗರದಲ್ಲೇ ಉತ್ತಮ ಅವಕಾಶಗಳನ್ನು ಪಡೆಯಬೇಕು.

ಸ್ನೇಹಿತರೆ,
ಡಬಲ್ ಎಂಜಿನ್ ಸರ್ಕಾರವು ರಾಜಸ್ಥಾನದ ಕೈಗಾರಿಕಾ ಅಭಿವೃದ್ಧಿಗಾಗಿ ವೇಗವಾಗಿ ಕೆಲಸ ಮಾಡುತ್ತಿದೆ. ಭಜನ್ ಲಾಲ್ ಜಿ ಅವರ ಸರ್ಕಾರವು ವಿವಿಧ ವಲಯಗಳಿಗೆ ಹೊಸ ಕೈಗಾರಿಕಾ ನೀತಿಗಳನ್ನು ಹೊರಡಿಸಿದೆ. ಬಿಕಾನೇರ್ ಈ ಹೊಸ ನೀತಿಗಳಿಂದ ಪ್ರಯೋಜನ ಪಡೆಯುತ್ತದೆ. ನಿಮಗೇ ತಿಳಿದಿದೆ, ಬಿಕಾನೇರ್ ವಿಷಯಕ್ಕೆ ಬಂದಾಗ, ಬಿಕಾನೇರಿ ಭುಜಿಯ ರುಚಿ ಮತ್ತು ಬಿಕಾನೇರಿ ರಸಗುಲ್ಲಾಗಳು ವಿಶ್ವಾದ್ಯಂತ ತಮ್ಮ ಗುರುತು ಸೃಷ್ಟಿಸಿವೆ, ವಿಸ್ತರಿಸಿವೆ. ರಾಜಸ್ಥಾನದ ಸಂಸ್ಕರಣಾಗಾರದ ಕೆಲಸವೂ ಅಂತಿಮ ಹಂತದಲ್ಲಿದೆ. ಇದು ರಾಜಸ್ಥಾನವನ್ನು ಪೆಟ್ರೋಲಿಯಂ ಆಧಾರಿತ ಕೈಗಾರಿಕೆಗಳ ಪ್ರಮುಖ ಕೇಂದ್ರವನ್ನಾಗಿ ಮಾಡುತ್ತದೆ. ಅಮೃತಸರದಿಂದ ಜಾಮ್‌ನಗರದವರೆಗೆ ನಿರ್ಮಿಸಲಾಗುತ್ತಿರುವ 6-ಪಥದ ಆರ್ಥಿಕ ಕಾರಿಡಾರ್ ರಾಜಸ್ಥಾನದ ಶ್ರೀಗಂಗಾನಗರ, ಹನುಮಾನ್‌ಗಢ, ಬಿಕಾನೇರ್, ಜೋಧ್‌ಪುರ, ಬಾರ್ಮರ್ ಮತ್ತು ಜಲೋರ್ ಮೂಲಕ ಹಾದುಹೋಗುತ್ತದೆ. ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಕೆಲಸವು ರಾಜಸ್ಥಾನದಲ್ಲಿಯೂ ಬಹುತೇಕ ಪೂರ್ಣಗೊಂಡಿದೆ. ಈ ಸಂಪರ್ಕ ಅಭಿಯಾನವು ರಾಜಸ್ಥಾನದಲ್ಲಿ ಕೈಗಾರಿಕಾ ಅಭಿವೃದ್ಧಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ.
ಸ್ನೇಹಿತರೆ,
ರಾಜಸ್ಥಾನದಲ್ಲಿ ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಕೂಡ ವೇಗವಾಗಿ ಪ್ರಗತಿಯಲ್ಲಿದೆ. ರಾಜಸ್ಥಾನದ 40 ಸಾವಿರಕ್ಕೂ ಹೆಚ್ಚು ಜನರು ಈ ಯೋಜನೆಗೆ ಸೇರಿದ್ದಾರೆ. ಇದರಿಂದಾಗಿ, ಜನರ ವಿದ್ಯುತ್ ಬಿಲ್ ಶೂನ್ಯವಾಗಿದೆ, ಜನರು ಸೌರ ವಿದ್ಯುತ್ ಉತ್ಪಾದಿಸುವ ಮೂಲಕ ಹೊಸ ಗಳಿಕೆಯ ಮಾರ್ಗ ಪಡೆದುಕೊಂಡಿದ್ದಾರೆ. ಇಂದು ಇಲ್ಲಿ ಅನೇಕ ವಿದ್ಯುತ್ ಸಂಬಂಧಿತ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಲಾಗಿದೆ. ರಾಜಸ್ಥಾನವು ಇವುಗಳಿಂದ ಹೆಚ್ಚಿನ ವಿದ್ಯುತ್ ಪಡೆಯುತ್ತದೆ. ಹೆಚ್ಚುತ್ತಿರುವ ವಿದ್ಯುತ್ ಉತ್ಪಾದನೆಯು ರಾಜಸ್ಥಾನದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಹೊಸ ಉತ್ತೇಜನ ನೀಡುತ್ತಿದೆ.
ಸ್ನೇಹಿತರೆ,
ರಾಜಸ್ಥಾನದ ಮರಳು ಪ್ರದೇಶದಲ್ಲಿ ಹಸಿರು ತಂದ ಮಹಾರಾಜ ಗಂಗಾ ಸಿಂಗ್ ಜಿ ಅವರ ಭೂಮಿ ಇದಾಗಿದೆ. ನಮಗೆ ನೀರು ಎಷ್ಟು ಮುಖ್ಯ ಎಂಬುದು ಈ ಪ್ರದೇಶದ ಜನರಿಗಿಂತ ಚೆನ್ನಾಗಿ ಬೇರೆ ಯಾರಿಗೆ ತಿಳಿದಿದೆ. ಪಶ್ಚಿಮ ರಾಜಸ್ಥಾನದ ಬಿಕಾನೇರ್, ಶ್ರೀ ಗಂಗಾನಗರ, ಹನುಮಾನ್‌ಗಢ್‌ನಂತಹ ಅನೇಕ ಪ್ರದೇಶಗಳ ಅಭಿವೃದ್ಧಿಗೆ ನೀರು ಬಹಳ ಮುಖ್ಯ. ಆದ್ದರಿಂದ, ಒಂದೆಡೆ ನಾವು ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತಿದ್ದೇವೆ. ಅದೇ ಸಮಯದಲ್ಲಿ, ನಾವು ನದಿಗಳನ್ನು ಜೋಡಿಸುತ್ತಿದ್ದೇವೆ. ರಾಜಸ್ಥಾನದ ಹಲವು ಜಿಲ್ಲೆಗಳು ಪಾರ್ವತಿ-ಕಾಳಿಸಿಂಧ್-ಚಂಬಲ್ ಜೋಡಣೆ ಯೋಜನೆಯಿಂದ ಪ್ರಯೋಜನ ಪಡೆಯುತ್ತವೆ, ಇಲ್ಲಿನ ಭೂಮಿ, ಇಲ್ಲಿನ ರೈತರು ಪ್ರಯೋಜನ ಪಡೆಯುತ್ತಾರೆ.
ರಾಜಸ್ಥಾನದ ಈ ಕೆಚ್ಚೆದೆಯ ಭೂಮಿಯು ದೇಶ ಮತ್ತು ಅದರ ನಾಗರಿಕರಿಗಿಂತ ದೊಡ್ಡದಲ್ಲ ಎಂಬುದನ್ನು ನಮಗೆ ಕಲಿಸುತ್ತದೆ. ಏಪ್ರಿಲ್ 22ರಂದು, ಭಯೋತ್ಪಾದಕರು ಧರ್ಮ ಯಾವುದು ಎಂದು ಕೇಳಿದ ನಂತರ ನಮ್ಮ ಸಹೋದರಿಯರ ಹಣೆಯ ಸಿಂಧೂರ ಅಳಿಸಿದರು. ಆ ಗುಂಡುಗಳನ್ನು ಪಹಲ್ಗಾಮ್‌ನಲ್ಲಿ ಹಾರಿಸಲಾಯಿತು, ಆದರೆ ಆ ಗುಂಡುಗಳು 140 ಕೋಟಿ ದೇಶವಾಸಿಗಳ ಹೃದಯಗಳನ್ನು ಚುಚ್ಚಿದ್ದವು. ಇದರ ನಂತರ, ದೇಶದ ಪ್ರತಿಯೊಬ್ಬ ನಾಗರಿಕರು ಒಗ್ಗೂಡಿ ಭಯೋತ್ಪಾದಕರನ್ನು ನಾಶ ಮಾಡಲು, ಅವರ ಕಲ್ಪನೆಗಿಂತ ಕೆಟ್ಟ ಶಿಕ್ಷೆ ನೀಡಲು ನಿರ್ಧರಿಸಿದರು. ಇಂದು ನಿಮ್ಮ ಆಶೀರ್ವಾದ ಮತ್ತು ದೇಶದ ಸೈನ್ಯದ ಶೌರ್ಯದಿಂದ, ನಾವು ಆ ಪ್ರತಿಜ್ಞೆಯನ್ನು ಈಡೇರಿಸಿದ್ದೇವೆ. ನಮ್ಮ ಸರ್ಕಾರವು 3 ಸಶಸ್ತ್ರ ಪಡೆಗಳಿಗೆ ಮುಕ್ತ ಅಧಿಕಾರ ನೀಡಿತ್ತು, ಮೂರು ಪಡೆಗಳು ಒಟ್ಟಾಗಿ ಪಾಕಿಸ್ತಾನವನ್ನು ಮಂಡಿಯೂರುವಂತೆ ಚಕ್ರವ್ಯೂಹ ಸೃಷ್ಟಿಸಿದವು.

ಸ್ನೇಹಿತರೆ,
ಏ.22ರಂದು ನಡೆದ ದಾಳಿಗೆ ಪ್ರತಿಯಾಗಿ, ನಾವು 22 ನಿಮಿಷಗಳಲ್ಲಿ ಭಯೋತ್ಪಾದಕರ 9 ಬೃಹತ್ ಅಡಗುತಾಣಗಳನ್ನು ನಾಶಪಡಿಸಿದ್ದೇವೆ. ಸಿಂದೂರ (ವರ್ಮಿಲಿಯನ್) ಗನ್ ಪೌಡರ್ ಆಗಿ ಬದಲಾದಾಗ ಏನಾಗುತ್ತದೆ ಎಂಬುದನ್ನು ಜಗತ್ತು ಮತ್ತು ದೇಶದ ಶತ್ರುಗಳು ಸಹ ನೋಡಿದ್ದಾರೆ.
ಅಂದ ಹಾಗೆ ಸ್ನೇಹಿತರೆ,
5 ವರ್ಷಗಳ ಹಿಂದೆ ದೇಶವು ಬಾಲಕೋಟ್‌ನಲ್ಲಿ ವಾಯುದಾಳಿ ನಡೆಸಿದ ನಂತರ, ನನ್ನ ಮೊದಲ ಸಾರ್ವಜನಿಕ ಸಭೆ ರಾಜಸ್ಥಾನದ ಗಡಿಯಲ್ಲೇ ನಡೆದಿತ್ತು, ಅದು ಕಾಕತಾಳೀಯ. ವೀರಭೂಮಿಯ ತಪಸ್ಸಿನಿಂದಾಗಿ ಇಂತಹ ಕಾಕತಾಳೀಯಗಳು ಸಂಭವಿಸುತ್ತವೆ. ಈಗ ಈ ಬಾರಿ ಆಪರೇಷನ್ ಸಿಂದೂರ್ ನಡೆದ ನಂತರ ನನ್ನ ಮೊದಲ ಸಾರ್ವಜನಿಕ ಸಭೆ ಮತ್ತೆ ರಾಜಸ್ಥಾನದ ವೀರಭೂಮಿಯ ಗಡಿ ಬಿಕಾನೇರ್‌ನಲ್ಲಿ ನಿಮ್ಮೆಲ್ಲರ ನಡುವೆ ನಡೆಯುತ್ತಿದೆ.
ಸ್ನೇಹಿತರೆ,
ನಾನು ಚುರುನಲ್ಲಿ ಹೇಳಿದ್ದೆ, ವಾಯುದಾಳಿಯ ನಂತರ ನಾನು ಬಂದಿದ್ದೇನೆ, ಆಗ ನಾನು - 'ಈ ಮಣ್ಣಿನ ಮೇಲೆ ಪ್ರಮಾಣ ಮಾಡುತ್ತೇನೆ, ನನ್ನ ದೇಶ ನಾಶವಾಗಲು ಬಿಡುವುದಿಲ್ಲ, ನನ್ನ ದೇಶ ತಲೆಬಾಗಲು ಬಿಡುವುದಿಲ್ಲ' ಎಂದು. ಇಂದು, ರಾಜಸ್ಥಾನದ ಮಣ್ಣಿನಿಂದ, ನಾನು ದೇಶವಾಸಿಗಳಿಗೆ ಬಹಳ ನಮ್ರತೆಯಿಂದ ಹೇಳಲು ಬಯಸುತ್ತೇನೆ, ದೇಶದ ಮೂಲೆ ಮೂಲೆಗಳಲ್ಲಿ ತಿರಂಗ ಯಾತ್ರೆಗಳನ್ನು ನಡೆಸುತ್ತಿರುವ ದೇಶವಾಸಿಗಳಿಗೆ - ಸಿಂದೂರವನ್ನು ಅಳಿಸಲು ಹೊರಟವರು, ಸಿಂದೂರವನ್ನು ಅಳಿಸಲು ಹೊರಟವರು ಧೂಳಾಗಿದ್ದಾರೆ. ಭಾರತದ ರಕ್ತವನ್ನು ಚೆಲ್ಲಿದವರು, ಭಾರತದ ರಕ್ತವನ್ನು ಚೆಲ್ಲಿದವರು, ಇಂದು ಅವರು ಪ್ರತಿ ಹನಿಗೂ ಬೆಲೆ ತೆರಬೇಕಾಗಿದೆ. ಭಾರತ ಮೌನವಾಗಿರುತ್ತದೆ ಎಂದು ಭಾವಿಸುತ್ತಿದ್ದವರು, ಯೋಚಿಸುತ್ತಿದ್ದವರು ಇಂದು ತಮ್ಮ ಮನೆಗಳಲ್ಲಿ ಅಡಗಿಕೊಂಡಿದ್ದಾರೆ, ತಮ್ಮ ಶಸ್ತ್ರಾಸ್ತ್ರಗಳ ಬಗ್ಗೆ ಹೆಮ್ಮೆಪಡುತ್ತಿದ್ದವರು, ತಮ್ಮ ಶಸ್ತ್ರಾಸ್ತ್ರಗಳ ಬಗ್ಗೆ ಹೆಮ್ಮೆಪಡುತ್ತಿದ್ದವರನ್ನು ಇಂದು ಅವಶೇಷಗಳ ರಾಶಿಗಳ ಅಡಿ ಹೂಳಲಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೆ,
ಇದು ದಾಳಿ ಮತ್ತು ಪ್ರತೀಕಾರದ ಆಟವಲ್ಲ, ಇದು ದಾಳಿ ಮತ್ತು ಪ್ರತೀಕಾರದ ಆಟವಲ್ಲ, ಇದು ನ್ಯಾಯದ ಹೊಸ ರೂಪ, ಇದು ನ್ಯಾಯದ ಹೊಸ ರೂಪ, ಇದು ಆಪರೇಷನ್ ಸಿಂದೂರ್. ಇದು ಕೇವಲ ಕೋಪವಲ್ಲ, ಇದು ಕೇವಲ ಕೋಪವಲ್ಲ, ಇದು ಭಾರತದ ಉಗ್ರ ರೂಪ. ಇದು ಭಾರತದ ಹೊಸ ರೂಪ. ಮೊದಲು, ಮನೆಯನ್ನು ಪ್ರವೇಶಿಸುವ ಮೂಲಕ ದಾಳಿ ಮಾಡಲಾಗುತ್ತಿತ್ತು, ಮೊದಲು ಮನೆಯನ್ನು ಪ್ರವೇಶಿಸುವ ಮೂಲಕ ದಾಳಿ ಮಾಡಲಾಗುತ್ತಿತ್ತು, ಈಗ ಅದು ಎದೆಯ ಮೇಲಿನ ನೇರ ದಾಳಿಯಾಗಿದೆ. ಇದು ನೀತಿ, ಭಯೋತ್ಪಾದನೆಯನ್ನು ಹತ್ತಿಕ್ಕುವ ಮಾರ್ಗ, ಇದು ಭಾರತ, ಇದು ಹೊಸ ಭಾರತ. ನೀವೆಲ್ಲರೂ ಹೇಳಿ -
ಭಾರತ್ ಮಾತಾ ಕಿ ಜೈ!
ಭಾರತ್ ಮಾತಾ ಕಿ ಜೈ!

ಸ್ನೇಹಿತರೆ,
ಭಯೋತ್ಪಾದನೆ ಎದುರಿಸಲು ಆಪರೇಷನ್ ಸಿಂಧೂರ್ 3 ತತ್ವಗಳನ್ನು ಅಳವಡಿಸಿಕೊಂಡಿದೆ. ಮೊದಲನೆಯದಾಗಿ, ಭಾರತದ ಮೇಲೆ ಭಯೋತ್ಪಾದಕ ದಾಳಿ ನಡೆದರೆ, ತಕ್ಕ ಉತ್ತರ ನೀಡಲಾಗುತ್ತದೆ. ಸಮಯವನ್ನು ನಮ್ಮ ಪಡೆಗಳು ನಿರ್ಧರಿಸುತ್ತವೆ, ಕಾರ್ಯಾಚರಣೆ ವಿಧಾನವನ್ನು ಸಹ ನಮ್ಮ ಪಡೆಗಳು ನಿರ್ಧರಿಸುತ್ತವೆ ಮತ್ತು ಪರಿಸ್ಥಿತಿಗಳು ಸಹ ನಮ್ಮದಾಗಿರುತ್ತವೆ. ಎರಡನೆಯದಾಗಿ, ಪರಮಾಣು ಬಾಂಬ್‌ನ ಪೊಳ್ಳು ಬೆದರಿಕೆಗಳಿಗೆ ಭಾರತ ಜಗ್ಗುವುದಿಲ್ಲ. ಮೂರನೆಯದಾಗಿ, ಭಯೋತ್ಪಾದನೆಯ ಸೂತ್ರಧಾರಿಗಳು ಮತ್ತು ಭಯೋತ್ಪಾದನೆಯನ್ನು ಪೋಷಿಸುವ ಸರ್ಕಾರವನ್ನು ನಾವು ಪ್ರತ್ಯೇಕವಾಗಿ ನೋಡುವುದಿಲ್ಲ, ನಾವು ಅವರನ್ನು ಪ್ರತ್ಯೇಕವಾಗಿ ನೋಡುವುದಿಲ್ಲ, ನಾವು ಅವರೆಲ್ಲರೂ ಒಂದೇ ಎಂದು ಪರಿಗಣಿಸುತ್ತೇವೆ. ಪಾಕಿಸ್ತಾನ ದೇಶ ಮತ್ತು ಹೊರಗಿನ ಕಪಟಿಗಳ ಈ ಆಟ ಇನ್ನು ಮುಂದೆ ಕೆಲಸ ಮಾಡುವುದಿಲ್ಲ. ನಮ್ಮ ದೇಶದಿಂದ 7 ವಿಭಿನ್ನ ನಿಯೋಗಗಳು ಪಾಕಿಸ್ತಾನದ ಬಣ್ಣ ಬಯಲು ಮಾಡಲು ವಿಶ್ವಾದ್ಯಂತ ತಲುಪುತ್ತಿರುವುದನ್ನು ನೀವು ನೋಡಿರಬೇಕು. ಈ ನಿಯೋಗಗಳಲ್ಲಿ ದೇಶದ ಎಲ್ಲಾ ರಾಜಕೀಯ ಪಕ್ಷಗಳ ಜನರು, ವಿದೇಶಾಂಗ ನೀತಿ ತಜ್ಞರು, ಗಣ್ಯರು ಸೇರಿದ್ದಾರೆ, ಈಗ ಪಾಕಿಸ್ತಾನದ ನಿಜವಾದ ಮುಖವನ್ನು ಇಡೀ ಜಗತ್ತಿಗೆ ತೋರಿಸಲಾಗುತ್ತದೆ.
ಸ್ನೇಹಿತರೆ,
ಭಾರತದ ವಿರುದ್ಧ ನೇರ ಯುದ್ಧದಲ್ಲಿ ಪಾಕಿಸ್ತಾನ ಎಂದಿಗೂ ಗೆಲ್ಲಲು ಸಾಧ್ಯವಾಗಿಲ್ಲ. ನೇರ ಹೋರಾಟ ನಡೆದಾಗಲೆಲ್ಲಾ ಪಾಕಿಸ್ತಾನ ಮತ್ತೆ ಮತ್ತೆ ಸೋಲು ಎದುರಿಸಿದೆ. ಆದ್ದರಿಂದ, ಪಾಕಿಸ್ತಾನ ಭಯೋತ್ಪಾದನೆಯನ್ನು ಭಾರತದ ವಿರುದ್ಧ ಹೋರಾಡಲು ಒಂದು ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಸ್ವಾತಂತ್ರ್ಯದ ನಂತರ ಕಳೆದ ಹಲವಾರು ದಶಕಗಳಿಂದ ಇದು ನಡೆಯುತ್ತಲೇ ಇದೆ. ಪಾಕಿಸ್ತಾನ ಭಯೋತ್ಪಾದನೆಯನ್ನು ಹರಡುತ್ತಿತ್ತು, ಮುಗ್ಧ ಜನರನ್ನು ಕೊಲ್ಲುತ್ತಿತ್ತು, ಭಾರತದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿತ್ತು, ಆದರೆ ಪಾಕಿಸ್ತಾನ ಒಂದು ವಿಷಯವನ್ನು ಮರೆತಿದೆ, ಈಗ ಭಾರತ ಮಾತೆಯ ಸೇವಕ ಮೋದಿ ಇಲ್ಲಿ ತಲೆಎತ್ತಿ ನಿಂತಿದ್ದಾರೆ. ಮೋದಿ ಅವರ ಮನಸ್ಸು ಶಾಂತವಾಗಿದೆ, ಅದು ತಂಪಾಗಿದೆ, ಆದರೆ ಮೋದಿ ಅವರ ರಕ್ತ ಬಿಸಿಯಾಗಿದೆ. ಈಗ ಮೋದಿ ಅವರ ರಕ್ತನಾಳಗಳಲ್ಲಿ ಹರಿಯುತ್ತಿರುವುದು ರಕ್ತವಲ್ಲ, ಬದಲಾಗಿ ಬಿಸಿ ಸಿಂದೂರ (ಸಿಂಧೂರ). ಪ್ರತಿ ಭಯೋತ್ಪಾದಕ ದಾಳಿಗೆ ಪಾಕಿಸ್ತಾನ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಈಗ ಭಾರತ ಸ್ಪಷ್ಟಪಡಿಸಿದೆ. ಈ ಬೆಲೆಯನ್ನು ಪಾಕಿಸ್ತಾನದ ಸೈನ್ಯ ಮತ್ತು ಪಾಕಿಸ್ತಾನದ ಆರ್ಥಿಕತೆಯಿಂದ ಪಾವತಿಸಬೇಕಾಗುತ್ತದೆ.
ಸ್ನೇಹಿತರೆ,
ನಾನು ದೆಹಲಿಯಿಂದ ಇಲ್ಲಿಗೆ ಬಂದಾಗ, ನಾನು ಬಿಕಾನೇರ್‌ನ ನಾಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿದೆ. ಪಾಕಿಸ್ತಾನ ಈ ವಾಯುನೆಲೆಯನ್ನು ಸಹ ಗುರಿಯಾಗಿಸಲು ಪ್ರಯತ್ನಿಸಿತ್ತು. ಆದರೆ ಅದು ಈ ವಾಯುನೆಲೆಗೆ ಸ್ವಲ್ಪವೂ ಹಾನಿ ಉಂಟುಮಾಡಲು ಸಾಧ್ಯವಾಗಲಿಲ್ಲ. ಇಲ್ಲಿಂದ ಸ್ವಲ್ಪ ದೂರದಲ್ಲಿ, ಗಡಿಯಾಚೆ, ಪಾಕಿಸ್ತಾನದ ರಹಿಮ್ಯಾರ್ ಖಾನ್ ವಾಯುನೆಲೆ ಇದೆ, ಅದು ಯಾವಾಗ ತೆರೆಯುತ್ತದೆ ಎಂದು ಯಾರಿಗೂ ತಿಳಿದಿಲ್ಲ, ಅದು ಐಸಿಯುನಲ್ಲಿದೆ. ಭಾರತೀಯ ಸೇನೆಯ ನಿಖರವಾದ ದಾಳಿಯು ಈ ವಾಯುನೆಲೆಯನ್ನು ನಾಶಪಡಿಸಿದೆ.

ಸ್ನೇಹಿತರೆ,
ಪಾಕಿಸ್ತಾನದೊಂದಿಗೆ ಯಾವುದೇ ವ್ಯಾಪಾರ ಅಥವಾ ಮಾತುಕತೆ ಇರುವುದಿಲ್ಲ. ಯಾವುದೇ ಮಾತುಕತೆ ನಡೆದರೆ, ಅದು ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆ ಬಗ್ಗೆ ಮಾತ್ರ. ಪಾಕಿಸ್ತಾನ ಭಯೋತ್ಪಾದಕರ ರಫ್ತು ಮುಂದುವರಿಸಿದರೆ, ಅದು ಪ್ರತಿ ಪೈಸೆಗೂ ಬೇಡಿಕೊಳ್ಳಬೇಕಾಗುತ್ತದೆ. ಪಾಕಿಸ್ತಾನಕ್ಕೆ ಭಾರತದ ನ್ಯಾಯಯುತ ಪಾಲು ನೀರು ಸಿಗುವುದಿಲ್ಲ, ಭಾರತೀಯರ ರಕ್ತದೊಂದಿಗೆ ಆಟವಾಡಿದ ಪಾಕಿಸ್ತಾನಕ್ಕೆ ಈಗ ಭಾರಿ ನಷ್ಟವಾಗುತ್ತದೆ. ಇದು ಭಾರತದ ಸಂಕಲ್ಪ, ಜಗತ್ತಿನ ಯಾವುದೇ ಶಕ್ತಿಯು ಈ ಸಂಕಲ್ಪದಿಂದ ನಮ್ಮನ್ನು ತಡೆಯಲು ಸಾಧ್ಯವಿಲ್ಲ.
ಸಹೋದರ ಸಹೋದರಿಯರೆ,
ಅಭಿವೃದ್ಧಿ ಹೊಂದಿದ ಭಾರತ ಕಟ್ಟಲು ಭದ್ರತೆ ಮತ್ತು ಸಮೃದ್ಧಿ ಎರಡೂ ಅಗತ್ಯ. ಭಾರತದ ಪ್ರತಿಯೊಂದು ಮೂಲೆಯೂ ಬಲಿಷ್ಠವಾದಾಗ ಮಾತ್ರ ಇದು ಸಾಧ್ಯ. ಇಂದಿನ ಕಾರ್ಯಕ್ರಮವು ಭಾರತದ ಸಮತೋಲಿತ ಅಭಿವೃದ್ಧಿಗೆ, ಭಾರತದ ತ್ವರಿತ ಅಭಿವೃದ್ಧಿಗೆ ಒಂದು ಉತ್ತಮ ಉದಾಹರಣೆಯಾಗಿದೆ. ಈ ಧೈರ್ಯಶಾಲಿ ಭೂಮಿಯ ಎಲ್ಲಾ ದೇಶವಾಸಿಗಳನ್ನು ನಾನು ಮತ್ತೊಮ್ಮೆ ಅಭಿನಂದಿಸುತ್ತೇನೆ. ನನ್ನೊಂದಿಗೆ ಹೇಳಿ, ನಿಮ್ಮ ಎರಡೂ ಮುಷ್ಟಿಗಳನ್ನು ಹಿಡಿದು, ಪೂರ್ಣ ಶಕ್ತಿಯಿಂದ ಹೇಳಿ -
ಭಾರತ್ ಮಾತಾ ಕಿ ಜೈ!
ಭಾರತ್ ಮಾತಾ ಕಿ ಜೈ!
ಭಾರತ್ ಮಾತಾ ಕಿ ಜೈ!
ವಂದೇ ಮಾತರಂ. ವಂದೇ ಮಾತರಂ.
ವಂದೇ ಮಾತರಂ. ವಂದೇ ಮಾತರಂ.
ವಂದೇ ಮಾತರಂ. ವಂದೇ ಮಾತರಂ.
ವಂದೇ ಮಾತರಂ. ವಂದೇ ಮಾತರಂ.
ವಂದೇ ಮಾತರಂ. ವಂದೇ ಮಾತರಂ.
ವಂದೇ ಮಾತರಂ. ವಂದೇ ಮಾತರಂ.
ವಂದೇ ಮಾತರಂ. ವಂದೇ ಮಾತರಂ.